ಆರೋಗ್ಯದ ವಿಷಯವಾಗಿರಬಹುದು ಅಥವಾ ಆಹಾರ ಪದಾರ್ಥಗಳ ಬಗ್ಗೆ ಚರ್ಚೆ ಇರಬಹುದು, ಈಗೀಗ ಸೂಪರ್ ಫುಡ್ ಶಬ್ದ ಬಹಳಷ್ಟು ಕೇಳಿ ಬರುತ್ತಿದೆ. ಇದೇನಿದು ಸೂಪರ್ ಫುಡ್? ಸಿನಿಮಾದಲ್ಲಿ ಸೂಪರ್ ಮ್ಯಾನ್ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವಂತೆ ಸೂಪರ್ ಫುಡ್ ಸಹ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನೂ ಪರಿಹರಿಸುತ್ತದೆಯೇ?
ಅಂದಹಾಗೆ ಸೂಪರ್ ಫುಡ್ ಯಾವುದೇ ವೈಜ್ಞಾನಿಕ ಶಬ್ದವಲ್ಲ. ಆದರೆ ಸಾಮಾನ್ಯ ಆಹಾರ ಪದಾರ್ಥಗಳ ವಿಶಿಷ್ಟ ಗುಣಗಳು ಕಂಡುಬಂದ ಹಾಗೆಲ್ಲಾ ಕೆಲವು ತಜ್ಞರು ಅವನ್ನು ಸೂಪರ್ ಶ್ರೇಣಿಯಲ್ಲಿಡುತ್ತಾರೆ. ಈ ಪದಾರ್ಥಗಳನ್ನು ಸೂಪರ್ ಫುಡ್ ಎಂದು ಕರೆಯುವುದು ಏಕೆಂದರೆ ಅಗತ್ಯವಾದ ಪೌಷ್ಟಿಕಾಂಶಗಳಲ್ಲದೆ, ಅವುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳೂ ಇವೆ. ಅವು ನಮ್ಮನ್ನು ತಾರುಣ್ಯದಲ್ಲಿ ಇಡುವುದಲ್ಲದೆ ಕ್ಯಾನ್ಸರ್‌ನಂತಹ ಗಂಭೀರ ರೋಗಗಳಿಂದ ರಕ್ಷಿಸುತ್ತವೆ. ಅವುಗಳಲ್ಲಿ ಹೆಲ್ದಿ ಫ್ಯಾಟ್ ಇದ್ದು ಹೃದಯರೋಗಗಳಿಂದ ರಕ್ಷಿಸುತ್ತದೆ. ಅವುಗಳಲ್ಲಿ ಫೈಬರ್ ಇದ್ದು ಡಯಾಬಿಟೀಸ್ ಮತ್ತು ಹೊಟ್ಟೆಯ ಸಮಸ್ಯೆಗಳು ಮಾಯಾಗುತ್ತವೆ. ಅವುಗಳಲ್ಲಿ ಫೈಟೋ ಕೆಮಿಕಲ್ಸ್ ಇದ್ದು ಅವು ನಮಗೆ ರೋಗಗಳು ಬರದಂತೆ ತಡೆಯುತ್ತವೆ.
ಇಲ್ಲಿ ಕೆಲವು ಪ್ರಮುಖ ಸೂಪರ್ ಫುಡ್‌ಗಳು ಹಾಗೂ ಅವುಗಳ ವಿಶೇಷತೆಯನ್ನು ಕೊಡಲಾಗಿದೆ. ಈ ಸೂಪರ್ ಫುಡ್ ನಮ್ಮ ದೇಶದಲ್ಲಿ ಸುಲಭವಾಗಿ ಲಭ್ಯವಿವೆ.
ಬ್ರೌನ್ ರೈಸ್
ಇದು ಬಿಳಿ ಅಕ್ಕಿಯ ಅನ್‌ರಿಫೈನ್ಡ್ ರೂಪವಾಗಿದೆ. ಇವುಗಳಲ್ಲಿ ಪ್ರೋಟೀನ್ ಥಿಯೆಮೈನ್, ಕ್ಯಾಲ್ಶಿಯಂ, ಮೆಗ್ನೀಶಿಯಂ, ಸೆಲೆನಿಯಂ, ಪೊಟ್ಯಾಶಿಯಂ ಮತ್ತು ಫೈಬರ್ ಇವೆ. ಡಯಾಬಿಟೀಸ್‌ನ ಅಪಾಯ ಕಡಿಮೆ ಮಾಡಲು ಬ್ರೌನ್ ರೈಸ್ ಉತ್ತಮ. ಇದರಲ್ಲಿ ಗ್ಲೈಸೆಮಿಕ್ ರೇಟ್ ಬಹಳ ಕಡಿಮೆ ಇರುತ್ತದೆ. ಇದು ಬ್ಲಡ್ ಶುಗರ್‌ನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರಲ್ಲಿರುವ ಸೆಲೆನಿಯಂ ಕ್ಯಾನ್ಸರ್, ಹೈ ಕೊಲೆಸ್ಟ್ರಾಲ್, ಹೃದಯ ಮತ್ತು ಮೂಳೆಗಳ ತೊಂದರೆಯನ್ನು ಕಡಿಮೆ ಮಾಡುತ್ತವೆ. ಫೈಬರ್‌ನಿಂದ ತುಂಬಿರುವ ಈ ಅಕ್ಕಿ ಬಹಳ ಹೊತ್ತು ನಮ್ಮ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹೀಗಾಗಿ ಅದು ತೂಕ ಕರಗಿಸುವಲ್ಲಿಯೂ ಸಹಾಯವಾಗುತ್ತದೆ. ಕರುಳಿನ ಕ್ಯಾನ್ಸರ್‌ನ ಅಪಾಯ ಕಡಿಮೆ ಮಾಡುತ್ತದೆ. ಕಿಡ್ನಿ ಸ್ಟೋನ್‌ನಲ್ಲೂ ಲಾಭಕಾರಿ. ತಜ್ಞರು ಇದನ್ನು ಬೋರೆ ಮತ್ತು ಇತರೆ ಹಣ್ಣುಗಳೊಂದಿಗೆ ತಿನ್ನಲು ಸಲಹೆ ನೀಡುತ್ತಾರೆ. ಇದರ ಆ್ಯಂಟಿ ಆಕ್ಸಿಡೆಂಟ್ ಗುಣಗಳಿಂದ ಶರೀರಕ್ಕೆ ಪೂರ್ಣಾನುಭವ ಸಿಗುತ್ತದೆ.
ಚನ್ನಂಗಿ, ಹೆಸರುಬೇಳೆ ಇತ್ಯಾದಿ ಬೇಳೆಗಳಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿಟಮಿನ್, ಫೈಬರ್, ಫಾಸ್ಛರಸ್ ಮತ್ತು ಅನೇಕ ಮಿನರಲ್‌ಗಳು ಸಿಗುತ್ತವೆ. ತೊಗರಿಬೇಳೆಯಲ್ಲಿ ವಿಟಮಿನ್ ಎ ಮತ್ತು ಬಿ ಇರುತ್ತವೆ. ಅದು ರಕ್ತ, ಕಫ ಮತ್ತು ಪಿತ್ತದ ತೊಂದರೆಗಳನ್ನು ಸರಿಪಡಿಸುತ್ತದೆ. ಉದ್ದಿನಬೇಳೆ ಮಲಬದ್ಧತೆಯನ್ನು ದೂರ ಮಾಡುತ್ತದೆ ಹಾಗೂ ಶಕ್ತಿ ಕೊಡುತ್ತದೆ. ಇದನ್ನು ರುಬ್ಬಿ ಒಡೆದ ಕುರುಗಳ ಮೇಲೂ ಹಚ್ಚಬಹುದು. ಹೆಸರುಬೇಳೆಯಲ್ಲಿ ಫೈಬರ್ ಇರುತ್ತದೆ. ಇದು ಸುಲಭವಾಗಿ ಜೀರ್ಣವಾಗುವುದರಿಂದ ರೋಗಿಗಳಿಗೆ ಸಹಾಯವಾಗುತ್ತದೆ. ಇದರ ಹಲ್ವಾ ಸಾಕಷ್ಟು ಶಕ್ತಿ ಕೊಡುತ್ತದೆ. ಇದು ಕಣ್ಣುಗಳಿಗೂ ಉತ್ತಮ. ರಾಜ್ಮಾ ಪ್ರೋಟೀನ್‌ಗಳ ಭಂಡಾರವಾಗಿದೆ. ಇದರಲ್ಲಿ ಐರನ್ ಮತ್ತು ವಿಟಮಿನ್ ಬಿ9 ವಿಶೇಷ ರೂಪದಲ್ಲಿ ಸಿಗುತ್ತದೆ. ಚನ್ನಂಗಿ ಬೇಳೆ ರಕ್ತವನ್ನು ಸಮೃದ್ಧಗೊಳಿಸುತ್ತದೆ. ಆಹಾರ ರೂಪದಲ್ಲೂ ಚೆನ್ನಾಗಿರುತ್ತದೆ. ಕಡಲೆಕಾಳು ಮಲಬದ್ಧತೆ, ಡಯಾಬಿಟೀಸ್, ಜಾಂಡೀಸ್ ಮತ್ತು ರಕ್ತದ ಕೊರತೆಗೆ ಒಳ್ಳೆಯದು. ಕಡಲೆಹಿಟ್ಟು ಕೂದಲು ಹಾಗೂ ಚರ್ಮಕ್ಕೂ ಲಾಭಕಾರಿ.
ಅಗಸೆ ಬೀಜ ಮತ್ತು ಎಣ್ಣೆ
ಇದು ಒಮೆಗಾ 3 ಫ್ಯಾಟ್ಸ್, ಡಯೆಟರಿ ಫೈಬರ್, ಪೊಟ್ಯಾಶಿಯಂ ಮತ್ತು ಅನೇಕ ಪೌಷ್ಟಿಕಾಂಶಗಳ ಖಜಾನೆಯಾಗಿದೆ. ಒಮೇಗಾ 3 ಫ್ಯಾಟ್ಸ್ ನಮ್ಮ ಶರೀರದ ಎಲ್ಲ ಕೋಶಗಳಿಗೆ ಅಗತ್ಯವಾಗಿರುವ ಅಂಶವಾದ್ದರಿಂದ ಅಗಸೆಬೀಜ ಮತ್ತು ಎಣ್ಣೆ ಒಂದು ರೀತಿಯಲ್ಲಿ ನಮಗೆ ಸಂಪೂರ್ಣ ಆರೋಗ್ಯ ನೀಡುತ್ತದೆ. ಪಚನಕ್ರಿಯೆ ಚೆನ್ನಾಗಿಡುವ ಜೊತೆ ಜೊತೆಗೆ ಇದು ಹೈ ಬ್ಲಡ್ ಪ್ರೆಷರ್ ಮತ್ತು ಹೈ ಕೊಲೆಸ್ಟ್ರಾಲ್‌ನ್ನೂ ಕಡಿಮೆಗೊಳಿಸುತ್ತದೆ. ಹಾರ್ಟ್ ಅಟ್ಯಾಕ್, ಡಯಾಬಿಟೀಸ್ ಮತ್ತು ಕ್ಯಾನ್ಸರ್‌ಗಳ ಅಪಾಯವನ್ನು ತಗ್ಗಿಸುತ್ತದೆ. ಕೂದಲು, ತ್ವಚೆಯ ದೋಷಗಳು ಮತ್ತು ಕಣ್ಣುಗಳಲ್ಲಿನ ಶುಷ್ಕತನದ ಸಮಸ್ಯೆಯನ್ನು ದೂರಗೊಳಿಸುತ್ತದೆ. ಇದು ಮೆನೋಪಾಸ್‌ನಲ್ಲೂ ನೆಮ್ಮದಿ ಕೊಡುತ್ತದೆ. ಶರೀರದ ಕೊಬ್ಬನ್ನು ಕಡಿತಗೊಳಿಸುತ್ತದೆ.
ಗ್ರೀನ್ ಟೀ
ಗ್ರೀನ್ ಟೀ ಕ್ಯಾನ್ಸರ್ ಮತ್ತು ತ್ವಚಾ ಕ್ಯಾನ್ಸರ್‌ನೊಂದಿಗೆ ಹೋರಾಡುವಲ್ಲಿ ಸಮರ್ಥವಾಗಿದೆ. ಇದರಲ್ಲಿರುವ ಆ್ಯಂಟಿ ಆಕ್ಸಿಂಡೆಂಟ್ಸ್ ವಿಟಮಿನ್ `ಸಿ’ ಮತ್ತು ವಿಟಮಿನ್‌ವ`ಈ’ ಗಳಿಗಿಂತ ಬಹಳ ಉತ್ತಮವಾಗಿ ಸಿಗುತ್ತವೆ. ಇದು ಹೃದಯದ ಕೋಶಗಳನ್ನು ರಕ್ಷಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಇದರ ಪಾಲಿಫಿನೋಲ್ ಹೆಸರಿನ ಆ್ಯಂಟಿಆಕ್ಸಿಡೆಂಟ್ ಹೆಚ್ಚುತ್ತಿರುವ ವಯಸ್ಸಿಗೆ ಕಡಿವಾಣ ಹಾಕುತ್ತದೆ. ತೂಕ ಕರಗಿಸುವಲ್ಲಿ ಮತ್ತು ಮೆಟಬಾಲಿಕ್ ದರವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಗ್ರೀನ್ ಟೀ ಒಂದು ದಿನದಲ್ಲಿ ಶರೀರದ 70 ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ. ಇದು ಮೂಳೆಗಳನ್ನು ಸದೃಢಗೊಳಿಸುತ್ತದೆ ಹಾಗೂ ಆರ್ಥ್ರೈಟಿಸ್‌ನ ಅಪಾಯವನ್ನು ಕಡಿಮೆಗೊಳಿಸುತ್ತದೆ. ಬ್ಲಡ್ ಶುಗರ್‌ನ ಮಟ್ಟ ಏರದಂತೆ ತಡೆದು ಇದು ಡಯಾಬಿಟೀಸ್‌ಗೂ ಬಹಳ ಲಾಭಕಾರಿಯಾಗಿದೆ. ಇದು ಲಿವರ್‌ನಿಂದಲೂ ಹಾನಿಕಾರಕ ಅಂಶಗಳನ್ನು ಹೊರದೂಡುತ್ತದೆ. ಇದು ಎಚ್.ಐ.ವಿ.ಯ ವೈರಸ್ ಶರೀರದಲ್ಲಿ ಹರಡದಂತೆ ತಡೆಯುತ್ತದೆ. ಗ್ರೀನ್ ಟೀಯಲ್ಲಿ ಅದ್ದಿದ ಹತ್ತಿಯನ್ನು ಕಿವಿಯಲ್ಲಿ ಇಟ್ಟುಕೊಳ್ಳುವುದರಿಂದ ಕಿವಿಯ ಇನ್‌ಫೆಕ್ಷನ್ ದೂರವಾಗುತ್ತದೆ. ಇದು ಹಲ್ಲುಗಳಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಅಂದರೆ 1 ಕಪ್ ಗ್ರೀನ್ ಟೀಯಲ್ಲಿ ಬಹಳಷ್ಟು ಒಳ್ಳೆಯ ಗುಣಗಳಿರುತ್ತವೆ.
ಓಟ್ಸ್
ಓಟ್ಸ್ ನಲ್ಲಿ ಮುಖ್ಯರೂಪದಲ್ಲಿ ಜವೆಗೋಧಿ, ಇತರ ಕಾಳುಗಳು ಮತ್ತು ಅವುಗಳ ನುಚ್ಚು ಇರುತ್ತವೆ. ಓಟ್ಸ್ ಪ್ರೋಟೀನ್, ಫೈಬರ್, ಮೆಗ್ನೀಶಿಯಂ, ಮ್ಯಾಂಗನೀಸ್ ಮತ್ತು ವಿಟಮಿನ್ `ಬಿ’ಗಳಿಂದ ತುಂಬಿರುತ್ತದೆ. ಅದು ಮೂಳೆಗಳ ಬೆಳವಣಿಗೆ ಮಾಡುತ್ತದೆ ಮತ್ತು ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ಇದು ಬಹಳ ಬೇಗ ನಮ್ಮ ಹೊಟ್ಟೆ ತುಂಬಿಸುತ್ತದೆ. ಅದನ್ನು ತಿಂದ ಮೇಲೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಓಟ್ಸ್ ನಲ್ಲಿ ಅತ್ಯಂತ ಹೆಚ್ಚು ಕರಗುವ ಫೈಬರ್ ಇದ್ದು ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆಗೊಳಿಸುತ್ತದೆ. ಈ ಫೈಬರ್‌ಗಳಿಂದಾಗಿ ಓಟ್ಸ್, ಡಯಾಬಿಟೀಸ್‌ನಲ್ಲಿ ಲಾಭಕಾರಿಯಾಗಿದೆ ಮತ್ತು ಪಚನಕ್ರಿಯೆಯನ್ನು ಸರಿಪಡಿಸುತ್ತದೆ. ಇದು ತ್ವಚೆಯ ಒಳ್ಳೆಯ ಮಿತ್ರ. ವಿಭಿನ್ನ ಫೇಸ್ ಪ್ಯಾಕ್‌ಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಓಟ್ಸ್ ನಲ್ಲಿರುವ ಲಿಗನೆನ್ ಹೆಸರಿನ ಅಂಶ ಕ್ಯಾನ್ಸರ್ ಮತ್ತು ಹೃದಯ ರೋಗಗಳ ಅಪಾಯ ಕಡಿಮೆಗೊಳಿಸುತ್ತದೆ.
ಮೊಳಕೆ ಗೋಧಿ (ವೀಟ್ ಜರ್ಮ್)
ಇದನ್ನು ಪೌಷ್ಟಿಕಾಂಶಗಳ ಗೋಡೌನ್ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಕೊಬ್ಬು ಹೆಸರಿಗೆ ಮಾತ್ರ ಇರುತ್ತದೆ ಮತ್ತು ಕೊಲೆಸ್ಟ್ರಾಲ್ ಇರುವುದೇ ಇಲ್ಲ. ಕಾರ್ಬೋಹೈಡ್ರೇಟ್. ಪ್ರೋಟೀನ್, ಫಾಲಿಕ್ ಆ್ಯಸಿಡ್, ಫೈಬರ್, ವಿಟಮಿನ್ ಮತ್ತು ಮಿನರಲ್ ಹೇರಳವಾಗಿರುತ್ತದೆ. ಇದನ್ನು ಫಾಲಿಕ್ ಆ್ಯಸಿಡ್‌ನ ಸರ್ವಶ್ರೇಷ್ಠ ಭಂಡಾರ ಅನ್ನುತ್ತಾರೆ. ಆದ್ದರಿಂದ ಗರ್ಭಿಣಿಯರಿಗೆ ಬಹಳ ಲಾಭಕಾರಿಯಾಗಿದೆ. ಫಾಲಿಕ್ ಆ್ಯಸಿಡ್ ಹೃದಯದ ಕಾಯಿಲೆ, ಮೂಳೆ ಮುರಿತದಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಮೆದುಳನ್ನು ರಕ್ಷಿಸುತ್ತದೆ. ಇದರಲ್ಲಿ ಒಂದು ವಿಶೇಷ ಬಗೆಯ ಆ್ಯಂಟಿ ಆಕ್ಸಿಡೆಂಟ್ ಎರ್‌ಗೋಥಿಯೋನಿಯನ್ ಇರುತ್ತದೆ. ಅದು ಬೇಯಿಸಿದ ನಂತರ ನಷ್ಟವಾಗುವುದಿಲ್ಲ. ಅದು ಶರೀರವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
– ಡಾ. ಸುಧಾ