“ಅಪ್ಪಾಜಿ, ನಾನಿನ್ನು ಅವನೊಂದಿಗೆ ಇರಲಾರೆ! ನಾನು ನಿಮ್ಮೊಂದಿಗೆ ಇಲ್ಲಿಯೇ ಇದ್ದುಬಿಡುತ್ತೇನೆ. ಅವನೊಂದಿಗಿರಲು ನನ್ನಿಂದ ಸಾಧ್ಯವಾಗುತ್ತಿಲ್ಲ. ದಯವಿಟ್ಟು ನೀವು ನನ್ನನ್ನು ಮತ್ತೆ ಅವನಲ್ಲಿಗೆ ಹೋಗುವಂತೆ ಹೇಳಬೇಡಿ.”
“ಆದರೆ…. ನೀನು ಮದುವೆಯಾಗಿ ಇನ್ನು ಒಂದು ವಾರವಷ್ಟೇ ಆಗಿದೆ!”
“ಹೌದು, ವಾರದ ಮೊದಲಷ್ಟೇ ಮದುವೆಯಾದೆ. ಆದರೆ ನನಗೆ ಅವನೊಂದಿಗೆ ಬದುಕಲು ಇಷ್ಟವಿಲ್ಲ. ಇಷ್ಟಕ್ಕೂ ಇದೂ ನನ್ನ ಮನೆಯೇ ಅಲ್ಲವೇ?”
“ಹೌದು. ಈ ಮನೆ ನಿನ್ನದು. ಎಂದೆಂದಿಗೂ ನಿನ್ನದೇ. ಆದರೆ ನೀನೇಕೆ ಇಷ್ಟು ಅಸರಪಡುತ್ತಿರುವೆ? ನಿಧಾನವಾಗಿ ಹೇಳು, ಏನು ನಿನ್ನ ಸಮಸ್ಯೆ?”
“ಅಪ್ಪಾಜಿ ಅದೆಲ್ಲಿಂದ ಪ್ರಾರಂಭಿಸಲಿ? ಅಲ್ಲಿ ಹಲವಾರು ಸಮಸ್ಯೆಗಳಿವೆ.”
“ಹೌದೇ…. ಹೇಗೇ?”
“ನಾನು ಅವನಿಗಾಗಿ ರಾತ್ರಿ ಅಡುಗೆ ಮಾಡಬೇಕಂತೆ…….”
“ಓಹೋ! ಹಾಗಾದರೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಏನು ಮಾಡುತ್ತೀರಿ?”
“ಬೆಳಗಿನ ಉಪಾಹಾರಕ್ಕೆ ನೂಡಲ್ಸ್, ಉಪ್ಪಿಟ್ಟುನ್ನು ಅವನೇ ತಯಾರಿಸುತ್ತಾನೆ. ಮಧ್ಯಾಹ್ನ ಊಟವನ್ನು ಅವನು ಆಫೀಸ್‌ಕ್ಯಾಂಟೀನ್‌ನಲ್ಲಿ ಮಾಡಿಕೊಳ್ಳುತ್ತಾನೆ. ನಾನೇ ಮಧ್ಯಾಹ್ನಕ್ಕೆ ಊಟ ತಯಾರಿಸಿಕೊಳ್ಳಬೇಕು.”
“ಸರಿ…. ಮುಂದೆ….?”
“ಅವನಿಗೆ ನಾನು ಅರ್ಧ ಡಜನ್ ಮಕ್ಕಳನ್ನು ಕೊಡಬೇಕಂತೆ. ಅಪ್ಪಾಜಿ, ಅರ್ಧ ಡಜನ್ ಮಕ್ಕಳು ನನಗೆ….? ಮೈ ಫುಟ್!”
“ಹಾಗಂದನೇ ಅವನು…?”
“ಹೌದು. ನಾವು ಮೊದಲ ಬಾರಿ ಹೋಟೆಲ್‌ಗೆ ಊಟಕ್ಕೆ ಹೋಗಿದ್ದ ಸಮಯದಲ್ಲಿ ಅವನು ಹೇಳಿದ್ದ.”
“ಅವನೇನಂದ….? ಖಚಿತವಾಗಿ ಹೇಳು.”
“ಅಂದು ಅವನು ನನಗೆ ಬಹಳ ಸುಂದರಾಗಿದ್ದ ಮುತ್ತಿನ ಓಲೆಗಳನ್ನು ನೀಡಿದ್ದ. ನನಗೆ ಬಹಳ ಸಂತಸವಾಗಿತ್ತು. `ನಿನಗೆ ನನ್ನಿಂದ ಎಂತಹ ಉಡುಗೊರೆ ಬೇಕು?’ ಎಂದು ನಾನು ಕೇಳಿದ್ದಕ್ಕೆ, ನಿನ್ನಿಂದ ನನಗೆ ಸುಮಾರು ಅರ್ಧ ಡಜನ್ ಮುದ್ದಾದ ಮಕ್ಕಳು ಬೇಕು ಎಂದ.”
“ಸರಿ ನಾನವನಲ್ಲಿ ಇದರ ಕುರಿತು ಮಾತನಾಡುತ್ತೇನೆ. ಇನ್ನೇನು ಸಮಸ್ಯೆ?”
“ಇದು ಎಲ್ಲಕ್ಕಿಂತ ಮುಖ್ಯವಾದದ್ದು. ನನ್ನ ಡ್ರೆಸ್ ಸೆನ್ಸ್ ಬಗ್ಗೆ.”
“ಅದರ ಕುರಿತು ಅವನೇನು ಹೇಳುತ್ತಾನೆ?”
“ನಾನು ನನ್ನ ಇಷ್ಟದಂತೆ ಜೀನ್ಸ್, ಟೀ ಶರ್ಟ್, ಶಾರ್ಟ್ಸ್ ಗಳನ್ನು ಧರಿಸಿಕೊಳ್ಳಬಾರದಂತೆ. ಇದು ಅವನ ಕಟ್ಟಪ್ಪಣೆ. ಅಪ್ಪಾಜಿ, ನನ್ನ ಸ್ವಾತಂತ್ರ್ಯಕ್ಕೆ ಅವನು ಅಡ್ಡಬರುತ್ತಾನೆ. ಇದು ತಪ್ಪಲ್ಲವೇ?”
“ಸರಿ, ಮುಂದೆ…..?”
“ನಾನು ನನ್ನ ಸ್ವಂತ ಖರ್ಚಿಗಾಗಿ ತಿಂಗಳಿಗೆ 10,000 ಖರ್ಚು ಮಾಡುವುದನ್ನು ಅವನು ಸಹಿಸಲಾರ! ಪ್ರತಿಯೊಂದಕ್ಕೂ ಅವನ ಒಪ್ಪಿಗೆ ಬೇಕು…. ನಾನೇನು ಅವವ ಸೇವಕಳಲ್ಲ. ಅವನು ನನ್ನ ಮಾಲೀಕನೂ ಅಲ್ಲ. ಅವನೇಕೆ ನನಗೆ ಆದೇಶಿಸುತ್ತಾನೆ….? ನಾನು ಅವನೊಂದಿಗೆ ಇರಲಾರೆ….!”
“ಸರಿ…. ಇನ್ನೇನು ಸಮಸ್ಯೆ?”
“ನಾನೂ ಕೆಲಸಕ್ಕೆ ಸೇರಬೇಕೆಂದು ಹೇಳುತ್ತಿದ್ದಾನೆ. ಅವನಿಗೆ ತಕ್ಕಮಟ್ಟಿಗೆ ಒಳ್ಳೆಯ ಕೆಲಸವಿದೆ. ಸಂಬಳ ಚೆನ್ನಾಗಿದೆ. ಆದರೆ ನಾನೂ ಕೆಲಸಕ್ಕೆ ಹೋದರೆ ನನ್ನ ಸಂಬಳವನ್ನೂ ಖರ್ಚು ಮಾಡುವ ಇರಾದೆ ಅವನದು.”
“ಯಾವ ರೀತಿಯ ಕೆಲಸಕ್ಕೆ ಸೇರಬೇಕೆಂದು ಅವನ ಅಭಿಲಾಷೆ?”
“ನಾನು ಫೋಟೋಗ್ರಫಿ ಕ್ಲಾಸ್‌ಗೆ ಸೇರಿಕೊಂಡು ಯಾವುದಾದರೂ ನಿಯತಕಾಲಿಕಕ್ಕೆ ಸೇರಿ ಫೋಟೋಗ್ರಫಿ ಮುಂದುವರಿಸಬೇಕೆನ್ನುವುದು ಅವನ ಇಚ್ಛೆ.”
“ನಿನಗೆ ಮೊದಲಿನಿಂದಲೂ ಪೋಟೋಗ್ರಫಿ ಎಂದರೆ ಬಹಳ ಇಷ್ಟ. ನಿಯತಕಾಲಿಕಕ್ಕೆ ನಾನು ಫೋಟೋಗ್ರಾಫರ್ ಆಗುತ್ತೇನೆಂದು ನೀನು ನನ್ನನ್ನು ಕೇಳಿದಾಗ ನಾನೇ ನಿರಾಕರಿಸಿದ್ದೆ ತಾನೇ?”
“ನೀವು ಹೇಳುವುದೇ ಬೇರೆ. ಈಗ ಸುಶಾಂತ್‌ಗೆ ನಾನು ದುಡಿದು ಸಂಪಾದಿಸುವುದಷ್ಟೇ ಮುಖ್ಯ. ನನ್ನ ಇಷ್ಟದ ಫೋಟೋಗ್ರಫಿ ಅಲ್ಲ. ನಾನು ತಿಂಗಳಿಗೆ 10,000 ದಷ್ಟು ಖರ್ಚು ಮಾಡುವುದು ಅವನು ಸಹಿಸಲಾರ. ಅದಕ್ಕೆ ನಾನೇ ದುಡಿದು ಸಂಪಾದಿಸಲಿ ಎನ್ನುವುದು ಅವನ ಇಷ್ಟ.”
“ಸರಿ…. ಅಂತಿಮವಾಗಿ ನೀನೇನು ನಿರ್ಧಾರಕ್ಕೆ ಬಂದಿರುವೆ?”
“ನಾನಿನ್ನು ಅಲ್ಲಿಗೆ ಹೋಗಲಾರೆ.”
“ಅವನೊಂದಿಗೆ ನಿನ್ನದು ಪ್ರೇಮ ವಿವಾಹವಲ್ಲವೇ? ಮದುವೆಗೂ ಮುನ್ನ ನೀನವನ ಎಲ್ಲ ಗುಣ ದೋಷಗಳನ್ನೂ ತಿಳಿದಿದ್ದೀಯಲ್ಲವೇ?”
“ಆ ದಿನಗಳೇ ಬೇರೆ…”
“ಅದು ಹೇಗೆ?”
“ಸುಶಾಂತ್ ನನಗಿಂತ ಎರಡು ವರ್ಷ ಸೀನಿಯರ್. ಕಲಿಕೆ, ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲಿ ಹೀಗೆ ಎಲ್ಲದರಲ್ಲಿಯೂ ಮುಂಚೂಣಿಯಲ್ಲಿದ್ದ. ಅವನ ರೂಪ, ಗುಣಗಳಿಂದ ಕಾಲೇಜಿನ ಎಲ್ಲಾ ಹುಡುಗಿಯರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ. ಸುಶಾಂತ್ ನನ್ನ ಸ್ನೇಹಿತ ಎಂದು ಹುಡುಗಿಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅದರಂತೆ ನಾನೂ ಸಹ ಸುಶಾಂತ್‌ಗೆ `ಮೋಸ್ಟ್ ಇಂಪಾರ್ಟೆಂಟ್ ಗರ್ಲ್’ ಎನ್ನಿಸಿಕೊಳ್ಳಲು ಇಷ್ಟಪಟ್ಟಿದ್ದೆ.”
“ಅಂದರೆ ಆಗ ಅವನು ನಿನಗೆ ಇಷ್ಟವಾಗಿದ್ದ.”
“ಹೌದು.”
“ಮದುವೆಯಾದ ಬಳಿಕ ಹೇಗೆ ಜೀವನ ಮಾಡಬೇಕೆಂಬುದರ ಬಗ್ಗೆ ನೀವು ಮಾತನಾಡಿಕೊಂಡಿರಲಿಲ್ಲವೇ?”
“ಮಾತನಾಡಿಕೊಂಡಿದ್ದೆ. ಆಗ ನಮ್ಮ ಮನಸ್ಥಿತಿ ಬೇರೆಯಾಗಿತ್ತು. ಭವಿಷ್ಯದ ಸುಂದರ ಕನಸು ಕಾಣುತ್ತಿದ್ದೆ. ಆದರೆ ಈಗ ವಾಸ್ತವ ಸ್ಥಿತಿ ಬೇರೆ ಎನಿಸಿದೆ. ಮದುವೆಯಾದ ನಂತರ ಇಷ್ಟೆಲ್ಲ ಸಮಸ್ಯೆಗಳಿರುತ್ತವೆ ಎನಿಸಿರಲಿಲ್ಲ.”
“ಮತ್ತೆ ಮುಂದೇನು ಮಾಡುತ್ತೀಯಾ?”
“ನಾನು ನಿಮ್ಮೊಂದಿಗೆ ಇಲ್ಲಿಯೇ ಇರುತ್ತೇನೆ.”
“ಸರಿ. ಇಲ್ಲಿಯೇ ಇರಬಹುದು. ಆದರೆ ಸಮಯವನ್ನು ಹೇಗೆ ಕಳೆಯುವೆ?”
“ಒಂದು ವಾರದ ಹಿಂದೆ ಹೇಗೆ ಕಾಲ ಕಳೆಯುತ್ತಿದ್ದೆನೋ ಹಾಗೇ ಸ್ನೇಹಿತರೊಂದಿಗೆ ಹರಟೆ, ಶಾಪಿಂಗ್ ಇತ್ಯಾದಿ….”
“ನಿನ್ನ ವಿದ್ಯಾಭ್ಯಾಸವನ್ನು ಮುಂದುವರಿಸುವ ಆಶೆ ಇಲ್ಲವೇ…?”
“ಇಲ್ಲ. ನನ್ನ ವಿದ್ಯಾಭ್ಯಾಸ ಇಷ್ಟಕ್ಕೇ ಮುಗಿಯಿತು. ಇನ್ನು ಮುಂದುವರಿಸುವ ಅಗತ್ಯವಿಲ್ಲ.”
“ಮತ್ತೆ ಏನು ಮಾಡಬೇಕೆಂದಿರುವೆ?”
“ಹೇಳಿದೆನಲ್ಲ ಒಂದು ವಾರದ ಹಿಂದೆ ಇದ್ದಂತೆಯೇ ಇರುತ್ತೇನೆ. ಇದು ನನ್ನದೇ ಮನೆಯಲ್ಲವೇ?”
“ಹೌದು. ಈ ಮನೆ ನಿನ್ನದೇ ನಾನೇ ನಿನ್ನ ಪ್ರೀತಿಯ ಅಪ್ಪಾಜಿ….. ಹೀಗಾಗಿ ಮದುವೆಗೆ ಮೊದಲಿನಂತೆ ಇನ್ನು ಮುಂದೆಯೂ ಹೀಗೆ ಇರಬಹುದು. ಅಂದಹಾಗೆ ನಿನ್ನ ಸ್ನೇಹಿತೆ ಮಾಲಿನಿ ಈಗೇನು ಮಾಡುತ್ತಿದ್ದಾಳೆ?”
“ಅವಳು ಇನ್ನೆರಡು ತಿಂಗಳಲ್ಲಿ ಮದುವೆಯಾಗುತ್ತಾಳೆ. ಅವಳನ್ನು ಮದುವೆಯಾಗುವ ಹುಡುಗ ಮುಂಬೈನಲ್ಲಿ ನೆಲೆಸಿದ್ದಾನೆ. ಅಲ್ಲಿನ ದೊಡ್ಡ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿದ್ದಾನೆ. ಇನ್ನು ನನ್ನ ಆಪ್ತ ಗೆಳತಿ ಶಿಲ್ಪಾಗೆ ಸಹ ಮದುವೆ ನಿಶ್ಚಯವಾಗಿದೆ. ಸುಶಾಂತನ ಸ್ನೇಹಿತನನ್ನೇ ಅವಳು ಮದುವೆಯಾಗುತ್ತಿದ್ದಾಳೆ. ಮದುವೆಯಾಗಿ ಇನ್ನೆರಡು ತಿಂಗಳಲ್ಲಿ ನವಜೋಡಿ ಅಮೆರಿಕಾಗೆ ಹಾರಲಿದ್ದಾರೆ!”
“ಓಹೋ…. ಇದು ನನಗೆ ತಿಳಿದಿರಲಿಲ್ಲ. ಅವರಿಬ್ಬರಿಗೂ ನನ್ನ ಶುಭಾಶಯಗಳನ್ನು ತಿಳಿಸು. ಅದು ಸರಿ ನಿನ್ನ ನೆಚ್ಚಿನ ಗೆಳತಿಯರೆಲ್ಲರೂ ಮದುವೆಯಾಗಿ ದೂರ ಹೋದ ಮೇಲೆ ನೀನೇನು ಮಾಡುತ್ತಿ? ನಿನ್ನ ದಿನದ ಸಮಯವನ್ನೆಲ್ಲಾ ಹೇಗೆ ಕಳೆಯುತ್ತಿ ಎಂದು ನನಗೆ ಯೋಚನೆಯಾಗಿದೆ.”
“ಹೌದಲ್ವಾ ಅಪ್ಪಾಜಿ, ನಾನು ಈ ಬಗ್ಗೆ ಯೋಚಿಸಿರಲೇ ಇಲ್ಲ. ಬಹುಶಃ ನನ್ನ ನೆಚ್ಚಿನ ಫೋಟೋಗ್ರಫಿಯನ್ನು ಮುಂದುವರಿಸುವೆ.”
“ಆದರೆ ಸುಶಾಂತ್ ಕೂಡ ಅದನ್ನೇ ಬಯಸಿದ್ದನಲ್ಲವೇ?”
“ಹೌದು. ಆದರೆ ನಾನು ಅವನಿಂದ ದೂರ ಸರಿಯಲು ಕೇವಲ ಇದೊಂದೇ ಕಾರಣವಲ್ಲ. ಜೊತೆಗೆ ಬೇರೆ ಬೇರೆ ಕಾರಣಗಳಿವೆ. ಅದು ನಿಮಗೂ ಅರ್ಥವಾಗಿದೆ ಅಲ್ಲವೇ?”
“ಮನೋರಮಾ, ಇದು ಸುಶಾಂತನ ತಪ್ಪಲ್ಲ ನನ್ನ ತಪ್ಪು. ನಾನು ಮಾಡಿದ ತಪ್ಪಿನ ಪರಿಣಾಮವನ್ನು ಈಗ ನಾನೇ ಅನುಭವಿಸ ಬೇಕಾಗಿದೆ. ನಿನ್ನ ತಾಯಿ ತೀರಿಕೊಂಡ ನಂತರ ನಾನು ನಿನ್ನನ್ನು ಅತ್ಯಂತ ಮುದ್ದಿನಿಂದ ಬೆಳೆಸಿದೆ. ನೀನು ಹೇಳಿದ್ದಕ್ಕೆಲ್ಲಾ ಒಪ್ಪಿದೆ. ನಿನಗೆ ಅಗತ್ಯಕ್ಕಿಂತ ಹೆಚ್ಚು ಸ್ವಾತಂತ್ರ್ಯ ಕೊಟ್ಟೆ. ಇದೆಲ್ಲ ನಿನ್ನ ತಾಯಿ ಬದುಕಿದ್ದಿದ್ದರೆ ಸಾಧ್ಯವಿರುತ್ತಿರಲಿಲ್ಲ.”
“ಅಪ್ಪಾಜಿ….. ಅದು ಹಾಗಲ್ಲ. ಅಮ್ಮ ಇದ್ದಿದ್ದರೆ ಖಂಡಿತ ಇದಕ್ಕೆಲ್ಲಾ ಅವಕಾಶ ನೀಡುತ್ತಿರಲಿಲ್ಲ. ಆದರೂ ಅಮ್ಮನಿಗೆ ನಾನೆಂದರೆ ಬಹಳ ಪ್ರೀತಿ. ನನ್ನ ಜೀವನಶೈಲಿ ಮಾತ್ರ ಅವಳಿಗೆ ಇಷ್ಟವಾಗುತ್ತಿರಲಿಲ್ಲ. ನನ್ನನ್ನು ತಿದ್ದಲು ಸಾಕಷ್ಟು ಪ್ರಯತ್ನಿಸಿದ್ದಳು. ಆದರೆ ನಾನು ನನ್ನ ಹಠ ಬಿಟ್ಟಿರಲಿಲ್ಲ.
“ಹಾಗಾದರೆ…. ಇದೆಲ್ಲಾ ತಪ್ಪೆಂದು ನಿನಗೆ ಖಚಿತವಾಗಿ ಗೊತ್ತು. ಒಂದೆರಡು ಕ್ಷಣಕಾಲ ನಿನ್ನ ಕಣ್ಣುಗಳನ್ನು ಮುಚ್ಚಿಕೊಂಡು ಅಮ್ಮನನ್ನು ನೆನಪಿಸಿಕೊ. ಈಗಿನ ನಿನ್ನ ಪ್ರಶ್ನೆ, ಸಮಸ್ಯೆಗಳಿಗೆ ಅವಳೇನು ಪರಿಹಾರ ನೀಡುವಳೋ ತಿಳಿದುಕೊ….”
“ಅಮ್ಮ….. ಅತ್ಯಂತ ಅದ್ಭುತ! ಅವಳೊಮ್ಮೊಮ್ಮೆ ನನಗೆ ಅಡುಗೆ ಕಲಿತುಕೊಳ್ಳಲು ಸಲಹೆ ನೀಡುತ್ತಿದ್ದಳು….. ಆದರೆ ಈಗ ಕಾಲ ಬದಲಾಗಿದೆ. ನಾನು ಮೂರು ಹೊತ್ತು ಅಡುಗೆ ಮಾಡಿಕೊಂಡಿರಲಾರೆ….!?”
“ಸುಶಾಂತ್ ರಾತ್ರಿಯ ಅಡುಗೆಯನ್ನಷ್ಟೇ ತಾನೇ ಮಾಡಲು ಹೇಳಿರುವುದು…..?”
“ಹೌದು. ಪ್ರತಿ ವಾರಾಂತ್ಯಗಳಲ್ಲಿ ರಾತ್ರಿಯ ಅಡುಗೆಯನ್ನು ಅವನೇ ತಯಾರಿಸುವುದಾಗಿ ಹೇಳಿದ್ದ. ಆದರೆ ಇನ್ನುಳಿದ ಸಮಸ್ಯೆಗಳ ಬಗ್ಗೆ ಏನು? ಅವನಿಷ್ಟದಂತೆ ಅರ್ಧ ಡಜನ್ ಮಕ್ಕಳನ್ನು ಹೆರಲು ನನಗೆ ಸಾಧ್ಯವೇ?”
“ಇಲ್ಲ, ನನಗನಿಸುವ ಮಟ್ಟಿಗೆ ಸುಶಾಂತ್ ತಮಾಷೆಗಾಗಿ ಹಾಗೆ ಹೇಳಿದ್ದಾನೆ ಅನಿಸುತ್ತೆ. ಇದೇನು ತೀರಾ ಗಂಭೀರ ವಿಚಾರವಲ್ಲ. ನಾನವನ ಬಳಿ ಈ ಕುರಿತು ಮಾತನಾಡುತ್ತೇನೆ.”
“ಸರಿ ಬಿಡಿ ಅಪ್ಪಾಜಿ…. ನನ್ನ ಡ್ರೆಸ್ ಬಗ್ಗೆ ಅವನಿಗೇಕೆ ಬೇಸರ? ನನ್ನ ಮೇಲೇಕೆ ಅವನು ನಿರ್ಬಂಧ ಹೇರಬೇಕು?”
“ಅದೆಂದರೆ ಹೆಚ್ಚಿನ ಹುಡುಗರು ಈ ರೀತಿ ಬಯಸುತ್ತಾರೆ. ತನ್ನ ಪತ್ನಿ ಸುರಕ್ಷಿತವಾಗಿರಬೇಕು ಎನ್ನುವ ವಿಚಾರ ಮುಖ್ಯವಾಗಿರುತ್ತದೆ. ನೀನು ಟೀಶರ್ಟ್, ಜೀನ್ಸ್ ಮಿನಿ ಸ್ಕರ್ಟ್‌ಗಳನ್ನು ಹಾಕಿಕೊಳ್ಳುವುದು ನಿನ್ನ ಸುರಕ್ಷತೆಯ ದೃಷ್ಟಿಯಿಂದ ಅವನಿಗೆ ಒಳ್ಳೆಯದಲ್ಲ ಅನಿಸಿರಬೇಕು. ಹೀಗಾಗಿ ನೀನು ಹೊರಗೆ ಹೋಗುವಾಗ ಶಿಸ್ತಿನಿಂದ ಇರಬೇಕು ಎಂದು ಹೇಳಿದ್ದಾನೆ. ಇನ್ನು ನೀನು ನಿನ್ನ ಸ್ವಂತಕ್ಕಾಗಿ ಮಾಡುವ ಖರ್ಚು 10,000 ಅವನಿಗೆ ಹೆಚ್ಚಿನ ಹೊರೆ ಎನಿಸರಬೇಕು. ಅದಕ್ಕೆ ನಿನ್ನನ್ನು ಕೆಲಸಕ್ಕೆ ಹೋಗಿ ಸಂಪಾದಿಸಲು ಹೇಳಿದ್ದಾನೆ. ನಿನ್ನ ಸಂಪಾದನೆಯ ಹಣವನ್ನು ನೀನು ಖರ್ಚು ಮಾಡಲು ಅವನೇನೂ ನಿರ್ಬಂಧ ಹೇರಿಲ್ಲವಲ್ಲ…..”
“ಹೌದು ಅದೇನೋ ಸರಿ….”
“ನೋಡು ಮನೋರಮಾ, ಒಂದು ಸಂಬಂಧವನ್ನು ಕಡಿದುಕೊಳ್ಳುವುದು ಬಹಳ ಸುಲಭ. ಅದೇ ಒಂದು ಉತ್ತಮ ಸಂಬಂಧ ಗಟ್ಟಿಗೊಳಿಸಿಕೊಳ್ಳುವುದು ಬಹಳ ಕಷ್ಟ. ನೀನು ನಿನ್ನ ಸಮಸ್ಯೆಗಳನ್ನೆಲ್ಲಾ ನನ್ನ ಬಳಿ ಹೇಳಿಕೊಂಡಿದ್ದಿ. ಇದು ಕೇವಲ ನಿನ್ನೊಬ್ಬಳ ದೃಷ್ಟಿಕೋನದಿಂದ ಉಂಟಾದದ್ದು. ಸಂಸಾರದಲ್ಲಿ ಇಬ್ಬರೂ ಒಂದಾಗಿ ನಡೆಯಬೇಕು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೊಂದಾಣಿಕೆಯಿಂದ ಇದ್ದರೆ ಆಗ ಮಾತ್ರ ಇಂತಹ ಸಮಸ್ಯೆಗಳು ಸಮಸ್ಯೆಗಳಾಗಿ ಕಾಣಿಸುವುದಿಲ್ಲ.
“ಸುಶಾಂತ್ ಚಿನ್ನದಂತಹ ಹುಡುಗ. ನನಗೆ ಅವನು ಅಳಿಯನಾದದ್ದು ನನ್ನ ಸೌಭಾಗ್ಯ. ಏಕೆಂದರೆ ಅವನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುವ ನಂಬಿಕೆ ನನಗಿದೆ.
“ನಾನು ನಿನ್ನ ಪ್ರೀತಿಯ ಅಪ್ಪಾಜಿ, ಇದು ನಿನ್ನದೇ ಮನೆ. ಆದರೂ ನಾನು ಬಯಸಿದಂತೆ ನೀವಿಬ್ಬರೂ ನಗುನಗುತ್ತಾ ಒಟ್ಟಿಗೆ ಇಲ್ಲಿಗೆ ಬಂದರೆ ಆಗ ನನಗೆ ಸಿಗುವ ಆನಂದವೇ ಬೇರೆ. ಹೀಗಾಗಿ ಇನ್ನಾದರೂ ನೀನು ಸರಿಯಾದ ಮಾರ್ಗದಲ್ಲಿ ನಡೆದುಕೊಳ್ಳಬೇಕೆನ್ನುವುದು ನನ್ನ ಆಸೆ….” ಎಂದರು ರಾಯರು.
ಸ್ವಲ್ಪ ಹೊತ್ತು ಇಬ್ಬರೂ ಮಾತನಾಡಲಿಲ್ಲ. ನಂತರ, “ಅಪ್ಪಾಜಿ…. ನಾನು ಕಾಫಿ ಮಾಡುತ್ತೇನೆ. ಸುಶಾಂತನಿಂದ ಕಲಿತದ್ದು,” ಎನ್ನುತ್ತಾ ಮನೋರಮಾ ಕಾಫಿ ಮಾಡುವುದಕ್ಕೆ ಅಡುಗೆಮನೆಗೆ ಹೋದಳು.
ಮನೋರಮಾ ಎರಡು ಕಾಫಿ ಕಪ್‌ನೊಂದಿಗೆ ಬಂದು ಒಂದನ್ನು ತಂದೆಗೆಂದು ಟೀಪಾಯಿ ಮೇಲಿಟ್ಟಳು. ರಾಯರು ಕಾಫಿ ಕಪ್‌ನ್ನು ಕೈಗೆತ್ತಿಕೊಂಡು ಒಂದು ಗುಟುಕು ಕುಡಿದು, “ಕಾಫಿ ತುಂಬಾ ಚೆನ್ನಾಗಿದೆ. ಇತ್ತೀಚೆಗೆ ನಾನು ಇಷ್ಟು ಒಳ್ಳೆಯ ಕಾಫಿ ಕುಡಿದೇ ಇಲ್ಲ,” ಎಂದರು.
“ಅಪ್ಪಾಜಿ, ಕಾಫಿಗೆ ಸಕ್ಕರೆಯೇ ಹಾಕಿಲ್ಲ! ಇಷ್ಟು ಕೆಟ್ಟ ಕಾಫಿಯನ್ನು ಚೆನ್ನಾಗಿದೆ ಎಂದು ಹೇಗೆ ಹೇಳುತ್ತಿದ್ದೀರಿ? ನೀವು ನನ್ನ ಸಂತೋಷಕ್ಕಾಗಿ ಹೀಗೆ ಹೇಳುತ್ತಿರುವಿರಿ ತಾನೇ?” ಎಂದಳು.
“ಹೌದು ಮಗಳೇ….”
“ಅಪ್ಪಾಜಿ, ನಾನು ಸುಶಾಂತನ ಮನೆಗೆ ಹಿಂತಿರುಗುತ್ತೇನೆ. ಆದರೆ ಇನ್ನೆಂದೂ ನನ್ನ ಸಂತೋಷಕ್ಕಾಗಿ ಕಹಿಯನ್ನು ಸಿಹಿ ಎನ್ನಬೇಡಿ,” ಎಂದಳು.
ರಾಯರು ಏನಾದರೊಂದು ಹೇಳುವಷ್ಟರಲ್ಲಿ ಲೋಟಗಳನ್ನು ಸಿಂಕ್‌ಗೆ ಹಾಕಿ ಚಪ್ಪಲಿ ಮೆಟ್ಟಿಕೊಂಡು `ಟಪ್ ಟಪ್’ ಎಂದು ಶಬ್ದ ಮಾಡುತ್ತಾ ಅವಳು ಹೊರನಡೆದಳು.
ಇರುವ ಒಬ್ಬಳೇ ಮಗಳು ತುಸು ಕೋಪದಿಂದ ದೊಡ್ಡ ದೊಡ್ಡ ಹೆಜ್ಜೆಗಳನ್ನಿಡುತ್ತಾ ಮನೆಯಿಂದ ಹೊರ ಹೋಗುತ್ತಿದ್ದರೂ ರಾಯರು ಏನೂ ಹೇಳದೆ ಸುಮ್ಮನೆ ನೋಡುತ್ತಿದ್ದರು. ಅವಳು ಹೋಗುತ್ತಿರುದು ಸರಿಯಾದ ಹಾದಿಯಲ್ಲಿ ಎನ್ನುವುದು ಅವರಿಗೆ ತಿಳಿದಿತ್ತು.