ಬಹಳಷ್ಟು ವಿದ್ಯಾರ್ಥಿಗಳು ಚೆನ್ನಾಗಿ ಓದುತ್ತಾರೆ. ಆದರೂ ಅವರ ಫಲಿತಾಂಶ ಸಾಧಾರಣವಾಗಿರುತ್ತದೆ. ಅಧ್ಯಯನದ ಶೈಲಿ ಬಹಳ ಮುಖ್ಯ. ಪ್ರತಿ ವ್ಯಕ್ತಿಯೂ ಇತರರಿಗಿಂತ ವಿಭಿನ್ನ. ಆದ್ದರಿಂದ ಅಧ್ಯಯನದ ವಿಧಾನವನ್ನು ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಗುಣಲಕ್ಷಣಗಳಿಗೆ ಹೊಂದಿಸಬೇಕು. ನಿಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ತಕ್ಕಂತೆ ಓದುವುದು ಉತ್ತಮ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ನೀಡುವ ಸಲಹೆಯೇನೆಂದರೆ, ಯಾವುದೇ ತರಗತಿ, ಕೋರ್ಸ್ ಅಥವಾ ಪರೀಕ್ಷೆಗೆ ಕೂರು ಮುಂಚೆ ಸರಿಯಾಗಿ ಓದುವ ವಿಧಾನಂದರೆ `ನಿಮ್ಮನ್ನು’ ನೀವು ಅಧ್ಯಯನ ಮಾಡುವುದು.
ನಿಮ್ಮನ್ನೇ ಅಧ್ಯಯನ ಮಾಡಿ : ಕೆಲವು ದಿನಗಳ ಕಾಲ ನಿಮ್ಮ ಸಾಮರ್ಥ್ಯಗಳೇನು, ನಿಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು ಪ್ರಯತ್ನಿಸಿ. ಅಧ್ಯಯನ ಮಾಡುವಾಗ ನಾವು ಬಹಳಷ್ಟು ಕೆಲಸ ಮಾಡುತ್ತೇವೆ. ನಾವು ಓದುತ್ತೇವೆ, ಅರ್ಥ ಮಾಡಿಕೊಳ್ಳುತ್ತೇವೆ, ಗ್ರಹಿಸುತ್ತೇವೆ, ಜ್ಞಾಪಿಸಿಕೊಳ್ಳುತ್ತೇವೆ, ಧಾರಣ ಮಾಡಿಕೊಳ್ಳುತ್ತೇವೆ, ನಂತರ ವ್ಯಕ್ತಪಡಿಸುತ್ತೇವೆ. ಈ ಎಲ್ಲ ಮಾನಸಿಕ ಶಕ್ತಿಗಳೊಂದಿಗೆ ಜಾಗರೂಕತೆಯಿಂದಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಉದ್ದೇಶ ಹಾಗೂ ಪ್ರೇರಣೆಯೂ ಬಹಳ ಅಗತ್ಯ.
ನಿಮ್ಮ ಪ್ರಾಮಾಣಿಕತೆ : ನೀವು ಪ್ರಾಮಾಣಿಕರೋ ಅಲ್ಲವೋ ಎಂದು ಮೊದಲು ಯೋಚಿಸಿ. ನಿಮ್ಮೆಲ್ಲಾ ಸಮಯ, ಶಕ್ತಿ ಕೊಟ್ಟು ಓದಿನಲ್ಲಿ ಕೇಂದ್ರೀಕರಿಸಲು ಸಿದ್ಧವಿದ್ದೀರಾ ಅಥವಾ ನೀವು ಪ್ರಯತ್ನಿಸುತ್ತಿದ್ದೀರೆಂದು ನಿಮ್ಮ ಪೋಷಕರನ್ನು ಹಾಗೂ ನಿಮ್ಮನ್ನು ನೀವೇ ಮೂರ್ಖರನ್ನಾಗಿಸುತ್ತಿದ್ದೀರಾ? ನೀವು ಪ್ರಾಮಾಣಿಕರಾಗಿರಬೇಕು. ಒಂದು ವೇಳೆ ನೀವು ಯಶಸ್ವಿಯಾಗದಿದ್ದರೆ ಅದು ನಿಮ್ಮ ಕಠಿಣ ಪರಿಶ್ರಮ, ಸಾಮರ್ಥ್ಯಗಳು ಹಾಗೂ ನಿಮ್ಮ ಪ್ರಾಮಾಣಿಕತೆಯ ಮೇಲೆ ಪರಿಣಾಮ ಬೀರುತ್ತದೆ.
ನಿಮ್ಮ ಗುರಿ : ಒಮ್ಮೆ ಯೋಚಿಸಿ. ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದಿದ್ದೀರಾ ಅಥವಾ ಏನೂ ಓದದೆ ನಿಮ್ಮ ತಂದೆಯ ಸಂಪಾದನೆಯನ್ನು ಹಾಳುಮಾಡಬೇಕೆಂದಿದ್ದೀರಾ? ನಿಮ್ಮ ಕೆಚ್ಚು ತೋರಿಸಿ ವೈಯಕ್ತಿಕ ಸಾಧನೆ ಮಾಡುತ್ತೀರಾ ಅಥವಾ ಏನಾದರೂ ಮಾಡಲು ಗಂಭೀರವಾಗಿ ಚಿಂತಿಸುವುದಿಲ್ಲವೇ? ಕನ್ನಡಿಯ ಮುಂದೆ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತೀರಾ?
ಆತ್ಮ ನಿಯಂತ್ರಣ : ಬೇರೆ ಕಡೆಗೆ ಗಮನ ಹೋಗದಂತೆ ನಿಮ್ಮನ್ನು ನಿಯಂತ್ರಿಸಿಕೊಳ್ಳುವಿರಾ? ಏಕಾಗ್ರತೆಯಿಂದ ಓದಿದರೆ ನಿಮ್ಮ ಬಿಡುವಿನ ಸಮಯವನ್ನು ಆನಂದಿಸಬಹುದು. ಆದರೆ ಬಿಡುವಿನ ಸಮಯ ಹೊಂದುವುದನ್ನೇ ಅಭ್ಯಾಸ ಮಾಡಿಕೊಂಡರೆ ನಿಮ್ಮ ಓದು ಕುಂಠಿತವಾಗುತ್ತದೆ ಆದ್ದರಿಂದ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಬೇಕು.
ನೀವು ವ್ಯವಸ್ಥಿತರಾಗಿದ್ದೀರಾ? : ಕಠಿಣ ವಿಷಯಗಳ ಬಗ್ಗೆ ಹಾಗೂ ನೀವು ಅನುಸರಿಸಬೇಕಾದ ಪ್ಲ್ಯಾನಿಂಗ್ ಬಗ್ಗೆ ಟೈಂ ಟೇಬಲ್ ಸಿದ್ಧಪಡಿಸಿದ್ದೀರಾ? ಇಲ್ಲವೆಂದರೆ ಕೂಡವೇ ಟೈಂ ಟೇಬಲ್ ಸಿದ್ಧಪಡಿಸಿ ಅದರಂತೆ ಅಭ್ಯಾಸದಲ್ಲಿ ನಿರತರಾಗಿ.
ಅವಿರತ ಶ್ರಮ : ನೀವು ಟೈಂ ಟೇಬಲ್ ಅನುಸರಿಸುತ್ತಿದ್ದೀರಾ? ಬಿಡುವಿನ ವೇಳೆ ಇದ್ದರೂ ಸಮಯ ಹಾಳು ಮಾಡದಿರುವಷ್ಟು ಮಾನಸಿಕವಾಗಿ ಸದೃಢರಾಗಿರುವಿರಾ? ಪಠ್ಯದ ವಿಷಯ ಕಠಿಣವಾಗಿದ್ದರೂ ಓದು ಮುಂದುವರೆಸುತ್ತೀರಾ? ನೀವು ಪಲಾಯನವಾದಿಗಳೇ ಅಥವಾ ನಿಮ್ಮ ಜಡತೆ ಹಾಗೂ ಸೋಮಾರಿತನ ಬದಿಗಿಟ್ಟು ಪ್ರಯತ್ನ ಮುಂದುವರೆಸುತ್ತೀರಾ? ವಾಸ್ತವವೆಂದರೆ ನಿಮ್ಮ ಮನಸ್ಸು ನಿಮ್ಮ ನಿಯಂತ್ರಣದಲ್ಲೇ ಇದೆ. ನಿಮಗೆ ಬೇಕೆನ್ನಿಸಿದರೆ ನೀವು ಅವಿರತವಾಗಿ ಶ್ರಮಿಸಬಹುದು.
ನಿಮ್ಮ ಮನೋವೃತ್ತಿ : ನೀವು ಚೆನ್ನಾಗಿ ಓದಿ ಹೆಚ್ಚಿನ ಅಂಕ ಗಳಿಸಬೇಕೆಂದಿದ್ದೀರಾ? ನಿಮ್ಮ ಪೋಷಕರು ಬಯಸುತ್ತಿದ್ದಾರೆಂದೇ ಓದುತ್ತಿದ್ದೀರಾ? ನಿಮಗೆ ಇಷ್ಟವಿಲ್ಲದ ವಿಷಯಗಳನ್ನು ಓದಲು ಅವರು ಒತ್ತಾಯಿಸುತ್ತಿದ್ದಾರೆಯೇ? ಪೋಷಕರಿಗೆ ಅದರ ಬಗ್ಗೆ ವಿವರಿಸಿ ಮನವೊಲಿಸಿ. ಅವರು ಇನ್ನೂ ಒತ್ತಾಯಿಸುತ್ತಿದ್ದರೆ, ನೀವು ಅದಕ್ಕೆ ಒಪ್ಪಿಕೊಂಡು ಉತ್ತಮವಾಗಿ ಪ್ರಯತ್ನಿಸಬೇಕು.
ಸರಿಯಾದ ವಿಧಾನವೆದರೆ ಯಾವುದಾದರೂ ಕೆಲಸ ಮಾಡುತ್ತಿದ್ದರೆ ಅದರ ಬಗ್ಗೆ ಸಂಪೂರ್ಣ ಗಮನ ಕೊಡಿ. ನಿಮಗೆ ಕಡಿಮೆ ಅಂಕಗಳು ಬಂದರೆ ನಿಮ್ಮ ಪ್ರತಿಷ್ಠೆಗೆ ಪೆಟ್ಟು ಬೀಳುವುದಿಲ್ಲವೇ? ನಿಮ್ಮ ಸಾಮರ್ಥ್ಯವನ್ನು ಪ್ರಶ್ನಿಸಿದಂತಾಗುವುದಿಲ್ಲವೇ? ಜನ ನಿಮ್ಮನ್ನು ಟೀಕೆ ಮಾಡುವುದಿಲ್ಲವೇ? ನೀವು ಚೆನ್ನಾಗಿ ಓದದೇ ನಿಮ್ಮ ಪೋಷಕರ ಮೇಲೆ ದ್ವೇಷ ಸಾಧಿಸಲು ಹೊರಟರೆ ನಿಮ್ಮ ಅಂತಸ್ತಿಗೆ ಧಕ್ಕೆಯಾಗುತ್ತದೆ ಮತ್ತು ನಿಮ್ಮ ಸ್ಥಾನಭ್ರಷ್ಟವಾಗುತ್ತದೆ. ಆದ್ದರಿಂದ ಉತ್ತಮವಾಗಿ ಪ್ರಯತ್ನಿಸಿ.
ನಿಮ್ಮ ಜಾಣ್ಮೆ : ಪ್ರತಿಯೊಬ್ಬರೂ ಪ್ರತಿಭಾವಂತ ಬುದ್ಧಿಶಕ್ತಿಯೊಂದಿಗೆ ಹುಟ್ಟಿರುವುದಿಲ್ಲ. ಆದರೂ ಸಾಧಾರಣ ಬುದ್ಧಿವಂತಿಕೆ ಇರುವ ವಿದ್ಯಾರ್ಥಿಗಳು ಒಳ್ಳೆಯ ಏಕಾಗ್ರತೆ, ಗೆಲ್ಲಬೇಕೆಂಬ ದೃಢನಿರ್ಧಾರ ಬೆಳೆಸಿಕೊಂಡು ಕೊರತೆಯನ್ನು ಸರಿದೂಗಿಸಿಕೊಳ್ಳುತ್ತಾರೆ. ಮಾನಸಿಕವಾಗಿ ಉತ್ತಮ ವೇಗ ಹೊಂದಲು ದೃಢಮನಸ್ಸು ಹಾಗೂ ಇಚ್ಛಾಶಕ್ತಿ ಇದೆಯೇ? ಒಂದು ವೇಳೆ ಇಲ್ಲದಿದ್ದರೆ, ನೀವು ಜಯ ಗಳಿಸುವವರೆಗೆ ನಿರಂತರವಾಗಿ ಪ್ರಯತ್ನಿಸಿ ಹಾಗೂ ಇಚ್ಛಾಶಕ್ತಿ ಬೆಳೆಸಿಕೊಳ್ಳಿ.
ನಿಮ್ಮ ಪರಿಶ್ರಮ : ಇದನ್ನು ಬಹಳ ಕಠಿಣ ಪರಿಶ್ರಮದಿಂದ ಮಾಡಬಹುದು. ಒಂದು ಬಾರಿ ಓದಿದಾಗ ನಿಮಗೆ ಅರ್ಥವಾಗದಿದ್ದರೆ 4 ಬಾರಿ ಓದಿ, 8 ಬಾರಿ ಓದಿ. ಅದರಿಂದ ಬೇಕಾದಾಗ ಉಪಯೋಗಿಸಿಕೊಳ್ಳಲು ಅನುಕೂಲವಾಗುವಂತೆ ಓದಿದ ವಿಷಯವನ್ನು ಮೆದುಳಿನಲ್ಲಿ ಭದ್ರವಾಗಿಡುತ್ತದೆ. ನೀವು ಕಷ್ಟಪಟ್ಟು ದುಡಿಯಲು ಸಿದ್ಧರಾಗಿದ್ದೀರಾ? ನಿಮ್ಮ ಬಿಡುವಿನ ವೇಳೆ ಪಡೆದು ಪರಾವಲಂಬಿ ಜೀವಿಯಾಗುವಿರಾ ಅಥವಾ ಹೆಚ್ಚಿನ ಸಮಯ ಪಡೆದು ಹೆಚ್ಚುವರಿ ದುಡಿಮೆ ಮಾಡಿ ನಿಮ್ಮ ಭವಿಷ್ಯದ ಜೀವನಕ್ಕೆ ಸುಭದ್ರ ಆಧಾರ ಮಾಡಿಕೊಳ್ಳುವಿರಾ?
ನಿಮ್ಮ ಏಕಾಗ್ರತೆ : ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಬೇಕು. ಓದಿದ್ದನ್ನೆಲ್ಲ ನೆನಪಿಟ್ಟುಕೊಳ್ಳಲು ಎಷ್ಟು ಹೊತ್ತು ಓದಬೇಕು? ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚೇ? ಒಂದು ವೇಳೆ ಅದು 10 ನಿಮಿಷಗಳಾದರೆ ವಿದ್ಯಾರ್ಥಿಗಳು 10 ನಿಮಿಷ ಓದಿ 5 ನಿಮಿಷ ವಿರಮಿಸಬೇಕು.
ವಿದ್ಯಾರ್ಥಿಗಳು ಯಾವುದಾದರೂ ದೈಹಿಕ ಚಟುವಟಿಕೆಯಲ್ಲಿ ತೊಡಗಿ ಅದರಿಂದ ದೇಹಕ್ಕೆ ಹೆಚ್ಚು ಆಮ್ಲಜನಕ ಪಡೆದು ಮತ್ತೆ ಓದಲು ಕೂಡಬೇಕು. ಈ ಚಟುವಟಿಕೆಗಳಿಂದ ಅಥವಾ ಸಂಗೀತ ಕೇಳುವುದು ಇತ್ಯಾದಿ ಮನರಂಜನೆಗಳಿಂದ ಅವರ ಮನಸ್ಸು ತಾಜಾ ಆಗಿ, ಕಲಿಯುವಿಕೆ ಸುಲಭವಾಗುತ್ತದೆ. 10 ನಿಮಿಷಗಳ ಕಾಲ ಓದಿದಾಗ ಅವರ ಮನಸ್ಸು ಹಾಗೂ ನೆನಪುಗಳು ಎಷ್ಟು ತಾಜಾ ಆಗಿರಬೇಕೆಂದರೆ ಓದುತ್ತಿರುವ ವಿಷಯ ಅವರ ಮನಸ್ಸಿನಲ್ಲಿ ಫೋಟೋದಂತೆ ಅಚ್ಚೊತ್ತಿರಬೇಕು. ಆದರೂ ಮೆದುಳನ್ನು ತಾಜಾ ಮಾಡಲು ವಿರಾಮದ ಸಮಯನ್ನು ಹೆಚ್ಚಿಸಬಾರದು. ಅದರಿಂದ ಓದಿಗೆ ಧಕ್ಕೆಯಾಗಬಾರದು.
ನಿಮ್ಮ ಅರ್ಥೈಸುವ ಶಕ್ತಿ : ವಿದ್ಯಾರ್ಥಿಗಳು ಬರಿಯ ಪದಗಳನ್ನಷ್ಟೇ ಅರ್ಥ ಮಾಡಿಕೊಳ್ಳದೆ, ಬರಿಯ ಕಂಠಪಾಠ ಮಾಡದೆ ವಿಷಯದ ಭಾವಾರ್ಥ, ಅದರ ಅಭಿಪ್ರಾಯವನ್ನು ಅರ್ಥ ಮಾಡಿಕೊಳ್ಳಬೇಕು. ದೊಡ್ಡ ತರಗತಿಗಳಲ್ಲಿ ದೊಡ್ಡ ಕೋರ್ಸ್‌ಗಳಲ್ಲಿ ಹೆಚ್ಚು ವಿಷಯಗಳನ್ನು ಅಭ್ಯಾಸ ಮಾಡಬೇಕಾಗಿರುವುದರಿಂದ `ಕಂಠಪಾಠ’ ಮಾಡಿ ಕಲಿಯುವುದು ಬಹಳ ಕಷ್ಟ. ವಿದ್ಯಾರ್ಥಿಗಳು ಸಣ್ಣ ಪುಟ್ಟ ವಿವರಗಳನ್ನೂ ವಿಶ್ಲೇಷಿಸಿ ಅರ್ಥ ಮಾಡಿಕೊಂಡರೆ ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಹುದು.
ವಿಶೇಷವಾಗಿ ಸೆಕೆಂಡರಿ ಶಾಲೆಗಳಲ್ಲಿ ಪರಿಚಯಿಸಿರುವ ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸುವಾಗ ವಿದ್ಯಾರ್ಥಿಗಳು ಅತ್ಯಂತ ಜಾಗರೂಕರಾಗಿರಬೇಕು. ಸಣ್ಣ ಸಣ್ಣ ಸೂಕ್ಷ್ಮ ವಿವರಗಳನ್ನೂ ಹಾಗೂ ವಿಷಯದ ಮೂಲಭಾಗವನ್ನೂ ಗಮನದಲ್ಲಿಡಬೇಕು. ಆಗಲೇ ಸರಿಯಾದ ಉತ್ತರವನ್ನು ಟಿಕ್ ಮಾಡಬಹುದು. ಈ ವಿಧಾನ ಸುಲಭವಲ್ಲ. ಏಕೆಂದರೆ ಪಠ್ಯಭಾಗದಿಂದ ಯಾವುದನ್ನಾದರೂ ಕೇಳಬಹುದು.
ನಿಮ್ಮ ಜ್ಞಾಪಕಶಕ್ತಿ : ವಿದ್ಯಾರ್ಥಿಗಳು ತಮ್ಮ ಜ್ಞಾಪಕಶಕ್ತಿಯ ಮಿತಿಯನ್ನು ತಿಳಿದುಕೊಂಡಿರಬೇಕು ಹಾಗೂ ಅದು ಗರಿಷ್ಠ ಹಂತದವರೆಗೆ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಪ್ರತಿಯೊಂದು ಮನಸ್ಸೂ ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಒಂದು ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಇಡೀ ವರ್ಷ ಓದಲೇ ಇಲ್ಲ. ಪರೀಕ್ಷೆಯ ಹಿಂದಿನ ದಿನ ರಾತ್ರಿಯಿಡೀ ಅವನು ಯಾರನ್ನಾದರೂ ಕೂಡಿಸಿಕೊಂಡು ಪಠ್ಯಪುಸ್ತಕವನ್ನು ಗಟ್ಟಿಯಾಗಿ ಓದಿಸುತ್ತಿದ್ದ. ಮರುದಿನ ಅವನು ಪರೀಕ್ಷೆ ಬರೆಯುತ್ತಿದ್ದ ಹಾಗೂ ಮೊದಲ ಸ್ಥಾನ ಗಳಿಸುತ್ತಿದ್ದ. ನೀವು ಯಾರೂ ಇದನ್ನು ಪ್ರಯತ್ನಿಸಬೇಡಿ. ಎಲ್ಲರಿಗೂ ಅಂತಹ ತೀಕ್ಷ್ಣ ನೆನಪಿನ ಶಕ್ತಿ ಇರುವುದಿಲ್ಲ. ವಿದ್ಯಾರ್ಥಿಗಳು ತಮ್ಮ ನೆನಪಿನ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡಿರಬೇಕು ಹಾಗೂ ಅದಕ್ಕೆ ತಕ್ಕಂತೆ ಓದಬೇಕು.
ನಿಮ್ಮ ಧಾರಣಾಶಕ್ತಿ : ವಿದ್ಯಾರ್ಥಿಗಳು ಎಷ್ಟು ಹೊತ್ತು ತಾವು ಓದಿದ್ದನ್ನು ಧಾರಣೆ ಮಾಡಿಕೊಳ್ಳುತ್ತಾರೆಂದು ತಿಳಿದುಕೊಳ್ಳಬೇಕು. ಅವರು ಓದಿದ್ದನ್ನು ಮರುದಿನವೇ ಮರೆತುಹೋದರೆ ಅಥವಾ ಒಂದು ವಾರದ ನಂತರ ಮರೆತುಹೋದರೆ ಆ ಪಠ್ಯವನ್ನು ಆಗಾಗ್ಗೆ ಪರಿಶೀಲಿಸಬೇಕು. ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಯಾವುದೇ ಪ್ರಶ್ನೆಗೆ ಉತ್ತರಿಸಲು ಸಿದ್ಧರಿರಬೇಕು.
ನಿಮ್ಮ ಸಾಮರ್ಥ್ಯ : ವಿದ್ಯಾರ್ಥಿಗಳು ಭಾಷೆಯ ಬಗ್ಗೆ ಪ್ರಭುತ್ವ ಹೊಂದಿರಬೇಕು. ಪ್ರಶ್ನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಉತ್ತರಗಳ ಮುಖ್ಯಾಂಶಗಳನ್ನು ಸ್ಪಷ್ಟವಾಗಿ ಬರೆದಿಟ್ಟುಕೊಳ್ಳಬೇಕು. ಪ್ರಶ್ನೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡರೆ ಅದುವರೆಗಿನ ಕಠಿಣ ಪರಿಶ್ರಮ ವ್ಯರ್ಥವಾಗುವುದು.
ನಿಮ್ಮ ಅಭಿವ್ಯಕ್ತಿ : ಉತ್ತರಗಳನ್ನು ವಿವರಿಸುವಾಗ ಬರೆಯುವ ಶೈಲಿ ಸ್ಪಷ್ಟವಾಗಿ ಹಾಗೂ ಸರಳವಾಗಿರಬೇಕು. ಬರಿಯ ಆಡಂಬರದ ಭಾಷಾ ಪ್ರಯೋಗ ಬೇಕಾಗಿಲ್ಲ. ವಿದ್ಯಾರ್ಥಿಗಳು ಪರೀಕ್ಷಕರಿಗೆ ಸುಲಭವಾಗಿ ಅರ್ಥವಾಗುವಂತೆ ಉತ್ತರ ಬರೆಯಬೇಕು.
ಭಾಷೆಯ ಮೇಲೆ ಹಿಡಿತ : ಉತ್ತರಿಸುವಾಗ ಭಾಷೆಯ ಮೇಲೆ ಹಿಡಿತ ಮುಖ್ಯ. ವಿದ್ಯಾರ್ಥಿಗಳಿಗೆ ವ್ಯಾಕರಣದ ಬಗ್ಗೆ ಒಳ್ಳೆಯ ಜ್ಞಾನವಿದ್ದರೆ ಉತ್ತರದಲ್ಲಿ ಯಾವುದೇ ತಪ್ಪಾಗುವುದಿಲ್ಲ.
ವಾಕ್ಯರಚನೆ : ವಾಕ್ಯ ರಚನೆ ಸರಳವಾಗಿ, ಸ್ಪಷ್ಟವಾಗಿ ಕರ್ತರಿ ಪ್ರಯೋಗದಲ್ಲೇ ಇರಬೇಕು. ಕರ್ಮಣಿ ಪ್ರಯೋಗವನ್ನು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮಾಡಬೇಕು.
ನಿಮ್ಮ ಶಬ್ದ ಭಂಡಾರ : ಅದು ಬರಹಕ್ಕೆ ಅನುಗುಣವಾಗಿ ಇರಬೇಕು. ಕಠಿಣ ಶಬ್ದಗಳನ್ನು ಬಾಲಿಶ ವಾಕ್ಯಗಳ ಮಧ್ಯೆ ಹಾಕಿದರೆ ಅಸಹ್ಯವಾಗಿರುತ್ತದೆ. ಕಠಿಣ ಪದಗಳನ್ನು ಉಪಯೋಗಿಸುವುದಾದರೆ ಸರಿಯಾಗಿ ಉಪಯೋಗಿಸಬೇಕು ಹಾಗೂ ಭಾಷೆಯ ಪ್ರಮಾಣೀಕೃತ ಸೊಗಡಿಗೆ ಹೊಂದುವಂತಿರಬೇಕು. ಭಾಷೆಯ ಈ ಗ್ರಹಿಕೆ ಇಲ್ಲದಿದ್ದರೆ ಸರಳವಾದ ಹಾಗೂ ಸರಿಯಾದ ಭಾಷೆ ಉಪಯೋಗಿಸಬೇಕು. ಇದೆಲ್ಲವನ್ನೂ ನಿರಂತರ ಅಭ್ಯಾಸ ಹಾಗೂ ಅಧ್ಯಯನದಿಂದ ಕಲಿಯಬಹುದು.
ನಿಮ್ಮ ಕೈಬರಹ : ಒಳ್ಳೆಯ ಕೈಬರಹ ಪರೀಕ್ಷಕರನ್ನು ಇಂಪ್ರೆಸ್ ಮಾಡುತ್ತದೆ. ಪರೀಕ್ಷಕರಿಗೆ ನೀವು ಒಬ್ಬ ಸ್ಮಾರ್ಟ್ ವ್ಯಕ್ತಿಯಲ್ಲ. ಬದಲಾಗಿ ಒಂದು ರಿಜಿಸ್ಟರ್ ನಂಬರ್ ಹಾಗೂ ಕೈ ಬರಹಷ್ಟೆ. ಉತ್ತಮ ಕೈಬರಹ ಸುಸ್ತಾಗಿರುವ ಪರೀಕ್ಷಕರ ಮೂಡ್ ಸರಿ ಮಾಡಿ ಧಾರಾಳವಾಗಿ ಅಂಕಗಳನ್ನು ಕೊಡಿಸಬಹುದು. ಅಕ್ಷರಗಳನ್ನು ಒಂದೇ ದಿಕ್ಕಿನಲ್ಲಿ, ಒಂದೇ ಗಾತ್ರದಲ್ಲಿ ಮಧ್ಯೆ ಜಾಗ ಬಿಟ್ಟು ಬರೆದರೆ ನಿಮ್ಮ ಕೈಬರಹದಲ್ಲಿ ಸುಧಾರಣೆಯಾಗುವುದು.
ನಿಮ್ಮ ಮನೋದಾರ್ಢ್ಯತೆ : ವಿದ್ಯಾರ್ಥಿಗಳು ತಾವು ಎಷ್ಟು ಧೈರ್ಯಶಾಲಿಗಳು ಅಥವಾ ಪುಕ್ಕಲರು ಎಂದು ತಿಳಿದುಕೊಳ್ಳಬೇಕು. ಹೆಚ್ಚು ಭಯ, ಆತಂಕ ಅಥವಾ ಪುಕ್ಕಲುತನ ಇದ್ದಾಗ ಕಲಿತದ್ದು ಮರೆತುಹೋಗಬಹುದು. ಕೊಂಚ ಆತಂಕ ಒಳ್ಳೆಯದು. ಅದರಿಂದ ದೇಹಕ್ಕೆ ಕೆಲವು ಹಾರ್ಮೋನುಗಳ ಬೆಂಬಲ ಸಿಗುತ್ತದೆ. ಬಹಳಷ್ಟು ಆತಂಕವಿದ್ದರೆ ಮನಸ್ಸು ನಿಷ್ಕ್ರಿಯವಾಗುತ್ತದೆ. ಅಂತಹ ಸಮಯದಲ್ಲಿ ಧ್ಯಾನ, ಆಟ, ವ್ಯಾಯಾಮ ಮತ್ತು ಯೋಗ ಸಹಾಯ ಮಾಡುತ್ತದೆ. ಆತಂಕಗೊಂಡು ವರ್ಷವೆಲ್ಲಾ ಕಲಿತದ್ದನ್ನು ಮರೆಯುವುದು ಅಥವಾ ಶಾಂತವಾಗಿದ್ದು ಚೆನ್ನಾಗಿ ಉತ್ತರಿಸುವುದು ವಿದ್ಯಾರ್ಥಿಗಳ ಕೈಯಲ್ಲೇ ಇದೆ. ದೀರ್ಘ ಉಸಿರಾಟದಿಂದ ಮನಸ್ಸನ್ನು ಶಾಂತಗೊಳಿಸಬಹುದು.
ಈ ಎಲ್ಲ ವಿಷಯಗಳ ಬಗ್ಗೆ ಜಾಗರೂಕತೆ ವಹಿಸಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಹಾಗೂ ಪ್ರಯತ್ನಕ್ಕೆ ತಕ್ಕಂತೆ ಉತ್ತಮವಾಗಿ ಅಧ್ಯಯನ ಮಾಡಬೇಕು. ಒಂದುವೇಳೆ ತಮಗೆ ಮೇಲಿನ ಯಾವುದೇ ಗುಣಗಳಿಲ್ಲ ಎಂದು ವಿದ್ಯಾರ್ಥಿಗಳಿಗೆ ಅನ್ನಿಸಿದರೆ ತಮ್ಮ ಕೊರತೆಗಳನ್ನು ಪೂರೈಸಿಕೊಂಡು, ಶಕ್ತಿ ಹೆಚ್ಚಿಸಿಕೊಂಡು ಪ್ರಯತ್ನಿಸಬೇಕು. ಇದು ಅವರು ಚೆನ್ನಾಗಿ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ.
– ರುಕ್ಮಿಣಿ ರಾವ್