ರಾಜೇಶ್‌ : ನನ್ನ ಹೆಂಡತಿ ಎಂಥ ಸುಳ್ಳಿ ಗೊತ್ತಾ?

ಮಹೇಶ್‌ : ಎಂಥ ಸುಳ್ಳು ಹೇಳಿದಳು?

ರಾಜೇಶ್‌ : ಮೊನ್ನೆ ದಿನವಿಡೀ ತನ್ನ ತಂಗಿಯ ಜೊತೆ ಇದ್ದೆ ಅಂತ ಹೇಳ್ತಾಳೆ.

ಮಹೇಶ್‌ : ಇದ್ದಿರಬಹುದು, ಇದರಲ್ಲಿ ಸುಳ್ಳೇನು ಬಂತು?

ರಾಜೇಶ್‌ : ಏ…. ಅವಳ ತಂಗಿ ಜೊತೆ ಮೊನ್ನೆ ದಿನವಿಡೀ ಇದ್ದವನು ನಾನೇ!

 

ಕಮಲಮ್ಮ : ನಿಜಕ್ಕೂ ಕಾಲ ಕೆಟ್ಟೋಯ್ತು ಬಿಡ್ರಿ.

ವಿಮಲಮ್ಮ : ಯಾಕ್ರಿ ಹಾಗಂತೀರಿ?

ಕಮಲಮ್ಮ : ಅಲ್ಲ, ಮುಂಚೆ ತರಹ ಈ ಗಂಡಂದಿರು ಪೊರಕೆ ಕಂಡರೆ ಹೆದರೋದೇ ಇಲ್ವಲ್ಲಾ……?

ವಿಮಲಮ್ಮ : ಅದಕ್ಕೆ ಕಾರಣವೇನಿರಬಹುದು?

ಕಮಲಮ್ಮ : ಇನ್ಯಾರು? `ಆಪ್‌’ ಪಕ್ಷದವರು ತಮ್ಮ ಚಿಹ್ನೆಯಾಗಿ ಪೊರಕೆ ಹಿಡಿದು ಗುಡಿಸಿದ್ದೇ ಬಂತು, ಈ ಗಂಡಂದಿರೆಲ್ಲ ಬಹಳ ಹೆಚ್ಕೊಂಡು ಬಿಟ್ಟಿದ್ದಾರೆ. ನಮ್ಮ ಮಹಿಳಾ ಸಂಘದ ಸದಸ್ಯರೆಲ್ಲ ಕೂಡಿ, ಕೇಜ್ರಿವಾಲ್‌ರ ಮನೆ ಮುಂದೆ ಧರಣಿ ಕುಳಿತು ಬುದ್ಧಿ ಕಲಿಸಬೇಕು!

 

ಪತ್ನಿ : ರೀ…. ನಂಗ್ಯಾಕೋ ಕೆಟ್ಟ ಕನಸು ಬಂದು ಹೆದರಿಕೆ ಆಗ್ತಿದೆ, ನೀವು ಅಷ್ಟು ದೂರ ಗೋಡೆ ಕಡೆ ತಿರುಗಿಕೊಂಡು ಮಲಗುವ ಬದಲು ನನ್ನ ಮುಖ ನೋಡುತ್ತಾ ಈ ಕಡೆ ತಿರುಗಿ ಮಲಗಿ.

ಪತಿ : ಹ್ಞೂಂ….. ಯಾಕ್‌ ಹೇಳ್ಬಿಡು, ಆಮೇಲೆ ಇಡೀ ರಾತ್ರಿ ನಾನು ನಿನ್ನ ಮುಖ ನೋಡುತ್ತಾ ಭಯದಲ್ಲಿ ನಡುಗಿ ಸಾಯಲಿ ಅಂತಾನಾ?

 

ಗುಂಡ ಸಂದರ್ಶನಕ್ಕಾಗಿ ಒಂದು ಖಾಸಗಿ ಸಂಸ್ಥೆಗೆ ಹೋಗಿದ್ದ.

ಮ್ಯಾನೇಜರ್‌ : ಏನ್ರಿ ನಿಮಗೆ ಮದುವೆ ಆಗಿದ್ಯಾ?

ಗುಂಡ : ಇಲ್ಲ ಸಾರ್‌, ನಾನಿನ್ನೂ ಅವಿವಾಹಿತ.

ಮ್ಯಾನೇಜರ್‌ : ಹಾಗಿದ್ರೆ ಖಂಡಿತಾ ನಿಮಗೆ ಇಲ್ಲಿ ಕೆಲಸ ಇಲ್ಲ.

ಗುಂಡ : ಅದೇನು ಸಾರ್‌? ನಿಮ್ಮ ಆಫೀಸ್‌ನಲ್ಲಿ ಮದುವೆ ಆಗದವರಿಗೆ ಕೆಲಸ ಕೊಡೋದಿಲ್ವೇ?

ಮ್ಯಾನೇಜರ್‌ : ಇಲ್ಲ…. ಮದುವೆಯಾದ ಗಂಡಸರು ಎಂದೂ ರಜೆ ಹಾಕೋಲ್ಲ, ಸಂಜೆ ಬೇಗ ಮನೆಗೆ ಹೋಗಬೇಕು ಅಂತ ಅರ್ಜೆಂಟ್‌ ಮಾಡೋಲ್ಲ. ಮನೆಗಿಂತ ಆಫೀಸ್‌ ನೆಮ್ಮದಿಯ ಜಾಗ ಅಂತ ಅವರಿಗೆ ಮನವರಿಕೆ ಆಗಿರುತ್ತೆ.

 

ಸೇಲ್ಸ್ ಮ್ಯಾನ್‌ : ಸಾರ್‌, ಜಿರಲೆಗಳಿಗಾಗಿ ವಿಶೇಷ ಪೌಡರ್‌ ಬಂದಿದಿ. ತಗೊಂತೀರಾ?

ಗ್ರಾಹಕ : ಬೇಡಪ್ಪ ಬೇಡ! ನಮಗೆ ಅವುಗಳ ಮೇಲೆ ಅಂತಹ ವಿಶೇಷ ಪ್ರೀತಿ ಏನೂ ಇಲ್ಲ. ಇವತ್ತು ಪೌಡರ್‌ ಹಾಕಿದರೆ ಅವು ನಾಳೆ ಡಿಯೋಡರೆಂಟ್‌ ಬೇಕೆಂದು ಕೇಳುತ್ತವೆ.

 

ಉಮೇಶ್‌ ಬಹಳ ಹೊತ್ತಿನಿಂದ ಪಬ್ಲಿಕ್‌ ಟೆಲಿಫೋನ್‌ ಬೂತ್‌ ಹೊರಗೆ ನಿಂತು ತನ್ನ ಸರದಿ ಯಾವಾಗ ಬರುವುದೋ ಎಂದು ಕಾಯುತ್ತಲೇ ಇದ್ದ. ಒಳಗೆ ಹೋಗಿದ್ದ ಒಬ್ಬ ವ್ಯಕ್ತಿ ಬಹಳ ಹೊತ್ತಿನಿಂದ ಕೈಯಲ್ಲಿ ರಿಸೀವರ್‌ ಹಿಡಿದು ಹಾಗೇ ನಿಂತಿದ್ದ.

ಸ್ವಲ್ಪ ಹೊತ್ತಿನ ನಂತರ ಹೊರಗೇ ಕಾದು ಸಾಕಾದ ಉಮೇಶ್‌ ಒಳಗೆ ಹೋಗಿ ಆ ವ್ಯಕ್ತಿಗೆ ಹೇಳಿದ, “ರೀ ಸ್ವಾಮಿ…. ಅರ್ಧ ಗಂಟೆಯಿಂದ ಕೈಲಿ ರಿಸೀವರ್‌ ಹಿಡಿದು ಹಾಗೆ ನಿಂತಿದ್ದೀರಲ್ಲ… ಒಂದು ಮಾತಾದ್ರೂ ಆಡುವುದು ಬೇಡವೇ…. ಹೀಗಾದರೆ ಬೇರೆಯವರ ಸರದಿ ಬರುವುದು ಯಾವಾಗ….?”

ಅದನ್ನು ಕೇಳಿ ಆತ ಸಾವಧಾನವಾಗಿ ರಿಸೀವರ್‌ ಮೇಲೆ ಕೈ ಇರಿಸಿ ಹೇಳಿದ, “ಅಯ್ಯೋ ಇರಪ್ಪ, ನನ್ನ ಹೆಂಡತಿ ತವರಿನಿಂದ ಮಾತನಾಡುತ್ತಿದ್ದಾಳೆ. ಮದುವೆ ಆಗದ ನಿನ್ನಂಥವರಿಗೆ ನಮ್ಮಂಥವರ ಕಷ್ಟಗಳು ಹೇಗೆ ಗೊತ್ತಾಗಬೇಕು?”

ವಯಸ್ಸಿಗೆ ಬಂದ ಮಗ ಕೆಲಸಕ್ಕೆ ಸೇರಿ ಎಷ್ಟು ದಿನವಾದರೂ ಮದುವೆಗೆ ಒಪ್ಪಿಕೊಳ್ಳಲೇ ಇಲ್ಲ. ಇದರಿಂದ ಆತಂಕಗೊಂಡ ತಂದೆ ಮಗನನ್ನು ಪ್ರತ್ಯೇಕವಾಗಿ ವಾಕಿಂಗ್‌ಗೆ ಕರೆದುಕೊಂಡು ಹೋಗಿ ಆತ್ಮೀಯವಾಗಿ ವಿಚಾರಿಸಿದರು, “ಏನಪ್ಪ, ಮದುವೆ ಬೇಡ ಅಂತಾನೇ ಇದ್ದೀಯ…. ಏನಾದರೂ ಸಮಸ್ಯೆ ಇದೆಯೇ? ಡಾಕ್ಟರ್‌ ಬಳಿ ಹೋಗೋಣವೇನು?”

“ಇಲ್ಲಪ್ಪ…. ನನಗೆ ಹೆಂಗಸರೆಂದರೆ ಏನೋ ಭಯ… ಮದುವೆ ಬೇಡ!” ಮಗ ಹೇಳಿದ.

“ಹಾಗೇ ಹೇಳಬೇಡಪ್ಪ, ಮದುವೆ ಮಾಡಿಕೋ. ಆಗ ಒಬ್ಬ ಹೆಂಗಸಿಗೆ ಮಾತ್ರ ಹೆದರಬೇಕು, ಉಳಿದವರೆಲ್ಲ ಸಹಜವಾಗಿಯೇ ಒಳ್ಳೆಯವರಾಗಿ ಕಾಣುತ್ತಾರೆ,” ಎಂದು ಅನುಭವಿ ತಂದೆ ತಿಳಿಹೇಳಿದರು.

 

ನ್ಯಾಯಾಧೀಶರು : ಏನಪ್ಪ… 10 ವರ್ಷಗಳಿಂದ  ನೀನು ಹೆಂಡತಿಯನ್ನು ಸಂಪೂರ್ಣ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದೀಯ ಅಂತ ನಿಮ್ಮ ಮಾವನ ಮನೆಯವರು ನಿನ್ನ ಮೇಲೆ ಆರೋಪ ಹೊರಿಸಿದ್ದಾರೆ.

ಆಪಾದಿತ : ಸ್ವಾಮಿ ಅದು ಹಾಗಲ್ಲ…. ಅದು ಏನಂದ್ರೆ….

ನ್ಯಾಯಾಧೀಶರು : (ಮೆಲ್ಲಗಿನ ದನಿಯಲ್ಲಿ)  ಸ್ವಲ್ಪ ಹತ್ತಿರ ಬಂದು ಅದು ಹೇಗೆ ಅಂತ ನನಗೂ ಹೇಳಯ್ಯ….

 

ತಾಯಿ : ನೋಡಿ ಮಕ್ಕಳೆ, ನಿಮ್ಮ ಮೂವರಲ್ಲಿ ಯಾರು ಸದಾ ಜಾಣರಾಗಿದ್ದುಕೊಂಡು, ತೆಪ್ಪಗೆ ನಾನು ಹೇಳಿದಂತೆ ಕೇಳುತ್ತಾ, ಕೆಲಸ ಮಾಡುತ್ತೀರೋ ಅವರಿಗೆ ಒಳ್ಳೆಯ ಗಿಫ್ಟ್ ಕೊಡ್ತೀನಿ!

ಮಕ್ಕಳು : ಅಯ್ಯೋ ಬಿಡಮ್ಮ…. ಈ ಗಿಫ್ಟ್ ಅಪ್ಪಂಗಲ್ಲದೆ ನಮಗೆ ಯಾವತ್ತೂ ಸಿಗಲ್ಲ ಅಂತ ನಮಗೆ ಚೆನ್ನಾಗಿ ಗೊತ್ತು.

 

ಪ್ರೇಯಸಿ : ಎಲ್ಲಿಯವರೆಗೂ ನಾನು ನಿನಗೆ ಮಿಸ್ಡ್ ಕಾಲ್ ಕೊಡುವುದಿಲ್ಲವೋ ಅಲ್ಲಿಯವರೆಗೂ ನೀನು ನನಗೆ ಫೋನ್‌ ಮಾಡಬೇಡ. ನಾನು ಮಿಸ್ಡ್ ಕಾಲ್ ‌ಕೊಟ್ಟಾಗ ಮಾತ್ರ ನೀನು ನನಗೆ ಫೋನ್‌ ಮಾಡಬೇಕು. ಗೊತ್ತಾಯ್ತಾ? ಏಕೆಂದರೆ  ಅಲ್ಲಿಯವರೆಗೂ ನನ್ನ ಫೋನ್‌ ನಮ್ಮಮ್ಮನ ಬಳಿ ಇರುತ್ತದೆ.

ಪ್ರೇಮಿ : ಅಯ್ಯೋ! ನಾನು ಫೋನ್‌ ಮಾಡಿ ಆಮೇಲೆ ನಿಮ್ಮಮ್ಮ ಅದನ್ನು ನೋಡಿ ನಾವು ಸಿಕ್ಕಿಬಿದ್ದರೆ….?

ಪ್ರೇಯಸಿ : ಹಾಗೇನಿಲ್ಲ…. ನಿನ್ನ ಹೆಸರನ್ನು ನಾನು `ಬ್ಯಾಟ್ರಿ ಲೋ’ ಎಂದು ಸೇವ್ ಮಾಡಿಟ್ಟಿದ್ದೀನಿ. ನಿನ್ನ ಫೋನ್‌ ಬಂದಾಗೆಲ್ಲ ಅಮ್ಮ, `ಸೀಮಾ, ಮೊದಲು ಮೊಬೈಲ್‌‌ನ್ನು ಚಾರ್ಜಿಗೆ ಹಾಕು. ಬ್ಯಾಟ್ರಿ ಯಾಕೋ ಲೋ ಇದೆ,’ ಅಂತ ಹೇಳ್ತಾ ಇರ್ತಾರೆ.

 

ಅರುಣ್‌ : ಲವ್ ಮ್ಯಾರೇಜ್‌ಗೂ ಅರೇಂಜ್ಡ್ ಮ್ಯಾರೇಜ್‌ಗೂ ಏನಾದರೂ ವ್ಯತ್ಯಾಸವಿದೆಯೇ?

ಕಿರಣ್‌ : ಲವ್ ಮ್ಯಾರೇಜ್‌ ಮಾಡಿಕೊಂಡರೆ ನೀನು ನಿನ್ನ ಗರ್ಲ್ ಫ್ರೆಂಡನ್ನೇ ಮದುವೆ ಆಗ್ತೀಯ, ಅರೇಂಜ್ಡ್ ಮ್ಯಾರೇಜ್‌ ಆದರೆ ನೀನು ಕಂಡೋರ ಗರ್ಲ್ ಫ್ರೆಂಡ್‌ನ್ನು ಮದುವೆ ಅಗಿರ್ತೀಯ ಅಷ್ಟೇ.

 

ಮ್ಯಾನೇಜರ್‌ : ಏನಯ್ಯ ಗುಂಡ…. ಹೀಗಾ ಕೆಲಸ ಮಾಡೋದು? ಯಾವತ್ತಾದ್ರೂ ಗೂಬೆ ನೋಡಿದ್ದೀಯಾ?

ಗುಂಡ :  (ತಲೆ ಕೆಳಗೆ ಹಾಕುತ್ತಾ) ಇಲ್ಲ ಸಾರ್‌…

ಮ್ಯಾನೇಜರ್‌ : ಅಲ್ಲೇನು ನೋಡ್ತೀಯಾ ನಿನ್ನ ತಲೆ…. ಇಲ್ಲಿ ನನ್ನ ಕಡೆ ನೋಡು!

 

ಸದಾಶಿವನ ಹೆಂಡತಿ ಅಕಾಲ ಮರಣಕ್ಕೆ ತುತ್ತಾದಾಗ ಅವನು ಬಹಳ ಗೋಳಾಡತೊಡಗಿದ. ಆಗ ಅವನ ಗೆಳೆಯರು ಬಂದು ಸಮಾಧಾನಪಡಿಸಿದರು.

ಮೋಹನ್‌ : ಸಮಾಧಾನ ಮಾಡ್ಕೋ, ನಿನಗೆ ಅರ್ಜೆಂಟಾಗಿ ಏನಾದ್ರೂ ಬೇಕಿತ್ತೇ?

ಸದಾಶಿವ : ಲ್ಯಾಪ್‌ಟಾಪ್‌ ತಗೊಂಬಾ, ಈಗಲೇ ನಾನು ಫೇಸ್‌ಬುಕ್‌ನಲ್ಲಿ ಸ್ಟೇಟಸ್‌ ಸಿಂಗಲ್ ಅಂತ ನಮೂದಿಸಬೇಕು.

 

ಗುಂಡ ಬೆಳಗ್ಗೆಯಿಂದಲೇ ವಾಟ್ಸ್ ಅಪ್‌ ನೋಡುತ್ತಾ ಕುಳಿತಿದ್ದ. ಅವನ ಫ್ರೆಂಡೊಬ್ಬಳು ಸ್ಯಾಂಡ್‌ವಿಚ್‌ ಫೋಟೋ ಅಪ್‌ಲೋಡ್ ಮಾಡಿ, ಬನ್ನಿ ಟಿಫನ್‌ ಮಾಡೋಣ, ಎಂದು ಬರೆದಿದ್ದಳು. ಅದಕ್ಕೆ ಗುಂಡ, `ಆಹಾ… ಬ್ರೇಕ್‌ಫಾಸ್ಟ್ ಭಲೇ ಬೊಂಬಾಟಾಗಿದೆ,’ ಎಂದು ಕಮೆಂಟ್‌ ಮಾಡಿದ. ಇದನ್ನು ಕಂಡು ಕೋಪಗೊಂಡ ಅವನ ಹೆಂಡತಿ, ಮಧ್ಯಾಹ್ನ 3 ಗಂಟೆ ಆದರೂ ಊಟ ಹಾಕಲಿಲ್ಲ. ನಂತರ ಮೆಲ್ಲಗೆ, ‘ಊಟ ಮನೆಯಲ್ಲೇ ಮಾಡ್ತೀರೋ ಅಥವಾ ವಾಟ್ಸ್ ಅಪ್‌ನಲ್ಲೋ?’ ಎಂದು ಪ್ರಶ್ನಿಸಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ