ಯೋಗರ್ಟ್ ಕಿವೀ ಸಲಾಡ್
ಸಾಮಗ್ರಿ : 1-1 ಕಪ್ ಗಟ್ಟಿ ಮೊಸರು, ಗಾಢ ಕ್ರೀಂ, 2-3 ಪೀಸ್ ಕಿವೀ ಫ್ರೂಟ್, 2-3 ಚಮಚ ಸ್ಟ್ರಾಬೆರಿ ಜ್ಯಾಂ, ಸ್ಟ್ರಾಬೆರಿ ಕ್ರಶ್, 1 ಚಿಟಕಿ ಜಾಯಿಕಾಯಿಪುಡಿ, 1 ಸ್ಟಾರ್ ಅನೀಸ್, 2 ಚಮಚ ಕಂಡೆನ್ಸ್ಡ್ ಮಿಲ್ಕ್.
ವಿಧಾನ : ಕ್ರೀಂ, ಕಂಡೆನ್ಸ್ಡ್ ಮಿಲ್ಕ್, ಮೊಸರು ಬೆರೆಸಿ ಗೊಟಾಯಿಸಿ. ಇದನ್ನು 1-2 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ ಕೂಲ್ ಮಾಡಿ. ಸ್ಟ್ರಾಬೆರಿ ಕ್ರಶ್‌ಗೆ ಜ್ಯಾಂ ಬೆರೆಸಿ ಕದಡಿಕೊಳ್ಳಿ. ಇದು ತುಸು ಗಟ್ಟಿ ಎನಿಸಿದರೆ ಜೊತೆಗೆ ಸ್ಟ್ರಾಬೆರಿ ರಸ ಬೆರೆಸಿಕೊಳ್ಳಿ. ಇದನ್ನು ಸಹ ಫ್ರಿಜ್‌ನಲ್ಲಿರಿಸಿ. ಕಿವೀ ಫ್ರೂಟ್‌ನ್ನು ಬಿಲ್ಲೆಗಳಾಗಿ ತುಂಡರಿಸಿ. ಒಂದು ಸರ್ವಿಂಗ್ ಬೌಲ್‌ಗೆ ಮೊದಲು ಮೊಸರು ಮಿಶ್ರಣ, ನಂತರ ಸ್ಟ್ರಾಬೆರಿ ಕ್ರಶ್, ಕೊನೆಯಲ್ಲಿ ಎಲ್ಲಕ್ಕೂ ಮೇಲೆ ಕಿವೀ ಫ್ರೂಟ್ ಬರಲಿ. ಇದರ ಮೇಲೆ ಜಾಯಿಕಾಯಿಪುಡಿ ಉದುರಿಸಿ ಕೂಲ್ ಕೂಲ್ ಆಗಿ ಸವಿಯಲು ಕೊಡಿ.
ಗಾರ್ಡನ್ ಫ್ರೆಶ್ ಸಲಾಡ್
ಸಾಮಗ್ರಿ : ಚಿಕ್ಕ ಆಕಾರದ 1-1 ಕಲ್ಲಂಗಡಿಹಣ್ಣು, ಕರ್ಬೂಜಾ, 2 ಮಾಗಿದ ಬಾಳೆಹಣ್ಣು, 1 ಸೇಬು, 1-1 ಮಧ್ಯಮ ಗಾತ್ರದ ಸೌತೇಕಾಯಿ, ಮೂಲಂಗಿ, ಸೀಬೇಕಾಯಿ, ಅಗತ್ಯವಿದ್ದಷ್ಟು ಸಲಾಡ್ ಎಲೆ, ಉದ್ದಕ್ಕೆ ಹೆಚ್ಚಿದ ಕ್ಯಾರೆಟ್, ಬೀಟ್‌ರೂಟ್ ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸಲಾಡ್ ಆಯಿಲ್, ನಿಂಬೆರಸ, ಜೇನುತುಪ್ಪ.
ವಿಧಾನ : ಚಿತ್ರದಲ್ಲಿರುವಂತೆ ಕರ್ಬೂಜಾ, ಕಲ್ಲಂಗಡಿಹಣ್ಣುಗಳನ್ನು ಸ್ಕೂಪ್‌ಗೊಳಿಸಿ ಬಾಲ್ಸ್ ಮಾಡಿಡಿ. ಬಾಳೆಹಣ್ಣನ್ನು ದಪ್ಪ ಬಿಲ್ಲೆಗಳಾಗಿಸಿ. ಸೇಬು, ಸೀಬೆ ಸಣ್ಣ ಸ್ಲೈಸ್‌ಗಳಾಗಲಿ. ಸೌತೆ, ಮೂಲಂಗಿಯನ್ನು ಉದ್ದಕ್ಕೆ ಹೆಚ್ಚಿಡಿ. ಸಲಾಡ್ ಎಲೆ ಶುಚಿಗೊಳಿಸಿ ಪ್ಲೇಟ್ ಮೇಲೆ ಹರಡಿರಿ. ಡ್ರೆಸ್ಸಿಂಗ್ ಸಾಮಗ್ರಿ ಪೂರ್ತಿ ಬೆರೆಸಿಕೊಳ್ಳಿ. ಸಲಾಡ್ ಎಲೆ ಮೇಲೆ ಉಳಿದ ಸಾಮಗ್ರಿಗಳನ್ನು ಚಿತ್ರದಲ್ಲಿರುವಂತೆ ಅಲಂಕರಿಸಿ, ಮೇಲೆ ಡ್ರೆಸ್ಸಿಂಗ್ ಉದುರಿಸಿ. ಊಟದ ಜೊತೆ ಸವಿದರೆ ಸೊಗಸು!
ಪೈನಾಪಲ್ ಕ್ಯಾರೆಟ್ ಕೋಸ್ಲಾ
ಸಾಮಗ್ರಿ : ಅರ್ಧರ್ಧ ಕಪ್ ಉದ್ದಕ್ಕೆ ತೆಳ್ಳಗೆ ಹೆಚ್ಚಿದ ಕ್ಯಾರೆಟ್, ಸೇಬು, ಅನಾನಸ್, ಸೌತೇಕಾಯಿ, ಎಲೆಕೋಸು, ಒಂದಿಷ್ಟು ಸೀಡ್ಲೆಸ್ ದಾಳಿಂಬೆ ಹರಳು, ತುಂಡರಿಸಿದ ಬಾದಾಮಿ (ನೆನೆಸಿ ಸಿಪ್ಪೆ ಬಿಡಿಸಿದ್ದು), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಓರಿಗೆನೋ, ಮೆಯೋನೀಸ್, ಸಲಾಡ್ ಆಯಿಲ್.
ವಿಧಾನ : ಹೆಚ್ಚಿದ ಕ್ಯಾರೆಟ್ ಮತ್ತು ಎಲೆಕೋಸನ್ನು 1 ತಾಸು ಐಸ್ ನೀರಲ್ಲಿ ನೆನೆಹಾಕಿಡಿ. ನಂತರ ಇದನ್ನು ಸ್ಟೀಲ್ ಜರಡಿಗೆ ಹಾಕಿ, ಎಲ್ಲಾ ನೀರೂ ಸೋರಿಹೋಗುವಂತೆ ಮಾಡಿ. ನಂತರ ಅದನ್ನು ಒಂದು ಬಟ್ಟಲಿಗೆ ಹಾಕಿಡಿ. ಇದಕ್ಕೆ ಸೇಬು, ಅನಾನಸ್, ಸೌತೇಕಾಯಿ ಇತ್ಯಾದಿ ಸೇರಿಸಿ. ನಂತರ ಇದಕ್ಕೆ ಓರಿಗೆನೊ, ಉಪ್ಪು, ಮೆಣಸು ಸೇರಿಸಿ ಎಲ್ಲವನ್ನೂ ಒಟ್ಟಿಗೆ ಟಾಸ್ ಮಾಡಿ. ಇದನ್ನು ಸರ್ವಿಂಗ್ ಡಿಶ್‌ಗೆ ಹಾಕಿ, ದಾಳಿಂಬೆ ಹರಳು, ಬಾದಾಮಿ ತುಂಡುಗಳಿಂದ ಅಲಂಕರಿಸಿ ಸವಿಯಲು ಕೊಡಿ.
ಬೇಬಿ ಪೊಟೇಟೊ ಡೆಲಿಕೆಸಿ
ಸಾಮಗ್ರಿ : 10-15 ಬೇಬಿ ಪೊಟೇಟೋ, 10-15 ಚೆರ್ರಿ ಟೊಮೇಟೊ, 10-15 ಬೇಬಿ ಆನಿಯನ್, 8-10 ರಾಸ್‌ಬೆರಿ, 8-10 ಕಪ್ಪು ದ್ರಾಕ್ಷಿ, 1 ದೊಡ್ಡ ಆಲೂಗಡ್ಡೆ, 3-4 ಚಮಚ ಆಲಿವ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಪುದೀನಾ ಚಟ್ನಿ, ಚಾಟ್ ಮಸಾಲ, ಕರಿಯಲು ಆಲಿವ್ ಎಣ್ಣೆ.
ವಿಧಾನ : ಪ್ರತಿಯೊಂದು ಬೇಬಿ ಪೊಟೇಟೋಗೂ ಪೋರ್ಕಿನಿಂದ ಅಲ್ಲಲ್ಲಿ ಚುಚ್ಚಿ ರಂಧ್ರ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಆ ಬೇಬಿ ಆಲೂಗಳನ್ನು ಕರಿದು ತೆಗೆಯಿರಿ. ನಂತರ ಇದಕ್ಕೆ ಪುದೀನಾ ಚಟ್ನಿ ಬೆರೆಸಿ ಒಂದು ಪಕ್ಕ ಇಡಿ. ನಂತರ ದೊಡ್ಡ ಆಲೂ ತುಂಡರಿಸಿ, ಅದನ್ನೂ ಕರಿದಿಡಿ. ನಂತರ ಹೊರ ತೆಗೆದು ಟಿಶ್ಯೂ ಮೇಲೆ ಹರಡಿರಿ. ಬೇಬಿ ಆನಿಯನ್‌ಗಳ ಸಿಪ್ಪೆ ಸುಲಿದು, ಅದನ್ನೂ ಲಘುವಾಗಿ ಕರಿಯಿರಿ. ಒಂದು ಬೇಸನ್ನಿಗೆ ಆಲೂ, ಆನಿಯನ್, ಹರಡಿ ಅದರ ಮೇಲೆ ಉಪ್ಪು, ಮೆಣಸು ಚಾಟ್ ಮಸಾಲ ಉದುರಿಸಿ. ಪ್ರತಿ ಚೆರ್ರಿ ಟೊಮೇಟೋವನ್ನೂ 2 ಭಾಗವಾಗಿಸಿ. ರಾಸ್‌ಬೆರಿ ಹಾಗೂ ಕಪ್ಪು ದ್ರಾಕ್ಷಿಗಳನ್ನೂ ಹೀಗೆ ಉದ್ದುದ್ದ ಕತ್ತರಿಸಿ. ಒಂದು ಸರ್ವಿಂಗ್ ಡಿಶ್‌ನಲ್ಲಿ ಮೊದಲು ಕರಿದ ಆಲೂ ಸ್ಲೈಸ್ ಹರಡಿ, ನಂತರ ಅದರ ಮೇಲೆ ಉಳಿದೆಲ್ಲ ಸಾಮಗ್ರಿ ಬರುವಂತೆ ಹರಡಿ, ಒಂದಿಷ್ಟು ಹೆಚ್ಚಿದ ಪುದೀನಾದಿಂದ ಅಲಂಕರಿಸಿ, ಸವಿಯಲು ಕೊಡಿ.
ಬೀಟ್ ರೂಟ್ ಪನೀರ್ ಸಲಾಡ್
ಸಾಮಗ್ರಿ : 1 ಬೀಟ್‌ರೂಟ್, 250 ಗ್ರಾಂ ಪನೀರ್, 1 ಕಪ್ ಸಿಹಿ ಕೆನೆಮೊಸರು, ಒಂದಿಷ್ಟು ಹುರಿದ ಫ್ಲಾಕ್ಸ್ ಸೀಡ್ಸ್ (ಅಗಸೆ ಬೀಜ), 8-10 ಪಿಸ್ತಾ, ರುಚಿಗೆ ತಕ್ಕಷ್ಟು ವಿನಿಗರ್, ಬ್ರೌನ್ ಶುಗರ್, ಓರಿಗೆನೊ, ಆಲಿವ್ ಆಯಿಲ್, ಚಿಲೀ ಫ್ಲೇಕ್ಸ್, ಉಪ್ಪು, ಮೆಣಸು.
ವಿಧಾನ : ಡ್ರೆಸ್ಸಿಂಗ್‌ನ ಎಲ್ಲಾ ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಡಿ. ಬೀಟ್‌ರೂಟ್ ಸಿಪ್ಪೆ ಹೆರೆದು ಬಿಲ್ಲೆಗಳಾಗಿಸಿ. ಹಾಗೆಯೇ ಬಿಸ್ಕೆಟ್ ಕಟರ್‌ನಿಂದ ಪನೀರ್‌ನ್ನೂ ಗುಂಡಗೆ ಬಿಲ್ಲೆ ಮಾಡಿಕೊಳ್ಳಿ. ಎರಡನ್ನೂ ಡ್ರೆಸ್ಸಿಂಗ್‌ನಲ್ಲಿ ಚೆನ್ನಾಗಿ ಹೊರಳಿಸಿ, ಒಂದರ ಮೇಲೆ ಒಂದು ಬರುವಂತೆ ಪ್ಲೇಟ್‌ನಲ್ಲಿ ಜೋಡಿಸಿ. ಉಳಿದ ಡ್ರೆಸ್ಸಿಂಗ್‌ಗೆ ಮೊಸರು ಬೆರೆಸಿ ಅದನ್ನು ಇದರ ಮೇಲೆ ಹರಡಿ, ತುಪ್ಪದಲ್ಲಿ ಹುರಿದ ಅಗಸೆ ಬೀಜ, ಬಾದಾಮಿ ಚೂರಿನಿಂದ ಅಲಂಕರಿಸಿ ಸರ್ವ್ ಮಾಡಿ.
ಅಣಬೆ ಕಡಲೆಕಾಳಿನ ಸಲಾಡ್
ಸಾಮಗ್ರಿ : 10-12 ಬಟನ್ ಅಣಬೆ, 1 ಕಪ್ ನೆನೆಸಿ ಬೇಯಿಸಿದ ಕಾಬೂಲ್ ಕಡಲೆಕಾಳು, 1-1 ಈರುಳ್ಳಿ, ಟೊಮೇಟೊ, ಒಂದಿಷ್ಟು ಹೆಚ್ಚಿದ ಈರುಳ್ಳಿ ತೆನೆ, ಬೀನ್ಸ್, ರುಚಿಗೆ ತಕ್ಕಷ್ಟು ರೆಡ್ ಚಿಲೀ ಸಾಸ್, ಟೊಮೇಟೊ ಸಾಸ್, ಜೇನುತುಪ್ಪ, ಚಿಲೀ ಫ್ಲೇಕ್ಸ್, ಉಪ್ಪು, ಮೆಣಸು, 3 ಚಮಚ ಬೆಣ್ಣೆ.
ವಿಧಾನ : ಬೀನ್ಸ್ ಮತ್ತು ಅಣಬೆಯನ್ನು ಲಘುವಾಗಿ ಬೇಯಿಸಿ. ಒಂದು ಬಟ್ಟಲಿಗೆ ಜೇನುತುಪ್ಪ, 2 ಬಗೆ ಸಾಸ್, ಉಪ್ಪು, ಮೆಣಸು ಎಲ್ಲಾ ಸೇರಿಸಿ ಚೆನ್ನಾಗಿ ಕದಡಿಕೊಳ್ಳಿ. ನಂತರ ಇದಕ್ಕೆ ಬೀನ್ಸ್, ಅಣಬೆ ಸೇರಿಸಿ 1-2 ತಾಸು ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಇದಕ್ಕೆ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಹೆಚ್ಚಿದ ಟೊಮೇಟೊ ಹಾಕಿ ಲಘುವಾಗಿ ಬಾಡಿಸಿ. ಆಮೇಲೆ ಬೆಂದ ಕಡಲೆಕಾಳು ಸೇರಿಸಿ ಚೆನ್ನಾಗಿ ಕೈಯಾಡಿಸಿ. 2 ನಿಮಿಷ ಬಿಟ್ಟು ಬೀನ್ಸ್, ಅಣಬೆ ಸೇರಿಸಿ ಟಾಸ್ ಮಾಡಿ. ಕೊನೆಯಲ್ಲಿ ಈರುಳ್ಳಿ ತೆನೆ, ಉಪ್ಪು, ಮೆಣುಸು ಎಲ್ಲಾ ಬೆರೆಸಿ ಕೆಳಗಿಳಿಸಿ, ಸವಿಯಲು ಕೊಡಿ.
ಬೇಸನ್ ಬಟನ್ ಇಡ್ಲಿ ಸಲಾಡ್
ಇಡ್ಲಿಗಾಗಿ ಸಾಮಗ್ರಿ : 1 ಕಪ್ ಕಡಲೆಹಿಟ್ಟು, ಅರ್ಧ ಕಪ್ ಮೊಸರು, 1 ಪ್ಯಾಕೆಟ್ ಈನೋ, ಒಂದಿಷ್ಟು ಹೆಚ್ಚಿದ ಕರಿಬೇವು, ಹಸಿಶುಂಠಿ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಖಾರ, ತುಸು ಎಣ್ಣೆ.
ಉಳಿದ ಸಾಮಗ್ರಿ : 2-3 ಚಮಚ ಬೆಣ್ಣೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಒಗ್ಗರಣೆಗೆ ಸಾಸುವೆ, ಜೀರಿಗೆ, 1 ಕಪ್ ಹೆಚ್ಚಿದ ಎಲೆಕೋಸು, ಅರ್ಧರ್ಧ ಕಪ್ ಉದ್ದಕ್ಕೆ ತೆಳ್ಳಗೆ ಹೆಚ್ಚಿದ ಕ್ಯಾರೆಟ್, ಹಸಿರು ಮತ್ತು ಹಳದಿ ಕ್ಯಾಪ್ಸಿಕಂ, ಬೆಂದ ಬೇಬಿಕಾರ್ನ್, ರುಚಿಗೆ ತಕ್ಕಷ್ಟು ಉಪ್ಪು ಖಾರ, ಅಗತ್ಯವಿದ್ದಷ್ಟು ಬೇಬಿ ಆನಿಯನ್, ಸೌತೆ ಹೋಳು.
ವಿಧಾನ : ಕಡಲೆಹಿಟ್ಟಿಗೆ ಮೊಸರು, ಉಪ್ಪು, ಖಾರ, ಹೆಚ್ಚಿದ ಪದಾರ್ಥ, 2 ಚಿಟಕಿ ಅರಿಶಿನ ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿ 1 ತಾಸು ನೆನೆಯಲು ಬಿಡಿ. ನಂತರ ಇದಕ್ಕೆ ಈನೋ ಬೆರೆಸಿ ಚೆನ್ನಾಗಿ ಗೊಟಾಯಿಸಿ. ಎಣ್ಣೆ ಸರಿದ ಬಟನ್ ಇಡ್ಲಿ ಸ್ಟ್ಯಾಂಡ್‌ಗೆ ಇದನ್ನು ತುಂಬಿಸಿ, ಹಬೆಯಾಡುವ ಬಟನ್ ಇಡ್ಲಿ ತಯಾರಿಸಿ. ಹೊರತೆಗೆದ ನಂತರ ಪ್ಲೇಟ್‌ನಲ್ಲಿ ಜೋಡಿಸಿಡಿ.
ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಎಲ್ಲಾ ತರಕಾರಿ ಹಾಕಿ ಮೃದುವಾಗುವಂತೆ ಬಾಡಿಸಿ. ಆಮೇಲೆ ಇದಕ್ಕೆ ಬಟನ್ ಇಡ್ಲಿ ಬೆರೆಸಿ 1-2 ನಿಮಿಷ ಕೆದಕಬೇಕು. ಇದಕ್ಕೆ ಉಪ್ಪು, ಖಾರ ಸೇರಿಸಿ ಕೆದಕಿ ಕೆಳಗಿಳಿಸಿ. ಆಮೇಲೆ ಇದಕ್ಕೆ ಹೆಚ್ಚಿದ ಕೊ.ಸೊಪ್ಪು, ಪುದೀನಾ ಸೇರಿಸಿ. ಉದ್ದದ ಕಡ್ಡಿಗೆ ಚಿತ್ರದಲ್ಲಿರುವಂತೆ ಎಲ್ಲವನ್ನೂ ಇಡ್ಲಿ ಸಮೇತ ಹಸಿಯಾಗಿ ಪೋಣಿಸಿ, ಇಡ್ಲಿ ಸಲಾಡ್ ಜೊತೆಗೆ ಅಲಂಕರಿಸಿ ಸವಿಯಲು ಕೊಡಿ.
ಚೀಸ್ ಕಾರ್ನ್ ಪೈನಾಪಲ್ ಸಲಾಡ್
ಸಾಮಗ್ರಿ : 1 ಕಪ್ ಬೆಂದ ಕಾರ್ನ್, 2 ಚಮಚ ತುಪ್ಪದಲ್ಲಿ ಹುರಿದ ಅಗಸೆಬೀಜ, 1 ಕಪ್ ಅನಾನಸ್ ಹೋಳು, 2-3 ದೊಡ್ಡ ಚಮಚ ತುರಿದ ಮೋಜರೆಲಾ ಚೀಸ್, 10-12 ಸೀಡ್ಲೆಸ್ ದ್ರಾಕ್ಷಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ.
ವಿಧಾನ : ಒಂದು ಬೇಸನ್ನಿಗೆ ಮೇಲಿನ ಎಲ್ಲಾ ಪದಾರ್ಥ ಸೇರಿಸಿ ಚೆನ್ನಾಗಿ ಟಾಸ್ ಮಾಡಿ. ಕೊನೆಯಲ್ಲಿ ಉಪ್ಪು, ಮೆಣಸು, ನಿಂಬೆಹಣ್ಣು ಹಿಂಡಿಕೊಂಡು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಜೆಲಿ ಟಂಬ್ಲರ್
ಸಾಮಗ್ರಿ : 1-1 ಪ್ಯಾಕೆಟ್ ಸ್ಟ್ರಾಬೆರಿ, ಲೆಮನ್, ಆರೆಂಜ್ ಜೆಲಿ, ಅರ್ಧ ಕಪ್ ತುರಿದ ಕ್ಯಾರೆಟ್, 4-5 ಸ್ಟ್ರಾಬೆರಿ, 1 ದೊಡ್ಡ ಕಿತ್ತಳೆಹಣ್ಣು, ಒಂದಿಷ್ಟು ಉದ್ದಕ್ಕೆ ಹೆಚ್ಚಿದ ಎಲೆಕೋಸು, ಸೌತೇಕಾಯಿ, 10-12 ಸೀಡ್ಲೆಸ್ ದ್ರಾಕ್ಷಿ.
ವಿಧಾನ : 3 ಬಗೆಯ ಜೆಲಿಗಳನ್ನೂ ಫ್ರಿಜ್‌ನಲ್ಲಿರಿಸಿ ಬೇರೆ ಬೇರೆಯಾಗಿ ಸೆಟ್ ಮಾಡಿ. ಸ್ಟ್ರಾಬೆರಿ ಜೆಲಿಗೆ ಹೆಚ್ಚಿದ ಸ್ಟ್ರಾಬೆರಿ, ತುರಿದ ಕ್ಯಾರೆಟ್ ಸೇರಿಸಿ. ಲೆಮನ್ ಜೆಲಿಗೆ ಉದ್ದಕ್ಕೆ ಹೆಚ್ಚಿದ ದ್ರಾಕ್ಷಿ, ಎಲೆಕೋಸು, ಸೌತೇಕಾಯಿ ಸೇರಿಸಿ. ಆರೆಂಜ್ ಜೆಲಿಗೆ ಕಿತ್ತಳೆಯ ಕುಸುಮೆಗಳನ್ನು ಸೇರಿಸಿ. ಮೊದಲೇ ರೆಡಿಯಾದ ಜೆಲಿಗಳನ್ನು ಚೆನ್ನಾಗಿ ಬೀಟ್ ಮಾಡಿಕೊಂಡು, ಅವಕ್ಕೆ ಮೇಲಿನಂತೆ ಸೇರಿಸಿ, ಮತ್ತೊಮ್ಮೆ ಬೇರೆ ಬೇರೆಯಾಗಿಯೇ ಸೆಟ್ ಮಾಡಿ. ಇದು ಅರ್ಧ ಸೆಟ್ ಆದಾಗ ಚಮಚದಿಂದ ಕದಡಿಕೊಳ್ಳಿ. ನಂತರ ಇದನ್ನು ಹೊರತೆಗೆದು ಚಿತ್ರದಲ್ಲಿರುವಂತೆ 2-3 ಗ್ಲಾಸುಗಳಿಗೆ ಬೇರೆ ಬೇರೆ ಬಣ್ಣದ ಜೆಲಿಗಳನ್ನು ಒಂದರ ಮೇಲೊಂದು ಹಾಕಿ, ಪೂರ್ತಿ ಸೆಟ್ ಮಾಡಿ, ನಂತರ ತಣ್ಣಗೆ ಸವಿಯಲು ಕೊಡಿ.
ಸೇಬು ಸಿಹಿಗೆಣಸಿನ ಸಲಾಡ್
ಸಾಮಗ್ರಿ : 1-2 ಮಾಗಿದ ಸೇಬು (ರೆಡ್‌ಗ್ರೀನ್), 250 ಗ್ರಾಂ ಬೆಂದು ಹೋಳಾಗಿಸಿದ ಸಿಹಿಗೆಣಸು, 2-3 ಚಮಚ ಸೀಡ್ಲೆಸ್ ದಾಳಿಂಬೆ ಹರಳು, ಅರ್ಧ ಕಪ್ ರೆಡಿಮೇಡ್ ಸೇವ್, ರುಚಿಗೆ ತಕ್ಕಷ್ಟು ಪುದೀನಾ ಹುಳಿಸಿಹಿ ಚಟ್ನಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, 1 ಸೌತೇಕಾಯಿ.
ವಿಧಾನ : ಸೌತೇಕಾಯಿ, ಸೇಬನ್ನು ಸಣ್ಣಗೆ ಹೆಚ್ಚಿ ಒಂದು ಬಟ್ಟಲಿಗೆ ಹಾಕಿಡಿ. ಇದಕ್ಕೆ ಬೆಂದ ಸಿಹಿಗೆಣಸಿನ ಹೋಳು ಸೇರಿಸಿ. ಇದರ ಮೇಲೆ ದಾಳಿಂಬೆ ಉದುರಿಸಿ, 2 ಬಗೆ ಚಟ್ನಿ ಹರಡಿ ಚೆನ್ನಾಗಿ ಟಾಸ್ ಮಾಡಿ. ಕೊನೆಯಲ್ಲಿ ಕೊ.ಸೊಪ್ಪು, ಸೇವ್ ಉದುರಿಸಿ ತಕ್ಷಣ ಸವಿಯಲು ಕೊಡಿ.