“ಅರುಣಾ, ನನಗೆ ಬಹಳ ಖುಷಿಯಾಗ್ತಿದೆ. ಯುಎನ್‌ಓನ ಸ್ಪೆಷಲ್ ಫೋರ್ಸ್‌ನೊಂದಿಗೆ ಉಗಾಂಡಾಗೆ ಹೋಗೋಕೆ ನನ್ನ ಹೆಸರು ಫೈನಲ್ ಆಗಿದೆ. ಇದು ನನ್ನ ಜೀವನದ ಅಮೃತಘಳಿಗೆ. ನೀನು ರಾಹುಲ್ ‌ಮನೆಗೆ ಬೆಂಗಳೂರಿಗೆ ಹೋಗು.”

“ನೀವು ಎಲ್ಲಿಗಾದ್ರೂ ಹೊರಡಿ. ನಂಗೇನು? ನಾನ್ಯಾಕೆ ಬೆಂಗಳೂರಿಗೆ ಹೋಗಲಿ? ನೀವಿಲ್ಲದಿದ್ರೆ ನಾನು ಬದುಕೋಕೇ ಆಗಲ್ವಾ? 5 ವರ್ಷದ ಮಗ ರಾಹುಲ್ ‌ಜೊತೆ ಒಬ್ಬಳೇ ಇರ್ತಿದ್ದೆ. ಆಗ ಹೇಗಿರ್ತೀಯಾಂತ ಕೇಳಲಿಲ್ಲ.”

“ನೀನಂತೂ ನನ್ನನ್ನು ಯಾವಾಗಲೂ ಬೈತಾನೇ ಇರ್ತೀಯ. ಇರಲಿ, ನಾನು ರಾಹುಲ್‌ಗೆ ಫೋನ್‌ ಮಾಡ್ತೀನಿ. ಆಮೇವೆ ನಿನ್ನ ಮನಸ್ಸಿಗೆ ಬಂದ ಹಾಗೆ ಮಾಡು,” ಎಂದು ಹೇಳಿ ಸುರೇಶ್‌ ರಾಹುಲ್‌‌ಗೆ ಫೋನ್‌ ಮಾಡಿದರು.

“ನಾನು ಉಗಾಂಡಾಗೆ ಹೋಗ್ತಿದ್ದೀನಿ. ನಿನ್ನ ಅಮ್ಮ ನಿನ್ನ ಬಳಿ ಬಂದಿರಲಿ. ಅವಳು ಸರಿಯಾಗಿ ಪಥ್ಯ ಮಾಡಲ್ಲ. ಅವಳ ತೂಕ ಹೆಚ್ತಾನೇ ಇದೆ. ಓಡಾಡುವುದೂ ಕಷ್ಟವಾಗಿದೆ. ಅವಳಿಗೆ ಮಂಡಿ ನೋವು. ಯಾರಾದ್ರೂ ಒಳ್ಳೆಯ ಡಾಕ್ಟರ್‌ಗೆ ತೋರಿಸು. ನಾನು ಎಲ್ಲವನ್ನೂ ಮಾಡಿ ಸೋತುಹೋಗಿದ್ದೀನಿ. ನೀನೂ ಪ್ರಯತ್ನಿಸಿ ನೋಡು. ಏನಾದ್ರೂ ಲಾಭವಾಗಬಹುದು.”

“ನೀವು ಯಾವಾಗ ಹೊರಡೋದು?”

“ನಾನು 22ನೇ ತಾರೀಕು ಡೆಲ್ಲೀಲಿ ಇರಬೇಕು.”

ನಂತರ ಅರ್ಧಗಂಟೆಯಲ್ಲೇ ರಾಹುಲ್‌‌ನ ಫೋನ್‌ ಬಂತು.“ಅಮ್ಮಾ, 20ನೇ ತಾರೀಕು ನೀವು ಬೆಂಗಳೂರಿಗೆ ಬರ್ತಿದ್ದೀರಿ. ನಾನು ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಿಸಿದ್ದೀನಿ.”

“ಅಷ್ಟು ಬೇಗ ನಾನು ಹೇಗೆ ರೆಡಿಯಾಗೋದು?”

“ನೀವು ನಿಮ್ಮ ಮನೇಗೆ ಬರ್ತಿದ್ದೀರಿ. ಅದಕ್ಯಾಕೆ ಯೋಚನೆ? ನನಗೆ ಕೋಡುಬಳೆ ಮಾಡ್ಕೊಂಡು ಬನ್ನಿ.” ಅರುಣಾ ಮೊದಲ ಬಾರಿ ಮಗನ ಮನೆಗೆ ಹೋಗುತ್ತಿದ್ದರು. ಅವರು ಬಹಳ ಕಷ್ಟಪಟ್ಟು ರಾಹುಲ್‌‌ನನ್ನು ಬೆಳೆಸಿದ್ದರು. ಗಂಡ ಸುರೇಶ್‌ ಮಿಲಿಟರಿಯಲ್ಲಿ ಸೋಲ್ಜರ್‌ ಆಗಿದ್ದರು. ಅವರು ವರ್ಷದಲ್ಲಿ ಒಮ್ಮೆ ಮಾತ್ರ ಮನೆಗೆ ಬರುತ್ತಿದ್ದರು. ಒಮ್ಮೊಮ್ಮೆ ವರ್ಷ ಮುಗಿದುಹೋಗುತ್ತಿತ್ತು. ಮನೆ ಅತ್ತೆ, ಮಾವ, ಮದುವೆಯಾಗದ ದೊಡ್ಡಣ್ಣ ಮತ್ತು ಇಬ್ಬರು ಚಿಕ್ಕ ನಾದಿನಿಯರಿಂದ ತುಂಬಿರುತ್ತಿತ್ತು. ದಿನವಿಡೀ ಕೆಲಸ ಮಾಡಿ ಅರುಣಾ ಸುಸ್ತಾಗುತ್ತಿದ್ದರು. ಭಾವನ ಕಾಮುಕ ದೃಷ್ಟಿ ಅವರ ಅಂಗಗಳನ್ನು ಭೇದಿಸುವಂತಿದ್ದವು. ಭಾವನಿಗೆ ಕುಡಿತದ ಅಭ್ಯಾಸ. ಮನೆ ರಣರಂಗದಂತಿತ್ತು. ಅದರಿಂದ ಬೇಸತ್ತು ಅವರು ಮನೆ ಬಿಟ್ಟು ತರುಮನೆಗೆ ಹೋಗಿದ್ದರು. ಸುರೇಶ್‌ಗೆ ಆಗ ಬಹಳ ಕೋಪ ಬಂದಿತ್ತು. ಅವರು 5-6 ವರ್ಷ ಅರುಣಾ ಬಳಿ ಬಂದಿರಲಿಲ್ಲ. ಆಗ ಅರುಣಾಗೆ ಬಹಳ ಕಷ್ಟವಾಗಿತ್ತು. ಅವರು ಒಂದು ಸಣ್ಣ ಶಾಲೆಯಲ್ಲಿ ಕೆಲಸಕ್ಕೆ ಸೇರಿ ಸಂಜೆ ಹೊತ್ತು ಟ್ಯೂಶನ್‌ ಮಾಡುತ್ತಾ ಬದುಕು ಸಾಗಿಸಿದರು. ಮಗ ರಾಹುಲ್‌‌ನನ್ನು ಚೆನ್ನಾಗಿ ಓದಿಸಿ ಉತ್ತಮ ಪ್ರಜೆಯನ್ನಾಗಿ ಮಾಡುವುದೇ ಅವರ ಜೀವನದ ಧ್ಯೇಯವಾಗಿತ್ತು. ಜೀವನದಲ್ಲಿ ಬಿರುಗಾಳಿಗಳನ್ನು ಎದುರಿಸೀ ಎದುರಿಸೀ ಅವರು ಒರಟರೂ, ಹಠವಾದಿಯೂ ಆಗಿದ್ದರು.

ರಾಹುಲ್ ಚಿಕ್ಕಂದಿನಿಂದಲೇ ಬಹಳ ಚೂಟಿಯಾಗಿದ್ದ. ತರಗತಿಯಲ್ಲಿ ಯಾವಾಗಲೂ ಮೊದಲು ಬರುತ್ತಿದ್ದ. ಅವನು ಎಂಜಿನಿಯರಿಂಗ್‌ ಮಾಡಿ 3 ವರ್ಷ ಅಮೆರಿಕಾಗೆ ಹೋಗಿದ್ದ. ಅಲ್ಲಿಯೇ ಮಿನ್ನಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಅರುಣಾಗೆ ಮಗನ ಈ ವ್ಯವಹಾರದಿಂದ ಕೋಪ ಬಂದಿತ್ತು. ರಾಹುಲ್ ‌ಅಮ್ಮನ ಬಳಿ ಮಿನ್ನಿಯನ್ನು ಕರೆದುಕೊಂಡು ಬಂದಿದ್ದ. ಸ್ವಲ್ಪ ದಿನದಲ್ಲೇ ಅವನಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿ ಹೆಂಡತಿಯೊಡನೆ ಅಲ್ಲಿಗೆ ಹೋಗಿದ್ದ. ಅರುಣಾಗೆ ಮಗನ ಮನೆಯಲ್ಲಿ ಹೇಗೆ ಇರೋದು? ಸೊಸೆಯ ಜೊತೆ ಹೇಗೆ ವ್ಯವಹರಿಸೋದು ಎಂದೆಲ್ಲಾ ಭಯವಿತ್ತು.

ಅರುಣಾ ಟ್ರೇನ್‌ನ ಎ.ಸಿ. ಬೋಗಿಯನ್ನು ಯಾವಾಗಲೂ ಆಶೆಭರಿತ ದೃಷ್ಟಿಯಿಂದಲೇ ನೋಡುತ್ತಿದ್ದರು. ಇನ್ನು ವಿಮಾನ ಯಾನದ ಬಗ್ಗೆ ಯೋಚಿಸಿ ಅವರು ಅತ್ಯಂತ ಉತ್ಸಾಹಿತರಾಗಿದ್ದರು. ಮಗ ನನಗೆ ಫ್ಲೈಟ್‌ ಟಿಕೆಟ್‌ ಕಳಿಸಿದ್ದಾನೆ ಎಂದು ನೆರೆಹೊರೆಯರಿಗೆಲ್ಲಾ ಹೇಳುತ್ತಿದ್ದರು. ಅವರು ಮಗನಿಗೆ ಇಷ್ಟವಾದ ತಿಂಡಿಗಳು ಕಡುಬು, ಚಕ್ಕುಲಿ, ಕೋಡುಬಳೆ, ಖಾರದ ಅವಲಕ್ಕಿ, ತೇಂಗೊಳಲ್ ಇತ್ಯಾದಿ ಮಾಡಿಕೊಂಡರು. ಇಲ್ಲದೆ ನಿಂಬೆಕಾಯಿ, ಹೇರಳೆಕಾಯಿ ಉಪ್ಪಿನಕಾಯಿಗಳನ್ನೂ ಪ್ಯಾಕ್‌ ಮಾಡಿಕೊಂಡರು. ಅವರಿಗೆ ಎಷ್ಟೇ ಸುಸ್ತಾಗಿದ್ದರೂ ಮಗನ ಬಗೆಗಿನ ಮಮತೆ ಅವರನ್ನು ಕಟ್ಟಿಹಾಕುತ್ತಿತ್ತು. ಅವರು ಸೊಸೆಗಾಗಿ ಒಂದು ಚೂಡಿದಾರ್‌ ಸೆಟ್ ಖರೀದಿಸಿದರು. ಏರ್‌ಪೋರ್ಟ್‌ನ ವಿಶಾಲ ಅಂಗಳ, ಜನರ ಗುಂಪು ಗಲಭೆಗಳನ್ನು ನೋಡಿ ಅವರಿಗೆ ಗಾಬರಿಯಾಯಿತು. ಅವರು ತಮ್ಮನ್ನು ಕಳುಹಿಸಲು ಬಂದಿದ್ದ ನೆರೆಮನೆಯ ಹುಡುಗ ಶೇಖರ್‌ನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದರು. ಎರಡೂವರೆ ಗಂಟೆಗಳ ಹಾರಾಟದ ನಂತರ ಅವರು ಬೆಂಗಳೂರು ತಲುಪಿದರು. ಏರ್‌ಪೋರ್ಟ್‌ನಲ್ಲಿ ಕುಳಿತಿದ್ದ ರಾಹುಲ್‌ನನ್ನು ಕಂಡು ಅವರಿಗೆ ಖುಷಿಯಾಯಿತು. ಸೊಸೆ ಮಿನ್ನಿ ಜೀನ್ಸ್ ಧರಿಸಿ ಪಕ್ಕದಲ್ಲಿ ನಿಂತಿದ್ದಳು.

ಮಿನ್ನಿ ಅವರ ಬಳಿ ಬಂದು ವಿನಯದಿಂದ ಕಾಲು ಮುಟ್ಟಿ ನಮಸ್ಕರಿಸಿ ಅಪ್ಪಿಕೊಂಡು, “ಮಾಮ್, ಪ್ರಯಾಣ ಸುಖವಾಗಿತ್ತಾ?” ಎಂದು  ಕೇಳಿದಳು.

ಅರುಣಾ ಬಹಳ ಕಷ್ಟದಿಂದ, “ಚೆನ್ನಾಗಿತ್ತು,” ಎಂದರು.

ರಾಹುಲ್ ‌ಕಾರು ತಂದ. ಮಿನ್ನಿ ಪ್ರೀತಿಯಿಂದ ಅವರ ಕೈ ಹಿಡಿದು ಕಾರಿನಲ್ಲಿ ಕೂಡಿಸಿದಳು. “ಮಾಮ್, ನಿಮಗೆ ಏರೋಪ್ಲೇನ್‌ನಲ್ಲಿ ಭಯ ಆಗ್ಲಿಲ್ವಾ?” ಎಂದು ಕೇಳಿದಳು.

“ಸ್ವಲ್ಪ ಭಯ ಆಗಿತ್ತು. ನಾನು ಕಣ್ಣುಗಳನ್ನು ಮುಚ್ಚಿಕೊಂಡುಬಿಟ್ಟಿದ್ದೆ. ಸ್ವಲ್ಪ ತಲೆನೋಯ್ತಿದೆ.”

“ಮನೆಗೆ ಹೋಗಿ ಒಂದು ಕಪ್‌ ಬಿಸಿಬಿಸಿ ಕಾಫಿ ಕುಡಿದ್ರೆ ಆರಾಮವಾಗುತ್ತೆ. ನಿಮ್ಮ ತಲೆಗೆ ಮಸಾಜ್‌ ಮಾಡಿದ್ರೆ ತಲೆ ನೋವು ದೂರಾಗುತ್ತೆ,” ಎಂದು ಹೇಳಿದ ಮಿನ್ನಿ ಅವರ ಕೈಗಳನ್ನು ತನ್ನ ಕೈಯಲ್ಲಿ ಹಿಡಿದು, “ಮಾಮ್, ನಿಮ್ಮ ಸೀರೆ ಬಹಳ ಚೆನ್ನಾಗಿದೆ,” ಎಂದಳು.

ರಾಹುಲ್ ‌ತಮಾಷೆಯಿಂದ, “ಇವರು ನಿನ್ನ ಅತ್ತೆ. ಮಾಮ್ ಅಲ್ಲ. ಅಮ್ಮಾ, ನಿಮಗೆ ಸೊಸೆ ಸಿಕ್ಕಿದ ಮೇಲೆ ಮಗನನ್ನು ಮರೆತುಬಿಟ್ರಿ,” ಎಂದ.

“ಇಲ್ಲ ರಾಹುಲ್‌, ನಿನ್ನ ಹೆಂಡ್ತಿನೇ ನೋಡ್ತಿದ್ದೆ. ಬಹಳ ಒಳ್ಳೆಯಳು,” ಮಿನ್ನಿಯ ಸ್ನೇಹದಿಂದ ಅವರು ಭಾವುಕರಾಗಿದ್ದರು.

“ಇನ್ನು 15 ನಿಮಿಷಕ್ಕೆ ನಾವು ಮನೇಲಿರ್ತೀವಿ,” ರಾಹುಲ್ ‌ಹೇಳಿದ.

ಸ್ವಲ್ಪ ಹೊತ್ತಿನ ನಂತರ ಕಾರು ಒಂದು ಅಪಾರ್ಟ್‌ಮೆಂಟ್‌ ಮುಂದೆ ನಿಂತಿತು. ಹಸಿರು ತುಂಬಿದ ಒಂದು ಲಾನ್‌, ಒಂದು ದೊಡ್ಡ ಸ್ವಿಮ್ಮಿಂಗ್‌ ಪೂಲ್ ‌ಅಲ್ಲಿತ್ತು. ಅಲ್ಲಿನ ಭವ್ಯತೆಯನ್ನು ಅರುಣಾ ರೆಪ್ಪೆ ಮಿಟುಕಿಸದೇ ನೋಡುತ್ತಿದ್ದರು. ಮಿನ್ನಿ ಅವರ ಕೈಹಿಡಿದು ಲಿಫ್ಟ್ ನಲ್ಲಿ ತಮ್ಮ ಫ್ಲ್ಯಾಟ್‌ಗೆ ಕರೆದೊಯ್ದಳು. ಡ್ರಾಯಿಂಗ್‌ ರೂಮ್ ನ ದುಬಾರಿ ಸೋಫಾ, ದಪ್ಪನೆಯ ಕಾರ್ಪೆಟ್‌, ಗೋಡೆಗೆ ಹಾಕಿದ ಎಲ್‌ಸಿಡಿ ಟಿವಿ ಕಂಡು ಅವರಿಗೆ ಸಂತೋಷವಾಯಿತು.

“ಭೇಷ್‌ ರಾಹುಲ್‌, ನೀನು ನನ್ನ ಕನಸನ್ನು ನನಸು ಮಾಡಿದೆ,” ಎಂದರು.

ನಂತರ ಅವರು ಮೆತ್ತನೆಯ ಸೋಫಾದ ಮೇಲೆ ಮಕ್ಕಳಂತೆ ಕುಳಿತು ಸಂಭ್ರಮಿಸಿದರು. ರಾಹುಲ್ ‌ಅವರ ಬ್ಯಾಗು, ಸೂಟ್‌ಕೇಸ್‌ಗಳನ್ನು ಒಳಗೆ ತಂದ. ಅವನು ಅಮ್ಮನನ್ನು ಅಪ್ಪಿಕೊಂಡು, “ಅಮ್ಮಾ, ನಂಗೆ ಕೋಡುಬಳೆ, ಚಕ್ಕುಲಿ ತಂದ್ಯಾ?” ಎಂದ.

“ತಂದಿದ್ದೀನಿ. ಕೊಡ್ತೀನಿ ಇರು.”

“ಮಿನ್ನಿ, ಕಾಫಿ ತಗೊಂಡು ಬಾ.”

“ತರ್ತೀನಿ. ಆಮೇಲೆ ನಾವಿಬ್ರೂ ಸೇರಿ ಡಬ್ಬಿ ತೆರೆಯೋಣ.”

ಮಿನ್ನಿಯ ಹುಡುಗಾಟ ಕಂಡು ಅರುಣಾ ಮುಗುಳ್ನಕ್ಕರು. ಮಿನ್ನಿ ಬೇಗನೇ ಪಕೋಡಾ ಹಾಗೂ ಬಿಸಿಬಿಸಿ ಕಾಫಿ ತಂದಳು.

ಪಕೋಡಾ ತಿನ್ನುತ್ತಾ ಅರುಣಾ ಹೇಳಿದರು, “ಪಕೋಡಾ ಬಹಳ ರುಚಿಯಾಗಿದೆ ಮಿನ್ನಿ.”

ರಾಹುಲ್ ‌ಮತ್ತು ಮಿನ್ನಿ ಡಬ್ಬಿಗಳನ್ನು ತೆರೆಯಲು ಮಕ್ಕಳಂತೆ ಕೂತುಬಿಟ್ಟಿದ್ದರು. ರಾಹುಲ್ ಚಕ್ಕುಲಿ, ಕೋಡುಬಳೆ ತಿನ್ನುತ್ತಲೇ, “ಆಹಾ ಅಮ್ಮಾ, ನಿಮ್ಮ ಕೈರುಚಿ ತಿಂದು ಬಹಳ ದಿನಗಳಾಯ್ತು,” ಎಂದ. ಮಿನ್ನಿಯೂ ಚಕ್ಕುಲಿ, ಕೋಡುಬಳೆ ತಿಂದು, “ವೆರಿ ಟೇಸ್ಟಿ,” ಎಂದಳು.

ರಾಹುಲ್ ‌ಕಡುಬು, ತೇಂಗೊಳಲ್ ತಿಂದು ತೇಗುತ್ತಾ, “ಅಬ್ಬಾ ನನ್ನ ಹೊಟ್ಟೆ ತುಂಬಿತು. ಆದರೆ ಮನಸ್ಸು ಇನ್ನೂ ತುಂಬಿಲ್ಲ,” ಎಂದ.

ಮಿನ್ನಿ, “ಮಾಮ್, ಇವರ ಹೊಟ್ಟೆ ನೋಡಿ, ಬೊಜ್ಜು ಬಂದಿದೆ. ಇವರಂತೂ ಬಾಯಿ ಕಟ್ಟೋದಿಲ್ಲ. ಇವರ ಕೊಲೆಸ್ಟ್ರಾಲ್ ಜಾಸ್ತಿ ಆಗಿದೆ. ಇದೇ ಸ್ಪೀಡಿನಲ್ಲಿ ತಿನ್ನುತ್ತಿದ್ದರೆ ಬೇಗನೇ ಹಾಸ್ಪಿಟಲ್ ಸೇರಬೇಕಾಗುತ್ತೆ,” ಎಂದಳು.

“ಅಮ್ಮಾ, ನೀವು ಈ ವಯಸ್ಸಿನಲ್ಲಿ ಇದನ್ನೆಲ್ಲಾ ತಿನ್ನಬಾರದು,” ರಾಹುಲ್ ‌ಹೇಳಿದ.

“ನಿಮ್ಮಪ್ಪ ತಿನ್ನಲೇ ಕೂಡದು ಅಂದ್ರು. ಆದರೆ ನಾನು ಅವರ ಮಾತು ಕೇಳಲಿಲ್ಲ.”

“ನಾವಿಬ್ರೂ ನಮ್ಮ ಆಫೀಸುಗಳಿಗೆ ಕೊಂಚ ಕೊಂಚ ಈ ತಿಂಡಿಗಳನ್ನು ತೆಗೆದುಕೊಂಡು ಹೋಗಿ ನಮ್ಮಮ್ಮ ಮಾಡಿಕೊಟ್ಟಿದ್ದು ಅಂತ ಹೇಳಿ ಕೊಡ್ತೀವಿ,” ಎಂದು ರಾಹುಲ್ ‌ಹೇಳಿದ.

“ಹೌದು ಹೌದು. ಬನ್ನಿ ಮಾಮ್, ನಿಮಗೆ ನಿಮ್ಮ ರೂಮ್ ತೋರಿಸ್ತೀನಿ,” ಮಿನ್ನಿ ಹೇಳಿದಳು.

ರೂಮ್ ಚಿಕ್ಕದಾಗಿದ್ದರೂ ಸ್ವಚ್ಛವಾಗಿತ್ತು. ಮಂಚದ ಮೇಲೆ ಬೆಲೆಬಾಳುವ ಬೆಡ್‌ಶೀಟ್‌ ಹಾಸಿತ್ತು. ಅವರು ಬಾಥ್‌ರೂಮಿಗೆ ಹೋಗಿ ಮುಖಕ್ಕೆ ತಣ್ಣೀರು ಸಿಂಪಡಿಸಿಕೊಂಡು ಒರೆಸಿಕೊಂಡರು. ನಂತರ ಮಂಚದ ಮೇಲೆ ಮಲಗಿ ಕಣ್ಣುಗಳನ್ನು ಮುಚ್ಚಿಕೊಂಡು ಈಗಂತೂ ಮಿನ್ನಿ ಒಳ್ಳೆಯ ಹುಡುಗಿಯಂತೆ ಕಾಣುತ್ತಿದ್ದಾಳೆ. ಮುಂದೆ ಹೇಗೋ ಎಂದು ಯೋಚಿಸ ತೊಡಗಿದರು. ಅವರಿಗೆ ಯಾವಾಗ ನಿದ್ದೆ ಹತ್ತಿತೋ ತಿಳಿಯಲೇ ಇಲ್ಲ. ಅವರಿಗೆ ಎಚ್ಚರವಾದಾಗ ಧಡಬಡಿಸಿ ಎದ್ದರು. ಅವರಿಗೆ ಹಸಿವೆಯಾಗುತ್ತಿತ್ತು. ಆದರೆ ಮನೆಯಲ್ಲಿ ಯಾವುದೇ ಸದ್ದು ಕೇಳುತ್ತಿರಲಿಲ್ಲ.

ಅಷ್ಟರಲ್ಲಿ ಮಿನ್ನಿ ಕೂಗಿದಳು, “ಮಾಮ್, ಊಟ ಮಾಡಲು ಬನ್ನಿ.”

ರಾಹುಲ್ ‌ಸಲಾಡ್‌ಗೆ ತರಕಾರಿ ಕತ್ತರಿಸುತ್ತಿದ್ದ. ಅದನ್ನು ಕಂಡು ಅರುಣಾ, “ರಾಹುಲ್‌, ನಿನಗೆ ಬಹಳ ತಿಳಿವಳಿಕೆ ಇದೆ. ಹೆಂಡತಿಗೆ ಸಹಾಯ ಮಾಡೋದು ಒಳ್ಳೆಯ ಕೆಲಸ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ನಿಮ್ಮಪ್ಪನಿಗೆ ನೀರಿನ ಗ್ಲಾಸನ್ನು ಕೈಗೆ ಕೊಟ್ಟರೇನೇ ಕುಡೀತಿದ್ದಿದ್ದು,” ಎಂದರು.

“ಮಾಮ್ ಏಳಿ, ನೀವು ಮೊದಲು ಊಟ ಮಾಡಿಬಿಡಿ,” ಮಿನ್ನಿ ಹೇಳಿದಳು.

“ಇಲ್ಲ ಮಿನ್ನಿ, ಹಪ್ಪಳ ಸಂಡಿಗೆ ಕರಿದುಬಿಡು. ಎಲ್ಲರೂ ಒಟ್ಟಿಗೆ ಊಟ ಮಾಡೋಣ.”

“ಮಿನ್ನಿ, ಅಮ್ಮ ತಂದಿರೋ ಅರಳು ಸಂಡಿಗೆ, ಅಕ್ಕಿ ಹಪ್ಪಳ ಕರಿದುಬಿಡು,” ರಾಹುಲ್ ‌ಹೇಳಿದ.

ಅರುಣಾ ನಕ್ಕರು. ಮಿನ್ನಿ ಹಪ್ಪಳ, ಸಂಡಿಗೆ, ಪಾಯಸ, ವಾಂಗಿಬಾತ್‌ ಮಾಡಿದ್ದಳು. ಅರುಣಾ ಊಟ ಮಾಡುತ್ತಾ,

“ಆಹಾ ಮಿನ್ನಿ, ಅಡುಗೆ ತುಂಬಾ ಚೆನ್ನಾಗಿ ಮಾಡಿದ್ದೀಯ,” ಎಂದು ಹೊಗಳಿದರು. ರಾಹುಲ್ ‌ಕುಶಲ ಗೃಹಿಣಿಯಂತೆ ಅಡುಗೆಮನೆ ಸ್ವಚ್ಛಗೊಳಿಸುತ್ತಿದ್ದ.

ಅರುಣಾ, “ಈ ಕಡೆ ಬಾ ರಾಹುಲ್‌, ನಾನು ಕ್ಲೀನ್‌ ಮಾಡ್ತೀನಿ,” ಎಂದರು.

“ಅಮ್ಮಾ, ನೀವು ಇವತ್ತು ರೆಸ್ಟ್ ತಗೊಳ್ಳಿ. ನಾಳೆಯಿಂದ  ಮಾಡಿ,” ರಾಹುಲ್ ‌ಹೇಳಿದ.

ಅರುಣಾ ಸೂಟ್‌ಕೇಸ್‌ನಿಂದ ಚೂಡಿದಾರ್‌ ತೆಗೆದು ಮಿನ್ನಿಗೆ ಕೊಟ್ಟು, “ನಿನಗೆ ಇಷ್ಟ ಆಯ್ತಾ?” ಎಂದು ಕೇಳಿದರು.

“ಬಹಳ ಚೆನ್ನಾಗಿದೆ. ನಾನು ಬಹಳ ದಿನಗಳಿಂದ ಇಂಥದ್ದನ್ನು ಹುಡುಕ್ತಿದ್ದೆ. ಆದರೆ ಸಿಕ್ಕೇ ಇರಲಿಲ್ಲ.”

ಅರುಣಾ ಖುಷಿಯಾದರು.

“ಅಮ್ಮಾ, ನಾಳೆ ಬೆಳಗ್ಗೆ 8 ಗಂಟೆಗೆ ಡಾಕ್ಟರ್‌ ಹತ್ರ ಅಪಾಯಿಂಟ್‌ಮೆಂಟ್‌ ಇದೆ. ಬೇಗ ರೆಡಿಯಾಗಬೇಕು,” ರಾಹುಲ್ ಹೇಳಿದ.

ಅರುಣಾ ಬೆಳಗ್ಗೆ ಎದ್ದು ಸ್ನಾನ ಮಾಡಿ ಹೊರಬಂದಾಗ ಮಿನ್ನಿ ಆಗಲೇ ಸಿದ್ಧಳಾಗಿದ್ದು ಬಿಸಿಬಿಸಿ ಕಾಫಿ ಕೊಟ್ಟಳು. ನಂತರ, “ಮಾಮ್, ಬೇಗ ರೆಡಿಯಾಗಿ, ನಿಮ್ಮ ಮಂಡಿನೋವಿಗೆ ಫಿಸಿಯೋಥೆರಪಿ ಸೆಂಟರ್‌ಗೆ ಹೋಗಬೇಕು. ಇಲ್ಲಿ ಡಾಕ್ಟರ್‌ ಕೊಟ್ಟಿರುವ ಟೈಮಿಗೆ ಸರಿಯಾಗಿ ಹೋಗಬೇಕು. ಅವರು ನಿಮ್ಮ ಮಂಡಿಗಳನ್ನು ಟೆಸ್ಟ್ ಮಾಡಿ ಎಕ್ಸರ್‌ ಸೈಜ್‌ ಮಾಡಿಸುತ್ತಾರೆ,” ಎಂದಳು. ಅರುಣಾ ಕಾಫಿ ಕುಡಿದು ಮಿನ್ನಿಯೊಂದಿಗೆ ಹೊರಟರು. ಡಾಕ್ಟರ್‌ ಅವರನ್ನು ಚೆಕಪ್‌ವಮಾಡಿ ಮಂಡಿಗಳಿಗೆ ಎಕ್ಸರ್‌ ಸೈಜ್‌ ಬಗ್ಗೆ ಹೇಳಿದರು. ಊಟ, ತಿಂಡಿ ಬಗ್ಗೆ ಚಾರ್ಟ್‌ನ್ನೂ ಕೊಟ್ಟರು. ಮಿನ್ನಿ ಬ್ಯಾಗ್‌ನಿಂದ ಸಲ್ವಾರ್‌ ಕಮೀಜ್‌ ತೆಗೆದುಕೊಟ್ಟು, “ಮಾಮ್, ಇದನ್ನು ಧರಿಸಿ ಎಕ್ಸರ್‌ ಸೈಜ್‌ ಮಾಡಿದರೆ ಒಳ್ಳೆಯದು,” ಎಂದಳು.

ಅರುಣಾಗೆ ಗೊಂದಲವಾಗಿತ್ತು. ಆದರೆ ಮನಸ್ಸಿಗೆ ಖುಷಿಯಾಗಿತ್ತು. ಮಿನ್ನಿ ಅವರ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದಳು. ಅವರಿಗೆ ಫಿಸಿಯೋಥೆರಪಿ ಸೆಂಟರ್‌ಗೆ ಹೋಗುವುದು ಇಷ್ಟವಾಗಿತ್ತು. ಬೇಗನೆ ಮಂಡಿಗಳಲ್ಲಿ ಆರಾಮ ಎನಿಸತೊಡಗಿತು. ಅವರು ಚಾರ್ಟ್ ಪ್ರಕಾರ ಆಹಾರ ಸೇವಿಸತೊಡಗಿದರು.

ಒಂದು ದಿನ ಮಿನ್ನಿ ಅವರಿಗೆ ಹೇಳಿದಳು, “ಮಾಮ್, ಇವತ್ತು ಮಾಲ್‌ಗೆ ಹೋಗೋಣ. ನಿಮಗಾಗಿ ಸ್ವಲ್ಪ ಶಾಪಿಂಗ್‌ ಮಾಡೋಣ.”

“ಇಲ್ಲ ಮಿನ್ನಿ ಬೇಡ. ನನ್ನ ಬಳಿ ಎಲ್ಲವೂ ಇದೆ. ನನಗೇನೂ ಬೇಡ.”

“ಬನ್ನಿ ಮಾಮ್,” ಮಿನ್ನಿ ಅಧಿಕಾರಯುತವಾಗಿ ಅವರ ಕೈಹಿಡಿದು ಕರೆದುಕೊಂಡು ಹೋದಳು. 5-6 ಚೂಡಿದಾರ್‌ಗಳನ್ನು ಖರೀದಿಸಿ ಅವಳು ಹೇಳಿದಳು, “ಮಾಮ್, ಈಗ ಇವನ್ನೇ ಧರಿಸಬೇಕು. ನಿಮಗೆ ಆರಾಮೆನಿಸುತ್ತದೆ.”

ಅರುಣಾ ಸೊಸೆಯ ಸ್ನೇಹ ಕಂಡು ಆಶ್ಚರ್ಯಚಕಿತರಾಗಿದ್ದರು.

“ಮಿನ್ನಿ, ನೀನು ನನ್ನ ಮಗಳಂತೆಯೇ,” ಎಂದರು. ರಾಹುಲ್ ‌ಒಂದು ದಿನ ತಾಯಿಗೆ ಬ್ರಶ್‌, ಕಲರ್ಸ್‌ ಮತ್ತು ಪೇಪರ್‌ತಂದುಕೊಟ್ಟು, “ಅಮ್ಮಾ, ನೀವು ಹೇಳ್ತಿದ್ರಿ. ನನಗೆ ಪೇಂಟಿಂಗ್‌ ಮಾಡೋಕೆ ಬಹಳ ಆಸಕ್ತಿ ಇತ್ತು ಆದರೆ, ಪರಿಸ್ಥಿತಿಗಳಿಂದಾಗಿ ಮುಂದುವರಿಸೋಕೆ ಆಗಿರಲಿಲ್ಲಾಂತ. ಈಗ ನೀವು ನಿಮ್ಮ ಆಸೆ ಪೂರೈಸಿಕೊಳ್ಳಬಹುದು,” ಎಂದ.

ಮಗನಿಂದ ಗಿಫ್ಟ್ ಪಡೆದು ಅರುಣಾರ ಕಣ್ಣುಗಳು ಒದ್ದೆಯಾದವು. ಬಹಳ ವರ್ಷಗಳ ಬಳಿಕ ಕೈಯಲ್ಲಿ ಬ್ರಶ್‌ ಹಿಡಿದು ಅವರಿಗೆ ಖುಷಿಯಾಗಿತ್ತು.

ನಿಧಾನವಾಗಿ ರಾಹುಲ್ ಅವರಿಗೆ ಕಂಪ್ಯೂಟರ್‌ ಚಾಲನೆ ಮಾಡುವುದನ್ನು ಕಲಿಸಿದ. ಅವರಿಗೆ ಒಂದು ಲ್ಯಾಪ್‌ಟಾಪ್‌ ಕೂಡ ತಂದುಕೊಟ್ಟ. ಅದರಿಂದ ಅವರು ಗೂಗಲ್‌‌ನಲ್ಲಿ ಸರ್ಚ್‌ ಮಾಡುತ್ತಿದ್ದರಲ್ಲದೆ  ವೀಡಿಯೋ ಗೇಮ್ ಕೂಡ ಆಡುತ್ತಿದ್ದರು. ಈ ಹೊಸ ಪ್ರಪಂಚದಲ್ಲಿ ಅವರಿಗೆ ಬಹಳ ಸಂತೋಷ ಸಿಗುತ್ತಿತ್ತು. ಪೇಂಟಿಂಗ್‌ ಅಭ್ಯಾಸದಿಂದಾಗಿ ಅಕ್ಕಪಕ್ಕದವರು ಅವರನ್ನು `ಪೇಂಟಿಂಗ್‌ಆಂಟಿ’ ಎಂದು ಕರೆಯತೊಡಗಿದರು.

ಶನಿವಾರ ರಜ ಇತ್ತು. ಮಿನ್ನಿ, “ಮಾಮ್, ಇತ್ತು ನೀವು ನನ್ನ ಜೊತೆ ಒಂದು ಕಡೆ ಬರಬೇಕು,” ಎಂದಳು.

“ಎಲ್ಲಿಗೆ ಮಿನ್ನಿ?”

“ಬನ್ನಿ ಹೇಳ್ತೀನಿ.”

ಮಿನ್ನಿ ಅವರನ್ನು ಒಂದು ಬ್ಯೂಟಿಪಾರ್ಲರ್‌ಗೆ ಕರೆದುಕೊಂಡು ಹೋದಳು.

“ಮಾಮ್, ನೀವು ಹೇರ್‌ ಸ್ಟೈಲ್ ಮಾಡಿಸಿಕೊಂಡರೆ ಇನ್ನೂ ಹೆಚ್ಚು ಸ್ಮಾರ್ಟ್‌, ಸುಂದರ ಹಾಗೂ ಯಂಗ್‌ ಆಗಿ ಕಾಣುತ್ತೀರಿ,” ಎಂದಳು.

ಅರುಣಾ ಬೇಡ ಬೇಡ ಎನ್ನುತ್ತಲೇ ಸಂಕೋಚದ ಮುದ್ದೆಯಾಗಿ ಚೇರ್‌ನಲ್ಲಿ ಕುಳಿತರು. ಅವರಿಗೆ ಎಂತಹ ಹೇರ್‌ ಸ್ಟೈಲ್ ಮಾಡಬೇಕೆಂದು ಮಿನ್ನಿಯೇ ಹೇಳಿದಳು. ಒಂದು ಗಂಟೆಯಲ್ಲಿ ಅವರ ಮುಖವೇ ಬದಲಾಯಿತು.

“ಮಾಮ್, ಈ ವಯಸ್ಸಿನಲ್ಲಿ ಫೇಶಿಯಲ್ ಅತ್ಯಂತ ಅಗತ್ಯ,” ಮಿನ್ನಿ ಹೇಳಿದಾಗ ಅವರು ನಗುತ್ತಾ ಫೇಶಿಯಲ್ ಕೂಡ ಮಾಡಿಸಿಕೊಂಡರು.

ಅರುಣಾರ ವ್ಯಕ್ತಿತ್ವ ನಿಜಕ್ಕೂ ಬದಲಾಗಿತ್ತು. ಅವರೀಗ ಚಿಕ್ಕ ಊರಿನ ಸ್ಥೂಲಕಾಯದ ಅರುಣಾ ಆಗಿರಲಿಲ್ಲ. ಆಧುನಿಕ, ಸ್ಮಾರ್ಟ್‌, ಪ್ರೌಢ ಹೆಣ್ಣಾಗಿದ್ದರು. ಇಂದು ಅವರು ಬಹಳ ಖುಷಿಯಾಗಿದ್ದರು.

“ಮಿನ್ನಿ, ನನಗೆ ಬುದ್ಧಿ ಬಂದಾಗಿನಿಂದ ನಾನು ಆಧುನಿಕ ಜೀವನಶೈಲಿಯನ್ನು ಇಚ್ಛಿಸುತ್ತಿದ್ದೆ. ಆದರೆ ಸಮಾಜಕ್ಕೆ ಹೆದರಿ ಎಂದೂ ಧೈರ್ಯ ಮಾಡಲಿಲ್ಲ. ಜೊತೆಗೆ ಯಾವಾಗಲೂ ಹಣದ ಕೊರತೆ ಇರುತ್ತಿತ್ತು. ಹೀಗಾಗಿ ಯಾವಾಗಲೂ ಬೇಸರದಿಂದ ಸಿಡುಕುತ್ತಿದ್ದೆ. ತಡವಾದರೂ ಪರವಾಗಿಲ್ಲ. ನನ್ನ ಆಸೆ ಪೂರೈಸಿತು.”

ಅವರಿಬ್ಬರೂ ಮನೆಗೆ ಬಂದಾಗ ರಾಹುಲ್ ‌ಅಮ್ಮನನ್ನು ನೋಡುತ್ತಲೇ ನಿಂತುಬಿಟ್ಟ. “ಏನಮ್ಮಾ, ಇಷ್ಟು ಯಂಗ್‌ ಆಗಿ ಕಾಣ್ತಿದ್ದೀಯಾ?” ಎಂದು ಕೂಗಿದ.

ಮಿನ್ನಿ ಜೋರಾಗಿ ನಕ್ಕಳು.

ಅಷ್ಟರಲ್ಲಿ ಸುರೇಶ್‌ರ ಫೋನ್‌ ಬಂತು. ಅವರೊಂದಿಗೆ ಮಾತನಾಡುತ್ತಾ ಅರುಣಾ ರೂಮಿಗೆ ಹೋದರು. ಆಗಲೇ ರಾಹುಲ್‌‌‌ನ ಗೆಳೆಯ ಶರತ್‌ನ ಧ್ವನಿ ಕೇಳಿಸಿತು. ಅವನು ಹೇಳುತ್ತಿದ್ದ, “ಅತ್ತಿಗೆ, ನೀವು ಮಾಡಿದ ಆಮ್ಲೆಟ್‌ ತಿಂದು ತುಂಬಾ ದಿನ ಆಯ್ತು. ಇವತ್ತು ನೀವು ಆಗಲ್ಲ ಅನ್ನೋ ಹಾಗಿಲ್ಲ. ನಾನು ಮೊಟ್ಟೆ ತಂದಿದ್ದೀನಿ,” ಆಗ ರಾಹುಲ್ ‌ಮೆಲ್ಲಗೆ, “ಲೋ ನಮ್ಮಮ್ಮನಿಗೆ ಮೊಟ್ಟೆ ಅಂದರೆ ಆಗಲ್ವೋ,” ಎನ್ನುತ್ತಿದ್ದುದು ಅರುಣಾಗೆ ಕೇಳಿಸಿತು.

ಅರುಣಾ ಹೊರಬಂದು ಹೇಳಿದರು, “ಮಿನ್ನಿ, ನೀನು ಇವತ್ತು ಆಮ್ಲೆಟ್‌ ಮಾಡು. ರಾಹುಲ್‌‌‌ಗೆ ಅದರ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ. ನಾನೂ ಇವತ್ತು ತಿಂದು ನೋಡ್ತೀನಿ. ನೋಡೇಬಿಡೋಣ ಆಮ್ಲೆಟ್‌ ಹೇಗಿರುತ್ತೇಂತ.”

“ಮಾಮ್, ನಿಮಗೆ ಸ್ಯಾಂಡ್‌ವಿಚ್‌ ಮಾಡಿಕೊಡ್ತೀನಿ.”

ಅರುಣಾ ಒಂದು ಕ್ಷಣ ತಡೆದು ಹೇಳಿದರು, “ಇಲ್ಲ, ಇವತ್ತು ನೀನು ಆಮ್ಲೆಟ್‌ನ್ನೇ ಮಾಡಿಕೊಡು.”

ರಾಹುಲ್ ಆಮ್ಲೆಟ್‌ನ್ನು ಚಪ್ಪರಿಸಿಕೊಂಡು ತಿನ್ನುವುದನ್ನು ಕಂಡ ಅರುಣಾ, “ರಾಹುಲ್, ನನಗೂ ಚೂರು ಆಮ್ಲೆಟ್‌ ಕೊಡು. ನಿನಗೆ ಇಷ್ಟವಾದ ಆಮ್ಲೆಟ್‌ ಹೇಗಿದೇಂತ ನಾನೂ ರುಚಿ ನೋಡ್ತೀನಿ. ಈ ಆಮ್ಲೆಟ್‌ಗಾಗಿ ನಿಮ್ಮಪ್ಪನ ಜೊತೆ ದಿನ ಜಗಳ ಆಡ್ತಿದ್ದೆ. ನಾನು ಹಟ ಮಾಡಿ ಎಂದೂ ಮಾಡಿಕೊಡಲಿಲ್ಲ, ನಾನೂ ತಿನ್ನಲಿಲ್ಲ,” ಎಂದರು.

ಅರುಣಾ ಆಮ್ಲೆಟ್‌ ತಿಂದುದನ್ನು ನೋಡಿ ರಾಹುಲ್ ಹಾಗೂ ಶರತ್‌ ಇಬ್ಬರೂ ಖುಷಿಯಾದರು. ಶರತ್‌ ಮೆಲ್ಲಗೆ, “ನಮ್ಮಮ್ಮನೂ ಹೀಗೇ ಇದ್ದಿದ್ರೆ ಚೆನ್ನಾಗಿತ್ತು,” ಎಂದ.

ಶರತ್‌ ಹೋದ ನಂತರ ಅರುಣಾ, ಮಿನ್ನಿಗೆ ಹೇಳಿದರು, “ಇವತ್ತು ನಿನಗೆ ನನ್ನ ಮನದಲ್ಲಿರೋ ರಹಸ್ಯಗಳನ್ನೂ ಹೇಳಿಬಿಡ್ತೀನಿ. ನಾನು ಇವರ ಮೇಲೆ ಕೋಪಿಸಿಕೊಂಡು 5 ವರ್ಷಗಳ ಕಾಲ ರಾಹುಲ್‌‌‌ನನ್ನು ಕರೆದುಕೊಂಡು ತೌರು ಮನೆಗೆ ಹೊರಟುಹೋಗಿದ್ದೆ. ನಾನು ಅನುಭವಿಸಿದ ನೋವು ಮತ್ತು ಅವಮಾನಕ್ಕೆಲ್ಲಾ ನನ್ನ ಯಜಮಾನರನ್ನೇ ದೋಷಿಯನ್ನಾಗಿಸುತ್ತಿದ್ದೆ. ಅವರು ನನ್ನ ಬಳಿ ಬಂದ ನಂತರ ನನಗೆ ಅವರ ಮೇಲೆ ಸೇಡು ತೀರಿಸಿಕೊಳ್ಳಲು, ಅವರನ್ನು ಸತಾಯಿಸಲು ಮನಸ್ಸಾಗುತ್ತಿತ್ತು. ಅವರ ಬಳಿ ವ್ಯಂಗ್ಯವಾಡುವುದು, ಅವರೊಂದಿಗೆ ಜಗಳವಾಡುವುದು ನನ್ನ ದಿನನಿತ್ಯದ ಕೆಲಸವಾಗಿತ್ತು. ಬೆಳಗ್ಗೆ ಅವರಿಗೆ ಕಾಫಿ ತಿಂಡಿ ಕೊಡದೆ ಸತಾಯಿಸುತ್ತಿದ್ದೆ. ಅವರಿಗೆ ತೊಂದರೆ ಕೊಡುವುದೇ ನನ್ನ ಉದ್ದೇಶವಾಗಿತ್ತು. ಅನೇಕ ಬಾರಿ ನನಗೆ ಪಶ್ಚಾತ್ತಾಪವಾಗುತ್ತಿತ್ತು. ಆದರೂ ನಾನು ಬದಲಾಗಲಿಲ್ಲ. ನಮ್ಮ ಅಕ್ಕಪಕ್ಕದ ಮನೆಯಲ್ಲಿ ಅತ್ತೆ ಸೊಸೆ ಜಗಳ ನೋಡಿ ನೀನು ಹಾಗೂ ರಾಹುಲ್ ‌ಬಗ್ಗೆಯೂ ತಪ್ಪು ತಿಳಿದುಕೊಂಡಿದ್ದೆ. ಅದರಿಂದಾಗಿ ನಿಮ್ಮ ಮನೆಗೆ ಬರಲು ಹಿಂದೇಟು ಹಾಕುತ್ತಿದ್ದೆ.

“ಆದರೆ ಮಿನ್ನಿ, ನಿನ್ನ ಸ್ನೇಹ ಪಡೆದು ನಿಜಕ್ಕೂ ಹೊಸ ಅರುಣಾ ಜನ್ಮ ತಾಳಿದಂತಾಯಿತು. ಇಲ್ಲಿಗೆ ಬಂದು ನಾನು ಬಹಳ ಖುಷಿಯಾಗಿದ್ದೇನೆ. ಅಲ್ಲಿ ನನ್ನ ಆರೋಗ್ಯದ ಬಗ್ಗೆ ಗಮನ ಕೊಡದೆ ಕಾಲು ನೋವು, ಬಿ.ಪಿ. ಇತ್ಯಾದಿಗಳಿಂದ ನರಳುತ್ತಿದ್ದೆ. ಇಲ್ಲಿ ವಾಕಿಂಗ್‌ ಎಕ್ಸರ್‌ ಸೈಜ್‌, ಪೇಂಟಿಂಗ್‌, ಬ್ಯೂಟಿಪಾರ್ಲರ್‌, ಲ್ಯಾಪ್‌ಟಾಪ್‌ ಮತ್ತು ವೀಡಿಯೋ ಗೇಮ್ಲ್ ನನ್ನ ಬದುಕನ್ನೇ ಬದಲಾಯಿಸಿಬಿಟ್ಟಿವೆ.

“ರಾಹುಲ್‌, ಅಪ್ಪನಿಗೆ ಫೋನ್‌ ಡಯಲ್ ಮಾಡಿಕೊಡು. ಇವತ್ತು ಅವರ ಜೊತೆ ಮಾತನಾಡಬೇಕು ಅನ್ನಿಸ್ತಿದೆ.”

“ಅಮ್ಮಾ, ಫೋನ್‌ನಲ್ಲಿ ಏಕೆ? ಎದುರು ಬದುರು ಕೂತ್ಕೊಂಡೇ ಮಾತಾಡಿ,” ಎಂದು ರಾಹುಲ್ ಲ್ಯಾಪ್‌ಟಾಪ್‌ನಲ್ಲಿ ವೀಡಿಯೋ ಚ್ಯಾಟಿಂಗ್‌ ಮಾಡಿಸಿದ.

ಸುರೇಶ್‌ ಪತ್ನಿಯ ಬದಲಾದ ರೂಪ ಕಂಡು ಆಶ್ಚರ್ಯಚಕಿತರಾಗಿ ಹೇಳಿದರು, “ರಾಹುಲ್‌, ನಾನು ನಿಮ್ಮ ಮನೆಗೆ ಬರ್ತಿದ್ದೀನಿ. ನಿನ್ನ ಅಮ್ಮನನ್ನು ನನ್ನೊಂದಿಗೆ ಹನಿಮೂನ್‌ಗೆ ಕರೆದುಕೊಂಡು ಹೋಗೋಕೆ,” ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅರುಣಾರ ಮುಖ ಲಜ್ಜೆಯಿಂದ ಕೆಂಪಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ