ಯಾವ ರೀತಿ ಕೂದಲಿಗೆ ಬಣ್ಣ ಹಚ್ಚಿಸುವುದು ಹಾಗೂ ದೇಹದ ವಿಭಿನ್ನ ಅಂಗಾಂಗಗಳ ಮೇಲೆ ಟ್ಯಾಟೂ ಹಾಕಿಸುವುದು ಫ್ಯಾಷನ್ ಎನಿಸುತ್ತದೋ, ಅದೇ ರೀತಿ ನೇಲ್ ಆರ್ಟ್ ಕಡೆಗೂ ಯುವತಿಯರ ವಿಶೇಷ ಅಭಿರುಚಿ ದಿನೇದಿನೇ ಹೆಚ್ಚುತ್ತಿದೆ.
ಹಿಂದೆಲ್ಲ ಉಗುರನ್ನು ಸುಂದರಗೊಳಿಸಲು ಅವುಗಳ ಮೇಲೆ ಬಣ್ಣ ಬಣ್ಣದ ನೇಲ್ ಪಾಲಿಶ್ ಹಚ್ಚಲಾಗುತ್ತಿತ್ತು. ಎಷ್ಟೋ ಸಲ ಇವನ್ನು ಇನ್ನಷ್ಟು ಹೆಚ್ಚು ಆಕರ್ಷಕಗೊಳಿಸಲು ಇವುಗಳ ಮೇಲೆ 2 ಬಗೆಯ ಬಣ್ಣಗಳ ನೇಲ್ ಪಾಲಿಶ್ ಹಚ್ಚಲಾಗುತ್ತಿತ್ತು. ಆದರೆ ಕ್ರಮೇಣ ಫ್ಯಾಷನ್ ಲೋಕದಲ್ಲಿ ವಿಕಾಸ ಆಗುತ್ತಿದ್ದಂತ, ಫ್ಯಾಷನ್‌ಗೆ ಸಂಬಂಧಿಸಿದ ಎಲ್ಲಾ ವಸ್ತುಗಳಲ್ಲೂ ಬದಲಾವಣೆ ಕಂಡುಬರತೊಡಗಿತು.
ತಮ್ಮ ಕೂದಲಿನಿಂದ ಹಿಡಿದು ಉಗುರಿನವರೆಗೂ ಫ್ಯಾಷನೆಬಲ್‌ಗೊಳಿಸಲು ಇಂದಿನ ಯುವತಿಯರು ಬಹಳ ಇಷ್ಟಪಡುತ್ತಾರೆ.
ಯಾವುದೇ ಬಗೆಯ ಡೆಕೋರೇಟಿವ್ ಪಾಲಿಶ್, ಪೇಂಟ್ ಅಥವಾ ಇತರ ಆ್ಯಕ್ಸೆಸರೀಸ್ ಬಳಸಿ ಉಗುರನ್ನು ಸಿಂಗರಿಸುವುದೇ ನೇಲ್ ಆರ್ಟ್‌ನ ಮುಖ್ಯ ಉದ್ದೇಶ. ಅವನ್ನು ಆದಷ್ಟೂ ಸ್ಟೈಲಿಶ್ ಮಾಡಲಾಗುತ್ತದೆ. ಪ್ರತಿ ಆರ್ಟಿಸ್ಟ್ ನ ಕಲ್ಪನೆಗೆ ತಕ್ಕಂತೆ ನೇಲ್ ಆರ್ಟ್ ಉಗುರಿಗೆ ಅತ್ಯಾಕರ್ಷಕ ವಿನ್ಯಾಸ ಒದಗಿಸುತ್ತದೆ. ಇದನ್ನು ಆರ್ಟಿಫಿಶಿಯಲ್ಸ್ ನೇಲ್ ಟೆಕ್ನಾಲಜಿ ಎಂದೂ ಹೇಳಲಾಗುತ್ತದೆ.
ಉಗುರಿನ ಅಲಂಕಾರ ಹೆಚ್ಚೂ ಕಡಿಮೆ ಇಂದಿಗೆ 30-40 ವರ್ಷಗಳಷ್ಟು ಹಳೆಯದು. ಕೇವಲ ನೇಲ್ ಪಾಲಿಶ್‌ನಿಂದ ಆರಂಭವಾದ ಈ ಟ್ರೆಂಡ್ ಕ್ರಮೇಣ ಸಣ್ಣಪುಟ್ಟ ನಕ್ಷತ್ರಾಕಾರದ ಡಿಸೈನ್ಸ್, ಮುತ್ತು, ಸ್ಟೋನ್ಸ್ ಇತ್ಯಾದಿಗಳ ಬಳಕೆಯೊಂದಿಗೆ ಮುಂದುವರಿಯಿತು.
ಟ್ಯಾಟೂ ಹಾಕಿಸುವಷ್ಟೇ ಕ್ರೇಜ್ ಈ ನೇಲ್ ಆರ್ಟ್‌ಗೂ ಇದೆ ಎಂದರೆ ಉತ್ಪ್ರೇಕ್ಷೆಯಲ್ಲ.
ಇತ್ತೀಚೆಗಂತೂ ಕಿರುಬೆರಳಿನ ಉಗುರಿನ ಮೇಲೆ ಎಲ್ಲಾ ತರಹದ ಕಲಾತ್ಮಕ ಪ್ರಯೋಗಗಳೂ ನಡೆಯುತ್ತಿರುತ್ತವೆ. ಉಗುರಿಗೆ ಅತಿ ಸಣ್ಣ ಗಾತ್ರದ ರಿಂಗ್ ಅಳವಡಿಕೆಯೂ ಉಂಟು.
ವಿಭಿನ್ನ ಡಿಸೈನ್ಸ್ ನೇಲ್ ಆರ್ಟ್ ಹಲವು ವಿಧದಲ್ಲಿ ನಡೆಯುತ್ತದೆ. ಪ್ಲೇನ್ ಬಣ್ಣದಿಂದ ಕೂಡಿದ ಉಗುರಿನ ಮೇಲೆ ಗೋಲ್ಡ್ ಯಾ ಸಿಲ್ವರ್ ಹೂಗಳ ವಿನ್ಯಾಸ ಅಥವಾ ಸಣ್ಣ ಮುತ್ತುಗಳ ಅಲಂಕಾರ, ವಿಭಿನ್ನ ಶೇಡ್‌ಗಳ ಬಣ್ಣದ ಸ್ಪ್ರೇ, ಟ್ಯಾಟೂ….. ಹೀಗೆ ಅನೇಕ ವಿಧದಲ್ಲಿ ಉಗುರನ್ನು ಸಿಂಗರಿಸಲಾಗುತ್ತದೆ. ಇಷ್ಟು ಮಾತ್ರವಲ್ಲ, ಯಾವ ಮೆಟೀರಿಯಲ್‌ನಿಂದ ಡ್ರೆಸ್‌ನ್ನು ಸಿಂಗರಿಸಲಾಗುತ್ತದೋ ಅದನ್ನೇ ಉಗುರಿನ ಅಲಂಕಾರಕ್ಕೂ ಬಳಸುತ್ತಾರೆ. ನೇಲ್ ಆರ್ಟ್‌ಗಾಗಿ ಬೋಲ್ಡ್ ಕಲರ್ಸ್ ಅಂದರೆ ರೆಡ್, ಬ್ಲೂ, ಗೋಲ್ಡ್, ಗ್ರೀನ್, ಬ್ಲ್ಯಾಕ್ ಮುಂತಾದವುಗಳ ಬಳಕೆ ಒಳ್ಳೆಯದಿರುತ್ತದೆ.
ನೇಲ್ ಆರ್ಟ್ ಮಾಡಿಸುವ ಸಮಯದಲ್ಲೇ ನೇಲ್ ಪಾಲಿಶ್‌ನ ಆಯ್ಕೆ ನಡೆಯುತ್ತದೆ. ನೀವು ಎಲ್ಲಾ ಉಗುರುಗಳ ಮೇಲೂ ಒಂದೇ ತರಹದ ಡಿಸೈನ್ಸ್ ಮಾಡಿಸಬಹುದು ಅಥವಾ ಪ್ರತಿಯೊಂದು ಉಗುರಿನ ಮೇಲೂ ಬೇರೆ ಬೇರೆ ವಿಭಿನ್ನ ಡಿಸೈನ್ಸ್ ಮಾಡಿಸಬಹುದು.
ಇತ್ತೀಚೆಗೆ ನೇಲ್ ಆರ್ಟ್‌ಗಾಗಿ ವಿಶೇಷ ಬಗೆಯ ಸೂಕ್ಷ್ಮ ಉಪಕರಣಗಳನ್ನೂ ಬಳಸುತ್ತಾರೆ. ಅವುಗಳ ನೆರವಿನಿಂದ ಯಾವುದೇ ಡಿಸೈನ್ ಸುಲಭವಾಗಿ ಆಗುತ್ತದೆ.
ಗಮನಿಸತಕ್ಕ ಅಂಶಗಳು
ನೇಲ್ ಆರ್ಟ್ ಪ್ರಯೋಗದ ನಂತರ ಯಾವುದೇ ಉತ್ತಮ ಮಸಾಜ್ ಆಯಿಲ್‌ಬಳಸಿ, ಉಗುರನ್ನು ಮಸಾಜ್ ಮಾಡಬೇಕು. ಇದರಿಂದ ಅವುಗಳ ಸ್ವಚ್ಛತೆ ಮತ್ತು ಆರೋಗ್ಯ ಎರಡೂ ಸುಧಾರಿಸುತ್ತವೆ.
ಯಾವುದೇ ಋತುಮಾನವಿರಲಿ, ಉಗುರಿನ ರಕ್ಷಣೆ ಹಾಗೂ ಸ್ವಚ್ಛತೆ ಶುಭ್ರತೆಯತ್ತ ನಿರ್ಲಕ್ಷ್ಯ ತೋರಬಾರದು.
ಚಳಿಗಾಲದಲ್ಲಿ ಚರ್ಮದ ಜೊತೆ ಜೊತೆಯಲ್ಲೇ ಉಗುರು ಸಹ ಶುಷ್ಕವಾಗುತ್ತದೆ. ಆದ್ದರಿಂದ ಇಕ್ಕೆ ಆರ್ದ್ರತೆ ಒದಗಿಸಲು ಪ್ರತಿದಿನ ಇವನ್ನು ಆಯಿಲ್ ಅಥವಾ ಮಸಾಜ್ ಕ್ರೀಮಿನಿಂದ ಮಸಾಜ್ ಮಾಡುತ್ತಿರಬೇಕು.
ನೀರಿನಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಿದ ನಂತರ ಕೈಗಳನ್ನು ಚೆನ್ನಾಗಿ ಒಣಗಿಸಿ ಬಹಳ ಹೊತ್ತು ಕೈಗಳು ಒದ್ದೆಯಾಗಿದ್ದರೆ, ನಿಮಗೆ ಫಂಗಲ್ ಅಥವಾ ಉಗುರಿನ ಸೋಂಕು ತಗುಲಬಹುದು.
ರಾತ್ರಿ ಮಲಗುವ ಮುನ್ನಾ ಪ್ರತಿಸಲ ಕೈಗಳಿಗೆ ಪೆಟ್ರೋಲಿಂಯ ಜೆಲ್ಲಿ ಹಚ್ಚಿಕೊಳ್ಳಿ. ಇದರಿಂದ ಉಗುರಿಗೆ ಮಾಯಿಶ್ಚರೈಸರ್ ಮತ್ತು ಹೈಡ್ರೇಶನ್ನಿನ ಪೂರೈಕೆ ಆಗುತ್ತದೆ.
ನೇಲ್ ಪೇಂಟ್‌ನ ಬ್ರ್ಯಾಂಡ್ ಎಂದೂ ಅಗ್ಗ ಆಗಿರಬಾರದು. ಇಲ್ಲದಿದ್ದರೆ ಉಗುರು ದುರ್ಬಲಗೊಂಡು ಮುರಿಯತೊಡಗುತ್ತದೆ.
ಪೆಡಿಕ್ಯೂರ್ ಮಾಡಿಸುವಾಗ ಕ್ಯುಟಿಕಲ್ಸ್ ಸೆಲ್ಯುಲಸ್‌ನ್ನು ಕತ್ತರಿಸಬಾರದು. ಕ್ಯುಟಿಕಲ್ಸ್ ನಿಮ್ಮ ಉಗುರನ್ನು ಸೋಂಕಿನಿಂದ ರಕ್ಷಿಸಿದರೆ, ಸೆಲ್ಯುಲಸ್ ನಿಮ್ಮ ಉಗುರನ್ನು ಸುಪುಷ್ಟಗೊಳಿಸುತ್ತದೆ.
ಉಗುರಿನ ಸಂರಕ್ಷಣೆ
ಎಷ್ಟೋ ಮಹಿಳೆಯರಿಗೆ ನೇಲ್ ಪೇಂಟ್ ಹಚ್ಚಿಕೊಳ್ಳುವುದು ಇಷ್ಟವಾಗುವುದಿಲ್ಲ. ನಿಮಗೂ ಇದೇ ರೂಢಿ ಇದ್ದರೂ, ಒಂದು ಹಗುರಾದ ಕೋಟ್ ನೇಲ್ ಪೇಂಟ್ ಹಚ್ಚಿಕೊಳ್ಳಿ. ಇದರಿಂದ ಉಗುರಿಗೆ ನೀರಿನ ಹಾನಿ ತಟ್ಟದು.
ನೀವು ಮನೆಯ ನೆಲ ಒರೆಸುವಾಗ ಅಥವಾ ಪಾತ್ರೆ ತೊಳೆಯುವಾಗ ಕೈಗವಸು ಧರಿಸಿರಿ. ಇದು ನಿಮ್ಮನ್ನು ಡಿಟರ್ಜೆಂಟ್ ಬೆರೆತ ಕೆಮಿಕಲ್ಸ್ ನಿಂದ ರಕ್ಷಿಸುತ್ತದೆ.
ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ, ಮೊಳಕೆ ಕಟ್ಟಿದ ಕಾಳುಗಳು (ಪ್ರೋಟೀನ್ ಸಮೃದ್ಧ) ಮುಂತಾದ ವಸ್ತುಗಳನ್ನು ಹೆಚ್ಚು ಸೇವಿಸಿ, ಇದರಿಂದ ದೇಹಕ್ಕೆ ಝಿಂಕ್ ಪ್ರಮಾಣ ಧಾರಾಳವಾಗಿ ದೊರಕುತ್ತದೆ.
ಸ್ನಾನ ಮಾಡಿದ ತಕ್ಷಣ ಉಗುರು ಕತ್ತರಿಸಲು ಹೋಗಬೇಡಿ. ಏಕೆಂದರೆ ಆಗ ಅವು ಬಲು ಸಾಫ್ಟ್ ಆಗಿರುತ್ತವೆ, ಸುಲಭವಾಗಿ ಮುರಿದುಹೋಗುವ ಸಾಧ್ಯತೆಗಳಿವೆ.
ನೇಲ್ ಪಾಲಿಶ್ ಹಚ್ಚುವ ಮೊದಲು ಅಗತ್ಯವಾಗಿ ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಸಿದರೆ ಒಳ್ಳೆಯದು. ಇದರಿಂದ ಉಗುರು ಸ್ವಚ್ಛ, ಸ್ವಸ್ಥ, ಶಕ್ತಿಯುತ ಹಾಗೂ ಸುಂದರವಾಗಿರುತ್ತವೆ.
ಇದೇ ಸಂದರ್ಭದಲ್ಲಿ ನೆನಪಿಡತಕ್ಕ ಮತ್ತೊಂದು ಮುಖ್ಯ ಅಂಶವೆಂದರೆ, ಮೆನಿಕ್ಯೂರ್ ಪೆಡಿಕ್ಯೂರ್ ಮಾಡಿಸುವಾಗ, ಉಗುರನ್ನು ಶುಚಿಗೊಳಿಸಲು ಸಾಫ್ಟ್ ಬ್ರಶ್ ಮತ್ತು ವುಡನ್ ಸ್ಟಿಕ್ ತಾನೇ ಬಳಸಿದ್ದಾರೆ ಎಂದು ನೋಡಿಕೊಳ್ಳಿ.
ವಿಟಮಿನ್ `ಈ’ ಬೆರೆತ ಕ್ರೀಂ ಅಥವಾ ಯಾವುದೇ ಕ್ಯುಟಿಕಲ್ ಕ್ರೀಮಿನಿಂದ ಉಗುರನ್ನು ರೆಗ್ಯುಲರ್ ಆಗಿ 15-20 ನಿಮಿಷ ಮಸಾಜ್ ಮಾಡಿ. ಇದರಿಂದ ಉಗುರಿನ ಕೆಳ ಪದರದಲ್ಲಿ ರಕ್ತ ಸಂಚಾರ ತೀವ್ರವಾಗುತ್ತದೆ. ಉಗುರನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವುದು ಬಹಳ ಒಳ್ಳೆಯದು.
ನೇಲ್ ಡಿಸೈನಿಂಗ್ ಮಾಡಿಸುವಾಗ, ಎಂಥ ಡಿಸೈನ್ ಮಾಡಬೇಕೆಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳಿ, ಅದನ್ನು ಒಂದು ಕಾಗದದ ಮೇಲೆ ಬಿಡಿಸಿಕೊಳ್ಳಿ.
ನೇಲ್ ಡಿಸೈನರ್ ಮಾಡಿಸುವ 2-3 ದಿನಗಳ ಹಿಂದೆಯೇ ಹಚ್ಚಿರುವ ನೇಲ್ ಪಾಲಿಶ್ ತೆಗೆದುಬಿಡಿ, ಹೊಸದು ಹಾಕಬೇಡಿ. ಇದರಿಂದ ಉಗುರಿಗೆ ಬ್ರೀದಿಂಗ್ ಟೈಂ ಸಿಗುತ್ತದೆ.
– ಪಿ. ದಿವ್ಯಾ