ಪಿಂಜೋರ್‌ ಎಂತಹ ಒಂದು ಸುಂದರ ಉಡುಗೊರೆ ಎಂದರೆ ಅಲ್ಲಿ ಇತಿಹಾಸ ತನ್ನದೇ ಆದ ದೃಷ್ಟಿ ಬೀರುತ್ತಿರುವುದು ಗೋಚರಿಸುತ್ತದೆ. ನಿಸರ್ಗ ಅಲ್ಲಿ ಉಯ್ಯಾಲೆ ಆಡುತ್ತಿರುವಂತೆ, ಹಾಡು ಗುನುಗುನಿಸುತ್ತಿರುವಂತೆ ಭಾಸವಾಗುತ್ತದೆ.

ಔರಂಗ್‌ಜೇಬ್‌ನ ಚಿಕ್ಕಪ್ಪನ ಮಗ ಫಿದಾಯಿಖಾನ್‌ ಇದರ ಬಗ್ಗೆ ಪರಿಕಲ್ಪನೆ ಮಾಡಿಕೊಂಡಿದ್ದ. ಪ್ರವಾಸಿ ಸ್ಥಳಗಳು ತಮ್ಮ ವಿಶೇಷತೆಯಿಂದಾಗಿ ಗಮನಸೆಳೆಯುತ್ತವೆ. ಅದರಲ್ಲಿ ಐತಿಹಾಸಿಕತೆ ಏನಾದರೂ ಸೇರ್ಪಡೆಗೊಂಡಿದ್ದರೆ, ಅದರ ಮಹತ್ವ ಮತ್ತು ಆಕರ್ಷಣೆ ಇನ್ನಷ್ಟು ಹೆಚ್ಚುತ್ತದೆ.

ಉತ್ತರ ಭಾರತದಲ್ಲಿ ಅನೇಕ ಐತಿಹಾಸಿಕ ಮಹತ್ವದ ಸ್ಥಳಗಳಿವೆ. ಅದರಲ್ಲಿ ಪಿಂಜೋರ್‌ ಗಾರ್ಡನ್‌ ಮೊಘಲ್ ವಾಸ್ತುಶೈಲಿಯ ಒಂದು ಅಪ್ರತಿಮ ಉದಾಹರಣೆ ಎಂದೇ ಹೇಳಬಹುದು. ಈಗ ಅದನ್ನು `ಮಹಾರಾಜಾ ಆಫ್‌ ಪಟಿಯಾಲಾ ಯಾದೀಂದ್ರ’ ಎಂದು ಕರೆಯಲಾಗುತ್ತದೆ. ಇದು ಚಂಡೀಗ್‌ ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಚಂಡೀಗಡ್‌ನಿಂದ 23 ಕಿ.ಮೀ. ದೂರದಲ್ಲಿ ಈ ಸುಂದರ ಉದ್ಯಾನ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುತ್ತದೆ.

ಹೀಗೆ ರೂಪುಗೊಂಡಿತು ಉದ್ಯಾನ!

17ನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ಮೊಘಲರ ಆಡಳಿತ ಇತ್ತು. ಆಗಿನ ಔರಂಗ್‌ಜೇಬ್‌ ಮೊಘಲ್ ದೊರೆಯಾಗಿದ್ದ. ಆತನ ಚಿಕ್ಕಪ್ಪನ ಮಗ ಫಿದಾಯಿಖಾನ್‌  ಅತ್ಯುತ್ತಮ ವಾಸ್ತುತಜ್ಞನಾಗಿದ್ದ. ಅವನಿಗೆ ಈ ಒಂದು ಉದ್ಯಾನದ ಪರಿಕಲ್ಪನೆ ಮೂಡಿತ್ತು. ಮೊಘಲ್ ವಾಸ್ತು ವಿಧಾನದಲ್ಲಿ ನಿರ್ಮಾಣಗೊಂಡ ಪಿಂಜೋರ್‌ ಗಾರ್ಡನ್‌ನ ಹೆಸರು ಅಲ್ಲಿದ್ದ `ಪಿಂಜೋರ್‌’ ಹೆಸರಿನ ಊರಿನಿಂದಾಗಿ ಬಂದಿತ್ತು.

1658-1707ರ ಅವಧಿಯಲ್ಲಿ ಈ ಉದ್ಯಾನದ ನಿರ್ವಹಣೆ ಕಾರ್ಯ ಸರಿಯಾಗಿ ನಡೆಯದೇ ಇದ್ದುದರಿಂದ ಅದು ದಟ್ಟಾರಣ್ಯದ ಸ್ವರೂಪ ಪಡೆದುಕೊಂಡಿತು. ಅದೇ ಸಂದರ್ಭದಲ್ಲಿ ಪಟಿಯಾಲಾದ ಮಹಾರಾಜ ಯಾದೀಂದ್ರನ ದೃಷ್ಟಿ ಈ ಉದ್ಯಾನದ ಮೇಲೆ ಬಿತ್ತು. ಅವನು ಆ ಉದ್ಯಾನದ ಹೆಸರನ್ನು `ಯಾದೀಂದ್ರ ಗಾರ್ಡನ್‌’ ಎಂದಿಟ್ಟ. ಆದರೆ ಈಗಲೂ ಜನರು ಈ ಉದ್ಯಾನವನ್ನು `ಪಿಂಜೋರ್‌ ಗಾರ್ಡನ್‌’ ಎಂದೇ ಕರೆಯುತ್ತಾರೆ. ಗಾರ್ಡನ್‌ನ ನಿರ್ವಹಣೆ ಈಗ ಹರಿಯಾಣ ಸರ್ಕಾರ ನೋಡಿಕೊಳ್ಳುತ್ತಿದೆ.

ಪಿಂಜೋರ್‌ ಗಾರ್ಡನ್‌ ವಾಸ್ತುಕಲೆಯ ಪ್ರಕಾರ ಒಂದು ವಿಶಿಷ್ಟ ನಮೂನೆಯಾಗಿದೆ. ಉದ್ಯಾನದ ಪ್ರವೇಶದ್ವಾರ ಚಂಡೀಗರ್-ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯ ಕಡೆಗೆ ಇದೆ. ಪ್ರವೇಶ ದ್ವಾರದ ವಿನ್ಯಾಸ ಮೊಘಲ್ ರಾಜಸ್ತಾನಿ ವಾಸ್ತುಶಿಲ್ಪದ ಸಂಗಮದಂತಿದೆ. ಅದರ ಭಾರಿ ಬಾಗಿಲನ್ನು ತೆಗೆಯುವುದು ಕಷ್ಟದ ಕೆಲಸವೇ ಸರಿ. ಒಳಗೆ ಹೋಗುತ್ತಿದ್ದಂತೆ ನಾವು ಯಾವುದೊ ಕಿನ್ನರಲೋಕದಲ್ಲಿ ಪ್ರವೇಶಿಸಿದಂತೆ ಅನುಭವಾಗುತ್ತದೆ.

ಕಣ್ಣುಗಳಿಗೆ ತಂಪು ಅನುಭೂತಿ ನೀಡುವ ಇದು ರಾಷ್ಟ್ರೀಯ ಹೆದ್ದಾರಿ 23ರಲ್ಲಿ ಚಂಡೀಗರ್ ನಿಂದ 22 ಕಿ.ಮೀ. ಹಾಗೂ ಪಂಚಕುಲಾದಿಂದ 15 ಕಿ.ಮೀ. ದೂರದಲ್ಲಿರುವ ಈ ಐತಿಹಾಸಿಕ ಉದ್ಯಾನ ಹಲವು ಮೇಳಗಳಿಗೂ ಹೆಸರುವಾಸಿ.

ಪಿಂಜೋರ್‌ ಗಾರ್ಡನ್‌ 100ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಇಲ್ಲಿ ಆಗಮಿಸುವುದರ ಮೂಲಕ ಪ್ರವಾಸಿಗರು, ಮೈಮರೆತು ಪ್ರಕೃತಿಯ ಆಸ್ವಾದನೆಯಲ್ಲಿ ಮಗ್ನರಾಗಿಬಿಡುತ್ತಾರೆ. ಉದ್ಯಾನದ ಹಸಿರು ಹುಲ್ಲಿನ ಮೇಲೆ ಕುಳಿತು ಕುಟುಂಬ ಸಮೇತ ಊಟ ಮಾಡುವ ಮಜವೇ ಬೇರೆಯಾಗಿರುತ್ತದೆ. ಹಲವು ಸಿನಿಮಾಗಳಲ್ಲೂ ಈ ಉದ್ಯಾನದ ಚಿತ್ರೀಕರಣ ಪ್ರಮುಖ ಆಕರ್ಷಣೆಯಾಗಿದೆ.

ಉದ್ಯಾನದ ನಟ್ಟನಡುವೆ ಅಳವಡಿಸಲಾಗಿರುವ ಕಾರಂಜಿಗಳ ಸಾಲು ಚಮತ್ಕಾರಿ ಪ್ರಭಾವ ಬೀರುತ್ತವೆ. ಉದ್ಯಾನದಲ್ಲಿ ಬಹಳಷ್ಟು ಜನರು ತಂಪಿನ ಅನುಭೂತಿ ಮಾಡಿಕೊಳ್ಳಲು ಕಾರಂಜಿಯ ತುಂತುರು ಹನಿಗಳಿಗೆ ಮೈಯೊಡ್ಡಿ ನಿಂತಿರುತ್ತಾರೆ.

ಭೀಮಾದೇವಿ ಮಂದಿರ

ಪಿಂಜೋರ್‌ ಗಾರ್ಡನ್‌ ಬೇರೊಂದು ಕಾರಣದಿಂದಲೂ ಪ್ರಸಿದ್ಧವಾಗಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ, ಪಿಂಜೋರ್‌ ಗಾರ್ಡನ್ 1658 ರಿಂದ 1707ರ ಅವಧಿಯಲ್ಲಿ ನಿರ್ಮಾಣಗೊಂಡಿತ್ತು. ಭೀಮಾದೇವಿ ಮಂದಿರದ ನಿರ್ಮಾಣ ಈ ಉದ್ಯಾನದ ಸಮೀಪವೇ 8 ರಿಂದ 11ನೇ ಶತಮಾನದ ನಡುವೆ ಆಗಿತ್ತು.

ಇತಿಹಾಸ ತಜ್ಞರ ಪ್ರಕಾರ, ಈ ಪ್ರಾಚೀನ ಮಂದಿರದ ನಿರ್ಮಾಣ ಗುರ್ಜರ ಪ್ರತಿಹಾರಿಯ ಕಾಲದಲ್ಲಿ ಆಗಿತ್ತು. ಕಾಲಾಂತರದಲ್ಲಿ ಮೊಘಲ್ ದೊರೆಗಳು ಅದಕ್ಕೆ ಭಾರಿ ಹಾನಿಯನ್ನುಂಟು ಮಾಡಿದರು. 1974ರಲ್ಲಿ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಿಂದ ಅನೇಕ ಸಂಗತಿಗಳು ಬೆಳಕಿಗೆ ಬಂದಿವೆ. ಈ ಮಂದಿರ 8 ರಿಂದ 11ನೇ ಶತಮಾನದ ಮಧ್ಯದಲ್ಲಿ ನಿರ್ಮಾಣವಾಗಿತ್ತೆಂದು ಹೇಳಲಾಗುತ್ತದೆ. ಈ ಮಂದಿರನ್ನು ಪಂಜಾಬ್‌ ಏನ್ಶಿಯಂಟ್‌ ಅಂಡ್‌ ಹಿಸ್ಟಾರಿಕ್‌ ಮಾನ್ಯುಮೆಂಟ್ಸ್ ಅಂಡ್‌ ಆರ್ಕಿಯಾಲಜಿಕ್‌ ಸೈಟ್ಸ್ ಅಂಡ್‌ ರಿಮೇನ್ಸ್ ಆ್ಯಕ್ಟ್ 1964ರನ್ವಯ ಈ ಮಂದಿರವನ್ನು ಸುರಕ್ಷಿತ ತಾಣವೆಂದು ಘೋಷಿಸಲಾಗಿದೆ. ವಾಸ್ತುಕಲೆಯ ಈ ತಾಣವನ್ನು ಖಜುರಾಹೋ ಹಾಗೂ ಭುವನೇಶ್ವರ ಮಂದಿರದ ಸಮಕಾಲೀನ ಎಂದೂ ಭಾವಿಸಲಾಗುತ್ತದೆ.

ಈಗ ಭೀಮಾದೇವಿ ಮಂದಿರದ ಭಗ್ನ ಭಾಗದಲ್ಲಿ ಶೇ.85ನ್ನು ಉಪಯೋಗಿಸಿಕೊಂಡು `ಓಪನ್‌ ಏರ್‌ ಮ್ಯೂಝಿಯಂ’ ಸ್ಥಾಪನೆ ಮಾಡಲಾಗಿದೆ.

1399ರಲ್ಲಿ ತೈಮೂರ ಲಂಗ್‌ ಭಾರತದ ಮೇಲೆ ಆಕ್ರಮಣ ಮಾಡಿದ್ದ. ಆ ಸಮಯದಲ್ಲೂ ಕೂಡ ಹಿಂದೂ ದೇವಾಲಯಗಳು ಭಾರಿ ಹಲ್ಲೆಗೆ ತುತ್ತಾಗಿದ್ದವು. 1661ರಲ್ಲಿ ಫಿದಾಯಿಖಾನ್‌ ಇದನ್ನು ಸಂಪೂರ್ಣ ನಾಶ ಮಾಡಿದ. ಏಕೆಂದರೆ ಪಿಂಜೋರ್‌ ಗಾರ್ಡನ್‌ಗೆ ಜಾಗದ ಅವಶ್ಯಕತೆ ನೀಗಿಸಲು.

1974ರಲ್ಲಿ ನಡೆಸಿದ ಉತ್ಖನನದ ಸಂದರ್ಭದಲ್ಲಿ 8 ರಿಂದ 12ನೇ ಶತಮಾನ ಸುಮಾರು 100ಕ್ಕೂ ಹೆಚ್ಚು ಸುಂದರ ಅವಶೇಷಗಳನ್ನು ಸಂಗ್ರಹಿಸಲಾಯಿತು. ಅವನ್ನು 8 ಹೆಕ್ಟೇರ್‌ ಪ್ರದೇಶದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಲಾಗಿದೆ. ಈ ಮಂದಿರವನ್ನು ಐತಿಹಾಸಿಕ ದೃಷ್ಟಿಯಲ್ಲಿ `ಪಂಚಾಯತ್‌’ ಮಾದರಿಯ ಮಂದಿರ ವಿಭಾಗದಲ್ಲಿ ವಿಂಗಡಿಸಲಾಗಿದೆ.

ಪಿಂಜೋರ್‌ ಗ್ರಾಮ ಶಿವಾಲಿಕ ಬೆಟ್ಟಗಳ ಸಾಲಿನ ತಪ್ಪಲಿನಲ್ಲಿ ನೆಲೆಗೊಂಡಿದೆ. ಅದು ಪಿಂಜೋರ್‌ ಉದ್ಯಾನದಿಂದಾಗಿ ಇಂದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಪಿಂಜೋರ್‌ ಉದ್ಯಾನದಿಂದ 5 ಕಿ.ಮೀ. ದೂರದಲ್ಲಿ ಕಾಲ್ಕಾ ಇದೆ. ಅಲ್ಲಿಂದ ಶಿಮ್ಲಾ ತನಕ ಟಾಯ್ ಟ್ರೇನ್‌ ಇದೆ. ಅದರ ಪ್ರವಾಸ ಅವಿಸ್ಮರಣೀಯವಾಗಿರುತ್ತದೆ.

ಪಿಂಜೋರ್‌ ಉದ್ಯಾನದ ಸೌಂದರ್ಯಕ್ಕೆ 2 ಸಂಗತಿಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಉದ್ಯಾನದ ನಟ್ಟನಡುವೆ ಹಾಯ್ದು ಹೋಗುವ ಝರಿಯ ನೀರು ಅದರ ಎರಡೂ ಬದಿಗೆ ಸುತ್ತಾಡಲು ಪಾದಚಾರಿ ರಸ್ತೆ ನಿರ್ಮಿಸಲಾಗಿದೆ. ಇದರ ಹೊರತಾಗಿ ಎತ್ತರೆತ್ತರ ಪೈನ್‌ ಮರಗಳು ಕಣ್ಮನ ತುಂಬುತ್ತವೆ.

ಪಿ. ಅನುರಾಧಾ

ಏನು ವಿಶೇಷ?

ಪಿಂಜೋರ್‌ ಉದ್ಯಾನದಲ್ಲಿ ವರ್ಷದ ಬೇರೆ ಬೇರೆ ಅವಧಿಯಲ್ಲಿ ಕೆಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮೊದಲನೆಯದು ಬೈಸಾಕಿ (ಸಂತ) ಪರ್ವ. ಇದನ್ನು ಏಪ್ರಿಲ್ ‌ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಜೂನ್‌ ಅಥವಾ ಜುಲೈ ತಿಂಗಳಿನಲ್ಲಿ ಮಾವು ಹಬ್ಬ (ಮ್ಯಾಂಗೊ ಫೆಸ್ಟಿವಲ್‌) ನಡೆಯುತ್ತದೆ. ಇದು ಅತ್ಯಂತ ಜನಪ್ರಿಯ ಹಬ್ಬ.

ಹೇಗೆ ತಲುಪುದು?

ಚಂಡೀಗರ್ ಪಂಚಕುಲಾದಿಂದ ಬಸ್‌ ಅಥವಾ ಟ್ಯಾಕ್ಸಿಯಿಂದ ಪಿಂಜೋರ್‌ ಉದ್ಯಾನಕ್ಕೆ ತಲುಪಬಹುದು. ಅಂಬಾಲಾ, ಪಾಣಿಪತ್‌, ಕರ್ನಾಲ್ ‌ಹಾಗೂ ದೆಹಲಿ ಕಡೆಯಿಂದ ಶಿಮ್ಲಾಕ್ಕೆ ಸ್ವಂತ ವಾಹನಗಳಲ್ಲಿ ಹೋಗುವವರು ಪಿಂಜೋರ್‌ ಗಾರ್ಡನ್‌ನಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ ಮುಂದೆ ಸಾಗಬಹುದು.

Tags:
COMMENT