ಪರದೆಗಳು ಮನೆಯ ಒಳಾಂಗಣದ ಪ್ರಮುಖ ಭಾಗವೇ ಆಗಿಹೋಗಿವೆ. ಅವು ಮನೆಯಲ್ಲಿ ಪ್ರವೇಶಿಸುವ ಅತಿಥಿಗಳ ಮನಸ್ಸಿನಲ್ಲಿ ಮನೆಯ ಅಲಂಕಾರದ ಕುರಿತಂತೆ ಜಿಜ್ಞಾಸೆ ಹುಟ್ಟಿಸುತ್ತವೆ. ಇದರರ್ಥ ಪ್ರವೇಶ ದ್ವಾರದ ವಿಶೇಷತೆಯೇ ಈ ಪರದೆಗಳಾಗಿರುತ್ತವೆ. ಸಪ್ತವರ್ಣದ ಈ ಪರದೆಗಳು ಮನೆಯ ಅಲಂಕಾರವನ್ನಷ್ಟೆ ಹೆಚ್ಚಿಸುವುದಿಲ್ಲ, ಕೋಣೆಯ ಪಾರ್ಟಿಶನ್ ಹಾಗೂ ಪ್ರೈವೆಸಿಯನ್ನು ಕಾಯ್ದು ಕೊಂಡು ಹೋಗಲೂ ನೆರವಾಗುತ್ತವೆ. ಆಕರ್ಷಕ ಪರದೆಗಳಿಂದಾಗಿ ಮನೆಯ ಗೋಡೆ, ಬಾಗಿಲು, ಕಿಟಕಿ ಹಾಗೂ ಪೀಠೋಪಕರಣಗಳ ಶೋಭೆಯೂ ಹೆಚ್ಚುತ್ತವೆ. ಪರದೆಗಳ ಆಯ್ಕೆ ಹೇಗೆ ಮಾಡ ಬೇಕೆಂದರೆ, ಅದು ನಿಮ್ಮ ಕ್ರಿಯಾಶೀಲತೆಯನ್ನಷ್ಟೆ ಅಲ್ಲ, ಮನೆಯ ಸೌಂದರ್ಯವನ್ನು ಕೂಡ ಹೆಚ್ಚಿಸುವಂತಿರಬೇಕು.
ಪರದೆಗಳನ್ನು ಆಯ್ಕೆ ಮಾಡುವಾಗ ಒಂದು ಸಂಗತಿ ಗಮನದಲ್ಲಿರಲಿ. ಅವು ಮನೆಯ ಗೋಡೆ, ಪೀಠೋಪಕರಣ, ನೆಲಹಾಸುಗಳಿಗೆ ಹೊಂದಾಣಿಕೆ ಆಗುವಂತಿರಲಿ.
ನಿಮ್ಮ ಮನೆಯೊಳಗೆ ಬಿಸಿಲು ಬರುತ್ತಿದ್ದಲ್ಲಿ, ಲೈನಿಂಗ್ ಇರುವ ಪರದೆಗಳನ್ನು ಆಯ್ಕೆ ಮಾಡಿ. ಇವು ಬಿಸಿಲಿನಿಂದ ರಕ್ಷಣೆ ನೀಡುವುದರ ಜೊತೆಗೆ ಕೋಣೆಗೆ ಸೋಬರ್ ಲುಕ್ ನೀಡುತ್ತವೆ.
ನೀವು 2 ಲೇಯರ್ ಇರುವ ಪರದೆಗಳನ್ನು ಆಯ್ಕೆ ಮಾಡುತ್ತಿದ್ದಲ್ಲಿ, ಒಂದರ ಫ್ಯಾಬ್ರಿಕ್ ಲೈಟ್ ಆಗಿರಲಿ, ಇನ್ನೊಂದರ ಫ್ಯಾಬ್ರಿಕ್ ಗಾಢವಾಗಿರಲಿ.
ಹಗಲು ಹೊತ್ತಿನಲ್ಲಿ ಪರದೆಗಳನ್ನು ಆಕರ್ಷಕ ರೀತಿಯಿಂದ ವಿಶಿಷ್ಟ ಬಣ್ಣದ ದಾರವೊಂದರಿಂದ ಕಟ್ಟಿ ಇಡಬಹುದು.
ನಿಮ್ಮ ಕೋಣೆಯಲ್ಲಿ ಬಿಸಿಲು ಪ್ರವೇಶ ಮಾಡದೇ ಇದ್ದರೆ ಕಿಟಕಿಗಳಿಗೆ ಸೌಮ್ಯ ವರ್ಣದ ಪರದೆಗಳನ್ನು ಆಯ್ಕೆ ಮಾಡಿ. ಕಮಾನಿನ ಆಕಾರದ ಕಿಟಕಿಗಳಿಗೆ ನೆಟ್, ಕಸೂತಿ, ಬಾರ್ಡರ್ ಹಾಗೂ ಲೇಸ್ನಿಂದ ಸಿಂಗರಿಸಿದ ಆಕರ್ಷಕ ಪರದೆಗಳ ಆಯ್ಕೆ ಮಾಡಬಹುದು.
ಕಿಚನ್, ಬೆಡ್ ರೂಮ್ ಹಾಗೂ ಲಿವಿಂಗ್ ರೂಮಿಗೆ ಬೇರೆ ಬೇರೆ ಪರದೆಗಳನ್ನು ಆಯ್ಕೆ ಮಾಡಿ. ಅಡುಗೆಮನೆಗೆ ತೆಳ್ಳನೆಯ ಲೈನಿಂಗ್ ಇರುವಂಥದು, ಬೆಡ್ರೂಮಿಗೆ ಕಾಟನ್ದ್ದು ಮತ್ತು ಲಿವಿಂಗ್ ರೂಮಿಗೆ ಸ್ಯಾಟಿನ್ ಮತ್ತು ಕಾಟನ್ ಪಾಲಿಯೆಸ್ಟರ್ನ ತೆಳು ವರ್ಣದ ಮಿಶ್ರ ಫ್ಯಾಬ್ರಿಕ್ನದ್ದು ಆಯ್ಕೆ ಮಾಡಬಹುದು.
ಬೆಡ್ರೂಮಿನ ಕಿಟಕಿಗಳಿಗೆ ಸೌಮ್ಯ ವರ್ಣದ ಕಾಟನ್ ಪರದೆಗಳನ್ನು ಆಯ್ಕೆ ಮಾಡಿ. ಏಕೆಂದರೆ ಹೊರಗಿನ ತಣ್ಣನೆಯ ಗಾಳಿಯ ಮಜವನ್ನು ಕೂಡ ಸವಿಯುವಂತಾಗಬೇಕು.
ಪರದೆಗಳಿಗೆ ಹೊಸ ಲುಕ್ ಕೊಡಲು ಅದಕ್ಕೆ ಲೇಸ್ ಹಾಗೂ ಬಟನ್ ಹಚ್ಚಿ. ನಿಮಗೆ ಇಷ್ಟವಾಗುವುದಾದರೆ ಪರದೆಗಳಿಗೆ ಗೆಜ್ಜೆ ಕೂಡ ಅಳವಡಿಸಬಹುದು. ಗಾಳಿ ಬಂದಾಗ ಅಲ್ಲಾಡುವ ಪರದೆಗಳು `ವಿಂಡ್ ಚೈಮ್’ನಂತೆ ಸದ್ದು ಮಾಡುತ್ತವೆ.
ಪರದೆಗಳನ್ನು ಆಯ್ಕೆ ಮಾಡುವ ಮುನ್ನ ಬಾಗಿಲು ಕಿಟಕಿಗಳ ಉದ್ದಗಲ ಎಷ್ಟಿದೆ ಎಂದು ಒಂದು ಚೀಟಿಯಲ್ಲಿ ಬರೆದಿಟ್ಟುಕೊಂಡು ಹೋಗಿ. ನೀವು ಆಯ್ಕೆ ಮಾಡುವ ಪರದೆ ಹೆಚ್ಚು ಉದ್ದ ಅಥವಾ ಅಗಲ ಆಗದಿರಲಿ.
ಫ್ಯಾಬ್ರಿಕ್ ಮತ್ತು ಮೆಟೀರಿಯಲ್ ಆಯ್ಕೆು
ಮಾರುಕಟ್ಟೆಯಲ್ಲಿ ಅನೇಕ ಬಗೆಯ ಪರದೆಗಳು ಲಭ್ಯವಿವೆ. ನೀವು ನಿಮ್ಮ ಇಷ್ಟ ಹಾಗೂ ಅಗತ್ಯಕ್ಕೆ ಅನುಗುಣವಾಗಿ. ಖರೀದಿಸಿ.
ಪರದೆಗಳಲ್ಲಿ ವೆಲ್ವೆಟ್, ಪಾಲಿಯೆಸ್ಟರ್, ಕ್ರಶ್, ಕಾಟನ್, ಸಿಂಥೆಟಿಕ್ ಮಿಕ್ಸ್, ವಿಸ್ಕೋಸ್, ಸ್ಯಾಟಿನ್, ಸಿಲ್ಕ್ ಹೀಗೆ ಅನೇಕ ಬಗೆಗಳಿವೆ.
ಅರಮನೆಯಂಥ ರಾಯಲ್ ಲುಕ್ಗಾಗಿ ಸಿಲ್ಕ್ ಹಾಗೂ ವಲ್ವೆಟ್ನ ಪರದೆಗಳನ್ನು ಆಯ್ಕೆ ಮಾಡಿ.
ಕಂಟೆಂಪರರಿ ಲುಕ್ ಹಾಗೂ ಪುಟ್ಟ ಮನೆಗೆ ಸಿಲ್ಕ್ ಸ್ಯಾಟಿನ್, ಕಾಟನ್ ಸ್ಯಾಟಿನ್, ಕಾಟನ್ ಪಾಲಿಯೆಸ್ಟರ್, ಸಿಲ್ಕ್ ಪಾಲಿಯೆಸ್ಟರ್ ಫ್ಯಾಬ್ರಿಕ್ನ್ನು ಆಯ್ಕೆ ಮಾಡಿಕೊಳ್ಳಬಹುದು.
ಒಂದೇ ಬಣ್ಣದ ಫರ್ನಿಚರ್ನೊಂದಿಗೆ ಪ್ರಿಂಟೆಡ್ ಅಥವಾ ಟೆಕ್ಸ್ ಚರ್ನ ಪರದೆಗಳನ್ನು ಆಯ್ಕೆ ಮಾಡಿ. ಒಂದು ವೇಳೆ ನಿಮ್ಮ ಮನೆಯ ಪೀಠೋಪಕರಣಗಳು ಪ್ರಿಂಟೆಡ್ ಮತ್ತು ಟೆಕ್ಸ್ ಚರ್ ಸ್ವರೂಪದ್ದಾಗಿದ್ದರೆ, ಒಂದೇ ವರ್ಣದ ಪರದೆಗಳನ್ನು ಆಯ್ಕೆ ಮಾಡಿ. ನೀವು ಇಷ್ಟಪಟ್ಟರೆ ಪ್ರಿಂಟೆಡ್ ಹಾಗೂ ಪ್ಲೇನ್ ಪರದೆಗಳ ಕಾಂಬಿನೇಶನ್ ಕೂಡ ಆಯ್ಕೆ ಮಾಡಬಹುದು.
ಪ್ರೈವೆಸಿಗಾಗಿ ಲೈನಿಂಗ್ವುಳ್ಳ, ಮಂದಬೆಳಕಿಗಾಗಿ ಟ್ರಾನ್ಸ್ ಪರೆಂಟ್ ಪರದೆಗಳನ್ನು ಆಯ್ಕೆ ಮಾಡಿ.
ನೀವು ನಿಮ್ಮ ಹಳೆಯ ಸಿಲ್ಕ್ ನ ಬಾರ್ಡರ್ವುಳ್ಳ ಸೀರೆಗೂ ಕೂಡ ಪರದೆಯ ಲುಕ್ ಕೊಡಬಹುದು.
ಪರದೆಗಳ ನಿರ್ವಹಣೆ ಕಾಲಕಾಲಕ್ಕೆ ಪರದೆಗಳನ್ನು ಸ್ವಚ್ಛಗೊಳಿಸುತ್ತಾ ಇರಿ. ಪರದೆಯ ಫ್ಯಾಬ್ರಿಕ್ಗೆ ಅನುಸಾರ ಸ್ವಚ್ಛಗೊಳಿಸಿ. ವೆಲ್ವೆಟ್ ಹಾಗೂ ಸ್ಯಾಟಿನ್ ಪರದೆಗಳನ್ನು ಮನೆಯಲ್ಲಿ ಸ್ವಚ್ಛಗೊಳಿಸುವ ಬದಲಿಗೆ ಡ್ರೈಕ್ಲೀನ್ ಮಾಡಿ. ಕಾಟನ್ ಹಾಗೂ ಕಾಟನ್ ಮಿಕ್ಸ್ ಫ್ಯಾಬ್ರಿಕ್ನ್ನು ಮನೆಯಲ್ಲಿಯೇ ಸ್ವಚ್ಛಗೊಳಿಸಬಹುದು. ಆದರೆ ಅವನ್ನು ಇಸ್ತ್ರಿ ಮಾಡದೆಯೇ ಕಿಟಕಿಗೆ ಅಳವಡಿಸಬೇಡಿ. ಪರದೆಗಳು ಹೆಚ್ಚು ವರ್ಷ ಬಾಳಿಕೆ ಬರಬೇಕು ಎಂದರೆ ಲೈನಿಂಗ್ ಇರುವ ಪರದೆಗಳನ್ನು ಆಯ್ಕೆ ಮಾಡಿ.
– ಪ್ರತಿಭಾ ಭಟ್