ಇತ್ತೀಚೆಗೆ ಸಿನಿಮಾರಂಗ ಹೊಸಬರನ್ನು ಕೈಬೀಸಿ ಕರೆಯುತ್ತಿದೆ. ಇದು ಹೊಸಬರ ಕಾಲ ಎನ್ನುವಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಹೊಸಬರ ಚಿತ್ರಗಳು ಗಳಿಕೆಯಲ್ಲೂ ಮುಂದಿವೆ. ಹಾಗಾಗಿ ಎಲ್ಲ ಹೊಸಬರು ಅದರಲ್ಲೂ ಪ್ರತಿಭಾವಂತರು ತಮ್ಮ ಅದೃಷ್ಟ ಬದಲಾಯಿಸಿಕೊಳ್ಳಲು ಸ್ಯಾಂಡಲ್‌ವುಡ್‌ಗೆ ಹರಿದುಬರುತ್ತಿದ್ದಾರೆ. ನಿಜಕ್ಕೂ ಇದೊಂದು ಒಳ್ಳೆಯ ಬೆಳವಣಿಗೆ.
ಮೈಸೂರಿನ ಚೆಲುವೆ ರೋಹಿಣಿ ಭಾರದ್ವಾಜ್ ಈಗಷ್ಟೇ ಚಿತ್ರರಂಗಕ್ಕೆ ಕಾಲಿಡುತ್ತಿರುವ ಹೊಸ ಪ್ರತಿಭೆ. ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ. ನವೀನ್ ಕೃಷ್ಣ ನಿರ್ದೇಶನದ `ಈ ಕಲರವ’ ಚಿತ್ರ ಕೂಡ ಅದರಲ್ಲೊಂದಾಗಿದೆ.
ರೋಹಿಣಿಯೊಂದಿಗೆ ನಡೆಸಿದ ಮಾತುಕಥೆ ಇಲ್ಲಿ ಸಂದರ್ಶನವಾಗಿ ಹರಿದುಬಂದಿದೆ.
ನೀವು ಮೈಸೂರಿನವರಾ?
ಏಳನೇ ಕ್ಲಾಸಿನವರೆಗೂ ಬೆಂಗಳೂರಿನಲ್ಲೇ ಇದ್ದೆವು. ಅದಾದ ನಂತರ ಮೈಸೂರಿಗೆ ಶಿಫ್ಟ್ ಆದೆವು. ಅಲ್ಲಿಂದ ಶುರುವಾಯ್ತು ಮೈಸೂರಿನಲ್ಲೇ ನನ್ನ ವಿದ್ಯಾಭ್ಯಾಸ. ಇದೀಗ ಎರಡನೇ ವರ್ಷದ ಲಾ ಸ್ಟೂಡೆಂಟ್.
ಸಿನಿಮಾ ಬಗ್ಗೆ ಆಸಕ್ತಿ ಹೇಗೆ?
ನಮ್ಮದು ಕಲಾವಿದರ ಕುಟುಂಬ ಅಂತಾನೇ ಹೇಳಬಹುದು. ನಮ್ಮ ಅಜ್ಜಿ ಕನ್ನಡ ಸಿನಿಮಾ ನಟಿಯಾಗಿದ್ದವರು. `ಶರಪಂಜರ’ ಚಿತ್ರದಲ್ಲಿ ನಟಿಸಿದ್ದರಲ್ಲ ಶಾಂತಮ್ಮ ಅಂತ ಅವರೇ. ನಮ್ಮ ತಾಯಿ ಕೂಡ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ನಟನೆ ಬಗ್ಗೆ ನನಗೂ ಆಸೆ ಮೂಡಿದ್ದು ಸಹಜ. ಚಿಕ್ಕವಳಾಗಿದ್ದಾಗ ನಾಟಕ, ಡ್ಯಾನ್ಸ್ ಅಂತ ಮಾಡುತ್ತಾ ಇದ್ದೆ. ಒಂದು ವಿಷಯದಲ್ಲಿ ನಾನು ತುಂಬಾನೇ ಲಕ್ಕಿ! ನಾನು ಯಾವುದೇ ಶೋ ಮಾಡಿದರೂ ಗೆದ್ದು ಬರುತ್ತಿದ್ದೆ.
ಮಾಡೆಲಿಂಗ್ ಸೇರಿದ್ದು ಹೇಗೆ?
ಅದೂ ಕೂಡಾ ನನ್ನ ಲಕ್. ಜಯಂತಿ ಬಲ್ಲಾಳ್ ಅವರ ಫ್ಯಾಷನ್ ಶೋನಲ್ಲಿ ಭಾಗವಹಿಸಿದಾಗ ಅಲ್ಲಿಯೂ ಗೆಲುವನ್ನು ಕಂಡೆ. ಅದಾದ ನಂತರ 2013ರಲ್ಲಿ ನಾನು `ಮಿಸ್ ಕರ್ನಾಟಕ’ ಆಗಿ ಆರಿಸಿ ಬಂದೆ. ನಿಜಕ್ಕೂ ನಾನು ಲಕ್ಕಿ ಅನಿಸಿತು. ಸಿನಿಮಾರಂಗಕ್ಕೆ ಬರುವುದಕ್ಕಾಗಿ ಮಾಡೆಲಿಂಗ್ ಮುಂದುವರಿಸಲಿಲ್ಲ. ಈ ರಂಗದಲ್ಲೂ ಅದೃಷ್ಟ ನನ್ನ ಕೈಬಿಡಲ್ಲ ಅಂದ್ಕೊಂಡಿದ್ದೀನಿ.
ನವೀನ್ ಕೃಷ್ಣ ಅವರ ಚಿತ್ರದಲ್ಲಿ ನಿಮ್ಮ ಪಾತ್ರ?
`ಈ ಕಲರವ’ ಅಂತ ನಾನು ನವೀನ್ ಕೃಷ್ಣ ಅವರ ಜೋಡಿಯಾಗಿ ನಟಿಸುತ್ತಿದ್ದೀನಿ. ಪಕ್ಕಾ ಕಮರ್ಷಿಯಲ್ ಚಿತ್ರ. ಹಾಡು, ಫೈಟ್ ಎಲ್ಲ ಉಂಟು. ಹಳ್ಳಿಯಲ್ಲಿ ನಡೆಯುವ ಲವ್ ಸ್ಟೋರಿಯಾದರೂ ನನ್ನದು ಮಾಡರ್ನ್ ಹುಡುಗಿ ಪಾತ್ರ. ತುಂಬಾ ಚೆನ್ನಾಗಿದೆ. ನಾನಂತೂ ತುಂಬಾನೇ ಎಂಜಾಯ್ ಮಾಡಿದ ಪಾತ್ರವಿದು. ನವೀನ್ ಕೃಷ್ಣ ಅವರಂತೂ ನನಗೆ ತುಂಬಾ ಗೈಡ್ ಮಾಡುತ್ತಿದ್ದರು. ತುಂಬಾನೇ ಪ್ರೋತ್ಸಾಹ ಕೊಡುತ್ತಿದ್ದರು. ಇಡೀ ತಂಡ ನನಗೆ ಸಹಕಾರ ನೀಡಿದೆ. ಹೊಸಬಳು ಅಂತ ಅನಿಸಲೇ ಇಲ್ಲ. ನಾನು ನಟಿಸಿರುವ ಹೊಸ ಚಿತ್ರ ಕೂಡಾ ಬಿಡುಗಡೆಗೆ ರೆಡಿಯಾಗಿದೆ.
ಎಂಥ ಪಾತ್ರಗಳ ನಿರೀಕ್ಷೆ ಇಟ್ಟುಕೊಂಡಿದ್ದೀರಾ?
ನನಗೆ ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಸಲ್ಲಿಸುವಂತೆ ನಟಿಸಬೇಕೆಂಬುದು ನನ್ನ ಆಸೆ. ನಾವು ನಿರೀಕ್ಷೆ ಇಟ್ಟುಕೊಂಡರೆ ನಮಗದು ಸಲೀಸಾಗಿ ಸಿಗೋದಿಲ್ಲ. ಹಾಗಾಗಿ ನಮ್ಮ ಪಾಲಿಗೇನು ಬರುತ್ತೋ ಅದರ ಬಗ್ಗೆ ಹೆಚ್ಚು ಗಮನ ಕೊಡುವುದೇ ಬೆಟರ್.
ಎಂಥ ಪಾತ್ರ ಮಾಡುವಾಸೆ?
ನಾನು ಮಾಡುವ ಪಾತ್ರ ಬದುಕಿಗೆ ಹತ್ತಿರಾಗಿರಬೇಕು. ಸಮಾಜಕ್ಕೆ ಏನಾದರೂ ಸಂದೇಶ ಕೊಡುವಂತಿರಬೇಕು. ಒಟ್ಟಿನಲ್ಲಿ ಮೀನಿಂಗ್ ಫುಲ್ ರೋಲ್ಸ್. ಇಡೀ ಕುಟುಂಬ ಕುಳಿತು ನೋಡುವಂಥ ಪಾತ್ರವಿರಬೇಕು. ಎಲ್ಲರಿಗೂ ಪಾತ್ರ ಇಷ್ಟವಾಗಬೇಕು. ಅಂಥ ಪಾತ್ರಗಳು ಸಿಕ್ಕರೆ ನಿಜಕ್ಕೂ ಖುಷಿಯಾಗುತ್ತದೆ.
ರೋಲ್ ಮಾಡೆಲ್ ಅಂತ ಯಾರಾದ್ರೂ ಇದ್ದಾರಾ?
ಮಹಾಲಕ್ಷ್ಮಿ ಅಂತ ನಟಿ ಇದ್ರಲ್ಲ ರವಿಚಂದ್ರನ್ ಜೊತೆಯಲ್ಲಿ ಆ್ಯಕ್ಟ್ ಮಾಡ್ತಿದ್ದರು. ಅವರೆಂದರೆ ನನಗೆ ತುಂಬಾ ಇಷ್ಟ. ಆಕೆ ತನಗೆ ಯಾವುದೇ ಪಾತ್ರ ಕೊಟ್ಟರೂ ನೀಟಾಗಿ ಪ್ರೆಸೆಂಟ್ ಮಾಡುತ್ತಿದ್ದರು. ಅವರ ಚಿತ್ರಗಳನ್ನು ನೋಡುತ್ತಿರುತ್ತೇನೆ. ಆ ನಟಿ ನನ್ನ ರೋಲ್ ಮಾಡೆಲ್ ಅಂತ ಹೇಳಬಹುದು. ಮಾಧುರಿ ದೀಕ್ಷಿತ್ ನನಗೆ ತುಂಬಾ ಇಷ್ಟವಾದ ತಾರೆ. ಏಕೆಂದರೆ ಆಕೆ ಒಳ್ಳೆ ಡ್ಯಾನ್ಸರ್. ನಾನು ನೃತ್ಯಾಭ್ಯಾಸ ಮಾಡೋದ್ರಿಂದ ನಟನೆ, ನೃತ್ಯ ಎರಡರಲ್ಲೂ ಗಮನ ಸೆಳೆಯಬೇಕು ಅಂದುಕೊಂಡಿದ್ದೀನಿ.
ನೃತ್ಯ ಕಲಿತಿದ್ದೀರಾ?
ನಾನು ಯಾರ ಬಳಿಯೂ ಕಲಿತಿಲ್ಲ. ಡ್ಯಾನ್ಸ್ ಮಾಡೋದನ್ನು ನೋಡಿ ಕಲಿತದ್ದು. ನನಗೆ ಎಲ್ಲ ರೀತಿಯ ಡ್ಯಾನ್ಸ್ ಬರುತ್ತದೆ. ಡ್ಯಾನ್ಸ್ ಸ್ಕೂಲಿಗೆ ಹೋಗಿ ಕಲಿಯದಿದ್ದರೂ ದಿನನಿತ್ಯ ಪ್ರಾಕ್ಟೀಸ್ ಮಾಡಿರುವುದರಿಂದ ಸಲೀಸಾಗಿ ಮಾಡಬಲ್ಲೆ.
ಕನ್ನಡದ ಯಾವ ಹೀರೋ ಜೊತೆ ನಟಿಸುವಾಸೆ?
ಪುನೀತ್ ರಾಜ್ ಕುಮಾರ್ ಅಂದರೆ ನನಗೆ ತುಂಬಾ ಇಷ್ಟ. ಅವರ ಜೊತೆಯಲ್ಲಿ ನಟಿಸಬೇಕೆನ್ನುವುದು ನನ್ನ ಕನಸು. ಯಾವಾಗ ನನಸಾಗುತ್ತದೋ ಗೊತ್ತಿಲ್ಲ.
ಹೊಸ ಚಿತ್ರಗಳ ಆಫರ್ಸ್ ಬರುತ್ತಿದೆಯಾ?
ಬರುತ್ತಾ ಇದೆ. ಒಂದೆರಡು ಬಂದಿವೆ. ಕಥೆ ಕೇಳ್ತಾ ಇದ್ದೀನಿ. ಇನ್ನೂ ಡಿಸ್ಕಶನ್‌ನಲ್ಲಿದೆ, ಸದ್ಯದಲ್ಲೇ ಸುದ್ದಿ ಕೊಡಬಹುದು. `ಈ ಕಲರವ’ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಬಹುಶಃ ಈ ಚಿತ್ರದ ನಂತರ ಇನ್ನಷ್ಟು ಚಿತ್ರಗಳು ಬರಬಹುದು. ಕನ್ನಡದಲ್ಲೇ ಬೆಳೆಯುವಾಸೆ.
ಹವ್ಯಾಸ…?
ನಾನು ನೇಚರ್ ಪ್ರಿಯಳು. ಗಾರ್ಡ್‌ನಿಂಗ್ ತುಂಬಾ ಇಷ್ಟ, ಹಸಿರು ಲೋಕದಲ್ಲಿ ಸದಾ ಬಿಝಿ. ಅದರ ಜೊತೆ ನಾನು ಗಿಣಿ, ಮೊಲ, ನಾಯಿಗಳನ್ನೂ ಸಾಕಿದ್ದೇನೆ. ಅವುಗಳ ಜೊತೆಯಲ್ಲೇ ಹೆಚ್ಚು ಕಾಲ ಕಳೆಯೋದು. ನಾನು ಎಲ್ಲೇ ಹೊರಗಡೆ ಹೋದರೂ ಅವನ್ನು ಕರೆದುಕೊಂಡೇ ಹೋಗ್ತೀನಿ, ಸುತ್ತಾಡಿಸಿಕೊಂಡು ಬರ್ತೀನಿ. ಸ್ನೇಹಿತರು ಬಹಳ ಕಡಿಮೆ. ಇವುಗಳೇ ನನ್ನ ಬೆಸ್ಟ್ ಫ್ರೆಂಡ್ಸ್. ಪುಸ್ತಕಗಳನ್ನು ಓದೋದು, ದೇವಸ್ಥಾನಕ್ಕೆ ಹೋಗೋದು ಇವು ನನ್ನ ದಿನಚರಿ. ಹೀಗೆ ಹೇಳುವ ರೋಹಿಣಿ ತನ್ನ ವಿಭಿನ್ನವಾದ ಅಭಿರುಚಿಯಿಂದ ಗಮನ ಸೆಳೆಯುತ್ತಾರೆ. ಹಾಗೆಯೇ ನಟಿಯಾಗಿಯೂ ಯಶಸ್ವಿಯಾಗಲಿ ಎಂದು ಹಾರೈಸೋಣ.
– ಸರಸ್ವತಿ.