ಯಾವುದೋ ನೆಂಟರ ಮದುವೆಗೆ ಹೋಗಲು ಗಂಡ ಹೆಂಡತಿ ಸಿದ್ದರಾಗುತ್ತಿದ್ದರು. ಹೆಂಡತಿ ಹೇಗೆ ಸಿದ್ಧಳಾದಳು ಅಂತೀರಾ? ಹೊರಡುವ ಮೊದಲು ಸಾಂಗೋಪಾಂಗವಾಗಿ ಈ ಕೆಳಗಿನ ಮೇಕಪ್‌ ಮುಗಿಸಿದಳು.

ಫೇಸ್‌ವಾಶ್‌    ಫೇಸ್‌ಸ್ಟಿಕ್‌    ಕನ್ಸೀಲರ್‌     ಐ ಶ್ಯಾಡೋ   ಮಸ್ಕರಾ     ಲಿಪ್‌ಸ್ಟಿಕ್‌    ಲಿಪ್‌ಪೆನ್ಸಿಲ್‌

ಐ ಲೈನರ್‌    ಫೇಸ್‌ಕ್ರೀಂ     ಫೇಸ್‌ ಪೌಡರ್‌ ಕಾಡಿಗೆ  ಬ್ಲಶ್‌ಆನ್‌    ನೇಲ್ಪಾಲಿಶ್‌   ಪರ್ಫ್ಯೂಮ್ ಇದೆಲ್ಲ ಆದ ಮೇಲೆ ಆಕರ್ಷಕ ಸೀರೆ ಉಟ್ಟು 28 ಕಡೆ ಪಿನ್‌ ಮಾಡಿ, 2 ವಿಧದ ಹೇರ್‌ಸ್ಟೈಲ್ ಬದಲಾಯಿಸಿ, ಹೈ ಹೀಲ್ಸ್ ಧರಿಸಿ, ಕೊನೆಗೆ    ಗೆಳೆತಿಗೆ ಫೋನ್‌ ಮಾಡಿದಳು, “ಏ… ನನಗೆ ಅವಸರದಲ್ಲಿ ಏನೂ ರೆಡಿ ಮಾಡಿಕೊಳ್ಳಲಿಕ್ಕೆ ಆಗಿಲ್ಲ. ಹೂಂ, ಬೇಗ ಬರ್ತೀನಿ ಬಿಡು…..”

ಅದೇ ಗಂಡನೆಂಬ ಪ್ರಾಣಿ ಈಗಾಗಲೇ ಛತ್ರ ತಲುಪಿದ್ದ ಗೆಳೆಯನಿಗೆ ಪೋನ್‌ ಮಾಡಿ, “ಸ್ನಾನ ಮಾಡಿ ನಂತರ ಹೊರಡು ಅಂತೀಯಾ ಗುರು?” ಎಂದು ಕೇಳಿದ.

“ಯಾವ ಮಹಾ ಲಾರ್ಡ್‌ ಲಬಕ್‌ದಾಸ್‌ ಮದುವೆ ನಡೀತಿದೆ ಅಂತ…. ನಮ್ಮ ಕೊಟ್ರೇಶಿ ಮದ್ವೆ ತಾನೇ…. ಮುಖ ತೊಳ್ಕೊಂಡು ಬೇಗ ಬಾರ್ಲೇ…..”

 

ಅರವಿಂದಮ್ಮ ಏದುಸಿರು ಬಿಡುತ್ತಾ ಕೈಯಲ್ಲೊಂದು ಸುತ್ತಿಗೆ ಹಿಡಿದು ಹೈಸ್ಕೂಲ್ ಕಲಿಯುತ್ತಿದ್ದ ತಮ್ಮ ಮಗನ ಶಾಲೆ ತಲುಪಿದರು. ಅಲ್ಲಿ ಶಾಲೆ ಮುಂದಿದ್ದ ಜವಾನ ಸಿದ್ದನನ್ನು ಕೇಳಿದರು, “ಏನಪ್ಪ, ಇಲ್ಲಿ ಶಾಂತಮೂರ್ತಿಗಳ ಕ್ಲಾಸ್‌ ಯಾವುದು?”

“ಅದೇಕೆ ಕೇಳ್ತಿದ್ದೀರಿ ತಾಯಿ?” ಆಕೆಯ ಕೈಯಲ್ಲಿದ್ದ ಸುತ್ತಿಗೆ ಕಂಡು ಗಾಬರಿಗೊಂಡ ಸಿದ್ದ ಪ್ರಶ್ನಿಸಿದ.

“ಏ… ಅವರು ನಮ್ಮ ಮಗನ ಕ್ಲಾಸ್‌ ಟೀಚರ್‌ ಕಣಪ್ಪ….” ಎಂದು ಸುತ್ತಿಗೆ ಝಳಪಿಸುತ್ತಾ ಹೇಳಿದರು. ಅದನ್ನು ಕೇಳಿ ಎದ್ದೆನೋ ಬಿದ್ದೆನೋ ಎಂದು ಸಿದ್ದ ಓಡೋಡಿ ಶಾಂತಮೂರ್ತಿಗಳ ಕ್ಲಾಸಿಗೆ ಹೋಗಿ, “ಸಾರ್‌….ನಿಮ್ಮನ್ನು ಹುಡುಕಿಕೊಂಡು ಒಬ್ಬ ಹೆಂಗಸು ಸುತ್ತಿಗೆ ಸಮೇತ ಬಂದಿದ್ದಾರೆ. ಯಾವುದಕ್ಕೂ ಹುಷಾರಾಗಿರಿ!” ಎಂದ.

ಅದನ್ನು ಕೇಳಿ ಅವರಿಗೆ ಚಳಿಜ್ವರ ಬಂತು. ತಕ್ಷಣ ಪ್ರಿನ್ಸಿಪಾಲ್‌ರ ಕೋಣೆಗೆ ಓಡಿದರು. ವಿಷಯ ತಿಳಿದ ಪ್ರಿನ್ಸಿಪಾಲರು ಅರವಿಂದಮ್ಮನನ್ನು ಹುಡುಕುತ್ತಾ ಶಾಲೆಯ ಮುಂಭಾಗಕ್ಕೆ ಬಂದರು.

ಈಕೆಯನ್ನು ಕಂಡದ್ದೇ ವಿನಯವಾಗಿ, “ದಯವಿಟ್ಟು ಶಾಂತರಾಗಿ ತಾಯಿ… ವಿಷಯ ಏನು ಅಂತ ಹೇಳಿ.”

“ನಾನು ಶಾಂತವಾಗಿಯೇ ಇದ್ದೇನೆ, ಶಾಂತಮೂರ್ತಿಗಳ ಕ್ಲಾಸ್‌ ಹುಡುಕುತ್ತಿದ್ದೀನಷ್ಟೇ.”

“ಅದೇ…. ಯಾಕೆ ಅಂತ?”

“ಅಂದ್ರೆ…. ಅಲ್ಲಿ ನನ್ನ ಮಗ ಕೂರುವ ಬೆಂಚಿನಲ್ಲಿ 1 ತಿಂಗಳಿನಿಂದ ಯಾವುದೋ ಮೊಳೆ ಎದ್ದುಬಿಟ್ಟಿದೆ. ಅದನ್ನು ಸರಿ ಮಾಡಬೇಕು. ಮೊನ್ನೆ ಮೂರನೇ ಪ್ಯಾಂಟ್‌ ಹರಿದುಕೊಂಡು ಬಂದಿದ್ದಾನೆ ಅವನು,” ಎಂದು ಶಾಂತವಾಗಿ ವಿವರಿಸಿದರು.

ಪತಿ ಪತ್ನಿ 2 ಗಂಟೆ ರಾತ್ರಿಯಲ್ಲಿ ಗೊರಕೆ ಹೊಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಫ್‌ಓನ್‌ ರಿಂಗಾಯಿತು.

ಪತಿ : ಏನೇ…. ಅಮ್ಮ ರೈಲ್ವೆ ಸ್ಟೇಷನ್‌ಗೆ ಬಂದು ಕಾಯುತ್ತಿದ್ದಾರಂತೆ. ಏನು ಮಾಡು ಅಂತೀಯಾ?

ಪತ್ನಿ : ಅಯ್ಯೋ…. ಸುಮ್ನೆ ಬಿದ್ಕೊಳ್ರಿ, ಇಷ್ಟು ಹೊತ್ತಿನಲ್ಲಿ ಏನು ಮಾಡೋಕ್ಕಾಗುತ್ತೆ?

ಪತಿ : ಮತ್ತೆ ಮತ್ತೆ ಫೋನ್‌ ರಿಂಗಾಗ್ತಿದೆ ಏನು ಮಾಡಲಿ?

ಪತ್ನಿ : ಏನಾದ್ರೂ ಮಾಡಿ… ಏನೋ ಒಂದು ಹೇಳಿ ಆ ಮುದುಕೀನ ಹಾಗೇ ಸಾಗಹಾಕಿ. ಇಲ್ಲಿ ಯಾರು ಬಿಡುವಾಗಿದ್ದಾರೆ ಸೇವೆ ಮಾಡೋಕ್ಕೆ? ಅಂತೂ ಪತಿರಾಯ ಏನೋ ಹೇಳಿ ಫೋನ್‌ ಮತ್ತೆ ರಿಂಗ್‌ ಆಗದಂತೆ ಮಾಡಿದ.

ಪತ್ನಿ : ನಿದ್ದೆ ಪೂರ್ತಿ ಹೋಯ್ತು. ಅಂತೂ ವಾಪಸ್ಸು ಕಳ್ಸಿದ್ರಿ ತಾನೇ ಅವರನ್ನು…..?

ಪತಿ : ಹೂಂ…. ಅದೇ ರೈಲಿನಲ್ಲಿ ವಾಪಸ್ಸು ಹೋಗುವಂತೆ ಮಾಡಿದೆ. ಪಾಪ ಏನಂದುಕೊಂಡ್ರೊ ಏನೋ….. ಎನ್ನುತ್ತಾ ಅವಳ ಕಿವಿಯಲ್ಲಿ,  “ಬಂದಿದ್ದು ನಮ್ಮಮ್ಮ ಅಲ್ಲ ನಿಮ್ಮಮ್ಮ…..” ಎಂದು ಮೆಲ್ಲಗೆ ಉಸುರಿದ!

ಹೊಸದಾಗಿ ಮದುವೆಯಾಗಿದ್ದ ಗುಂಡ ಹ್ಯಾಪ್‌ವೋರೆ ಹಾಕಿಕೊಂಡು ಬೀದಿಗೆ ಬಂದಾಗ, ಅವನ ಗೆಳೆಯರೆಲ್ಲ, “ಏನಾಯ್ತು…. ಏನಾಯ್ತು? ನೀನೇನು ಹೇಳಿದೆ?” ಎಂದೆಲ್ಲ ವಿಚಾರಿಸಿದರು.

“ಹೇಳೋದಿಕ್ಕೇನಿದೆ….? ಬರೀ ಕೇಳಿ ಕೇಳಿ ಸಾಕಾಯ್ತು….” ಗುಂಡ ಹೇಳಿದಾಗ ಗೆಳೆಯರಿಗೆ ವಾಸ್ತವತೆಯ ಅರಿವಾಯಿತು.

ಆ ದಿನ ಮನೆಗೆಲಸದ ಕಮಲಿ ಬರಲಿಲ್ಲ ಅಂತಿಟ್ಕೊಳ್ಳಿ. ಆಗ ಮನೆ ಯಜಮಾನಿ ವಿಧಿಯಿಲ್ಲದೆ ತಾನೇ ಮನೆ ಗುಡಿಸಿ, ಒರೆಸುತ್ತಿರುವಾಗ, ಅಪ್ಪಿತಪ್ಪಿ ಗಂಡನೆಂಬ ಪ್ರಾಣಿ ಹೊರಗಿನಿಂದ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಒಳಬಂದನೋ… ಮುಗಿದೇ ಹೋಯಿತು! ನಕ್ಸಲೀಯರು ಅಲ್ಲೇ ಗುಂಡು ಮದ್ದು ಹರಡಿದ್ದಾರೇನೋ… ಹೆಜ್ಜೆ ಇಟ್ಟಲ್ಲಿ ಎಲ್ಲಿ ಅದು ಸಿಡಿದು ಬಿಡುವುದೋ ಎಂಬಷ್ಟು ಎಚ್ಚರಿಕೆಯಿಂದಿರಬೇಕು, ಇಲ್ಲದಿದ್ದರೇ…. ಗೊತ್ತಲ್ಲ?

 

ಆಶಾ ಅವಸರದಲ್ಲಿ ಆ್ಯಂಬುಲೆನ್ಸ್ ಕರೆಸಲು 102 ನಂಬರ್‌ಗೆ ಫೋನ್‌ ಮಾಡಿದಳು.

ಆಪರೇಟರ್‌ : ಏನ್ರಿ ಮೇಡಂ.. ಏನು ನಿಮ್ಮ ಸಮಸ್ಯೆ?

ಆಶಾ : ನನ್ನ ಕಾಲಿನ ಹಬ್ಬೆರಳು ಟೀಪಾಯಿ ಕಾಲಿಗೆ ತಗುಲಿ ಜಖಂ ಆಯ್ತು.

ಆಪರೇಟರ್‌ : ಅಷ್ಟಕ್ಕೇ… ನೀವು ಆ್ಯಂಬುಲೆನ್ಸ್ ಗೆ ಫೋನ್‌ ಮಾಡಿ ಮನೆಗೆ ಕರೆಸಿಕೊಳ್ಳಬೇಕೇ?

ಆಶಾ : ರೀ… ಅದು ನಂಗಲ್ಲ, ನಮ್ಮ ಯಜಮಾನರಿಗೆ ನನ್ನ ಕಾಲು ತಗುಲಿದಾಗ ಅವರು ಕಿಸಕ್‌ ಅಂದದ್ದು ಯಾಕೇಂತ….?

ಗಂಡ : ಅಲ್ಲ…. ನಮ್ಮ ಮದುವೆ ಆಗಿ ಇಷ್ಟು ವರ್ಷಗಳಾದ್ರೂ ಗಾಯದ ಮೇಲೆ ಉಪ್ಪೆರೆಚುವ ನಿಮ್ಮಪ್ಪನ ಕೆಟ್ಟ ಗುಣ ಹೋಗ್ಲಿಲ್ಲ.

ಹೆಂಡತಿ : ಯಾಕೆ… ಏನು ಹೇಳಿದರು?

ಗಂಡ : ಇವತ್ತು ಮತ್ತೆ ಅದೇ ಹಳೆ ಪ್ರಶ್ನೆ ಕೇಳ್ತಿದ್ದಾರೆ, `ಅಳಿಯಂದ್ರೆ… ನನ್ನ ಮಗಳ ಜೊತೆ ಸುಖವಾಗಿದ್ದೀರಿ ತಾನೇ?’

ಒಬ್ಬ ಕಂಜೂಸ್‌ ಹುಡುಗ ಕಂಜೂಸ್‌ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ.

ಹುಡುಗಿ : ಯಾವಾಗ ಅಪ್ಪ ಮಲಗುತ್ತಾರೋ ಆಗ ರಸ್ತೆಗೆ ಒಂದು ನಾಣ್ಯ ಬಿಸಾಡುತ್ತೇನೆ. ಶಬ್ದ ಕೇಳಿ ಬೇಗ ಮನೆ ಒಳಗೆ ಬಾ….

ಆದರೆ ಹುಡುಗ ನಾಣ್ಯ ಬಿಸಾಡಿದ ಒಂದು ಗಂಟೆಯ ನಂತರ ಸಪ್ಪೆಮೋರೆಯಲ್ಲಿ ಬಂದ.

ಹುಡುಗಿ : ನಾಣ್ಯ ಬಿಸಾಡಿ ಒಂದು ಗಂಟೆ ಆಯ್ತು.

ಇಷ್ಟು ಲೇಟ್‌ ಮಾಡಿ ಏಕೆ ಬಂದೆ?

ಹುಡುಗ : ನೀನು ಬಿಸಾಡಿದ ಆ ನಾಣ್ಯ ಹುಡುಕುತ್ತಿದ್ದೆ, ಕಡೆಗೂ ಅದು ನನಗೆ ಸಿಗ್ಲಿಲ್ಲ.

ಹುಡುಗಿ : ಅಯ್ಯೋ ಹುಚ್ಚ, ನಾನು ಅದಕ್ಕೆ ದಾರ ಕಟ್ಟಿ ಬಿಸಾಡಿದ್ದೆ, ನಿನಗೋಸ್ಕರ ಹಣ ಬಿಸಾಡಕ್ಕೆ ನನಗೇನೂ ಹುಚ್ಚೇ!

ಸಿನಿಮಾದ ಇಂಟರ್‌ವೆಲ್ ‌ನಂತರ ಗಾಢಾಂಧಕಾರದಲ್ಲಿ ತಮ್ಮ ಸೀಟ್‌ನ್ನು ಹುಡುಕುತ್ತಾ ಬಂದ ವಿಶಾಲಾಕ್ಷಮ್ಮ, ಮಧ್ಯದ ಸಾಲಿನ ತುದಿ ಕುರ್ಚಿಯಲ್ಲಿ ಕುಳಿತ ಗುಂಡಪ್ಪನವರನ್ನು ಕೇಳಿದರು, “ಏನ್ರಿ…. ನಾನೀಗ ಸ್ವಲ್ಪ ಹೊತ್ತಿಗೆ ಮುಂಚೆ ಇಲ್ಲಿಂದ ಹೋಗುವಾಗ, ಗೊತ್ತಿಲ್ಲದೆ ಅಕಸ್ಮಾತ್‌ ನಿಮ್ಮ ಕಾಲನ್ನೇನಾದರೂ ತುಳಿದುಬಿಟ್ಟಿದ್ದೆನೇ?”

ಗುಂಡಪ್ಪನವರು ರೇಗುವ ದನಿಯಲ್ಲಿ, “ಹೌದಮ್ಮ ಮಹಾ ತಾಯಿ, ಅದನ್ನು ಈಗ ನೆನಪಿಸಿಕೊಂಡು ಈ ವಿಶಾಲ ದೇಹ ಹೊತ್ತು ಸಾರಿ ಹೇಳಲು ಬಂದಿರೇನು?” ಎಂದರು.

ಅದಕ್ಕೆ ಈಕೆ, “ಅಯ್ಯೋ…. ಸಾರಿ ಮನೆ ಹಾಳಾಯ್ತು! ಇದೇ ತಾನೇ ನಾನು ಕುಳಿತಿದ್ದ ಸಾಲು ಅಂತ ಕನ್‌ಫರ್ಮ್ ಮಾಡಿಕೊಳ್ಳಬೇಕಿತ್ತು ಕಣ್ರಿ, ಹೂಂ…. ದಾರಿ ಬಿಡಿ!” ಎನ್ನುವುದೇ?

“ಆವತ್ನಿಂದ ಬಡ್ಕೊಂಡೆ….! ಬಂದವರ ಎದುರಿಗೆಲ್ಲ ನಿನ್ನ ಮಗಳಿಗೆ ಶೂಟಿಂಗ್‌ನಲ್ಲಿ ಗೋಲ್ಡ್ ಮೆಡಲ್ ಬಂದಿದ್ದನ್ನು ಹೇಳ್ಕೋಬೇಡ ಅಂತ…. ಕೇಳಿದ್ಯಾ?”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ