ಮುದ್ದಾದ ಮಗು ಜನಿಸಿದ ಸಂತಸದಲ್ಲಿ ಗಂಡ ಹೆಂಡತಿ ಇದ್ದರು. ಎಲ್ಲವೂ ಚೆನ್ನಾಗಿತ್ತು. ಮಗುವಿನ ಆರೋಗ್ಯಕರ ಬೆಳವಣಿಗೆಯನ್ನು ನೋಡುತ್ತ ನೋಡುತ್ತ ತಂದೆ ತಾಯಿ ಸಂತೋಷಪಡುತ್ತಿದ್ದರು. ಮಗುವಿಗೆ ಎರಡು ವರ್ಷ ತುಂಬುತ್ತಲೇ ಬಿಡದ ಜ್ವರವಾಯಿತು. ನಿಲ್ಲದ ಭೇದಿ ಶುರುವಾಯಿತು. ಎಷ್ಟೇ ಔಷಧಿ ನೀಡಿದರೂ ಮಗು ಗುಣವಾಗಲಿಲ್ಲ. ದೊಡ್ಡ ಆಸ್ಪತ್ರೆ, ನಾಟಿ ಔಷಧಿ ಮಾಡಿದರೂ ಜ್ವರ ವಿಪರೀತವಾಗಿ ಮಗುವಿನ ಕೈಕಾಲುಗಳು ಎಳೆದುಕೊಂಡಿತು. ನರಗಳು ಬಿಗಿದುಕೊಂಡವು. ತಿನ್ನಿಸುವ ಆಹಾರ ಒಳಗೆ ಹೋಗದೆ ಎಲ್ಲ ಹಾಗೆ ಹೊರಬರತೊಡಗಿತು. ದುಡ್ಡಿದ್ದರೆ ಏನು ಬೇಕಾದರೂ ಆಗುತ್ತೆ ಎನ್ನುವ ಮಾತು ಇಲ್ಲಿ ಗೌಣವಾಯಿತು. ಎಷ್ಟೇ ಖರ್ಚು ಮಾಡಿದರೂ ಮಗು ಗುಣಮುಖವಾಗಲಿಲ್ಲ. ಬೆಳವಣಿಗೆ ಕುಂಠಿತವಾಗಿ ಕೈಕಾಲುಗಳು ಇಲ್ಲವಾಯಿತು. ದೇಹ ಕುಬ್ಜವಾಯಿತು.

ಮಗವನ್ನು ಅಂಗವಿಕಲ ಎಂದು ವೈದ್ಯರು ದೃಢೀಕರಿಸಿಬಿಟ್ಟರು. ತಂದೆ ತಾಯಿ ಕಂಗಾಲಾದರು. ಆಕಾಶವೇ ಇವರ ತಲೆಯ ಮೇಲೆ ಕಳಚಿಬಿದ್ದಿತು.

ಮಗುವನ್ನು ಬಹಳ ನಾಜೂಕಾಗಿ ಹುಷಾರಾಗಿ, ಹೆಚ್ಚಾಗಿ ಪ್ರೀತಿಯಿಂದ ಬೆಳೆಸತೊಡಗಿದರು. ಅದರ ಫಲವಾಗಿ ಮಗು ಒಂದಿಷ್ಟು ಸುಧಾರಿಸಿ, ಇರುದರಲ್ಲೇ ಬುದುಕುವ ಸಾಮರ್ಥ್ಯ ಮೈಗೂಡಿಸಿಕೊಂಡಿತು. ಮನೆಯವರೂ ಇಷ್ಟೆ ಲಭ್ಯ ಎನ್ನುತ್ತ ದಿನಕಳೆದರು. ಮಗು ದಿನೇ ದಿನೇ ಒಳ್ಳೆ ರೂಪ, ಗುಣ, ವಿದ್ಯೆಗಳೊಟ್ಟಿಗೆ ಬೆಳೆಯತೊಡಗಿತು. ಮಗುವನ್ನು ನಾರ್ಮಲ್ ಶಾಲೆಗೇ ಸೇರಿಸಿದರು. ಜೆ.ಎಸ್‌.ಎಸ್‌ ಶಾಲೆಯಲ್ಲಿ ಈ ಮಗು ಮೆಟ್ಟಿಲು ಹತ್ತಲು ಆಗುವುದಿಲ್ಲ ಎಂಬ ಕಾರಣಕ್ಕೆ ತರಗತಿಯನ್ನು ಕೆಳಗೇ ಮಾಡಿದ ಮುಖ್ಯೋಪಾಧ್ಯಾಯಿನಿಯ ಸಹಾಯವನ್ನು ಇಂದಿಗೂ ನೆನೆಯುತ್ತಾರೆ. ಹಾಗೇ ಬೆಳೆಯುತ್ತಾ ಬಿ.ಕಾಂ. ಪದವಿಯನ್ನು ಪಡೆದು, ಇಂದು ಇನ್‌ಪೇಸಿಸ್‌ನಲ್ಲಿ ಕೆಲಸ ನಿರ್ವಹಿಸುತ್ತ, ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ (ಜಾವೆಲಿನ್‌ ಥ್ರೋ, ಡಿಸ್ಕಸ್‌ ಥ್ರೋ, ಶಾಟ್‌ಪುಟ್‌) ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮಂಜುಳಾರವರ ಸಾಧನೆ ಅಷ್ಟಿಷ್ಟಲ್ಲ.

ಚಿಕ್ಕ ಮಗುವನ್ನು ತಂದೆ ಶಾಲೆಗೆ ಬಿಟ್ಟು ತಾವು ಕೆಲಸಕ್ಕೆ ಹೋಗುತ್ತಿದ್ದರು. ಕೆಲಸದಿಂದ ಬರುವಾಗ ಮಗುವನ್ನು ಮತ್ತೆ ಮನೆಗೆ ಕರೆದುಕೊಂಡು ಬರುತ್ತಿದ್ದರು. ಮನೆಗೆ ಬಂದೊಡನೆ ಮಗುವಿನ ಆರೈಕೆ ಲಾಲನೆ ಪೋಷಣೆ ತಾಯಿಯ ಪಾಲಿನದಾಗುತ್ತಿತ್ತು. ಮಗುವಿಗೆ ಯಾವುದರಲ್ಲೂ ಕುಂದು ಬಾರದಂತೆ ಮನೆಯವರು ಅಕ್ಕರೆಯಿಂದ ಬೆಳೆಸಿದರು. ಬನಶಂಕರಿಯ ಬಿ.ಎನ್‌.ಎಂ. ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಮುಗಿಸಿ ಮನೆಯಲ್ಲೇ ಕೂತು ಸಮಯ ಕಳೆಯುತ್ತಿದ್ದ ಮಂಜುಳಾರವರಿಗೆ ಪರಿಚಯವಾದವರು ಶಾಂತಲಕ್ಷ್ಮಿ. ಆಕೆ ಬ್ಯಾಂಕ್‌ ಉದ್ಯೋಗಿ. ಇವರೂ ಸಹ ಅಂಗವೈಕಲ್ಯತೆಯನ್ನು ಹೊಂದಿದವರೇ. ಬಹಳ ಚಟುವಟಿಕೆಯ ಸ್ವಭಾವ ಇವರದ್ದು. ಬಹಳಷ್ಟು ಮಂದಿಯನ್ನು ಮುಖ್ಯವಾಹಿನಿಗೆ ತಂದ ಹಿರಿಮೆ ಇವರಿಗೇ ಸಲ್ಲುತ್ತದೆ.

ಸಾಧನೆಗೆ ನಾಂದಿ

ಮಂಜುಳಾರವರಿಗೆ ಬಹಳ ಪ್ರೋತ್ಸಾಹ ನೀಡಿ ಅವರನ್ನು ಮನೆಯ ನಾಲ್ಕುಗೋಡೆಯ ಆಚೆಗೆ ತಂದು ಪ್ರಪಂಚ ತೋರಿಸಿದ ಮಹನೀಯರು. ಅಷ್ಟಾಗಿ ಬಾಹ್ಯಲೋಕದ ಪರಿಚಯವಿಲ್ಲದ ಮನೆಯವರ ಬಾಳಿಗೆ ಶಾಂತಲಕ್ಷ್ಮಿಯವರು ದಾರಿದೀಪವಾದರು, ಜೀವನ ಜ್ಯೋತಿಯಾದರು. ಅದಾಗಲೇ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಐಟಿಐ ಕಾರ್ಖಾನೆಯ ಉದ್ಯೋಗಿ ಕೃಷ್ಣಮೂರ್ತಿಯವರು ವಾಲೆಂಟಿಯರ್‌ ಆಗಿ ಮಾರ್ಗದರ್ಶಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. `ಇವರಿಬ್ಬರ ಪ್ರೋತ್ಸಾಹ ಉತ್ತೇಜನ ನನ್ನನ್ನು ಇಂದು ಈ ಮಟ್ಟಕ್ಕೆ ತರುವಲ್ಲಿ ಯಶಸ್ವಿಯಾಗಿದೆ,’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮಂಜುಳಾ.

1996ರಲ್ಲಿ ಮುಂಬೈನಲ್ಲಿ ಪ್ರಾರಂಭವಾಗಿದ್ದ ನ್ಯಾಷನಲ್ ಕ್ರೀಡಾಕೂಟಕ್ಕೆ ಶಾಂತಲಕ್ಷ್ಮಿಯವರು ತಂಡವೊಂದನ್ನು ಕರೆದುಕೊಂಡು ಹೊರಟಿದ್ದರು. ತಂಡಕ್ಕೆ ಮಂಜುಳಾರನ್ನೂ ಜೊತೆಗೂಡಿಸಿಕೊಂಡರು. ಸ್ಪರ್ಧಿಯಾಗಲ್ಲ ವೀಕ್ಷಕರನ್ನಾಗಿ!

“ಇದು ನನ್ನ ಮೊದಲ ಅನುಭವ. ಎಲ್ಲರೂ ನನ್ನಂಥವರೇ, ಶ್ರಮಪಡುತ್ತಿದ್ದಾರೆ, ಸಾಧನೆ ತೋರುತ್ತಿದ್ದಾರೆ. ಇದನ್ನು ಗಮನಿಸಿದ ಮೇಲೆ, ಉತ್ತೇಜನ ನೀಡುವ ಶಾಂತಲಕ್ಷ್ಮಿ ಹಾಗೂ ಕೃಷ್ಣಮೂರ್ತಿಯವರಂಥ ಪ್ರೋತ್ಸಾಹದಾಯಕರು ನನ್ನ ಜೊತೆ ಇರುವಾಗ ನಾನೇಕೆ ಏನಾದರೂ ಸಾಧಿಸಬಾರದು ಎಂಬ ಆಲೋಚನೆಯಿಂದ ಒಂದು ಹೆಜ್ಜೆ ಮುಂದೆ ಬಂದು, ಸ್ಪರ್ಧಿಯಾಗಿ ಆಟೋಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಬೇಕೆಂಬ ದೃಢಸಂಕಲ್ಪ ಮಾಡಿಕೊಂಡೆ.

“ಅದೃಷ್ಟವಶಾತ್‌ ಆ ಪ್ರಥಮದಲ್ಲೇ ನನಗೊಂದು ಅವಕಾಶ ದೊರೆತದ್ದು ಮಾತ್ರ ಇನ್ನೂ ವಿಶೇಷವಾಗಿತ್ತು. ಸತತ ಪ್ರಯತ್ನ, ಸ್ವಪ್ರಯತ್ನ, ಸ್ವಾವಲಂಬನೆ, ದೃಢಸಂಕಲ್ಪಗಳಿಂದ ಮುನ್ನುಗಿದೆ,” ಮನದ ಮಾತನ್ನು ಹೇಳಿಕೊಂಡರು ಮಂಜುಳಾ.

ಏಕೋ ಮುಂಬೈನಲ್ಲಿ ನೋಡಿ, ಆಡಿ ಬಂದ ಮೇಲೆ, ಮನಸ್ಸು, ದೇಹ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಳ್ಳಲು ಒಪ್ಪಲೇ ಇಲ್ಲ. ಮನೆಯ ಅಕ್ಕಪಕ್ಕದಲ್ಲಿದ್ದ ಪುಟಾಣಿ ಚೇತನ್‌ (7ನೇ ತರಗತಿ) ಹಾಗೂ ರಾಖೇಶ್‌ (9ನೇ ತರಗತಿ) ಹುಡುಗರು ಬೆಸ್ಟ್ ಫ್ರೆಂಡ್ಸ್ ಆದರು. ಮೊದ ಮೊದಲು ಮನೆಯಲ್ಲೇ ಕುಳಿತು ಕೇರಂ ಆಡುತ್ತಿದ್ದ ಇವರಿಗೆ ಆ ಮಕ್ಕಳು ಶಾಟ್‌ಪುಟ್‌ ಪ್ರ್ಯಾಕ್ಟೀಸ್‌ ನೀಡುತ್ತ ಬಂದರು. ಜೊತೆಗೂಡಿ ಪ್ರ್ಯಾಕ್ಟೀಸ್‌ಗೆ ಬರುತ್ತಿದ್ದರು. ವೀಲ್‌ಚೇರ್‌ನಲ್ಲಿ ಗ್ರೌಂಡ್ಸ್ ಗೆ ಅಕ್ಕನನ್ನು ಕರೆದುಕೊಂಡು ಹೋಗಿ ಅಭ್ಯಾಸ ಮಾಡಿಸುತ್ತಿದ್ದರು. ಗ್ರೌಂಡ್ಸ್ ಗೆ ಕರೆದುಕೊಂಡು ಹೋಗೋದು ಬರೋದು ಇದೇ ಕಾಯಕಾಯಿತು. ಅಕ್ಕನಿಗೆ ಸ್ಛೂರ್ತಿ ತುಂಬುತ್ತ ಉತ್ತೇಜನ ನೀಡುತ್ತ ಸಾಗಿದರು. ಇಂದು ಈ ಮಕ್ಕಳು ಕಾಲೇಜು ಓದುತ್ತಿದ್ದಾರೆ. ಅದೇ ಸಹಕಾರ ಸಹಾಯ ಇಂದಿಗೂ ನೀಡುತ್ತಿದ್ದಾರಂತೆ. 1997-98 ರಿಂದ ಆಟೋಟಗಳನ್ನು ಪ್ರಾರಂಭಿಸಿದರು. ರಾಜ್ಯ ಸರ್ಕಾರ ಇಂಥಹವರಿಗೆ ಪ್ರತಿವರ್ಷ ಕ್ರೀಡಾಕೂಟವನ್ನು ಏರ್ಪಡಿಸುತ್ತಿತ್ತು. ಆ ಕೂಟಗಳಲ್ಲಿ ಭಾಗವಹಿಸುತ್ತ ಅನುಭವವನ್ನು ಪಡೆಯುತ್ತ ಸಾಗಿದರು. ಮುಂದುವರಿದ ಇವರ ಸಾಧನೆಯ ದಿನಗಳು 2002 ರಿಂದ ಸತತವಾಗಿ ಬರತೊಡಗಿತು. ಆಡುತ್ತ ಮೇಲೆ ಬಂದರು. ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತ ಸಾಧನೆಯ ಮೆಟ್ಟಿಲುಗಳನ್ನೇರಿದರು.

ಯಶಸ್ಸಿನ ಸೋಪಾನಗಳೇರುತ್ತಾ…..

ಯವನಿಕಾದಲ್ಲಿ ಪ್ರತಿವರ್ಷ, ಕೃಷ್ಣಾರೆಡ್ಡಿ ಹಾಗೂ ಮಾಲತಿಹೊಳ್ಳರವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಅದೇ 2002ರ ಸಮಯದಲ್ಲಿ ಮಹೇಶ್‌ ಎಂಬುವವರ ಪರಿಯಚವಾಯ್ತು. ಮೊಬಿಲಿಟಿ ಇಂಡಿಯಾದ ಸಿಬಿಆರ್‌ನಲ್ಲಿ ಮ್ಯಾನೇಜರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನೀವು ನಿಮ್ಮ ರೆಸ್ಯೂಮ್ ತೆಗೆದುಕೊಂಡು ನಮ್ಮ ಆಫೀಸಿಗೆ ಬನ್ನಿ ಎಂದರು. ಅದರಂತೆ ಹೋದಾಗ ಏನಮ್ಮ ಡಿಗ್ರಿ ಮುಗಿಸಿ ಮನೇಲೇ ಕೂತಿದ್ದೀರಿ ಎನ್ನುತ್ತಾ ರೆಸ್ಯೂಮ್ ನೋಡಿ ಕೆಲಸ ನೀಡಿದರು. ನಂತರ ಮೊಬಿಲಿಟಿ ಇಂಡಿಯಾದಲ್ಲಿ ಉದ್ಯೋಗಿ ಎನಿಸಿಕೊಂಡರು. ಒಂದೂವರೆ ವರ್ಷ ಸಂಬಳವಿಲ್ಲದೆ, ಟ್ರೇನಿಂಗ್‌ ಮಾಡಿಕೊಂಡರು. 4 ವರ್ಷ ಅಲ್ಲಿ ಕೆಲಸ ಮಾಡಿದರು. 2006ರಲ್ಲಿ ಇನ್‌ಫೋಸಿಸ್‌ನಲ್ಲಿ ಕೆಲಸ ಸಿಕ್ಕಿತು. ಸಂತಸ ಮಗದಷ್ಟು ಇಮ್ಮಡಿಯಾಯಿತು.

ಮಧ್ಯಮ ವರ್ಗದ ಜೀನ. ನೆಮ್ಮದಿ ಸುಖಕ್ಕೇನೂ ಕಮ್ಮಿಯಿಲ್ಲ. ಆದರೂ ಸಣ್ಣಪುಟ್ಟ ತೊಂದರೆಗಳಿಗೇನೂ ತಡೆಯಿರಲಿಲ್ಲ. ಓಡಾಡುವಾಗ ಬೇರೊಬ್ಬರ ಸಹಾಯ, ಒಂದೊಂದು ಕ್ರೀಡೆಗೂ ಒಂದೊಂದು ತೆರನಾದ ಗಾಲಿ ಕುರ್ಚಿಗಳು. ಎಲ್ಲಿಗಾದರೂ ಹೋಗುವಾಗ ಎಡೆರಡು ಕುರ್ಚಿಗಳನ್ನೆತ್ತಿಕೊಂಡು ಓಡಾಡಬೇಕಾದ ಪ್ರಸಂಗಗಳು ಒದಗಿಬರುತ್ತಿದ್ದವು. ಆಗೆಲ್ಲಾ ಒಬ್ಬರೇ ನಿಂತು ಮ್ಯಾನೇಜ್‌ ಮಾಡುತ್ತಿದ್ದರು.

2007ರಲ್ಲಿ ಚೆನ್ನೈನಲ್ಲಿ ನಡೆದ ನ್ಯಾಷನಲ್ಸ್ ಗೆ ಹೊರಟರು. 2009ರಲ್ಲಿ 44 ದೇಶಗಳು ಭಾಗವಹಿಸಿದ್ದ ಕ್ರೀಡಾಕೂಟ ಬೆಂಗಳೂರಿನಲ್ಲಿ ನಡೆಯಿತು. ಇಲ್ಲಿ ಭಾಗವಹಿಸಿ ಡಿಸ್ಕಸ್‌ ಥ್ರೋನಲ್ಲಿ 4ನೇ ಸ್ಥಾನ ಪಡೆದದ್ದು ಹೆಮ್ಮೆಯ ವಿಷಯ. ಚೆನ್ನೈ ರೋಟರಿ ಸಂಸ್ಥೆಯವರು ನಡೆಸಿದ ಅಂತಾರಾಷ್ಟ್ರಿಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಾವೆಲಿಂಗ್‌ ಮತ್ತು ಶಾಟ್‌ಪುಟ್‌ಗಳಲ್ಲಿ 2ನೇ ಮತ್ತು 3ನೇ ಸ್ಥಾನ ಪಡೆದರು.

ಸತತ ಪರಿಶ್ರಮ, ಅದಕ್ಕೆ ತಕ್ಕ ಅಭ್ಯಾಸ, ಮನೆಯವರ, ಸ್ನೇಹಿತರ ಪ್ರೋತ್ಸಾಹ ಬೆಂಬಲಗಳೊಟ್ಟಿಗೆ ಆವಕಾಶ ಮಾರ್ಗದಲ್ಲಿ ಸಂಚರಿಸುವ ಸುಯೋಗ ಮಂಜುಳಾರವರಿಗೆ ಒದಗಿದಾಗ ಕಣ್ಣಂಚಲ್ಲಿ ನೀರು ತುಂಬಿತು. ಕೆಲವು ಬಂಧುಮಿತ್ರರು ಇವರ ಆರೋಗ್ಯ ಹದಗೆಟ್ಟ ಆ ದಿನಗಳಲ್ಲಿ ಚುಚ್ಚು ನುಡಿದು, ಮನನೋಯಿಸಿ ಬೇಸರ ತರುವಂತಹ ಮಾತುಗಳನ್ನಾಡಿ ನಿಂದಿಸುತ್ತಿದ್ದರು. `ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತಾಡುತ್ತೆ ಎನ್ನಲು ಇಂಥ ಜನರೇ ಕಾರಣ,’ ಎನ್ನುತ್ತಾರೆ ನೊಂದ ಮನಸ್ಸಿನ ಮಂಜುಳಾ.

ಅದೇ ತಾವು ವಿಮಾನ ಹತ್ತಿ ದುಬೈಗೆ ಹೊರಟು ನಿಂತಾಗ ಚುಚ್ಚು ಮಾತನಾಡಿ ನೋಯಿಸಿದ ಅದೇ ನೆಂಟರು, `ಏನ್ರಿ, ಎಷ್ಟು ಅದೃಷ್ಟ ಮಾಡಿದ್ದೀರಾ ಇಂಥ ಒಳ್ಳೆ ಮಗಳನ್ನು ಪಡೆಯಲು!’ ಎಂದಾಗ ಮನೆಯವರಿಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ.

`ನಮ್ಮಂಥವರ ಮನಸ್ಸು ಬಹಳ ಸಂಕೋಚಗೊಂಡಿರುತ್ತದೆ. ಯಾರಾದರೂ ಬಂದು ನಮ್ಮನ್ನು ಪ್ರೋತ್ಸಾಹಿಸಿ ಉತ್ತೇಜಿಸಿದರೆ ಮಾತ್ರವೇ ನಾವು ಮುಂದೆ ಬರಲು ಪ್ರಯತ್ನಪಡುತ್ತೇವೆ. ಇಲ್ಲದಿದ್ದರೆ ಹಾಗೇ ಇರ್ತೀವಿ. ನಮ್ಮನ್ನು ದಯಮಾಡಿ ಚುಚ್ಚು ಮಾತುಗಳಿಂದ ನಿಂದಿಸಬೇಡಿ, ನೋಯಿಸಬೇಡಿ,’ ಎನ್ನುತ್ತಾರೆ.

ಗರಿಗೆದರಿದ ಹುಮ್ಮಸ್ಸು

2010ರಲ್ಲಿ ದುಬೈನಲ್ಲಿ ನಡೆದ ಆಟೋಟಗಳಲ್ಲಿ ಭಾಗವಹಿಸಿ ಡಿಸ್ಕಸ್‌ ಥ್ರೋನಲ್ಲಿ 5ನೇ ಸ್ಥಾನ ಪಡೆದರು. ರಾಜ್ಯಮಟ್ಟದಲ್ಲಿ 9, ರಾಷ್ಟ್ರಮಟ್ಟದಲ್ಲಿ 22, ಅಂತಾರಾಷ್ಟ್ರಿಯ ಮಟ್ಟದಲ್ಲಿ 7 ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಹೆಮ್ಮೆ ಇವರಿಗಿದೆ. ತದನಂತರ 19ನೇ ಕಾಮನ್‌ ವೆಲ್ತ್ ‌ಕ್ರೀಡಾಕೂಟಕ್ಕೆ ಕರ್ನಾಟಕದಿಂದ ಇವರೊಬ್ಬರೇ ಆಯ್ಕೆಯಾದದ್ದು ಮಾತ್ರ ವಿಶೇಷವಾಗಿತ್ತು. ಗುಜರಾತ್‌ನಲ್ಲಿ ಸತತ 6 ತಿಂಗಳ ಪ್ರ್ಯಾಕ್ಟೀಸ್‌ ಮುಗಿಸಿ, ದೆಹಲಿಯಲ್ಲಿ ಭಾಗವಹಿಸಲು ತೆರಳಿದರು. ಇಲ್ಲಿ ಶಾಟ್‌ಪುಟ್‌ನಲ್ಲಿ 4ನೇ ಸ್ಥಾನ ಪಡೆದು. ನಂತರ ಟ್ರಿಪ್‌ ಎಂದು ಲಂಡನ್‌ ಪ್ರವಾಸಕ್ಕೆ ಹೊರಟರು. ಮುಖ್ಯವಾಗಿ `ಪ್ಯಾರಾಪ್ಲೆಜಿಕ್‌ ಕಮಿಟಿ ಆಫ್‌ ಇಂಡಿಯಾ’ ಇವರಿಂದ ಅನುಮತಿ ದೊರೆತ ನಂತರವೇ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಸಾಧ್ಯವಾಯಿತು. ಅಲ್ಲಿ ಮಹದೇವ್‌ರವರ ಸಹಾಯ ಬಹಳ ಹೆಚ್ಚಿನದು. ಅವರ ಸಂಪೂರ್ಣ ಸಹಕಾರ ಪ್ರೋತ್ಸಾಹ ನನಗೆ ದೊರೆತದ್ದು ನನ್ನ ಪುಣ್ಯವೇ ಹೌದು. ಎಲ್ಲಾದರೂ ಹೋಗಿ ಬರುವಾಗ ಮನೆಯವರ ಸಹಕಾರ ಸಹಾಯ ಇರುತ್ತಿತ್ತು. ಬಹಳ ನಾಜೂಕಾಗಿ, ಒಂದು ಕೆಲಸವನ್ನೂ ನನ್ನ ಕೈಯಿಂದ ಮಾಡಿಸದೆ, ತಾವೇ ಎಲ್ಲ ನಿರ್ವಹಿಸುತ್ತಿದ್ದ ಮನೆಯವರನ್ನು ಬಿಟ್ಟು, ಇಂಡಿಪೆಂಡೆಂಟ್‌ ಆಗಿ ಹೋಗಿ ಬರಲು ಅಭ್ಯಾಸವಾಗುತ್ತ ಬಂತು. ಲಗೇಜ್‌ ಹೊರೋದು, ವಿಮಾನ ಹತ್ತೋದು, ಇಳಿಯೋದು ಇದನ್ನೆಲ್ಲಾ ಯಾರ ಸಹಾಯ ಪಡೆಯದೆ ಮ್ಯಾನೇಜ್ ಮಾಡುತ್ತಿದ್ದೆ. ತದನಂತರ ಚೀನಾದಲ್ಲಿ ನಡೆದ ಪ್ಯಾರಾ ಏಷಿಯನ್‌ ಗೇಮ್ಸ್ ನಲ್ಲಿ ಭಾಗವಹಿಸಿ, ಮೂರೂ ಆಟಗಳಲ್ಲಿ ಆಡಿ ಬಹುಮಾನಗಳನ್ನು ಗೆದ್ದಾಗ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದುವರೆವಿಗೂ 19 ಚಿನ್ನ, 35 ಬೆಳ್ಳಿ, 11 ಕಂಚಿನ ಪದಕಗಳು ಪಡೆದಿರುವುದು ಹೆಮ್ಮೆಯ ವಿಷಯ.

ಧನ್ಯತೆಯ ಭಾವ

ಇನ್‌ಫೋಸಿಸ್‌ನ ನಾರಾಯಣ ಮೂರ್ತಿಯವರನ್ನು ಭೇಟಿಯಾದದ್ದು ಒಂದು ವಿಸ್ಮಯ. ಒಮ್ಮೆ ಇವರಿಗೆ ಸಂಜೆ ಮೀಟಿಂಗ್‌ ಇದೆ ಎಂದು ಕರೆದು ಸರ್‌ಪ್ರೈಸ್‌ ನೀಡಿದರು. ಇವರಂತೆ ಹಲವರಿಗೂ ಆ ಮೆಸೇಜ್‌ ಇತ್ತು. ಎಲ್ಲರೊಟ್ಟಿಗೆ ನಾವು ಸಹ ಎನ್ನುತ್ತ ಅವರು ಹೇಳಿದ ಸಮಯಕ್ಕೆ ತೆರಳಿದರು. ಹಲವರ ಬಾಳಿನ ಬೆಳಕಾದ ನಾರಾಯಣ ಮೂರ್ತಿಯವರೇ ಸ್ವತಃ ಅಲ್ಲಿ ಹಾಜರಿದ್ದು ಸ್ವಾಗತಿಸುತ್ತಿದ್ದರು. ಹೆಮ್ಮೆ, ಸಂತಸ ಒಮ್ಮೆಗಾಯಿತು. ಎಲ್ಲರ ಕುಶಲೋಪರಿಯ ನಂತರ ಕಾರ್ಯಕ್ರಮ ಆರಂಭವಾಯಿತು. ಆ ಒಂದು ಶುಭ ಸಂದರ್ಭದಲ್ಲಿ ಇವರ ಗಮನಕ್ಕೆ ಬಾರದೆಯೇ ಒಂದು ಸಂತಸದ ಪುಟ್ಟ ಸಮಾರಂಭ ನಡೆಯಿತು. ಸ್ವತಃ ನಾರಾಯಣ ಮೂರ್ತಿಯವರೇ ಇವರ ಸಾಧನೆಗಳನ್ನು ಮೆಚ್ಚಿ ಮಂಜುಳಾರವರಿಗೆ ಸನ್ಮಾನ ಮಾಡಿ ಗೌರ ನೀಡಿ ಅಭಿನಂದಿಸಿದರು, ಪ್ರೋತ್ಸಾಹಿಸಿದರು. ಇದು ನಿಜವಾಗಿಯೂ ನನ್ನ ಸೌಭಾಗ್ಯವೆನ್ನುತ್ತಾರೆ.

2010ರಲ್ಲಿ ಕರ್ನಾಟಕ ಸರ್ಕಾರ ನೀಡುವ `ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌. ಯಡಿಯೂರಪ್ಪನವರು ನೀಡಿ ಅಭಿನಂದಿಸಿದ್ದರು.

ಇವರ ತಂದೆ ಕೆ.ಬಿ. ಮಹದೇವಯ್ಯ ಆರ್‌.ಟಿ.ಓ., ತಾಲ್ಲೂಕು ಕಛೇರಿಗಳಲ್ಲಿ, ಕೆಲಸ ನಿರ್ವಹಿಸುತ್ತಿದ್ದಾರೆ. ತಾಯಿ ಶಿವಮ್ಮ ಗೃಹಿಣಿಯಾಗಿ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅಣ್ಣ, ಅತ್ತಿಗೆ, ಮಕ್ಕಳು, ತಂಗಿ, ಇವರ ಕುಟಂಬ. ಎಲ್ಲೂ ಒಟ್ಟಾಗಿಯೇ ಇದ್ದಾರೆ. ತುಂಬು ಕುಟುಂಬ ಇವರದ್ದಾಗಿದ್ದು ಅಲ್ಲಿ ಪ್ರೀತಿ ಅನ್ಯೋನ್ಯತೆ ಇರುವುದು ಹೆಮ್ಮೆಯ ವಿಷಯವೇ ಹೌದು. ಉತ್ತಮ ಸ್ನೇಹಬಳಗವೇ ಇವರ ಬಳಿ ಇದೆ. ಮಂಜುಳಾ ಇನ್ನೂ ಹೆಚ್ಚಿನ ಸಾಧನೆ ಮಾಡಿ ಇತರರಿಗೆ ಮಾದರಿಯಾಗಲಿ ಎಂದು `ಗೃಹಶೋಭಾ’ ಹಾರೈಸುತ್ತಾಳೆ.

ಸವಿತಾ ನಾಗೇಶ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ