ಈಗ್ಗೆ ಸುಮಾರು ವರ್ಷಗಳ ಕೆಳಗೆ ಕಾರ್ಯಕ್ರಮವೊಂದರಲ್ಲಿ ಪರಿಚಿತರಾದ ಪ್ರಶಾಂತಾರವರ ಸಾಧನೆ ಅಪಾರ. ಅವರಲ್ಲಿನ ಸೇವಾಮನೋಭಾವ, ಮಾತಿನ ಚಾತುರ್ಯ, ಲವಲವಿಕೆ ಕಂಡು ಸಂತಸಪಟ್ಟೆನು. ಪರಿಚಯ ಆತ್ಮೀಯತೆಗೆ ಬೆಳೆದು ಪೂರ್ವಾಪರ ವಿಚಾರಿಸಿದಾಗ ಮನಸ್ಸು ಆಕೆಗೊಂದು ನಮನ ಸಲ್ಲಿಸಿತ್ತು. ಮನಶ್ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಬಳಿಕ, ಅಖಿಲಭಾರತ ಅಂಧರ ಒಕ್ಕೂಟದಲ್ಲಿ ಉದ್ಯೋಗಾಧಿಕಾರಿಯಾಗಿದ್ದ ಅನುಭವ, ಜೊತೆಗೆ ಹಲವಾರು ಅಂಧರಿಗೆ ಉದ್ಯೋಗಗಳನ್ನು ನೀಡಿ, ಅವರ ಬಾಳಿಗೆ ಬೆಳಕಾದರು. ಅವರುಗಳ ಮನದಾರ್ಶೀವಾದಕ್ಕೆ ಪಾತ್ರರಾದರು. ಈ ಒಂದು ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಕೆಲಸದ ಭರದಲ್ಲಿ ಹತ್ತಾರು ಕಡೆ ಓಡಾಡು ಪ್ರಮೇಯಗಳು ಬಂದೊದಗುತ್ತಿದ್ದವು. ಒಮ್ಮೆ ಇದೇ ರೀತಿಯಲ್ಲಿ ಒಡ್ಡರಪಾಳ್ಯದಲ್ಲಿ ಕಾರ್ಯ ನಿಮಿತ್ತ ತೆರಳಿದ್ದಾಗ, ಅಲ್ಲಿ ಕಂಡ ಒಂದು ದೃಶ್ಯ ಇವರ ಮನಸ್ಸನ್ನೇ ಬದಲಿಸಿತು. ಮಾತ್ರವಲ್ಲ ತನ್ನ ಕ್ಷೇತ್ರದೆಡೆಗೆ ಸೆಳೆದುಕೊಂಡುಬಿಟ್ಟಿತು. ದೇವರೇ ಆ ಕಾಯಕ್ಕೆ ಇವರನ್ನು ಎಳೆದೊಯ್ಯುವಂತೆ ಮಾಡಿತು. ಅಲ್ಲೊಬ್ಬ ಅಂಧ ಹೆಣ್ಣುಮಗಳು. ಅತ್ತಿಗೆಯ ಬಿರಿಸು ನುಡಿಗಳು, ಅವಳನ್ನು ನಡೆಸಿಕೊಳ್ಳುತ್ತಿದ್ದ ಪರಿ, ಅಲ್ಲಿನ ಶೋಚನೀಯ ಸನ್ನಿವೇಶ ಪ್ರಶಾಂತಾರನ್ನು ಸುಮ್ಮನಿರಿಸಲಿಲ್ಲ. ವೈಯಕ್ತಿಕ ಕಾಳಜಿ ಇಂಥ ಮಕ್ಕಳಿಗೇನಾದರೂ ಮಾಡಲೇಬೇಕು, ಹೀಗೆ ಹಿಂಸೆ ಕೊಡುವ ಜನರೂ ಇದ್ದಾರೆಯೇ ಎಂದು ಆಶ್ಚರ್ಯಪಟ್ಟರು. ಅಷ್ಟು ಕಠೋರ ಅತ್ತಿಗೆಯನ್ನು ನೋಡಿದ್ದು ಅದೇ ಮೊದಲೆಂದಾಗ ಅವರ ದನಿಯಲ್ಲಿ ಮರುಕವೇ ತುಂಬಿತ್ತು. ಈ ಹುಡುಗಿಯನ್ನು ಕೊಡು ನಾನು ಸಾಕಿಕೊಳ್ಳುತ್ತೇನೆ, ಎಂದಾಗ ಯಾವೊಂದೂ ಮಾತಾಡದೆ ಆ ಅತ್ತಿಗೆ ಒಪ್ಪಿಬಿಟ್ಟಳು.
ಪ್ರಶಾಂತಾರಿಗೆ ಕಣ್ಣಾಲಿಗಳು ತುಂಬಿ ಇಷ್ಟೇನಾ? ಎಂಬಂತೆ ಅಲ್ಲಿಂದ ಆ ಅಂಧಳಿಗೆ ಮುಕ್ತಿ ಕೊಡಿಸಿ ತಮ್ಮ ಸೂರಿನೊಳಗೇ ಸೇರಿಸಿಕೊಂಡರು. ಮನೆಯಲ್ಲಿ ತಮ್ಮದೇ ಎರಡು ಹೆಣ್ಣು ಕುಡಿಗಳು, ವೈದಿಕ ಧರ್ಮದ ಹೆಣ್ಣುಮಗಳು, ಮನೆಯಲ್ಲಿ ಅತ್ತೆ ಮಾವ, ಮೈದುನ, ಒಳ್ಳೆಯ ಸರ್ಕಾರಿ ಹುದ್ದೆಯಲ್ಲಿದ್ದ ಪತಿರಾಯ. ಒಟ್ಟಿನಲ್ಲಿ ತುಂಬಿದ ಮನೆಯ ಸೊಸೆ ಪ್ರಶಾಂತಾ. ಅಂತಹ ಮಡಿವಂತಿಕೆಯ ತುಂಬು ಕುಟುಂಬದಲ್ಲಿ ಹಿಂದುಮುಂದು ಗೊತ್ತಿಲ್ಲದ ಅಂಧ ಹೆಣ್ಣುಮಗಳ ಸೇರ್ಪಡೆ. ಕೊಂಚ ಭಿನ್ನಾಭಿಪ್ರಾಯಗಳು ಮೂಡಿದವು. ಮನೆಯವರನ್ನು ಈ ವಿಷಯದಲ್ಲಿ ಎಜುಕೇಟ್ ಮಾಡೋದು ನಂತರ ಅವರಿಗೆ ಸಮಾಜದ ವ್ಯವಸ್ಥೆಯ ಬಗ್ಗೆ ತಿಳಿಯಪಡಿಸುವುದು ಮುಖ್ಯವಾಯಿತು. ಆ ವಿಚಾರದಲ್ಲಿ ಪ್ರಶಾಂತಾ ಗೆದ್ದರು. ಕ್ರಮೇಣ ಮನೆಯರ ಪ್ರೋತ್ಸಾಹದಿಂದ ಹಾಗೂ ಹೀಗೂ ಹೆಣ್ಣುಮಕ್ಕಳು ಕೂಡಿದರು. ಮೇಲಿನ ಮನೆಯಲ್ಲಿ ತಮ್ಮ ವಾಸ. ಕೆಳಗಿನ ಮನೆಯಲ್ಲಿ ಈ ಹೆಣ್ಣುಮಕ್ಕಳ ವಾಸ್ತವ್ಯ. ಅದು ಪ್ರೇರಣಾ ರಿಸೋರ್ಸ್ ಸೆಂಟರ್ ಎಂದು ಪ್ರಾರಂಭವಾಯಿತು.
ಕಷ್ಟಕಾರ್ಪಣ್ಯಗಳು
ಕೆಲವೇ ದಿನಗಳಲ್ಲಿ 35 ಹೆಣ್ಣುಮಕ್ಕಳು ಕೂಡಿದರು. ಜವಾಬ್ದಾರಿ ಹೆಚ್ಚಾಯಿತು. ಎಲ್ಲ ನೊಂದ ಹೆಣ್ಣುಮಕ್ಕಳು. ಒಬ್ಬೊಬ್ಬರದೂ ಒಂದೊಂದು ಶೋಚನೀಯ ಕಥೆ. ಕೆಲವರು ಅನಾಥರಾದರೆ, ಮತ್ತೆ ಕೆಲವರು ಎಲ್ಲರೂ ಇದ್ದೂ ಅನಾಥರು. ಆ ಪದ ಇಲ್ಲಿ ಅಪ್ಲೈ ಆಗಲೇ ಇಲ್ಲ. ನಿಮಗೆ ನಾನೇ ತಾಯಿ ಎಂದು ಎದೆಗವುಚಿ ಕೊಂಡರು. ಮಾತೃವಾತ್ಸಲ್ಯ ತೋರಿಸಿದರು. ತಾವಾಗೇ ಮಕ್ಕಳಿಗೆ ಮಡಿಲು ನೀಡಿದರು. ಮಕ್ಕಳಿಗಾದ ಆನಂದ ಅಷ್ಟಿಷ್ಟಲ್ಲ!





