ಭಾರತೀಯ ಸಂಸ್ಕೃತಿಯು ಅನೇಕ ಆಯಾಮಗಳನ್ನು ಹೊಂದಿದ್ದು ಪ್ರತಿಯೊಂದರಲ್ಲಿಯೂ ವಿಶಿಷ್ಟ ಗುಣಲಕ್ಷಣಗಳನ್ನು ಕಾಣಬಹುದು. ಇಂತಹ ಭಾರತೀಯ ಸಂಸ್ಕೃತಿಯ ವಿಶಿಷ್ಟ ಗುಣಲಕ್ಷಣಗಳಲ್ಲಿ ಮೆಹಂದಿ ಕಲೆ ಕೂಡ ಒಂದು. ಈ ಮೆಹಂದಿ ಕಲೆ ಭಾರತೀಯತೆಯನ್ನು ಎತ್ತಿ ತೋರಿಸುತ್ತದೆ. ಮೆಹಂದಿ ಎಂಬುದು ಕಲೆ, ಸಂಸ್ಕೃತಿ, ಸೌಂದರ್ಯ ಸಾಧಕ ಮತ್ತು ಉದ್ಯೋಗವಾಗಿದೆ.
ಮೆಹಂದಿ ಎಂಬುದು ಒಂದು ಜಾತಿ, ಮತ, ಪಂಥ ಅಥವಾ ಧರ್ಮಕ್ಕೆ ಮೀಸಲಾಗದೆ ಪ್ರತಿಯೊಬ್ಬರ ಆಕರ್ಷಣೀಯ ಅಂಶವಾಗಿದ್ದು ಮೆಹಂದಿಯನ್ನು ಹಾಕಿಕೊಳ್ಳದ ಭಾರತೀಯ ಸ್ತ್ರೀ ಇರಲು ಸಾಧ್ಯವಿಲ್ಲ. ಇದು ಭಾರತೀಯ ಸಂಸ್ಕೃತಿ ಮತ್ತು ಜನಮನಗಳ ಪ್ರತಿಬಿಂಬವಾಗಿದೆ. ಪ್ರತಿ ಧಾರ್ಮಿಕ ಕಾರ್ಯ ಹಾಗೂ ಅನೇಕ ಸಮಾರಂಭಗಳಲ್ಲಿ ಸುಂದರವಾಗಿ ಕಾಣಲು ಇದರ ಪಾತ್ರ ಅಮೂಲ್ಯ. ಮುಖ್ಯವಾಗಿ ನಿಶ್ಚಿತಾರ್ಥ, ಗೃಹಪ್ರವೇಶ ಮತ್ತು ಮದುವೆ ಕಾರ್ಯಗಳ ಆಕರ್ಷಣೀಯ ಕೇಂದ್ರವೇ ಮೆಹಂದಿ. ಇದರಲ್ಲಿ ಅನೇಕ ಪ್ರಕಾರದ ಕಾಲಕೃತಿಗಳಿದ್ದು, ಹೆಣ್ಣುಮಕ್ಕಳ ಮತ್ತು ಸ್ತ್ರೀಯರ ಅಚ್ಚುಮೆಚ್ಚಿನ ಸೌಂದರ್ಯ ಭಂಡಾರವಾಗಿದ್ದು, ಮದುವೆ ಮತ್ತು ಇನ್ನಿತರ ಧಾರ್ಮಿಕ ಸಮಾರಂಭಗಳಲ್ಲಿ ಮೆಹಂದಿ ಚಿತ್ರಗಳನ್ನು ತೆಗೆಸಿಕೊಳ್ಳುತ್ತಾರೆ.
ಮೆಹೆಂದಿ ಕಲಾವಿದೆ
ಮೆಹಂದಿ ಎಂಬುದು ಕೇವಲ ಕಲೆ ಅಲ್ಲದೆ, ಉದ್ಯೋಗ ಮತ್ತು ಉದ್ದಿಮೆಯಾಗಿ ಬೆಳೆದಿದೆ. ಮೆಹಂದಿ ಪುಡಿ ಉತ್ಪಾದನೆ, ಮಾರಾಟ ಹಾಗೂ ಚಿತ್ರ ಬಿಡಿಸುವುದು ಪ್ರಗತಿಪರ ಉದ್ಯೋಗವಾಗಿದೆ. ಇಂತಹ ಉದ್ದಿಮೆ ದೊಡ್ಡ ನಗರಗಳಲ್ಲಿ ಸೀಮಿತವಾಗಿರದೆ ಸಣ್ಣ ನಗರ ಮತ್ತು ಪಟ್ಟಣಗಳಲ್ಲಿ ವಿಸ್ತರಿಸಿದೆ. ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಪ್ರತಿಭಾನ್ವಿತ ಕಲಾವಿದೆಯಾದ ಶೋಭಾರವರು ಮೆಹಂದಿ ಕಲೆಯಲ್ಲಿ ಪರಿಣಿತಿಯನ್ನು ಸಾಧಿಸಿದ್ದು, ಸಾಕಷ್ಟು ಅನುಭವವನ್ನು ಹೊಂದಿದ್ದಾರೆ.
ಇವರ ಮೆಹೆಂದಿ ಪಯಣ ತುಂಬಾ ರೋಚಕವಾಗಿದ್ದು, ಮೊದಲು ಮೆಹಂದಿ ಬಿಡಿಸುವುದು ಹವ್ಯಾಸವಾಗಿತ್ತು, ನಂತರ ಅದನ್ನೇ ಮುಖ್ಯ ಉದ್ಯೋಗವನ್ನಾಗಿಸಿಕೊಂಡು ಅದರಲ್ಲಿಯೇ ಯಶಸ್ಸನ್ನು ಸಾಧಿಸಿದ್ದಾರೆ. ತಮ್ಮ ಶಗುನ್ ಮೆಹಂದಿ ಕೇಂದ್ರವನ್ನು ವಿಜಯಪುರದಲ್ಲಿ ಸ್ಥಾಪಿಸಿದ್ದಾರೆ. ಈ ಕೇಂದ್ರ 18 ವರ್ಷಗಳಿಂದ ಕಾರ್ಯ ಮಾಡುತ್ತಿದ್ದು, ಸಾಕಷ್ಟು ಪ್ರಸಿದ್ಧಿಯನ್ನೂ ಪಡೆದಿದೆ. ಶೋಭಾ ಈ ಕ್ಷೇತ್ರದಲ್ಲಿ ಕೆಲಸ ಮಾಡಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದು, 2009ರಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗಹಿಸಿದ್ದಾರೆ.
ಮೆಹೆಂದಿ ನೈಪುಣ್ಯ
ಶೋಭಾ, ಕೆಲವೇ ಚಿತ್ರಗಳನ್ನು ತಮ್ಮ ಮೆಹೆಂದಿ ಬಿಡಿಸುವುದರಲ್ಲಿ ಬಳಸದೆ ತಮ್ಮದೇ ಆದ ಚಿತ್ರಗಳನ್ನು ರಚಿಸಿದ್ದಾರೆ. ಭಗಿನಿಯರಿಗೆ ಯಾವ ರೀತಿಯ ಚಿತ್ರಗಳು ಬೇಕೋ ಅಂತಹ ಚಿತ್ರಗಳನ್ನು ತೆಗೆಯುವಲ್ಲಿ ನಿಸ್ಸೀಮರು. ಇವರ ಕೈಚಳಕದಿಂದ ಹೊರಹೊಮ್ಮುವ ಚಿತ್ರಗಳು ಸಾಕಷ್ಟು ದಿನಗಳವರೆಗೆ ದಟ್ಟವಾಗಿ ಉಳಿಯುತ್ತವೆ. ಈ ಚಿತ್ರಗಳು ಕೇವಲ ಮೆಹೆಂದಿ ಚಿತ್ರ ಮಾತ್ರವೇ ಆಗಿದ್ದು ಶಾಶ್ವತವಾಗಿ ಉಳಿಯುವ ಹಚ್ಚೆ ಅಥವಾ ಟ್ಯಾಟೂ ಆಗಿರುವುದಿಲ್ಲ.
ಮೆಹಂದಿ ಮೇಲೆ ರಚಿಸಿರುವ ಇವರ ಪುಸ್ತಕ `ಶಗುನ್ ಬ್ರೈಡಲ್ ಡಿಸೈನ್ ಕಲೆಕ್ಷನ್’ ಸಂಪೂರ್ಣ ಭಾರತದಾದ್ಯಂತ ಮಾರಾಟವಾಗಿದ್ದು, ಹೆಮ್ಮೆಯ ವಿಷಯ. ಶೋಭಾ ತಮ್ಮ ಕಲೆಯನ್ನು ನಿರಂತರ ಆಧುನೀಕರಣಗೊಳಿಸುತ್ತಿರುವುದು ಇವರ ಯಶಸ್ಸಿನ ಹಿಂದಿನ ರಹಸ್ಯ. ಹೊಸ ಹೊಸ ಶೈಲಿಯ ಚಿತ್ರಗಳ ಮೂಲಕ ನಾನಾ ಬಗೆಯ ಭಾರತೀಯ ಶೈಲಿಯ ಚಿತ್ರಗಳನ್ನು ಸ್ವತಃ ಕಲಿತು ಪರಿಚಯಿಸುತ್ತಾರೆ.
ಅಪರೂಪದ ಚಿತ್ತಾರ
ಮೆಹೆಂದಿ ಕಲೆಯಲ್ಲಿ ವಿವಿಧ ಶೈಲಿಗಳಿದ್ದು, ಮದುವೆ ಸಮಾರಂಭಗಳಿಗೆ ಬಳಸುವ ಡೋಲು, ಶಹನಾಯಿ, ಕಲಶ ಡೋಲಿ ಮತ್ತು ಬರಟಿ ದೃಶ್ಯಗಳು, ಪೆಹರ ಅಂದರೆ ಸಪ್ತಪದಿ, ರುಮಾಲ ದೃಶ್ಯಗಳು ಹಾಗೂ ವಿಶಿಷ್ಟ ದೇವತೆಗಳಾದ ಗಣೇಶ ಮತ್ತು ರಾಧಾಕೃಷ್ಣರ ಆಕೃತಿಗಳನ್ನು ಬಿಡಿಸುವಲ್ಲಿ ಪ್ರವೀಣರು. ಇವರು ಬಿಡಿಸಿದ ಮೆಹಂದಿ ಚಿತ್ರಗಳು ಅನೇಕ ಪ್ರದರ್ಶನಗಳಲ್ಲಿ ಕಂಡುಬಂದಿವೆ ಹಾಗೂ ಮದುವೆ, ಸೀಮಂತ, ವಿವಾಹ ವಾರ್ಷಿಕೋತ್ಸವ ಹಾಗೂ ಅನೇಕ ಶುಭಕರ ಕಾರ್ಯಕ್ರಮಗಳಲ್ಲಿ ಹೆಣ್ಣುಮಕ್ಕಳು ಇವರಿಂದ ಅಲಂಕೃತಗೊಂಡಿದ್ದಾರೆ. ಇವರು ಇನ್ನಷ್ಟು ಸಾಧನೆ ಮಾಡಿ ನಮ್ಮ ದೇಶಕ್ಕೆ ಹೆಚ್ಚಿನ ಕೀರ್ತಿ ತರಲೆಂದು ಗೃಹಶೋಭಾ ಹಾರೈಸುತ್ತಾಳೆ.
– ಪ್ರತಿನಿಧಿ