ಚಿಕ್ಕಮ್ಮನ ಮಗಳು ಮಂಜುಳಾ ತವರಿನಿಂದ ಬೀಳ್ಕೊಂಡು ಗಂಡನ ಮನೆಗೆ ಹೊರಟುಹೋಗಿದ್ದಳು. ಮುಂಜಾನೆಯ 8 ಗಂಟೆ ಸಮಯ. ಎಲ್ಲ ಅತಿಥಿಗಳು ಇನ್ನೂ ನಿದ್ರಿಸುತ್ತಿದ್ದರು. ಇಡೀ ಮನೆ ಅಸ್ತವ್ಯಸ್ತವಾಗಿ ಹೋಗಿತ್ತು. ಆದರೆ ಮಂಜುಳಾಳ ಅಕ್ಕ ಅಶ್ವಿನಿಗೆ ಎಚ್ಚರವಾಗಿತ್ತು. ಅವಳು ಅಸ್ತವ್ಯಸ್ತವಾಗಿರುವ ಸಾಮಾನುಗಳನ್ನು ಜೋಡಿಸಿ ಪುನಃ ಅದೇ ಜಾಗದಲ್ಲಿ ಇರಿಸುವುದನ್ನು ಶುರು ಮಾಡಿಕೊಂಡಿದ್ದಳು. ಅಶ್ವಿನಿ ಕೆಲಸ ಮಾಡುತ್ತಿರುವುದನ್ನು ಕಂಡು ರಚನಾ ಮಲಗಿದ್ದಲ್ಲಿಂದಲೇ ಕೇಳಿದಳು, “ಅಕ್ಕಾ, ಈಗ ಸಮಯ ಎಷ್ಟು?”

“ಆಗಲೇ ಎಂಟು ಗಂಟೆ ಆಯ್ತು.”

“ನೀವು ಇಷ್ಟು ಬೇಗ ಎದ್ದುಬಿಟ್ಟಿದ್ದೀರಾ…. ಇನ್ನಷ್ಟು ಹೊತ್ತು ಮಲಗಿ ವಿಶ್ರಾಂತಿ ಪಡೆಯಬಹುದಿತ್ತಲ್ಲ? ನಾವೆಲ್ಲ ಮಲಗಿದ್ದೇ 1 ಗಂಟೆ ನಂತರ. ನೀವು ಇಷ್ಟು ಬೇಗ ಏಳು ಅವಶ್ಯಕತೆ ಏನಿತ್ತು…?”

ಅಶ್ವಿನಿ ಮುಗ್ಧಳಂತೆ ನಗುತ್ತ ಹೇಳಿದಳು, “ಆ ಸೌಭಾಗ್ಯ ನನಗೆಲ್ಲಿದೆ ರಚನಾ…? ಇನ್ನೊಂದು ಗಂಟೆಯಲ್ಲಿ ಎಲ್ಲರೂ ಎದ್ದುಬಿಡ್ತಾರೆ. ಏಳ್ತಿದ್ದಂತೆ ಎಲ್ಲರಿಗೂ ತಿಂಡಿ ಚಹಾ ಬೇಕು, ಅದು ನನ್ನದೇ ಜವಾಬ್ದಾರಿ. ನೀನು ಬೇಗ ಏಳು, ಬಹಳ ವರ್ಷಗಳ ನಂತರ ಸಿಕ್ಕಿದ್ದೀಯ. ಒಂದಷ್ಟು ಮಾತಾಡಿ ಮನಸ್ಸು ಹಗುರ ಮಾಡಿಕೊಳ್ಳೋಣ. ಆ ಬಳಿಕ ಇಲ್ಲಿ ಎಲ್ಲವೂ ಅಯೋಮಯವಾಗುತ್ತದೆ. ಈಗ ನಾನು ಅರ್ಧ ಗಂಟೆ ಮಾತ್ರ ಫ್ರೀ ಇದ್ದೇನೆ.”

ಅಶ್ವಿನಿ ಹೇಳ್ತಿದ್ದಂತೆಯೇ ರಚನಾ ತಕ್ಷಣವೇ ಎದ್ದು ಕುಳಿತಳು. ಇಬ್ಬರೂ ಅಕ್ಕತಂಗಿಯರು ಅನೇಕ ವರ್ಷಗಳ ಬಳಿಕ ಭೇಟಿಯಾಗಿದ್ದರು. 1-2 ವರ್ಷಗಳ ಬಳಿಕ ರಚನಾ ಅಕ್ಕನನ್ನು ಗಮನ ಕೊಟ್ಟು ನೋಡಿದ್ದಳು. ಅಕ್ಕನನ್ನು ನೋಡಿ ಅವಳ ಮನಸ್ಸಿನಲ್ಲಿ ಏನೇನೋ ನೆನಪುಗಳು, ಏನೇನೋ ಭಾವನೆಗಳು ಉಕ್ಕಿಬಂದವು.

ಅಕ್ಕ ಗಂಡನ ಮನೆಯನ್ನು ತೊರೆದು ತವರುಮನೆಗೆ ಬಂದಿದ್ದಾಳೆ ಎಂಬುದಷ್ಟೇ ಆಕೆಗೆ ಗೊತ್ತಿತ್ತು. ರಚನಾ ಆಗಾಗ ತವರುಮನೆಗೆ ಬರುತ್ತಿದ್ದಳು. ಆದರೆ 2-3 ಗಂಟೆಯಷ್ಟೇ ಇದ್ದು ಪುನಃ ಹೊರಟುಬಿಡುತ್ತಿದ್ದಳು. ಹೀಗಾಗಿ ಅಕ್ಕನ ಜೊತೆ ಮುಕ್ತವಾಗಿ ಮಾತನಾಡಿರಲಿಲ್ಲ.

ಬೇಸಿಗೆ ರಜೆ ದಿನಗಳಲ್ಲಿ ಅಶ್ವಿನಿ ತವರಿಗೆ ಬಂದರೆ ಒಂದು ವಾರದ ತನಕ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದಳು. ತನ್ನೊಂದಿಗೆ ಅಕ್ಕನ ಒಡನಾಟ ಚೆನ್ನಾಗಿಯೇ ಇರುತ್ತಿತ್ತು. ಆದರೆ ಅದೀಗ ನೆನಪು ಮಾತ್ರ. ರಚನಾ ಫ್ರೆಶ್‌ ಆಗಿ ಬಂದಾಗ ಅಶ್ವಿನಿ ಹಾಲ್‌ನಲ್ಲಿ ಕುರ್ಚಿಯ ಮೇಲೆ ಏಕಾಂಗಿಯಾಗಿ ಕುಳಿತಿದ್ದಳು.

“ಬಾ…ಬಾ… ಇಲ್ಲೇ ಬಾ. ಇಬ್ಬರೂ ಕುಳಿತುಕೊಂಡು ಹರಟೆ ಹೊಡೆಯೋಣ. ಬಾಲ್ಯದ  ನೆನಪುಗಳನ್ನು ತಾಜಾ ಮಾಡಿಕೊಳ್ಳೋಣ,” ಎಂದು ಅಶ್ವಿನಿ ಹೇಳಿದಳು. ಇಬ್ಬರೂ ಮಾತನಾಡುತ್ತ ಚಹಾ ಹೀರತೊಡಗಿದರು.

“ಅಕ್ಕಾ, ನೀನು ಗಂಡನ ಮನೆಯಿಂದ ಇಲ್ಲಿಯೇ ಬಂದು ಖಾಯಂ ಆಗಿ ಉಳಿದುಬಿಡುವಂತಹ ಘಟನೆ ಏನು ನಡೆಯಿತು?”

“ರಚನಾ, ನಿನ್ನಿಂದ ಬಚ್ಚಿಡುವುದೇನಿದೆ? ನೀನು ನನಗೆ ತಂಗಿ ಅಷ್ಟೇ ಅಲ್ಲ, ಗೆಳತಿ ಕೂಡ ಹೌದು. ಹಾಗೆ ನೋಡಿದರೆ ನಾನೇ ತುಂಬಾ ಹಠಮಾರಿ ಹುಡುಗಿಯಾಗಿದ್ದೆ. ಅಪ್ಪನ ಪ್ರೀತಿಯ ಮಗಳಾಗಿದ್ದೆ. ಹೀಗಾಗಿ ಗಂಡನ ಮನೆಯವರು ಯಾವ ಮಾತುಗಳೂ ನನ್ನ ಕಿವಿಗೆ ಹೋಗಲೇ ಇಲ್ಲ. ಅವರ ಮಾತಿಗೆ ನಾನು ತಕ್ಷಣವೇ ಉತ್ತರ ಕೊಟ್ಟುಬಿಡುತ್ತಿದ್ದೆ. ನನ್ನ ಉತ್ತರವನ್ನು ನೋಡಿ ಅಪ್ಪ ಹೇಳ್ತಿದ್ರು, `ಅವರು 1 ಮಾತು ಆಡಿದ್ರೆ ನೀನು ಅವರಿಗೆ 4 ಮಾತು ಹೇಳಬೇಕು,’ ಆಗ  ಅಪ್ಪನಿಗೆ ಹಣದ ಅಹಂ ಇತ್ತು. ಅದು ನನ್ನಲ್ಲೂ ತುಂಬಿ ತುಳುಕುತ್ತಿತ್ತು.”

ಅಶ್ವಿನಿ ಚಹಾ ಹೀರುತ್ತಲೇ ಮಾತು ಮುಂದುವರಿಸಿದಳು, “ತಪ್ಪುಗಳು ಎಲ್ಲರಿಂದಲೂ ಘಟಿಸುತ್ತವೆ. ಆದರೆ ನನ್ನ ತಪ್ಪಿನ ಬಗ್ಗೆ ನನಗೆ ಯಾರೂ ಏನನ್ನೂ ಹೇಳಲಿಲ್ಲ. ನನಗೆ ಸಹನೆ ಎನ್ನುವುದೇ ಇರಲಿಲ್ಲ. ನನ್ನ ಮುಂಗೋಪೀ ನನಗೆ ವೈರಿಯಾಗಿ ಪರಿಣಮಿಸಿತು.”

ಚಹಾ ಮುಗಿದು ಹೋಗಿತ್ತು. ಆದರೆ ಅಕ್ಕನ ಗೋಳಿನ ಕಥೆ ಇನ್ನು ಬಾಕಿ ಇತ್ತು. ಅಕ್ಕ ತನ್ನ ಕಥೆ ಮುಂದುವರಿಸುತ್ತ ಹೇಳಿದಳು, “ನನ್ನ ಅತ್ತೆ ಮಾ ನನಗೆ ತಿಳಿ ಹೇಳುತ್ತಿದ್ದರು, `ಅಶ್ವಿನಿ ಕಡ್ಡಿ ತುಂಡು ಮಾಡುವಂತಹ ಇಂತಹ ಮಾತುಗಳಿಂದ ಮನೆ ನಡೆಯುವುದಿಲ್ಲ,’ ಎಂದು. ಪತಿ ಸುರೇಶ್‌ ಕೂಡ ನನ್ನ ಸ್ವಭಾವದ ಬಗ್ಗೆ ಬಹಳ ಬೇಸರ ಹೊಂದಿದ್ದರು. ಆದರೆ ನಾನು ಯಾರೊಬ್ಬರ ಬಗ್ಗೆಯೂ ಕೇರ್‌ ಮಾಡುತ್ತಿರಲಿಲ್ಲ.

“1 ವರ್ಷದ ನಂತರ ಅಭಿಗೆ ಜನ್ಮ ನೀಡಿದ ಬಳಿಕ ನಾನು ಪತಿ ಹಾಗೂ ಅತ್ತೆಮಾವನಿಗೆ ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟೆ, “40 ದಿನಗಳ ಬಳಿಕ ನಾನು ಅಪ್ಪನ ಮನೆಗೆ ಹೋಗ್ತೀನಿ. ಇಲ್ಲಿ ವಿಪರೀತ ಚಳಿ ಇದೆ. ಮಗುವಿಗೆ ಶೀತ ಆಗಿಬಿಡುತ್ತೆ.”

ರಚನಾ ಅಕ್ಕನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದಳು. ಅಲ್ಲಿ ಯಾವುದೇ ಭಾವನೆಗಳು ಕಂಡುಬರುತ್ತಿರಲಿಲ್ಲ.

“ನಾನು ಹಠ ಮಾಡಿ ತವರಿಗೆ ಬಂದೆ. 6 ತಿಂಗಳಾಯಿತು, 1 ವರ್ಷ ಆಯಿತು, 2 ವರ್ಷ ಕಳೆದ. ನಾನು ತವರಿಗೆ ಬಂದವಳು ಗಂಡನ ಮನೆಗೆ ಹೋಗಲೇ ಇಲ್ಲ. ಅವರು ನನ್ನನ್ನು ಕರೆದುಕೊಂಡು ಹೋಗಲು ಬರುತ್ತಾರೆ ಎಂದು ಅಂದುಕೊಂಡಿದ್ದೆ. ಆದರೆ ಅವರು ಪುನಃ ಬರಲೇ ಇಲ್ಲ. ಬೇರೊಂದು ಮದುವೆ ಮಾಡಿಕೊಂಡರು,” ಎಂದು ಹೇಳುತ್ತ ಅಶ್ವಿನಿ ಬಿಕ್ಕಿ ಬಿಕ್ಕಿ ಅಳತೊಡಗಿದಳು.

ರಚನಾ 20 ವರ್ಷದ ಹಿಂದಿನ ಅಕ್ಕನನ್ನು ನೆನಪಿಸಿಕೊಳ್ಳುತ್ತಿದ್ದಳು ಆಗ ಅಶ್ವಿನಿ ಸೌಂದರ್ಯದಲ್ಲಿ ರಾಣಿಯನ್ನು ಮೀರಿಸುವಂತಿದ್ದಳು. ಅವಳನ್ನು ಮಾತನಾಡಿಸಲು, ಅವಳೊಂದಿಗೆ ಸ್ನೇಹ ಬೆಳೆಸಲು ಹುಡುಗರು ಕಾತರದಿಂದ ಕಾಯುತ್ತಿದ್ದರು. ಅಶ್ವಿನಿಗೆ ಈಗ 35 ಆಗಿದೆ. ಆದರೆ 45 ಆದವಳ ಹಾಗೆ ಕಾಣ್ತಿದ್ದಾಳೆ.

ರಚನಾ ತನ್ನನ್ನೇ ದಿಟ್ಟಿಸಿ ನೋಡುತ್ತಿರುವುದನ್ನು ಗಮನಿಸಿ ಅಶ್ವಿನಿ ಕೇಳಿಯೇಬಿಟ್ಟಳು, “ಈ ಸೋತು ಹೋದ ದೇಹವನ್ನು ನೋಡ್ತಿದೀಯಾ. ನನಗೆ ಇಲ್ಲಿ ಯಾವುದೇ ಬೆಲೆ ಇಲ್ಲ. ನನ್ನ ಅಣ್ಣ ಅತ್ತಿಗೆಯರನ್ನು ನೋಡ್ತಿದಿಯಲ್ಲ, ಅವರೆಲ್ಲ ನನ್ನ ಮಗ ಹಾಗೂ ನನ್ನನ್ನು ಮನೆ ಕೆಲಸದವರಿಗಿಂತ ಕೀಳಾಗಿ ಕಾಣುತ್ತಾರೆ. ಅಪ್ಪ ಹೋಗ್ತಿದ್ದಂತೆಯೇ ಎಲ್ಲರೂ ಬದಲಾಗಿಬಿಟ್ಟರು. ಅತ್ತಿಗೆಯವರ ಹಳೆ ಸೀರೆಗಳು ನನಗೆ ಬರುತ್ತವೆ. ಅಣ್ಣಂದಿರ ಮಕ್ಕಳ ಪ್ಯಾಂಟು ಶರ್ಟ್‌ಗಳು ಮಗನಿಗೆ ಸಿಗುತ್ತವೆ. ಅವರ ಮಕ್ಕಳು ಪಬ್ಲಿಕ್‌ ಶಾಲೆಗೆ ಹೋದರೆ, ನನ್ನ ಮಗ ಸರ್ಕಾರಿ ಶಾಲೆಗೆ ಹೋಗುತ್ತಾನೆ. 15 ವರ್ಷದ ನನ್ನ ಮಗ ಇನ್ನೂ 7ನೇ ತರಗತಿಯಲ್ಲಿಯೇ ಇದ್ದಾನೆ. ಮೂರು ವರ್ಷ ಫೇಲಾಗಿದ್ದಾನೆ. ಇನ್ನು ಹೇಳುವುದು ಮತ್ತೇನಿದೆ?” ಎಂದು ಹೇಳುತ್ತ ಸೀರೆಯ ಅಂಚಿನಿಂದ ಕಣ್ಣೊರೆಸಿಕೊಂಡು ಮತ್ತೆ ಮೃದು ಧ್ವನಿಯಲ್ಲಿ ಹೇಳಲಾರಂಭಿಸಿದಳು.

“ಅಣ್ಣಂದಿರು ತಮ್ಮ ಮಕ್ಕಳ ಹೆಸರಿನಲ್ಲಿ ಜಮೀನು ಕೊಳ್ಳುತ್ತಲೇ ಇದ್ದಾರೆ. ಆದರೆ ನನ್ನ ಮಗನಿಗೆ ಯಾವ ಭಾಗ್ಯವೂ ಇಲ್ಲ. ಮನೆಯ ಎಲ್ಲರೂ ಬೇಸಿಗೆ ರಜೆಗಾಗಿ ಹಿಲ್ ‌ಸ್ಟೇಷನ್‌ಗಳಿಗೆ ಹೋಗುತ್ತಾರೆ. ಆದರೆ ನಾನು ನನ್ನ ಮಗ ಅನಾರೋಗ್ಯ ಪೀಡಿತ ಅಮ್ಮನನ್ನು ಹಾಗೂ ಮನೆಯ ಜವಾಬ್ದಾರಿ ನೋಡುತ್ತಾ ಇರಬೇಕಾಗುತ್ತದೆ.

“ನೀನು ನಮ್ಮವಳೇ. ನಿನ್ನಿಂದ ಏನು ಮುಚ್ಚಿಡುವುದಿದೆ? ಯುವ ಜೋಡಿಗಳು ಕೈಯೊಳಗೆ ಕೈ ಹಾಕಿಕೊಂಡು ಸುತ್ತುತ್ತಾ ಇದ್ರೆ ನನಗೆ ಬಹಳ ವ್ಯಥೆ ಆಗುತ್ತದೆ.”

ರಚನಾ ಅಕ್ಕನನ್ನು ತದೇಕ ದೃಷ್ಟಿಯಿಂದ ನೋಡುತ್ತಲೇ ಇದ್ದಳು. ಆದರೆ ಅವಳು ದಣಿದ ಸ್ವರದಲ್ಲಿ ಹೇಳುತ್ತಲಿದ್ದಳು, “ರಚನಾ, ನಾನೀಗ ಮುಚ್ಚಿದ ಕೋಣೆಯಲ್ಲಿನ ಪಕ್ಷಿಯಂತೆ ಇದ್ದೇನೆ. ನನ್ನ ರೆಕ್ಕೆಗಳನ್ನು ನಾನೇ ಗೋಡೆಗೆ ಡಿಕ್ಕಿ ಹೊಡೆಸಿಕೊಂಡು ಮುರಿದುಕೊಂಡುಬಿಟ್ಟಿರುವೆ. ನಾನೀಗ ಒಂದು ಖಾಲಿ ಪಾತ್ರೆಯಂತೆ. ಯಾರು ಬೇಕಾದರೂ ನನ್ನನ್ನು ಒದೆಯುತ್ತ ಎಲ್ಲೆಂದರಲ್ಲಿ ತಳ್ಳುತ್ತಿದ್ದಾರೆ. ಈಗ ನಾನು ಏಕಾಂಗಿತನದ ಪರ್ಯಾಯವಾಗಿಬಿಟ್ಟಿದ್ದೇನೆ.”

ಅವಳ ಕಣ್ಣೀರು ನಿಲ್ಲುವ ಮಾತೇ ಇರಲಿಲ್ಲ. ಆದರೆ ಇಂದು ಅದನ್ನು ರಚನಾ ತಡೆಯುವ ಪ್ರಯತ್ನ ಮಾಡಲು ಹೋಗಲಿಲ್ಲ. ಅವಳು ತನ್ನ ಮನಸ್ಸಿನಲ್ಲಿದ್ದುದ್ದನ್ನು ಹೇಳಿಕೊಂಡುಬಿಡಲಿ ಎಂದು ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದಳು.

ಸ್ವಲ್ಪ ಹೊತ್ತು ಸುಮ್ಮನಿದ್ದ ಬಳಿಕ ಅಶ್ವಿನಿ ಪುನಃ ತನ್ನ ಗೋಳಿನ ಕಥೆ ಮುಂದುವರಿಸಿದಳು, “ನನ್ನ ತಪ್ಪಿಗೆ ನನ್ನ ಮಗ ಕೂಡ ಶಿಕ್ಷೆ ಅನುಭವಿಸುತ್ತಿದ್ದಾನೆ. ಅವನು ಯಾವುದಕ್ಕೆ ಹಕ್ಕುದಾರನಾಗಬೇಕಿತ್ತೋ, ಅದನ್ನು ನಾನು ಅವನಿಗೆ ಕೊಡಿಸಲು ಆಗಲಿಲ್ಲ. ತಂದೆಯ ಪ್ರೀತಿಯನ್ನಾಗಲಿ, ಸುಖಕರ ಜೀವನವನ್ನಾಗಲೀ ಅವನಿಗೆ ಕೊಡಲು ಆಗಲಿಲ್ಲ. ಅವನ ನೆಮ್ಮದಿಯ ಕಿಟಕಿಯನ್ನು ನಾನೇಕೆ ಮುಚ್ಚಿಬಿಟ್ಟೆ? ನಾನು ಇದನ್ನೇನು ಮಾಡಿಬಿಟ್ಟೆ ಎಂದು ಪಶ್ಚಾತ್ತಾಪಪಡುತ್ತಿದ್ದೇನೆ,” ಎಂದು ಹೇಳುತ್ತಾ ಹೇಳುತ್ತಾ ಅವಳ ದುಃಖದ ಕಟ್ಟೆ ಒಡೆದುಬಿಟ್ಟಿತು.

ಅವಳು ಅಳುತ್ತಿರುವುದನ್ನು ನೋಡಿ ಇಬ್ಬರು ಮೂವರು ಸಂಬಂಧಿಕರು ಅಲ್ಲಿಗೆ ಬಂದರು. ಅಷ್ಟರಲ್ಲಿಯೇ ಚಿಕ್ಕಮ್ಮ, “ಅಶ್ವಿನಿ, ಎಲ್ಲಿದೀಯಾ ಬೇಗ ಬಾ. ಆಲೂಗೆಡ್ಡೆ ಬೆಂದಿವೆ,” ಎಂದು ಕೂಗಿ ಹೇಳಿದರು.

ಅಶ್ವಿನಿ ಸೀರೆಯ ಚುಂಗಿನಿಂದ ಕಣ್ಣೀರು ಒರೆಸಿಕೊಳ್ಳುತ್ತ ಮೇಲೆದ್ದು ಹೇಳಿದಳು, “ನೀನೂ ಕೂಡ ಗಂಡನ ಮನೆ ಬಿಟ್ಟು ಅಮ್ಮನ ಮನೆಗೆ ಬರ್ತಿದ್ದೀಯಾ ಎಂದು ಗೊತ್ತಾಯ್ತು. ನಿನಗೂ ಗೌರವಯುತ ಜೀವನ ಬಾಳಬೇಕು ಎನಿಸಿದರೆ ಯಾವುದೇ ಕಾರಣಕ್ಕೂ ಗಂಡನ ಮನೆ ಬಿಟ್ಟು ಬರಬೇಡ. ಇಲ್ಲದಿದ್ದರೆ ನೀನೂ ನಿನ್ನ ಅಕ್ಕನ ಹಾಗೆ ನರಕದ ಜೀವನ ಅನುಭವಿಸಬೇಕಾಗುತ್ತೆ!”

ಅಶ್ವಿನಿಯ ಮಾತು ಕೇಳಿ ರಚನಾ ವಿಚಾರಮಗ್ನಳಾದಳು. ಅದೊಂದು ಭಯಾನಕ ಸತ್ಯವಾಗಿತ್ತು. ತನ್ನ ಹಾಗೂ ಪತಿ ರಾಜೇಶ್‌ನಡುವೆ ಅಂತಹ ದೊಡ್ಡ ಜಗಳ ಏನಾಗಿರಲಿಲ್ಲ. ಆದದ್ದು ಕೇವಲ ಮನಸ್ತಾಪ ಅಷ್ಟೆ. ತನ್ನ ಒಂದು ಸಣ್ಣ ತಪ್ಪಿಗೆ ಪತಿ ಕೆನ್ನೆಗೇಟು ಕೊಟ್ಟಿದ್ದ. ಆ ಬಳಿಕ ಅದಕ್ಕೆ ಕ್ಷಮೆ ಕೂಡ ಕೇಳಿದ್ದ. ಅಶ್ವಿನಿ ಆಕೆಗೆ, “ಇಷ್ಟೊಂದು ಸಣ್ಣ ಮಾತಿಗೆ ಗಂಡನ ಮನೆ ಬಿಟ್ಟು ಬರುವುದು ಸರಿಯಲ್ಲ. ಅವನು ನಿನ್ನ ಕ್ಷಮೆ ಕೂಡ ಕೇಳಿದ್ದಾನಲ್ಲ… ವಾಪಸ್‌ ಹೊರಟು ಹೋಗುವ,” ಎಂದು ಬುದ್ಧಿವಾದ ಕೂಡ ಹೇಳಿದ್ದಳು.

ರಚನಾ ಯೋಚನೆಯಲ್ಲಿ ಮುಳುಗಿದ್ದಳು. ಅಭಿ ಜೊತೆಗೆ ದುರ್ವರ್ತನೆ ತೋರಿದಂತೆ ತನ್ನ ಮಗನ ಜೊತೆಗೂ ನಾಳೆ ನನ್ನ ಅಣ್ಣ ಅತ್ತಿಗೆಯರು ವರ್ತಿಸಿದರೆ, ನನ್ನ ಸ್ಥಿತಿಯೂ ಅಶ್ವಿನಿಯ ಹಾಗೆಯೇ ಆಗುತ್ತದೆ. `ಇಲ್ಲ…ಇಲ್ಲ… ಹಾಗಾಗಬಾರದು,’ ಎಂದು ಹೇಳುತ್ತ ಕಣ್ಣು ಮುಚ್ಚಿಕೊಂಡಳು. ಬಳಿಕ ಮೇಲೆದ್ದು ತನ್ನ ಗಂಡನ ಮನೆಗೆ ಹೊರಡಲು ಪ್ಯಾಕಿಂಗ್‌ ಮಾಡಿಕೊಳ್ಳತೊಡಗಿದಳು.

ರಚನಾಳಿಗೆ ಮುಚ್ಚಿದ ಕಿಟಕಿಯನ್ನು ತೆರೆಯಬೇಕಾಗಿತ್ತು. ಅದನ್ನು ಅವಳೇ ಒತ್ತಾಯಪೂರ್ವಕವಾಗಿ ಮುಚ್ಚಿ ಬಂದಿದ್ದಳು. ಅವಳಿಗೆ ಅಶ್ವಿನಿ ಹೇಳಿದ, “ಗೌರವದಿಂದ ಬದುಕಬೇಕೆಂದಿದ್ದರೆ ಗಂಡನ ಮನೆಗೆ ಹೊರಟು ಹೋಗು,” ಎಂಬ ಮಾತು ಕಿವಿಯಲ್ಲಿ ಪ್ರತಿಧ್ವನಿಸುತ್ತಲಿತ್ತು.

Tags:
COMMENT