ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿರಬಹುದು, ಪುರುಷರ ಹೆಜ್ಜೆಯೊಂದಿಗೆ ಹೆಜ್ಜೆ ಇಟ್ಟು ನಡೆಯುತ್ತಿರಬಹುದು. ಆದರೆ ಅವರ ಕೆಲವು ಧೋರಣೆಗಳು ಮೊದಲು ಹೇಗಿದ್ದವೋ, ಈಗಲೂ ಹಾಗೆಯೇ ಇವೆ. ಹಣದ ಬಗೆಗಿನ ವಿಷಯವನ್ನೇ ತೆಗೆದುಕೊಳ್ಳಿ, ಅವರು ಖರ್ಚು ಮಾಡುವುದಕ್ಕಿಂತ ಹೆಚ್ಚಾಗಿ ಉಳಿತಾಯದ ಬಗ್ಗೆಯೇ ಹೆಚ್ಚು ವಿಶ್ವಾಸ ಹೊಂದಿರುತ್ತಾರೆ. ತಮ್ಮ ಇಚ್ಛೆಗಳ ಮೇಲೆ ಕಡಿವಾಣ ಹಾಕಿಕೊಳ್ಳಲು ಅವರಿಗೆ ಈಗಲೂ ಬರುತ್ತದೆ. ಈಗಂತೂ ಅವರು ಹಲವು ಕಡೆ ಹಣ ಹೂಡಿಕೆ ಮಾಡಲು ಇಷ್ಟಪಡುತ್ತಾರೆ.
ಈ ಕುರಿತಂತೆ ಮನೋಚಿಕಿತ್ಸಕಿ ಶಿಲ್ಪಾ ಹೀಗೆ ಹೇಳುತ್ತಾರೆ, “ಈಗಲೂ ಮಹಿಳೆಯರ ಯೋಚನೆ ಕೆಲವೊಂದು ಪ್ರಕರಣಗಳಲ್ಲಿ ಪುರುಷರಿಗಿಂತ ಭಿನ್ನವಾಗಿರುತ್ತದೆ. ಪುರುಷರು ಭವಿಷ್ಯಕ್ಕಿಂತ ಸದ್ಯದ ಖುಷಿಯಿಂದ ಕೂಡಿದ ವರ್ತಮಾನದ ಬಗೆಗೆ ಹೆಚ್ಚು ನಂಬಿಕೆ ಇಟ್ಟಿರುತ್ತಾರೆ. ಆದರೆ ಮಹಿಳೆಯರು ಪ್ರತಿಯೊಂದು ಕೆಲಸವನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಾರೆ. ಪುರುಷರು ಕೂಡ ಹಾಗೆಯೇ ಮಾಡಬೇಕೆಂದು ಅವರು ಇಚ್ಛಿಸುತ್ತಾರೆ.
“ಮಹಿಳೆಯರು ಅಪಾಯದಿಂದ ದೂರ ಇರಲು ಇಚ್ಛಿಸುತ್ತಾರೆ, ಅದರಲ್ಲೂ ವಿಶೇಷವಾಗಿ ಹಣದ ಹೂಡಿಕೆ ವಿಷಯದಲ್ಲಿ. ಹೀಗಾಗಿ ಅವರು ಹಣವನ್ನು ಚಿನ್ನ ಅಥವಾ ಬೆಳ್ಳಿಯಲ್ಲಿ ಹೂಡಿಕೆ ಮಾಡುವುದು ಸೂಕ್ತ ಎಂದು ಭಾವಿಸುತ್ತಾರೆ. ಪುರುಷರು ಮಾತ್ರ ಲಾಭ ಪಡೆಯುವ ದೃಷ್ಟಿಯಿಂದ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವುದನ್ನು ಸೂಕ್ತ ಎಂದು ತಿಳಿಯುತ್ತಾರೆ. ಆದರೆ ಇದು ಅಪಾಯದಿಂದ ಕೂಡಿರುತ್ತದೆ. ಹೀಗಾಗಿ ಮಹಿಳೆಯರು ಆಸ್ತಿ, ಚಿನ್ನ ಹಾಗೂ ಬೆಳ್ಳಿಯಲ್ಲಿ ಹಣ ಹೂಡಿಕೆ ಮಾಡಬೇಕು ಇಲ್ಲಿ ಬ್ಯಾಂಕಿನಲ್ಲಿ ಹಣವನ್ನು ಠೇವಣಿಯಾಗಿಟ್ಟು ಲಾಭ ಪಡೆದುಕೊಳ್ಳಬೇಕೆನ್ನುತ್ತಾರೆ.”
ಪುರುಷರೂ ಬಜೆಟ್ ರೂಪಿಸಬೇಕು
ಮಹಿಳೆಯರನ್ನು ಮನೆಯ ಹಣಕಾಸು ಮಂತ್ರಿ ಎಂದು ಕರೆಯುತ್ತಾರೆ. ಇದು ಸತ್ಯ ಕೂಡ. ಪುರುಷನೊಬ್ಬ ಹಣ ಗಳಿಸಿ ಅದನ್ನು ತನ್ನ ತಾಯಿ ಅಥವಾ ಹೆಂಡತಿಯ ಬಳಿ ಕೊಟ್ಟರೆ, ಅದನ್ನು ಸರಿಯಾಗಿ ನಿರ್ವಹಿಸುವ ಜವಾಬ್ದಾರಿ ಮಹಿಳೆಯದ್ದೇ ಆಗಿರುತ್ತದೆ. ಹೀಗಾಗಿ ಮಹಿಳೆ ಗೃಹಿಣಿಯೇ ಆಗಿರಬಹುದು ಅಥವಾ ಉದ್ಯೋಗಸ್ಥೆ, ಆಕೆ ತನ್ನ ಕುಟುಂಬವನ್ನು ಆರ್ಥಿಕವಾಗಿ ಬಲಗೊಳಿಸಲು ಬಜೆಟ್‌ಗನುಸಾರ ಮುನ್ನಡೆಯಲು ಇಷ್ಟಪಡುತ್ತಾಳೆ. ಏಕೆಂದರೆ ಭವಿಷ್ಯದಲ್ಲಿ ತಮ್ಮ ಆರ್ಥಿಕ ಸ್ಥಿತಿ ಬಿಗಡಾಯಿಸದಿರಲಿ ಎನ್ನುವುದು ಇದರ ಹಿಂದಿನ ಯೋಚನೆಯಾಗಿರುತ್ತದೆ. ಪುರುಷರೂ ಕೂಡ ಬಜೆಟ್‌ಗನುಗುಣವಾಗಿ ಸಾಗಬೇಕು ಎಂದು ಅವರು ಬಯಸುತ್ತಾರೆ.
ಮಕ್ಕಳ ಶಿಕ್ಷಣದ ಯೋಜನೆ ರೂಪಿಸಿ
ಶಿಕ್ಷಣ ಇಂದು ಎಷ್ಟು ದುಬಾರಿ ಆಗಬಿಟ್ಟಿದೆಯೆಂದರೆ, ತಂದೆ ತಾಯಿಯರಿಗೆ ಅದರ ಹೊರೆ ಹೊತ್ತುಕೊಳ್ಳುವುದು ಕಷ್ಟವಾಗಿಬಿಟ್ಟಿದೆ. ಪುರುಷರಿಗಿಂತ ಹೆಚ್ಚಾಗಿ ಇದು ಮಹಿಳೆಯರನ್ನು ಕಾಡುತ್ತಿದೆ. ತಮ್ಮ ಮಗು ಒಳ್ಳೆಯ ಶಿಕ್ಷಣದಿಂದ ಎಲ್ಲಿ ವಂಚಿತವಾಗುತ್ತದೊ ಎಂಬ ಹೆದರಿಕೆ ಅವರನ್ನು ಕಾಡುತ್ತಿರುತ್ತದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಮೊದಲೇ ಯೋಜನೆ ರೂಪಿಸುವುದು ಅತ್ಯಗತ್ಯವಾಗಿದೆ.
ಮದುವೆಯ ಯೋಜನೆ
ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ತಂದೆ ತಾಯಿಯರಿಗೆ ತಮ್ಮ ಬೆಳೆದ ಮಕ್ಕಳಿಗೆ ಮದುವೆ ಮಾಡುವುದು ಚಿಂತೆಯ ವಿಷಯವಾಗಿದೆ. ಅದರಲ್ಲೂ ಹೆಣ್ಣು ಮಗಳ ಮದುವೆ. ಉದ್ಯೋಗಸ್ಥ ಮಹಿಳೆಯರಿಂದ ಹಿಡಿದು ಗೃಹಿಣಿಯರ ತನಕ ಎಲ್ಲರಿಗೂ ಇದು ಚಿಂತೆಯ ವಿಷಯವಾಗಿದೆ.
ಈ ಕುರಿತಂತೆ ಇಂಟರ್ ನ್ಯಾಷನಲ್ ಮಾರ್ಕೆಟಿಂಗ್ ಮ್ಯಾನೇಜರ್ ಹುದ್ದೆಯಲ್ಲಿರುವ ಕವಿತಾ ಹೀಗೆ ಹೇಳುತ್ತಾರೆ, “ಮಹಿಳೆಯರು ಇಂದು ಪುರುಷರಿಗೆ ಸರಿಸಮಾನವಾಗಿ ಹೆಜ್ಜೆ ಹಾಕುತ್ತಿರಬಹುದು. ಆದರೂ ತಮ್ಮ ಜವಾಬ್ದಾರಿಗಳ ಕುರಿತಂತೆ ಅವರು ಮೊದಲಿನಂತೆಯೇ ಅಭಿಪ್ರಾಯ ಹೊಂದಿದ್ದಾರೆ. ಮಗುವಿನ ಜನನದೊಂದಿಗೆ ಅದರ ಮದುವೆ ವಿಚಾರ ತಾಯಿಗಷ್ಟೇ ಇರಬೇಕಿಲ್ಲ, ತಂದೆಗೂ ಕೂಡ. ಮಕ್ಕಳ ಮದುವೆ ಕುರಿತಂತೆ ವಿಮೆ ಪಾಲಿಸಿಗಳು ಕೂಡ ಲಭ್ಯವಿದ್ದು, ಅದನ್ನು ಮಾಡಿಸಿಬಿಟ್ಟರೆ ಅವರ ಮದುವೆ ಸಮಯದಲ್ಲಿ ಸಾಕಷ್ಟು ಅನುಕೂಲವಾಗುತ್ತದೆ.”
ಆದ್ಯತೆಗಳಿಗೆ ಪ್ರಾಮುಖ್ಯತೆ ಕೊಡಿ
29 ವರ್ಷದ ಜಯಶ್ರೀ ಗೃಹಿಣಿ. ಕಳೆದ 5 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬೇರೆ ಮಹಿಳೆಯರ ಹಾಗೆ ಇವರಿಗೂ ಕೂಡ ತಮ್ಮದೇ ಆದ ಒಂದು ಮನೆ ಹೊಂದಬೇಕೆಂಬ ಕನಸು. ಆದರೆ ಅವರ ಪತಿಗೆ ಮಾತ್ರ ಕಾರು ಕೊಳ್ಳಬೇಕೆಂಬ ಬಯಕೆ. ತಾವು ಇ.ಎಂ.ಐ. ಮೇಲೆ ಮನೆ ಖರೀದಿಸಿದರೆ ಮುಂದಿನ ದಿನಗಳಲ್ಲಿ ಬಾಡಿಗೆ ಹಣ ಉಳಿಯುತ್ತದೆ. ಅದನ್ನೇ ಮಕ್ಕಳ ಓದಿಗಾಗಿ ಬಳಸಬಹುದು. ಈ ತೆರನಾದ ತದ್ವಿರುದ್ಧ ಯೋಚನೆ ಅವರಿಬ್ಬರ ನಡುವೆ ವಾದ ವಿವಾದಕ್ಕೆ ಕಾರಣವಾಗುತ್ತದೆ.
ಭವಿಷ್ಯದಲ್ಲಿ ಬರುವ ಜಾಬ್ದಾರಿಗಳೊಂದಿಗೆ ಮನೆ ಕೊಂಡುಕೊಳ್ಳುವುದು ಕಷ್ಟ ಎಂದು ಮಹಿಳೆಯರಿಗೆ ಚೆನ್ನಾಗಿ ಅರಿವಿರುತ್ತದೆ. ಪುರುಷರು ಕೂಡ ಈ ವಿಷಯವನ್ನು ಅರಿತುಕೊಳ್ಳಬೇಕೆಂದು ಅವರು ಬಯಸುತ್ತಾರೆ.
ಹೂಡಿಕೆಗೆ ತೊಡಗುವಾಗ ಮಹಿಳೆಯರ ಅಭಿಪ್ರಾಯ ಮುಖ್ಯ
ಈ ಕುರಿತಂತೆ ಡಾ. ಶಿಲ್ಪಾ ಹೀಗೆ ಹೇಳುತ್ತಾರೆ, “ಮಹಿಳೆಯರು ತಮ್ಮ ಭವಿಷ್ಯದ ಕುರಿತಂತೆಯೂ ಯೋಚಿಸಲಾರಂಭಿಸಿದ್ದಾರೆ. ಪುರುಷರು ಎಲ್ಲಿಯೇ ಹಣ ಹೂಡಲಿ, ಅದರ ಬಗ್ಗೆ ತಮಗೂ ತಿಳಿಸಬೇಕೆಂದು ಅವರು ಬಯಸುತ್ತಾರೆ. ಏಕೆಂದರೆ ಭವಿಷ್ಯದಲ್ಲಿ ಯಾವುದಾದರೂ ಅನಿವಾರ್ಯ ಸಂದರ್ಭ ಬಂದಾಗ ಅಥವಾ ಪತಿ ಆಕಸ್ಮಿಕವಾಗಿ ತೀರಿಕೊಂಡಾಗ ಮಕ್ಕಳ ಭವಿಷ್ಯ ಮುರುಟದಂತೆ ನೋಡಿಕೊಳ್ಳಬೇಕಾಗುತ್ತದೆ.”
ಮನೆ ನಿರ್ವಹಣೆ
ಮಹಿಳೆಯರು ಮನೆ ನಿರ್ವಹಣೆಗಾಗಿ ಹಣ ಖರ್ಚು ಮಾಡಲು ಹಿಂದೇಟು ಹಾಕುವುದಿಲ್ಲ. ಆದರೆ ಪುರುಷರಿಗೆ ಇದು ಮಹಿಳೆಯರ ಹವ್ಯಾಸ ಎಂಬಂತೆ ಗೋಚರಿಸುತ್ತದೆ. ಮಹಿಳೆಯರಿಗೆ ಅದು ಹವ್ಯಾಸಕ್ಕಿಂತ ಹೆಚ್ಚಾಗಿ ಅಗತ್ಯ ಎಂಬಂತೆ ಕಂಡುಬರುತ್ತದೆ. ಭಾರಿ ಹೈಫೈಗಿಂತ ಕುಟುಂಬದವರ ಲೈಫ್ ಸ್ಟೈಲ್ ಅಷ್ಟಿಷ್ಟು ಚೆನ್ನಾಗಿರಲಿ ಎನ್ನುವುದು ಅವರ ಬಯಕೆಯಾಗಿರುತ್ತದೆ. ಇದು ಮಕ್ಕಳ ಜೀವನದ ಮೇಲೂ ಪರಿಣಾಮ ಬೀರುತ್ತದೆ.
ಮನೆ ಖರ್ಚನ್ನು ಪುರುಷರೇ ನಿರ್ವಹಿಸಲಿ
ಮಹಿಳೆಯರು ತಮ್ಮ ಹಣವನ್ನು ಭವಿಷ್ಯಕ್ಕಾಗಿ ಕಾಯ್ದಿಡುತ್ತಾರೆ. ಏಕೆಂದರೆ ಭವಿಷ್ಯದಲ್ಲಿ ಬರಬಹುದಾದ ಅಗತ್ಯಗಳನ್ನು ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ. ಆದರೆ ಅದೆಷ್ಟೋ ಸಲ ಮಹಿಳೆಯರ ಈ ವ್ಯವಹಾರವನ್ನು ಪುರುಷರು ದುರಾಸೆ ಎಂದು ಹೇಳುತ್ತಾರೆ. ಮತ್ತೆ ಕೆಲವರು ಹೀಗೂ ಹೇಳುತ್ತಾರೆ. ಇಬ್ಬರೂ ದುಡಿಯುವಾಗ ಮನೆ ಖರ್ಚನ್ನು ಒಬ್ಬರೇ ಏಕೆ ಭರಿಸಬೇಕು? ಪುರುಷರ ಈ ತೆರನಾದ ಯೋಚನೆ ಒಮ್ಮೊಮ್ಮೆ ದಾಂಪತ್ಯ ಜೀವನಕ್ಕೆ ಅಪಾಯಕಾರಿಯಾಗಿಯೂ ಪರಿಣಮಿಸಬಹುದು.
ವೈಯಕ್ತಿಕ ಆರೋಗ್ಯ ಪಾಲಿಸಿಗಳು ಅಗತ್ಯ
25 ವರ್ಷದ ಕವಿತಾ ಬೆಂಗಳೂರಿನ ಒಂದು ಕಂಪನಿಯಲ್ಲಿ ಎಚ್.ಆರ್. ಹುದ್ದೆಯಲ್ಲಿದ್ದಾರೆ. ಅವರು ಈ ಕುರಿತಂತೆ ಹೀಗೆ ಹೇಳುತ್ತಾರೆ, “ಇಎಸ್‌ಐ ಅಥವಾ ಉದ್ಯೋಗದ ಸಂದರ್ಭದಲ್ಲಿ ದೊರೆಯುವ ಮೆಡಿಕಲ್ ಪಾಲಿಸಿಗಳು ಪುರುಷರು ಬೇರೆಡೆ ಪರ್ಸನಲ್ ಹೆಲ್ತ್ ಪಾಲಿಸಿ ಮಾಡಿಸದಂತೆ ಮಾಡಿವೆ. ಈ ಪಾಲಿಸಿಗಳು ಕುಟುಂಬಕ್ಕೆ ಎಲ್ಲ ಸೌಲಭ್ಯ ನೀಡುತ್ತಿರಬಹುದು. ಆದರೆ ನೀವು ಉದ್ಯೋಗ ಹೊಂದಿರುವತನಕ ಮಾತ್ರ ಇವು ಅಸ್ತಿತ್ವದಲ್ಲಿರುತ್ತವೆ. ಹೀಗಾಗಿ ಪುರುಷರು ತಮ್ಮ ಕುಟುಂಬದ ಹಿತವನ್ನು ಗಮನದಲ್ಲಿಟ್ಟುಕೊಂಡು ಪರ್ಸನಲ್ ಹೆಲ್ತ್ ಪಾಲಿಸಿಗಳಲ್ಲೂ ಹಣ ಹೂಡಬೇಕು. ಏಕೆಂದರೆ ವೃದ್ಧಾಪ್ಯ ಸುಖಮಯವಾಗಿ ಕಳೆಯಲು ಸಾಧ್ಯವಾಗಿರಬೇಕು.”
ದುಬಾರಿ ಖರ್ಚು ಅನಿವಾರ್ಯವಲ್ಲ
ಅಂಜಲಿ ಖಾಸಗಿ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಎಗ್ಸಿಕ್ಯೂಟಿವ್ ಆಗಿದ್ದಾರೆ. ಅವರು ಹೀಗೆ ಹೇಳುತ್ತಾರೆ, “ನನ್ನ ಪತಿಗೆ ಸುತ್ತಾಡುವ ಅತಿಯಾದ ಆಸೆ. ಹೀಗಾಗಿ ಅವರು ಕುಟುಂಬದವರನ್ನೆಲ್ಲ ದೂರದೂರಿಗೆ ಪ್ರವಾಸಕ್ಕೆಂದು ಕರೆದುಕೊಂಡು ಹೋಗುತ್ತಿರುತ್ತಾರೆ. ಇದರಿಂದ ಸಾಕಷ್ಟು ಹಣ ಖರ್ಚಾಗುತ್ತದೆ. ಕಡಿಮೆ ಹಣದಲ್ಲಿಯೇ ನಮ್ಮ ನಗರದ ಆಸುಪಾಸಿನಲ್ಲಿಯೇ ಯಾವುದಾದರೂ ಪ್ರವಾಸಿ ತಾಣಕ್ಕೆ ಹೋಗಿ ಮಜ ಅನುಭವಿಸಬಹುದಾಗಿದೆ. ಇದರೊಂದಿಗೆ ಮಜದ ಜೊತೆಗೆ ಹಣದ ಉಳಿತಾಯ ಆಗುತ್ತದೆ. ಆದರೆ ನನ್ನ ಪತಿಗೆ ನನ್ನ ಈ ಮಾತು ಜಿಪುಣತನ ಎನಿಸುತ್ತದೆ.” ಈ ಮಾತು ದುಬಾರಿ ಶಾಪಿಂಗ್‌ಗೂ ಅಕ್ಷರಶಃ ಅನ್ವಯಿಸುತ್ತದೆ. ಮಹಿಳೆಯರು ಹಣದ ಉಳಿತಾಯವನ್ನು ತಮಗಾಗಿ ಅಲ್ಲ, ಕುಟುಂಬಕ್ಕಾಗಿಯೇ ಮಾಡುತ್ತಾರೆ ಎನ್ನುವುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು.
– ನಿರ್ಮಲಾ ವಿಶ್ವನಾಥ್.