ಜಗಳದ ಬದಲಿಗೆ ತರ್ಕಬದ್ಧ ಭಾಷೆ ಉಪಯೋಗಿಸಿ

ನೀವು `ಲಗೇ ರಹೋ ಮುನ್ನಾ ಭಾಯಿ’ ಚಿತ್ರ ಗಮನಿಸಿರಬಹುದು. ಅದರಲ್ಲಿ ಮುದಿ ತಂದೆಯನ್ನು ತನ್ನ ಮಾತಿಗೆ ಒಪ್ಪಿಕೊಳ್ಳುವಂತೆ ಮಾಡಲು ಆತನ ಮಗ ಬಾಲ್ಕನಿಯಿಂದ ತಲೆಕೆಳಗಾಗಿ ತೂಗಾಡುತ್ತಾನೆ. ಹಾಗೆಯೇ ಇತ್ತೀಚೆಗೆ ನವದೆಹಲಿಯಲ್ಲಿ ನಾಲ್ವರು ಗೂಂಡಾಗಳು, ಒಂದು ಅತಿ ಎತ್ತರದ ಬಿಲ್ಡಿಂಗ್‌ ಇಂಪೀರಿಯಲ್ ಹೈಟ್‌ನಿಂದ ಹಣ ಲೂಟಿ ಮಾಡಲೆಂದು ಅಮಾಯಕನೊಬ್ಬನನ್ನು ಕಿಡಿಗೇಡಿ ಡಾನ್‌ಗಳು ಮೇಲಿನಿಂದ ತೂಗುಬಿಟ್ಟರು. ಆ ಪೀಡಿತ ವ್ಯಕ್ತಿ ಅಸಹಾಯಕನಾಗಿ, ಹಣ ಕೊಡಲು ಒಪ್ಪಿಕೊಂಡ. ನಂತರ ಧೈರ್ಯವಹಿಸಿ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟ. ಈಗ ಆ ನಾಲ್ವರು ಗೂಂಡಾಗಳು ಜೇಲಿನಲ್ಲಿದ್ದಾರೆ.

ಹಣ ಲೂಟಿ ಮಾಡುವ ಈ ಹಿಂಸಾಪ್ರವೃತ್ತಿ ಇಂದು ಹೊಸದೇನಲ್ಲ. ಇದಕ್ಕಿಂತ ಎಷ್ಟೋ ಪಟ್ಟು ಕ್ರೂರ ವಿಧಾನಗಳನ್ನು ಬಳಸಿದ್ದಾರೆ. ವಿಡಂಬನೆ ಎಂದರೆ, ಈಗಲೂ ನಮ್ಮ ದೇಶದಲ್ಲಿ ಇಂತಹ ಕುಕೃತ್ಯಗಳ ವಿರುದ್ಧ ಕಾನೂನು ಕ್ರಮಗಳಿವೆ, ಪೊಲೀಸರೂ ತೀರಾ ಕೈ ಚೆಲ್ಲುವ ಸ್ಥಿತಿಯಲ್ಲಿಲ್ಲ. ಹಾಂ, ಪೀಡಿತ ವ್ಯಕ್ತಿ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ ಹಾಗೂ ವರ್ಷಗಟ್ಟಲೆ ಅದರ ಕುರಿತಾಗಿ ಕಷ್ಟಪಡಬೇಕು.

ಇಂಥ ಪರಿಸ್ಥಿತಿಯನ್ನು ಇತ್ತೀಚೆಗೆ ಸಾಮಾನ್ಯ ಗೃಹಿಣಿಯರೂ ವಸಹಿಸಬೇಕಿದೆ. ಮನೆಯ ಕೆಲಸದವಳು, ಸಣ್ಣಪುಟ್ಟ ಸೇವೆ ಒದಗಿಸುವ ಪೇಂಟರ್‌, ಬಡಗಿ, ಮಾಲಿ ಮುಂತಾದವರು ತಮ್ಮ ಕಳಪೆ ಕೆಲಸದಿಂದ ಕಿರಿಕಿರಿ ತಂದಾಗ, ಅದಕ್ಕಾಗಿ ಹಣದ ಕಡಿತ ಮಾಡಿದರೆ ಜೋರು ಜಗಳ ತೆಗೆಯುತ್ತಾರೆ. ಇಂಥವರೊಂದಿಗೆ ಏಗುವುದು ಬಲು ಕಷ್ಟ. ಇಂಥ ಕೆಲಸದ ಹೆಂಗಸರು ಎಷ್ಟೋ ಸಲ ಮನೆಯ ಯಜಮಾನನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಮಾನ ಹರಾಜು ಹಾಕುತ್ತಾರೆ.

ಇದಕ್ಕೆ ಕಾನೂನು ಹೇಳುವುದೇನೆಂದರೆ, ಪ್ರತಿ ಸಣ್ಣ ವಿಷಯವನ್ನೂ ದೊಡ್ಡ ವಿವಾದ ಮಾಡಬಹುದು ಹಾಗೂ ಯಾರಾದರೂ ಧೈರ್ಯವಾಗಿ ತಿರುಗಿಬಿದ್ದು ಎದುರಿಸಿದರೆ, ಸಣ್ಣಪುಟ್ಟ ವಿಷಯಕ್ಕೂ ಗೆಳೆಯರನ್ನು ಕರೆಸಿ ಗದರಿಸಬಹುದು ಅಥವಾ ಪೊಲೀಸರನ್ನು ಕರೆಸಬಹುದು.

ಆದ್ದರಿಂದ ಬುದ್ಧಿವಂತಿಕೆ ಎಂದರೆ, ಯಾವುದೇ ವ್ಯವಹಾರವಿರಲಿ ಮೊದಲೇ ಇಂತಿಷ್ಟೆ ಎಂದು ಹಣಕಾಸಿನ ವಿಷಯ ಇತ್ಯರ್ಥ ಮಾಡಿಕೊಂಡು ಬಿಡಬೇಕು, ಜೊತೆಗೆ ಒಂದಿಷ್ಟು ಕಳೆದುಕೊಳ್ಳಲಿಕ್ಕೂ ಸಿದ್ಧರಿರಬೇಕು. ಇದು ದೌರ್ಬಲ್ಯ ಅಂದುಕೊಳ್ಳಬೇಡಿ, ನೆಮ್ಮದಿ ಗಳಿಸಲು ಇದು ಅನಿವಾರ್ಯ. ನೀವು ಹಠಕ್ಕೆ ಬಿದ್ದು ಕೆಲಸದವಳು ಮಾಡಿದ ತಪ್ಪಿಗೆ ಅವಳ ಸಂಬಳದಲ್ಲಿ 200/ ರೂ. ಹಿಡಿದುಕೊಳ್ಳುವ ಬದಲು, ಫ್ರಿಜ್‌ ಮಾರಿದವನ ಬಳಿ ದಿನ ತಲೆ ಚಚ್ಚಿಕೊಳ್ಳುವ ಬದಲು, ಯಾವುದು ಹೇಗಿದೆಯೋ ಅದನ್ನು ಹಾಗೇ ಒಪ್ಪಿಕೊಂಡು ಸಹಿಸಿಕೊಳ್ಳುವುದೇ ಲೇಸು.

ಆದರೆ ಇದರರ್ಥ ನಿಮ್ಮ ತರ್ಕಬದ್ಧತೆ, ಹಕ್ಕು, ಸ್ಪಷ್ಟತೆ, ನೈತಿಕತೆ ಇತ್ಯಾದಿಗಳನ್ನು ಚರಂಡಿಗೆ ಸುರಿಯಬೇಕು ಅಂತಲ್ಲ. ಎಲ್ಲಿ ಅಗತ್ಯವೋ ಅಲ್ಲಿ ಗಟ್ಟಿಯಾಗಿ ನಿಂತು ಎದುರಿಸಬೇಕು, ಪ್ರಯತ್ನ ಕೈ ಬಿಡಬಾರದು. ಆಗ ಮಾತ್ರವೇ ಎದುರಿನ ವ್ಯಕ್ತಿಗೆ ಆತನ ಸೇವೆಯಲ್ಲಿ ಇಂಥ ಕೊರತೆ ಇದ್ದುದರಿಂದ ಇಂತಿಷ್ಟು ಹಣ ಕಡಿತಗೊಳಿಸಲಾಗಿದೆ, ಬಲವಂತದಿಂದ ಅಲ್ಲ ಎಂದು ಸ್ಪಷ್ಟಪಡಿಸಬೇಕು. ಆದರೆ ನಮ್ಮಲ್ಲಿನ ದೊಡ್ಡ ಕಷ್ಟ ಎಂದರೆ ತರ್ಕಬದ್ಧ ಭಾಷೆಯ ಬಳಕೆ ಪತಿ ಪತ್ನಿ, ನೆಂಟರಿಷ್ಟರು ಅಥವಾ ಇತರ ಸಾಮಾನ್ಯ ವ್ಯವಹಾರಗಳ ಮಧ್ಯೆ ಕೂಡ ಇಲ್ಲದಿರುವುದು!

ಸಾಮಾನ್ಯ ಕೆಲಸದವರು, ತರಕಾರಿ ಮಾರುವವ, ಪ್ಲಂಬರ್‌, ಅಂಗಡಿಯವನು….. ಇವರಾರೂ ವಾಸ್ತದಲ್ಲಿ ಜಗಳ ಬಯಸುವುದಿಲ್ಲ. ಎಲ್ಲರಿಗೂ ಕೆಲಸ ಮುಗಿಸಿ ತಂತಮ್ಮ ದಾರಿ ಹಿಡಿದು ಹೋಗುವುದೇ ಬೇಕಿರುತ್ತದೆ. ಅಂಥ ಜಗಳದಿಂದ ಅವರಿಗೂ ನಷ್ಟ ತಪ್ಪಿದ್ದಲ್ಲ. ಅದಕ್ಕಾಗಿ ಸಮಯ ಮೀಸಲಿಡಬೇಕು, ಅವರು ತಂತಮ್ಮ ದೈನಂದಿನ ಕೆಲಸ ನಿರ್ವಹಿಸಲಾಗದು. ಇಂಥ ತಗಾದೆಗಳನ್ನು ನಿವಾರಿಸಿಕೊಳ್ಳಲು ಎಷ್ಟೋ ಹಣ ಖರ್ಚು ಮಾಡಬೇಕಾಗುತ್ತದೆ. ತಮ್ಮ ಭವಿಷ್ಯಕ್ಕೆ ಯಾವ ಕುಂದೂ ಬರಬಾರದೆಂಬುದೇ ಅವರ ಆಶಯ. ಜನ ತಮ್ಮನ್ನು ಜಗಳಗಂಟರೆಂದು ತಿಳಿಯಬಾರದೆಂದು ಬಯಸುತ್ತಾರೆ.

ಸಭ್ಯ ಸಮಾಜ ಬಯಸುವುದೂ ಇದನ್ನೇ, ಯಾವುದೇ ಗಲಭೆ ದೊಂಬಿಗಳಿಲ್ಲದೆ ನಿಮ್ಮ ವಿವಾದ ಪರಿಹರಿಸಿಕೊಳ್ಳಿ, ಆದರೆ ನಿಮ್ಮ ನಿಮ್ಮ ಹಕ್ಕು ಖಂಡಿತಾ ಬಿಟ್ಟುಕೊಡಬೇಡಿ.

ಧರ್ಮವೇಕೆ ಮಾದಕ ದ್ರವ್ಯಕ್ಕೆ ಕಡಿವಾಣ ಹಾಕಲಿಲ್ಲ?

ಪ್ರತಿಯೊಂದು ಧರ್ಮ ಎಲ್ಲಕ್ಕೂ ಹೆಚ್ಚು ಹೆದರುವುದು ಮುಕ್ತ ಸ್ವಾತಂತ್ರ್ಯದ ಕುರಿತಂತೆ. ಧರ್ಮ ತನ್ನ ವಿರೋಧಿಗಳ ಬಲ ಮತ್ತು ಆಕ್ರಮಣವನ್ನೇನೋ ಸಹಿಸಿಕೊಳ್ಳುತ್ತದೆ. ಆದರೆ ತನ್ನವರಲ್ಲಿ ಯಾರದೋ ಒಂದು ಯೋಚನೆಗೆ ಬಹಳ ಹೆದರುತ್ತದೆ.

ಹಿಂದಿ ಚಲನಚಿತ್ರ `ಉಡ್ತಾ ಪಂಜಾಬ್‌’ನಿಂದ ಧಾರ್ಮಿಕ ಪಾರ್ಟಿಗಳು ಅಕಾಲಿದಳ ಹಾಗೂ ಭಾರತೀಯ ಜನತಾ ಪಾರ್ಟಿಯ ಭಯ ನಿರ್ಮೂಲನೆ ಆಗಿರಲಿಲ್ಲ. ಹೀಗಾಗಿ ಪರಮಭಕ್ತ ಮತ್ತು ಸೆಂಟ್ರಲ್ ಬೋರ್ಡ್‌ ಆಫ್‌ ಫಿಲ್ಮ್ ಸರ್ಟಿಫಿಕೇಶನ್‌ನ ಚೇರ್ಮನ್‌ಪಹ್ಲಾಜ್‌ ನಿಹ್ಲಾನಿ ಅದಕ್ಕೆ ಮನಸೊ ಇಚ್ಛೆ ಕತ್ತರಿ ಹಾಕಿದರು. ಆ ಚಿತ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧವಾಗಲಿ, ಪ್ರಕಾಶ್‌ ಸಿಂಗ್‌ ಬಾದಲ್‌ರ ಅಕಾಲಿ ದಳದ ಸರ್ಕಾರದ ವಿರುದ್ಧ ಯಾವುದೇ ಚಕಾರವಿರಲಿಲ್ಲ. ಆದರೆ 2017ರ ಚುನಾವಣೆಗೂ ಮುನ್ನ ಮಾದಕ ದ್ರವ್ಯದ ದಂಧೆ ಪಂಜಾಬ್‌ನ ಮನೆಮನೆಗೂ ತಲುಪಿದೆ, ಮಹಿಳೆಯರು ಈ ವ್ಯವಹಾರ ನಡೆಸುವಲ್ಲಿ ನೆರವಾಗುತ್ತಿದ್ದಾರೆ. ಇದನ್ನು ಸ್ವೀಕರಿಸುವಲ್ಲಿ ಹೆದರುವುದು ಸಹಜವೆ.

ಪಂಜಾಬ್‌ನಲ್ಲಿ ಡ್ರಗ್ಸ್ ದಂಧೆ ವಾಸ್ತವದಲ್ಲಿ ಮದ್ಯದ ಶೀಶೆಗಳ ಮೇಲೆ ಏರಿ ಬಂದುದಾಗಿದೆ. ಅಲ್ಲಿ ಮದ್ಯ ಸೇವನೆ ಮತ್ತು ಇತರರಿಗೆ ಕುಡಿಸುವುದು ಪ್ರತಿಷ್ಠೆಯ ಸಂಗತಿಯಾಗಿದೆ. ಪ್ರತಿಯೊಂದು ಮನೆಯಲ್ಲೂ ಮದ್ಯದ ಬಾಟಲ್‌ಗಳನ್ನು ಅಂದವಾಗಿ ಪೇರಿಸಿ ಇಡಲಾಗುತ್ತದೆ. ಮಹಿಳೆಯರು ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುತ್ತಾರೆ. ಪಂಜಾಬ್‌ ಹಾಡುಗಳಲ್ಲಿ ಮದ್ಯ ಹಾಗೂ ಮಾದಕ ದ್ರವ್ಯಗಳ ಬಗ್ಗೆ ಹೇಗೆ ಹಾಡಿ ಹೊಗಳಲಾಗುತ್ತದೆಂದರೆ, ದೇವಿ ದೇವತೆಗಳೂ ಕೂಡ ಸಂಕೋಚ ಪಟ್ಟುಕೊಳ್ಳಬೇಕು.

ಬಿಹಾರದಿಂದ ಪಂಜಾಬ್‌ಗೆ ಬಂದ ಕೂಲಿಕಾರರಿಂದ ಹೆಚ್ಚೆಚ್ಚು ಕೆಲಸ ಮಾಡಿಸಿಕೊಳ್ಳಲು ಅವರಿಗೆ ನಶೆಯ ಅಭ್ಯಾಸ ಮಾಡಿಸಲಾಯಿತು. ಅವರು ಮೊದಲೇ ತಂಬಾಕು, ಖೈನಿಯ ವ್ಯಸನಿಗಳಾಗಿದ್ದರು. ಈ ನಶೆಯನ್ನು ಅವರು ಮುಕ್ತ ಹಸ್ತದಿಂದ ಸ್ವೀಕರಿಸಿದರು. ಅಮಲು ಪದಾರ್ಥದ ಕೃಷಿ ಚಟುವಟಿಕೆ ನಡೆಯುತ್ತಿದ್ದರೂ ಅದನ್ನು ತಡೆಯುವವರಾರು?

ಪಂಜಾಬ್‌ನಲ್ಲಿ ಧರ್ಮದ ಪ್ರಭಾವ ಜೋರಾಗಿದೆ. ಧರ್ಮ ಈ ಅಮಲಿನ ಚಟಕ್ಕೆ ಏಕೆ ಕಡಿವಾಣ ಹಾಕುವುದಿಲ್ಲ? ಲಕ್ಷ ಲಕ್ಷ ಜನರನ್ನು ಧಾರ್ಮಿಕ ಸ್ಥಳಕ್ಕೆ ಸನ್ನದ್ದುಗೊಳಿಸಲಾಗುತ್ತದೆ. ಏಕರೀತಿಯ ಪೋಷಾಕು ಧರಿಸಬೇಕೆಂದು ಒತ್ತಡ ಹೇರಲಾಗುತ್ತದೆ. ಆಹಾರಪಾನೀಯಗಳ ಮೇಲೆ ನಿರ್ಬಂಧ ಹೇರುತ್ತದೆ. ಆದರೆ ನಶೆಯ ಸೂಜಿ ಚುಚ್ಚಿಸಿಕೊಳ್ಳುವುದನ್ನು ಏಕೆ ನಿಲ್ಲಿಸಲಾಗುವುದಿಲ್ಲ?

ಧರ್ಮದ ಹೆಸರಿನಲ್ಲಿ ರೂಪುಗೊಂಡ ಎರಡು ಪಕ್ಷಗಳಿಂದ ನಡೆಯುವ ಭಾರತದ ಏಕೈಕ ರಾಜ್ಯವೆಂದರೆ ಪಂಜಾಬ್‌. ಅಲ್ಲಿ ಪಹ್ಲಾಜ್ ನಿಹಾನಿ ಅವರಿಗೆ ಫಿಲ್ಮ್ ಸೆನ್ಸಾರ್‌ ಮಾಡುವ ಅಧಿಕಾರವನ್ನೇನೊ ನೀಡಲಾಗಿತ್ತು. ಆದರೆ ಜನತೆಯನ್ನು ಅದರಿಂದ ಮುಕ್ತಗೊಳಿಸುವ ಪ್ರಯತ್ನವನ್ನಂತೂ ಮಾಡುತ್ತಿರಲಿಲ್ಲ.

`ಉಡ್ತಾ ಪಂಜಾಬ್‌’ ಚಲನಚಿತ್ರ ಯಾವುದೇ ಕಥೆ ಇಲ್ಲದ ಚಿತ್ರ. ನಿರ್ಮಾಪಕ ನಿರ್ದೇಶಕರು ನಶೆಯನ್ನು ತೋರಿಸುವಲ್ಲಿ ಎಷ್ಟೊಂದು ಮಗ್ನರಾಗಿಬಿಟ್ಟರೆಂದರೆ, ನಶೆ ಮಾಡುವವರ ನಡುವೆ ಕಥೆಯೇ ಕಳೆದುಹೋಗಿಬಿಟ್ಟಿದೆ. ಇವರು ಅದೇ ಸಿನಿಮಾದವರು, ಅವರು ಈಚೆಗೆ ಮದ್ಯದ ಬಗ್ಗೆ ಯಥೇಚ್ಛವಾಗಿ ಪ್ರಚಾರ ಮಾಡುತ್ತಿದ್ದಾರೆ. ಪ್ರತಿಯೊಂದು ಸಿನಿಮಾದಲ್ಲಿ ಕೇವಲ ನಾಯಕನಷ್ಟೇ ಅಲ್ಲ, ನಾಯಕಿ ಕೂಡ ಮದ್ಯ ಹೀರುತ್ತಿರುವುದು ಕಂಡುಬರುತ್ತದೆ.

ಒಂದಕ್ಕೆ ಮಾನ್ಯತೆ ದೊರೆಯುವುದಾದರೆ, ಇನ್ನೊಂದಕ್ಕೆ ಆ ಮಾನ್ಯತೆ ಏಕಿಲ್ಲ? ಸಿಗರೇಟ್‌ ಬಗ್ಗೆ ಧಾರ್ಮಿಕ ನಿರ್ಬಂಧದಿಂದ ಸ್ಪಷ್ಟವಾಗುವುದೇನೆಂದರೆ, ಧರ್ಮ ಈ ನಶೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಇತರೆ ನಶೆಗಳ ಬಗ್ಗೆ ಅದರ ಆಕ್ಷೇಪ ಹೊರಟುಹೋಯಿತು. ಪಂಜಾಬ್‌ನಿಂದಲಂತೂ ಹೊರಟೇಹೋಗಿದೆ.

ಪ್ರತಿಷ್ಠೆಗೆ ತಗುಲದಿರಲಿ ಮಸಿ

ಶ್ರೀಮಂತರ ಮಕ್ಕಳು ಓಡಿಸುವ ಅತ್ಯಂತ ವೇಗದ ಪವರ್‌ಫುಲ್ ವಾಹನಗಳಿಂದ ಅಮಾಯಕರ ಹತ್ಯೆಯ ಘಟನೆಗಳು ಹೆಚ್ಚುತ್ತಲೇ ಇವೆ. ಈಗ ಕಂತುಗಳಲ್ಲಿ ಮರ್ಸಿಡಿಸ್‌, ಆಡಿ, ಜಾಗ್ವಾರ್‌ನಂತಹ ದುಬಾರಿ ಗಾಡಿಗಳು ದೊರೆಯುತ್ತಿವೆ. ಹೊಸದಾಗಿ ಶ್ರೀಮಂತರಾದವರ ಮಕ್ಕಳು ಇವುಗಳ ಮೋಹದಿಂದ ದೂರವಿರಲು ಹೇಗೆ ಸಾಧ್ಯ? ಹೊರಗೆ ಸುತ್ತಾಡಲು ಇಂತಹ ದುಬಾರಿ ಗಾಡಿಗಳನ್ನು ತೆಗೆದುಕೊಂಡು ಪವರ್‌ ಟೆಸ್ಟ್ ಮಾಡಲು ಹೋಗುತ್ತಾರೆ ನಮ್ಮ ದೇಶದಲ್ಲಿ ರಸ್ತೆ ಪ್ರಜ್ಞೆ ಎಂಬುದು ಇಲ್ಲವೇ ಇಲ್ಲ. ವೇಗವಾಗಿ ಚಲಿಸುತ್ತಿರುವ ಗಾಡಿಗೆ ಖಾಲಿ ರಸ್ತೆಯಲ್ಲೂ ಅಪಾಯಗಳಿವೆ. ಯಾರು, ಯಾವಾಗ, ಯಾವ ಕಡೆಯಿಂದ ಬರುತ್ತಾರೋ ಹೇಳಲಾಗದು.

`ಜಾಲಿ ಎಲ್.ಎಲ್.ಬಿ’ಯಲ್ಲಿ ಹರೆಯದ ಹುಡುಗನಿಂದ ರಸ್ತೆಯಲ್ಲಿ ಘಟಿಸಿದ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟ ಮೊಕದ್ದಮೆಗಳು ದೇಶದ ನ್ಯಾಯಾಲಯಗಳಲ್ಲಿ ನಡೆಯುತ್ತಲೇ ಇವೆ. ರಾಜಸ್ತಾನದ ಸೀಕರ್‌ ಕ್ಷೇತ್ರದ ಶಾಸಕನ ಮಗ ಬಿಎಂಡಬ್ಲ್ಯೂ ವಾಹನ ಚಲಾಯಿಸಿ 3 ಜನರ ಸಾವಿಗೆ ಕಾರಣನಾದ. ಅವನು 12 ದಿನ ಜೈಲಲ್ಲಿ ಇದ್ದು ಬಂದಿರಬಹುದು ಆದರೆ ಅವನು ವಾಪಸ್‌ ಬರುವಾಗ ಅದೆಷ್ಟು ಗತ್ತಿನಿಂದ ಬಂದನೆಂದರೆ, ಬೆಂಗಳೂರಿನ ಜಿಂದಾಲ್ ‌ಆರೋಗ್ಯ ಕೇಂದ್ರದಲ್ಲಿ ವಿಶ್ರಾಂತಿ ಪಡೆದುಬಂದ ರೀತಿಯಲ್ಲಿತ್ತು.

ಈ ದೇಶದಲ್ಲಿ ದೊಡ್ಡ ಗಾಡಿಗಳು ಪ್ರತಿಷ್ಠೆಗಾಗಿಯೇನೋ ಇವೆ. ಆದರೆ ವೇಗದ ದೃಷ್ಟಿಯಿಂದ ಅಲ್ಲ. ಏಕೆಂದರೆ ಇಲ್ಲಿನ ರಸ್ತೆಗಳಲ್ಲಿ ಸಂಚಾರಿ ನಿಯಮಗಳೆಂಬುದು ಲೆಕ್ಕಕ್ಕೇ ಇಲ್ಲ.

ರಸ್ತೆ ನಿರ್ವಹಣೆ ಮಾಡುವವರು ದಾರಿ ತಪ್ಪಿದ ಮಕ್ಕಳಿಗಿಂತ ಹೆಚ್ಚು ಕೆಟ್ಟುಹೋಗಿದ್ದಾರೆ. ಆದರೆ ಅವರ ಮೇಲೆ ಯಾರೂ ತಪ್ಪು ಹೊರಿಸುವುದಿಲ್ಲ.

ಹೊಸ ತಂತ್ರಜ್ಞಾನದಿಂದ ರಸ್ತೆಗೆಳ ಮಾದರಿಯಂತೂ ಬದಲಾಗಿದೆ. ಆದರೆ ಅದರ ಮೇಲೆ ಚಲಿಸುವವರದು ಮಾತ್ರ ಬದಲಾಗಿಲ್ಲ. ಓದುಬರಹ ಬಲ್ಲ ಕಾರಿನವರು, ಸ್ಕೂಟಿರಿನವರು, ಅನಕ್ಷರಸ್ಥ ಆಟೋರಿಕ್ಷಾದವರು ಸೈಕಲ್ ಸವಾರರು ರಸ್ತೆಯನ್ನು ಮಲಮೂತ್ರ ವಿಸರ್ಜನೆ ಮಾಡುವ ಜಾಗ ಎಂದು ಭಾವಿಸಿದ್ದಾರೆ. ಇಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂದು ಅವರು ಭಾವಿಸಿದಂತಿದೆ.

ಬಿಸಿರಕ್ತದ ಹುಡುಗರಲ್ಲಿ ತಂದೆತಾಯಿಯರ ದುಡ್ಡಿನ ಮದ. ಕೈಯಲ್ಲೊಂದು ಭಾರಿ ಗಾಡಿ ಇದ್ದರೆ, ಅವರು ಕ್ಷಣಾರ್ಧದಲ್ಲಿಯೇ ತಮ್ಮತನ ಕಳೆದುಕೊಂಡು ಬಿಡುತ್ತಾರೆ. ಅದರಲ್ಲೂ ಜೊತೆಗಿಬ್ಬರು ಗರ್ಲ್ ಫ್ರೆಂಡ್ಸ್ ಹಾಗೂ ಗೆಳೆಯರು ಇದ್ದರೆ ಪರಿಸ್ಥಿತಿ ಇನ್ನೂ ಕೈಮೀರುತ್ತದೆ.

ಕಾನೂನು ಇದರಲ್ಲಿ ಏನು ಮಾಡಲೂ ಆಗುವುದಿಲ್ಲ. ತಂದೆತಾಯಿಗಳಂತೂ ನಿರ್ಲಿಪ್ತರಾಗಿರುತ್ತಾರೆ. ಒಬ್ಬನೇ ಮಗನ ಮೇಲೆ ಅವರು ಎಷ್ಟೂಂತ ಅಧಿಕಾರ ಚಲಾಯಿಸುತ್ತಾರೆ? ಗೆಳೆಯರ ಒತ್ತಡ ಎಷ್ಟು ಜೋರಾಗಿರುತ್ತದೆಂದರೆ, ಮೋಜು ಮಸ್ತಿಗಾಗಿ ತಂದೆ ಗಳಿಸಿದ ಹಣವನ್ನು ಸದುಪಯೋಗ ಮಾಡಿಕೊಳ್ಳುವುದೇ ಸೂಕ್ತ ಎಂದು ಅವರು ಹೇಳುತ್ತಿರುತ್ತಾರೆ.

ಮಕ್ಕಳನ್ನು ಶಿಸ್ತಿನಲ್ಲಿ ಬೆಳೆಸುವುದು ತಂದೆ ತಾಯಿಗಳ ಜವಾಬ್ದಾರಿ ಆಗಿರುತ್ತದೆ. ಇಲ್ಲದಿದ್ದರೆ, ಅದರ ಮಾರಕ ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ. ಈ ಹಾನಿ ಅವರ ಪ್ರತಿಷ್ಠೆಗಿಂತ ಹೆಚ್ಚಾಗಿರುತ್ತದೆ.

ಪ್ರತಿಷ್ಠೆಗಾಗಿ ದುಬಾರಿ ಬಟ್ಟೆ ಕೊಡಿಸಿ, ದೊಡ್ಡ ಮನೆ ಕಟ್ಟಿಸಿ, ದುಬಾರಿ ಗಾಡಿ ಕೊಡಿಸಿ. ಆದರೆ ಪವರ್‌ಫುಲ್ ಗಾಡಿ ಮಾತ್ರ ಕೊಡಿಸಬೇಡಿ. ಸಾಧ್ಯವಾದರೆ ಸರ್ಕಾರೀ ಗಂಟೆಗೆ 120 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸುವಂಥ ವಾಹನ ತಯಾರಿಸಲು ಅವಕಾಶ ಕೊಡಲೇಬಾರದು.

Tags:
COMMENT