ಈಗ್ಗೆ ಸುಮಾರು ವರ್ಷಗಳ ಕೆಳಗೆ ಕಾರ್ಯಕ್ರಮವೊಂದರಲ್ಲಿ ಪರಿಚಿತರಾದ ಪ್ರಶಾಂತಾರವರ ಸಾಧನೆ ಅಪಾರ. ಅವರಲ್ಲಿನ ಸೇವಾಮನೋಭಾವ, ಮಾತಿನ ಚಾತುರ್ಯ, ಲವಲವಿಕೆ ಕಂಡು ಸಂತಸಪಟ್ಟೆನು. ಪರಿಚಯ ಆತ್ಮೀಯತೆಗೆ ಬೆಳೆದು ಪೂರ್ವಾಪರ ವಿಚಾರಿಸಿದಾಗ ಮನಸ್ಸು ಆಕೆಗೊಂದು ನಮನ ಸಲ್ಲಿಸಿತ್ತು. ಮನಶ್ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಬಳಿಕ, ಅಖಿಲಭಾರತ ಅಂಧರ ಒಕ್ಕೂಟದಲ್ಲಿ ಉದ್ಯೋಗಾಧಿಕಾರಿಯಾಗಿದ್ದ ಅನುಭವ, ಜೊತೆಗೆ ಹಲವಾರು ಅಂಧರಿಗೆ ಉದ್ಯೋಗಗಳನ್ನು ನೀಡಿ, ಅವರ ಬಾಳಿಗೆ ಬೆಳಕಾದರು. ಅವರುಗಳ ಮನದಾರ್ಶೀವಾದಕ್ಕೆ ಪಾತ್ರರಾದರು. ಈ ಒಂದು ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಕೆಲಸದ ಭರದಲ್ಲಿ ಹತ್ತಾರು ಕಡೆ ಓಡಾಡು ಪ್ರಮೇಯಗಳು ಬಂದೊದಗುತ್ತಿದ್ದವು. ಒಮ್ಮೆ ಇದೇ ರೀತಿಯಲ್ಲಿ ಒಡ್ಡರಪಾಳ್ಯದಲ್ಲಿ ಕಾರ್ಯ ನಿಮಿತ್ತ ತೆರಳಿದ್ದಾಗ, ಅಲ್ಲಿ ಕಂಡ ಒಂದು ದೃಶ್ಯ ಇವರ ಮನಸ್ಸನ್ನೇ ಬದಲಿಸಿತು. ಮಾತ್ರವಲ್ಲ ತನ್ನ ಕ್ಷೇತ್ರದೆಡೆಗೆ ಸೆಳೆದುಕೊಂಡುಬಿಟ್ಟಿತು. ದೇವರೇ ಆ ಕಾಯಕ್ಕೆ ಇವರನ್ನು ಎಳೆದೊಯ್ಯುವಂತೆ ಮಾಡಿತು. ಅಲ್ಲೊಬ್ಬ ಅಂಧ ಹೆಣ್ಣುಮಗಳು. ಅತ್ತಿಗೆಯ ಬಿರಿಸು ನುಡಿಗಳು, ಅವಳನ್ನು ನಡೆಸಿಕೊಳ್ಳುತ್ತಿದ್ದ ಪರಿ, ಅಲ್ಲಿನ ಶೋಚನೀಯ ಸನ್ನಿವೇಶ ಪ್ರಶಾಂತಾರನ್ನು ಸುಮ್ಮನಿರಿಸಲಿಲ್ಲ. ವೈಯಕ್ತಿಕ ಕಾಳಜಿ ಇಂಥ ಮಕ್ಕಳಿಗೇನಾದರೂ ಮಾಡಲೇಬೇಕು, ಹೀಗೆ ಹಿಂಸೆ ಕೊಡುವ ಜನರೂ ಇದ್ದಾರೆಯೇ ಎಂದು ಆಶ್ಚರ್ಯಪಟ್ಟರು. ಅಷ್ಟು ಕಠೋರ ಅತ್ತಿಗೆಯನ್ನು ನೋಡಿದ್ದು ಅದೇ ಮೊದಲೆಂದಾಗ ಅವರ ದನಿಯಲ್ಲಿ ಮರುಕವೇ ತುಂಬಿತ್ತು. ಈ ಹುಡುಗಿಯನ್ನು ಕೊಡು ನಾನು ಸಾಕಿಕೊಳ್ಳುತ್ತೇನೆ, ಎಂದಾಗ ಯಾವೊಂದೂ ಮಾತಾಡದೆ ಆ ಅತ್ತಿಗೆ ಒಪ್ಪಿಬಿಟ್ಟಳು.
ಪ್ರಶಾಂತಾರಿಗೆ ಕಣ್ಣಾಲಿಗಳು ತುಂಬಿ ಇಷ್ಟೇನಾ? ಎಂಬಂತೆ ಅಲ್ಲಿಂದ ಆ ಅಂಧಳಿಗೆ ಮುಕ್ತಿ ಕೊಡಿಸಿ ತಮ್ಮ ಸೂರಿನೊಳಗೇ ಸೇರಿಸಿಕೊಂಡರು. ಮನೆಯಲ್ಲಿ ತಮ್ಮದೇ ಎರಡು ಹೆಣ್ಣು ಕುಡಿಗಳು, ವೈದಿಕ ಧರ್ಮದ ಹೆಣ್ಣುಮಗಳು, ಮನೆಯಲ್ಲಿ ಅತ್ತೆ ಮಾವ, ಮೈದುನ, ಒಳ್ಳೆಯ ಸರ್ಕಾರಿ ಹುದ್ದೆಯಲ್ಲಿದ್ದ ಪತಿರಾಯ. ಒಟ್ಟಿನಲ್ಲಿ ತುಂಬಿದ ಮನೆಯ ಸೊಸೆ ಪ್ರಶಾಂತಾ. ಅಂತಹ ಮಡಿವಂತಿಕೆಯ ತುಂಬು ಕುಟುಂಬದಲ್ಲಿ ಹಿಂದುಮುಂದು ಗೊತ್ತಿಲ್ಲದ ಅಂಧ ಹೆಣ್ಣುಮಗಳ ಸೇರ್ಪಡೆ. ಕೊಂಚ ಭಿನ್ನಾಭಿಪ್ರಾಯಗಳು ಮೂಡಿದವು. ಮನೆಯವರನ್ನು ಈ ವಿಷಯದಲ್ಲಿ ಎಜುಕೇಟ್ ಮಾಡೋದು ನಂತರ ಅವರಿಗೆ ಸಮಾಜದ ವ್ಯವಸ್ಥೆಯ ಬಗ್ಗೆ ತಿಳಿಯಪಡಿಸುವುದು ಮುಖ್ಯವಾಯಿತು. ಆ ವಿಚಾರದಲ್ಲಿ ಪ್ರಶಾಂತಾ ಗೆದ್ದರು. ಕ್ರಮೇಣ ಮನೆಯರ ಪ್ರೋತ್ಸಾಹದಿಂದ ಹಾಗೂ ಹೀಗೂ ಹೆಣ್ಣುಮಕ್ಕಳು ಕೂಡಿದರು. ಮೇಲಿನ ಮನೆಯಲ್ಲಿ ತಮ್ಮ ವಾಸ. ಕೆಳಗಿನ ಮನೆಯಲ್ಲಿ ಈ ಹೆಣ್ಣುಮಕ್ಕಳ ವಾಸ್ತವ್ಯ. ಅದು ಪ್ರೇರಣಾ ರಿಸೋರ್ಸ್ ಸೆಂಟರ್ ಎಂದು ಪ್ರಾರಂಭವಾಯಿತು.
ಕಷ್ಟಕಾರ್ಪಣ್ಯಗಳು
ಕೆಲವೇ ದಿನಗಳಲ್ಲಿ 35 ಹೆಣ್ಣುಮಕ್ಕಳು ಕೂಡಿದರು. ಜವಾಬ್ದಾರಿ ಹೆಚ್ಚಾಯಿತು. ಎಲ್ಲ ನೊಂದ ಹೆಣ್ಣುಮಕ್ಕಳು. ಒಬ್ಬೊಬ್ಬರದೂ ಒಂದೊಂದು ಶೋಚನೀಯ ಕಥೆ. ಕೆಲವರು ಅನಾಥರಾದರೆ, ಮತ್ತೆ ಕೆಲವರು ಎಲ್ಲರೂ ಇದ್ದೂ ಅನಾಥರು. ಆ ಪದ ಇಲ್ಲಿ ಅಪ್ಲೈ ಆಗಲೇ ಇಲ್ಲ. ನಿಮಗೆ ನಾನೇ ತಾಯಿ ಎಂದು ಎದೆಗವುಚಿ ಕೊಂಡರು. ಮಾತೃವಾತ್ಸಲ್ಯ ತೋರಿಸಿದರು. ತಾವಾಗೇ ಮಕ್ಕಳಿಗೆ ಮಡಿಲು ನೀಡಿದರು. ಮಕ್ಕಳಿಗಾದ ಆನಂದ ಅಷ್ಟಿಷ್ಟಲ್ಲ!
ಊಟ, ತಿಂಡಿಗೆ ಅವಸ್ಥೆಪಟ್ಟರು, ರಾತ್ರಿಗಳನ್ನು ಕಳೆಯುವುದು ಕಷ್ಟವಾಯಿತು. ಊಟದ ಚಿಂತೆ ಒಂದೆಡೆಯಾದರೆ, ಹೆಣ್ಣುಮಕ್ಕಳ ಸೇಫ್ಟಿ ಮಗದೊಂದೆಡೆ! ಅಕ್ಕಪಕ್ಕದವರ ಉಪದ್ರವ ಹೆಚ್ಚಾಯಿತು. ಮಕ್ಕಳು ಓಡಾಡುವಾಗ ಓಡುವುದು, ಬೀಳುವುದು, ಏಳುವುದು ಸಾಮಾನ್ಯವಾಗಿತ್ತು. ಒಟ್ಟಿನಲ್ಲಿ ಎಲ್ಲವನ್ನೂ ಎಲ್ಲರನ್ನೂ ಜಯಿಸಿ ಮಕ್ಕಳಿಗೆ ದಾರಿದೀಪವಾದರು. ಅಚಲ ಮನಸ್ಸು, ಛಲ ತುಂಬಿದ ಮನಸ್ಸಿನ ಪ್ರತಿಫಲವಾಗಿ ಪ್ರೇರಣಾ ಕೊಂಚ ಹೆಸರು ಮಾಡಹತ್ತಿತು. ವಿವೇಕಾನಂದರ ಪರಮಭಕ್ತರು, ಅವರ ನುಡಿಗಳ ಪರಿಪಾಲಕರು ಅವರೇ ಶಕ್ತಿಯೆಂದು ನಂಬಿದರು. ಡೋನರ್ಸ್ ಮುಖಾಂತರ ಊಟ ಬಟ್ಟೆ ವ್ಯವಸ್ಥೆ ಆಗುತ್ತಿದೆ. ಅವರುಗಳಿಗೆ ವಸತಿ, ಊಟ, ವಸ್ತ್ರ ಬಲು ಕಷ್ಟ. ದಾನಿಯೊಬ್ಬರು ಸೈಟೊಂದನ್ನು ಬಹಳ ಕಡಿಮೆ ಬೆಲೆಗೆ ನೀಡಿದರು. ಅದರಲ್ಲಿ ಕಟ್ಟಡ ಎದ್ದಿತು. ಮಕ್ಕಳಿಗೊಂದು ಸೂರು ದೊರೆಯಿತು. ಅದರ ಹಿಂದಿನ ಪ್ರಶಾಂತಾರ ಪರಿಶ್ರಮ ಅಷ್ಟಿಷ್ಟಲ್ಲ. ಡೊನೇಷನ್‌ಗಳಿಗೆ ನೂರಾರು ಬಾರಿ ತಿರುಗಾಡೋದು, ಹುಡುಕಾಡೋದೇ ಜೀವನವಾಗಿ ಹೋಯಿತು. ಆ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟುಬಿಟ್ಟರು. ಪತಿ ಜಗದೀಶ್ ಜೋಯಿಸ್ ರಿಟೈರ್ಡ್ ಆದಾಗ ಬಂದ ಹಣವನ್ನೆಲ್ಲ ಈ ಮಕ್ಕಳಿಗೇ ಮುಡಿಪಾಗಿಟ್ಟರು. ಅಲ್ಲಿನ ಒಂದೊಂದು ಕಲ್ಲುಗಳಿಗೂ ಗೊತ್ತು ಇವರ ಪರಿಶ್ರಮ. ಇದೀಗ 120 ಮಕ್ಕಳ ಸಂಸ್ಥೆ ಇದು!
ಸ್ವಲ್ಪ ದಿನ ಹೀಗೇ ಸಾಗಿತು. ಮುಂದಿನ ಭವಿಷ್ಯ? ಪ್ರಶಾಂತಾರಿಗೂ ವಯಸ್ಸಾಗುತ್ತಾ ಬಂದಿತು. ವಯೋಸಹಜ ಆರೋಗ್ಯ ಸಮಸ್ಯೆಗಳು ದೇಹವನ್ನಾರಿಸುತ್ತಾ ಬಂತು. ಸಂಸ್ಥೆ ಗೊರಗುಂಟೆಪಾಳ್ಯ, ಮನೆ ಎಚ್.ಎಸ್.ಆರ್ ಲೇಔಟ್, ಓಡಾಡೋದು ಕಷ್ಟವಾಯಿತು…. ನನ್ನಲ್ಲಿ ಶಕ್ತಿ ಇರುವಾಗಲೇ ಏನಾದರೊಂದು ವ್ಯವಸ್ಥೆ ಮಾಡಬೇಕೆಂದು ಪಣತೊಟ್ಟರು. ಅಂತೂ ಇಂತೂ ನಾಲ್ಕು ಲಕ್ಷ ಡೆಪಾಸಿಟ್ ಆಯಿತು. ಇಂಟರಿಸ್ಟ್ ನಲ್ಲಿ ಸಂಸ್ಥೆಯ, ಮಕ್ಕಳ ಜೀವನ ಸಾಗುತ್ತಿದೆ. ಇಷ್ಟು ಹೊತ್ತಿಗಾಗಲೇ ಮೇಡಂ ಸುಸ್ತಾಗಿದ್ದಾರೆ. ದೇಹ ಸೋತಿದೆ. ಇನ್ನೇನು ಎಂದು ತಲೆ ಮೇಲೆ ಕೈಹೊತ್ತು ಕೂತ ಸಮಯ. ಏನೊಂದೂ ತೋಚಲಿಲ್ಲ. ತಾಯಿಯ ಸ್ಥಿತಿಗೆ ಸಂಸ್ಥೆಯ ಮಕ್ಕಳು ಮರುಗಿದರು, ಕೊರಗಿದರು. ಅಮ್ಮನಿಗೆ ಶಕ್ತಿ ಕೊಡು ಎಂದು ದೇವರಲ್ಲಿ ಬೇಡಿದರು.
ಮೇಘ ಮಂದಾರ
ಇಷ್ಟೊತ್ತಿಗಾಗಲೇ ತಮ್ಮದೇ ಕರುಳ ಕುಡಿಗಳು ಬೆಳೆದು ದೊಡ್ಡವರಾಗಿದ್ದರು. ತಾಯಿಯ ಮನಸ್ಸಿನ ತೊಳಲಾಟ ಅರಿತ ಮೊದಲನೆಯ ಮಗಳು ಮೇಘನಾ ತಾಯಿಯ ಸಹಾಯಕ್ಕೆ ನಿಂತಳು. ಜೊತೆಗೆ ಅಂದಿನಿಂದಲೂ ಸಂಸ್ಥೆಯ ಮಕ್ಕಳ ಕಷ್ಟಸುಖಗಳನ್ನರಿತಿದ್ದರು. ಬಿ.ಇ. ಪದವೀಧರೆ. ಸಾಫ್ಟ್ ವೇರ್ ಕಂಪನಿಯಲ್ಲಿ ಒಳ್ಳೆಯ ಕೆಲಸ, ಕೈ ತುಂಬಾ ಹಣ, ಪ್ರೀತಿಸುವ ಪತಿ, ಮುದ್ದಾದ ಎಳೆಯ ಕೂಸು, ಸುಂದರ ಸಂಸಾರ.
ತಾಯಿಯ ಸಂದಿಗ್ಧ ಪರಿಸ್ಥಿತಿಗೆ ಸ್ಪಂದಿಸಿ ಅಷ್ಟು ಒಳ್ಳೆಯ ಕೆಲಸ ಬಿಟ್ಟು ಈ ಮಕ್ಕಳ ಪಾಲನೆ ಪೋಷಣೆಗೆ ನಿಂತಳು. ಪತಿಯೂ ಬೇಡವೆನ್ನಲಿಲ್ಲ. ಸಂಸ್ಥೆಯ ಮಕ್ಕಳಿಗಾಗಿ ಮನೆಯನ್ನು ಹತ್ತಿರವೇ ಮಾಡಿಕೊಂಡಳು. ಇದೀಗ ಸ್ವಲ್ಪ ಸುಧಾರಣೆಯಾಗಿದೆ. 21 ವರ್ಷದ ಹಿಂದಿದ್ದ ಪರಿಸ್ಥಿತಿ ಈಗಿಲ್ಲ. ಆದರೂ ಊಟ, ತಿಂಡಿ ಒದಗಿಸೋದು ಕಷ್ಟವೇ! ದಿನನಿತ್ಯಕ್ಕೆ ಬೇಕಾದ ಏನನ್ನಾದರೂ ಹಚ್ಚಿಕೊಳ್ಳೋದು ಹೆಚ್ಚಲ್ಲ. ಅದನ್ನು ಸಂಭಾಳಿಸಿಕೊಂಡು ಹೋಗೋದು ಕಷ್ಟ ಎಂಬುದರಿವಾಯಿತು.
ಇನ್ನು ಇಲ್ಲಿನ ಮಕ್ಕಳಿಗೆ ಹಲವು ರೀತಿಯ ತರಬೇತಿಗಳನ್ನು ನೀಡುತ್ತಾರೆ. ಕ್ಯಾಪ್ ಮಾಡೋದು, ಮೇಣದ ಬತ್ತಿ ತಯಾರಿಕೆ, ರಟ್ಟು ಬೈಂಡಿಂಗ್, ಫ್ಲವರ್ ಮೇಕಿಂಗ್, ಸ್ಕ್ರೀನ್ ಪ್ರಿಂಟಿಂಗ್ ಹೀಗೆ ನಾನಾ ತರಹವಾದ ತರಬೇತಿಗಳನ್ನು ನೀಡುತ್ತಾರೆ. ಹತ್ತಿರದ ಫ್ಯಾಕ್ಟರಿಗಳಿಗೆ ತೆರಳಿ ಸಂಪಾದಿಸುವಂತೆಯೂ ಮಾಡುತ್ತಾರೆ. ಅಕ್ಕಪಕ್ಕದ ಫ್ಯಾಕ್ಟ್ರಿಯವರುಗಳು ಕ್ಯಾಂಟೀನ್‌ಗಳಲ್ಲಿ ಎಲ್ಲರೂ ಊಟ ಮಾಡಿ ಮಿಕ್ಕಿದ ಅಡುಗೆಯನ್ನು ಮಧ್ಯಾಹ್ನದ ಹೊತ್ತಿಗೆ ಕಳುಹಿಸುತ್ತಾರೆ. ಅದು ಗ್ಯಾರಂಟಿ ಇಲ್ಲ. ಆದರೂ ಕಳುಹಿಸುತ್ತಾರೆ. ಅಡುಗೆ ಮಾಡುತ್ತಾರೆ, ಬಟ್ಟೆ ಬರೆ ಒಗೆದುಕೊಳ್ಳುತ್ತಾರೆ. ಪಾತ್ರೆ ತೊಳೆದುಕೊಳ್ಳುತ್ತಾರೆ. ತಮ್ಮ ಕೈಲಾದ ಕೆಲಸವನ್ನು ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಬೇರೆಯವರೂ ಇದ್ದಾರೆ. ಒಮ್ಮೊಮ್ಮೆ ಇವರುಗಳೂ ಮಾಡುತ್ತಾರೆ.
ಮುಂದಿನ ಆಲೋಚನೆಗಳು
ಯುವ ಶಕ್ತಿ ಅನ್ನೋದು ಇದಕ್ಕೇ ಅನಿಸುತ್ತೆ. ಹೊಸ ಹೊಸ ಆಲೋಚನೆ, ಹೊಸ ಹೊಸ ಪರಿಕಲ್ಪನೆ, ಯೋಚನೆ, ಯೋಜನೆ, ಎಲ್ಲ ಒಗ್ಗೂಡಿ ಮೇಘನಾ ಜೋಯಿಸ್‌ರಿಂದ ಸಂಸ್ಥೆಯ ಯೋಜನೆಗಳು ವಿನೂತನವಾಗಿವೆ. ಈಕೆಯ ಮೂರು ಆಲೋಚನೆ, ಇಲ್ಲಿನ ಹೆಣ್ಣುಮಕ್ಕಳಿಗೆ ಎಂಡೋಮೆಂಟ್ ಫಂಡ್, ಒಂದು ಮಗಳಿಗೆ ಸ್ಪಾನ್ಸರ್ ಮಾಡಿದರೆ ಅವಳ ಜೀವಿತಾವಧಿಗೆ ಅದು ಸೀಮಿತ, ಫಿಕ್ಸೆಡ್ ಮಾಡಿ ಬರುವ ಬಡ್ಡಿ ಹಣದಲ್ಲಿ ಆ ಹುಡುಗಿಯ ಜೀವನ. ಇನ್ನೊಂದು, ಮದುವೆ ಮಾಡಿ ಒಳ್ಳೆಯ ಕಡೆಗೆ ಸೇರಿಸೋದು, ಅಲ್ಲಿಗೆ ಇವರ ಜವಾಬ್ದಾರಿ ಮುಗಿಯಿತು. ಮೂರನೆಯದು, ಇವರಿಗೆ ಉದಾರ ಮನಸ್ಸಿನ ದಾನಿಗಳಿಂದ ಸ್ವಂತ ಮನೆ ಮಾಡಿ ಅವರಿಗೊಂದು ನೆಲೆ ದೊರಕಿಸಿಕೊಡುವುದು. ಈ ಮೂರರ ಹಿಂದೆ ಮೇಘನಾ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಎಲ್ಲದಕ್ಕೂ ಪರೀಕ್ಷೆ ನಡೆಯುತ್ತಿದೆ ಫಲಿತಾಂಶಗಳಿಗೆ ಕಾಯುವ ಸಮಯ.
ಸಂಸ್ಥೆಗೆ ಸೇರಿಕೊಳ್ಳಲು ಬರುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ದಿನೇದಿನೇ ಬೆಳೆಯುತ್ತಿದೆ. ಸ್ಥಳದ ಅಭಾವ, ಒಬ್ಬರು ಸೇಫ್ಟಿಯಾಗಿ ಹೊರಹೋದರೆ ಮಾತ್ರ ಮತ್ತೊಬ್ಬರಿಗೆ ಅವಕಾಶವೊಂದು ಸ್ಟ್ರಿಕ್ಟ್ ಆಗಿದ್ದಾರೆ ಮೇಘನಾ. ಒಟ್ಟಿನಲ್ಲಿ ಪ್ರೇರಣಾ ಇಂದು ದಾನಿಗಳ ಸಹಾಯದಿಂದ, ಮೇಘನಾರ ಸಹಕಾರದಿಂದ, ದೇವರ ಅನುಗ್ರಹದಿಂದ ತಕ್ಕಮಟ್ಟಿಗೆ ಸಾಗುತ್ತಿದೆ. ಇನ್ನೂ ಹೆಚ್ಚಿನ ದಾನಿಗಳ ಅವಶ್ಯಕತೆ ಇದೆ. ಸದ್ಯಕ್ಕೆ ಮಕ್ಕಳ ಪ್ರವೇಶವಿಲ್ಲ. ಇವರುಗಳಿಗೆ ಒಳ್ಳೆಯ ವ್ಯವಸ್ಥೆ ಕಲ್ಪಿಸಿದ ಮೇಲೆ ಮುಂದಿನ ಮಾತು ಎನ್ನುತ್ತಾರೆ ಮೇಘನಾ.
ಸಾಧನೆಗೆ ಸಂದ ಸನ್ಮಾನ
ಅಂಗವಿಕಲರ ಸಬಲೀಕರಣ ಕ್ಷೇತ್ರದಲ್ಲಿ ತೋರಿದ ಉತ್ತಮ ಸೇವೆಗಾಗಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರಪ್ರಶಸ್ತಿ ಮೇಘನಾ ಜೋಯಿಸ್‌ರಿಗೆ ಲಭಿಸಿದೆ. ಕಳೆದ ಡಿಸೆಂಬರ್ ಮೂರರಂದು ದೆಹಲಿಯ ವಿಜ್ಞಾನ ಭವನದಲ್ಲಿ ದೊರೆತಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ಈ ಮೂಲಕ ಪ್ರಸಕ್ತ ವರ್ಷದಲ್ಲಿ ಉತ್ತಮ ಉದ್ಯೋಗಾಧಿಕಾರಿಯಾಗಿ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾದ ದೇಶದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಇವೆಲ್ಲಕ್ಕೂ ತಂದೆ ತಾಯಿ ಪ್ರೇರಣೆ, ಪತಿ ವಿಶೃತ್ ನಾಯಕ್, ಮಗ ಅಂಶು, ತಂಗಿ ಚಂದನಾರ ಪ್ರೋತ್ಸಾಹ ಸಹಕಾರವೇ ಕಾರಣ ಎನ್ನುತ್ತಾರೆ ಮೇಘನಾ. ಹೆಣ್ಣುಮಕ್ಕಳಿಂದ, ಹೆಣ್ಣುಮಕ್ಕಳಿಗಾಗಿ, ಹೆಣ್ಣುಮಕ್ಕಳಿಗೋಸ್ಕರ ಇವರು ಉತ್ತಮ ಸಂಸ್ಥೆ ಪ್ರೇರಣ ಸಂಸ್ಥೆ! ಬನ್ನಿ, ನಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಹಬ್ಬ ಹರಿದಿನಗಳನ್ನು ಇಲ್ಲಿ ಆಚರಿಸಿಕೊಂಡು ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳೋಣ. ಈ ಯುವಶಕ್ತಿ ಬೆಳೆಯಲಿ. ಹೆಣ್ಣುಮಕ್ಕಳ ಬಾಳು ಬೆಳಗಲಿ, ನೂರಾರು ಅಂಧ ಹೆಣ್ಣುಮಕ್ಕಳ ಬಾಳಿಗೆ ದಾರಿದೀಪಾಗಲಿ…..
ಗೃಹಶೋಭಾ ಓದುಗರ ಪರವಾಗಿ ಆಲ್ ದಿ ಬೆಸ್ಟ್ ಮೇಘನಾ!.
– ಸವಿತಾ ನಾಗೇಶ್