ರೈಲು ಹೊರಡುವುದು ಇನ್ನೂ ಅರ್ಧ ಗಂಟೆ ತಡವಾಗಲಿದೆ ಎಂದಾಗ ರೈಲಿನಲ್ಲಿದ್ದ ಪ್ರಯಾಣಿಕರೆಲ್ಲ ಒಬ್ಬೊಬ್ಬರಾಗಿ ಇಳಿದು ಹತ್ತಿರದ ಅಂಗಡಿ, ಹೋಟೆಲ್‌ಗಳತ್ತ ಹೋದರು. ಶೇಖರ್‌ ಅದೇ ರೈಲಿನಲ್ಲಿ ಮುಂಬೈಗೆ ಹೊರಟ್ಟಿದ್ದ. ಅವನಿಗಿದು ಮೊಟ್ಟ ಮೊದಲ ಮುಂಬೈ ಪ್ರಯಾಣವಾಗಿತ್ತು. ಅವನು ಕೆಲಸ ಮಾಡುತ್ತಿದ್ದ ಸಂಸ್ಥೆಯವರು ಹೆಚ್ಚಿನ ತರಬೇತಿಗಾಗಿ ಆರು ವಾರಗಳ ಕಾಲ ಅವನನ್ನು ಮುಂಬೈಗೆ ಕಳುಹಿಸಿದ್ದರು. ಮುಂಬೈನಲ್ಲಿ ಉಳಿದುಕೊಳ್ಳಲು ಸಂಸ್ಥೆ ಅಲ್ಲಿನ ಗೆಸ್ಟ್ ಹೌಸ್‌ನಲ್ಲಿ ವ್ಯವಸ್ಥೆ ಮಾಡಿತ್ತು.

ಶೇಖರ್‌ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಮಂದಾಕಿನಿ ಕೂಡ ಪ್ರಯಾಣಿಸುತ್ತಿದ್ದಳು. ಹಿಂದಿನ ರಾತ್ರಿ ಶೇಖರ್‌ ಮತ್ತು ಮಂದಾಕಿನಿ ಪರಸ್ಪರ ಪರಿಚಯವಾದರು. ಶೇಖರನ ವ್ಯಕ್ತಿತ್ವಕ್ಕೆ ಆಕರ್ಷಿತಳಾಗಿದ್ದ ಮಂದಾಕಿನಿ ಅವನೊಂದಿಗೆ ಸ್ನೇಹ ಬೆಳೆಸಿದಳು. ಇಬ್ಬರೂ ಒಟ್ಟಾಗಿ ಕುಳಿತು ಚರ್ಚಿಸುತ್ತಿದ್ದರು. ಶೇಖರ್‌ ಮತ್ತು ಮಂದಾಕಿನಿ ಪರಸ್ಪರ ತಮ್ಮ ವಿಳಾಸ, ದೂರವಾಣಿ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡರು. ಮುಂದಿನ ಭಾನುವಾರ ತನ್ನ ಮನೆಗೆ ಬಂದು ಆತಿಥ್ಯ ಸ್ವೀಕರಿಸುವಂತೆ ಮಂದಾಕಿನಿ ಶೇಖರನನ್ನು ಆಹ್ವಾನಿಸಿದ್ದಳು. ಇಬ್ಬರ ನಡುವೆ ವಿಶೇಷ ಬಾಂಧವ್ಯ ಬೆಳೆಯಿತು.

ಅದರಂತೆಯೇ ಭಾನುವಾರ ಶೇಖರ್‌ ಮಂದಾಕಿನಿ ಮನೆಗೆ ಬಂದ. ಅವಳು ಅವನನ್ನು ಕರೆದುಕೊಂಡು ಮುಂಬೈ ನಗರದ ಮುಖ್ಯ ಮುಖ್ಯ ಭಾಗಗಳನ್ನೆಲ್ಲಾ ತೋರಿಸಿದಳು. ಜೊತೆಗೆ ಹೋಟೆಲ್‌ನಲ್ಲಿ ಊಟ ಮಾಡಿದರು. ಅಂದು ಬೆಳಗ್ಗೆ 11 ರಿಂದ ರಾತ್ರಿ 8ರವರೆಗೆ ಇಬ್ಬರೂ ತಿರುಗಾಡಿ  ಅವನ ಗೆಸ್ಟ್ ಹೌಸ್‌ ಬಳಿ ಅವನನ್ನು ಬಿಟ್ಟು ಮಂದಾಕಿನಿ ತನ್ನ ಮನೆಯತ್ತ ಹೊರಟಳು.

ಮುಂದಿನ ಭಾನುವಾರ ಕೂಡ ಅವರಿಬ್ಬರೂ ದಿನಪೂರ್ತಿ ಒಟ್ಟಾಗಿ ಮುಂಬೈನ ನಾನಾ ಸ್ಥಳಗಳಲ್ಲಿ ಸುತ್ತಾಡಿದರು. ಹೀಗೆ ಶೇಖರ್ ಮುಂಬೈನಲ್ಲಿದ್ದಷ್ಟು ಕಾಲ ಪ್ರತಿ ಭಾನುವಾರ ಮಂದಾಕಿನಿಯೊಂದಿಗೆ ಔಟಿಂಗ್‌ ಹೋಗುವುದು ಖಾಯಂ ಆಯಿತು. ಇದರಿಂದ ಅವರಿಬ್ಬರ ನಡುವೆ ಇದ್ದ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಶೇಖರನಿಗೆ ಮಂದಾಕಿನಿ ತನಗೆ ತಕ್ಕ ಸಂಗಾತಿಯಾಗುತ್ತಾಳೆಂಬ ನಂಬಿಕೆ ಮೂಡಿತು.

ನಂತರ ಮುಂದಿನ ಭಾನುವಾರ ಮಂದಾಕಿನಿಯನ್ನು ಭೇಟಿಯಾದ ಶೇಖರ್‌ ತನ್ನ ಮನದಿಂಗಿತವನ್ನು ತಿಳಿಸಿದ. ಆದರೆ ಮಂದಾಕಿನಿ ಮಾತ್ರ ಇವನ ಮಾತುಗಳನ್ನು ಕೇಳಿ ಅಚ್ಚರಿಪಟ್ಟಳು. ಜೊತೆಗೆ ಹೀಗೆ ಪ್ರತಿಕ್ರಿಯಿಸಿದಳು, “ಶೇಖರ್‌, ನೀನು ನನ್ನ ಮೆಚ್ಚಿನ ಸ್ನೇಹಿತ. ಸ್ನೇಹಿತನೇ ಹೊರತು ಇನ್ನೇನೂ ಅಲ್ಲ. ನಾನು ನನ್ನ ಮದುವೆ ಯೋಚನೆಯನ್ನು ಬಿಟ್ಟು ಬಹಳ ದಿನಗಳಾದವು. ನಾನು ನನ್ನ ಕೆಲಸವನ್ನು ಪ್ರೀತಿಸುವಷ್ಟು ಇನ್ನಾರನ್ನೂ ಇನ್ನಾವುದನ್ನೂ ಪ್ರೀತಿಸಲಾರೆ. ನನ್ನ ವೃತ್ತಿ ಬದುಕಿನಲ್ಲಿ ನಾನು ಇನ್ನಷ್ಟು ಎತ್ತರಕ್ಕೆ ಏರಬೇಕು, ಉನ್ನತ ಸ್ಥಾನ ಹೊಂದಬೇಕೆಂಬ ಹಂಬಲವಿರುವವಳು ನಾನು. ಮದುವೆ, ಮನೆ, ಮಕ್ಕಳು ಇವೆಲ್ಲ ನನ್ನ ಪ್ರಕಾರ ಒಬ್ಬ ಮಹಿಳೆಯ ಕನಸನ್ನು ಕಿತ್ತುಕೊಳ್ಳುವ ಅಂಶಗಳು. ನಾನು ಅವುಗಳಿಂದ ಹೊರತಾಗಿ ನನ್ನ ಕನಸು ನನಸಾಗಿಸಿಕೊಳ್ಳಲು ಬಯಸುತ್ತೇನೆ.

“ಇನ್ನು ಹೇಳಬೇಕೆಂದರೆ ನಾನು ಈ ನಿರ್ಧಾರಕ್ಕೆ ಬರಲು ಇನ್ನಷ್ಟು ಕಾರಣಗಳಿವೆ. ನಾನು ಚಿಕ್ಕವಳಾಗಿದ್ದಾಗಿನಿಂದಲೂ ನನ್ನ ತಾಯಿ ತಂದೆ ದಿನನಿತ್ಯ ಜಗಳವಾಡುವುದನ್ನು ನೋಡುತ್ತಾ ಬೆಳೆದವಳು. ನನ್ನ ತಮ್ಮ ಮತ್ತು ನಾನು ಅವರ ಜಗಳದಿಂದ ರೋಸಿಹೋಗಿದ್ದೆವು.

“ನನ್ನ ಸ್ನೇಹಿತೆ ಮಾಳವಿಕಾ ನನ್ನಂತೆಯೇ  ಧೈರ್ಯವಂತೆ. ಆಕೆ ಮದುವೆಯಾದ ಬಳಿಕ ಬಹಳ ತೊಂದರೆ ಅನುಭವಿಸಿದ್ದಳು. ಅಂತಿಮವಾಗಿ ಅವಳ ಪತಿ ಕಡೆಯಿಂದ ವಿಚ್ಛೇದನ ಪಡೆದುಕೊಂಡು ಈಗ ಸ್ವತಂತ್ರವಾಗಿ ತನ್ನ ಜೀವನ ರೂಢಿಸಿಕೊಳ್ಳುತ್ತಿದ್ದಾಳೆ. ನಿನ್ನನ್ನು ಉತ್ತಮ ಸ್ನೇಹಿತನೆನ್ನುವ ಕಾರಣಕ್ಕೆ ಇಷ್ಟೆಲ್ಲವನ್ನೂ ಹೇಳಬೇಕಾಯಿತು. ನಿನಗೆ ಇದರಿಂದ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸು. ನಾನು ನೀನು ಇನ್ನು ಮುಂದೆಯೂ ಉತ್ತಮ ಸ್ನೇಹಿತರಾಗಿರೋಣ. ಈ ಮದುವೆಯ ವಿಚಾರವನ್ನು ಬಿಟ್ಟುಬಿಡೋಣ.”

ಶೇಖರ್‌ ಸಹ ಸಮಾಧಾನದಿಂದ ಅವಳ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡಿದ್ದ. ಆದರೆ ನಿಜಕ್ಕೂ ಶೇಖರನಿಗೂ ಬಹಳ ನಿರಾಶೆಯಾಗಿತ್ತು. ಅವನು ಸ್ವಲ್ಪ ಮಟ್ಟಿಗೆ ಅವಳನ್ನು ಅವಳ ನಿರ್ಧಾರದಿಂದ ಹೊರತರಲು ಪ್ರಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಅವಳಂದಂತೆ  ಗೆಳೆಯರಾಗಿರೋಣವೆಂದು ಒಪ್ಪಿದ.

ಇದಾಗಿ ಶೇಖರ್‌ ಬೆಂಗಳೂರಿಗೆ ಹಿಂತಿರುಗುವ ಮುನ್ನ ಪುನಃ ಮಂದಾಕಿನಿಯನ್ನು ಭೇಟಿಯಾದ. ಆಗ ಅವಳು ಉತ್ತಮ ರೆಸ್ಟೋರೆಂಟ್‌ಗೆ ಕರೆದೊಯ್ದು ಊಟ ಕೊಡಿಸಿದ್ದಲ್ಲದೆ, ಏರ್‌ಪೋರ್ಟ್‌ಗೆ ಸಹ ಬಂದು ಬೀಳ್ಕೊಟ್ಟಳು. ಬೆಂಗಳೂರಿಗೆ ಬಂದ ಬಳಿಕ ದೂರವಾಣಿ ಸಂಭಾಷಣೆ ಮೂಲಕ ಇಬ್ಬರೂ ತಮ್ಮ ನಡುವೆ ಸಂಪರ್ಕ ಇರಿಸಿಕೊಂಡಿದ್ದರು.

ಸುಮಾರು ಆರೇಳು ತಿಂಗಳುಗಳು ಕಳೆದವು. ಒಮ್ಮೆ ಮಂದಾಕಿನಿ ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದಳು. ಆಗ ಶೇಖರನನ್ನು ಭೇಟಿಯಾಗಿದ್ದ ಮಂದಾಕಿನಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದನ್ನು ಗುರುತಿಸಿದ. ಅವಳೇನೋ ಮಾತನಾಡಬೇಕೆಂದು ಅಂದುಕೊಂಡರೂ ಮನಬಿಚ್ಚಿ ಹೇಳಲಾಗುತ್ತಿಲ್ಲ ಎನ್ನುವ ವಿಚಾರ ಶೇಖರನಿಗೆ ಹೊಳೆಯಿತು. ಇನ್ನೊಮ್ಮೆ ಅವಳ ಭೇಟಿಯಾದಾಗ ಅವಳ ಒಪ್ಪಿಗೆಯಂತೆ ಶೇಖರ್‌ ಅವಳನ್ನು ತನ್ನ ತಾಯಿಯ ಬಳಿ ಕರೆದುಕೊಂಡು ಹೋದ. ಇದಕ್ಕೂ ಮುನ್ನವೇ ಶೇಖರ್‌ ತನ್ನ ತಾಯಿಗೆ ಮಂದಾಕಿನಿಯ ವಿಚಾರವನ್ನೆಲ್ಲ  ತಿಳಿಸಿದ್ದ.

ಶೇಖರನ ತಾಯಿ ಮಂದಾಕಿನಿಯನ್ನು ಆದರದಿಂದ ಸ್ವಾಗತಿಸಿದರು. ಉಭಯಕುಶೋಪರಿಗಳಾದ ಕೆಲವೇ ನಿಮಿಷಗಳಲ್ಲಿ ಮಂದಾಕಿನಿಗೆ ಶೇಖರ್‌ ತಾಯಿಯ ಬಗೆಗೆ ಉತ್ತಮ ಸ್ನೇಹಭಾವ ಹುಟ್ಟಿತ್ತು. ಹೀಗಾಗಿ ಅವಳೂ ಸಹ ಆತ್ಮೀಯತೆಯಿಂದ ಮಾತನಾಡತೊಡಗಿದಳು. ಹೀಗಾಗಿ ಶೇಖರ್‌ ತಾಯಿಗೂ ಸಹ ಅವಳೊಂದಿಗೆ ಸುಲಭವಾಗಿ ಮಾತನಾಡಲು ಸಾಧ್ಯವಾಯಿತು.

“ಮಂದಾಕಿನಿ, ನೀನು ನಮ್ಮ ಮನೆಯವಳೇ ಎಂದುಕೊಂಡು ಒಂದೆರಡು ಮಾತುಗಳನ್ನು ಹೇಳುತ್ತೇನೆ. ನಿನ್ನ ಬಗ್ಗೆ ಶೇಖರ್‌ನನಗೆ ಎಲ್ಲವನ್ನೂ ಹೇಳಿದ್ದಾನೆ. ನೀನು ಮದುವೆ, ಕಟ್ಟುಪಾಡುಗಳನ್ನು ಇಷ್ಟಪಡುತ್ತಿಲ್ಲ ಎನ್ನುವುದೂ ತಿಳಿಯಿತು. ಇದು ಇಂದಿನ ಯುವತಿಯರಲ್ಲಿ ನಾವು ಕಾಣುವ ಸಾಮಾನ್ಯ ಮನೋಭಾವ. ನೀನು ನಿನ್ನ ವೃತ್ತಿ ಬದುಕಿನ ಕುರಿತು ದೊಡ್ಡ ಕನಸನ್ನು ಕಂಡಿದ್ದೀಯ, ಅದೇನೂ ತಪ್ಪಿಲ್ಲ. ಆದರೆ ಅದೇ ಕಾರಣಕ್ಕೆ ಮದುವೆಯಾಗಲಾರೆ ಎಂದು ನೀನು ನಿರ್ಧರಿಸುವುದು ತಪ್ಪಾಗುತ್ತದೆ.

“ನಿನ್ನ ತಂದೆತಾಯಿ ಪ್ರತಿನಿತ್ಯ ಜಗಳವಾಡುತ್ತಿದ್ದರು, ಇದರಿಂದ ನಿನಗೂ ನನ್ನ ತಮ್ಮನಿಗೂ ಬಹಳ ಮುಜುಗರವಾಗುತ್ತಿತ್ತು ಎನ್ನುತ್ತಿ. ಸಂಸಾರದಲ್ಲಿ ಇಂತಹ ಜಗಳಗಳು ಕೆಲವೊಮ್ಮೆ ಬರುತ್ತವೆ. ಹಾಗೆಂದ ಮಾತ್ರಕ್ಕೆ ಅವು ಶಾಶ್ವತವಾಗಿರುವುದಿಲ್ಲ. ಮದುವೆಯಾಗುವುದು ಎಂದರೆ ಇಬ್ಬರು ಪರಸ್ಪರ ಹೊಂದಾಣಿಕೆಯಿಂದ ಬದುಕುವುದಕ್ಕೆ ಸಮ್ಮತಿಸುವುದು ಎಂದರ್ಥ. ಜೀವನದಲ್ಲಿ ಎಂತಹ ಪರಿಸ್ಥಿತಿಯೇ ಬಂದರೂ ಇಬ್ಬರೂ ಕೂಡಿ ನಿಭಾಯಿಸಿಕೊಂಡು ಹೋಗಬೇಕು. ಅದಕ್ಕೆ ತಾಳ್ಮೆ, ಸಹಕಾರ ಅತ್ಯಗತ್ಯ.

“ಇನ್ನು ವಿರುದ್ಧ ಲಿಂಗಿಗಳಲ್ಲಿ ಪರಸ್ಪರ ಆಕರ್ಷಣೆ ನಿಸರ್ಗದತ್ತ ನಿಯಮ. ಯಾವುದೋ ಪುರುಷ ಹಾಗೂ ಸ್ತ್ರೀ ಪರಸ್ಪರ ಆಕರ್ಷಿತರಾಗುವುದು ಸಹಜ. ಇದೊಂದು ಅದ್ಭುತ ವರ ಹೌದು. ಈ ಆಕರ್ಷಣೆ ಅವರಿಬ್ಬರನ್ನು ಸಾಕಷ್ಟು ಸನಿಹಕ್ಕೆ ಸೇರಿಸುತ್ತದೆ. ಇಬ್ಬರೂ ಒಟ್ಟಾಗಿರಲು ಬಯಸುವ ಅವರಿಗೆ ವಿವಾಹ ಎಂಬ ಪದ್ಧತಿಯ ಮೂಲಕ ಸಮಾಜದಲ್ಲಿ ಗೌರವವಾಗಿ ಬಾಳಲು ಅವಕಾಶ ಕಲ್ಪಿಸಿಕೊಡುವ ಸಂಸ್ಕೃತಿ ನಮ್ಮಲ್ಲಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಕೆಡುವುದೂ ತಪ್ಪಿದಂತಾಗುತ್ತದೆ.

“ಒಬ್ಬ ಹೆಣ್ಣು ತಾಯಿ ಸ್ಥಾನವನ್ನು ಪಡೆಯುವುದಿದೆಯಲ್ಲ, ಅದು ಅವಳ ಜೀವನದ ಒಂದು ಅತ್ಯಂತ ಪ್ರಮುಖ ಘಟ್ಟ. ಪ್ರತಿಯೊಬ್ಬ ಹೆಣ್ಣಿಗೂ ತಾಯಿಯಾಗುವ ಬಗ್ಗೆ ವಿಶೇಷ ಹಂಬಲವಿರುತ್ತದೆ. ಹೀಗಾಗಿ ವಿವಾಹ ಮತ್ತು ಸಂಸಾರ ಎನ್ನುವುದು ಒಬ್ಬ ಹೆಣ್ಣಿನ ಬದುಕಿನಲ್ಲಿ ಅತ್ಯಂತ ಪ್ರಮುಖವಾಗಿರುವ ಹಂತಗಳು……”

ಶೇಖರನ ತಾಯಿ ಎರಡು ನಿಮಿಷ ಮೌನವಹಿಸಿ ಮತ್ತೆ ಮುಂದುವರಿಸಿದರು, “ನಾನು ಇಷ್ಟೆಲ್ಲವನ್ನೂ ವಿವರವಾಗಿ ನಿನಗೇಕೆ ತಿಳಿಸುತ್ತಿದ್ದೇನೆಂದರೆ, ನಿನ್ನ ಬಗ್ಗೆ ನನ್ನ ಮಗನಿಗೆ ಬಹಳ ಒಳ್ಳೆಯ ಅಭಿಪ್ರಾಯವಿದೆ. ನೀನು ನಿನ್ನ ವೃತ್ತಿ ಜೀವನದಲ್ಲಿ ತೋರುತ್ತಿರುವ ಆಸಕ್ತಿ ನಿನ್ನನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎನ್ನುವ ನಂಬಿಕೆ ಅವನದು. ನೀನೇನಾದರೂ ಒಪ್ಪಿದಲ್ಲಿ ನಿನ್ನನ್ನು ಅವನು ವಿವಾಹ ಆಗಬೇಕೆಂದಿದ್ದಾನೆ,” ಎನ್ನುತ್ತಾ ತಮ್ಮ ಮಾತು ಮುಗಿಯಿತೆನ್ನುವಂತೆ ಒಮ್ಮೆ ಮಂದಾಕಿಯನ್ನು ನೋಡಿದರು.

ಸ್ವಲ್ಪ ಹೊತ್ತಿನ ನಂತರ, ತನ್ನ ನಿರ್ಧಾರವನ್ನು ತಾನು ಮುಂದೆ ತಿಳಿಸುವುದಾಗಿ ಹೇಳಿ ಮಂದಾಕಿನಿ ಅಲ್ಲಿಂದ ನಿರ್ಗಮಿಸಿದಳು. ಇದಾಗಿ ಸುಮಾರು 20 ದಿನಗಳಲ್ಲಿ ಶೇಖರನಿಗೆ ಮಂದಾಕಿನಿಯಿಂದ ಇಮೇಲ್ ಬಂದಿತು.“ನಿಮ್ಮ ತಾಯಿಯವರ ಆಪ್ತ ಸಲಹೆಯಿಂದ ವಿವಾಹದ ವಿಷಯದಲ್ಲಿ ನನಗಿದ್ದ ತಪ್ಪು ಕಲ್ಪನೆಗಳು ತೊಲಗಿದವು. ನಾನೀಗ ವಿವಾಹವಾಗಲು ನಿಶ್ಚಯಿಸಿದ್ದೇನೆ. ನೀನೂ ಇಷ್ಟಪಟ್ಟರೆ ನಿಮ್ಮ ತಾಯಿಯೊಂದಿಗೆ ನಮ್ಮ ಮನೆಗೆ ಬನ್ನಿ…..” ಎನ್ನುವ ಸಾರಾಂಶ ಅದರಲ್ಲಿತ್ತು.

ಶೇಖರ್‌ ಹಾಗೂ ಅವನ ತಾಯಿಗೆ ಬಹಳ ಸಂತೋಷವಾಯಿತು. ಇದಾಗಿ ಹತ್ತು ದಿನಗಳಲ್ಲಿ ಇಬ್ಬರೂ ಮಂದಾಕಿನಿಯ ಮನೆಗೆ ಹೊರಟರು. ಅಲ್ಲಿ ಅವರ ಪೋಷಕರೊಡನೆ ಮಾತನಾಡಿ ಇಬ್ಬರ ವಿವಾಹವನ್ನು ನಿಶ್ಚಯಿಸುವಲ್ಲಿ ಯಶಸ್ವಿಯಾದರು.

ಹೀಗೆ ಶೇಖರ್‌ ತಾಯಿಯ ಸಲಹೆ ಮಂದಾಕಿನಿಯ ಪಾಲಿಗೆ ಅಮೂಲ್ಯ ಸಲಹೆಯಾಗಿ ಪರಿಣಮಿಸಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ