ಮದುವೆಯ ಸಂದರ್ಭದಲ್ಲಿ ಸ್ನೇಹಾಳ ಸಂಬಳ ಅವಳ ಗಂಡನಷ್ಟೇ ಇತ್ತು. ಆಮೇಲೆ ಅವಳು ಆ ಕೆಲಸ ಬದಲಿಸಿ ಮತ್ತೊಂದು ಎಂಎನ್‌ಸಿ ಕಂಪನಿ ಸೇರಿದ್ದರಿಂದ, ಈಗ ಅವಳ ಸಂಬಳ ಗಂಡನಿಗಿಂತ 3 ಸಾವಿರ ಹೆಚ್ಚಾಗಿತ್ತು. ಒಂದು ವರ್ಷದ ನಂತರ ಅವಳಿಗೆ ಬಡತಿ ದೊರಕಿ, ರೋಹಿತ್‌ಗಿಂತ 8 ಸಾವಿರ ಹೆಚ್ಚು ಗಳಿಸತೊಡಗಿದಳು. ಇತರ ಭತ್ಯೆ, ಅನುಕೂಲಗಳು ಹಿತಕರಾಗಿದ್ದವು. ಪ್ರಮೋಷನ್ ದೊರಕಿದ ದಿನ ಸ್ನೇಹಾಳ ಆಫೀಸಿನಲ್ಲಿ ಪಾರ್ಟಿ ನಡೆಯಿತು. ಅವಳ ಬಾಸ್ ಪಾರ್ಟಿಯಲ್ಲಿ ಎಲ್ಲರೆದುರು ಅವಳನ್ನು ಬಾಯಿ ತುಂಬಾ ಹೊಗಳಿದರು ಹಾಗೂ ಅವಳ ಸಂಬಳ ಈಗ ವರ್ಷಕ್ಕೆ 1 ಲಕ್ಷ ಹೆಚ್ಚಲಿರುವುದಾಗಿ ಘೋಷಿಸಿದರು. ಆಫೀಸ್‌ನಿಂದ ಮನೆಗೆ ಹೊರಡುವಾಗ ಮಾರ್ಗ ಮಧ್ಯದಲ್ಲಿ ಅವಳ ಗೆಳತಿ ಕವಿತಾ ಕೇಳಿದಳು, “ಸ್ನೇಹಾ ನಿನ್ನ ಪ್ರಮೋಷನ್ ಸುದ್ದಿ ಮನೆಯಲ್ಲಿ ಟೆನ್ಶನ್ ಹೆಚ್ಚಿಸಬಹುದೇನೋ?”
“ಅದಂತೂ ಖಂಡಿತಾ ಹೆಚ್ಚುತ್ತದೆ,” ಎಂದಳು ಸ್ನೇಹಾ.
“ಹಾಗಿದ್ದರೆ ಈಗ ಏನು ಮಾಡುವೆ?”
“ಅದೇ…. ಏನು ಮಾಡಬೇಕೂಂತ ಹೊಳೀತಾನೇ ಇಲ್ಲ.”
“ಮನೆಯಲ್ಲಿ ಜಗಳ ಕದನ ಬೇಡ ಅನಿಸಿದರೆ ಈ ಪ್ರಮೋಷನ್ ಕ್ಯಾನ್ಸಲ್ ಮಾಡಿಸಿಬಿಡು. ಏನಂತೀಯಾ?”
“ಸಾಕು ಹೋಗೆ…. ಹುಚ್ಚಿ ತರಹ ಸಲಹೆ ಕೊಡಬೇಡ!”
“ಏ…. ನಾನು ಜೋಕಿಗೆ ಹೇಳಿದ್ದು ಕಣೆ,” ಎಂದು ತನ್ನ ಬಸ್ ಬಂದಿದ್ದರಿಂದ ಕವಿತಾ ಮೊದಲು ಹೊರಟಳು.
ತಲೆ ಸಿಡಿಯತೊಡಗಿದ್ದರಿಂದ ಮಾಮೂಲಿ ಬದಲಿಗೆ ಸ್ನೇಹಾ ವೋಲ್ವೋ ಬಸ್ ಏರಿದಳು. ಬಸ್ ಒಳಗಿನ ಹಿತಕರ ತಣ್ಣನೆಯ ವಾತಾವರಣ ಸಹ ಅವಳ ತಲೆನೋವು ತಗ್ಗಿಸಲಿಲ್ಲ. ತನ್ನ ಪ್ರಮೋಷನ್‌ನಿಂದಾಗಿ ಮನೆಯಲ್ಲಿನ ಟೆನ್ಶನ್ ಕುರಿತಾಗಿಯೇ ಚಿಂತಿಸತೊಡಗಿದಳು. ಮದುವೆ ನಂತರ ಸ್ನೇಹಾ ಹೊಸ ಎಂಎನ್‌ಸಿ ಕಂಪನಿ ಸೇರಿ, ಒಳ್ಳೆಯ ಪ್ರಗತಿ ಹೊಂದಿದಾಗ ಅವಳ ತಾಯಿ ತಂದೆ ಅವಳಿಗೆ ಬೇರೆ ರೀತಿಯ ಸಲಹೆ ನೀಡಿದ್ದರು.
“ಏನಮ್ಮಾ…. ನೀನು ರೋಹಿತ್ ಭವಿಷ್ಯಕ್ಕಾಗಿ ಅಂತ ಏನಾದರೂ ಒಂದಿಷ್ಟು ಉಳಿತಾಯ ಮಾಡ್ತಿದ್ದೀರಿ ತಾನೇ?” ಒಂದು ಸಂಜೆ ಸ್ನೇಹಾ ಒಬ್ಬಳೇ ಸಿಕ್ಕಾಗ ತಾಯಿ ಸುಲೋಚನಾ ಕೇಳಿದರು.
“ಅಮ್ಮಾ, ಮೊದಲು ನನ್ನ ನಾದಿನಿಯ ಮದುವೆ ಆಗಲಿ ಇರು. ಅದಲ್ಲದೆ ನನ್ನ ಮೈದುನ ಎಂ.ಬಿ.ಎ. ಮಾಡ್ತಿದ್ದಾನೆ. ಅದೆಲ್ಲ ಸೆಟಲ್ ಮಾಡಿ ಆಮೇಲೆ ಉಳಿತಾಯದ ಬಗ್ಗೆ ಯೋಚನೆ ಮಾಡಬೇಕಷ್ಟೆ,” ಸ್ನೇಹಾ ತುಸು ಚಿಂತಿತಳಾಗಿ ಗಂಭೀರವಾಗಿ ಹೇಳಿದಳು.
“ಒಟ್ಟು ಕುಟುಂಬ ಅಂದ್ರೆ ಹೀಗೆ ನೋಡು…. ಹಡಗಿನಂಥ ಸಂಸಾರ, ಎಷ್ಟು ತಂದು ಸುರಿದರೂ ಸಾಲದು. ಎಲ್ಲಿಯವರೆಗೂ ನೀನು ಆ ಜಾಯಿಂಟ್ ಫ್ಯಾಮಿಲಿಗೆ ಅಂಟಿಕೊಂಡರ್ತೀಯೋ ಈ ಕಷ್ಟ ತಪ್ಪಿದ್ದಲ್ಲ. ಇನ್ನು ನೀವು ಸೈಟ್, ಮನೆ, ಕಾರು ಅಂತ ಯಾವಾಗ ಮಾಡಿಕೊಳ್ಳೋದು? ಬ್ಯಾಂಕ್ ಬ್ಯಾಲೆನ್ಸ್ ಬೆಳೆಯೋದು ಯಾವಾಗ?” ಸುಲೋಚನಾರ ದೂರಾಲೋಚನೆಗೆ ಸ್ನೇಹಾ ಏನೂ ಉತ್ತರಿಸದಾದಳು.
“ಹಾಗಿದ್ದರೆ ನಾವೇನು ಮಾಡಬೇಕು ಅಂತೀಯಮ್ಮಾ?” ಸ್ನೇಹಾ ಸಿಡುಕಿದಳು.
“ನಿನಗೇನು ಅಷ್ಟೂ ಗೊತ್ತಾಗೋಲ್ವೇನೇ? 6 ತಿಂಗಳು ಆ ದೊಡ್ಡ ಸಂಸಾರಕ್ಕೆ ಅಂಟಿಕೊಂಡಿದ್ದು ಸಾಕು ಸಾಕು, ಮೊದಲು ಅತ್ತೆಮನೆಯಿಂದ ಬೇರೆಯಾಗಿ ಹೊಸ ಮನೆ ಹೂಡುದನ್ನು ನೋಡು!”
“ರೋಹಿತ್ ತಮ್ಮ ಜವಾಬ್ದಾರಿಗಳನ್ನು ಗಂಭೀರವಾಗಿ ತೆಗೆದುಕೊಳ್ತಾರೆ. ಅವರೆಂದೂ ಬೇರೆ ಮನೆ ಹೂಡುವುದಕ್ಕೆ ಒಪ್ಪುದಿಲ್ಲ.”
“ನೀನು ಈಗಿನಿಂದಲೇ ನಾವು ಬೇರೆ ಹೋಗೋಣ ಅಂತ ಶುರು ಮಾಡು. ಇಂದಲ್ಲ ನಾಳೆ ಬೇರೆ ಮನೆ ಹೂಡುವುದರಲ್ಲಿ ಲಾಭ ಇದೆ ಅನ್ನೋದು ಅವನಿಗೂ ಅರ್ಥವಾಗುತ್ತೆ,” ಎಂದು ಅವಳ ತಂದೆ ಸೋಮಶೇಖರ್ ಸಹ ಅದೇ ಮಾತುಗಳನ್ನಾಡಿದರು. ಅಂದು ರೋಹಿತ್ ಬಿಡುವಾಗಿದ್ದಾಗ ಸ್ನೇಹಾ ಇದೇ ವಿಷಯ ಅವನೊಂದಿಗೆ ಚರ್ಚಿಸಲು ಶುರು ಮಾಡಿದಳು. ರೋಹಿತ್ ಒಳ್ಳೆಯ ಮೂಡ್‌ನಲ್ಲಿ ಅವಳೊಂದಿಗ ಪ್ರೀತಿಯ ಮಾತುಗಳನ್ನಾಡುತ್ತಿದ್ದ.
“ರೋಹಿ, ಈಗಿನಿಂದಲೇ ನಾವು ಸೈಟು, ಫ್ಲಾಟ್ ಅಂತ ಏನಾದರೂ ಸೀರಿಯಸ್ ಆಗಿ ಕೊಂಡುಕೊಳ್ಳುವ ವಿಚಾರದಲ್ಲಿ ತೊಡಗಬೇಕು. ಈಗ ನನಗೆ ಹೆಚ್ಚಿನ ಲೋನ್ ಕೂಡ ಸಿಗುತ್ತದೆ. ಅಗತ್ಯಬಿದ್ದರೆ ಅಪ್ಪಾಜಿ ಸಹ ಸಹಾಯ ಮಾಡ್ತೀನಿ ಅಂತ ಹೇಳಿದ್ದಾರೆ,” ಎಂದು ಸ್ನೇಹಾ ಸಿಹಿಸಿಹಿಯಾಗಿ ಹೇಳಿದಳು.
“ವೆರಿ ಗುಡ್. ಹಾಗೆಂದರೆ ಈ ಸಲ ನಿನ್ನ ತಾಯಿ ತಂದೆ ನಿನಗೆ ಬೇರೆ ಮನೆ ಹೂಡಲು ಸರಿಯಾದ ಕಿವಿಮಾತು ಹೇಳಿ ಕಳುಹಿಸಿದ್ದಾರೆ ಅನ್ಸುತ್ತೆ ಅಲ್ವಾ?” ಅವಳನ್ನು ತೋಳಲ್ಲಿ ಬಳಸಿದ್ದವನು ಹಾಗೇ ಹಿಂದಕ್ಕೊರಗಿ ತೆರೆಯ ಹಿಂದೆ ಕೈಕಟ್ಟಿ ಸುಮ್ಮನಾಗಿಬಿಟ್ಟ.
“ಯಾರೂ ನನಗೇನೂ ಕಿವಿಮಾತು ಹೇಳಿಲ್ಲ. ಆದರೆ ನಾವು ಇದೇ ಮನೆಯಲ್ಲಿ ಅಂಟಿಕೊಂಡಿದ್ದರೆ, ನಮ್ಮ ಭವಿಷ್ಯಕ್ಕಾಗಿ ಖಂಡಿತಾ ಏನೂ ಉಳಿತಾಯ ಮಾಡಲಿಕ್ಕೆ ಆಗುವುದಿಲ್ಲ,” ಎನ್ನುತ್ತಾ ಸ್ನೇಹಾ ಅವನ ಮೇಲೆ ಒತ್ತಡ ಹೇರಲು ಯತ್ನಿಸಿದಳು.
“ಅದೆಲ್ಲ ಇರಲಿ, ಮೊದಲು ನನಗೆ ಒಂದು ವಿಷಯ ಸ್ಪಷ್ಟಪಡಿಸು. ನಮಗೀಗ ಸೈಟು ಫ್ಲಾಟು ಖರೀದಿಸುವುದು ಮುಖ್ಯವೋ ಅಥವಾ ಶಿಲ್ಪಾಳ ಮದುವೆಯೋ? ನಾವೀಗ ಹೊಸ ಫ್ಲಾಟಿಗೆ ಕಂತು ಕಟ್ಟೋಣವೇ ಅಥವಾ ನಿರಂಜನನ ಕಾಲೇಜ್ ಫೀಸ್ ಕಟ್ಟೋಣವೇ?”
“ನಾವು ಈ ಜವಾಬ್ದಾರಿಗಳನ್ನು ಒಮ್ಮೆಲೇ ಕೈತೊಳೆದು ಬಿಟ್ಟುಬಿಡೋಣ ಎಂದು ಹೇಳುತ್ತಿಲ್ಲ. ಆದರೆ….”
“ನನಗೆಲ್ಲಾ ಅರ್ಥ ಆಗ್ತಿದೆ ಸ್ನೇಹಾ….. ಅಸಲಿ ವಿಷಯವೆಂದರೆ ನನಗಿಂತ ನೀನು ಹೆಚ್ಚು ಸಂಪಾದಿಸುತ್ತಿದ್ದೀಯ ಎಂಬ ವಿಷಯ ನಿನ್ನ ತಲೆಗೇರಿಬಿಟ್ಟಿದೆ. ನೀನು ನನ್ನನ್ನು ನಿನ್ನ ತಾಯಿ ತಂದೆಯರ ಸಲಹೆಯಂತೆ ಕುಣಿಸಲು ಬಯಸುತ್ತಿರುವೆ….. ಅದೆಲ್ಲಾ ಖಂಡಿತಾ ನಡೆಯೋಲ್ಲ,” ಎಂದು ರೋಹಿತ್ ಅವಳ ಮೇಲೆ ರೇಗಿಕೊಂಡ.
“ನೀವು ಅನಗತ್ಯವಾಗಿ ಚಿಕ್ಕ ವಿಷಯವನ್ನು ದೊಡ್ಡದು ಮಾಡ್ತಿದ್ದೀರಿ.”
“ನೀನು ಮೊದಲು ನನ್ನ ಮಾತುಗಳನ್ನು ಕಿವಿಗೊಟ್ಟು ಕೇಳು. ನಾನೆಂದೂ ಹೆಂಡ್ತಿ ಗುಲಾಮ ಆಗಲಾರೆ. ನಿನ್ನ ತಾಯಿ ತಂದೆಯರ ಮಾತೇ ನಡೆಯಬೇಕು ಎನಿಸಿದರೆ ನೀನು ಅವರೊಂದಿಗೇ ಹೋಗಿ ಇರಬಹುದು. ನನ್ನ ತಲೆ ಮೇಲೇರಿ ಅಧಿಕಾರ ನಡೆಸೋಣ ಎಂದು ಪ್ರಯತ್ನಿಸಬೇಡ, ಅದಕ್ಕೆಲ್ಲ ಬಗ್ಗುವನಲ್ಲ ನಾನು!”
ಸ್ನೇಹಾ ಅಂದುಕೊಂಡದಕ್ಕೆ ಎಲ್ಲಾ ಉಲ್ಟಾ ಆಗಿತ್ತು. ಅಂದಿನಿಂದ ರೋಹಿತ್ ಅವಳೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಅವನ ಮನೆಯವರಿಗೆ ಈ ವಿಷಯ ತಿಳಿದಾಗ, ಅವಳ ತೊಂದರೆಗಳು ಹೆಚ್ಚಿದವು. ಮನೆಯಲ್ಲಿ ಯಾವ ವಿಷಯವಾಗಿ ಮಾತು ಬಂದರೂ ಕೊನೆಗೆ ಅದು ಅವಳ ಜಾಸ್ತಿ ಸಂಬಳದಲ್ಲೇ ಬಂದು ನಿಲ್ಲುತ್ತಿತ್ತು, ಏನಾದರೊಂದು ಕೊಂಕು ನುಡಿಯದೆ ಇರುತ್ತಿರಲಿಲ್ಲ. ಒಂದು ಸಲ ಸ್ನೇಹಾ ತನ್ನ ಗೆಳತಿ ಮೇಘಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾಳೆ ಎಂದು ತಿಳಿದಾಗ, ಆಫೀಸಿನಿಂದ ನೇರವಾಗಿ ಅಲ್ಲಿಗೇ ಹೊರಟಳು ಸ್ನೇಹಾ ಅಲ್ಲಿಂದಲೇ ಅತ್ತೆ ಕಲಾವತಿಗೆ ಫೋನ್ ಮಾಡಿ ಆಸ್ಪತ್ರೆಯಿಂದ ಬೇಗ ಬಂದುಬಿಡುವುದಾಗಿ ಅನುಮತಿ ಪಡೆದಿದ್ದಳು. ಆದರೆ ಅವಳು ಮನೆಗೆ ಬರುವಷ್ಟರಲ್ಲಿ ತಡವಾಗಿ ಹೋಗಿತ್ತು. ಇದರಿಂದ ಕೋಪಗೊಂಡು ಕಲಾವತಿ ಸಿಡುಕಿದರು. ಇದರಿಂದ ಅವಳಿಗೆ ತಕ್ಷಣ ಸಿಟ್ಟು ಬಂತು. ಥಟಕ್ಕನೇ ಅವಳು ಎದುರು ಜವಾಬು ಕೊಟ್ಟಳು, “ಅತ್ತೆ, ಟ್ರಾಫಿಕ್ ಜ್ಯಾಮ್ ಆಗಿತ್ತು, ಅದನ್ನಂತೂ ನಾನು ಕಂಟ್ರೋಲ್ ಮಾಡಲು ಆಗುವುದಿಲ್ಲ ತಾನೇ? ಏನೋ ಸ್ವಲ್ಪ ತಡ ಆಯಿತು, ಏನೀಗ ಆಕಾಶ ತಲೆ ಮೇಲೆ ಬಿದ್ದಿದ್ದು?”
ಆಗ ಕಲಾವತಿ ಕೈಬಾಯಿ ತಿರುಗಿಸುತ್ತಾ ಜೋರು ಮಾಡಿದರು, “ನನಗೆ ಬಾಯಿಗೆ ಬಂದಂತೆ ದಬಾಯಿಸಿ ಮಾತನಾಡುವುದನ್ನು ಬಿಟ್ಟುಬಿಡು. ನಿನಗೆ ಜಾಸ್ತಿ ಸಂಬಳ ಬರುತ್ತೆ ಅಂತ ಅಷ್ಟು ದುರಹಂಕಾರವಿದ್ದರೆ ಧಾರಾಳವಾಗಿ ಬೇರೆ ಮನೆ ಮಾಡಿಕೊಂಡು ಹೋಗು.”
ಅವಳ ಮಾವ ಆನಂದ್ ರಾವ್ ಅವಳಿಗೆ ತಿಳಿಹೇಳುವಂತೆ ಎಚ್ಚರಿಸಿದರು, “ನೋಡಮ್ಮ, ಹೆಣ್ಣುಮಕ್ಕಳು ಸೇರಿದ ಮನೆಯ ರೀತಿ ರಿವಾಜು ಅನುಸರಿಸಿಕೊಂಡು ಹೋದರೇನೇ ಚೆನ್ನ. ಹಿರಿಯರಿಗೆ ಹೀಗೆ ಎದುರು ವಾದಿಸುವುದು ಒಳ್ಳೆಯದಲ್ಲ. ಬೇರೆ ಮನೆ ಮಾಡು ಅಂತ ಸುಮ್ಮನೆ ನಮ್ಮ ಮಗನ ಕಿವಿ ಹಿಂಡಬೇಡ, ಎಲ್ಲರ ಜೊತೆ ಹೊಂದಿಕೊಂಡು ಸಂತೋಷವಾಗಿರು.”
ಒಂದು ಕಡೆ ಅವಳ ಅತ್ತೆಮನೆಯಲ್ಲಿ ಹೀಗೆ ಟೆನ್ಶನ್ಸ್ ಹೆಚ್ಚುತ್ತಿದ್ದರೆ, ಇನ್ನೊಂದು ಕಡೆ ಅವಳ ತವರುಮನೆಯಲ್ಲಿ ಬೇರೆ ಮನೆ ಮಾಡು ಎಂದು ಪದೇ ಪದೇ ಪೀಡಿಸುತ್ತಿದ್ದರು.
“ನೋಡಮ್ಮ, ಯಾರ ಮನೆಯಲ್ಲಿ ಹೀಗೆ ನಡೆಯುವುದಿಲ್ಲ ಹೇಳು. ತನ್ನ ಮನೆಯವರ ಬಳಿ ಜಗಳವಾಡದೆ ಯಾವ ಮಗನೂ ತಾಯಿ ತಂದೆಯರನ್ನು ಬಿಟ್ಟು ಬೇರೆ ಮನೆ ಮಾಡಲಾರ. ಏನೇ ಆಗಲಿ, ನೀನು ರೋಹಿತ್ ಮೇಲೆ ಹೆಚ್ಚು ಒತ್ತಡ ಹೇರುತ್ತಿರಬೇಕು. ಕೊನೆಗೆ ಅವನು ನಿನ್ನ ಮಾತು ತೆಗೆದು ಹಾಕಲಾರದೆ ಒಪ್ಪಿಯೇ ಒಪ್ಪುತ್ತಾನೆ.”
ಸ್ನೇಹಾ ತವರಿನಿಂದ ವಾಪಸ್ಸು ಬಂದಾಗ ರೋಹಿತ್ ವ್ಯಂಗ್ಯವಾಡದೆ ಇರುತ್ತಿರಲಿಲ್ಲ. “ಈ ಮನೆಯ ಸುಖಶಾಂತಿಗೆ ಬೆಂಕಿ ಹಚ್ಚುವಂಥ ಇನ್ಯಾವ ಫಿಟಿಂಗ್ ಇಟ್ಟು ಕಳುಹಿಸಿದರು ಇವತ್ತು? ನಮ್ಮ ಆದರಣೀಯ ಅತ್ತೆ ಮಾವಂದಿರ ಆಣಿಮುತ್ತುಗಳನ್ನು ಬೇಗ ಉದುರಿಸು.”
ರೋಹಿತ್‌ನ ಇಂಥ ಮಾತುಗಳು ಅವಳನ್ನು ಒಮ್ಮೆ ಅಳಿಸಿದರೆ ಇನ್ನೊಮ್ಮೆ ಕೆರಳಿಸಿ ಜಗಳ ಆಡುವಂತೆ ಮಾಡುತ್ತಿದ್ದವು. ದಿನೇದಿನೇ ಇದೇ ಪರಿಸ್ಥಿತಿ ಉಸಿರುಗಟ್ಟಿಸಿದಾಗ, ಅವಳಿಗೆ ನಿಜವಾಗಲೂ ಆ ಮನೆಯಿಂದ ಹೊರಡಲೇ ಬೇಕು ಎನ್ನುವ ಮನಸ್ಸಾಗತೊಡಗಿತು. ತಮ್ಮಿಬ್ಬರ ಹಣದಿಂದ ಏನೇ ಖರ್ಚು ಮಾಡಬೇಕಾಗಿ ಬಂದರೂ, ತಮ್ಮನ್ನು ಲೂಟಿ ಮಾಡುತ್ತಿದ್ದಾರೆಂದೇ ಅವಳಿಗೆ ಅನಿಸುತ್ತಿತ್ತು. ಅಂತೂ ಈ ದೀರ್ಘಾಲೋಚನೆಗಳಲ್ಲಿ ಮುಳುಗಿ ಅವಳು ಮನೆಯ ಸ್ಟಾಪ್ ಬಂದಾಗ ತಕ್ಷಣ ಎಚ್ಚೆತ್ತು ಜಾಗ್ರತೆಯಿಂದ ಇಳಿದು ಮನೆಯತ್ತ ನಡೆದಳು.
ಮನೆಗೆ ಹೋದ ಮೇಲೆ ಯಾರ ಬಳಿಯೂ ಅವಳು ತನ್ನ ಪ್ರಮೋಷನ್ ವಿಷಯ ಹೇಳಲೇ ಇಲ್ಲ. ಆ ರಾತ್ರಿ ಮಲಗುವವರೆಗೂ ಅವಳಿಗೆ ಯಾವುದೇ ವಿಧದ ಸಂತೋಷ ಎನಿಸಲಿಲ್ಲ. ಅವಳು ಅದನ್ನು ತಿರಸ್ಕರಿಸುವ ನಿರ್ಧಾರ ಮಾಡಿದಳು. ಈಗಿರುವ ಪರಿಸ್ಥಿತಿಯಲ್ಲಿ ಮತ್ತೊಂದು ಹೊಸ ಪ್ರಮೋಷನ್ ಬಂದಿದೆ ಎಂದು ಹೇಳಿದರೆ ಏನೇನು ಅವಾಂತರಗಳೋ ಎಂದು ಹೀಗೆ ನಿರ್ಧರಿಸಿದಳು.
ಸ್ನೇಹಾಳ ಸಹೋದ್ಯೋಗಿ ಪ್ರಭಾಕರನ ಪತ್ನಿ ಅಂಜು ಇವಳಿಗೆ ಒಳ್ಳೆಯ ಗೆಳತಿಯಾಗಿದ್ದಳು. ಅವಳ ಈ ನಿರ್ಧಾರದ ಮರು ಭಾನುವಾರ ತರಕಾರಿ ಕೊಳ್ಳಲೆಂದು ಮನೆ ಮುಂದೆ ಸ್ನೇಹಾ ಬಂದಿದ್ದಾಗ, ಈ ವಿಷಯಕ್ಕಾಗಿ ಅವಳನ್ನು ಅಭಿನಂದಿಸಲೆಂದು ಅಂಜು ಫೋನ್ ಮಾಡಿದಳು. ಅವಳಿಂದಲೇ ರೋಹಿತ್ ಮತ್ತಿತರರಿಗೆ ಸ್ನೇಹಾಳ ಪ್ರವೋಷನ್ ವಿಷಯ ತಿಳಿದದ್ದು.
ಸ್ನೇಹಾ ತರಕಾರಿ ಬುಟ್ಟಿಯೊಂದಿಗೆ ಒಳಗೆ ಬಂದಾಗ ರೋಹಿತ್ ಕೇಳಿದ, “ಸ್ನೇಹಾ, ನೀನು ನಿನ್ನೆ ರಾತ್ರಿ ಯಾಕೆ ಪ್ರಮೋಷನ್‌ವಿಷಯ ತಿಳಿಸಲೇ ಇಲ್ಲ? ಈಗ ಅಂಜು ಮೂಲಕ ಗೊತ್ತಾಯ್ತು…”
ಸ್ನೇಹಾಳ ನಾದಿನಿ ಶಿಲ್ಪಾ ಧಾವಿಸಿ ಬಂದು, “ಅತ್ತಿಗೆ ವಾವ್… ಕಂಗ್ರಾಟ್ಸ್! ಪ್ರಮೋಷನ್ ಅಂದ ಮೇಲೆ ಸಂಬಳ ಮತ್ತು ಇತರೇ ಪ್ಯಾಕೇಜಿಂಗ್‌ನಲ್ಲೂ ಒಳ್ಳೆ ಜಂಪ್ ಇರಬೇಕಲ್ಲವೇ?”
ಸ್ನೇಹಾಳಿಗೆ ಮೊದಲೇ ರೋಹಿತ್ ಉತ್ತರಿಸಿದ, “ವರ್ಷಕ್ಕೆ 1 ಲಕ್ಷ ರೂ.ಗಳಷ್ಟು! ವೆಲ್ ಡನ್ ಸ್ನೇಹಾ….. ಹಾರ್ಟಿ ಕಂಗ್ರಾಟ್ಸ್!”
ಆಗ ಅವಳ ಮೈದುನ ನಿರಂಜನ್, “ಅತ್ತಿಗೆ…. ಕಂಗ್ರಾಟ್ಸ್! ಇಷ್ಟು ಒಳ್ಳೆ ಜಂಪ್ ದೊರೆತ ಮೇಲೆ ನೀವು ಪಾರ್ಟಿ ಕೊಡಿಸಲೇಬೇಕು. ಛೇ….ಛೇ…. ಜಿಪುಣತನ ಒಳ್ಳೇದಲ್ಲ.”
“ಪಾರ್ಟಿ ಕೊಡಿಸುವಂಥ ಯಾವ ಘನಂದಾರಿ ವಿಷಯನೂ ಅಲ್ಲ ಬಿಡು ನಿರಂಜನ್…. ಯಾಕಂದ್ರೆ….” ತನ್ನ ಮನಸ್ಸಿನ ಹೊಯ್ದಾಟವನ್ನು ಹೇಳಿಕೊಳ್ಳಲಾಗದೆ ತೊಳಲಾಡಿದಳು ಸ್ನೇಹಾ.
“ಅಂದ್ರೆ…. ಪ್ರಮೋಷನ್ ವಿಷಯ ಬರಿ ವದಂತಿ….. ಸುಳ್ಳು ಸುದ್ದಿ ಏನಮ್ಮ?” ಅವಳ ಮಾವ ಕೇಳಿದರು.
ಸ್ನೇಹಾ ಮೆಲ್ಲಗೆ ಹೇಳಿದಳು, “ಇಲ್ಲ ಮಾವ, ಆ ಸುದ್ದಿ ಏನೋ ನಿಜವೇ….. ನಮ್ಮ ಬಾಸ್ ಕನ್‌ಫರ್ಮ್ ಮಾಡಿದ್ದಾರೆ. ಆದರೆ…. ನನಗೇ ಅದು ಬೇಕಿಲ್ಲ. ಅದನ್ನು ಕ್ಯಾನ್ಸಲ್ ಮಾಡಿಸೋಣ ಅಂತಿದ್ದೀನಿ.”
“ಕ್ಯಾನ್ಸಲ್….! ಅದು ಯಾಕೆ?”
“ನಾನು ಈಗಾಗಲೇ ಆಫೀಸ್‌ನಲ್ಲಿ ಬಹಳ ಬಿಝಿ ಇರ್ತೀನಿ. ಪ್ರಮೋಷನ್ ಒಪ್ಪಿಕೊಂಡ ಮೇಲೆ ನಮ್ಮ ಡಿಪಾರ್ಟ್‌ಮೆಂಟ್ ಹೆಡ್‌ಆಗ್ತೀನಿ. ಆಗ ದಿನಾ ಮನೆಗೆ ಬರೋದು ಇನ್ನೂ ತಡವಾಗುತ್ತದೆ. ಮನೆಗೆಲಸದಲ್ಲಿ ಹೆಚ್ಚಿನ ಸಹಾಯ ಮಾಡಲಾಗದು, ಆಗ ಎಲ್ಲರಿಗೂ ನನ್ನ ಮೇಲೆ ಇನ್ನೂ ಕೋಪ ಹೆಚ್ಚುತ್ತದೆ. ಹೀಗೆಲ್ಲ ಆಗುವುದು ಖಂಡಿತಾ ನನಗೆ ಇಷ್ಟವಿಲ್ಲ.”
ಆಗ ಅವಳ ಅತ್ತೆ ಪ್ರೀತಿಯಿಂದ ಹೇಳಿದರು, “ನೋಡಮ್ಮ ಸ್ನೇಹಾ, ಮನೆ ಅಂದ ಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ. ಆದರೆ ಆ ಕಾರಣಕ್ಕಾಗಿ ಇಂಥ ಒಳ್ಳೆ ಪ್ರಮೋಷನ್ ಕಳೆದುಕೊಳ್ಳುವುದು ಒಳ್ಳೆಯದಲ್ಲಮ್ಮ. ಇಂಥ ಸುವರ್ಣಾವಕಾಶ ಮತ್ತೆ ಮತ್ತೆ ಬರುತ್ತೇನು? ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡ್ರು ಅಂತಾಗಬಾರದು.”
“ಅದೇನೋ ಸರಿ…. ಆದರೆ….”
“ಈ ಆದರೆ…. ಗೀದರೆ ಅನ್ನೋದನ್ನೆಲ್ಲ ಬಿಟ್ಟುಬಿಡಮ್ಮ. ಈ ಒಳ್ಳೆಯ ಅವಕಾಶದ ಸದುಪಯೋಗ ಪಡೆದು ಮುಂದೆ ಮನೆಗೆ ಏಳಿಗೆ ಆಗೋದನ್ನು ನಾವೆಲ್ಲರೂ ಸೇರಿ ಮಾಡಬೇಕಷ್ಟೆ.”
“ಹ್ಞೂಂ ಅತ್ತೆ, ಎಲ್ಲಾ ಜವಾಬ್ದಾರಿಗಳೂ ಈಡೇರುತ್ತದೆ. ಮನೆಯಲ್ಲಿ ಮನಶ್ಶಾಂತಿ ತುಂಬಿರಲಿ ಅಂತಾನೇ ನಾನು ಈ ಪ್ರಮೋಷನ್ ಬೇಡ ಅಂತಿರೋದು….”
“ಪ್ರಮೋಷನ್ ಬೇಡ ಅನ್ನೋ ವಿಚಾರಾನ ಮನಸ್ಸಿನಿಂದ ತೆಗೆದುಹಾಕಿಬಿಡಮ್ಮ. ಇನ್ನು ಮುಂದೆ ನನ್ನಿಂದ ನಿನ್ನ ಮನಸ್ಸಿಗೆ ನೋವಾಗುವಂಥ ಯಾವ ಮಾತು ಬರುವುದಿಲ್ಲ….. ಅಂತ ಈ ಮೂಲಕ ನಾನು ನಿನಗೆ ಮಾತು ಕೊಡ್ತೀನಿ,” ಎಂದು ಅಕ್ಕರೆಯಿಂದ ಅವಳ ತಲೆ ನೇವರಿಸಿದರು. ಭಾವುಕರಾದ ಆಕೆಯ ಕಂಗಳಲ್ಲಿ ಕಣ್ಣೀರು ತುಂಬಿಕೊಂಡಿತು.
ಆಗ ಶಿಲ್ಪಾ ಆವೇಶಭರಿತಳಾಗಿ ಹೇಳಿದಳು, “ಅತ್ತಿಗೆ, ನಿಮ್ಮ ಮೇಲೆ ಜೋರು ತೋರಿಸಬೇಕೆಂದೇ ಎಲ್ಲರೂ ಬಾಯಿ ಮಾಡಿದ್ದು. ಆದರೆ ನಿಮ್ಮ ಹೆಚ್ಚಿನ ಸಂಬಳದ ಅಗತ್ಯ ಈ ಕುಟುಂಬಕ್ಕೆ ಇದ್ದೇ ಇದೆ. ಈಗ ನೀವು ಬಯಸಿದರೆ ನಾವೆಲ್ಲರೂ ಕೈ ಮುಗಿದು ನಿಮ್ಮಲ್ಲಿ ಕ್ಷಮೆ ಕೋರುತ್ತೇವೆ. ನೀವು ಪ್ರಮೋಷನ್ ತಿರಸ್ಕರಿಸಬಾರದೆಂಬುದೇ ನಮ್ಮೆಲ್ಲರ ಬೇಡಿಕೆ……”
“ಛೇ….ಛೇ! ಎಲ್ಲರ ಕೈಲೂ ಕೈ ಮುಗಿಸಿಕೊಳ್ಳುವಂಥ ಮಹಾನ್ ವ್ಯಕ್ತಿ ನಾನಲ್ಲ. ಸಹನೆ ಕಳೆದುಕೊಂಡು ನಾನೂ ಕೂಗಾಡಿದ್ದೀನಿ. ಹೀಗೆ ಮಾಡಿ ನನಗೆ ಮತ್ತೊಮ್ಮೆ ಮುಜುಗರ ಉಂಟು ಮಾಡಬೇಡಿ,” ಎಂದು ಸ್ನೇಹಾ ಕೈ ಜೋಡಿಸುತ್ತಿದ್ದ ಶಿಲ್ಪಾಳನ್ನು ತಡೆದಳು.
“ಹೌದಮ್ಮ ಸ್ನೇಹಾ, ದಯವಿಟ್ಟು ನಿನ್ನ ನಿರ್ಧಾರ ಬದಲಾಯಿಸಿಕೊ. ನಾವೆಲ್ಲರೂ ನಿನಗೆ ಈ ಮನೆಯಲ್ಲಿ ಏನು ಸಹಕಾರ ಬೇಕೋ ಖಂಡಿತಾ ನೀಡುತ್ತೇವೆ,” ಅವಳ ಮಾವ ಆನಂದರಾಯರು ಸಹ ತಮ್ಮ ಬಿಗುವು ಬಿಟ್ಟುಕೊಟ್ಟು ಅವಳನ್ನು ಓಲೈಸಿದರು.
ಸ್ನೇಹಾ ಮೌನ ವಹಿಸಿದಾಗ ಶಿಲ್ಪಾ ನಿರಂಜನ್ ಅವಳ ಬಳಿ ಬಂದು ಮತ್ತೆ ವಿನಂತಿಸಿಕೊಂಡರು, “ಅತ್ತಿಗೆ….. ಪ್ಲೀಸ್‌ಒಪ್ಪಿಕೊಳ್ಳಿ.”
“ಸ್ನೇಹಾ, ಈಗಲಾದರೂ ನೀನು ಒಪ್ಪಲೇಬೇಕು,” ಎಂದು ರೋಹಿತ್ ಆತ್ಮೀಯವಾಗಿ ಆಗ್ರಹಪಡಿಸಿದಾಗ ಸ್ನೇಹಾ ಆಗಲೆಂಬಂತೆ ಒಪ್ಪಿಕೊಂಡಳು. ಆಗ ಸ್ನೇಹಾಳಿಗೆ ಒಂದು ಮಹತ್ವಪೂರ್ಣ ವಿಷಯ ಮನದಟ್ಟಾಯಿತು. ತನ್ನ ಸಂಬಳ ಅವರೆಲ್ಲರ ಅಗತ್ಯಗಳ ಪೂರೈಕೆಗೆ ಬೇಕೇಬೇಕು, ಅವರ ಜವಾಬ್ದಾರಿ ನಿರ್ವಹಿಸಲು ರೋಹಿತ್‌ಗೆ ಇದು ಬಹು ಸಹಾಯಕ. ಆದರೆ ತನ್ನ ಸಂಬಳದ ಮೇಲೆ ಅವಲಂಬಿತರಾಗಿದ್ದೇವೆ ಎಂಬುದು ಅವರ ಅಹಂಗೆ ಪೆಟ್ಟುಕೊಟ್ಟಿದೆ ಎಂದು ತಿಳಿಯಿತು. ಯಾರು ಯಾರ ಮುಲಾಜಿನಲ್ಲೂ ಬದುಕಲು ಇಷ್ಟಪಡುತ್ತಿರಲಿಲ್ಲ. ತಂತಮ್ಮ ಆವಶ್ಯಕತೆಗಳಿಗೆ ಧಕ್ಕೆ ಬರಬಾರದೆಂದು ಅವರೆಲ್ಲರೂ ಅವಳನ್ನು ಪ್ರಮೋಷನ್ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದರು. ಪ್ರತಿ ವ್ಯಕ್ತಿಯೂ ಸುಖದ ಕನಸು ಕಾಣುತ್ತಾರೆ, ದುಃಖ ಸಂಕಟಗಳು ತಮ್ಮನ್ನು ಕಾಡಬಾರದೆಂದು ಹಂಬಲಿಸುತ್ತಾರೆ.
“ಎಲ್ಲರಿಗಿಂತ ಅತಿ ಹೆಚ್ಚಿನ ಸಂಬಳ ಪಡೆಯುತ್ತೇನೆ ಎಂಬ ಅಹಂಕಾರ ನಾನು ತೋರಿಸುತ್ತೇನೆ ಎಂಬ ಆಪಾದನೆ ನಿಮ್ಮದಾದರೆ, ಅದನ್ನು ಆಗಾಗ ಎತ್ತಾಡಿ ಕುಟುಕುವುದನ್ನು ಬಿಡಬೇಕು. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಕೌಟುಂಬಿಕ ಸೌಹಾರ್ದತೆ ಹೆಚ್ಚುವಂತೆ, ಪರಸ್ಪರ ಅನ್ಯೋನ್ಯವಾಗಿ ಇರುವಂತೆ ನಡೆಯುತ್ತೇವೆಂದು ಪ್ರಮಾಣ ಮಾಡಿ ಅದಕ್ಕೆ ಬದ್ಧರಾಗಿದ್ದರೆ, ನಾನು ಸಂತೋಷದಿಂದ ಈ ಪ್ರಮೋಷನ್ ಸ್ವೀಕರಿಸುತ್ತೇನೆ. ನಮ್ಮ ಕುಟುಂಬ ಎರಡಾಗದಂತೆ ಕಾಯಾ ವಾಚಾ ಮನಸಾ ಶ್ರದ್ಧೆಯಿಂದ ನೋಡಿಕೊಳ್ಳುತ್ತೇನೆ.”
ಸ್ನೇಹಾಳ ಮಾತುಗಳನ್ನು ಕೇಳಿ ಅವರೆಲ್ಲರ ಮುಖ ಸಂತಸದಿಂದ ಅರಳಿತು.
ರೋಹಿತ್ ಹಿಗ್ಗುತ್ತಾ, ಚಪ್ಪಾಳೆ ತಟ್ಟುತ್ತಾ ಅವಳ ಬಳಿ ಬಂದ. ಅವಳ ಕಿವಿಯಲ್ಲಿ ಪ್ರೇಮದಿಂದ, “ಐ ಲವ್ ಯೂ ಡಿಯರ್, ಇಂದಿನಿಂದ ನಿನಗಾಗಿ ನಾನು ಪ್ರಾಮಾಣಿಕವಾಗಿ ಬದಲಾಗಲು ಪ್ರಯತ್ನಿಸುವೆ ಸ್ವೀಟ್ ಹಾರ್ಟ್.”
ಬಹಳ ದಿನಗಳ ನಂತರ ಸ್ನೇಹಾಳಿಗೆ ರೋಹಿತ್‌ನ ಮನದಾಳದ ಮಾತು ಕೇಳಿಸಿದಂತಾಗಿ, ಸಂತೋಷದಿಂದ ಅವನ ಎದೆಗೆ ಒರಗಿದಳು. ಉದ್ವಿಗ್ನತೆಯ ಮೋಡ ಕವಿದಿದ್ದ ವಾತಾವರಣ ತಿಳಿಯಾಗಿ, ಆ ಮನೆಯಲ್ಲಿ ಸಂತೋಷದ ಹೊಂಬಿಸಿಲು ಹರಡಿತು. ಅತ್ತೆ ಸೊಸೆ ಸಂಭ್ರಮದಿಂದ ಹಬ್ಬದ ಅಡುಗೆಗೆ ತಯಾರಿ ನಡೆಸಿದರು.