ಸುಮಾರು ಎರಡೂವರೆ ವರ್ಷದ ಬಳಿಕ ಬೆಂಗಳೂರಿಗೆ ಹೊರಟಿದ್ದ ನಾನು ಪೂನಾ ರೈಲು ನಿಲ್ದಾಣಕ್ಕೆ ಹನ್ನೊಂದು ಗಂಟೆ ಹೊತ್ತಿಗೆ ತಲುಪಬೇಕಾಗಿತ್ತು. ಪೂನಾ ನಗರದಲ್ಲಿದ್ದ ಟ್ರಾಫಿಕ್ ಸಮಸ್ಯೆಗಳ ಮಧ್ಯೆಯೂ ಹತ್ತು ನಿಮಿಷ ಮುಂಚಿತವಾಗಿ ನಿಲ್ದಾಣಕ್ಕೆ ಸೇರಿದೆ. ಆದರೆ ಅಲ್ಲಿ ಹೋದ ಮೇಲೆ ತಿಳಿದ ವಿಚಾರವೆಂದರೆ, ಇಂದು ರೈಲು ಅರ್ಧ ಗಂಟೆ ತಡವಾಗಿ ಆಗಮಿಸಲಿದೆ ಎಂದು ಮೈಕ್‌ನಲ್ಲಿ ಅನೌನ್ಸ್ ಮೆಂಟ್ ಆಗುತ್ತಿತ್ತು. ನಾನು ಒಮ್ಮೆ ಲಗೇಜ್ ಚೆಕ್ ಮಾಡಿಕೊಂಡೆ.
ವಾಟರ್ ಬಾಟಲ್, ಸೂಟ್‌ಕೇಸ್, ಐಡಿ ಪ್ರೂಫ್ ಎಲ್ಲಾ ಸರಿಯಾಗಿದೆ. ಟಿಕೆಟ್……? `ಹಾಂ! ಟಿಕೆಟ್ ಎಲ್ಲಿದೆ? ಛೇ! ನಾನೆಂಥಾ ಕೆಲಸ ಮಾಡಿದೆ? ಪ್ರಯಾಣಕ್ಕೆ ಮುನ್ನ ಮನೆಯಲ್ಲೇ ಚೆಕ್ ಮಾಡಿಕೊಳ್ಳಬೇಕಲ್ಲವೇ? ಈಗೇನು ಮಾಡಲಿ? ಟಿಕೆಟ್ ಇಲ್ಲದೆ ರೈಲು ಹತ್ತಿ, ಸಿಕ್ಕಿ ಹಾಕಿಕೊಂಡರೆ ದಂಡ ಕಟ್ಟಬೇಕು. ಏನು ಮಾಡುವುದು?’ ಎಂದು ಮನದಲ್ಲೇ ಆತಂಕಗೊಂಡೆ.
ಅಷ್ಟರಲ್ಲಿ ಬೆಂಗಳೂರು ರೈಲು ಸಹ ಬಂದೇಬಿಟ್ಟಿತು. ನಾನು ಗಾಬರಿಯಿಂದಲೇ ರೈಲನ್ನೇರಿ ನನ್ನ ಬರ್ತ್ ಹುಡುಕುತ್ತಿದ್ದೆ. ಹಾಗೆ ಜನರ ನಡುವೆ ಮುನ್ನುಗ್ಗುತ್ತಿದ್ದೆ.
“ಹಲೋ, ಸ್ವಲ್ಪ ಬದಿಗೆ ಸರಿದು ಮುಂದುವರಿಯಿರಿ. ನೀವು ನನ್ನ ದಾರಿಗೆ ಅಡ್ಡವಾಗಿದ್ದೀರಿ,” ಎಂದು ಹಿಂದಿನಿಂದ ಒಂದು ಧ್ವನಿ ಕೇಳಿಸಿತು. ನಾನು ತುಸು ಹಿಂದೆ ಸರಿದು ನಿಂತೆ. ಅವನು ನನ್ನನ್ನು ಸವರಿಕೊಂಡೇ ಮುಂದೆ ಹೋದ. ಆಗ ನನ್ನ ಕೈಯಲಿದ್ದ ವ್ಯಾಲೆಟ್‌ನಿಂದ ಕಾಗದದ ತುಂಡೊಂದು ಕೆಳಗೆ ಬಿತ್ತು. ತಕ್ಷಣ ನಾನದನ್ನು ಎತ್ತಿಕೊಂಡು ನೋಡಿದೆ… ಅದು ನನ್ನ ಟಿಕೆಟ್! ನಾನು ಕಳೆದುಕೊಂಡಿದ್ದ ಅದೇ ಟಿಕೆಟ್! ನಾನು ಅವನತ್ತ ತಿರುಗಿ ನೋಡುವಷ್ಟರಲ್ಲಿ ಅವನು ಅಲ್ಲಿಂದ ಎಲ್ಲೋ ಮುಂದೆ ಹೋಗಿದ್ದ. ನಾನು ನಿರಾಳವಾಗಿ ನನ್ನ ಬರ್ತ್ ಹುಡುಕಿಕೊಂಡು ಕುಳಿತೆ. ರೈಲು ನಿಧಾನವಾಗಿ ಚಲಿಸಲು ಪ್ರಾರಂಭಿಸಿತು. ಆಗ ನನ್ನ ಬರ್ತ್‌ಗೆ ಬಂದ ಅದೇ ವ್ಯಕ್ತಿಯನ್ನು ಕಂಡು ನನಗೆ ಅಚ್ಚರಿಯಾಯಿತು. ನಾಲ್ಕು ವರ್ಷಗಳ ಹಿಂದೆ ನನ್ನಿಂದ ದೂರಾಗಿದ್ದ ರಾಘವನ ಪಡಿಯಚ್ಚು ಎನ್ನುವಂತಿದ್ದ ವ್ಯಕ್ತಿಯನ್ನು ನಾನು ತದೇಕ ದೃಷ್ಟಿಯಿಂದ ನೋಡಿದೆ.
“ಏಕೆ ಹಾಗೆ ನೋಡುತ್ತಿದ್ದೀರಿ?” ಅವನು ಕೇಳಿದ.
“ನಾನು ಬಹಳ ಪ್ರೀತಿಸುತ್ತಿದ್ದ, ನಾಲ್ಕು ವರ್ಷಗಳಿಂದ ದೂರಾದ ಓರ್ವ ವ್ಯಕ್ತಿಯನ್ನು ನೀವು ಹೋಲುತ್ತಿದ್ದೀರಾದ್ದರಿಂದ ನಾನು ನಿಮ್ಮನ್ನೇ ನೋಡಿದೆ,” ಎಂದೆ.
“ಅದಕ್ಕೇ?”
“ಅದಕ್ಕೇ….?” ತಕ್ಷಣ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚಲಿಲ್ಲ.
“ನೀವು ಯಾವಾಗಲೂ ಹೀಗೆ ಬೇರೆಯವರೊಂದಿಗೆ ಕಠೋರವಾಗಿಯೇ ಮಾತನಾಡುವಿರಾ?” ಎಂದು ಕೇಳಿದ ನಾನು ನನ್ನ ರಾಘವನನ್ನು ನೆನಪಿಸಿಕೊಂಡೆ. ಅವನು ಹೀಗೆ ಸ್ವಲ್ಪ ಕಠೋರವಾಗಿಯೇ ಮಾತನಾಡುತ್ತಿದ್ದ. ನಂತರ ನಾನೇ ಸಾವರಿಸಿಕೊಂಡು, “ಕ್ಷಮಿಸಿ, ನೀವು ನೋಡಲು ಅವನಂತೆಯೇ ಇದ್ದೀರಿ. ಅದೇ ಕೇಶ ವಿನ್ಯಾಸ, ಮುಖ, ಮೈಕಟ್ಟು ಹಾಗಾಗಿ…..”
“ನೀವು ಅವರನ್ನು ಅಷ್ಟೊಂದು ಪ್ರೀತಿಸುತ್ತಿದ್ದೀರಾ?” ಅವನು ಕೇಳಿದ.
“ಅದು ಹಾಗೆ… ನಾನು ಈಗ…..”
“ಇಲ್ಲ ಬಿಡಿ ಅದನ್ನೇನೂ ಹೇಳಬೇಕಾಗಿಲ್ಲ,” ಅವನು ಮಧ್ಯದಲ್ಲಿಯೇ ನನ್ನನ್ನು ತಡೆದ.
ನೋಡಲು ರಾಘನಂತೆಯೇ ಇದ್ದ ಆ ವ್ಯಕ್ತಿ ಅವನಂತೆಯೇ ವರ್ತಿಸಿದ್ದ. ನಾಲ್ಕು ವರ್ಷಗಳ ಹಿಂದೆ ನನ್ನಿಂದ ದೂರಾದ ರಾಘವನೇ ಇವನೇನೋ ಎನ್ನುವ ಸಣ್ಣ ಅನುಮಾನ ನನ್ನಲ್ಲಿ ಬಂದರೂ ಅವನೇಕೆ ಇಲ್ಲಿ, ಇಂತಹ ಸ್ಥಿತಿಯಲ್ಲಿ ನನಗೆ ಎದುರಾಗುತ್ತಾನೆಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಕೆಲವು ಕ್ಷಣಗಳು ಉರುಳಿದವು.
“ನನ್ನನ್ನು ಕ್ಷಮಿಸಿ. ನಾನು ನಿಮ್ಮೊಂದಿಗೆ ನಡೆದುಕೊಂಡ ರೀತಿ ನಿಮಗೆ ಬೇಸರ ತರಿಸಿತೇನು?” ಅವನು ನನ್ನಲ್ಲಿ ಕ್ಷಮೆ ಯಾಚಿಸಿದ.
“ಓ… ಬಿಡಿ. ಅವನೂ ಹೀಗೆ ಒಮ್ಮೆ ಕೋಪಿಸಿಕೊಂಡಂತೆ ಮಾತನಾಡುತ್ತಿದ್ದ. ಮರುಕ್ಷಣದಲ್ಲಿಯೇ ಸಮಾಧಾನಪಡಿಸುವಂತೆ ಮಾತನಾಡಿ ನನ್ನನ್ನು ನಗಿಸುತ್ತಿದ್ದ,” ಎಂದೆ.
ಅವನು ಏನು ಮಾತನಾಡದೆ ತಲೆಯಾಡಿಸಿದವನು, “ನೀವು ಎಲ್ಲಿಗೆ ಹೊರಟಿದ್ದೀರಿ?” ಎಂದು ಕೇಳಿದ.
“ಬೆಂಗಳೂರಿಗೆ. ನೀವು….”
“ಬೆಂಗಳೂರಿಗೆ.”
ಇದೀಗ ನಾನು ಅವನೊಂದಿಗೆ ಮೊದಲಿಗಿಂತ ತುಸು ಮನಬಿಚ್ಚಿ ಮಾತನಾಡತೊಡಗಿದೆ. ಅವನೂ ಅದೆಲ್ಲವನ್ನು ಕೇಳಿಸಿಕೊಳ್ಳುತ್ತಿದ್ದ. ನಾನು ಮೊದಲು ರಾಘವನನ್ನು ಭೇಟಿಯಾದದ್ದು, ನಾವಿಬ್ಬರು ಆಗಾಗ ಭೇಟಿಯಾಗುತ್ತಿದ್ದ ಈಡನ್ ಪಾರ್ಕ್‌ರೆಸ್ಟೋರೆಂಟ್ ಎಲ್ಲವನ್ನೂ ಅವನೊಂದಿಗೆ ಹಂಚಿಕೊಂಡೆ. ಸುಮಾರು ಒಂದೂವರೆ ಗಂಟೆಗಳಿಗೂ ಹೆಚ್ಚು ಕಾಲ ನಾವಿಬ್ಬರೂ ಹೀಗೇ ಮಾತನಾಡುತ್ತಿದ್ದೆವು.
“ಮೇಡಂ, ನಿಮ್ಮ ದನಿಯನ್ನು ಸ್ವಲ್ಪ ತಗ್ಗಿಸಿ ಮಾತನಾಡುತ್ತೀರಾ?” ಹಿರಿಯ ಸಹ ಪ್ರಯಾಣಿಕರೊಬ್ಬರು ನನ್ನತ್ತ ನೋಡುತ್ತ ಕೇಳಿದರು. ನಾನು ಅವರಿಗೆ ಏನೊಂದೂ ಪ್ರತಿಕ್ರಿಯಿಸಲಿಲ್ಲ.
“ನಾನು ನಿಮ್ಮ ಪಕ್ಕದಲ್ಲಿ ಬಂದು ಕುಳಿತರೆ ನಿಮ್ಮ ಅಭ್ಯಂತರವೇನೂ ಇಲ್ಲವೇ?” ಎಂದು ಅವನನ್ನು ಕೇಳಿದೆ.
“ನಿಮ್ಮ ಇಷ್ಟ,” ಒಂದು ಬಗೆ ವಾತ್ಸಲ್ಯಪೂರ್ಣ ದನಿ ಅವನಿಂದ ಬಂದಿತು. ಅವನು ಹೆಚ್ಚು ಮಾತನಾಡುತ್ತಿರಲಿಲ್ಲ. ಹೆಚ್ಚು ಹೊತ್ತು ಮೌನವಾಗಿದ್ದು ಪ್ರಯಾಣದ ಸವಿಯನ್ನು ಅನುಭವಿಸುತ್ತಿದ್ದ. ಅವನು ಹೆಚ್ಚು ಮಾತನ್ನು ಬಯಸುತ್ತಿರಲಿಲ್ಲ. ಅವನ ತಾಯಿ ಇತ್ತೀಚೆಗೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಇವನು ಆಗಾಗ ಸಿಗರೇಟ್ ಸೇದುತ್ತಿದ್ದ. ಹಸ್ತ ಸಾಮುದ್ರಿಕಾ ಕಲೆಯಲ್ಲಿ ಆಸಕ್ತಿಹೊಂದಿದ್ದ. ನನಗೆ ಇನ್ನೂ ಮಾತನಾಡಬೇಕಾದ ವಿಷಯಗಳು ಸಾಕಷ್ಟಿದ್ದವು. ಆದರೆ ಗಡಿಯಾರ ಅದಾಗಲೇ ರಾತ್ರಿಯಾಗಿರುವುದನ್ನು ಸೂಚಿಸುತ್ತಿತ್ತು. ಹೊರಗೆ ನಿಧಾನವಾಗಿ ಕತ್ತಲಾಗುತ್ತಿತ್ತು.
“ಆ…. ಆ……” ಓರ್ವ ಹುಡುಗ ನಿದ್ರೆಯ ಮಂಪರಿನಲ್ಲಿರುವಂತೆ ನರಳಿದ್ದು ಕೇಳಿಸಿತು. ನಾನು ಎದ್ದು ಕುಳಿತೆ. ಅದಾಗಲೇ ಬೆಳಕಾಗಿದ್ದು ನನ್ನ ಗಮನಕ್ಕೆ ಬಂತು. ಅವನು ಬರ್ತ್‌ನ ಇನ್ನೊಂದು ತುದಿಯಲ್ಲಿ ಕುಳಿತಿದ್ದ. ನಾನು ಅವನ ಕಾಲುಗಳ ಮೇಲೆ ನನ್ನ ತಲೆಯನ್ನಿಟ್ಟು ಮಲಗಿದ್ದೆ.
ನನಗೆ ಒಮ್ಮೆಲೇ ಗಾಬರಿಯಾದಂತಾಗಿ ಜೋರಾಗಿ ಉಸಿರಾಡತೊಡಗಿದೆ. ನನ್ನನ್ನೇ ನಾನು ತೆಗಳಿಕೊಳ್ಳುವಂತಾಗಿತ್ತು. `ಯಾರೋ ಅಪರಿಚಿತ ಪ್ರಯಾಣಿಕನ ಸನಿಹದಲ್ಲಿ ಮಲಗಿ ಇಡೀ ರಾತ್ರಿ ಕಳೆದಿದ್ದು ಎಷ್ಟರ ಮಟ್ಟಿಗೆ ಸರಿ?’ ನನಗೆ ನಾನೇ ಪ್ರಶ್ನಿಸಿಕೊಂಡೆ. ನನ್ನ ಬ್ಯಾಗ್, ಬಟ್ಟೆಗಳು ಸರಿ ಇದೆಯೇ ಎಂದು ಪರೀಕ್ಷಿಸಿಕೊಂಡೆ. ನನ್ನ ತಲೆಗೂದಲಿಗೆ ಹಾಕಿದ್ದ ಕ್ಲಿಪ್ ಸರಿ ಮಾಡಿಕೊಳ್ಳುವ ನೆಪದಲ್ಲಿ ಕೂದಲ ಮೇಲೊಮ್ಮೆ ಕೈ ಆಡಿಸಿದೆ.
“ನೀವೇನೂ ಹೆದರಬೇಕಾಗಿಲ್ಲ. ಏನೂ ನಡೆದಿಲ್ಲ. ಆದರೆ ನೀವು ಮಲಗಿ ನಿದ್ರಿಸುವಾಗ ಬಹಳ ಮುದ್ದಾಗಿ ಕಾಣುತ್ತೀರಿ,” ಅವನು ನಗುತ್ತ ಹೇಳಿದ. ಅಷ್ಟರಲ್ಲಾಗಲೇ ಬೆಂಗಳೂರು ಹತ್ತಿರವಾಗಿತ್ತು. ಮತ್ತೆ ನಮ್ಮಿಬ್ಬರ ನಡುವೆ ಒಂದು ಬಗೆಯ ವಿಚಿತ್ರ ಮೌನ ಆವರಿಸಿತು. ನನ್ನ ರಾಘವ ನನ್ನಿಂದ ದೂರಾಗುವ ಮುನ್ನ ನಾನು ಅನುಭವಿಸಿದ್ದ ವೇದನೆ, ಒಂದು ಬಗೆಯ ಶೂನ್ಯ ಮಿಶ್ರಿತ ಭಾವನೆಯೇ ಮತ್ತೆ ಇದೀಗ ನನ್ನ ಮನದಲ್ಲಿ ಮೂಡಿದಂತಾಗಿತ್ತು.
“ನಾನು ಒಂದು ಕಡೆ ರಾಘವನನ್ನು ಈ ಅಪರಿಚಿತನಲ್ಲಿ ಕಂಡು ಕೊಂಡಿದ್ದೇನೆಯೇ?’ ಉತ್ತರ ಹೊಳೆಯಲಿಲ್ಲ. ನಿನ್ನೆಯಿಂದ ಇಂದು ಬೆಳಗ್ಗೆವರೆಗಿನ ಅತೀ ಸಣ್ಣ ಅವಧಿಯಲ್ಲಿಯೇ ಅವನು ನನ್ನನ್ನು ಆವರಿಸಿದ್ದ. ಅವನೊಂದಿಗಿನ ನನ್ನ ಮಾತುಗಳು ನನ್ನ ಮನ ಅರಳುವಂತೆ ಮಾಡಿದ್ದವು. ಇದೀಗ ಕೊನೆಯಲ್ಲಿ ಮೌನವೇ ಮುಂದಾಗಿ ನಿಂತಿತು. ರೈಲು ಬೆಂಗಳೂರು ನಿಲ್ದಾಣವನ್ನು ಸಮೀಪಿಸಿತು. ನಾವಿನ್ನು ನಮ್ಮ ನಮ್ಮ ದಾರಿ ನೋಡಿಕೊಳ್ಳಲೇಬೇಕಾಗಿತ್ತು.
“ನಾವು ಪುನಃ ಭೇಟಿಯಾಗುವುದು ಯಾವಾಗ?” ನಾನು ಕೇಳಿದೆ.
“ಸೂಕ್ತ ಸಮಯ ಒದಗಿದಾಗ.”
“ನಾನು ನಿಮ್ಮನ್ನು ಎಲ್ಲೆಂದು ಹುಡುಕಲಿ…. ಇದು ಬಹು ದೊಡ್ಡ ನಗರ,” ನನ್ನ ಮನದಲ್ಲಿದ್ದ ರಾಘವನ ನೆನಪೇ ನನಗೆ ಈ ಪ್ರಶ್ನೆ ಕೇಳುವಂತೆ ಮಾಡಿತು. ಅವನು ಕೆಲವು ಕ್ಷಣಗಳ ಕಾಲ ಸುಮ್ಮನಿದ್ದ ಬಳಿಕ, “ನಾವು ಇನ್ನೊಮ್ಮೆ ಭೇಟಿಯಾಗಬೇಕೆಂದು ಯಾವುದೋ ಅದೃಷ್ಯ ಶಕ್ತಿ ಬಯಸಿದ್ದೇ ಆದಲ್ಲಿ ಖಂಡಿತವಾಗಿಯೂ ಭೇಟಿಯಾಗುತ್ತೇವೆ.”
“ನನಗೆ ನಿಮ್ಮ ಹೆಸರು ಸಹ ತಿಳಿದಿಲ್ಲ….?” ನಾನು ಸ್ವಲ್ಪ ತರಾತುರಿಯಲ್ಲಿ ಕೇಳಿದೆ.
“ಹೌದು. ನೀನು ಹೇಳಿದ್ದೇ ಸರಿ. ನೀನು ನನ್ನನ್ನು ನೋಡಿದಾಗಲೆಲ್ಲಾ ಅವನನ್ನೇ ಕಾಣುತ್ತಿ. ನನ್ನೊಂದಿಗೆ ಮಾತನಾಡಿದಾಗಲೆಲ್ಲ ನೀನು ಅವನೊಡನೆ ಮಾತನಾಡುತ್ತಿ… ನೀನು ಅವನೊಂದಿಗಿಲ್ಲ. ಅವನು ಎಂದೆಂದಿಗೂ ನಿನ್ನೊಡನೆಯೇ ಇದ್ದಾನೆ. ಆದರೆ ನೀನು ಮತ್ತೆ ಅವನನ್ನು ಪಡೆಯಲಾರೆ. ನೀನು ಇಂದಿಗೂ ಅವನನ್ನು ಇಷ್ಟಪಡುತ್ತಿರುವೆ. ಆದರೆ ಅದು ನಿನಗೆ ಎಂದಿಗೂ ತಿಳಿಯಲಾರದ್ದಾಗಿದೆ….”
ಒಂದು ಬಗೆಯ ಮಂತ್ರದಂತಹ ಮಾತುಗಳಿಂದ ನನ್ನನ್ನು ಕಟ್ಟಿಹಾಕಿದಂತಾಗಿತ್ತು. ನಾನೀಗ ಆ ವ್ಯಕ್ತಿಯಲ್ಲಿ ನಿಜವಾಗಿಯೂ ನನ್ನ ರಾಘವನನ್ನು ಕಂಡಿದ್ದೆ. ಅವನೇ ರಾಘವ ಎನ್ನುವುದು ಸ್ಪಷ್ಟವಾಗಿತ್ತು.
`ಓಹ್….. ನನ್ನ ರಾಘವ. ರಾಘವ ಸಿಕ್ಕಿದ!?’
ನನ್ನ ಮೈ ಸಂತಸದಿಂದ ಕಂಪಿಸುತ್ತಿತ್ತು. ತುಸು ಸಮಯ ತಡೆದು ನಾನು ಮತ್ತೆ ಏನೋ ಕೇಳಬೇಕೆಂದು ಅವನತ್ತ ನೋಡಿದೆ. ಅಷ್ಟರಲ್ಲಿ ಅವನು ರೈಲ್ವೆ ಸ್ಟೇಷನ್‌ನಲ್ಲಿ ಹಲವಾರು ಪ್ರಯಾಣಿಕರ ನಡುವೆ ಮರೆಯಾಗಿಹೋಗಿದ್ದ.
ಮತ್ತೆ ಎಂದಿಗೂ ಅವನು ಕಾಣಸಿಗಲಿಲ್ಲ. ನನ್ನೊಳಗೂ……..?