``ಅಪ್ಪಾಜಿ, ನಾನಿನ್ನು ಅವನೊಂದಿಗೆ ಇರಲಾರೆ! ನಾನು ನಿಮ್ಮೊಂದಿಗೆ ಇಲ್ಲಿಯೇ ಇದ್ದುಬಿಡುತ್ತೇನೆ. ಅವನೊಂದಿಗಿರಲು ನನ್ನಿಂದ ಸಾಧ್ಯವಾಗುತ್ತಿಲ್ಲ. ದಯವಿಟ್ಟು ನೀವು ನನ್ನನ್ನು ಮತ್ತೆ ಅವನಲ್ಲಿಗೆ ಹೋಗುವಂತೆ ಹೇಳಬೇಡಿ.''
``ಆದರೆ.... ನೀನು ಮದುವೆಯಾಗಿ ಇನ್ನು ಒಂದು ವಾರವಷ್ಟೇ ಆಗಿದೆ!''
``ಹೌದು, ವಾರದ ಮೊದಲಷ್ಟೇ ಮದುವೆಯಾದೆ. ಆದರೆ ನನಗೆ ಅವನೊಂದಿಗೆ ಬದುಕಲು ಇಷ್ಟವಿಲ್ಲ. ಇಷ್ಟಕ್ಕೂ ಇದೂ ನನ್ನ ಮನೆಯೇ ಅಲ್ಲವೇ?''
``ಹೌದು. ಈ ಮನೆ ನಿನ್ನದು. ಎಂದೆಂದಿಗೂ ನಿನ್ನದೇ. ಆದರೆ ನೀನೇಕೆ ಇಷ್ಟು ಅಸರಪಡುತ್ತಿರುವೆ? ನಿಧಾನವಾಗಿ ಹೇಳು, ಏನು ನಿನ್ನ ಸಮಸ್ಯೆ?''
``ಅಪ್ಪಾಜಿ ಅದೆಲ್ಲಿಂದ ಪ್ರಾರಂಭಿಸಲಿ? ಅಲ್ಲಿ ಹಲವಾರು ಸಮಸ್ಯೆಗಳಿವೆ.''
``ಹೌದೇ.... ಹೇಗೇ?''
``ನಾನು ಅವನಿಗಾಗಿ ರಾತ್ರಿ ಅಡುಗೆ ಮಾಡಬೇಕಂತೆ.......''
``ಓಹೋ! ಹಾಗಾದರೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಏನು ಮಾಡುತ್ತೀರಿ?''
``ಬೆಳಗಿನ ಉಪಾಹಾರಕ್ಕೆ ನೂಡಲ್ಸ್, ಉಪ್ಪಿಟ್ಟುನ್ನು ಅವನೇ ತಯಾರಿಸುತ್ತಾನೆ. ಮಧ್ಯಾಹ್ನ ಊಟವನ್ನು ಅವನು ಆಫೀಸ್‌ಕ್ಯಾಂಟೀನ್‌ನಲ್ಲಿ ಮಾಡಿಕೊಳ್ಳುತ್ತಾನೆ. ನಾನೇ ಮಧ್ಯಾಹ್ನಕ್ಕೆ ಊಟ ತಯಾರಿಸಿಕೊಳ್ಳಬೇಕು.''
``ಸರಿ.... ಮುಂದೆ....?''
``ಅವನಿಗೆ ನಾನು ಅರ್ಧ ಡಜನ್ ಮಕ್ಕಳನ್ನು ಕೊಡಬೇಕಂತೆ. ಅಪ್ಪಾಜಿ, ಅರ್ಧ ಡಜನ್ ಮಕ್ಕಳು ನನಗೆ....? ಮೈ ಫುಟ್!''
``ಹಾಗಂದನೇ ಅವನು...?''
``ಹೌದು. ನಾವು ಮೊದಲ ಬಾರಿ ಹೋಟೆಲ್‌ಗೆ ಊಟಕ್ಕೆ ಹೋಗಿದ್ದ ಸಮಯದಲ್ಲಿ ಅವನು ಹೇಳಿದ್ದ.''
``ಅವನೇನಂದ....? ಖಚಿತವಾಗಿ ಹೇಳು.''
``ಅಂದು ಅವನು ನನಗೆ ಬಹಳ ಸುಂದರಾಗಿದ್ದ ಮುತ್ತಿನ ಓಲೆಗಳನ್ನು ನೀಡಿದ್ದ. ನನಗೆ ಬಹಳ ಸಂತಸವಾಗಿತ್ತು. `ನಿನಗೆ ನನ್ನಿಂದ ಎಂತಹ ಉಡುಗೊರೆ ಬೇಕು?' ಎಂದು ನಾನು ಕೇಳಿದ್ದಕ್ಕೆ, ನಿನ್ನಿಂದ ನನಗೆ ಸುಮಾರು ಅರ್ಧ ಡಜನ್ ಮುದ್ದಾದ ಮಕ್ಕಳು ಬೇಕು ಎಂದ.''
``ಸರಿ ನಾನವನಲ್ಲಿ ಇದರ ಕುರಿತು ಮಾತನಾಡುತ್ತೇನೆ. ಇನ್ನೇನು ಸಮಸ್ಯೆ?''
``ಇದು ಎಲ್ಲಕ್ಕಿಂತ ಮುಖ್ಯವಾದದ್ದು. ನನ್ನ ಡ್ರೆಸ್ ಸೆನ್ಸ್ ಬಗ್ಗೆ.''
``ಅದರ ಕುರಿತು ಅವನೇನು ಹೇಳುತ್ತಾನೆ?''
``ನಾನು ನನ್ನ ಇಷ್ಟದಂತೆ ಜೀನ್ಸ್, ಟೀ ಶರ್ಟ್, ಶಾರ್ಟ್ಸ್ ಗಳನ್ನು ಧರಿಸಿಕೊಳ್ಳಬಾರದಂತೆ. ಇದು ಅವನ ಕಟ್ಟಪ್ಪಣೆ. ಅಪ್ಪಾಜಿ, ನನ್ನ ಸ್ವಾತಂತ್ರ್ಯಕ್ಕೆ ಅವನು ಅಡ್ಡಬರುತ್ತಾನೆ. ಇದು ತಪ್ಪಲ್ಲವೇ?''
``ಸರಿ, ಮುಂದೆ.....?''
``ನಾನು ನನ್ನ ಸ್ವಂತ ಖರ್ಚಿಗಾಗಿ ತಿಂಗಳಿಗೆ 10,000 ಖರ್ಚು ಮಾಡುವುದನ್ನು ಅವನು ಸಹಿಸಲಾರ! ಪ್ರತಿಯೊಂದಕ್ಕೂ ಅವನ ಒಪ್ಪಿಗೆ ಬೇಕು.... ನಾನೇನು ಅವವ ಸೇವಕಳಲ್ಲ. ಅವನು ನನ್ನ ಮಾಲೀಕನೂ ಅಲ್ಲ. ಅವನೇಕೆ ನನಗೆ ಆದೇಶಿಸುತ್ತಾನೆ....? ನಾನು ಅವನೊಂದಿಗೆ ಇರಲಾರೆ....!''
``ಸರಿ.... ಇನ್ನೇನು ಸಮಸ್ಯೆ?''
``ನಾನೂ ಕೆಲಸಕ್ಕೆ ಸೇರಬೇಕೆಂದು ಹೇಳುತ್ತಿದ್ದಾನೆ. ಅವನಿಗೆ ತಕ್ಕಮಟ್ಟಿಗೆ ಒಳ್ಳೆಯ ಕೆಲಸವಿದೆ. ಸಂಬಳ ಚೆನ್ನಾಗಿದೆ. ಆದರೆ ನಾನೂ ಕೆಲಸಕ್ಕೆ ಹೋದರೆ ನನ್ನ ಸಂಬಳವನ್ನೂ ಖರ್ಚು ಮಾಡುವ ಇರಾದೆ ಅವನದು.''
``ಯಾವ ರೀತಿಯ ಕೆಲಸಕ್ಕೆ ಸೇರಬೇಕೆಂದು ಅವನ ಅಭಿಲಾಷೆ?''
``ನಾನು ಫೋಟೋಗ್ರಫಿ ಕ್ಲಾಸ್‌ಗೆ ಸೇರಿಕೊಂಡು ಯಾವುದಾದರೂ ನಿಯತಕಾಲಿಕಕ್ಕೆ ಸೇರಿ ಫೋಟೋಗ್ರಫಿ ಮುಂದುವರಿಸಬೇಕೆನ್ನುವುದು ಅವನ ಇಚ್ಛೆ.''
``ನಿನಗೆ ಮೊದಲಿನಿಂದಲೂ ಪೋಟೋಗ್ರಫಿ ಎಂದರೆ ಬಹಳ ಇಷ್ಟ. ನಿಯತಕಾಲಿಕಕ್ಕೆ ನಾನು ಫೋಟೋಗ್ರಾಫರ್ ಆಗುತ್ತೇನೆಂದು ನೀನು ನನ್ನನ್ನು ಕೇಳಿದಾಗ ನಾನೇ ನಿರಾಕರಿಸಿದ್ದೆ ತಾನೇ?''
``ನೀವು ಹೇಳುವುದೇ ಬೇರೆ. ಈಗ ಸುಶಾಂತ್‌ಗೆ ನಾನು ದುಡಿದು ಸಂಪಾದಿಸುವುದಷ್ಟೇ ಮುಖ್ಯ. ನನ್ನ ಇಷ್ಟದ ಫೋಟೋಗ್ರಫಿ ಅಲ್ಲ. ನಾನು ತಿಂಗಳಿಗೆ 10,000 ದಷ್ಟು ಖರ್ಚು ಮಾಡುವುದು ಅವನು ಸಹಿಸಲಾರ. ಅದಕ್ಕೆ ನಾನೇ ದುಡಿದು ಸಂಪಾದಿಸಲಿ ಎನ್ನುವುದು ಅವನ ಇಷ್ಟ.''