ಕೀರ್ತಿ ಮತ್ತು ಪುಷ್ಪಾರಿಗೆ ಅಂದು ಕಡೆಯ ಪೇಪರ್ ಇತ್ತು. ಮಧ್ಯಾಹ್ನ ಮನೆಗೆ ಬಂದಾಗ ಬಹಳ ಖುಷಿಯಾಗಿದ್ದರು. 2 ತಿಂಗಳಿಂದ ಓದಿ ಓದಿ ಸಾಕಾಗಿ ಹೋಗಿತ್ತು. ಎರಡನೇ ಪಿ.ಯು.ಸಿ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾಗಿರುತ್ತವೆ. ಅದರಲ್ಲಿನ ಮಾರ್ಕ್ಸ್ ಮೇಲೆ ಅವರ ಮುಂದಿನ ಕೋರ್ಸ್ ನಿರ್ಧರಿಸಲಾಗುತ್ತದೆ. ಅಂಕಗಳು ಕಡಿಮೆಯಾದರೆ ಒಳ್ಳೆಯ ಕಾಲೇಜಿನಲ್ಲಿ ಸೀಟ್‌ಸಿಗುವುದಿಲ್ಲ. ಆದ್ದರಿಂದ 2 ತಿಂಗಳಿನಿಂದ ಕೀರ್ತಿ ಮತ್ತು ಪುಷ್ಪಾ ರಾತ್ರಿಯೆಲ್ಲಾ ನಿದ್ದೆಗೆಟ್ಟು ಓದಿದ್ದರು. ಇಂದು ಅವರ ತಲೆಯ ಮೇಲಿಂದ ದೊಡ್ಡ ಹೊರೆ ಇಳಿದಿತ್ತು. ಇಬ್ಬರೂ ಸಿನೆಮಾ ನೋಡಲು ಪ್ರೋಗ್ರಾಂ ಹಾಕಿದ್ದರು. ಕೀರ್ತಿ ಮತ್ತು ಪುಷ್ಪಾ ಅಡಲ್ಟ್ ಮೂವಿ ನೋಡಲು ಹೋದರು. ಅದರ ಬಗ್ಗೆ ಅವರ ಗೆಳತಿಯರಲ್ಲಿ ಬಹಳ ಚರ್ಚೆ ನಡೆದಿತ್ತು. ಅವರಿಬ್ಬರೂ ತಮ್ಮನ್ನು ವಯಸ್ಕರೆಂದು ಭಾವಿಸಿದ್ದರು. ದೇಹದಲ್ಲಾಗುತ್ತಿದ್ದ ಹಾರ್ಮೋನ್ ಬದಲಾವಣೆಯನ್ನು ಅವರು ಅನುಭವಕ್ಕೆ ತಂದುಕೊಂಡಿದ್ದರು.
ಥಿಯೇಟರ್‌ನಲ್ಲಿ ಹೋಗಿ ನೋಡಿದರೆ ಅರ್ಧಕ್ಕೂ ಹೆಚ್ಚು ಜನ ಸೆಕೆಂಡ್ ಪಿ.ಯು.ಸಿ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ತುಂಬಿದ್ದರು. ಚಿತ್ರ ಶುರುವಾದ ಕೂಡಲೇ ಥಿಯೇಟರ್‌ನಲ್ಲಿ ಮೌನ ಆವರಿಸಿತು. ಎಲ್ಲರ ಗಮನ ಸ್ಕ್ರೀನ್ ಮೇಲಿತ್ತು. ಹೀರೋ ಮತ್ತು ಹೀರೋಯಿನ್ ರೊಮ್ಯಾನ್ಸ್ ಮಾಡುವುದು ಪರಸ್ಪರ ಚುಂಬಿಸುವುದು ಯುವ ಹೃದಯಗಳ ಎದೆಬಡಿತ ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು. ಎಲ್ಲರೂ ಬೇರೆಯೇ ಆದ ಲೋಕದಲ್ಲಿ ವಿಹರಿಸುತ್ತಿದ್ದರು.
ಚಿತ್ರ ಮುಗಿದು ಹೊರಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮುಖ ನೋಡಬೇಕಿತ್ತು. ಕೆಲವರ ಮುಖ ರೋಮಾಂಚನದಿಂದ ಕೆಂಪಾಗಿತ್ತು. ಕೆಲವರು ಏನೋ ಅಪರಾಧ ಮಾಡಿದಂತೆ ತಲೆ ತಗ್ಗಿಸಿ ನಡೆಯುತ್ತಿದ್ದರು.
ಕೀರ್ತಿ ಮತ್ತು ಪುಷ್ಪಾ ಕೂಡ ಇದೇ ಭಾವನೆಯಿಂದ ತುಂಬಿದ್ದರು. ಅಂದು ರಾತ್ರಿ ಇಬ್ಬರೂ ಒಟ್ಟಿಗೆ ಇರುವವರಿದ್ದರು. ಇಬ್ಬರೂ ಮನೆಗೆ ಬಂದು ಸಿನೆಮಾ ಸಂಭಾಷಣೆಯನ್ನು ಪುನರುಚ್ಚರಿಸತೊಡಗಿದರು. ಇಬ್ಬರಿಗೂ ನಕ್ಕು ನಕ್ಕು ಸುಸ್ತಾಗಿತ್ತು.
ರಾತ್ರಿ ಡೈನಿಂಗ್ ಟೇಬಲ್‌ನಲ್ಲಿ ಕೀರ್ತಿಯ ಅಪ್ಪ ಅಮ್ಮ ಕೂಡ ಊಟ ಮಾಡಲು ಒಟ್ಟಿಗೆ ಕುಳಿತರು. ಇಬ್ಬರೂ ಡಾಕ್ಟರ್ ಆಗಿದ್ದು ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕೀರ್ತಿಯ ಅಮ್ಮ ಸ್ತ್ರೀರೋಗ ತಜ್ಞೆಯಾಗಿದ್ದರು. ಅವರು ಹೇಳಿದರು, ``ಇವತ್ತು ಇಬ್ಬರ ಮುಖದಲ್ಲಿ ಸಂತೋಷ ಕಂಡುಬರುತ್ತಿದೆ. ಇನ್ನು ಒಂದೂವರೆ ತಿಂಗಳು ಆರಾಮಾಗಿ ಕಳೀರಿ. ರಿಸಲ್ಟ್ ಬಂದ ಮೇಲೆ ಅಡ್ಮಿಶನ್ ಎಲ್ಲೀಂತ ಚಿಂತೆ ಶುರುವಾಗುತ್ತೆ.''
``ಇವತ್ತು ನೀವಿಬ್ರು ಯಾವ ಸಿನಿಮಾಗೆ ಹೋಗಿದ್ರಿ?'' ಕೀರ್ತಿಯ ಅಪ್ಪ ರಮೇಶ್ ಕೇಳಿದರು. ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ನಂತರ ತಕ್ಷಣವೇ ಬೇರೊಂದು ಸಿನಿಮಾದ ಹೆಸರು ಹೇಳಿದರು. ಅವರ ಸುಳ್ಳನ್ನು ಅಪ್ಪ ಅಮ್ಮ ಕಂಡುಹಿಡಿಯಲಾಗಲಿಲ್ಲ. ಕೀರ್ತಿಯ ಅಪ್ಪ ಅಮ್ಮ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಎಷ್ಟು ವ್ಯಸ್ತರಾಗಿದ್ದರೆಂದರೆ ತಮ್ಮ ಮಗಳ ದುರ್ವರ್ತನೆ, ಅವ್ಯವಹಾರಗಳತ್ತ ಅವರ ಗಮನ ಹೋಗುತ್ತಿರಲಿಲ್ಲ. ಅದರಿಂದಾಗಿ ಕೀರ್ತಿ ಮತ್ತು ಪುಷ್ಪಾರ ನಗುವನ್ನು ಅವರು ಗಮನಿಸಲಿಲ್ಲ.
ರಾತ್ರಿ ಪುಷ್ಪಾಳ ತಾಯಿಯಿಂದ ಫೋನ್ ಬಂದಿತು. ಅವರು ನಗರದ ಬಹುದೊಡ್ಡ ಬೊಟೀಕ್‌ನ ಒಡತಿಯಾಗಿದ್ದು ಬಹಳ ವ್ಯಸ್ತರಾಗಿದ್ದರು. ಪುಷ್ಪಾಗೆ ಅತ್ಯಂತ ಒಳ್ಳೆಯ ವಸ್ತುಗಳನ್ನು ಕೊಡುವುದು ಅವರ ಆದ್ಯತೆಯಾಗಿತ್ತು. ಪುಷ್ಪಾ ತನ್ನ ತರಗತಿಯಲ್ಲಿ ವೆಲ್ ಡ್ರೆಸ್ಡ್ ಗರ್ಲ್ ಎಂದು ಕರೆಸಿಕೊಳ್ಳುತ್ತಿದ್ದಳು. ಪುಷ್ಪಾಳೊಂದಿಗೆ ಕುಳಿತು ಮಾತನಾಡಲು ಅವರಿಗೆ ಒಂದು ದಿನ ಪುರುಸೊತ್ತು ಸಿಕ್ಕಿರಲಿಲ್ಲ. ರಾತ್ರಿ ಪುಷ್ಪಾ ಮತ್ತು ಕೀರ್ತಿ ಮಲಗಿಕೊಂಡಾಗ ಅವರ ಮಾತಿನ ಕೇಂದ್ರಬಿಂದು ಅದೇ ಸಿನಿಮಾ ಆಗಿತ್ತು. ಕೀರ್ತಿ ಗುಣುಗುಟ್ಟುತ್ತಿದ್ದಳು. ``ನನಗೂ ಒಬ್ಬ ಗೆಳೆಯ ಬೇಕೂ...''