ಅಪಾಯಕಾರಿ ಕೀಟನಾಶಕಗಳ ಬಳಕೆಯಿಂದ ಕ್ರಿಮಿಗಳಷ್ಟೇ ಸಾಯುವುದಿಲ್ಲ. ನಿಮ್ಮ ಆರೋಗ್ಯಕ್ಕೂ ಹಾನಿಯುಂಟಾಗುತ್ತದೆ. ಒಂದು ರೀತಿಯಲ್ಲಿ ನೋಡಿದರೆ ತೋಟವನ್ನು ಹಾಳು ಮಾಡುವ ಕ್ರಿಮಿಗಳಿಂದ ಪಾರಾಗಲು ಕೆಲವು ವಿಶೇಷ ಕ್ರಿಮಿಗಳಿರುವುದು ಅಗತ್ಯ. ಒಂದುವೇಳೆ ಮಾರುಕಟ್ಟೆಯಲ್ಲಿ ಖರೀದಿಸಿ ಪರೀಕ್ಷೆ ಮಾಡದೆ ಉಪಯೋಗಿಸಿದರೆ ಲಾಭದಾಯಕ ಕ್ರಿಮಿಗಳಿಗೂ ಹಾನಿಯಾಗುವ ಸಂಭವವಿದೆ.

ಗಮನಿಸಿ

ಒಂದುವೇಳೆ ನಿಮ್ಮ ಗಿಡಗಳಲ್ಲಿ ಎಲೆಗಳ ಬಣ್ಣ ಹಳದಿಯಾಗುತ್ತಿದ್ದರೆ ಅದಕ್ಕೆ ಕಾರಣ ಕುಂಡದಲ್ಲಿ ಅಥವಾ ತೋಟದಲ್ಲಿ ಹೆಚ್ಚು ನೀರು ನಿಂತಿರುವುದರಿಂದ ಬೇರುಗಳಿಗೆ ಉಸಿರಾಡಲು ತೊಂದರೆಯಾಗುತ್ತಿದೆ ಅಥವಾ ಕಡಿಮೆ ನೀರಿನಿಂದಲೂ ಹೀಗಾಗಬಹುದು. ಹೆಚ್ಚು ಅಥವಾ ಕಡಿಮೆ ನೀರಿನಿಂದ ಸಾಕಷ್ಟು ಆಹಾರ ಸಿಗದೆ ಎಲೆಗಳು ಹಳದಿಯಾಗಿ ಒಣಗಿದಂತೆ ಕಂಡುಬರುತ್ತವೆ. ಕುಂಡಗಳಲ್ಲಿ ಹೆಚ್ಚಿನ ನೀರು ಹೊರಹೋಗುವ ವ್ಯವಸ್ಥೆ ಸರಿಯಾಗಿಲ್ಲದಿದ್ದರೆ ಗಿಡಗಳು ಸಾಯಲೂಬಹುದು. ತೋಟದಲ್ಲಿ ಪಾತಿ ಮಾಡಿದ್ದರೆ ಹೆಚ್ಚು ನೀರು ನಿಲ್ಲುವುದಿಲ್ಲ.

ಎಲೆಗಳ ಮೇಲೆ ಒಂದೆರಡು ಕ್ರಿಮಿ ಅಥವಾ ತೂತು ಕಂಡುಬಂದರೆ, ಕೂಡಲೇ ಅವುಗಳ ಮೇಲೆ ಔಷಧಿ ಸಿಂಪಡಿಸಬೇಡಿ. 1-2 ಕೀಟಗಳನ್ನು ಕೈಗವಸು ಹಾಕಿಕೊಂಡು ತೆಗೆಯಿರಿ ಅಥವಾ ತೋಟಕ್ಕಾಗಿಯೇ ಇಟ್ಟುಕೊಂಡ ಪಿಚಕಾರಿಯಿಂದ ಎಲೆಗಳ ಮೇಲೆ ನೀರು ಸಿಂಪಡಿಸಿ. ಪಿಚಕಾರಿಯಿಂದ ವೇಗವಾಗಿ ಹೊರಬರುವ ನೀರಿನಿಂದ ಈ ಕೀಟಗಳು ಬಿದ್ದುಹೋಗುತ್ತವೆ.

ಪಿಚಕಾರಿಯಲ್ಲಿ ಬೇವಿನ ನೀರನ್ನು (ಬೇವಿನ ಎಲೆಗಳನ್ನು ನೀರಿನಲ್ಲಿ ಹಾಕಿ 1 ಅಥವಾ 2 ದಿನಗಳ ನಂತರ ಆವು ಎಲೆಗಳಿಂದ ನೀರನ್ನು ಚೆನ್ನಾಗಿ ಹಿಂಡಿ ಆ ನೀರನ್ನು ಉಪಯೋಗಿಸಿ) ಹಾಕಿ ಎಲೆಗಳ ಮೇಲೆ ಸಿಂಪಡಿಸಿ. ಬೇವಿನ ಕಹಿಯಿಂದ ಕ್ರೀಮಿಕೀಟಗಳು ಎಲೆಗಳ ಮೇಲೆ ಕೂಡುವುದಿಲ್ಲ. ತೋಟದಲ್ಲಿ ಹಾಗೂ ಕುಂಡಗಳಲ್ಲಿ ಈ ನೀರನ್ನು ಮಣ್ಣಿಗೂ ಹಾಕಬಹುದು.

ಗಿಡಗಳನ್ನು ಕೀಟಗಳಿಂದ ರಕ್ಷಿಸಲು ಗಿಡಗಳ ನರ್ಸರಿಯಲ್ಲಿ ಹಾಕಲು ಸೊಳ್ಳೆಪರದೆಯಂತಹ ನೆಟ್‌ ಲಭ್ಯವಿದೆ. ಅದನ್ನು ಉಪಯೋಗಿಸುವುದರಿಂದ ಎಲೆಗಳ ಮೇಲೆ ಬದಲಾಗುತ್ತಿರುವ ವಾತಾವರಣದ ಪ್ರಭಾವವನ್ನು ಕಡಿಮೆಗೊಳಿಸಬಹುದು.

ಗಿಡಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವುಗಳಲ್ಲಿ ಸತತವಾಗಿ ಬಿಸಿಲು ಬೀಳುವ ಜಾಗದಲ್ಲಿ ಎಲೆ ನಳನಳಿಸುತ್ತಿರುವುದು ಕಂಡುಬರುತ್ತದೆ. ಕಡಿಮೆ ಬಿಸಿಲು ಬೀಳುವ ಭಾಗ ಹಸಿರಾಗಿದ್ದರೂ ಕೆಳಭಾಗದ ಕಡೆ ತಿರುಗಿರುತ್ತದೆ. ನೀವು ಅದನ್ನು ನಿರ್ಲಕ್ಷಿಸಿದರೆ ಕೆಲವು ದಿನಗಳ ನಂತರ ಆ ಎಲೆಗಳು ಹಳದಿಯಾಗತೊಡಗಿ ಒಣಗಿಹೋಗುತ್ತವೆ. ಹೀಗಾಗಿ ಗಿಡಗಳ ಎಲ್ಲಾ ಭಾಗಗಳಿಗೂ ಸೂರ್ಯನ ಬೆಳಕು ಬೀಳುವಂತಿರಬೇಕು.

1 ಅಥವಾ 2 ಎಲೆಗಳ ಬಣ್ಣ ಬದಲಾಗಿದ್ದರೆ ಅವನ್ನು ಕಿತ್ತುಹಾಕಿ.

ಒಂದುವೇಳೆ ಕುಂಡ ಚಿಕ್ಕದಾಗಿದ್ದರೆ ಅಥವಾ ತೋಟದಲ್ಲಿ ಗಿಡ ಬೆಳೆಸಲು ಜಾಗ ಕಡಿಮೆ ಇದ್ದರೆ ಹೆಚ್ಚು ಎಲೆಗಳಿಂದಾಗಿ ಗಿಡಕ್ಕೆ ಸಾಕಷ್ಟು ಆಹಾರ ಸಿಗುವುದಿಲ್ಲ. ಆದ್ದರಿಂದ ನೀವು ಕೆಲವು ಎಲೆಗಳನ್ನು ಕೀಳಬೇಕಾಗುತ್ತದೆ. ಅದನ್ನು ಪ್ರೂನಿಂಗ್‌ ಎನ್ನುತ್ತಾರೆ. ಆದರೆ ಬಹಳಷ್ಟು ಎಲೆಗಳನ್ನು ಕೀಳಬೇಡಿ. ಏಕೆಂದರೆ ಎಲೆಗಳಿಂದಲೇ ಗಿಡಕ್ಕೆ ಆಹಾರ ಸಿಗುತ್ತದೆ.

ಗಿಡಗಳಲ್ಲಿನ ಹೇನುಗಳು ಆಗಾಗ್ಗೆ ಮೇಲಿನ ಪದರ ಹಾಗೂ ಬೇರುಗಳಿಗೆ ಹಾನಿಯುಂಟು ಮಾಡುತ್ತವೆ. ಕರೆಯದೇ ಬರುವ ಈ ಅತಿಥಿಗಳು ಅರ್ಧ ಒಣಗಿದ ಗೊಬ್ಬರದಿಂದಾಗಿ ಬರುತ್ತವೆ. ಜೊತೆಗೆ ಇರುವೆಗಳೂ ಗಿಡಗಳ ಮೇಲೆ ಓಡಾಡುತ್ತಿರುವುದು ಕಂಡುಬರುತ್ತದೆ. ಅವನ್ನು ಗಿಡಗಳಿಂದ ದೂರವಿಡಲು ಕೆಳಗಿನ ಉಪಾಯಗಳನ್ನು ಅನುಸರಿಸಿ :

ಕುಂಡಗಳಲ್ಲಿ ಬೆಳೆಯುತ್ತಿರುವ ಗಿಡಗಳ ಮೇಲೆ ಬೇರುಗಳಿಂದ 1-2 ಇಂಚು ದೂರದಲ್ಲಿ ಕುದಿಯುವ ನೀರು ಹಾಕಿ. ಬಿಸಿ ನೀರು ಬೇರಿಗೆ ತೊಂದರೆ ಮಾಡಬಾರದು. ಇದರಿಂದ ಇರುವೆ ಹಾಗೂ ಹೇನುಗಳಿಂದ ಮುಕ್ತಿ ಸಿಗುತ್ತದೆ.

ಚಿಕ್ಕ ಕುಂಡಗಳನ್ನು ಸುಲಭವಾಗಿ ಮೇಲೆತ್ತಿ ಒಂದು ದೊಡ್ಡ ಬಕೆಟ್‌ನ ನೀರಿನಲ್ಲಿ ಮುಳುಗಿಸಿ ತೆಗೆಯಬಹುದು. ಈ ವಿಧಾನದಿಂದ ಕುಂಡದ ಕೆಳಗಿನ ಭಾಗದಿಂದ ಒಳಬರುವ ಕೀಟಗಳನ್ನು ನಾಶಪಡಿಸಬಹುದು. ಆದರೆ ಈ ವಿಧಾನ ದೊಡ್ಡ ಕುಂಡಗಳಿಗೆ ಸೂಕ್ತವಲ್ಲ.

ನೀವು ತೋಟದಲ್ಲಿ ಅಥವಾ ಕುಂಡಗಳ ಸುತ್ತಮುತ್ತ ಹಳದಿ, ಕೆಂಪು, ಬಿಳಿ ಬಣ್ಣಗಳ ನಕಲಿ ಚಿಟ್ಟೆಗಳನ್ನು ಅಂಟಿಸಬಹುದು ಅಥವಾ ನಿಲ್ಲಿಸಬಹುದು. ಅದರಿಂದ ಕ್ರಿಮಿ ಕೀಟಗಳಿಗೆ ಭಯವಾಗಿ ಅವು ಸಾಧ್ಯವಾದಷ್ಟು ಗಿಡಗಳಿಂದ ದೂರವಿರುತ್ತವೆ.

ಗಿಡಗಳನ್ನು ಕೀಟಗಳಿಂದ ದೂರವಿಡಲು ಹಾಗೂ ಬೇರುಗಳನ್ನು ರಕ್ಷಿಸಲು ಮಣ್ಣಿನ ಮೇಲ್ಮೈನಲ್ಲಿ ಮೆಣಸಿನಪುಡಿ ಹಾಕಿ.

ಗೊಬ್ಬರವನ್ನು ತಯಾರಿಸಿ

ಗೊಬ್ಬರವನ್ನು ತಯಾರಿಸುವುದು ಬಹಳ ಸುಲಭ, ಮಿತವ್ಯಯಕಾರಿ ಹಾಗೂ ಪರಿಣಾಮಕಾರಿಯಾಗಿದೆ. ನೀವು ಅಪಾರ್ಟ್‌ಮೆಂಟ್‌ನಲ್ಲಿರಬಹುದು ಅಥವಾ ನಿಮ್ಮ ಮನೆಯಲ್ಲಿರಬಹುದು. ನಿಮ್ಮದೇ ಆದ ಗೊಬ್ಬರ ತಯಾರಿಸಲು ಯಾವುದೇ ತೊಂದರೆ ಇರೋದಿಲ್ಲ. ಗೊಬ್ಬರ ತಯಾರಾಗಲು 1-2 ತಿಂಗಳಾಗಬಹುದು. ಅದಕ್ಕೆ ನೀವು ಹೀಗೆ ಮಾಡಿ.

ತರಕಾರಿ ಅಥವಾ ಹಣ್ಣಿನ ಸಿಪ್ಪೆಗಳನ್ನು ಎಸೆಯಬೇಡಿ. ಅವನ್ನು ಚೆನ್ನಾಗಿ ಒಣಗಿಸಿ ಅಥವಾ ಕೆಂಪು ಮಣ್ಣಿನಲ್ಲಿ ಮುಚ್ಚಿ ಬೇರೆಯಾಗಿಸಿ. ಒಂದುವೇಳೆ ನಿಮ್ಮ ಮನೆಯಲ್ಲಿ ತೋಟವಿದ್ದರೆ ಒಂದು ಜಾಗದಲ್ಲಿ ಒಂದು ಮಡಕೆ ಅಥವಾ ಬಾಕ್ಸ್ ನಲ್ಲಿ ಹಾಕಿಡಿ.

ಕಾಫಿ, ಟೀ ಚರಟ ಅಥವಾ ಮೊಟ್ಟೆಯ ಹೊರಪದರವನ್ನೂ ಎಸೆಯಬೇಡಿ. ಮಣ್ಣಿನ ಮಿಶ್ರಣದೊಂದಿಗೆ ಬೆರೆಸಿ.

ಗಿಡಗಳನ್ನು ಚೆನ್ನಾಗಿ ಬೆಳೆಯಲು ಗೊಬ್ಬರದಲ್ಲಿ ಫಾಸ್ಛರಸ್‌, ಕ್ಯಾಲ್ಶಿಯಂ ಇತ್ಯಾದಿಗಳ ಪ್ರಮಾಣ ಹೆಚ್ಚಿಸಲು ಫರ್ಟಿಲೈಸರ್‌ಉಪಯೋಗಿಸಲಾಗುತ್ತದೆ. ನೀವು ಫರ್ಟಿಲೈಸರ್‌ನ ಬದಲು ಬೂದಿಯನ್ನು ಗೊಬ್ಬರದ ಮಿಶ್ರಣ ಅಥವಾ ಮಣ್ಣು ಅಥವಾ ಕುಂಡದ ಮೇಲಿನ ಪದರದ ಮೇಲೆ ಹಾಕಿ. ಇದಲ್ಲದೆ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಸುಡಿ. ಸುಗಂಧಭರಿತ ಇದ್ದಿಲನ್ನು ಚೂರು ಮಾಡಿ, ಮಣ್ಣಿನಲ್ಲಿ ಬೆರೆಸಿ.

ಸುಂದರ ಗಿಡಗಳಿಂದ ನಿಮ್ಮ ತೋಟದ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ. ಅದಕ್ಕಾಗಿ ಕೊಂಚ ಗಮನ ಕೊಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಗಿಡಗಳು ಹಸಿರಿನಿಂದ ತುಂಬಿ ಕಂಗೊಳಿಸುತ್ತವೆ.

ಪಿ. ಮಂಗಳಾ ಮೂರ್ತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ