ಮೇಘನಾ ಪ್ರತಿ ದಿನ ಕಛೇರಿಯಿಂದ ಹೊರಡುವ ಮುನ್ನ ತನ್ನ ಮೊಬೈಲ್‌ನಿಂದ `ಎಫ್‌.ಎಂ.’ ಕೇಳಿಸಿಕೊಳ್ಳುತ್ತಾ ಪ್ರಯಾಣಿಸುತ್ತಿದ್ದಳು. ರಸ್ತೆಯಲ್ಲಿನ ನಿತ್ಯದ ಟ್ರಾಫಿಕ್‌ ಕಿರಿಕಿರಿಯಿಂದ ಹೊರಬರುವ ಸಲುವಾಗಿ ಮೇಘನಾ ಸಂಗೀತದ ಮೊರೆ ಹೋಗುತ್ತಿದ್ದಳು. ಒಮ್ಮೆ ಇವಳ ಸಹೋದ್ಯೋಗಿ ಶೃತಿ, “ನೀನು ದಿನ ಎಫ್‌.ಎಂ. ಕೇಳುತ್ತೀಯಾ?” ಎಂದಳು.

“ಹೌದು, ರೋಡ್‌ನಲ್ಲಿರುವ ಟ್ರಾಫಿಕ್‌ನ ಕರ್ಕಶ ಶಬ್ದಕ್ಕಿಂತ ಸಂಗೀತದ ಮಧುರ ದನಿ ಮೇಲಲ್ಲವೇ?” ಎನ್ನುತ್ತಿದ್ದಳು.

ಅಂದು ಸಹ ಅವಳು ದಾರಿಯಲ್ಲಿ ಕಾಫಿ ಕುಡಿಯಬೇಕೆಂದು ಸುತ್ತಲೂ ದೃಷ್ಟಿ ಹರಿಸಿದಳು. ಕೆಲಸದ ಒತ್ತಡ ನಿವಾರಣೆಗಾಗಿ ಅವಳಿಗೆ ಕಾಫಿ ಅಗತ್ಯವಿತ್ತು. `ನಾಳೆ ಬಹಳ ಕೆಲಸವಿದೆ. ನಾನು ಫುಲ್ ಬ್ಯುಸಿ,’ ಮೇಘನಾ ತನ್ನಲ್ಲೇ ಅಂದುಕೊಂಡಳು. ಕಳೆದ ವಾರವಷ್ಟೇ ಅವಳಿಗೆ ಪ್ರಮೋಷನ್‌ ಸಿಕ್ಕಿತ್ತು. ಆ ಸಂತಸದ ಕ್ಷಣಕ್ಕಾಗಿ ಅವಳು ಹೊಸ ಸ್ಕೋಡಾ ಕಾರನ್ನು ಖರೀದಿಸಿದ್ದಳು. ನಗರದ ಟ್ರಾಫಿಕ್ ನಡುವೆ ತನ್ನ ಸ್ಕೋಡಾವನ್ನು ಅತ್ಯಂತ ಜಾಗ್ರತೆಯಿಂದ ಚಲಾಯಿಸುತ್ತಿದ್ದಳು. ಇಂದೂ ಸಹ ತಾನು ಮಾಡಬೇಕಿದ್ದ ಕೆಲಸಗಳ ಕುರಿತು ಯೋಚಿಸುತ್ತಿರುವಾಗ, ಎದುರಾದ ದೊಡ್ಡ ತಿರುವೊಂದರ ಬಳಿ ತನ್ನ ಹಿಂದಿನಿಂದ ಬಂದ ನೀಲಿ ಬಣ್ಣದ ಸ್ಯಾಂಟ್ರೋ ಕಾರು ವೇಗವಾಗಿ ಮುಂದೆ ಸಾಗಿತು. ಅವಳು ಜಾಗೃತಳಾಗಿ ಕಾರ್‌ನ್ನು ಸ್ಲೋ ಮಾಡುವುದರೊಳಗೆ ಆ ಕಾರು ಆರೇಳು ಅಡಿಗಳಷ್ಟು ಮುಂದೆ ಸಾಗಿತ್ತು.

ಮೇಘನಾ ಪ್ರತಿ ಬಾರಿಯೂ ಈ ತಿರುವಿನ ಬಳಿ ಬರುವಾಗ ಕಾರನ್ನು ನಿಧಾನವಾಗಿ ಚಲಾಯಿಸುತ್ತಿದ್ದಳು. ತಾನು ಬಹಳ ಜಾಗರೂಕತೆಯಿಂದ ವಾಹನ ಚಲಾಯಿಸಬಲ್ಲೆ ಎನ್ನುವ ನಂಬಿಕೆ ಅವಳಲ್ಲಿತ್ತು. ಇಂದು ಆ ಸ್ಯಾಂಟ್ರೋ ಅಷ್ಟೊಂದು ವೇಗವಾಗಿ ಹೋದದ್ದು ಕಂಡು ನಿಜಕ್ಕೂ ಗಾಬರಿಯಾಗಿತ್ತು. ಇನ್ನೊಮ್ಮೆ ಅವನೇನಾದರೂ ಸಿಕ್ಕಿದರೆ ನಿಧಾನವಾಗಿ ಕಾರು ಚಲಾಯಿಸುವಂತೆ ಅವನಿಗೆ ಹೇಳಬೇಕೆಂದುಕೊಂಡಳು. ಮನೆಗೆ ಮರಳಿದ ಬಳಿಕ ಮೇಘನಾ ಆ ನೀಲಿ ಸ್ಯಾಂಟ್ರೋ ಮತ್ತು ಆ ಯುವಕನ ಕುರಿತೇ ಯೋಚಿಸುತ್ತಿದ್ದಳು. `ಅವನೇಕೆ ಅಷ್ಟು ವಾಗವಾಗಿ ವಾಹನ ಚಲಾಯಿಸುತ್ತಿದ್ದ?’ ಎಂಬ ಪ್ರಶ್ನೆಗೆ ಉತ್ತರ ಹೊಳೆಯಲಿಲ್ಲ. ಮಾರನೇ ದಿನ ಕಛೇರಿಯಲ್ಲಿ ಮೀಟಿಂಗ್‌ನಲ್ಲಿದ್ದಾಗಲೂ ಪುನಃ ಅದೇ ಸ್ಯಾಂಟ್ರೋ ಯುವಕನ ನೆನಪಾಗಿತ್ತು.

“ಮೇಡಂ, ನೀವು ಆರೋಗ್ಯವಾಗಿರುವಿರಿ ಅಲ್ಲವೇ?” ಅವಳ ಆಪ್ತ ಸಹಾಯಕಿ ಆಶಾ ಕೇಳಿದಳು.

“ಓಹ್‌! ಐ ಆ್ಯಮ್ ಫೈನ್‌.”

“ಆದರೆ ನೀವು ಎಂದಿನಂತೆ ಕಾಣುತ್ತಿಲ್ಲ…!”

`ಓಹ್‌ ಮೇಘನಾ,  ನೀನಿನ್ನೂ ಆ ಯುವಕನ ಗುಂಗಿನಿಂದ ಹೊರಬರಲಿಲ್ಲವೇ?’ ಮೇಘನಾ ತನ್ನನ್ನು ತಾನೇ  ಪ್ರಶ್ನಿಸಿಕೊಂಡಳು.

ಅಂದು ಕೆಲಸ ಮುಗಿಸಿ ಮನೆಯತ್ತ ಹೊರಟ ಮೇಘನಾಗೆ ಪುನಃ  ನೀಲಿ ಸ್ಯಾಂಟ್ರೋ ಯುವಕ ಎದುರಾದ. ಹಿಂದಿನ ದಿನದಂತೆಯೇ ವೇಗವಾಗಿ `ಝೂಮ್….’ ಎನ್ನುವ ಶಬ್ದದೊಂದಿಗೆ ಕಾರು ಚಲಾಯಿಸುತ್ತಿದ್ದ ಅವನ ಶೈಲಿ ಮೇಘನಾಗೆ ಇಷ್ಟವಾಗಲಿಲ್ಲ.

ಮರುದಿನ ಕಛೇರಿಗೆ ಹೋದ ಮೇಘನಾ ಸ್ಯಾಂಟ್ರೋ ಯುವಕನ ಕುರಿತು ತನ್ನ ಸಹೋದ್ಯೋಗಿ ಶೃತಿಗೂ ಹೇಳಿದಳು. ಆದರೆ ಶೃತಿ, “ನೀನು ಇಲ್ಲದ ವ್ಯಸನವನ್ನು ಹತ್ತಿಸಿಕೊಳ್ಳುತ್ತಿರುವೆ, ಇದರ ಬಗ್ಗೆ ಅಷ್ಟು ಚಿಂತಿಸಬೇಡ. ಬಿಟ್ಟುಬಿಡು,” ಎಂದಳು.

“ಹೆಚ್ಚಿನ ಯುವಕರು ರಾಶ್‌ ಆಗಿ ವಾಹನ ಚಲಾಯಿಸುತ್ತಾರೆ ಜೊತೆಗೆ ಲೆಫ್ಟ್ ನಿಂದಲೇ ಓವರ್‌ ಟೇಕ್‌ ಮಾಡುತ್ತಾರೆ. ಅವರಿಗೆ ಬುದ್ಧಿ ಹೇಳಿದರೆ ಅವರು ಕೇಳುವವರಲ್ಲ. ಸಧ್ಯ…. ನಿಮಗೇನೂ ಆಗಿಲ್ಲವಲ್ಲ ಅಷ್ಟು ಸಾಕು,” ಆಶಾ ದನಿಗೂಡಿಸಿದಳು.

ಮೇಘನಾ ತನ್ನ ಕ್ಯಾಬಿನ್‌ಗೆ ಹೋದ ಬಳಿಕ, “ಮೇಘನಾಗೆ ರೋಹಿತ್‌ ನೆನಪಾಗಿರಬೇಕು,” ಎಂದು ಇಬ್ಬರೂ ತಮ್ಮಲ್ಲೇ ಮಾತನಾಡಿಕೊಂಡರು. ಮೇಘನಾ ಮಾತ್ರ ಆ ಯುವಕನಿಗೆ ಎಚ್ಚರಿಕೆ ನೀಡಬೇಕು ಎಂದುಕೊಂಡಳು. ಆದರೆ ತಾನೇಕೆ ಆ ಯುವಕನ ಕುರಿತು ಇಷ್ಟೊಂದು ಕಾಳಜಿ ವಹಿಸುತ್ತಿದ್ದೇನೆ ಎನ್ನುವುದು ಅವಳಿಗೆ ತಿಳಿಯಲಿಲ್ಲ. ಇದಾಗಿ ವಾರಗಳವರೆಗೂ ಸ್ಯಾಂಟ್ರೋ ಯುವಕ ಮತ್ತೆ ಕಾಣಿಸಿಕೊಳ್ಳಲಿಲ್ಲ. ಮೇಘನಾಗೂ ಅವನ ಯೋಚನೆ ಮರೆಯಾಗಿತ್ತು. ಆಶಾ ಹಾಗೂ ಶೃತಿ ಸಹ ಮೇಘನಾ ಅವನನ್ನು ಮರೆತಿದ್ದಕ್ಕೆ ಸಂತಸಗೊಂಡರು.

ಮೇಘನಾ ಸ್ಯಾಂಟ್ರೋ ಯುವಕನನ್ನು ಸಂಪೂರ್ಣ ಮರೆತು ತನ್ನ ಬಿಡುವಿಲ್ಲದ ಕಛೇರಿ ಕೆಲಸಗಳಲ್ಲಿ  ನಿರತಳಾಗಿದ್ದಳು. ಕೆಲಸದ ನಿಮಿತ್ತ ಕೆಲದಿನಗಳ ಕಾಲ ಹೈದರಾಬಾದ್‌ಗೆ ಕೂಡ ಹೋಗಿ ಬಂದ ಅವಳಿಗೆ ಮೊದಲಿಗಿಂತ ಜವಾಬ್ದಾರಿ ಹೆಚ್ಚಾಗಿತ್ತು.

ಕೆಲವು ದಿನಗಳ ನಂತರ ಮೇಘನಾ ಕಾರು ಚಲಾಯಿಸುತ್ತಿದ್ದಾಗ ಲೆಫ್ಟ್ ಸೈಡ್‌ನಿಂದ ಅದೇ ನೀಲಿ ಸ್ಯಾಂಟ್ರೋ ಕಾರು `ಝೂಮ್’ ಎನ್ನುತ್ತಾ ಮುಂದೆ ಸಾಗಿತ್ತು. ಕಾರನ್ನು ವೇಗವಾಗಿ ಓಡಿಸುತ್ತಿದ್ದ ಯುವಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಮೇಘನಾ ಕಾರಿನ ಸನಿಹಕ್ಕೆ ಬಂದಾಗ, “ಓ.ಕೆ. ನಾನು ಹಾಗೇ ಮಾಡುವೆ….” ಎಂದದ್ದು ಮೇಘನಾಗೂ ಕೇಳಿಸಿತು.

ಅವಳಿಗೆ ಒಮ್ಮೆಲೇ ನೆನಪಾಯಿತು. ಕಾರಿನ `ಝೂಮ್’ ಶಬ್ದ ಅವಳನ್ನು ಎಂಟು ವರ್ಷಗಳ ಹಿಂದೆಕ್ಕೆ ಒಯ್ಯಿತು. ರೋಹಿತ್‌ ಅವಳ ಮನದಾಳದಲ್ಲಿ ಮೂಡಿದ್ದ. ಮೇಘನಾ ಕೆಲಸ ಮಾಡುತ್ತಿದ್ದ ಹಳೆ ಸಂಸ್ಥೆಯಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಆಗಿದ್ದ. ಅವನು ಯಾವಾಗಲೂ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದ. ಕಾರಿನ ಝೂಮ್ ಶಬ್ದ ಅವನಲ್ಲೇನೋ ಸಂತಸ ಮೂಡಿಸುತ್ತಿತ್ತು. ಒಮ್ಮೆ ಮೇಘನಾ ಕಾರನ್ನು ನಿಧಾನವಾಗಿ ಓಡಿಸಲು ಹೇಳಿದಾಗ, `ನೀವು ಮನೆಗೆ ಬೇಗ ತಲುಪಬೇಕಲ್ಲವೇ?’ ಎಂದು ಕೇಳಿದ್ದ. ಮೇಘನಾ ಎಷ್ಟು ಎಚ್ಚರಿಸಿದರೂ ಅವನು ಕಾರನ್ನು ವೇಗವಾಗಿ ಓಡಿಸುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಮೇಘನಾ, ರೋಹಿತ್‌ನಲ್ಲಿ ಮೆಚ್ಚಿದ್ದ ಗುಣವೆಂದರೆ ಅವನು ತಾನೆಷ್ಟೇ ಕಷ್ಟದಲ್ಲಿದ್ದರೂ ಅದನ್ನು ತನ್ನ ತಾಯಿಗೆ ತೋರಿಸಿಕೊಳ್ಳುತ್ತಿರಲಿಲ್ಲ. ಅವನು ತಾಯಿಗೆ ಎಲ್ಲಿಂದ ಕರೆ ಮಾಡಿದರೂ `ನಾನಿಲ್ಲಿ ಚೆನ್ನಾಗಿದ್ದೀನಿ. ಐ ಆ್ಯಮ್ ಫೈನ್‌….’ ಎಂದೇ ಮಾತನ್ನು ಪ್ರಾರಂಭಿಸುತ್ತಿದ್ದ.

ಒಂದು ದಿನ ಕಛೇರಿಯಿಂದ ಮನೆಗೆ ಹೋಗುವಾಗ  ರೋಹಿತ್‌ ಕಾರನ್ನು ವೇಗವಾಗಿ ಚಲಾಯಿಸಿ ಮೇಘನಾಳ ಕಾರನ್ನು ಓವರ್ ಟೇಕ್‌ ಮಾಡಿ ಮುಂದೆ ಹೋಗಿದ್ದ. ಅದಾಗಿ ಎರಡು ನಿಮಿಷದಲ್ಲಿ ಎದುರಾದ ದೊಡ್ಡ ತಿರುವಿನಲ್ಲಿ ಎದುರಿನಿಂದ ಭಾರಿ ಲಾರಿಯೊಂದು ಬಂದು ಅವನ ಕಾರಿಗೆ ಡಿಕ್ಕಿ ಹೊಡೆಯಿತು. ಕಾರಿನ ಮುಂಭಾಗ ಜಜ್ಜಿ ಹೋಗಿ ರೋಹಿತ್‌ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನನಾಗಿ ಬಿದ್ದಿದ್ದ.

ಮೇಘನಾ ತಕ್ಷಣ ಮುಂದೋಡಿ ಅವನನ್ನು ಎತ್ತಿ ಕಾರಿನಲ್ಲಿ ಕೂರಿಸಿಕೊಂಡು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಳು. ಅಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಎಚ್ಚರಗೊಂಡ ಅವನನ್ನು “ಹೇಗಿದ್ದೀರಿ?” ಎಂದು ಕೇಳಿದಾಗ, “ಮೇಡಂ! ನಾನು ಚೆನ್ನಾಗಿದ್ದೀನಿ….” ಎಂದಿದ್ದ. ಅದೇ ಸಮಯದಲ್ಲಿ ಮೇಘನಾ ಅವನ ತಾಯಿಗೆ ಕರೆ ಮಾಡುವಂತೆ ತಿಳಿಸಿದಾಗ ಅವನು ನಿರಾಕರಿಸಿದರೂ ಮತ್ತೆ ಕರೆ ಮಾಡಿದ. ಆಗಲೂ ತನಗೆ ಅಪಘಾತವಾದ ವಿಷಯ ಹೇಳದೆ, `ನಾನಿಲ್ಲಿ ಚೆನ್ನಾಗಿದ್ದೀನಿ,’ ಎಂದೇ ಮಾತು ಮುಗಿಸಿದ್ದ.

ಅದಾಗಿ ಅರ್ಧ ಗಂಟೆ ಕಳೆದಿರಲಿಲ್ಲ, ಡಾಕ್ಟರ್‌ ಬಂದು ಮೇಘನಾಗೆ ರೋಹಿತ್‌ ಅಸುನೀಗಿದ ವಿಚಾರ ತಿಳಿಸಿದರು. ಕೆಲವು ಕ್ಷಣಗಳ ಹಿಂದೆ `ನಾನು ಚೆನ್ನಾಗಿದ್ದೀನಿ’ ಎಂದವನೇ ಶಾಶ್ವತಾಗಿ ಇಲ್ಲವಾಗಿದ್ದ. ಮೇಘನಾ ಪೊಲೀಸರಿಗೆ ವಿಷಯ ತಿಳಿಸಿ ಅವರಿಂದ ರೋಹಿತ್‌ನ ತಾಯಿಗೂ ವಿಷಯ ಮುಟ್ಟಿಸಿದ್ದಳು. ಅವನ ತಾಯಿ ಆಸ್ಪತ್ರೆಗೆ ಬಂದು ಮಗನ ಶವದ ಗುರುತು ಹಚ್ಚಿ ತಮ್ಮ ಶವಕ್ಕೆ ಪಡೆದುಕೊಂಡಿದ್ದರು.

ಈಗ ಪುನಃ ನೀಲಿ ಸ್ಯಾಂಟ್ರೋ ಕಾರಿನ ಯುವಕ ಸಹ ಕಿರಿದಾದ ದಾರಿಯಲ್ಲಿಯೂ ವೇಗವಾಗಿ ಕಾರು ಚಲಾಯಿಸುತ್ತಿದ್ದಾನೆ. ಮೇಘನಾ ತಾನೆಷ್ಟು ಎಚ್ಚರಿಸಬೇಕೆಂದರೂ ಸಾಧ್ಯವಾಗುತ್ತಿರಲಿಲ್ಲ. ಕಡೆಗೂ ಅವನೊಮ್ಮೆ ಸಿಕ್ಕಿದಾಗ ಹಿಂದೆ ನಡೆದ ಘಟನೆಯನ್ನು ಅವನಿಗೆ ವಿರಿಸಿದಳು. ಅವನಿಗೂ ಅದು ಮನಸ್ಸಿಗೆ ನಾಟಿತು ಎನಿಸುತ್ತದೆ. ಅಂದಿನಿಂದ ಅವನು ಕಾರನ್ನು ನಿಧಾನವಾಗಿ ಚಲಾಯಿಸುತ್ತಿದ್ದ.

ಹೀಗೆ ರೋಹಿತ್‌ನ ಸಾವಿನ ಬಳಿಕ ಮೇಘನಾ ರಸ್ತೆ ನಿಯಮ ಪಾಲಿಸದ, ವೇಗದ ಚಾಲನೆ ಮಾಡುವವರಿಗೆಲ್ಲ ತಾನು ಸ್ವಯಂಪ್ರೇರಿತಳಾಗಿ ಎಚ್ಚರಿಸುತ್ತಿದ್ದಳು.  ಹೀಗೆ ಎಚ್ಚರಿಸುವ ಪ್ರತೀ ಸಂದರ್ಭದಲ್ಲಿಯೂ `ನಾನು ಇಲ್ಲಿ ಚೆನ್ನಾಗಿದ್ದೀನಿ, ಐ ಆ್ಯಮ್ ಫೈನ್‌’ ಎನ್ನುತ್ತಿದ್ದ ರೋಹಿತನ ಮಾತುಗಳೇ ರಿಂಗುಣಿಸುತ್ತಿದ್ದವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ