ಅಂದು ಮೊದಲ ಬಾರಿಗೆ ಕುಮಾರ್ ಉಷಾಳ ಮನೆಗೆ ಎಲ್ಲರೊಂದಿಗೆ ಊಟ ಮಾಡಲು ಬರುವವರಿದ್ದರು. ಅವಳ ಇಬ್ಬರು ತಮ್ಮಂದಿರು ಮತ್ತು ಅವರ ಹೆಂಡತಿಯರು ಅವರನ್ನು ಸತ್ಕರಿಸಲು ಬೆಳಗಿನಿಂದಲೇ ಸಿದ್ಧತೆಯಲ್ಲಿ ತೊಡಗಿದ್ದರು. ತಮ್ಮಂದಿರ ಮಕ್ಕಳೂ ಹೊಸ ಬಟ್ಟೆಗಳನ್ನು ಧರಿಸಿ ಕುಮಾರ್ ಬರುವುದನ್ನೇ ಕಾಯುತ್ತಿದ್ದರು.
ಉಷಾ ಚೆನ್ನಾಗಿ ಅಲಂಕರಿಸಿಕೊಳ್ಳಲು ಹಿರಿಯ ತಮ್ಮನ ಹೆಂಡತಿ ರತ್ನಾ ಸಹಾಯ ಮಾಡುತ್ತಿದ್ದಳು. ಉಷಾ ತನ್ನ ವಯಸ್ಸಿಗೆ ಹೋಲಿಸಿದರೆ ಹೆಚ್ಚು ಆಕರ್ಷಕ ಹಾಗೂ ಸ್ಮಾರ್ಟಾಗಿ ಕಾಣುತ್ತಿದ್ದಳು. ಆದರೂ ಅವಳ ಮನಸ್ಸಿನಲ್ಲಿ ಚಿಂತೆ ಹಾಗೂ ವ್ಯಾಕುಲತೆ ಮನೆ ಮಾಡಿತ್ತು.
“35ನೇ ವಯಸ್ಸಿನಲ್ಲಿ ಮದುವೆ ಮಾಡ್ಕೊ ಅಂತ ನೀವೆಲ್ಲಾ ನನ್ನನ್ಯಾಕೆ ಪೀಡಿಸ್ತಿದ್ದೀರಿ? ನಾನು ನಿಮಗೆ ಹೊರೆ ಆಗಿದ್ದೀನಾ? ನನ್ನನ್ನು ಬಲವಂತವಾಗಿ ಹೊರಹಾಕ್ತಿದ್ದೀರಾ?” ಎಂದು ಕಳೆದ ವಾರ ಉಷಾ ತನ್ನ ತಮ್ಮಂದಿರು ಹಾಗೂ ಅವರ ಹೆಂಡತಿಯರ ಬಳಿ ಹಲವಾರು ಸಾರಿ ಜಗಳವಾಡಿದ್ದಳು. ಆದರೆ ಅವರೆಲ್ಲಾ ಅವಳ ವಿರೋಧವನ್ನು ನಕ್ಕು ತಳ್ಳಿ ಹಾಕಿದ್ದರು.
ಸ್ವಲ್ಪ ಹೊತ್ತಿನ ನಂತರ ಉಷಾಗಿಂತ 2 ವರ್ಷ ಚಿಕ್ಕವನಾದ ತಮ್ಮ ಅಜಿತ್ ರೂಮಿಗೆ ಬಂದು ಹೇಳಿದ, “ಅಕ್ಕಾ, ಕುಮಾರ್‌ಬಂದ್ರು.”
ಉಷಾ ಏಳದಿದ್ದಾಗ, ಅಜಿತ್ ಬಹಳ ಪ್ರೀತಿಯಿಂದ ಅವಳ ಭುಜ ಹಿಡಿದು ಎಬ್ಬಿಸಿದ. ನಂತರ ಭಾವುಕತೆಯಿಂದ, “ಅಕ್ಕಾ, ಮನಸ್ಸಿನಲ್ಲಿ ಯಾವುದೇ ಟೆನ್ಶನ್ ಇಟ್ಕೋಬೇಡ. ನಿನ್ನ ಇಷ್ಟಕ್ಕೆ ವಿರುದ್ಧವಾಗಿ ನಾವೇನೂ ಮಾಡಲ್ಲ,” ಎಂದ.
“ನನಗೆ ಮದುವೆಯಾಗೋಕೆ ಇಷ್ಟವಿಲ್ಲ,” ಉಷಾ ಮೆಲ್ಲಗೆ ಹೇಳಿದಳು.
“ಬೇಡ ಬಿಡು. ಆದರೆ ಮನೆಗೆ ಬಂದ ಅತಿಥಿಗಳನ್ನು ಸ್ವಾಗತ ಮಾಡೋಕಾದ್ರೂ ನಡಿ,” ಅಜಿತ್ ಅವಳ ಕೈ ಹಿಡಿದು ಡ್ರಾಯಿಂಗ್‌ರೂಮಿಗೆ ಕರೆದುಕೊಂಡು ಹೊರಟ. ಉಷಾಳ ಕಣ್ಣುಗಳಲ್ಲಿ ಚಿಂತೆ ಹಾಗೂ ವ್ಯಾಕುಲತೆ ಇನ್ನಷ್ಟು ಹೆಚ್ಚಿತು.
ಡ್ರಾಯಿಂಗ್ ರೂಮಿನಲ್ಲಿ ಕುಮಾರ್‌ರನ್ನು ಮೂವರೂ ಮಕ್ಕಳು ಮುತ್ತಿಗೆ ಹಾಕಿದ್ದರು. ಕುಮಾರ್ ಎದುರಿಗೆ ಅವರು ಬಹಳಷ್ಟು ಪೆನ್ಸಿಲ್‌ಗಳು ಮತ್ತು ಕಾಗದಗಳನ್ನು ಇಟ್ಟಿದ್ದರು.
ಕುಮಾರ್ ಚಿತ್ರಕಾರರಾಗಿದ್ದರು. ಮಕ್ಕಳು ತಮ್ಮ ತಮ್ಮ ಚಿತ್ರಗಳನ್ನು ಮೊದಲು ಬರೆಸಿಕೊಳ್ಳಲು ಗದ್ದಲ ಮಾಡುತ್ತಿದ್ದರು. ಅವರ ಸ್ವಚ್ಛಂದ ವರ್ತನೆಗೆ ಕಾರಣ ಕುಮಾರ್ ಆ ಮೂವರೂ ಮಕ್ಕಳ ಮನಸ್ಸನ್ನು ಕೆಲವೇ ನಿಮಿಷಗಳಲ್ಲಿ ಗೆದ್ದುಬಿಟ್ಟಿದ್ದರು.
ಅಜಿತನ 6 ವರ್ಷದ ಮಗಳು ಕಾವ್ಯಾ ತನ್ನ ಚಿತ್ರ ಬರೆಸಿಕೊಳ್ಳಲು ಕೆನ್ನೆಯ ಮೇಲೆ ಬೆರಳಿಟ್ಟು ವಯ್ಯಾರದಿಂದ ಪೋಸ್ ಕೊಟ್ಟಾಗ ಅಲ್ಲಿದ್ದವರಿಗೆಲ್ಲಾ ನಗು ಬಂತು.
ಉಷಾ ನಗುತ್ತಾ ಕಾವ್ಯಾಗೆ ಮುತ್ತು ಕೊಟ್ಟು ಕುಮಾರ್‌ಗೆ ಕೈ ಮುಗಿದಳು.
“ಇದು ನಿಮಗೆ,” ಕುಮಾರ್ ಎದ್ದು ನಿಂತು ಒಂದು ಅಗಲಾದ ಕಾಗದದ ರೋಲ್‌ನ್ನು ಉಷಾಗೆ ಕೊಟ್ಟರು.
“ನೀವು ಮಾಡಿರೋ ಪೇಂಟಿಂಗ್ ಇದೆಯಾ ಇದರಲ್ಲಿ?” ಅಜಿತನ ಹೆಂಡತಿ ರತ್ನಾ ಕುತೂಹಲದಿಂದ ಕೇಳಿದಳು.
“ಹೌದು,” ಕುಮಾರ್ ಸಂಕೊಚದಿಂದ ಕೇಳಿದರು.
“ನಾವು ಅದನ್ನು ನೋಡೋಣ,” ಉಷಾಳ ಚಿಕ್ಕ ತಮ್ಮ ಆಕಾಶನ ಪತ್ನಿ ಆಶಾ ಉತ್ಸಾಹದಿಂದ ಕೇಳಿದಳು.
ಉಷಾ ರೋಲ್‌ನ್ನು ಆಶಾಗೆ ಕೊಟ್ಟಳು. ಅವಳು ರತ್ನಾಳ ಸಹಾಯದಿಂದ ಗಿಫ್ಟ್ ಪೇಪರ್ ಬಿಚ್ಚತೊಡಗಿದಳು.
ಕುಮಾರ್ ಉಷಾಳ ವರ್ಣ ಚಿತ್ರ ರಚಿಸಿ ಅವಳಿಗೆ ಉಡುಗೊರೆ ನೀಡಿದ್ದರು. ಚಿತ್ರ ಬಹಳ ಸುಂದರವಾಗಿತ್ತು. ಎಲ್ಲರೂ ಚಿತ್ರವನ್ನು ಹೊಗಳತೊಡಗಿದರು.
“ಇದನ್ನು ಯಾವಾಗ ಬರೆದ್ರಿ?” ಉಷಾ ಮೆಲ್ಲಗೆ ಕುಮಾರ್‌ರನ್ನು ಕೇಳಿದಳು.
“ನಿಮ್ಮ ಚಿತ್ರ ಇಷ್ಟ ಆಗ್ಲಿಲ್ವಾ?” ಕುಮಾರ್ ನಗುತ್ತಾ ಕೇಳಿದರು.
“ಚಿತ್ರ ಬಹಳ ಚೆನ್ನಾಗಿದೆ…. ಆದರೆ ನೀವು ಬರೆದಿದ್ದು ಹೇಗೆ?”
“ರತ್ನಾ ನಿಮ್ಮದೊಂದು ಪಾಸ್‌ಪೋರ್ಟ್ ಸೈಜ್ ಫೋಟೋ ಕೊಟ್ಟಿದ್ರು. ಅದನ್ನು ನೋಡಿಕೊಂಡು ನನ್ನ ಕಲ್ಪನಾಶಕ್ತಿ ಬೆರೆಸಿ ಚಿತ್ರ ಬರೆದೆ.”
“ಕಲಾವಿದರು ಸತ್ಯದ ದರ್ಶನ ಮಾಡಿಸಬೇಕು ಕುಮಾರ್‌ರವರೇ. ನಾನಂತೂ ಸುಂದರವಾಗಿಲ್ಲ.”
“ನಾನು ಈ ಕಾಗದದಲ್ಲಿ ಸತ್ಯವನ್ನೇ ತೋರಿಸಿದ್ದೀನಿ. ನೀವು ಅಷ್ಟು ಸುಂದರವಾಗಿ ಕಾಣ್ತಿದ್ದೀರಿ.”
ಕುಮಾರ್‌ರ ಈ ಮಾತು ಕೇಳಿ ಉಷಾಗೆ ಕೊಂಚ ಗಾಬರಿಯಾಯಿತು. ಕೊಂಚ ನಾಚಿಕೆಯೂ ಆಯಿತು. ಅವಳು ತಲೆ ತಗ್ಗಿಸಿದಳು.
ಎಲ್ಲರೂ ಕುಮಾರ್ ಬಳಿ ಬಂದು ಉಷಾಳ ಚಿತ್ರವನ್ನು ಹೊಗಳತೊಡಗಿದರು. ಉಷಾ ಎಂದೂ ತನ್ನ ಬಣ್ಣ, ರೂಪದ ಬಗ್ಗೆ ಕೇಳಿಯೇ ಇರಲಿಲ್ಲ. ಹೀಗಾಗಿ ಸಂಕೋಚಗೊಂಡು ಕುಮಾರ್‌ಗೆ ಕಾಫಿ ತರಲು ಅಡುಗೆಮನೆಗೆ ಹೋದಳು.
ರತ್ನಾ ತನ್ನ ಗೆಳತಿ ಕವಿತಾಳ ಮನೆಯಲ್ಲಿ ಸುಮಾರು 2 ತಿಂಗಳ ಹಿಂದೆ ಉಷಾಳನ್ನು ಕುಮಾರ್‌ಗೆ ಭೇಟಿ ಮಾಡಿಸಿದ್ದಳು.
42 ವರ್ಷದ ಚಿತ್ರಕಾರ ಕುಮಾರ್ ಕವಿತಾಳ ಕಸಿನ್. ಅವರು ಮದುವೆ ಮಾಡಿಕೊಂಡಿರಲಿಲ್ಲ. ಮನೆಯ ಮೂರನೆಯ ಮಹಡಿಯ ಮೇಲೆ 1 ಕೋಣೆಯಲ್ಲಿದ್ದರು. ಅಲ್ಲಿಯೇ ಅವರ ಸ್ಟುಡಿಯೋ ಕೂಡ ಇತ್ತು.
ಅಂದು ಕುಮಾರ್‌ರವರ ಸ್ಟುಡಿಯೋದಲ್ಲಿ ಪೆನ್ಸಿಲ್‌ನಿಂದ ತಯಾರಿಸಿದ ತನ್ನ ಚಿತ್ರ ಕಂಡು ಉಷಾ ಬೆಚ್ಚಿಬಿದ್ದಳು. ಕುಮಾರ್ ಅದರ ಬಗ್ಗೆ ಹೇಳುತ್ತಾ, “ಉಷಾ 3 ಮಕ್ಕಳೊಂದಿಗೆ ಪಾರ್ಕಿಗೆ ಬಂದಿದ್ದರು. ಮಕ್ಕಳು ಆಟದಲ್ಲಿ ಮಗ್ನರಾಗಿದ್ದರು. ಇವರು ಬೆಂಚ್ ಮೇಲೆ ಕೂತು ಗಾಢಾಲೋಚನೆಯಲ್ಲಿ ಮುಳುಗಿದ್ದರು. ನಾನು ಅವರಿಗೆ ತಿಳಿಯದಂತೆ ಈ ಚಿತ್ರದಲ್ಲಿ ಅವರ ಮುಖದ ವಿಶೇಷ ಭಾವನೆಗಳನ್ನು ಸೆರೆಹಿಡಿಯುವ ಪ್ರಯತ್ನ ಮಾಡಿದೆ,” ಎಂದರು.
“2 ದಿನ ಮೊದಲು ಉಷಾ ಅಕ್ಕನ ಚಿತ್ರವನ್ನು ಇಲ್ಲಿ ನೋಡಿ ನಾನು ಬೆಚ್ಚಿಬಿದ್ದೆ. ನಾನು ಕುಮಾರ್‌ಗೆ ಉಷಾ ಅಕ್ಕನ ಬಗ್ಗೆ ಹೇಳಿದಾಗ ಅವರು ಉಷಾರನ್ನು ಭೇಟಿಯಾಗಲು ಇಚ್ಛಿಸಿದರು. ಅದಕ್ಕೇ ನಾನು ನಿನಗೆ ಫೋನ್ ಮಾಡಿದ್ದು ರತ್ನಾ,” ಎಂದು ಕವಿತಾ ಹೇಳಿದಾಗ ಉಷಾಗೆ ಎಲ್ಲ ಅರ್ಥವಾಯಿತು.
ಕೆಲವು ದಿನಗಳ ನಂತರ ಉಷಾಗೆ ಕವಿತಾ ಮಾರುಕಟ್ಟೆಯಲ್ಲಿ ಸಿಕ್ಕು ತನ್ನ ಮನೆಗೆ ಕಾಫಿಗೆ ಕರೆದುಕೊಂಡು ಹೋದಳು. ತನ್ನ ಮಗನ ಬರ್ಥ್‌ಡೇ ಪಾರ್ಟಿಗೂ ಉಷಾಳನ್ನು ಕರೆದಿದ್ದಳು. ಈ ಎರಡೂ ಸಂದರ್ಭಗಳಲ್ಲಿ ಉಷಾ ಹಾಗೂ ಕುಮಾರ್ ಬಹಳಷ್ಟು ಹರಟಿದ್ದರು.
ಈ ಎರಡು ಭೇಟಿಗಳ ನಂತರ ಕುಮಾರ್ ಪಾರ್ಕ್‌ನಲ್ಲಿ ಹಲವು ಬಾರಿ ಅವಳನ್ನು ಭೇಟಿಯಾಗಿದ್ದರು. ಉಷಾ ಸಂಜೆ ಆಫೀಸಿನಿಂದ ಬಂದ ನಂತರ ತನ್ನ ತಮ್ಮಂದಿರ ಮಕ್ಕಳ ಜೊತೆ ಅಲ್ಲಿಗೆ ಹೋಗುತ್ತಿದ್ದಳು. ಅಲ್ಲೇ ಕುಮಾರ್ ಅವಳ ಮೊಬೈಲ್ ನಂಬರ್‌ತೆಗೆದುಕೊಂಡಿದ್ದರು. ಅವರಿಬ್ಬರೂ ಈಗ ಫೋನ್‌ನಲ್ಲಿಯೂ ಮಾತಾಡುತ್ತಿದ್ದರು.
ಒಂದು ದಿನ ಕವಿತಾ ಮತ್ತು ರತ್ನಾ ಉಷಾಳ ಮುಂದೆ ಕುಮಾರ್‌ರನ್ನು ಮದುವೆಯಾಗುವ ಪ್ರಸ್ತಾಪ ಮಾಡಿದರು. ಆಗ ಅವಳು ಇಬ್ಬರನ್ನೂ ಬೈದಳು, “ನಾನು ಮದುವೆಯಾಗೋದಿದ್ರೆ 10 ವರ್ಷಗಳ ಹಿಂದೇನೇ ಮಾಡಿಕೊಳ್ತಿದ್ದೆ. ಈ ಜಂಜಾಟದಲ್ಲಿ ಸಿಲುಕಲು ನನಗೆ ಎಳ್ಳಷ್ಟೂ ಇಷ್ಟವಿಲ್ಲ. ಇನ್ನು ಮೇಲೆ ನನ್ನ ಮುಂದೆ ಇಂತಹ ಚರ್ಚೆಗಳು ಎಂದಿಗೂ ಬೇಡ,” ಹೀಗೆ ಬೈದ ನಂತರ ಅವಳು ತನ್ನ ರೂಮಿಗೆ ಹೋಗಿಬಿಟ್ಟಿದ್ದಳು.
ಆ ನಂತರ ಉಷಾ ಕುಮಾರ್‌ರನ್ನು ಭೇಟಿಯಾಗುವುದನ್ನು, ಅವರೊಂದಿಗೆ ಮಾತಾಡುವುದನ್ನು ಬಹಳಷ್ಟು ಕಡಿಮೆ ಮಾಡಿದ್ದಳು. ಅವಳು ಪಾರ್ಕಿಗೆ ಹೋಗುವುದನ್ನೂ ನಿಲ್ಲಿಸಿದ್ದಳು. ಫೋನ್ ಮಾಡಿದಾಗ ವ್ಯಸ್ತಳಾಗಿರುವೆನೆಂದು ನೆಪ ಹೇಳಿ ಬೇಗನೇ ಫೋನ್ ಕಟ್ ಮಾಡುತ್ತಿದ್ದಳು.
ಅವಳಿಗೆ ಇಷ್ಟವಿಲ್ಲದಿರುವುದನ್ನು ತಿಳಿಯದೆ ಅವಳ ಇಬ್ಬರೂ ತಮ್ಮಂದಿರು ಮತ್ತು ಅವರ ಹೆಂಡತಿಯರು ಆಗಾಗ ಕುಮಾರ್ ಬಗ್ಗೆ ಮಾತನಾಡುತ್ತಿದ್ದರು. ಕುಮಾರ್‌ರನ್ನು ಕವಿತಾಳ ಮನೆಯಲ್ಲಿ ಅಥವಾ ಪಾರ್ಕ್‌ನಲ್ಲಿ ಅವರುಗಳು ಭೇಟಿಯಾಗುತ್ತಿದ್ದರು. ಕುಮಾರ್‌ರ ಹಸನ್ಮುಖ ಮತ್ತು ನೇರವಾಗಿ ಮಾತಾಡುವ ಸ್ವಭಾವ ಅವರಿಗೆಲ್ಲ ಹಿಡಿಸಿತ್ತು.
ಉಷಾ ಅನೇಕ ಬಾರಿ ಕೋಪ ವ್ಯಕ್ತಪಡಿಸಿದರೂ ಅವರೆಲ್ಲರ ಇಚ್ಛೆಯನ್ನು ಬೇರುಸಹಿತ ನಿರ್ಮೂಲ ಮಾಡಲು ಸಾಧ್ಯವಾಗಿರಲಿಲ್ಲ. ಉಷಾ ಕುಮಾರ್ ಜೊತೆ ಮಾತು ಕಡಿಮೆ ಮಾಡಿರುವ ಬಗ್ಗೆ ಯಾರಿಗೂ ತಿಳಿದಿರಲಿಲ್ಲ.
ಮನೆಯರೆಲ್ಲಾ ಭಾನುವಾರ ಕುಮಾರ್‌ರನ್ನು ಊಟಕ್ಕೆ ಆಹ್ವಾನಿಸಿರುವ ವಿಷಯ ಉಷಾಗೆ ಹಿಂದಿನ ರಾತ್ರಿ ಗೊತ್ತಾಯಿತು.
ಉಷಾ ಕಾಫಿ ಟ್ರೇ ಹಿಡಿದು ಡ್ರಾಯಿಂಗ್ ರೂಮಿಗೆ ಹೋದಾಗ ಅಲ್ಲಿ ಬಹಳ ಗದ್ದಲವಿತ್ತು. ಕುಮಾರ್ ಮೂವರು ಮಕ್ಕಳ ಪೆನ್ಸಿಲ್ ಸ್ಕೆಚ್‌ನ್ನು ಬಹಳ ಮನೋರಂಜಕವಾಗಿ ಮಾಡಿಕೊಡುತ್ತಿದ್ದರು. ಪುಟ್ಟ ರಾಹುಲ್‌ಗೆ ಅವರು ದೊಡ್ಡ ದೊಡ್ಡ ಮೀಸೆಗಳನ್ನು ಇಟ್ಟಿದ್ದರು. ಕಾವ್ಯಾಳನ್ನು ರೆಕ್ಕೆಗಳಿರುವ ಅಪ್ಸರೆಯನ್ನಾಗಿ ಮಾಡಿದ್ದರು. ರಜತ್‌ನ ಮುಖದೊಂದಿಗೆ ಸಿಂಹದ ಮುಂಡವನ್ನು ಜೋಡಿಸಿದ್ದರು.
ಕುಮಾರ್‌ಗೆ ಉಷಾಳ ಕೈಯಿಂದ ಕಾಫಿ ಪಡೆದು ಕುಡಿಯುವುದೇ ಕಷ್ಟಾಗಿತ್ತು. ಮಕ್ಕಳು ಅವರೊಂದಿಗೆ ಇನ್ನಷ್ಟು ಆಡಲು ಬಯಸುತ್ತಿದ್ದರು.
“ವಾಹ್! ಕಾಫಿ ತುಂಬಾ ಚೆನ್ನಾಗಿದೆ. ಸ್ಟ್ರಾಂಗ್ ಆಗಿದೆ. ಹಾಲು ಮತ್ತು ಸಕ್ಕರೆ ಕಡಿಮೆ. ಥ್ಯಾಂಕ್ ಯೂ,” ಮೊದಲ ಗುಟುಕು ಹೀರಿದ ಕೂಡಲೇ ಕುಮಾರ್ ಉಷಾಗೆ ಧನ್ಯವಾದ ಹೇಳಿದರು.
“ನಿಮ್ಮ ಕಾಫಿ ಹೇಗಿರಬೇಕೂಂತ ಒಂದು ಸಾರಿ ಉಷಾ ಅಕ್ಕನ ಬಳಿ ಕವಿತಾ ಹೇಳಿದ್ಲು. ಅದನ್ನು ಜ್ಞಾಪಕದಲ್ಲಿ ಇಟ್ಕೊಂಡು ಅಕ್ಕ ನಿಮ್ಮಿಷ್ಟದಂತೆ ಕಾಫಿ ಮಾಡಿಕೊಟ್ಟಿದ್ದಾರೆ,” ರತ್ನಾ ಹೇಳಿದ್ದು ಕೇಳಿ ಉಷಾ ಮೊದಲು ನಾಚಿಕೊಂಡರೂ ನಂತರ ಗಂಭೀರಳಾದಳು.
“ಏನ್ಮಾಡೋದು, ಕಾಫಿ ನನ್ನ ವೀಕ್‌ನೆಸ್ಸು. ಹಿಂದೆ ನಾನು 1 ದಿನಕ್ಕೆ 10-12 ಕಪ್ ಕಾಫಿ ಕುಡೀತಿದ್ದೆ,” ಕುಮಾರ್ ಹೇಳಿದರು.
“ನೀವು ಯಾವುದೇ ಚಿತ್ರ ಬರೆದರೂ ಅದರಲ್ಲಿ ಮುಖದ ಭಾವನೆಗಳನ್ನು ಚೆನ್ನಾಗಿ ಬಿಂಬಿಸ್ತೀರಿ,” ಆಶಾ ಹೊಗಳಿದಳು.
“ನಾನು ಅಷ್ಟೇನೂ ಉತ್ತಮ ಚಿತ್ರಗಳನ್ನು ರಚಿಸಿಲ್ಲ.”
“ಹಾಗ್ಯಾಕೆ ಹೇಳ್ತಿದ್ದೀರಿ?”
“ನನ್ನ ಚಿತ್ರಗಳು ನೀವು ಹೇಳುವಷ್ಟು ಚೆನ್ನಾಗಿದ್ದಿದ್ದರೆ ಚೆನ್ನಾಗಿ ಮಾರಾಟವಾಗಬೇಕಿತ್ತು. ನನ್ನ ಚಿತ್ರಗಳ ಮಾರಾಟದಿಂದ ತಿಂಗಳಿಗೆ 6-7 ಸಾವಿರ ರೂಪಾಯಿ ಸಿಗುತ್ತೆ. ಬಹಳ ಕಷ್ಟದಿಂದ ಜೀವನ ಸಾಗುತ್ತಿದೆ. ಅದಕ್ಕೆ ಇದುವರೆಗೂ ಸಂಸಾರ ತಾಪತ್ರಯದಲ್ಲಿ ಸಿಲುಕೋ ಧೈರ್ಯ ಮಾಡಲಿಲ್ಲ.”
“ಮದುವೆ ಮಾಡಿಕೊಳ್ಳೋ ಬಗ್ಗೆ ಈಗೇನು ಹೇಳ್ತೀರಿ ನೀವು?” ಆಕಾಶ್ ಕೇಳಿದಾಗ ಎಲ್ಲರೂ ಕುಮಾರ್‌ರನ್ನು ಕುತೂಹಲದಿಂದ ನೋಡಿದರು.
“ಸಂಗಾತಿಯ ಅಗತ್ಯವಂತೂ ಎಲ್ಲ ವಯಸ್ಸಿನ ವ್ಯಕ್ತಿಗಳಿಗೆ ಇರುತ್ತೆ ಆಕಾಶ್. ನನ್ನಂತಹ ವಿಚಿತ್ರ ಕಲಾವಿದನನ್ನು ಯಾರಾದರೂ ಹುಡುಗಿ ಒಪ್ಪಿದರೆ ಮದುವೆ ಆಗಬಹುದು,” ತಮಾಷೆಯ ಧ್ವನಿಯಲ್ಲಿ ಹೇಳಿ ಕಾಫಿ ಕಪ್‌ನ್ನು ಮೇಜಿನ ಮೇಲಿಟ್ಟು ಕುಮಾರ್‌ಮತ್ತೊಮ್ಮೆ ಮಕ್ಕಳೊಂದಿಗೆ ಆಟದಲ್ಲಿ ಮಗ್ನರಾದರು.
ಕುಮಾರ್ ಅಲ್ಲಿಂದ ಸಂಜೆ 5ಕ್ಕೆ ಹೊರಟರು. ಮೂವರು ಮಕ್ಕಳಿಗೂ ಅವರನ್ನು ಕಳುಹಿಸಲು ಇಷ್ಟವೇ ಇರಲಿಲ್ಲ. ದೊಡ್ಡವರೂ ಸಹ ಬಹಳ ಪ್ರೀತಿ, ಗೌರವಗಳಿಂದ ಅವರನ್ನು ಬೀಳ್ಕೊಟ್ಟರು.
ಕುಮಾರ್ ಹೊರಟ ನಂತರ ಉಷಾ ತನ್ನ ರೂಮಿಗೆ ಹೊರಟಳು. ಇದ್ದಕ್ಕಿದ್ದಂತೆ ಅವಳಿಗೆ ಅಳಬೇಕೆನಿಸಿತು. ಆದರೆ ಕಣ್ಣೀರು ಹೊರಬರಲಿಲ್ಲ.
ಸುಮಾರು 15 ನಿಮಿಷಗಳ ಬಳಿಕ ಉಷಾಳ ಇಬ್ಬರೂ ತಮ್ಮಂದಿರು ಅವರ ಹೆಂಡತಿಯರು ಅವಳ ಕೋಣೆಗೆ ಬಂದರು. ಅವರುಗಳ ಗಂಭೀರ ಮುಖಗಳನ್ನು ನೋಡುತ್ತಲೇ ಉಷಾ ಅವರು ಬಂದ ಉದ್ದೇಶವನ್ನು ಅರ್ಥ ಮಾಡಿಕೊಂಡಳು, “ನಾನು ಖಂಡಿತಾ ಮದುವೆ ಆಗಲ್ಲ, ಅದರ ಬಗ್ಗೆ ಪದೇ ಪದೇ ಕೇಳಿ ನನ್ನ ತಲೆ ಕೆಡಿಸಬೇಡಿ,” ಎಂದು ಅವರು ಬಾಯಿ ತೆರೆಯುವ ಮೊದಲೇ ಕಿರುಚಿದಳು.
ಅಜಿತ್ ಅವಳ ಮುಂದೆ ನೆಲದಲ್ಲಿ ಕುಳಿತು ಪ್ರೀತಿಯಿಂದ ಅವಳ ಕೈ ಹಿಡಿದು ಭಾವುಕ ಸ್ವರದಲ್ಲಿ ಹೇಳಿದ, “ಅಕ್ಕಾ, 12 ವರ್ಷದ ಹಿಂದೆ ಅಪ್ಪ ಇದ್ದಕ್ಕಿದ್ದಂತೆ ತೀರಿಕೊಂಡ ಬಳಿಕ ನೀವೇ ನಮಗೆ ಆಸರೆಯಾದ್ರಿ. ನಿಮ್ಮ ಸಂತೋಷ, ಸುಖ ಸೌಲಭ್ಯಗಳನ್ನು ಕಡೆಗಣಿಸಿ ನಮ್ಮನ್ನು ಬೆಳೆಸಿದ್ರಿ. ನಮ್ಮ ಮದುವೆ ಮಾಡಿಸಿದ್ರಿ. ನಿಮ್ಮ ಋಣಾನ ನಾವೆಂದೂ ತೀರಿಸೋಕಾಗಲ್ಲ.”
“ಅರೆ, ಅದು ನನ್ನ ಕರ್ತವ್ಯವಾಗಿತ್ತು. ಅದನ್ನು ಋಣಾಂತ ಯಾಕೆ ಭಾವಿಸ್ತೀಯ? ಇವತ್ತು ನೀವಿಬ್ರೂ ತಮ್ಮಂದಿರು ಸಂತೋಷವಾಗಿ, ಸುಖವಾಗಿ ಇರೋದನ್ನು ನೋಡಿದರೆ ನನಗೆ ಹೆಮ್ಮೆ ಆಗುತ್ತೆ,” ಎಂದು ಉಷಾ ತಮ್ಮನ ತಲೆ ಸವರಿದಳು.
ಆಕಾಶ್ ಗದ್ಗದಿತ ಸ್ವರದಲ್ಲಿ, “ಅಕ್ಕಾ, ನಿಮ್ಮ ಆಶೀರ್ವಾದದಿಂದ ಇಂದು ನಾವು ಇಷ್ಟರ ಮಟ್ಟಿಗೆ ಇದ್ದೀವಿ. ಈಗ ನಿಮ್ಮ ಬದುಕಿನಲ್ಲೂ ಸಂತೋಷ ಹಾಗೂ ಸುಖವನ್ನು ಕೊಡಬೇಕೆಂದಿದ್ದೇವೆ. ದಯವಿಟ್ಟು ಈ ಅವಕಾಶಾನ ನಮ್ಮಿಂದ ಕಿತ್ಕೋಬೇಡಿ,” ಎಂದ.
“ಆಕಾಶ್, ಮದುವೆ ಮಾಡ್ಕೋ ಅಂತ ನನ್ನನ್ನು ಒತ್ತಾಯಿಸಬೇಡ. ನನ್ನ ಮನಸ್ಸಿನಲ್ಲಿ ಈಗ ಮದುವೆಯಾಗೋ ಇಚ್ಛೆಯೇ ಇಲ್ಲ. ಹೊಸ ವಾತಾವರಣದಲ್ಲಿ, ಒಬ್ಬ ಹೊಸ ವ್ಯಕ್ತಿಯೊಂದಿಗೆ, ಹೊಸ ಜೀವನ ಶುರು ಮಾಡೋದನ್ನು ನೆನೆಸಿಕೊಂಡರೇ ಭಯವಾಗುತ್ತೆ,” ಉಷಾ ಹೇಳಿದಳು.
“ಆದರೆ…..”
“ಅಕ್ಕಾ, ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆಯಾಗದಂತೆ ನಾವು ನೋಡ್ಕೋತೀವಿ. ನಾವಿರುವಾಗ ನಿಮಗೆ ಯಾವ ರೀತಿಯ ಕೊರತೆಗಳೂ ಉಂಟಾಗಲ್ಲ,” ರತ್ನಾ ಧೈರ್ಯ ಹೇಳಿದಳು.
“ ಕುಮಾರ್‌ಗೆ ಇನ್ನೂ ಒಂದು ಸ್ವಂತ ಮನೆ ಮಾಡಿಕೊಳ್ಳೋಕೆ ಆಗಲ್ಲಿಲ್ಲಾಂತ ಗೊತ್ತು. ಅದಕ್ಕೆ ನಮ್ಮ ಹೊಸ ಫ್ಲಾಟ್‌ನ್ನು ನಿಮ್ಮಿಬ್ಬರ ಹೆಸರಿಗೆ ಮಾಡಿಕೊಡ್ತೀನಿ,” ಅಜಿತ್‌ನ ಘೋಷಣೆ ಕೇಳಿ ಉಷಾ ಬೆಚ್ಚಿಬಿದ್ದಳು.
ಆಕಾಶ್ ತನ್ನ ಮನದಾಸೆ ವ್ಯಕ್ತಪಡಿಸಿದ, “ಅಣ್ಣನ ಗಿಫ್ಟ್ ಆಗಿರೋ ಫ್ಲ್ಯಾಟ್‌ನಲ್ಲಿ ಸಕಲ ಸೌಕರ್ಯಗಳನ್ನೂ ಒದಗಿಸಿಕೊಡೋದು ನನ್ನ ಜವಾಬ್ದಾರಿ. ಅದನ್ನು ಸಂತೋಷದಿಂದ ಹೊತ್ತುಕೊಳ್ತೀನಿ. ಇದು ನನ್ನ ಪ್ರಾಮಿಸ್.”
“ನಿಮಗೆ ಬೇಕಾದ ಎಲ್ಲಾ ಒಡವೆಗಳನ್ನು ನಾನು ಮಾಡಿಸಿಕೊಡ್ತೀನಿ,” ಆಶಾ ಹೇಳಿದಳು.
“ನಿಮಗೆ ಹೊಸ ಸೀರೆಗಳು, ಡ್ರೆಸ್, ಕಿಟಕಿ ಪರದೆಗಳು, ಕಾರ್ಪೆಟ್‌ಗಳು, ಕುಮಾರ್‌ಗೆ ಬೈಕ್, ಹೊಸ ಬಟ್ಟೆಗಳು ಎಲ್ಲವನ್ನೂ ಗಿಫ್ಟ್ ಕೊಡ್ತೀವಿ. ಅಕ್ಕಾ ನೀವು ಹೂಂ ಅನ್ನಿ ಸಾಕು,” ರತ್ನಾ ಕಣ್ಣೀರು ಸುರಿಸುತ್ತಾ ಕೈಜೋಡಿಸಿ ಪ್ರಾರ್ಥಿಸಿದಾಗ ಉಷಾ ಎದ್ದು ನಿಂತು ಅವಳನ್ನು ಅಪ್ಪಿಕೊಂಡಳು.
“ಅಕ್ಕಾ, ಹೂಂ ಅನ್ನಿ,” ಉಷಾ ಯಾರ ಕಡೆ ತಿರುಗಿದರೂ ಅಲ್ಲಿ ಕೈ ಜೋಡಿಸಿ ಪ್ರಾರ್ಥಿಸುವ ಮುಖಗಳೇ ಕಾಣುತ್ತಿದ್ದವು.
“ಆಯ್ತು. ಆದರೆ ನನಗೆ ಇಷ್ಟೊಂದು ಗಿಫ್ಟ್ ಗಳು ಬೇಡ. ನೀವಿಬ್ರೂ ಕೋಟ್ಯಧಿಪತಿಗಳೇನೂ ಅಲ್ಲ,” ಕೊನೆಗೂ ಮೆಲುದನಿಯಲ್ಲಿ ಉಷಾ ತನ್ನ ಒಪ್ಪಿಗೆ ಕೊಟ್ಟಳು.
“ಹುರ್ರೇ!” ಅವರು ನಾಲ್ವರೂ ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸಿದರು.
ಉಷಾಳ ಮನದಲ್ಲಿದ್ದ ಒತ್ತಡದ ದೊಡ್ಡ ಹೊರೆ ಥಟ್ಟನೆ ದೂರಾಯಿತು. ತನ್ನ ಬದುಕು ಸುಂದರವಾಗಿದೆ ಅನ್ನಿಸತೊಡಗಿತು.