ತಮಿಳುನಾಡಿನ ರಾಜಕೀಯದಲ್ಲಿ ಹೊಸ ಹಲ್ ಚಲ್ ಶುರುವಾಗಿದೆ. ರೀಲ್ ಲೈಫ್ನಲ್ಲಿ ಹಿರೋ ಆಗಿರುವ ದಳಪತಿ ವಿಜಯ್ ಸದ್ಯ ರಿಯಲ್ ಲೈಫ್ನಲ್ಲೂ ಹಿರೋ ಆಗಲು ಹೊರಟಿದ್ದಾರೆ.
ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷಕ್ಕೆ ತಾವೇ ಸಿಎಂ ಅಭ್ಯರ್ಥಿ ಎನ್ನುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಎಲ್ಲಾ ಪಕ್ಷಗಳು ಚುನಾವಣಾ ಪೂರ್ವ ಶಸ್ತ್ರಾಭ್ಯಾಸ ನಡೆಸಲು ಆರಂಭಿಸಿವೆ. ಆಡಳಿತಾರೂಢ ಡಿಎಂಕೆ ಮುಂದಿನ ಚುನಾವಣೆಯಲ್ಲೂ ಗೆದ್ದು ಅಧಿಕಾರದ ಗದ್ದುಗೆ ಏರಲು ಕಸರತ್ತು ನಡೆಸುತ್ತಿದೆ. ಎಐಡಿಎಂಕೆ ಹಾಗೂ ಬಿಜೆಪಿ ಮೈತ್ರಿಯಾಗಿ ಸ್ಪರ್ಧಿಸುವ ಇರಾದೆಯಲ್ಲಿವೆ. ಈ ಮಧ್ಯೆ ತಮಿಳುನಾಡಿನಲ್ಲಿ ಹೊಸ ಮನ್ವಂತರ ಸೃಷ್ಟಿಸಲು ಸಜ್ಜಾಗಿರುವ ಟಿವಿಕೆ ಪಕ್ಷ ಅಚ್ಚರಿ ಮೂಡಿಸಿದೆ.
ದಳಪತಿ ಸಿಎಂ ಅಭ್ಯರ್ಥಿ: ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ತಮಿಳಗ ವೆಟ್ರಿ ಕಳಗಂ ಪಕ್ಷ ಒಂದು ಹೆಜ್ಜೆ ಮುಂದಿದ್ದು, ಸಿಎಂ ಅಭ್ಯರ್ಥಿಯನ್ನೂ ಘೋಷಿಸಿದೆ. ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷ ಘೋಷಿಸಿದೆ. ಈ ಸಂಬಂಧ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿಶೇಷ ನಿರ್ಣಯ ಅಂಗೀಕರಿಸಲಾಗಿದೆ. ಅಲ್ಲದೇ ಮುಂದಿನ ತಿಂಗಳು ಬೃಹತ್ ಸಮಾವೇಶ ಆಯೋಜಿಸಿ ಈ ಬಗ್ಗೆ ಘೋಷಣೆ ಮಾಡಲು ಯೋಜನೆ ನಡೆಸಿದೆ.
ಮೈತ್ರಿ ಸಾಧ್ಯವೇ ಇಲ್ಲ ಎಂದ ದಳಪತಿ: ಇನ್ನು ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ವಿಜಯ್ ಮೈತ್ರಿ ಬಗ್ಗೆಯೂ ಮೌನ ಮುರಿದಿದ್ದಾರೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಡಿಎಂಕೆ ಅಥವಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ತಮಿಳುನಾಡಿನಲ್ಲಿ ಬೆಳೆಯಲು ಸಾಧ್ಯವಿಲ್ಲ, ರಾಜಕೀಯ ಲಾಭಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಡಿಎಂಕೆ ಅಥವಾ ಎಐಎಡಿಎಂಕೆ ರೀತಿಯ ಪಕ್ಷ ಅಲ್ಲ. ನಾವು ಟಿವಿಕೆ ಎಂದು ವಿಜಯ್ ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ: ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ವಿರುದ್ಧ ದಳಪತಿ ವಿಜಯ್ ವಾಗ್ದಾಳಿ ನಡೆಸಿದ್ದಾರೆ. ಕೆಟ್ಟ ರಾಜಕೀಯಕ್ಕಾಗಿ ಕೋಮು ಆಧಾರಿತವಾಗಿ ಜನರನ್ನು ವಿಭಜಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ತಮಿಳುನಾಡು ಮಾತ್ರವಲ್ಲದೇ ದೇಶಾದ್ಯಂತ ಇಂತಹ ಹೀನಕೃತ್ಯಗಳಲ್ಲಿ ಬಿಜೆಪಿಗರು ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.