ವಿಭಾ ಬಹಳ ವರ್ಷಗಳ ನಂತರ ಭೇಟಿಯಾಗಲಿದ್ದ ತನ್ನ ಬಾಲ್ಯದ ಗೆಳತಿ ಜ್ಯೋತಿಯನ್ನು ಕಾಣುವುದಕ್ಕಾಗಿ ಉತ್ಸಾಹದಿಂದ ತಯಾರಾಗುತ್ತಿದ್ದಳು. ಹನ್ನೊಂದು ವರ್ಷಗಳ ಬಳಿಕ ಅದೊಮ್ಮೆ ಫೇಸ್‌ ಬುಕ್‌ನಲ್ಲಿ ಕಂಡ ಬಾಲ್ಯದ ಗೆಳತಿ ಜ್ಯೋತಿಯ ವಿಳಾಸ  ತಾನಿರುವ ನಗರದಲ್ಲಿಯೇ ಅವಳೂ ವಾಸವಿರುವುದು ತಿಳಿಯಿತು. ವಿಭಾ ಮರುದಿನವೇ ಅವಳನ್ನು ಭೇಟಿಯಾಗುವುದಾಗಿ ತಿಳಿಸಿದಳು. ಇಬ್ಬರೂ ಮಧ್ಯಾಹ್ನದ ಊಟಕ್ಕೆ ಹೋಗುವುದೆಂದು ತೀರ್ಮಾನವಾಯಿತು.

ಸರಳವಾಗಿ ಅಲಂಕರಿಸಿಕೊಂಡಿದ್ದ ವಿಭಾ ನಗರದ ಪ್ರಮುಖ ರೆಸ್ಟೋರೆಂಟ್‌ಗೆ ತುಸು ಬೇಗನೇ ಬಂದು ಜ್ಯೋತಿಯ ನಿರೀಕ್ಷೆಯಲ್ಲಿದ್ದಳು.

``ಓಹ್‌! ವಿಭಾ ಹೇಗಿದ್ದೀಯಾ? ವಾವ್‌! ಎಷ್ಟು ಬದಲಾಗಿದ್ದೀಯಾ? ಎಷ್ಟು ಸುಂದರವಾಗಿದ್ದೀ....'' ಜ್ಯೋತಿ ಬಂದೊಡನೆಯೇ ವಿಭಾಳನ್ನು ಆಲಿಂಗಿಸಿಕೊಳ್ಳುತ್ತಾ ನುಡಿದಳು. ಇಬ್ಬರೂ ರೆಸ್ಟೋರೆಂಟ್‌ನಲ್ಲಿ ಕುಳಿತು ಹತ್ತು ಹಲವು ವಿಚಾರಗಳನ್ನು, ತಮ್ಮ ಹಳೆಯ ನೆನಪುಗಳನ್ನು ಕೆದಕುತ್ತಾ ಊಟ ಮುಗಿಸಿದರು.

``ವಿಭಾ, ನೀನು ಬಹಳ ಬದಲಾಗಿದ್ದಿ. ನಿನ್ನ ಮದುವೆಯಾದ ನಂತರ ನನಗಿಂತಲೂ ಸುಂದರವಾಗಿ ಕಾಣುತ್ತಿರುವೆ,'' ಜ್ಯೋತಿ ಹೇಳುತ್ತಿದ್ದಂತೆ ವಿಭಾಳ ಕಣ್ಣುಗಳಲ್ಲಿ ತೆಳುವಾಗಿ ನೀರಾಡಿತು.

``ಏನಾಯಿತು? ಎಲ್ಲ ಕ್ಷೇಮ ತಾನೇ?'' ಜ್ಯೋತಿ ತುಸು ಗಾಬರಿಯಿಂದ ಕೇಳಿದಳು.

``ಏನಿಲ್ಲ, ನಾನು ಹೊರಡುತ್ತೇನೆ. ನನಗೆ ಮನೆಯಲ್ಲಿ ತುಸು ಕೆಲಸವಿದೆ. ಇನ್ನೊಮ್ಮೆ ಸಿಗೋಣ,'' ಎಂದು ಎದ್ದಳು.

ರೆಸ್ಟೋರೆಂಟ್‌ ಬಿಲ್ ‌ಪಾವತಿಸುತ್ತಾ ವಿಭಾ ಹೇಳಿದಳು, ``ನೀನಂದುಕೊಂಡಷ್ಟು ನಾನು ಚೆನ್ನಾಗಿಲ್ಲ. ನಿನ್ನ ಮಾತಿನಂತೆ ನಾನು ಸುಂದರಿಯೂ ಅಲ್ಲ. ನೀನು ನನ್ನ ಆತ್ಮೀಯಳೆಂದು ಹೇಳಿದೆ ಅಷ್ಟೆ. ನಾನಿನ್ನು ಹೊರಡುತ್ತೀನಿ....?''

``ವಿಭಾ, ಏಕೆ ಹೀಗೆ ಮಾತಾಡುತ್ತಿರುವೆ? ನಾವು ಎಷ್ಟು ವರ್ಷಗಳ ನಂತರ ಭೇಟಿಯಾಗುತ್ತಿದ್ದೇವೆ. ಈಗಲೂ ನಿನ್ನ ತಾಯಿ ಏನಾದರೂ ಹೇಳುತ್ತಾರೆಯೇ?''

ವಿಭಾ ಅದಕ್ಕೆ ಏನೂ ಉತ್ತರಿಸಲಿಲ್ಲ. ಇನ್ನೇನೇ ಹೇಳಿದರೂ ತನಗೆ ಕಣ್ಣೀರನ್ನು ತಡೆಯಲಾಗುವುದಿಲ್ಲ ಎನ್ನುವ ಅರಿವಾಗಿ ಅವಳು ಮೌನವಾಗಿ ಹಿಂತಿರುಗಿದಳು. ಮನೆಗೆ ಬಂದೊಡನೆ ತನ್ನ ಮನಸ್ಸಿನ ದುಃಖವನ್ನು ಕಣ್ಣೀರಾಗಿಸಿದಳು.

ಅವಳ ಮನಸ್ಸು ಸುಮಾರು ಹದಿಮೂರು ವರ್ಷಗಳ ಹಿಂದಕ್ಕೋಡಿತು.

ಅಂದು ಸ್ಕೂಲ್‌ನಿಂದ ವಾಪಸಾಗುತ್ತಿದ್ದ ವಿಭಾಗೆ ಅವಳ ತಾಯಿ ಹೊಸ ಮೈಸೂರು ಸಿಲ್ಕ್ ಸೀರೆಯನ್ನು ಮಡಿಸಿಡುತ್ತಿರುವುದು ಕಂಡಿತು.

``ಅಮ್ಮಾ, ಈ ಸೀರೆ ಬಹಳ ಚೆನ್ನಾಗಿದೆ. ನಿನ್ನದಾ?'' ಕೇಳಿದಳು.

``ಇಲ್ಲ. ಅಕ್ಕನ ಮದುವೆ ನಿಶ್ಚಯವಾಗಿದೆಯಲ್ಲ ಅದಕ್ಕೆ ಲಕ್ಷ್ಮೀ ಅವಳಿಗೆ ಸೀರೆ ತಂದಿದ್ದಾಳೆ,'' ಎಂದರು ತಾಯಿ.

ವಿಭಾಳ ಸೋದರಿ ಶುಭಾಳಿಗೆ ಮದುವೆ ನಿಶ್ಚಯವಾಗಿತ್ತು. ಸೋದರಿಯರ ನಡುವೆ ಎಂಟು ವರ್ಷಗಳ ಅಂತರವಿತ್ತು. ವಿಭಾ ಯೌವನಕ್ಕೆ ಕಾಲಿಡುತ್ತಿರುವಾಗಲೇ ಅವಳ ಅಕ್ಕ ಶುಭಾಗೆ ವಿವಾಹ ಪ್ರಸ್ತಾಪ ಖಾತ್ರಿಯಾಗಿತ್ತು. ಇದಕ್ಕಾಗಿ ಅವಳ ತಾಯಿಯ ತಂಗಿ ಲಕ್ಷ್ಮಿ ಶುಭಾಳಿಗೆ ಬೆಲೆಬಾಳುವ ಸೀರೆ ತಂದಿದ್ದರು.

``ಅಮ್ಮಾ, ಲಕ್ಷ್ಮಿ ಆಂಟಿ ನನಗೇನೂ ತಂದಿಲ್ಲವೇ?'' ಎಂದು ಕೇಳಿದಳು.

``ಹೋಗು ಹೋಗು.... ನಿನಗೇಕೆ ತರುತ್ತಾರೆ? ನಿನ್ನ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೋ. ಶುಭಾಳ ಮುಂದೆ ನೀನು ಏನೇನೂ ಅಲ್ಲ. ಅವಳು ದಂತದ ಗೊಂಬೆಯಂತಿದ್ದಾಳೆ. ನೀನೊಳ್ಳೆ ತೆಳ್ಳಗಿದ್ದಿ....?!'' ಎಂದರು ವ್ಯಂಗ್ಯವಾಗಿ.

ವಿಭಾ ಏನೊಂದೂ ಪ್ರತಿಕ್ರಿಯಿಸದೆ ಹೊರನಡೆದಳು. ತಾಯಿಯ ಮಾತುಗಳಿಂದ ಅವಳ ಮನಸ್ಸು ಬಹಳ ನೊಂದಿತ್ತು. ಅವಳು ಕನ್ನಡಿಯ ಮುಂದೆ ನಿಂತು ತನ್ನನ್ನೊಮ್ಮೆ ಪರೀಕ್ಷಿಸಿಕೊಂಡಳು. ಕೆದರಿಕೊಂಡಿದ್ದ ಕೆಂಚು ಕೂದಲು, ತೆಳ್ಳಗಿದ್ದ ಕೈ ಕಾಲುಗಳು, ಮುಖದ ಮೇಲಿನ ಕಲೆಗಳು ಎಲ್ಲವನ್ನೂ ಕಂಡಾಗ `ಅಮ್ಮನ ಮಾತುಗಳು ನಿಜ. ನಾನು ಅಷ್ಟೊಂದು ಸುಂದರಿಯಲ್ಲ....' ಎನ್ನುವ ಭಾವನೆ ಮೂಡಿತು. ಹೀಗೆಯೇ ಪ್ರತಿ ಬಾರಿಯೂ ತಾಯಿಯ ಕಡೆಯಿಂದ ವಿಭಾ ಕಡೆಗಣಿಸಲ್ಪಡುತ್ತಿದ್ದಳು. ಆಗೆಲ್ಲ ಅವಳಿಗೆ ಸಮಾಧಾನ ಹೇಳಿ ಅವಳಲ್ಲಿ ಆತ್ಮವಿಶ್ವಾಸ ಹುಟ್ಟಿಸುತ್ತಿದ್ದ ಏಕೈಕ ಗೆಳತಿ ಜ್ಯೋತಿ. ಜ್ಯೋತಿಯ ಬಳಿ ವಿಭಾ ಎಲ್ಲವನ್ನೂ ಹೇಳಿಕೊಂಡು ತನಗೆ ತಾನೇ ಸಮಾಧಾನಪಡಿಸಿಕೊಳ್ಳುತ್ತಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ