ಕೀರ್ತಿ ಮತ್ತು ಪುಷ್ಪಾರಿಗೆ ಅಂದು ಕಡೆಯ ಪೇಪರ್‌ ಇತ್ತು. ಮಧ್ಯಾಹ್ನ ಮನೆಗೆ ಬಂದಾಗ ಬಹಳ ಖುಷಿಯಾಗಿದ್ದರು. 2 ತಿಂಗಳಿಂದ ಓದಿ ಓದಿ ಸಾಕಾಗಿ ಹೋಗಿತ್ತು. ಎರಡನೇ ಪಿ.ಯು.ಸಿ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾಗಿರುತ್ತವೆ. ಅದರಲ್ಲಿನ ಮಾರ್ಕ್ಸ್ ಮೇಲೆ ಅವರ ಮುಂದಿನ ಕೋರ್ಸ್‌ ನಿರ್ಧರಿಸಲಾಗುತ್ತದೆ. ಅಂಕಗಳು ಕಡಿಮೆಯಾದರೆ ಒಳ್ಳೆಯ  ಕಾಲೇಜಿನಲ್ಲಿ ಸೀಟ್‌ಸಿಗುವುದಿಲ್ಲ. ಆದ್ದರಿಂದ 2 ತಿಂಗಳಿನಿಂದ ಕೀರ್ತಿ ಮತ್ತು ಪುಷ್ಪಾ ರಾತ್ರಿಯೆಲ್ಲಾ ನಿದ್ದೆಗೆಟ್ಟು ಓದಿದ್ದರು. ಇಂದು ಅವರ ತಲೆಯ ಮೇಲಿಂದ ದೊಡ್ಡ ಹೊರೆ ಇಳಿದಿತ್ತು. ಇಬ್ಬರೂ ಸಿನೆಮಾ ನೋಡಲು ಪ್ರೋಗ್ರಾಂ ಹಾಕಿದ್ದರು. ಕೀರ್ತಿ ಮತ್ತು ಪುಷ್ಪಾ ಅಡಲ್ಟ್ ಮೂವಿ ನೋಡಲು ಹೋದರು. ಅದರ ಬಗ್ಗೆ ಅವರ ಗೆಳತಿಯರಲ್ಲಿ ಬಹಳ ಚರ್ಚೆ ನಡೆದಿತ್ತು. ಅವರಿಬ್ಬರೂ ತಮ್ಮನ್ನು ವಯಸ್ಕರೆಂದು ಭಾವಿಸಿದ್ದರು. ದೇಹದಲ್ಲಾಗುತ್ತಿದ್ದ ಹಾರ್ಮೋನ್‌ ಬದಲಾವಣೆಯನ್ನು ಅವರು ಅನುಭವಕ್ಕೆ ತಂದುಕೊಂಡಿದ್ದರು.

ಥಿಯೇಟರ್‌ನಲ್ಲಿ ಹೋಗಿ ನೋಡಿದರೆ ಅರ್ಧಕ್ಕೂ ಹೆಚ್ಚು ಜನ ಸೆಕೆಂಡ್‌ ಪಿ.ಯು.ಸಿ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ತುಂಬಿದ್ದರು. ಚಿತ್ರ ಶುರುವಾದ ಕೂಡಲೇ ಥಿಯೇಟರ್‌ನಲ್ಲಿ ಮೌನ ಆವರಿಸಿತು. ಎಲ್ಲರ ಗಮನ ಸ್ಕ್ರೀನ್‌ ಮೇಲಿತ್ತು. ಹೀರೋ ಮತ್ತು ಹೀರೋಯಿನ್‌ ರೊಮ್ಯಾನ್ಸ್ ಮಾಡುವುದು ಪರಸ್ಪರ ಚುಂಬಿಸುವುದು ಯುವ ಹೃದಯಗಳ ಎದೆಬಡಿತ ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು. ಎಲ್ಲರೂ ಬೇರೆಯೇ ಆದ ಲೋಕದಲ್ಲಿ ವಿಹರಿಸುತ್ತಿದ್ದರು.

ಚಿತ್ರ ಮುಗಿದು ಹೊರಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮುಖ ನೋಡಬೇಕಿತ್ತು. ಕೆಲವರ ಮುಖ ರೋಮಾಂಚನದಿಂದ ಕೆಂಪಾಗಿತ್ತು. ಕೆಲವರು ಏನೋ ಅಪರಾಧ ಮಾಡಿದಂತೆ ತಲೆ ತಗ್ಗಿಸಿ ನಡೆಯುತ್ತಿದ್ದರು.

ಕೀರ್ತಿ ಮತ್ತು ಪುಷ್ಪಾ ಕೂಡ ಇದೇ ಭಾವನೆಯಿಂದ ತುಂಬಿದ್ದರು. ಅಂದು ರಾತ್ರಿ ಇಬ್ಬರೂ ಒಟ್ಟಿಗೆ ಇರುವವರಿದ್ದರು. ಇಬ್ಬರೂ ಮನೆಗೆ ಬಂದು ಸಿನೆಮಾ ಸಂಭಾಷಣೆಯನ್ನು ಪುನರುಚ್ಚರಿಸತೊಡಗಿದರು. ಇಬ್ಬರಿಗೂ ನಕ್ಕು ನಕ್ಕು ಸುಸ್ತಾಗಿತ್ತು.

ರಾತ್ರಿ ಡೈನಿಂಗ್‌ ಟೇಬಲ್‌ನಲ್ಲಿ ಕೀರ್ತಿಯ ಅಪ್ಪ ಅಮ್ಮ ಕೂಡ ಊಟ ಮಾಡಲು ಒಟ್ಟಿಗೆ ಕುಳಿತರು. ಇಬ್ಬರೂ ಡಾಕ್ಟರ್‌ ಆಗಿದ್ದು ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕೀರ್ತಿಯ ಅಮ್ಮ ಸ್ತ್ರೀರೋಗ ತಜ್ಞೆಯಾಗಿದ್ದರು. ಅವರು ಹೇಳಿದರು, “ಇವತ್ತು ಇಬ್ಬರ ಮುಖದಲ್ಲಿ ಸಂತೋಷ ಕಂಡುಬರುತ್ತಿದೆ. ಇನ್ನು ಒಂದೂವರೆ ತಿಂಗಳು ಆರಾಮಾಗಿ ಕಳೀರಿ. ರಿಸಲ್ಟ್ ಬಂದ ಮೇಲೆ ಅಡ್ಮಿಶನ್‌ ಎಲ್ಲೀಂತ ಚಿಂತೆ ಶುರುವಾಗುತ್ತೆ.”

“ಇವತ್ತು ನೀವಿಬ್ರು ಯಾವ ಸಿನಿಮಾಗೆ ಹೋಗಿದ್ರಿ?” ಕೀರ್ತಿಯ  ಅಪ್ಪ ರಮೇಶ್‌ ಕೇಳಿದರು. ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ನಂತರ ತಕ್ಷಣವೇ ಬೇರೊಂದು ಸಿನಿಮಾದ ಹೆಸರು ಹೇಳಿದರು. ಅವರ ಸುಳ್ಳನ್ನು ಅಪ್ಪ ಅಮ್ಮ ಕಂಡುಹಿಡಿಯಲಾಗಲಿಲ್ಲ. ಕೀರ್ತಿಯ ಅಪ್ಪ ಅಮ್ಮ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಎಷ್ಟು ವ್ಯಸ್ತರಾಗಿದ್ದರೆಂದರೆ ತಮ್ಮ ಮಗಳ ದುರ್ವರ್ತನೆ, ಅವ್ಯವಹಾರಗಳತ್ತ ಅವರ ಗಮನ ಹೋಗುತ್ತಿರಲಿಲ್ಲ. ಅದರಿಂದಾಗಿ ಕೀರ್ತಿ ಮತ್ತು ಪುಷ್ಪಾರ ನಗುವನ್ನು ಅವರು ಗಮನಿಸಲಿಲ್ಲ.

ರಾತ್ರಿ ಪುಷ್ಪಾಳ ತಾಯಿಯಿಂದ ಫೋನ್‌ ಬಂದಿತು. ಅವರು ನಗರದ ಬಹುದೊಡ್ಡ ಬೊಟೀಕ್‌ನ ಒಡತಿಯಾಗಿದ್ದು ಬಹಳ ವ್ಯಸ್ತರಾಗಿದ್ದರು. ಪುಷ್ಪಾಗೆ ಅತ್ಯಂತ ಒಳ್ಳೆಯ ವಸ್ತುಗಳನ್ನು ಕೊಡುವುದು ಅವರ ಆದ್ಯತೆಯಾಗಿತ್ತು. ಪುಷ್ಪಾ ತನ್ನ ತರಗತಿಯಲ್ಲಿ ವೆಲ್ ಡ್ರೆಸ್ಡ್ ಗರ್ಲ್ ಎಂದು ಕರೆಸಿಕೊಳ್ಳುತ್ತಿದ್ದಳು. ಪುಷ್ಪಾಳೊಂದಿಗೆ ಕುಳಿತು ಮಾತನಾಡಲು ಅವರಿಗೆ ಒಂದು ದಿನ ಪುರುಸೊತ್ತು ಸಿಕ್ಕಿರಲಿಲ್ಲ. ರಾತ್ರಿ ಪುಷ್ಪಾ ಮತ್ತು ಕೀರ್ತಿ ಮಲಗಿಕೊಂಡಾಗ ಅವರ ಮಾತಿನ ಕೇಂದ್ರಬಿಂದು ಅದೇ ಸಿನಿಮಾ ಆಗಿತ್ತು. ಕೀರ್ತಿ ಗುಣುಗುಟ್ಟುತ್ತಿದ್ದಳು. “ನನಗೂ ಒಬ್ಬ ಗೆಳೆಯ ಬೇಕೂ…”

ಅದನ್ನು ಕೇಳಿ ಪುಷ್ಪಾ ಹೇಳಿದಳು, “ಹಾಗಾದರೆ ಬೇಗ ಒಬ್ಬ ಗೆಳೆಯನನ್ನು ಹುಡುಕ್ಕೋ.”

“ಖಂಡಿತಾ ಹುಡುಕ್ತೀನಿ. ಆದರೆ ಕನಸ್ಸಿನಲ್ಲಿ ಮಾತ್ರ. ನಿಜವಾಗಿಯೂ ಹುಡುಕಿದ್ರೆ ಅಪ್ಪ ಅಮ್ಮ ಮನೆಯಿಂದ ಹೊರಗೆ ಹಾಕ್ತಾರಷ್ಟೇ.”

“ಅವರಿಗೆ ಯಾರು ಹೇಳ್ತಾರೆ. ಅವರಿಗೆ ತಮ್ಮ ಕೆಲಸದಲ್ಲಿ ಪುರಸತ್ತೇ ಸಿಗಲ್ಲ. ನಾವು ಸ್ವಲ್ಪ ಹುಡುಗಾಟ ಆಡಬಹುದು, ಆದ್ರೆ ಅನಾಹುತ ಆಗಬಾರದು.”

“ಶುರುವಿನಲ್ಲೇ ಅಡ್ಡಬಾಯಿ ಹಾಕಬೇಡ,”

“ಒಂದು ವೇಳೆ ನಿನಗೆ ಭಯ ಇಲ್ಲಾಂದ್ರೆ ನೀನೇ ಶುರು ಮಾಡು. ನಾನು ದೂರದಲ್ಲಿ ಕುಳಿತು ಮಜಾ ತಗೋಳ್ತೀನಿ.”

“ಹಾಗೆಲ್ಲಾ ಆಗಲ್ಲ. ಮುಳುಗೋ ಹಾಗಿದ್ರೆ ಇಬ್ರೂ ಒಟ್ಟಿಗೆ ಮುಳುಗೋಣ ಸಖಿ, ಒಂದ್ನಿಮಿಷ. ಸಖಿ ಅಂದಕೂಡಲೇ ಜ್ಞಾಪಕ ಬಂತು. ಪರೀಕ್ಷೆ ಶುರುವಾಗೋ ಮೊದಲು ಒಬ್ಬ ಡಾಕ್ಟರ್‌ ಕಾಲೇಜಿಗೆ ಬಂದಿದ್ರು. ಅವರು `ಸಖಿ’ ಅನ್ನೋ  ಓವರ್‌ ಕಾಂಟ್ರಾಸೆಪ್ಟಿವ್ ‌ಪಿಲ್ಸ್ ‌ಬಗ್ಗೆ ಹೇಳಿದ್ರು. ಆಗ ಪರೀಕ್ಷೆ ಟೆನ್ಶನ್‌ ಇತ್ತು. ಅದರ ಕಡೆ ಗಮನ ಕೊಡೋಕೆ ಆಗಲಿಲ್ಲ. ಈಗ ಆ ಪಾಂಫ್ಲೆಟ್‌ ತಂದು ಓದಬೇಕು. ನಾನು ಹಿಂದಿ ಟೆಕ್ಸ್ಟ್ ಬುಕ್‌ನಲ್ಲಿ ಇಟ್ಟಿದ್ದೆ,” ಎಂದು ಕೀರ್ತಿ ಅದನ್ನು ಹುಡುಕಿ ತೆಗೆದಳು.

“ಲೇ, ಜಾಸ್ತಿ ಕುಣೀಬೇಡ್ವೇ, ಅವೆಲ್ಲಾ ಮದುವೆ ಆದಮೇಲೆ ತಿಳ್ಕೋಬೇಕು, ಈಗಲೇ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ.”

“ನೀನು ಯಾವಾಗಲೂ ಹೆದರಿಕೊಳ್ಳೋದೇ ಆಯ್ತು, ಬದುಕಿನ ಸುಖ ಮುದುಕಿ ಆದಮೇಲೆ ಪಡ್ಕೋತೀಯಾ?” ಎಂದು ಹೇಳಿ ಸಖಿಯ ಜಾಹೀರಾತು ಓದತೊಡಗಿದಳು. ಅದರಲ್ಲಿ `ನೀವು ಮಕ್ಕಳನ್ನು ಪಡೆಯದೇ ಇರಲು ಹಾಗೂ 2 ಮಕ್ಕಳ ನಡುವೆ ಅಂತರವಿಡಲು ಸರಳ ಉಪಾಯ `ಸಖಿ’ ಎಂದಿತ್ತು.

“ನನಗೂ ಒಬ್ಬ ಗೆಳೆಯ ಬೇಕು… ಆ ಗೆಳೆಯ ಸಿಕ್ಕಿದಾಗ ಈ `ಸಖಿ’ ಕೆಲಸಕ್ಕೆ ಬರುತ್ತೆ ಗೊತ್ತಾಯ್ತಾ ನನ್ನ ಸಖೀ?” ಎಂದು ಕೇಳಿದಳು.

“ಸಾಕು.. ಸಾಕು.. ನಿಮ್ಮ ಅಮ್ಮನಿಗೆ ಗೊತ್ತಾದ್ರೆ ದೊಡ್ಡ ಗಲಾಟೆ ಆಗುತ್ತೆ. ಪತ್ರಿಕೆಗಳಲ್ಲಿ ಆರುಷಿ ಕೊಲೆ ಬಗ್ಗೆ ಓದಿದ್ದೀಯ ಅಲ್ವಾ? ಪ್ರೀತಿಯಲ್ಲಿ ಬಿದ್ದಿದ್ದ ಮಗಳನ್ನು ಅವಳ ಅಪ್ಪ ಅಮ್ಮನೇ ಕೊಲೆ ಮಾಡಿದ್ರು.” ಇಬ್ಬರೂ ಮಾತಾಡುತ್ತಲೇ ನಿದ್ರೆಗೆ ಜಾರಿದರು.

ಮರುದಿನ ಬೆಳಗ್ಗೆ ಎದ್ದಾಗ ಅವರ ಮನಸ್ಸಿನಲ್ಲಿ ಆ ಸಿನೆಮಾ ದೃಶ್ಯಗಳೇ ಸುತ್ತುತ್ತಿದ್ದವು. ಇಬ್ಬರೂ ಪರಸ್ಪರ ರೇಗಿಸುತ್ತಿದ್ದರು.

ಕೀರ್ತಿ ಕೇಳಿದಳು, “ನಿನ್ನ ಹುಡುಗ ಹೇಗಿರಬೇಕು?”

“ಮೊದಲು ನೀನು ಹೇಳು.”

“ಅಕ್ಷಯಕುಮಾರ್‌ ತರಹ ಇರಬೇಕು.”

“ನನಗೆ ಸಂಜೀವ್ ‌ಕುಮಾರ್‌ ತರಹ ಇರಬೇಕು.”

“ನಿನಗೆ ಲವರ್‌ ಬೇಕೋ ಅಪ್ಪ ಬೇಕೋ?”

“ಲವರ್‌ ಜೊತೆ ನಾನು ಸುರಕ್ಷಿತವಾಗಿರ್ತೀನಿ ಅನ್ನಿಸಬೇಕು. ಒಂದು ಹೂವಿಂದ ಇನ್ನೊಂದು ಹೂವಿಗೆ ಹಾರೋ ದುಂಬಿಯಂಥೋನು ನನಗೆ ಬೇಡ.”

“ಓಹೊಹೋ ಬಹಳ ಹುಷಾರಾಗಿದ್ದೀಯ.”

“ನಾನು ಯಾವಾಗಲೂ ಹುಷಾರಾಗೇ ಇರ್ತೀನಿ. ನನ್ನನ್ನು ಏನೂಂತ ತಿಳಿದು ಕೊಂಡಿದ್ದೀಯ? ನಿನಗೂ ತಪ್ಪು ಮಾಡೋಕೆ ಬಿಡಲ್ಲ.”

“ಆಯ್ತು ಕಣೆ,” ನಂತರ ಇಬ್ಬರೂ ಕಿಲಕಿಲನೆ ನಗತೊಡಗಿದರು. ಇಬ್ಬರ ನಗುವನ್ನು ಕೇಳಿ ಕೀರ್ತಿಯ ತಂದೆ ಡಾ.ರಮೇಶ್‌ಒಳಬಂದು ಹೇಳಿದರು, “ಇನ್ನೂ 1 ದಿನ ರಜೆ ಎಂಜಾಯ್‌ ಮಾಡಿ. ಕೀರ್ತಿ ನಾಳೆ ಬೆಳಗ್ನಿಂದ ನಿನ್ನ ಡ್ರೈವಿಂಗ್‌ ಕ್ಲಾಸ್ ಶುರುವಾಗುತ್ತೆ. ನಾನು ಒಳ್ಳೆ ಡ್ರೈವರ್‌ನ ಫಿಕ್ಸ್ ಮಾಡಿದ್ದೀನಿ. ಅವನು ದಿನ ಬೆಳಿಗ್ಗೆ 7 ಘಂಟೆಗೆ ಬಂದು ನಿನ್ನನ್ನು ಡ್ರೈವಿಂಗ್ ಕಲಿಸೋಕೆ ಕರಕೊಂಡು ಹೋಗ್ತಾನೆ.”

“ಹೌದಾ ಡ್ಯಾಡಿ! ನನಗೆ ಕಾರ್‌ ಕಲಿಯೋಕೆ ಬಿಡ್ತಿದ್ದೀರಾ? ನೀವು ಎಷ್ಟು ಒಳ್ಳೆಯರು…. ಥ್ಯಾಂಕ್ಯು ಡ್ಯಾಡಿ.”

“ನಿಮ್ಮ ಅಮ್ಮನೂ ಮಧ್ಯಾಹ್ನದ ಹೊತ್ತಿನಲ್ಲಿ ಕುಕಿಂಗ್‌ ಕ್ಲಾಸಿಗೆ ನಿನ್ನ ಹೆಸರು ಬರೆಸಿದ್ದಾಳೆ. ಮಧ್ಯಾಹ್ನ 1 ಘಂಟೆ ಅಲ್ಲಿಗೆ ಹೋಗ್ತೀಯಾ. ಸಂಜೆ 1 ಘಂಟೆ ಜಿಮ್ ನಲ್ಲಿ ಎಕ್ಸರ್‌ಸೈಜ್‌ ಮಾಡಬೇಕು.”

“ವಾಹ್! ನೀನಂತೂ ಇಡೀ ದಿನದ ಪ್ರೋಗ್ರಾಂ ಮಾಡಿಬಿಟ್ರಿ. ಈಗ ಬೋರ್‌ ಆಗುವ ಮಾತೇ ಇಲ್ಲ.”

ಪುಷ್ಪಾ ಮಧ್ಯಾಹ್ನ ತನ್ನ ಮನೆಗೆ ಹೋದಳು. ಮರುದಿನ ಡ್ರೈವರ್‌ ಬಂದು ಕೀರ್ತಿಯನ್ನು ಡ್ರೈವಿಂಗ್‌ ಕಲಿಯಲು ಕರಕೊಂಡು ಹೊರಟಾಗ ಅವಳ ಖುಷಿಗೆ ಪಾರವೇ ಇರಲಿಲ್ಲ. ಒಂದು ವಾರ ಕಳೆಯುವಷ್ಟರಲ್ಲಿ ಅವಳು ಕಾರು ಓಡಿಸಲು ಕಲಿತಳು. ಈಗ ಅವಳ ಗಮನ ಡ್ರೈವರ್‌ನತ್ತ ಹೋಯಿತು. ಅವನು ಬಹಳ ಸ್ಮಾರ್ಟ್‌ ಆಗಿದ್ದ. ನೋಡಲು ಅಕ್ಷಯ್‌ ಕುಮಾರನಂತೆಯೇ ಇದ್ದ. ಹೆಚ್ಚು ಹಣ ಸಂಪಾದಿಸಲು ಅವನು ಡ್ರೈವಿಂಗ್‌ ಕಲಿಸುವ ಪಾರ್ಟ್‌ ಟೈಂ ಉದ್ಯೋಗ ಮಾಡುತ್ತಿದ್ದ. ಈಗ ಇದ್ದಕ್ಕಿದ್ದಂತೆ ಅವಳ ಕೈ ಅವನ ಕೈಯನ್ನು ಮುಟ್ಟತೊಡಗಿತು. ಇಬ್ಬರೂ ವಾರೆಗಣ್ಣಿನಿಂದ ಪರಸ್ಪರ ನೋಡತೊಡಗಿದರು. ಈಗ ಕೀರ್ತಿ ಆ ಡ್ರೈವಿಂಗ್‌ ಟೀಚರ್‌ ಮನು ಬಗ್ಗೆಯೇ ಯೋಚಿಸುತ್ತಿದ್ದಳು. ಅವಳು ಒಳ್ಳೆಯ ಲವರ್‌ ಸಿಕ್ಕಿದ್ದಾನೆಂದು ಪುಷ್ಪಾಗೆ ಫೋನ್‌ ಮಾಡಿದಳು. ಈಗ ಅವನನ್ನು ಲವರ್‌ ಮಾಡಿಕೊಳ್ಳಬೇಕಷ್ಟೆ.

“ಹುಚ್ಚಿ ತರಹ ಆಡಬೇಡ. ಒಬ್ಬ ಡ್ರೈರ್‌ನ ಲವರ್‌ ಮಾಡ್ಕೋತೀಯಾ?”

“ಏನೀಗ? ಡ್ರೈವರ್‌ ಲವರ್‌ ಆಗಬಾರ್ದಾ? ನಾನು ಇಡೀ ಜೀವನದ ಬಗ್ಗೆ ಹೇಳಲಿಲ್ಲ. ಪಾರ್ಟ್‌ಟೈಂ ಲವರ್‌ ಬಗ್ಗೆ ಹೇಳ್ತಿದ್ದೀನಿ.”

“ನೀನು ಹುಚ್ಚಿ ಆಗಿಬಿಟ್ಟಿದ್ದೀಯ. ನಿನ್ನ ಮಿತೀಲಿ ಇರು. ನಿಮ್ಮ ಅಮ್ಮನಿಗೆ ಗೊತ್ತಾದ್ರೆ ನಿನ್ನನ್ನು ಸಾಯಿಸಿಬಿಡ್ತಾರೆ. ಇನ್ನೊಂದು ಆರುಷಿ ಮರ್ಡರ್‌ ಕೇಸ್‌ ಆಗಿಬಿಡುತ್ತದೆ.”

“ನಾನೇನು ಅಷ್ಟು ಪೆದ್ದು ಅಲ್ಲ. ನನ್ನ ಅಮ್ಮನಿಗೆ ಯಾವ ವಿಷಯಾನೂ ಗೊತ್ತಾಗೋದೀಲ್ಲ.”

ಮರುದಿನ ಪುಷ್ಪಾ ಅವಳ ಮನೆಗೆ ಬರುವಷ್ಟರಲ್ಲಿ ಕೀರ್ತಿ ಮನಸ್ಸಿಗೆ ಬಂದಂತೆ ಮಾಡಿದ್ದಳು. ಅವಳು ಅಮ್ಮನ ಪರ್ಸ್‌ನಿಂದ `ಸಖಿ’ ಪಿಲ್ಸ್ ತೆಗೆದು ನುಂಗಿದ್ದಳು. ಪಿಲ್ಸ್ ‌ನುಂಗಿದ ನಂತರ ಅವಳ ಧೈರ್ಯ ಹೆಚ್ಚಾಗಿತ್ತು. ಪ್ರಿಯಕರನ ಎದುರು ಕೀರ್ತಿಯೇ ತನ್ನನ್ನು ಸಮರ್ಪಿಸಿ ಕೊಂಡಾಗ ಅವನೇಕೆ ವಿರೋಧಿಸುತ್ತಾನೆ? ನಂತರ ಕಾರಿನ ಹಿಂದಿನ ಸೀಟಿನಲ್ಲಿಯೇ ಎಲ್ಲ ನಡೆದುಹೋಯಿತು. ಪುಷ್ಪಾ ಕೀರ್ತಿಯ ಬಳಿ ಬಂದಾಗ ಅವಳನ್ನು ನೋಡುತ್ತಲೇ ಎಲ್ಲವನ್ನೂ ಅರ್ಥ ಮಾಡಿಕೊಂಡಳು, “ಏನೇ ಮಾಡ್ದೆ? ಒಂದು ವೇಳೆ ಪಿಲ್ಸ್ ಕೆಲಸ ಮಾಡದಿದ್ದರೆ? ಏನಾದರೂ ಹೆಚ್ಚು ಕಡಿಮೆ ಆದರೆ? ನಾವು ಆ ಅಡಲ್ಟ್ ಮೂವಿ ನೋಡಲೇಬಾರದಿತ್ತು.”

“ಸಾಕು. ಭಾಷಣ ನಿಲ್ಲಿಸು. ನೀನೂ ಬೇಗನೇ ಒಬ್ಬ ಗೆಳೆಯನನ್ನು ಹುಡುಕ್ಕೋ.”

“ನನಗೆ ನಿನ್ನ ಸಲಹೆ ಬೇಡ. ಮುಂದೆ ಇಂಥಾ ಸಾಹಸಕ್ಕೆ ಕೈ ಹಾಕಬೇಡ.”

“ಆಯ್ತು. ಇನ್ಮೇಲೆ ನಿನಗೆ ನಾನು ಏನೂ ಹೇಳಲ್ಲ. ನೀನೇ ಸತಿ ಸಾವಿತ್ರಿ ಆಗು. ನಾನಂತೂ ಬದುಕಿನ ಸವಿ ಉಣ್ಣಬೇಕು.” ಪುಷ್ಪಾ ಸುಮ್ಮನಿರುವುದೇ ಸರಿ ಎಂದುಕೊಂಡಳು. ಕೀರ್ತಿಯ ತಲೆಯಲ್ಲಿ ಪ್ರಿಯಕರನ ಭೂತ ಹೊಕ್ಕಿದ್ದು ಯಾವುದೇ ಸಲಹೆ ಕೇಳುವ ಹಾಗಿರಲಿಲ್ಲ.

ಕೀರ್ತಿ ಮೋಜು ಉಡಾಯಿಸಿ ಉಡಾಯಿಸಿ ಎಲ್ಲವನ್ನೂ ಪುಷ್ಪಾಗೆ ಹೇಳಿದಳು. ಪ್ರಪಂಚದ ಅತ್ಯಂತ ದುರ್ಲಭವಾದ ಸುಖವನ್ನು ತಾನು ಪಡೆದಿದ್ದೇನೆಂದುಕೊಂಡಿದ್ದಳು. ಆದರೆ ಇದು ಪುಷ್ಪಾಳ ಮೇಲೆ ಏನೂ ಪರಿಣಾಮ ಬೀರಲಿಲ್ಲ. ಅವಳು ಹದ್ದುಬಸ್ತಿನಲ್ಲಿದ್ದಳು. ಕೀರ್ತಿಯ ಡ್ರೈವಿಂಗ್‌ ತರಬೇತಿ ಮುಗಿದಿತ್ತು. ಆದರೆ ಅವಳು ಡ್ರೈವರ್‌ ಮನು ಜೊತೆಗೆ ಸೇರುವುದು ನಡೆದೇ ಇತ್ತು. ನಿಧಾನವಾಗಿ ಹೊಸ ಅನುಭಗಳು ಹಳೆಯದಾಗತೊಡಗಿದವು. ಈಗ ಅವಳು ಮನುವಿನಿಂದ ನಿಧಾನವಾಗಿ ದೂರಾಗತೊಡಗಿದಳು. ರಿಸಲ್ಟ್ ಬರುವ ಸಮಯ ಹತ್ತಿರ ಬರುತ್ತಿತ್ತು. ಇತ್ತ ತನ್ನ ಶರೀರದಲ್ಲಿ ಏನೋ ಬದಲಾವಣೆಯಾಗುತ್ತಿರುವುದೂ ಅವಳ ಗಮನಕ್ಕೆ ಬಂತು. ಆ ತಿಂಗಳು ಅವಳಿಗೆ ಪೀರಿಯಡ್ಸ್ ಸಹ ಬರಲಿಲ್ಲ. ಅವಳು ಇನ್ನೊಂದು ವಾರ ನಿರೀಕ್ಷಿಸಿದಳು. ಆದರೆ ಏನೂ ಪ್ರಯೋಜನವಾಗಲಿಲ್ಲ. ಅವಳು ಪುಷ್ಪಾಗೆ ತನ್ನ ತೊಂದರೆಯನ್ನು ತಿಳಿಸಿದಳು.

ಪುಷ್ಪಾ ಕೋಪದಿಂದ, “ಮಾಡಿದ್ದುಣ್ಣೊ ಮಹರಾಯ. ಹುಚ್ಚು ಹುಡುಗಿ. ಪ್ರಿಯಕರನ ಜೊತೆ ಇನ್ನೂ ಮೋಜು ಮಾಡು. `ಸಖಿ’ ಕೈ ಕೊಡ್ತ್ವಾ? ಈಗೇನು ಮಾಡ್ತೀಯಾ? ಆಂಟಿಗೆ ಗೊತ್ತಾದ್ರೆ ಅವರಿಗೆ ಎಷ್ಟು ದುಃಖಾಗುತ್ತೆ.”

“ಲೆಕ್ಚರ್‌ ನಿಲ್ಲಿಸು. ಈಗೇನು ಮಾಡೋದೂಂತ ಹೇಳು.”

“ಸಖಿ ಪಿಲ್ಸ್ ದಿನ ತೆಗೆದುಕೊಳ್ಳಲಿಲ್ವೇನೆ?”

“ಅದೆಲ್ಲಾ ಬಿಡು, ಈಗ ಈ ತೊಂದರೆಗಳಿಂದ ಪರಿಹರಿಸು.”

“ನಿನ್ನ ಅಮ್ಮನಿಗೆ ಎಲ್ಲನ್ನೂ ಹೇಳು. ಅವರು ಡಾಕ್ಟರ್‌. ಈಗ ಏನು ಮಾಡೋದೂಂತ ಅವರಿಗೆ ಚೆನ್ನಾಗಿ ತಿಳಿದಿರುತ್ತೆ.”

“ಅಮ್ಮನಿಗೆ ಹೇಳೋದಾ? ಓಹ್! ಒಳ್ಳೆ ಸಲಹೆ ಕೊಟ್ಟೆ. ಬೇರೆ ಯಾರೂ ಡಾಕ್ಟರ್‌ಗಳು ಇಲ್ವಾ?”

“ಡಾಕ್ಟರ್‌ಗಳು ಬಹಳ ಇದ್ದಾರೆ. ಆದರೆ ಏನಾದರೂ ಹೆಚ್ಚುಕಡಿಮೆ ಆದರೆ ಆಂಟಿಗೆ ಗೊತ್ತಾಗೇ ಆಗುತ್ತೆ.”

“ಯಾಕೆ ಹೆಚ್ಚು ಕಡಿಮೆ ಆಗುತ್ತೆ? 10-15 ನಿಮಿಷಗಳಲ್ಲಿ ಎಲ್ಲ ಕ್ಲಿಯರ್‌ ಆಗಿಹೋಗತ್ತೆ. ಯಾರಿಗೂ ಗೊತ್ತಾಗೋದಿಲ್ಲ.”

“ಕೆಲವು ಬಾರಿ ಪರಿಸ್ಥಿತಿ ಬಿಗಡಾಯಿಸುತ್ತದೆ. ಈಗಾಗ್ಲೆ ಒಂದು ತಪ್ಪಾಗಿದೆ. ಇನ್ನೊಂದು ದೊಡ್ಡ ತಪ್ಪು ಮಾಡೋಕೆ ಹೋಗಬೇಡ. ನಿನ್ನ ಅಮ್ಮನಿಗೆ ಎಲ್ಲನ್ನೂ ಹೇಳಿಬಿಡು. ಅವರೇ ನಿನ್ನನ್ನು ಈ ದೊಡ್ಡ ತೊಂದರೆಯಿಂದ ಕಾಪಾಡ್ತಾರೆ.”

“ ನನಗೆ ಅಷ್ಟು ಧೈರ್ಯ ಇಲ್ಲ ಕಣೆ. ನಾನು ಅಮ್ಮನಿಗೆ ಏನೂ ಹೇಳಕ್ಕಾಗಲ್ಲ.”

“ಹಾಗಾದರೆ ಎಲ್ಲನ್ನೂ ಬರೆದು ಅವರಿಗೆ ಸಿಗೋ ಹಾಗೆ ಇಟ್ಟು ಬಿಡು. ನಿನಗೆ ಬೈಗುಳಗಳು ಸಿಗೋದು ಗ್ಯಾರಂಟಿ. ಆದರೆ ನೀನು ಸುರಕ್ಷಿತ ಕೈಗಳಲ್ಲಿ ಇರ್ತೀಯ.”

ಕೀರ್ತಿ ಈಗ ಏನೂ ಮಾಡಲೂ ಸಿದ್ಧಳಿದ್ದಳು. ಅವಳು ನಡೆದಿದ್ದೆಲ್ಲನ್ನೂ ಒಂದು ಕಾಗದದಲ್ಲಿ ಬರೆದು ಅಮ್ಮನ ಪರ್ಸ್‌ನಲ್ಲಿ ಹಾಕಿದಳು. ಅಮ್ಮ ಆ ಕಾಗದನ್ನು ಓದಿದಾಗ ಅವರಿಗೆ ಕಾಲಕೆಳಗಿನ ನೆಲವೇ ಕುಸಿದಂತೆ ಭಾಸವಾಯಿತು. ತನ್ನ ಮಗಳು ಇಷ್ಟು ದೊಡ್ಡ ತಪ್ಪು ಹೇಗೆ ಮಾಡಿದಳು? ಅವರಿಗೆ ಸ್ವಲ್ಪ ಹೊತ್ತು ಬುದ್ಧಿಯೇ ಸ್ತಿಮಿತದಲ್ಲಿರಲಿಲ್ಲ. ಗಂಡನಿಗೆ ಹೇಳುವುದೋ ಬೇಡವೋ? ಅವರು ಮನೆಗೆ ಬೇಗ ಬಂದು ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿಕೊಂಡರು. 1-2 ಘಂಟೆ ಕಳೆದ ಮೇಲೆ ಅವರು ಶಾಂತರಾಗಿ ಕೀರ್ತಿಯನ್ನು ಕರೆದರು.

“ಮಮ್ಮಿ, ನಾನು ನಿಮ್ಮ ಪರ್ಸ್‌ನಿಂದಲೇ ಸಖಿ ಪಿಲ್ಸ್ ತೆಗೆದುಕೊಂಡು ತಿಂದಿದ್ದೆ.”

“ಅದರ ಮೇಲೆ ಎಕ್ಸ್ ಪೈರಿ ಡೇಟ್‌ ನೋಡಲಿಲ್ವಾ?”

“ಇಲ್ಲ.”

“ಈಗ ನಿನ್ನ ಪೆದ್ದುತನಕ್ಕೆ ಶಿಕ್ಷೆ ಅನುಭವಿಸು. ನಾನು ಇದುವರೆಗೂ ಎಷ್ಟು ಅವಿವೇಕಿ ಹುಡುಗಿಯರಿಗೆ ಅಬಾರ್ಷನ್‌ ಮಾಡಿದ್ದೀನಿ. ಆದರೆ ಒಂದು ದಿನ ನನ್ನ ಮಗಳೇ ಹೀಗೆ ನನ್ನ ಮುಂದೆ ನಿಲ್ಲುತ್ತಾಳೇಂತ ನನಗೆ ಗೊತ್ತಿರಲಿಲ್ಲ. ನಿನ್ನ ಅರ್ಧಂಬರ್ಧ ಜ್ಞಾನ ನಿನಗೆ ಈ ಪರಿಸ್ಥಿತಿ ಉಂಟು ಮಾಡಿತು. ನಿನಗೆ ಇದರ ಬಗ್ಗೆ ಎಲ್ಲನ್ನೂ ವಿವರಿಸಿ ಹೇಳೋಕೆ ನನಗೆ ಬಿಡುವೇ ಆಗಲಿಲ್ಲ. ನನ್ನ ಮನೆಯಲ್ಲಿ ನನ್ನ ಮಗಳು ಇಷ್ಟು ಬೆಳೆದು ನಿಂತಿದ್ದು ನನಗೆ ತಿಳಿಯಲೇ ಇಲ್ಲ. ನಾನು ನನ್ನ ಕೆಲಸದಲ್ಲೇ ವ್ಯಸ್ತಳಾಗಿದ್ದೆ. ನಮ್ಮಿಬ್ಬರಿಂದಲೂ ತಪ್ಪು ನಡೆದುಹೋಯ್ತು. ಇಬ್ಬರಿಗೂ ಶಿಕ್ಷೆ ಸಿಗುತ್ತೆ. ಇಡೀ ಜೀವನ ನನ್ನನ್ನು ನಾನು ಕ್ಷಮಿಸೋದಿಲ್ಲ. ಇವತ್ತು ಸಂಜೇನೇ ಇದನ್ನು ತೆಗೆಯಬೇಕು. ನಿಮ್ಮಪ್ಪನೂ ಮನೆಯಲ್ಲಿ ಇಲ್ಲ. ಅವರಿಗೆ ಈ ವಿಷಯ ತಿಳಿಯಲೇಬಾರದು. ನಿನ್ನ ಒಂದು ಕ್ಷಣದ ಮೋಜು ನಿನ್ನನ್ನು ಮುಳುಗಿಸಿಬಿಡ್ತು.”

“ಅಮ್ಮಾ, ನನ್ನನ್ನು ಕ್ಷಮಿಸಿಬಿಡು.”

ಅಂದು ಸಂಜೆಯೇ ಮನೆಯಲ್ಲಿನ ಕ್ಲಿನಿಕ್‌ನಲ್ಲಿ ಒಬ್ಬ ತಾಯಿ ತನ್ನ ಮಗಳು ಮಾಡಿದ ತಪ್ಪನ್ನು ಅಳಿಸಿಹಾಕಿದಳು. ಶಾರೀರಿಕ ಹೊರೆಯಂತೂ ಇಳಿದುಹೋಯಿತು. ಆದರೆ ಆ ಘಟನೆಯಿಂದಾದ ಮಾನಸಿಕ ಗಾಯ ಎಂದೂ ಹೋಗುವಂತಿರಲಿಲ್ಲ.

ಸರಿಯಾದ ಮಾಹಿತಿ ಅರಿಯದೆ ತೆಗೆದುಕೊಂಡ ಒಳ್ಳೆಯ ಔಷಧಿಯೂ ಸಹ ವಿಷವಾಗುತ್ತದೆ. ಡಾ. ಕಾವ್ಯಾ ಸಖಿ ಕುರಿತು,  ಸಂತಾನ ಎಲ್ಲಿಯವರೆಗೆ ಬೇಡವೋ ಅಥವಾ ಮಕ್ಕಳ ಜನನದಲ್ಲಿ ಅಂತರವಿಡುವ ಬಗ್ಗೆ ವಿವಾಹಿತೆಯರಿಗೆ ಮಾತ್ರ ವಿವರಿಸುತ್ತಿದ್ದರು. ಆದರೆ ಸ್ಕೂಲ್‌, ಕಾಲೇಜ್ ವಿದ್ಯಾರ್ಥಿನಿಯರೂ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಾರೆಂದು ಅವರಿಗೆ ತಿಳಿದಿರಲಿಲ್ಲ. ಕೋತಿಯ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಅವರ ಮಗಳ ಜೀವನದಲ್ಲಿ ಈ ಪಿಲ್ಸ್ ಕೆಲಸ ಮಾಡಿತ್ತು. ಅವರ ಮಗಳಂತಹ ಅಸಂಖ್ಯಾತ ಉನ್ಮತ್ತ ಹುಡುಗಿಯರು ಈ ಪಿಲ್ಸ್ ನ ದುರುಪಯೋಗ ಮಾಡಿರಬಹುದು. ಜೀವನದಲ್ಲಿ ಜ್ಞಾನದ ಜೊತೆ ಜೊತೆಗೆ ವಿವೇಕ ಅಗತ್ಯ. ತಾಯಿ ತಂದೆಯರು ಮಾತ್ರ ಮಕ್ಕಳಿಗೆ ವಿವೇಕ ಕಲಿಸುತ್ತಾರೆ. ಅವರಂತೂ ಒಳ್ಳೆಯ ತಾಯಿ ಅನ್ನಿಸಿಕೊಳ್ಳಲಿಲ್ಲ. ಅವರು ಕೆಲಸದ ವ್ಯಸ್ತತೆಯಿಂದ ಎಂದೂ ಮಗಳ ಜೊತೆ ಕೂತು ಒಳ್ಳೆಯದು ಕೆಟ್ಟದ್ದರ ಬಗ್ಗೆ ವಿವರಿಸಲಿಲ್ಲ. ಇಂದು ಮಗಳ ತಪ್ಪಿನಲ್ಲಿ ಅವರು ತಮ್ಮನ್ನೂ ಭಾಗಿದಾರರೆಂದು ತಿಳಿದುಕೊಂಡಿದ್ದಾರೆ. ಹೀಗಾಗಿ ಅವರು ಕೀರ್ತಿಯನ್ನು ಬೈಯಲೂ ಆಗಲಿಲ್ಲ. ಏಕಾಂಗಿಯಾಗಿ ದುಃಖಿಸುತ್ತಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ