ಮಾನವ ಕಂಬಳದಲ್ಲಿ ಮಿಂಚಿದ ಚೆಲುವೆಯರು : ನಮ್ಮಲ್ಲಿ ಕೋಣಗಳಿಗೆ ಕೆಸರುಗದ್ದೆ ಓಟದ ಸ್ಪರ್ಧೆ ಇರುವಂತೆ, ಇತ್ತೀಚೆಗೆ ಪ್ಯಾರಿಸ್‌ನಲ್ಲಿ ಸುಮಾರು 13 ಕಿ.ಮೀ. ಉದ್ದದ ಕೆಸರಿನಲ್ಲಿ ಯುವಜನರಿಗೆ ಅತಿ ಉತ್ಸಾಹದ ಭರಪೂರ ಮನರಂಜನೆಯ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಎದ್ದು ಬಿದ್ದು ಕೈಕಾಲಿಗೆ ಪೆಟ್ಟು ಮಾಡಿಕೊಂಡ ಈ ಷೋಡಶಿಯರನ್ನು ಗಮನಿಸುವುದೇ ಪ್ರೇಕ್ಷಕರಿಗೊಂದು ಮೋಜಾಗಿತ್ತು, ನಮ್ಮಲ್ಲಿ ಹೋಳಿ ಹುಣ್ಣಿಮೆಗೆ ಆಡುವಂತೆ!
ಇಂಥ ಸೇಬನ್ನು ಎಂದಾದರೂ ಸವಿದಿದ್ದೀರಾ? : ಕ್ರೈಸ್ತ ಧರ್ಮಶಾಸ್ತ್ರದಲ್ಲಿ ಸೇಬಿಗೆ ಬಹಳ ಮಹತ್ವವಿದೆ, ಏಕೆಂದರೆ ಅದನ್ನು ಸವಿದಿದ್ದರಿಂದಲೇ ಆ್ಯಡಂ ಮತ್ತು ಈವ್ ರಿಗೆ ಜ್ಞಾನಪ್ರಾಪ್ತಿ ಆಗಿತ್ತು, ಅದನ್ನು ಇವರಿಗೆ ಸರ್ಪರೂಪಿ ಸೈತಾನ್ ನೀಡಿದ್ದಂತೆ. ಈಗ ಇಂಥದೇ ಒಂದು ಸೇಬನ್ನು ಸ್ಯಾನ್‌ಫ್ರಾನ್ಸಿಸ್ಕೋದ ಮ್ಯೂಸಿಯಂನಲ್ಲಿ ಒಬ್ಬ ಆರ್ಟಿಸ್ಟ್ ರೂಪಿಸಿದ್ದಾರೆ. ನಿಮಗೇನಾದರೂ ಸೈತಾನನ ಜ್ಞಾನದ ಕೊರತೆ ಇದೆ ಎನಿಸಿದರೆ, ಅಲ್ಲಿಗೆ ಹೋಗಿ ಇದನ್ನು ಸವಿದು ನೋಡಿ! ಅಗತ್ಯಕ್ಕಿಂತ ಹೆಚ್ಚು ಜ್ಞಾನ ಪ್ರಾಪ್ತಿಯಾದರೆ ಅದಕ್ಕೆ ನಾವು ಹೊಣೆಯಲ್ಲ.
ಬಾಹುಗಳಿಗೆ ನಿನ್ನ ಮೈಯ ಬಳಸುವಾತುರ : `ನಿನ್ನ ಸನಿಹ ಸೇರಲೆಂದೇ ಮನಕೆ ಕಾತುರ.... ಬಾಹುಗಳಿಗೆ...' ದಶಕಗಳಾಚೆಗಿನ ಈ ಮಾದಕ ಹಾಡು ನೆನಪಿದೆಯಲ್ಲವೇ.....? ಇಲ್ಲೂ ಅಂಥದೇ ಪ್ರೇಮ ನಿವೇದನೆ ಆಗುತ್ತಿದೆ ಅಂದುಕೊಂಡಿರಾ? ಅದೇನಲ್ಲ.... ಇದು ಮಾಂಟೆ ಕಾರ್ಲೋವಾದಲ್ಲಿ ಪ್ರಸ್ತುತಪಡಿಸಲಾದ ನೃತ್ಯನಾಟಕದ ಒಂದು ದೃಶ್ಯ. ಈಗಲೂ ಇಂಥ ನಿವೇದನೆಗಳು ನಡೆಯುವುದುಂಟೇ...? ದುಬಾರಿ ಕಾಫಿ ಕೆಫೆಗಳಲ್ಲಿ ಇಂಥವೆಲ್ಲ ಮಾಮೂಲಿ.
ಅಜ್ಜಿ ತಾತಾ ಅಲ್ಲ ಮಮ್ಮಿ ಡ್ಯಾಡಿ! : 79ರ ಹರೆಯದಲ್ಲಿ ಅಪ್ಪ ಹಾಗೂ 70ರ ಹರೆಯದಲ್ಲಿ ಅಮ್ಮ ಆಗುವುದೇನು ಸಾಮಾನ್ಯವಾದ ವಿಷಯವೇ? ಈ ಮಗು ಈ ವಯೋವೃದ್ಧರಿಗೆ IVF ವರಪ್ರಸಾದವಾಗಿ ಪ್ರಾಪ್ತವಾಯಿತು, ಇದಲ್ಲವೇ ಆಧುನಿಕ ವೈದ್ಯಕೀಯದ ಚಮತ್ಕಾರ?
ಇಂಥ ಮನರಂಜನೆಯಿಂದ ಲಾಭವೇನು? : ಮುಗ್ಧ ಪುಟಾಣಿಗಳಿಗೆ ದೈತ್ಯ ಮೊಸಳೆ, ರಾಕ್ಷಸರು, ದೆವ್ವ ಭೂತ, ನಡೆದಾಡುವ ಗುಡ್ಡಗಳಂಥ ಕಟ್ಟುಕಥೆಗಳ ಬಗ್ಗೆ ಹೇಳುತ್ತಾರೇಕೆ? ಆಗ ಅವರ ಮನದಲ್ಲಿ ಈ ಕಪೋಲಕಲ್ಪಿತ ಪಾತ್ರಗಳ ಬಗ್ಗೆ ಇನ್ನಿಲ್ಲದ ಭಯ ಹುಟ್ಟುತ್ತದೆ. ಇತ್ತೀಚೆಗೆ ಲಂಡನ್‌ನಲ್ಲಿ ಇಂಥದೇ ಒಂದು ಮ್ಯಾಜಿಕ್ ಗಾರ್ಡನ್‌ನ ಉದ್ಘಾಟನೆ ಆಯಿತು, ಅದರಲ್ಲಿ ಇಂಥ ಜಾನಪದ ಕಥೆಗಳ ಪಾತ್ರಗಳೇ ಜಾರು ಬಂಡೆ, ಕಲ್ಲುಬೆಂಚುಗಳಾಗಿವೆ. ಇಂಥವನ್ನು ಪ್ರೋತ್ಸಾಹಿಸುವ ಬದಲು ವಿರೋಧಿಸಬಾರದೇಕೆ?
ಈ ಸೌಭಾಗ್ಯ ಎಷ್ಟು ಮಂದಿಗೆ ಲಭಿಸೀತು? : ಇಂಥ ಹೆಣ್ಮಕ್ಕಳ ಆರಾಮದಾಯಕ ಮಡಿಲ ಹಾಸಿಗೆ ಎಷ್ಟು ಮಂದಿಗೆ ಲಭಿಸೀತು? ದ್ರೌಪದಿಗೆ ಐವರು ಪತಿಯರಂತೆ, ಇಲ್ಲಿ ಐವರು ಸುಂದರಿಯರು ತಮ್ಮ ಒಬ್ಬನೇ ಪ್ರೇಮಿಯನ್ನು ಜೋಜೋ ಹಾಡಿ ಮಲಗಿಸುತ್ತಿದ್ದಾರೆ. ಈ ಫೋಟೋ ನೋಡಿ ಲಕ್ಷಾಂತರವಲ್ಲ, ಕೋಟ್ಯಂತರ ಗಂಡಸರು ತಮಗೆ ಈ ಸೌಭಾಗ್ಯ ಪ್ರಾಪ್ತವಾಗಲಿಲ್ಲವಲ್ಲ ಎಂದು ಅಸೂಯೆಪಟ್ಟರೆ ಆಶ್ಚರ್ಯವೇನಿಲ್ಲ!
ಉಫ್..... ಇದೆಂಥ ಗಾಜಿನ ತುಂಡು?! : ರೀ ಮೇಡಂ, ಈ ಗಾಜಿನ ತುಂಡು ಅಂತಿಂಥದ್ದಲ್ಲ, ಬರೋಬ್ಬರಿ 420 ಕೋಟಿ ರೂ. ಬೆಲೆ ಬಾಳುತ್ತದೆ! ಇದು ಕಳೆದ 100 ವರ್ಷಗಳಲ್ಲಿ ಆಫ್ರಿಕಾದ ಬೋತ್‌ಸಾನಾದಲ್ಲಿ ಲಭಿಸಿದ ಅತಿ ಬೃಹತ್ ಆದ, ಅನ್ ಕಟ್ ಡೈಮಂಡ್‌ಪೀಸ್! ವಜ್ರವೆಂದರೆ ಹೀಗಿರಬೇಕು, ಆದರೆ ಬೆಲೆ ಕೇಳಿದರೆ ಗುಂಡಿಗೆ ಒಡೆದೀತು.