ಸಾಮಾನ್ಯವಾಗಿ ಗೃಹಿಣಿಯರು ಅಚ್ಚುಕಟ್ಟಾಗಿ ಅಡುಗೆ ಮಾಡಿ, ಬಂದ ಅತಿಥಿಗಳಿಂದ ಶಭಾಷ್‌ಗಿರಿ ಪಡೆಯುತ್ತಾರೆ. ಒಮ್ಮೊಮ್ಮೆ ಎಲ್ಲೋ ಏನೋ ಎಡವಟ್ಟಾಗಿ ಅಡುಗೆಯ ರುಚಿ ಕೆಟ್ಟು ಹೋಗಬಹುದು, ಅದರ ಪೋಷಕಾಂಶಗಳೂ ನಷ್ಟ ಹೊಂದಬಹುದು. ಒಮ್ಮೊಮ್ಮೆ ಹಣ್ಣುಗಳನ್ನು ನೀಟಾಗಿ ಎಲ್ಲಾ ಹೋಳೂ ಒಂದೇ ಆಕಾರದಲ್ಲಿ ಬರುವಂತೆ ಕತ್ತರಿಸಬಹುದು, ಆದರೆ ಮರೆತು ಈರುಳ್ಳಿ ಹೆಚ್ಚಿದ್ದ ಅದೇ ಮಣೆ ಮತ್ತು ಚಾಕು ಉಪಯೋಗಿಸಿದ್ದರಿಂದ ಹಣ್ಣಿನ ರುಚಿ ಹೇಳುವುದೇ ಬೇಡ.
ಅದೇ ತರಹ ಮೊಟ್ಟೆ ಬೀಟ್ ಮಾಡಿದ ಕಪ್‌ನ್ನು ಸರಿಯಾಗಿ ತೊಳೆದಿರದೆ, ಅದೇ ಕಪ್‌ನಲ್ಲಿ ಯಾರಿಗಾದರೂ ಕಾಫಿ/ಟೀ ಸರ್ವ್ ಮಾಡಿದರೆ, ಕಾಫಿ/ಟೀ ಎಷ್ಟೇ ಚೆನ್ನಾಗಿದ್ದರೂ ಅದು ಯಾರಿಗೂ ರುಚಿಸದು.
ಹೀಗೆ ಅಡುಗೆಮನೆಯ ನಿರ್ವಹಣೆಯಲ್ಲಿ ಸಣ್ಣಪುಟ್ಟ ಲೋಪದೋಷಗಳು ಇಣುಕು ಸಾಧ್ಯತೆ ಇದ್ದೇ ಇದೆ. ಇದರಿಂದ ಉತ್ತಮ ವ್ಯಂಜನ ಕೆಡುವುದಲ್ಲದೆ, ಅಸಮರ್ಪಕ ಬಳಕೆಯಿಂದ ಅಡುಗೆಮನೆಯ ಅಂದ ಹಾಳಾಗುತ್ತದೆ. ಹಾಗಾಗದಂತೆ ಎಚ್ಚರವಹಿಸುವುದು ಹೇಗೆ?
ಮಿಸ್ಟೇಕ್ ನಂ.1 : ಮೈಕ್ರೋವೇವ್‌ನಲ್ಲಿ ಖಾದ್ಯ ಬಿಸಿ ಮಾಡಿದ ನಂತರ ಅಥವಾ ಅಡುಗೆ ಮಾಡಿದ ಮೇಲೆ ತಕ್ಷಣ ಅದರ ಡೋರ್‌ಓಪನ್ ಮಾಡಿ ಸಾಮಗ್ರಿ ಹೊರತೆಗೆಯುವುದು.
ಪರಿಹಾರ : ಅಡುಗೆ ಆದ ಮೇಲೆ ಅಥವಾ ಬಿಸಿ ಮಾಡಿದಾಗ, ತಕ್ಷಣ ಮೈಕ್ರೋವೇವ್ ಡೋರ್ ತೆರೆಯಬೇಡಿ. ಹೊರಗಿನ ಮತ್ತು ಒಳಗಿನ ಶಾಖದಲ್ಲಿ ವ್ಯತ್ಯಾಸ ಇರುವುದರಿಂದ, ಮೈಕ್ರೋವೇವ್‌ನ ಸೇಫ್ ಕಂಟೇನರ್ ಒಡೆಯುವ ಸಾಧ್ಯತೆ ಇದೆ. ಇಷ್ಟು ಮಾತ್ರವಲ್ಲ, ಮೈಕ್ರೋವೇವ್ ಆಫ್ ಆದ ಕೆಲವು ಕ್ಷಣಗಳ ನಂತರ ವಿದ್ಯುತ್ ತರಂಗಗಳು ಆಹಾರದ ಮೇಲೆ ತಮ್ಮ ಪ್ರಭಾವ ಬೀರುತ್ತಿರುತ್ತವೆ. ಹೀಗಾಗಿ ಮೈಕ್ರೋವೇವ್ ಸ್ವಿಚ್ ಆಫ್ ಆದ 1 ನಿಮಿಷದ ಬಳಿಕ ವ್ಯಂಜನ ಹೊರ ತೆಗೆಯಿರಿ.
ಮಿಸ್ಟೇಕ್ ನಂ.2 : ಮೈಕ್ರೋವೇವ್‌ನಲ್ಲಿ ಅಡುಗೆ ತಯಾರಿಸಲು ಅಥವಾ ಬಿಸಿ ಮಾಡಲು ಪ್ಲಾಸ್ಟಿಕ್ ಕಂಟೇನರ್ ಬಳಕೆ.
ಪರಿಹಾರ : ಅಡುಗೆ ತಯಾರಿಸುವ ಅಥವಾ ಬಿಸಿ ಮಾಡುನ ಅತಿ ವೇಗದ ವಿಧಾನ ಎಂದರೆ ಮೈಕ್ರೋವೇವ್. ಆದರೆ ಇದರಲ್ಲಿ ಪ್ಲಾಸ್ಟಿಕ್ ಕಂಟೇನರ್‌ಗಳನ್ನು ಇಡುವುದರಿಂದ, ಪ್ಲಾಸ್ಟಿಕ್‌ನ ಹಾನಿಕಾರಕ ಅಂಶಗಳು ನಮ್ಮ ಆಹಾರಕ್ಕೆ ಸೇರಿಕೊಳ್ಳುತ್ತವೆ. ಅರಿಯದೆ ಅದನ್ನು ನಾವು ತಿಂದುಬಿಡುತ್ತೇವೆ. ಇದರಿಂದ ಕ್ಯಾನ್ಸರ್‌ವರೆಗಿನ ಯಾವುದೇ ತೊಂದರೆ ಬರಬಹುದು. ಆದ್ದರಿಂದ ಪ್ಲಾಸ್ಟಿಕ್ ಕಂಟೇನರ್ ಬಳಸಲೇಬೇಡಿ. ಮೈಕ್ರೋವೇವ್ ಪ್ರೂಫ್ ಇರುವಂಥ ಕಂಟೇನರ್ಸ್ ಮಾತ್ರ ಬಳಸಬೇಕು.
ಮಿಸ್ಟೇಕ್ ನಂ.3 : ಹಿಂದಿನ ದಿನದ ಉಳಿದ ಅನ್ನ, ಪಲ್ಯ, ಸಾಂಬಾರ್ ಇತ್ಯಾದಿ ಏನನ್ನೇ ಬಿಸಿ ಮಾಡಿದರೂ ಅದರ ತೇವಾಂಶವೆಲ್ಲ ಹಿಂಗಿಹೋಗುತ್ತದೆ.
ಪರಿಹಾರ : ಮೇಲಿನ ಯಾವುದೇ ಪದಾರ್ಥ ಬಿಸಿ ಮಾಡಿದರೂ, ಅದರ ಮೇಲ್ಭಾಗದಲ್ಲಿ ತುಸು ನೀರು ಚಿಮುಕಿಸಿ ನಂತರ ಬಿಸಿಗಿಡಿ. ಆಗ ಈ ಸಮಸ್ಯೆ ಇರಲ್ಲ.
ಮಿಸ್ಟೇಕ್ ನಂ.4 : ಫ್ರಿಜ್‌ನಿಂದ ಆಹಾರ ಪದಾರ್ಥ ಹೊರತೆಗೆದ ತಕ್ಷಣ ಅದನ್ನು ಬಿಸಿ ಮಾಡುವುದು.
ಪರಿಹಾರ : ತಪ್ಪು, ಹೀಗೆ ಮಾಡುವ ಬದಲು ಫ್ರಿಜ್‌ನಲ್ಲಿರಿಸಿದ್ದ ಯಾವುದೇ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಸು ವೊದಲು, ಬೇಸಿಗೆಯಲ್ಲಿ ಅರ್ಧ ಗಂಟೆ ಹಾಗೂ ಚಳಿ/ಮಳೆಗಾಲದಲ್ಲಿ ಒಂದು ಗಂಟೆ ಮೊದಲೇ ತೆಗೆದು ಕೋಣೆಯ ತಾಪಮಾನಕ್ಕೆ ಬರುವಂತೆ ಅವನ್ನು ಹೊರಗಿಡಬೇಕು. ಅದರ ತಾಪಮಾನ ಮಾಮೂಲಾಯ್ತು ಎಂದು ಖಾತ್ರಿಪಡಿಸಿಕೊಂಡೇ ಕೆಲಸ ಶುರುಮಾಡಿ. ಮತ್ತೊಂದು ವಿಷಯ, ಇಂಥವನ್ನು ಗ್ಯಾಸ್ ಅಥವಾ ಮೈಕ್ರೋವೇವ್ ಯಾದರಲ್ಲೇ ಬಿಸಿ ಮಾಡಿ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಹೊರತೆಗೆದು ಬಳಸಬೇಕು. ಸಾಮಾನ್ಯವಾಗಿ ಮಹಿಳೆಯರು ಫ್ರಿಜ್‌ನಿಂದ ಹೊರತೆಗೆದ ಅಷ್ಟನ್ನೂ ಬಿಸಿ ಮಾಡಿ, ಬಡಿಸಿ ಉಳಿದದ್ದನ್ನು ಮತ್ತೆ ಫ್ರಿಜ್‌ನಲ್ಲಿ ಇಡುತ್ತಾರೆ. ಇದರಿಂದ ಗ್ಯಾಸ್, ಫ್ರಿಜ್ ಕಂಪ್ರೆಸರ್ ಎರಡಕ್ಕೂ ಟ್ಯಾಕ್ಸ್ ಆಗುತ್ತದೆ. ಹೀಗೆ ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಸಹಜವಾಗಿಯೇ ಪದಾರ್ಥದ ರುಚಿ ಕೆಡುತ್ತದೆ.
ಮಿಸ್ಟೇಕ್ ನಂ.5 : ಕರಿದ ನಂತರ ಉಳಿದ ಎಣ್ಣೆಯನ್ನು ಮತ್ತೆ ಮತ್ತೆ ಕರಿಯಲು ಬಳಸುವುದು.
ಪರಿಹಾರ : ಸಾಮಾನ್ಯವಾಗಿ ಮಹಿಳೆಯರು ವಡೆ, ಪೂರಿ ಇತ್ಯಾದಿ ಕರಿದ ನಂತರ ಉಳಿಯುವ ಎಣ್ಣೆಯನ್ನು ಮತ್ತೆ ಮತ್ತೆ ಕರಿಯಲು ಅಥವಾ ಬೇರೇನಾದರೂ ತಯಾರಿಸಲು ಬಳಸುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ. ಏಕೆಂದರೆ ಮತ್ತೆ ಮತ್ತೆ ಅದೇ ಎಣ್ಣೆ ಕಾಯಿಸುವುದರಿಂದ ಅದರ ಟ್ರಾನ್ಸ್ ಫ್ಯಾಟ್ ಅಂಶ ಹೆಚ್ಚುತ್ತದೆ. ಇದರ ಅಧಿಕ ಸೇವನೆಯಿಂದ ಬಿ.ಪಿ., ಸ್ಥೂಲತ್ವ, ಹೃದ್ರೋಗಗಳು ಬರುವ ಸಾಧ್ಯತೆಗಳಿವೆ. ಆದ್ದರಿಂದ ಆ ಹೊತ್ತಿಗೆ ಕರಿಯಲು ಎಷ್ಟು ಬೇಕೋ ಅಷ್ಟೇ ಎಣ್ಣೆ ಬಳಸಿ ಕರಿಯಿರಿ. ಬೈ ಚಾನ್ಸ್ ಆಗಲೂ ಸ್ವಲ್ಪ ಎಣ್ಣೆ ಉಳಿದರೆ, ತಕ್ಷಣ ಹಪ್ಪಳ ಸಂಡಿಗೆ, ಅವಲಕ್ಕಿ, ಕಡಿಬೀಜ…. ಹೀಗೆ ಅಗತ್ಯದ ಸಾಮಗ್ರಿ ಕರಿದು ತೆಗೆದಿಡಿ.
ಮಿಸ್ಟೇಕ್ ನಂ.6 : ರುಚಿ ಹಚ್ಚಿಸಲು ಹೆಚ್ಚಿನ ಪ್ರಮಾಣದಲ್ಲಿ ಸೀಸನಿಂಗ್ (ಒಗ್ಗರಣೆ) ಕೊಡಬೇಕು.
ಪರಿಹಾರ : ಸಾಮಾನ್ಯವಾಗಿ ಮಹಿಳೆಯರು ಉಪ್ಪು, ಮೆಣಸು, ಮಸಾಲೆ ಇತ್ಯಾದಿ ಹೆಚ್ಚು ಹಾಕಿ ಒಗ್ಗರಣೆ ಕೊಟ್ಟರೆ ರುಚಿ ಹೆಚ್ಚುತ್ತದೆಂದು ಭಾವಿಸುತ್ತಾರೆ. ಹಾಗಲ್ಲ, ಹೆಚ್ಚಿನ ಪ್ರಮಾಣದ ಇವುಗಳ ಸೇವನೆಯಿಂದ ಬಿ.ಪಿ. ಹೆಚ್ಚುತ್ತದೆ. ಇದರ ಬದಲು ಸೀಸನಿಂಗ್‌ಗಾಗಿ ಶುಂಠಿ-ಬೆಳ್ಳುಳ್ಳಿ, ತಾಜಾ ಹರ್ಬ್ಸ್ ಅಂದರೆ ಪುದೀನಾ, ಕರಿಬೇವು, ಕೊ.ಸೊಪ್ಪು ಇತ್ಯಾದಿ ಬಳಸಿರಿ. ಇದರಿಂದ ರುಚಿಯೂ ಹೆಚ್ಚುತ್ತದೆ, ಆರೋಗ್ಯ ಸುಧಾರಿಸುತ್ತದೆ.
ಮಿಸ್ಟೇಕ್ ನಂ.7 : ಅಡುಗೆ ಮಾಡುವಾಗ ಸರಿಯಾದ ತಾಪಮಾನವನ್ನು ಸರಿಯಾದ ಸಂದರ್ಭದಲ್ಲಿ ಬಳಸದೆ ಇರುವುದು.
ಪರಿಹಾರ : ಅವಸರದಲ್ಲಿ ಅಥವಾ ಸಮಯ ಉಳಿಸಲೆಂದು ಮಹಿಳೆಯರು ಉರಿಯನ್ನು ದೊಡ್ಡದು ಮಾಡಿ ಅಡುಗೆಗೆ ತೊಡಗುತ್ತಾರೆ. ಇದರಿಂದ ವ್ಯಂಜನ ಹೊರಗಿನಿಂದ ಬೇಗ ಬೇಯುತ್ತದೆ. (ಒಮ್ಮೊಮ್ಮೆ ಸೀಯುತ್ತದೆ ಕೂಡ) ಆದರೆ ಒಳಭಾಗ ಬೆಂದಿರುವುದಿಲ್ಲ. ಇದೇ ತರಹ ದೊಡ್ಡ ಉರಿಯಲ್ಲಿ ಮಸಾಲೆ ಹುರಿಯುವುದರಿಂದ ಅದರ ರುಚಿ, ಸುವಾಸನೆ ಎರಡೂ ಕೆಡುತ್ತದೆ. ಆದ್ದರಿಂದ ಸರಿಯಾದ ತಾಪಮಾನ ಅಂದರೆ ಉರಿಯನ್ನೇ ಬಳಸಬೇಕು. ದೊಡ್ಡ ಕುಕ್ಕರ್, ಬಾಣಲೆ, ಕಾವಲಿಗಳಿಗೆ ದೊಡ್ಡ ಉರಿ ಸರಿ, ಉಳಿದವುಗಳಿಗೆ ಸಣ್ಣ ಉರಿಯೇ ಸರಿ. ಜೊತೆಗೆ ಯಾವ ಪದಾರ್ಥವೇ ಇರಲಿ, ಮುಚ್ಚಳ ಮುಚ್ಚಿರಿಸಿ ಬೇಯಿಸಿ. ಆಗ ಅದರ ಪೋಷಕಾಂಶಗಳೂ ಉಳಿಯುತ್ತವೆ.
ಮಿಸ್ಟೇಕ್ ನಂ.8 : ತರಕಾರಿ ಬೇಯಿಸಿದ ನಂತರ ಆ ನೀರನ್ನು ಬಿಸಾಡುವುದು.
ಪರಿಹಾರ : ಯಾವುದೇ ತರಕಾರಿಯನ್ನೂ ಹೆಚ್ಚುವರಿ ನೀರಲ್ಲಿ ಬೇಯಿಸಬಾರದು. ಎಷ್ಟು ಬೇಕೋ ಅಷ್ಟೇ (ತರಕಾರಿ ಹೋಳು ಮುಳುಗುವಷ್ಟು) ಪ್ರಮಾಣದ ನೀರು ತೆಗೆದುಕೊಳ್ಳಿ. ತರಕಾರಿ ಬೆಂದು ಉಳಿದ ನೀರನ್ನು, ಗಂಜಿ ಜೊತೆ ಯಾವುದೇ ಗ್ರೇವಿ, ಸಾಂಬಾರ್, ಗೊಜ್ಜು ಅಥವಾ ಚಪಾತಿ ಕಲಸಲು…. ಒಟ್ಟಾರೆ ವೇಸ್ಟ್ ಮಾಡದೆ ಉಪಯೋಗಿಸಿ. ಆಗ ಅದರ ಬಿಕಾಲಿಂಕ್ಸ್ ಮಿಟಮಿನ್ಸ್ ಸಾರ್ಥಕವಾಗುತ್ತದೆ. ದಾಲ್, ಸೂಪ್ ತಯಾರಿಸಲು ಇದು ಅತ್ಯಗತ್ಯ.
ಮಿಸ್ಟೇಕ್ ನಂ.9 : ತರಕಾರಿಯನ್ನು ಗಮನಿಸದೆ ಖರೀದಿಸುವುದು, ಕತ್ತರಿಸಿ ನೀಟಾಗಿ ಪ್ಯಾಕ್ ಮಾಡದಿರುವುದು.
ಪರಿಹಾರ : ಸಾಮಾನ್ಯವಾಗಿ ಮಹಿಳೆಯರು ತರಕಾರಿ ಖರೀದಿಸುವಾಗ, ಅದರ ಫಳಫಳ ಹೊಳೆದ ಬಣ್ಣಕ್ಕೆ ಮಾರಿಹೋಗುತ್ತಾರೆ. ಅದು ಎಷ್ಟೋ ಸಲ ಕೃತಕ ಆಗಿರುತ್ತದೆ. ಅವನ್ನು ಹೆಚ್ಚಿ 6-7 ಗಂಟೆ ಹಾಗೇ ಇರಿಸಬೇಕಾದಾಗ, ಅವನ್ನು ಝಿಪ್ ಪೌಚಿಗೆ ಹಾಕಿಡಬೇಕು ಅಥವಾ ಸೀಲ್ಡ್ ಡಬ್ಬಗಳಲ್ಲಿಡಬೇಕು. ತರಕಾರಿ ತೊಳೆದ ನಂತರ ಅವನ್ನು ಚೆನ್ನಾಗಿ ಒರೆಸಿಕೊಳ್ಳಿ.
ಮಿಸ್ಟೇಕ್ ನಂ.10 : ಬೆಂದ ಪದಾರ್ಥಗಳನ್ನು ಸೂಕ್ತ ಕಂಟೇನರ್‌ನಲ್ಲಿ ಮುಚ್ಚಿಡದೆ ಇರುವುದು.
ಪರಿಹಾರ : ಯಾವುದೇ ಬೆಂದ ಪದಾರ್ಥವಿರಲಿ, ಅದರ ಪ್ರಮಾಣಕ್ಕೆ ತಕ್ಕಂತೆ ಸೂಕ್ತ ಆಕಾರದ ಕಂಟೇನರ್‌ಗಳಿರಬೇಕು. ಜೊತೆಗೆ ಫ್ರಿಜ್‌ನಲ್ಲಿ ಇಡುವ ಮೊದಲು ಬಿಸಿ ಪದಾರ್ಥ ಚೆನ್ನಾಗಿ ಆರಿ, ತಣ್ಣಗಾದ ಮೇಲೆಯೇ ಇಡಬೇಕು. ಯಾವುದನ್ನೂ ತೆರೆದಂತೆ ಇಡಬಾರದು.
ಮಿಸ್ಟೇಕ್ ನಂ.11 : ತರಕಾರಿ, ಹಣ್ಣು ಇತ್ಯಾದಿ ಎಲ್ಲದಕ್ಕೂ ಒಂದೇ ಚಾಪಿಂಗ್ ಬೋರ್ಡ್.
ಪರಿಹಾರ : ಇದು ಸರಿಯಲ್ಲ. ಈರುಳ್ಳಿ, ಇತರ ತರಕಾರಿ, ಹಣ್ಣು, ಮಾಂಸ ಇತ್ಯಾದಿಗಳಿಗೆ ಬೇರೆ ಬೇರೆ ಚಾಪಿಂಗ್ ಬೋರ್ಡ್ ಇದ್ದಾಗ ಅವುಗಳ ವಾಸನೆ ಬೆರಕೆಯಾಗುವುದಿಲ್ಲ.
– ನೀರಜಾ ಕುಮಾರ್