ಇನ್ನರ್‌ವೇರ್ ಅಥವಾ ಲಾಂಜರಿಯ ಬಗ್ಗೆ ಮಾತನಾಡುವಾಗ, ವಿಶ್ವದಲ್ಲಿ ಕಳೆದ ಹಲವು ವರ್ಷಗಳಿಂದ ಹೊಸತೊಂದು ಕ್ರಾಂತಿಯೇ ಆಗಿದೆ ಎನ್ನಬಹುದು. ಬಾಡಿಕೇರ್, ಲಿಬ್, ಗ್ರೋವರ್‌ಸನ್ಸ್ ಪ್ಯಾರಿಸ್ ಬ್ಯೂಟಿ, ಜಾಕಿ, ಲಕ್ಸ್, ಫೀಲಿಂಗ್ಸ್, ವಿ.ಐ.ಪಿ. ಇತ್ಯಾದಿ ಕಂಪನಿಗಳು ಆಧುನಿಕ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಮಿಗಿಲಾದ ವಿಶೇಷ ಡಿಸೈನಿನ ಲೇಡೀಸ್ ಅಂಡರ್ ಗಾರ್ಮೆಂಟ್ಸ್ ನ್ನು ಪ್ರಸ್ತುತಪಡಿಸುತ್ತಿವೆ.
ಇಲ್ಲಿಯವರೆಗೂ ಕೇವಲ ಕಪ್ಪು, ಬಿಳಿ, ಕೆಂಪು ಇತ್ಯಾದಿ ಬಣ್ಣಗಳಿಗಷ್ಟೇ ಸೀಮಿತವಾಗಿದ್ದ ಬ್ರಾ, ಪ್ಯಾಂಟಿಗಳು ಈಗ ಎಲ್ಲಾ ಬಗೆಯ ಬಣ್ಣ, ಡಿಸೈನ್‌ಗಳಲ್ಲೂ ಲಭಿಸುತ್ತಿವೆ. ಈಗ ಪ್ಲೇನ್ ಜೊತೆ ಪ್ರಿಂಟೆಡ್ ಡಿಸೈನ್‌ಗಳಲ್ಲಿ ಪೋಲ್ಕಾ ಡಾಟ್ಸ್, ಅನಿಮಲ್ ಪ್ರಿಂಟ್ಸ್, ಚಿಕನ್‌ಕಾರಿ, ಕಶೀದಾಕಾರಿ, ಸೀಕ್ವೆನ್ಸ್ ಕೆಲಸಗಳಿಂದ ಸುಸಜ್ಜಿತಗೊಂಡಿರುವ ಬ್ರಾ ಲೇಸ್ ವರ್ಕ್‌ನಿಂದ ಮತ್ತಷ್ಟು ಶೋಭಿಸುತ್ತಿವೆ.
ಫ್ಯಾಬ್ರಿಕ್ ದೃಷ್ಟಿಯಿಂದ ನೋಡಿದರೆ ಅದರಲ್ಲೂ ಎಷ್ಟೋ ವಿಭಿನ್ನತೆಗಳಿರುತ್ತವೆ. ಪ್ರತಿಯೊಂದು ಫ್ಯಾಬ್ರಿಕ್ ಎಲ್ಲರಿಗೂ ಸೂಟ್ ಆಗುವುದಿಲ್ಲ. ಹಾಗಾಗಿಯೇ ಬ್ರ್ಯಾಂಡೆಡ್‌ಕಂಪನಿಗಳು ಸಾಧ್ಯವಾದಷ್ಟೂ ಎಲ್ಲಾ ಬಗೆಯ ಮಹಿಳೆಯರಿಗೂ ಚೆನ್ನಾಗಿ ಒಪ್ಪುವಂಥ, ಅವರ ಅಗತ್ಯಗಳು, ದೈಹಿಕ ಕಂಫರ್ಟ್‌ಗೆ ಸೂಕ್ತವಾಗುವಂಥ ಇನ್ನರ್‌ವೇರ್‌ಗಳನ್ನೇ ಸಿದ್ಧಪಡಿಸುತ್ತವೆ.
ಫ್ಯಾಬ್ರಿಕ್ ಆರಿಸುವಾಗ ನೆನಪಿಡಬೇಕಾದ ಮತ್ತೊಂದು ಅಂಶವೆಂದರೆ, ಬೇರೆ ಮಹಿಳೆಯರಿಗೆ ಸೂಟ್ ಆದಂತಹ ಒಳವಸ್ತ್ರಗಳು ನಿಮಗೂ ಸೂಟ್ ಆಗಲೇಬೇಕು ಎಂದೇನಿಲ್ಲ. ಯಾವುದನ್ನು ಧರಿಸಿ ನಿಮ್ಮ ಡ್ರೆಸ್ ಶೇಪ್ ನೀಟಾಗಿ ಬರುತ್ತದೋ ಅದೇ ಫ್ಯಾಬ್ರಿಕ್ ನಿಮಗೆ ಹೆಚ್ಚು ಉಪಯುಕ್ತ ಎಂದರ್ಥ.
ಲಾಂಜರಿಯಲ್ಲಿ ಬಳಕೆಯಾಗುವ ಫ್ಯಾಬ್ರಿಕ್ಸ್
ಕಾಟನ್ : ಹತ್ತಿಗಿಂತಲೂ ಉತ್ತಮವಾದ ಫ್ಯಾಬ್ರಿಕ್ ಮತ್ತೊಂದಿಲ್ಲ. ಇದು ಬೇಸಿಗೆಯಲ್ಲಿ ಬೆವರನ್ನು ಹೀರಿಕೊಳ್ಳುತ್ತದೆ ಹಾಗೂ ಗಾಳಿಯಾಡಲೂ ಅನುಕೂಲಕರವಾಗಿದೆ. ಸ್ಕಿನ್ ಅಲರ್ಜಿ ಉಳ್ಳವರಿಗೆ ಇದು ಅತಿ ಸೂಕ್ತ. ಬೇಸಿಗೆ, ಮಳೆಗಾಲದಲ್ಲಿ ಬ್ರೆಸ್ಟ್ ನಡುವೆ ಅಥವಾ ಕೆಳಭಾಗದಲ್ಲಿ ಉಂಟಾಗುವ ಸ್ಕಿನ್ ಆಲರ್ಜಿಗೆ ಬೆವರಿನ ಸಮಸ್ಯೆಯಿಂದ ಇದು ಬಹಳ ಹಿತಕಾರಿ.
ಪಾಲಿಯೆಸ್ಟರ್ ಕಾಟನ್ : ಕಾಟನ್ ಜೊತೆ ಸಿಂಥೆಟಿಕ್ ಯಾರ್ನ್ ಬೆರೆಸಿ ಈ ಫ್ಯಾಬ್ರಿಕ್ ತಯಾರಿಸಲಾಗುತ್ತದೆ. ಇದು ಹತ್ತಿಯ ವಸ್ತ್ರಕ್ಕಿಂತಲೂ ಬಹಳ ಸಾಫ್ಟ್ ಆಗಿರುತ್ತದೆ. ಮಳೆಗಾಲ, ಚಳಿಗಾಲಗಳಲ್ಲಿ ಈ ವಸ್ತ್ರದ ಬ್ರಾಗಳು ಬೇಗನೆ ಒಣಗುತ್ತವೆ. ಆದರೆ ಸ್ಕಿನ್‌ಅಲರ್ಜಿ ಇರುವವರು ಇದನ್ನು ಬಳಸಬಾರದು.
ಲೈಕ್ರಾ : ಈ ಯಾರ್ನ್‌ನಿಂದ ತಯಾರಾದ ಬ್ರಾ, ಬಾಡಿಯ ಶೇಪ್‌ಗೆ ಬಿಲ್‌ಕುಲ್ ಫಿಟ್ ಎನಿಸುತ್ತದೆ. ಇದನ್ನು ಧರಿಸುವುದರಿಂದ ದೇಹದ ಉಬ್ಬು ತಗ್ಗುಗಳು ಎದ್ದು ಕಾಣುತ್ತವೆ. ಫಿಗರ್ ಬಲು ನಾಜೂಕಾಗಿ ಕಣ್ಸೆಳೆಯುಂತಿರುತ್ತದೆ. ಆದರೆ ಹೆಚ್ಚು ಸಣ್ಣ ಇರುವ ಮಹಿಳೆಯರು ಈ ಫ್ಯಾಬ್ರಿಕ್‌ನ ಬ್ರಾ ಧರಿಸಬಾರದು.
ಹೌಝರಿ ಯಾರ್ನ್ : ಈ ಯಾರ್ನ್ ಬಲು ಮೃದು ಹಾಗೂ ಸಾಫ್ಟ್ ಆಗಿದ್ದು ಜೊತೆಗೆ ಸ್ಟ್ರೆಚೆಬಲ್ ಕೂಡ. ಇದು ಹತ್ತಿಯ ಆಧುನಿಕ ರೂಪವಾಗಿದೆ. ಚಳಿಗಾಲಕ್ಕೆ ಇದರ ಬೆಚ್ಚನೆಯ ಅನುಭವ ಹೆಚ್ಚಿನ ಮುದ ನೀಡುತ್ತದೆ.
ನೈಲಾನ್ : ನೈಲಾನ್ ಬ್ರಾ ಜಗ್ಗದ ಗಟ್ಟಿತನಕ್ಕೆ ಹೆಸರುವಾಸಿ. ಆದರೆ ಇದು ಬೇಸಿಗೆಗೆ ಖಂಡಿತಾ ಕೂಡದು. ಇತ್ತೀಚಿನ ದಿನಗಳಲ್ಲಿ ನೆಟ್ ಹಾಗೂ ನೈಲಾನ್‌ನ್ನು ಬೆರೆಸಿ, ದೊಡ್ಡ ಕಂಪನಿಗಳು ಅಂಡರ್ ವೈರ್ಡ್ ಬ್ರಾಗಳನ್ನು ತಯಾರಿಸುತ್ತಿವೆ, ಇವು ಜೋತುಬಿದ್ದ ಸ್ತನಗಳನ್ನು ಎತ್ತಿಹಿಡಿಯುವುದರಲ್ಲಿ ಪೂರಕ. ಆದರೆ ಇದು ಮಳೆಗಾಲ, ಚಳಿಗಾಲಕ್ಕೆ ಮಾತ್ರ ಸೀಮಿತ.
ಸಿಲ್ಕ್ : ಇದರ ಹೆಸರಿನಿಂದಲೇ ಇದು ಬಲು ಸಾಫ್ಟ್ ಯಾರ್ನ್‌ನಿಂದ ತಯಾರಾದುದು ಎಂದು ತಿಳಿಯುತ್ತದೆ. ನವ ವಧುವಿಗೆ ಈ ತರಹದ ಸಿಲ್ಕ್ ಇನ್ನರ್‌ವೇರ್ ಬಲು ಸೆಕ್ಸೀ ಲುಕ್ಸ್ ನೀಡುತ್ತವೆ. ಇವುಗಳ ಮೇಂಟೆನೆನ್ಸ್ ತುಸು ಕಷ್ಟ. ಇದು ದುಬಾರಿಯಾದರೂ ತರುಣಿಯರ ಮೊದಲ ಆಯ್ಕೆಯಾಗಿದೆ.
ಮೈಕ್ರೋಫೈಬರ್ : ಇದು ನಿಜಕ್ಕೂ ಅತ್ಯಾಧುನಿಕ ಕೊಡುಗೆಯೇ ಸರಿ. ಈ ಫ್ಯಾಬ್ರಿಕ್ ಬಿದಿರಿನ ನಾಜೂಕಾದ ಎಳೆಗಳೊಂದಿಗೆ ಬೆರೆತು ತಯಾರಾದುದು. ಯಾವ ಕಂಪನಿ ಇದನ್ನು ಬೇರೆ ಯಾರ್ನ್ ಜೊತೆ ಎಷ್ಟು ಪ್ರಮಾಣದಲ್ಲಿ ಬೆರೆಸುತ್ತವೆ ಎಂಬುದು, ಆಯಾ ಕಂಪನಿಗಳನ್ನು ಅವಲಂಬಿಸಿದೆ. ಈ ಫ್ಯಾಬ್ರಿಕ್ ಎಲ್ಲಾ ಕಡೆಯಿಂದಲೂ ಸ್ಟ್ರೆಚೆಬಲ್, ಜೊತೆಗೆ ಇದರಲ್ಲಿ ಧಾರಾಳ ಗಾಳಿಯಾಡುತ್ತದೆ. ಈ ಫ್ಯಾಬ್ರಿಕ್ ಎಲ್ಲಾ ವಯಸ್ಸಿನ ಸ್ತ್ರೀಯರಿಗೂ ಒಪ್ಪುತ್ತದೆ, ಆದರೆ ದುಬಾರಿ ಎಂಬುದು ನಿಜ. ಒಗೆದ ನಂತರ ಇದು ಎಂದೂ ಶ್ರಿಂಕ್‌ಆಗುವುದಿಲ್ಲ.
– ನಿರ್ಮಲಾ
ಲಾಂಜರಿಯ ಸಂರಕ್ಷಣೆ
ಹೊಸ ಬ್ರಾ ಪ್ಯಾಂಟಿ ಧರಿಸುವ ಮೊದಲು, ಅಗತ್ಯವಾಗಿ 2-3 ತಾಸು ನೀರಲ್ಲಿ ನೆನೆಸಿ, ನಂತರ ನೆರಳಲ್ಲಿ ಒಣಗಿಸಬೇಕು. ಇದರ ಮೇಲೆ ತುಸು ರಾಸಾಯನಿಕಗಳು ಮೆತ್ತಿರುವುದರಿಂದ ಹೀಗೆ ಮಾಡುವುದು ಒಳ್ಳೆಯದು, ಇಲ್ಲದಿದ್ದರೆ ಚರ್ಮಕ್ಕೆ ಹಾನಿ ತಪ್ಪದು.
ಬ್ರಾ ಪ್ಯಾಂಟಿಗಳನ್ನು ಎಂದೂ ವಾಷಿಂಗ್ ಮೆಶಿನ್‌ಗಳಲ್ಲಿ ಒಗೆಯಬೇಡಿ. ಇದರಿಂದ ಅವುಗಳ ಶೇಪ್ ಹಾಳಾಗಬಹುದು.
ಇನ್ನು ಒಗೆಯಲು ಡೆಲಿಕೇಟ್ ಸಾಬೂನು ಅಂದ್ರೆ ಸಾಫ್ಟ್ ಬಟ್ಟೆಗಳಿಗಿರುವ ಸೋಪ್ ಸಲ್ಯೂಶನ್ ಬಳಸುವುದು ಲೇಸು.
ಒಗೆದು ಜಾಲಿಸಿದ ನಂತರ ಇವನ್ನು ಹಿಂಡಬೇಡಿ. ಬದಲಾಗಿ ನೀಟಾಗಿ ಒದರಿ, ನೆರಳಲ್ಲಿ ಒಣಗಿಸಿ. ಬಣ್ಣಬಣ್ಣದ ಬ್ರಾಗಳನ್ನು ಎಂದೂ ಬಿಸಿಲಿಗೆ ಹರಡಬಾರದು.
ಇವನ್ನು ಒಣಗಿಸುವಾಗ, ಕ್ಲಿಪ್ ಹಾಕುವುದಿದ್ದರೆ ಅದನ್ನು ಕಪ್ ಭಾಗದಲ್ಲಿ ಹಾಕಬಾರದು, ಸ್ಟ್ರಾಪ್ಸ್ ಭಾಗದಲ್ಲಿ ಹಾಕಬೇಕು.
ಒಮ್ಮೆ ಧರಿಸಿದ ನಂತರ ಬ್ರಾ ಪ್ಯಾಂಟಿಗಳನ್ನು ಮಾರನೇ ದಿನ ಅಗತ್ಯ ಬದಲಿಸಬೇಕು. ಬೇಸಿಗೆಯಲ್ಲಿ 2 ಸಲ ಬದಲಿಸಿದರೆ ಒಳ್ಳೆಯದು.