ನಾನು ಎಂದೂ ಏನನ್ನೂ ಬರೆಯಲಿಲ್ಲ. ನನಗೆ ಬರೆಯಲು ಬರುವುದಿಲ್ಲವೆಂದಲ್ಲ. ಆದರೆ ನಾನು ಎಂದೂ ಅದು ಅಗತ್ಯವೆಂದು ತಿಳಿಯಲಿಲ್ಲ. ನಾನೆಂದೂ ಯಾವ ವಿಷಯವನ್ನೂ ಹೃದಯಕ್ಕೆ ತೆಗೆದುಕೊಳ್ಳುವುದಿಲ್ಲ. ಬರೆಯುವುದು ವ್ಯರ್ಥವೆಂದು ನನ್ನ ಭಾವನೆ. ಏಕೆ ಬರೆಯಲಿ ಎಂದು ಯೋಚಿಸುತ್ತೇನೆ. ನನ್ನ ಆಲೋಚನೆಯನ್ನು ಬೇರೆಯವರಿಗೇಕೆ ತಿಳಿಸಲಿ. ನನ್ನ ನಂತರ ನನ್ನ ಬರಹಗಳನ್ನು ಓದಿ ಜನ ಅದಕ್ಕೆ ಏನೇನು ಅರ್ಥಗಳನ್ನು ಕಟ್ಟುತ್ತಾರೋ? ನಾನು ಜನ ಹೇಳುವುದರ ಬಗ್ಗೆ ಹೆಚ್ಚು ಚಿಂತಿಸುತ್ತೇನೆ. ನನ್ನ ಬಗ್ಗೆ ಚಿಂತಿಸುವುದು ಕಡಿಮೆ.
ಜನ ಕೆಲವೊಮ್ಮೆ ಡೈರಿ ಬರೆಯುತ್ತಾರೆ. ಕೆಲವರು ಪ್ರತಿದಿನ ಬರೆದರೆ, ಇನ್ನು ಕೆಲವರು ಘಟನೆ ನಡೆದ ಆಧಾರದ ಮೇಲೆ ಬರೆಯುತ್ತಾ ಹೋಗುತ್ತಾರೆ. ನಾನು ನನ್ನ ಬಗ್ಗೆ ಯಾರಿಗೂ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ ಕಳೆದ 1 ವಾರದಿಂದ ನಾನು ಡಾ. ಪ್ರಸಾದ್‌ರನ್ನು ಭೇಟಿಯಾಗಿ ಬಂದಾಗಿನಿಂದ ಒಂದು ರೀತಿಯ ವಿಚಿತ್ರ ವ್ಯಾಕುಲತೆ ನನ್ನಲ್ಲಿ ಮನೆ ಮಾಡಿದೆ. ಪತ್ನಿ ರಚಿತಾಗೆ ಏನಾದರೂ ಹೇಳಲು ಬಯಸುತ್ತೇನೆ. ಆದರೆ ಹೇಳಲಾಗುವುದಿಲ್ಲ. ಅವಳಂತೂ ಮೊದಲಿನಿಂದಲೇ ದುಃಖಿಯಾಗಿದ್ದಾಳೆ. ಮಾತುಮಾತಿಗೂ ಕಣ್ಣೀರು ತುಂಬಿಕೊಳ್ಳುತ್ತಾಳೆ. ಅವಳಿಗೆ ಇನ್ನಷ್ಟು ದುಃಖ ಕೊಡಲು ಇಷ್ಟವಿಲ್ಲ. ಮಕ್ಕಳು ಗಿರೀಶ್ ಮತ್ತು ಸುರೇಶ್ ಸದಾ ನನ್ನ ಸೇವೆ ಮಾಡುತ್ತಿರುತ್ತಾರೆ. ಅವರಿಗೆ ಓದಲೂ ಪುರಸತ್ತಿಲ್ಲ. ನಾನು ಅವರ ತಲೆಯನ್ನು ಇನ್ನಷ್ಟು ಕೆಡಸಲು ಬಯಸುವುದಿಲ್ಲ. ನಾನು ಏನಾದರೂ ವಸ್ತು ಬೇಕೆಂದು ಕೇಳಿದರೆ ಕೂಡಲೇ ಮಾರ್ಕೆಟ್‌ಗೆ ಹೋಗಿಯಾದರೂ ಅದನ್ನು ತಂದು ನನಗೆ ಕೊಡುತ್ತಾರೆ. ನಾನೆಷ್ಟು ಸ್ವಾರ್ಥಿಯಾಗಿದ್ದೇನೆ. ಇತರರ ದುಃಖ, ನೋವು ಅರ್ಥ ಮಾಡಿಕೊಳ್ಳಲು ಬಯಸುವುದಿಲ್ಲ. ನನ್ನ ಈ ಮನೋವೃತ್ತಿಗೆ ಅಂಕುಶ ಹಾಕಿಕೊಳ್ಳಲು ಬಯಸುತ್ತೇನೆ. ಆದರೆ ಆಗುತ್ತಿಲ್ಲ.“ಅಪ್ಪಾ, ನೀವು ಯೋಚಿಸ್ಬೇಡಿ. ಬೇಗನೆ ಗುಣವಾಗ್ತೀರಿ,” ಎಂದು ಗಿರೀಶ್ ತನ್ನ ಕೈಯನ್ನು ನನ್ನ ತಲೆಯ ಮೇಲಿಟ್ಟ. ಹಾಗೆ ಹೇಳಿ ಅವನು ಯಾರಿಗೆ ಸಾಂತ್ವನ ನೀಡುತ್ತಿದ್ದಾನೆ? ನನಗೋ ಅಥವಾ ತನಗೋ? ಅವನಿಗೆ ಏನು ಹೇಳಲಿ? ಮೊಬೈಲ್‌ನಲ್ಲಿ ಇನ್ನೊಬ್ಬ ಡಾಕ್ಟರ್‌ನ್ನು ಕನ್ಸಲ್ಟ್ ಮಾಡುತ್ತಾನೆ ಅಥವಾ ನೆಟ್‌ನಲ್ಲಿ ಸರ್ಚ್ ಮಾಡುತ್ತಾನೆ. ಮಕ್ಕಳು 1-1 ಉಸಿರಿನ ಲೆಕ್ಕವನ್ನೂ ಇಡುತ್ತಾರೆ. ಎಲ್ಲೂ ಏನೂ ಕಡಿಮೆಯಾಗಬಾರದು. ನಾನು ಹಾಸಿಗೆಯ ಮೇಲೆ ಮಲಗಿ ಅವರೆಲ್ಲರ ಗಡಿಬಿಡಿ, ಹತಾಶೆ, ನಿರಾಶೆಗಳನ್ನು ಅವರಿಗೆ ತಿಳಿಯದಂತೆ ನೋಡುತ್ತಿರುತ್ತೇನೆ. ಅವರ ಕಣ್ಣುಗಳಲ್ಲಿ ಭಯ ಇದೆ. ಈಗ ನನಗೂ ಭಯವಾಗುತ್ತಿದೆ. ನಾನೂ ಯಾರಿಗೂ ಏನೂ ಹೇಳಲ್ಲ. ಡಾ. ಅರ್ಜುನ್, ಡಾ. ಸುನಿಲ್ ಮತ್ತು ಡಾ. ಅನಂತ್ ಎಲ್ಲರದೂ ಒಂದೇ ಅಭಿಪ್ರಾಯ. ಇಡೀ ಶರೀರದಲ್ಲಿ ವೈರಸ್ ಹರಡಿಬಿಟ್ಟಿದೆ. ಲಿವರ್ ಡ್ಯಾಮೇಜ್ ಆಗಿದೆ. ಇನ್ನು ಬದುಕಿನ ದಿನಗಳನ್ನು ಎಣಿಸುವುದು ಬಾಕಿ. ಡಾಕ್ಟರ್ ಫೈಲನ್ನು ತಿರುವುತ್ತಾರೆ, ಪ್ರಿಸ್ಕ್ರಿಪ್ಶನ್ ಓದುತ್ತಾರೆ ಮತ್ತು ಈ ಔಷಧ ಬಿಟ್ಟು ಬೇರೆ ಔಷಧ ಇಲ್ಲವೆನ್ನುತ್ತಾರೆ.
ಅದನ್ನು ಕೇಳಿ ನನಗೆ ಉಸಿರು ಕಟ್ಟಿದಂತಾಯಿತು. ನನಗಿನ್ನು ಸ್ವಲ್ಪ ಸಮಯ ಮಾತ್ರ ಉಳಿದಿದೆ ಅನ್ನಿಸಿತು. ಈಗ ನನ್ನೊಳಗೆ ಬದುಕಬೇಕೆಂಬ ಅದಮ್ಯ ವಾಂಛೆ ಮೊಳೆಯತೊಡಗಿತು. ನನ್ನ ನಂತರ ನನ್ನ ಹೆಂಡತಿ ಮಕ್ಕಳ ಗತಿಯೇನು? ರಚಿತಾ ಒಬ್ಬಳೇ ಮಕ್ಕಳನ್ನು ಹೇಗೆ ಸಂಭಾಳಿಸುತ್ತಾಳೆ? ಮಕ್ಕಳ ಓದು ಹೇಗೆ ಮುಗಿಯುತ್ತದೆ? ಮನೆಯ ಖರ್ಚು ಹೇಗೆ ಪೂರೈಕೆಯಾಗುತ್ತದೆ? 3-4 ಲಕ್ಷ ರೂ. ಅಂತೂ ಮನೆಯಲ್ಲಿದೆ. ಆದರೆ ಅದು ಎಲ್ಲಿಯವರೆಗೆ ಬರುತ್ತದೆ? ಅದು ಡಾಕ್ಟರುಗಳ ಫೀಸ್‌ಗೆ ಮತ್ತು ನನ್ನ ಅಂತಿಮ ಸಂಸ್ಕಾರಕ್ಕೆ ಸರಿಹೋಗುತ್ತದೆ. ಹಣ ಬರುವ ಬೇರೆ ಯಾವ ಮಾರ್ಗಗಳೂ ಇಲ್ಲ.
ರಚಿತಾ ಕೆಲಸಕ್ಕೆ ಸೇರುತ್ತೇನೆಂದು ಎಷ್ಟು ಬಾರಿ ಕೇಳಿದ್ದಳು? ಆದರೆ ಪುರುಷ ಸಹಜ ಅಹಂನಿಂದ ನಾನು ಅದನ್ನು ತಳ್ಳಿಹಾಕಿದ್ದೆ. ನಿನಗೇನು ಕಡಿಮೆಯಾಗಿದೆ? ನಾನು ಎಲ್ಲರ ಅಗತ್ಯಗಳನ್ನೂ ಆರಾಮವಾಗಿ ಪೂರೈಸಬಲ್ಲೆ ಎಂದಿದ್ದೆ. ಆದರೆ ನಾನಿಲ್ಲದಾಗ ರಚಿತಾ ಒಬ್ಬಳೇ ಎಲ್ಲವನ್ನೂ ಹೇಗೆ ಸಂಭಾಳಿಸುತ್ತಾಳೆ? ಮನೆಯಲ್ಲಿ ಮತ್ತು ಹೊರಗೆ ಸಂಭಾಳಿಸುವುದು ಎಷ್ಟು ಕಷ್ಟ? ಈಗ ನಾನೇನು ಮಾಡಲಿ? ಅವಳಿಗೆ ಹೇಗೆ ಅರ್ಥ ಮಾಡಿಸಲಿ? ನಾನು ಸತ್ತ ನಂತರ ಹತಾಶೆಯಿಂದ ಅವಳು ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಸಾಕು. ಇಲ್ಲ, ಅವಳು ಹಾಗೆ ಮಾಡುವುದಿಲ್ಲ. ಅವಳು ಅಷ್ಟು ವೀಕ್ ಅಲ್ಲ. ನಾನು ಅರ್ಥಹೀನ ವಿಷಯಗಳನ್ನು ಯೋಚಿಸ್ತಿದ್ದೀನಿ. ಆದರೆ ರಚಿತಾಗೆ ಏನಾದರೂ ಹೇಳೋಣಾಂದ್ರೆ ನನ್ನ ಬಳಿ ಶಬ್ದಗಳೇ ಇಲ್ಲ.
ಬಂಧುಗಳು ಒಬ್ಬೊಬ್ಬರೇ ಬಂದು ನೋಡಿ ಹೋಗುತ್ತಿದ್ದಾರೆ. ಕೆಲವರು ನನಗೆ ಸಮಾಧಾನ ಹೇಳುತ್ತಾರೆ. ರಚಿತಾ ಮತ್ತು ಗಿರೀಶ್ ನನ್ನನ್ನು ಡಾಕ್ಟರುಗಳಿಗೆ ತೋರಿಸೋಕೆ ಊರೂರು ಅಲೆಯುತ್ತಿದ್ದಾರೆ. ಆದಾಯದ ಎಲ್ಲ ಮೂಲಗಳೂ ಬಂದ್ ಆಗಿವೆ. ಅವರೆಲ್ಲರೂ ನನ್ನನ್ನು ಎಷ್ಟೇ ಬೆಲೆ ತೆತ್ತಾದರೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ನಾನು ಡಾಕ್ಟರ್‌ಗಳ ಮಾತನ್ನು ಕೇಳುತ್ತಿದ್ದೇನೆ ಹಾಗೂ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಆದರೆ ಅರ್ಥವಾಗುತ್ತಿಲ್ಲವೆಂದು ತೋರಿಸಿಕೊಳ್ಳುತ್ತಿದ್ದೇನೆ.
ರಚಿತಾ ಮತ್ತು ಗಿರೀಶನ ಎದುರು ಅವರಿಗೆ ಧೈರ್ಯ ಹೇಳಲು, “ಡಾಕ್ಟರ್ ಏನೇನೋ ಹೇಳ್ತಾರೆ. ನಾನು ಚೆನ್ನಾಗಿದ್ದೀನಿ. ಲಿವರ್‌ಹಾಳಾಗಿದ್ದರೆ ಊಟ ಹೇಗೆ ಜೀರ್ಣ ಆಗ್ತಿದೆ? ನೀವೆಲ್ಲ ಯೋಚನೆ ಮಾಡಬೇಡಿ. ನಾನು ಕೆಲವು ದಿನಗಳಲ್ಲಿ ಸರಿಹೋಗ್ತೀನಿ. ನೀವು ಡಾಕ್ಟರ್‌ಗಳ ಮಾತನ್ನು ನಂಬಬೇಡಿ. ನಾನೂ ನಂಬಲ್ಲ,” ಎನ್ನುತ್ತೇನೆ.
ನಾನು ನನಗೇ ಅರ್ಥ ಮಾಡಿಸುತ್ತಿದ್ದೀನೋ ಅಥವಾ ಅವರಿಗೆ ಅರ್ಥ ಮಾಡಿಸುತ್ತಿದ್ದೀನೋ ತಿಳಿಯಲಿಲ್ಲ. 5 ವರ್ಷಗಳ ಹಿಂದೆ ಹೇಳಿದ ಎಲ್ಲ ಕಾರಣಗಳನ್ನು ಡಾಕ್ಟರುಗಳ ಬುರುಡೆ ಎಂದು ಹೇಳುತ್ತಾ ಹೆಂಡತಿ ಮಕ್ಕಳಿಗೆ ಮೋಸ ಮಾಡಿದ್ದೇನೆ. ಆದರೆ ನನಗೆ ಮೋಸ ಮಾಡಿಕೊಳ್ಳಲಾಗುತ್ತಿಲ್ಲ.
ಬಹಳ ಕಡಿಮೆ ಮಂದಿ ಎಚ್‌ಐವಿ ಪಾಸಿಟಿವ್ ಆಗಿರುತ್ತಾರೆ. ನನಗೂ ಎಚ್‌ಐವಿ ಪಾಸಿಟಿವ್ ರಿಪೋರ್ಟ್ ಏಕೆ ಬಂತೆಂದು ತಿಳಿಯಲಿಲ್ಲ.
ರಚಿತಾ ಆ ಬಗ್ಗೆ ಕೇಳಿದಾಗ ಡಾಕ್ಟರ್ ಸೋಂಕಿನಿಂದ ಕೂಡಿದ ರಕ್ತ ಪಡೆದದ್ದಕ್ಕೆ ಅಥವಾ ಸೋಂಕಿಗೊಳಗಾದ ಸೂಜಿಯನ್ನು ಉಪಯೋಗಿಸಿದ್ದಕ್ಕೆ ಎನ್ನುತ್ತಾರೆ. ಆದರೆ ರಚಿತಾ ಡಾಕ್ಟರ್ ಮಾತುಗಳನ್ನು ನಂಬುವುದಿಲ್ಲ. ಅವಳು ವಿಧವಿಧವಾದ ಪತ್ರಿಕೆಗಳು ಹಾಗೂ ಪುಸ್ತಕಗಳಲ್ಲಿ ಈ ಕಾಯಿಲೆಗೆ ಕಾರಣಗಳನ್ನು ಹಾಗೂ ಚಿಕಿತ್ಸೆಯ ಬಗ್ಗೆ ಹುಡುಕುತ್ತಿರುತ್ತಾಳೆ.
7 ವರ್ಷಗಳ ಹಿಂದಿನ ಈ ಕಾಯಿಲೆ ನನಗೆ ಹೇಗೆ ಬಂತು ಮತ್ತು ಯಾವಾಗ ಬಂತು ಎಂದು ನನಗೆ ಗೊತ್ತು. ಜೀವನದಲ್ಲಿ ಮೊದಲ ಬಾರಿ ಗೆಳೆಯ ಹೇಳಿದನೆಂದು ಮುಂಬೈನಲ್ಲಿ ಒಂದು ರಾತ್ರಿ ತಂಗಿದ್ದಾಗ ಅವನೊಂದಿಗೆ ಒಂದು ಹೋಟೆಲ್‌ನಲ್ಲಿ ವಿದೇಶಿ ಮಹಿಳೆಯೊಂದಿಗೆ ಸಂಬಂಧ ಮಾಡಿದೆ. ಮೋಜು ಮಾಡಲು ಬದುಕಿನಲ್ಲಿ ಆನಂದ ಪಡೆಯಲು ಹೋಗಿದ್ದೆ. ಆದರೆ ವಾಪಸ್ ಬರುವಾಗ ಮಾರಣಾಂತಿಕ ರೋಗ ಪಡೆದುಕೊಂಡಿದ್ದೆ. ಗೆಳೆಯ ಭುಜ ತಟ್ಟಿ ಹುಷಾರು ಎಂದು ಹೇಳಿದ್ದ. ಆದರೆ ನಾನು ಅತ್ಯುತ್ಸಾಹದಲ್ಲಿ ಎಚ್ಚರಿಕೆ ವಹಿಸಲಿಲ್ಲ. 2 ವರ್ಷಗಳ ನಂತರ ಆರೋಗ್ಯ ಕೊಂಚ ಹದಗೆಟ್ಟಾಗ ಡಾಕ್ಟರಿಗೆ ತೋರಿಸಿದೆ ಮತ್ತು ಬ್ಲಡ್ ಟೆಸ್ಟ್ ಮಾಡಿಸಿದೆ. ಆಗ ಈ ಕಾಯಿಲೆ ಇರೋದು ಗೊತ್ತಾಯ್ತು. ನನ್ನ ಕಾಲ ಕೆಳಗಿನ ಮಣ್ಣು ಕುಸಿಯತೊಡಗಿತು. ಇನ್ನು ಚಿಕಿತ್ಸೆ ಮಾಡಿಸುವುದು ಬಿಟ್ಟು ಬೇರೇನಿದೆ? ಈ ಕಾಯಿಲೆಗೆ ಚಿಕಿತ್ಸೆಯಾದರೂ ಎಲ್ಲಿದೆ? ನಿಧಾನವಾಗಿ ಮೃತ್ಯುವಿನ ಬಾಯಿಗೆ ಸಾಗುವುದೇ ಉಳಿದಿರೋದು. ನಾನು ಮನಸ್ಸು ಬಿಚ್ಚಿ ನಗಲೂ ಸಾಧ್ಯವಿಲ್ಲ. ಅಳಲೂ ಸಾಧ್ಯವಿರಲಿಲ್ಲ. ನಾನು ಮಾಡಿದ ತಪ್ಪಿನ ಬಗ್ಗೆ ಯಾರಿಗೂ ಹೇಳಿಕೊಳ್ಳಲು ಸಾಧ್ಯವಿರಲಿಲ್ಲ. ಹೇಗೆ ತಾನೆ ಹೇಳುವುದು? ನಾನು ರಚಿತಾಳಿಗೆ ವಿಶ್ವಾಸದ್ರೋಹ ಮಾಡಿದ್ದೆ.
ರಚಿತಾಳಿಗೆ ಬಹಳಷ್ಟು ಜನ ನನ್ನ ಕಾಯಿಲೆಗೆ ಕಾರಣ ಕೇಳಿದರು. ಆದರೆ ಅವಳು ನಾನು ನನಗಿಂತ ಹೆಚ್ಚಾಗಿ ಪ್ರಮೋದ್‌ನನ್ನು ನಂಬುತ್ತೇನೆ. ಅವರೆಂದೂ ಹಾಗೆ ಮಾಡುವುದಿಲ್ಲ. ತಮ್ಮ ಹೆಂಡತಿಗೆ ದ್ರೋಹ ಮಾಡುವುದಿಲ್ಲ ಎನ್ನುತ್ತಾಳೆ. ಅವಳು ಒಳಗೊಳಗೇ ಕುಸಿಯುತ್ತಿದ್ದಾಳೆ. ತನ್ನೊಂದಿಗೇ ಹೋರಾಡುತ್ತಿದ್ದಾಳೆ. ಆದರೆ ಅವಳ ಬಳಿ ಯಾವುದೇ ದೃಢವಾದ ಕಾರಣಗಳಿಲ್ಲ. ನಾನೂ ಸಹ ಅವಳ ಭ್ರಮೆಯನ್ನು ಮುರಿದು ಹಾಕಲು ಸಾದ್ಯವಿರಲಿಲ್ಲ.
ಕಳೆದ 5 ವರ್ಷಗಳಿಂದ ನಮ್ಮಿಬ್ಬರ ಮಧ್ಯೆ ಗಂಡ ಹೆಂಡತಿಯರ ನಡುವೆ ಇರುವ ಸಂಬಂಧ ಇಲ್ಲ. ನಾವು ಬೇರೆ ಬೇರೆ ಕೋಣೆಗಳಲ್ಲಿ ಮಲಗುತ್ತೇವೆ. ನನ್ನ ತಪ್ಪಿನಿಂದಾಗಿ ರಚಿತಾ ಶಿಕ್ಷೆ ಅನುಭವಿಸುತ್ತಿದ್ದಾಳೆ. ದೈಹಿಕ ಸಂಬಂಧಕ್ಕೆ ಬ್ರೇಕ್ ಹಾಕಬೇಕೆಂದು ಡಾಕ್ಟರ್ ಕಿವಿಮಾತು ಹೇಳಿದ್ದರು. ನನಗೆ ಇಚ್ಛೆಯಾದಾಗ ಬಹಳ ಕಷ್ಟದಿಂದ ನಿಯಂತ್ರಿಸಿಕೊಳ್ಳುತ್ತಿದ್ದೆ. ರಚಿತಾಳೂ ನನ್ನ ಬಳಿ ಬರಬೇಕೆಂದುಕೊಂಡಿರಬೇಕು. ಒಮ್ಮೊಮ್ಮೆ ರಚಿತಾಳ ಕೈ ಹಿಡಿದು ನನ್ನ ಬಳಿ ಕೂಡಿಸಿಕೊಳ್ಳುತ್ತಿದ್ದೆ. ಆದರೆ ಅವಳ ನಿಸ್ತೇಜ ಕಣ್ಣುಗಳಲ್ಲಿ ಇಣುಕಿ ನೋಡಲು ಧೈರ್ಯವಾಗಿರಲಿಲ್ಲ. ಅವಳು ನನ್ನನ್ನು ದಿಟ್ಟಿಸಿ ನೋಡಿದಾಗ ಈ ಕಾಯಿಲೆಯನ್ನು ಎಲ್ಲಿಂದ ತಂದೆ ಎಂದು ಕೇಳಿದಂತಾಯಿತು. ನನ್ನ ದೃಷ್ಟಿ ಕೆಳಗಾಯಿತು. ನಾನೊಬ್ಬ ಅಪರಾಧಿ ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಿದ್ದೇನೆ. ಅವಳಲ್ಲಿ ಕ್ಷಮೆ ಕೇಳಿ ನನ್ನ ಅಪರಾಧವನ್ನು ಕಡಿಮೆ ಮಾಡಿಕೊಳ್ಳಲಾಗುವುದಿಲ್ಲ.
ನಾನು ದಿನ ನಿನ್ನ ಕೋಣೆಗೆ ಬಂದು ನೀನು ಎದೆಯ ಮೇಲೆ ದಿಂಬಿಟ್ಟುಕೊಂಡು ನಿದ್ರಿಸುವುದನ್ನು ನೋಡುತ್ತೇನೆ. ಕಣ್ಣುಗಳು ತುಂಬಿ ಬರುತ್ತವೆ. ನಾನು ಎದುರಿಗೆ ಕಾಣುವಷ್ಟು ಕಠೋರ ಹೃದಯದವನಲ್ಲ. ನಿನ್ನನ್ನು ತಬ್ಬಿಕೊಳ್ಳಲು ನನಗೂ ಮನಸ್ಸಾಗುತ್ತದೆ. ನನ್ನ ಬಯಕೆಗಳೂ ಅತೃಪ್ತವಾಗಿವೆ. ಒಂದೇ ಮನೆಯಲ್ಲಿದ್ದೂ ನಾವು ನದಿಯ 2 ದಡಗಳಾಗಿದ್ದೇವೆ. ನೀನು ಕ್ಷಣಕ್ಷಣಕ್ಕೂ ನನ್ನನ್ನು ಗಮನಿಸುತ್ತೀಯ. ಸಮಯಕ್ಕೆ ಸರಿಯಾಗಿ ಊಟ, ಔಷಧಿಗಳನ್ನು ಕೊಡುತ್ತೀಯ, ಡಾಕ್ಟರ್ ಬಳಿ ಕರೆದುಕೊಂಡು ಹೋಗುತ್ತೀಯ. ಆದರೂ ನಾನು ಅಸಂತುಷ್ಟನಾಗಿದ್ದೇನೆ. ನಾನು ನಿನ್ನನ್ನು ಪಡೆಯಲು ಇಚ್ಛಿಸುತ್ತೇನೆ. ನೀನು ದೂರ ಓಡುತ್ತೀಯ. ನಾನು ನನ್ನ ಭಾವನೆಗಳನ್ನು ನಿಯಂತ್ರಿಸಿಕೊಳ್ಳದಿದ್ದರೆ ಅವು ಕೋಪಗೊಳ್ಳುತ್ತವೆ. ಆಲೋಚನೆ ಮತ್ತು ವಿವೇಕ ಹಿಂದುಳಿಯುತ್ತವೆ. ನಾನು ಸಾಯುತ್ತಿದ್ದೇನೆ. ನಿನಗೂ ಸಾವು ಕೊಡಲು ಬಯಸುತ್ತೇನೆ. ನಾನೆಂಥ ಸ್ವಾರ್ಥಿ ರಚಿತಾ!
ಕಾಲದೊಂದಿಗೆ ಅಂತರ ಹೆಚ್ಚಾಗುತ್ತಿದೆ. ನಾನು ಬದುಕುವುದು ಎಲ್ಲರಿಗೂ ವ್ಯರ್ಥ ಅನ್ನಿಸಿದೆ. ಎಲ್ಲರಿಗೂ ಕಷ್ಟ ಕೊಟ್ಟು ಬದುಕಿರುವುದೇಕೆ? ನಾನು ಬದುಕಿರುವಾಗಲೂ ನಾನಿಲ್ಲದೇ ಎಲ್ಲ ಕೆಲಸಗಳೂ ಸಾಗುತ್ತಿವೆ. ನಾನು ಸತ್ತ ನಂತರವೂ ಸಾಗುತ್ತವೆ. ಇಂದು 10ನೇ ತಾರೀಕು. ನನ್ನನ್ನು ಪರೀಕ್ಷಿಸಿ ಡಾಕ್ಟರ್ ಈಗ ತಾನೆ ಹೊರಟರು. ಆರುವ ಮೊದಲು ಪ್ರಖರವಾಗಿ ಉರಿಯುವ ದೀಪದಂತೆ ಬದುಕು ಪೂರ್ಣ ಇಚ್ಛೆಯಿಂದ ಹಾಸಿಗೆಯಿಂದ ಏಳುತ್ತೇನೆ. ರಚಿತಾ ಮತ್ತು ಮಕ್ಕಳ ಕಣ್ಣುಗಳಲ್ಲಿ ಹೊಳಪು ಕಾಣುತ್ತದೆ. ನಾನು ಟಾಯ್ಲೆಟ್‌ವರೆಗೆ ನಡೆದುಹೋಗುತ್ತೇನೆ. ನಾನು ಹೋದ ನಂತರ ನೀನು ಈಗಿರುವಂತೆಯೇ ಇರಬೇಕು ರಚಿತಾ. ನಾನು ಹೋದ ವಾರ ನಿನ್ನ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದ್ದೇನೆ. ನನ್ನ ನಂತರ ನಿನಗೆ ಯಾವುದೇ ತೊಂದರೆಯಾಗಬಾರದು. ನೀನು ತಿಳಿವಳಿಕೆ ಉಳ್ಳವಳು. ನಿನ್ನನ್ನು ಹಾಗೂ ಮಕ್ಕಳನ್ನು ಸಂಭಾಳಿಸು. ನಿನ್ನೊಬ್ಬಳನ್ನೇ ಬಿಟ್ಟುಹೋಗಲು ನನಗೆ ಇಷ್ಟವಿಲ್ಲ. ಆದರೆ ಹೋಗಲೇಬೇಕು. ನಿನಗೆ ಏನನ್ನೋ ಹೇಳಲು ಮನಸ್ಸಾಗುತ್ತದೆ. ಆದರೆ ಹೇಳಲಾಗುತ್ತಿಲ್ಲ. ನೀನೂ ನನಗೆ ಬಹಳಷ್ಟು ವಿಷಯಗಳನ್ನು ಹೇಳಲು ಬಯಸುತ್ತಿ. ಆದರೆ ನನ್ನ ಪರಿಸ್ಥಿತಿ ನೋಡಿ ಸುಮ್ಮನಿದ್ದೀಯ. ನಾನು ನಿನಗೆ ಏನೂ ಹೇಳಲು ಸಾಧ್ಯವಿಲ್ಲ. ನೀನೂ ಕೇಳುವುದಿಲ್ಲ. ನಿನಗೆ ಯಾವುದೇ ಕ್ಷಣದಲ್ಲೂ ವಿದಾಯ ಹೇಳುತ್ತೇನೆ. ನಿನಗೂ ಅದರ ಬಗ್ಗೆ ಭಯವಿದ್ದೇ ಇದೆ. ಆದ್ದರಿಂದಲೇ ನೀನು ಆಗಾಗ ನನ್ನನ್ನು ಕೂಗುತ್ತಿರುತ್ತೀಯ. ನಮ್ಮಿಬ್ಬರ ಮನಸ್ಸಿನಲ್ಲಿ ಒಂದೇ ವಿಷಯ ನಡೆಯುತ್ತಿರುತ್ತದೆ. ರಚಿತಾ, ನಾನು ನನ್ನ ಜವಾಬ್ದಾರಿಗಳನ್ನು ಪೂರ್ಣಗೊಳಿಸದೇ ಹೋಗಬೇಕಾಗಿದೆಯೆಂದು ಪಶ್ಚಾತ್ತಾಪವಾಗುತ್ತಿದೆ. ನೀನು ನಿದ್ದೆ ಮಾಡುತ್ತಿದ್ದೀಯ. ನಿದ್ರಿಸುತ್ತಿರುವ ನೀನು ಎಷ್ಟು ಸುಂದರವಾಗಿ ಕಾಣುತ್ತಿದ್ದೀಯ. ಮುಖದಲ್ಲಿ ಆಯಾಸ ಹಾಗೂ ವಿಷಾದದ ರೇಖೆಗಳು ಕಾಣುತ್ತಿವೆ. ಸೂರ್ಯ ಹುಟ್ಟುತ್ತಾನೆ. ಕತ್ತಲು ದೂರಾಗುತ್ತದೆ. ಇದುವರೆಗೂ ಇದ್ದ ಮೋಡ ಕವಿದ ವಾತಾವರಣ ದೂರವಾಗುತ್ತದೆ. ನೀನೇನೂ ಕಳೆದುಕೊಂಡಿಲ್ಲ. ನಾನು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿಲ್ಲವೇ? ಈಗ ನಾನು ಸಾಯುವುದೇ ಲೇಸು. ಗಿರೀಶ್ ಇನ್ನೂ ಕೋರ್ಸ್ ಪೂರ್ತಿ ಮಾಡಿಲ್ಲ. ಅವನಿಗೆ ಪ್ಲೇಸ್‌ಮೆಂಟ್ ಜಾಬ್ ಸಿಕ್ಕಿದೆ. ಒಂದು ದಾರಿ ಮುಚ್ಚಿದರೆ ಇನ್ನೊಂದು ದಾರಿ ತೆರೆದುಕೊಳ್ಳುತ್ತದೆ. ಸುರೇಶ್ ಬೇಗನೇ ತನ್ನ ಗುರಿ ತಲುಪುತ್ತಾನೆ. ನನ್ನ ಉಸಿರು ತಡೆಯುತ್ತಿದೆ. ನಾನು ನಿನ್ನ ಪಾಲಿಗೆ ಅಪರಾಧಿ ಎಂದು ಹೇಳಲು ಬಯಸುತ್ತೇನೆ.
ರಚಿತಾ, ಇದು ಜೀವನದ ಕೊನೆಯಲ್ಲ, ಒಂದು ಹೊಸ ಜೀವನದ ಆರಂಭ. ನಿನ್ನ ಬಳಿ ನನ್ನನ್ನು ಬಿಟ್ಟು ಎಲ್ಲವೂ ಇರುತ್ತದೆ. ನನ್ನ ನಂತರ ನಿನಗೆ ಎಲ್ಲವೂ ಬರಿದು, ಶೂನ್ಯ ಅನ್ನಿಸುತ್ತದೆಂದು ನನಗೆ ಗೊತ್ತು. ನಿನ್ನೊಳಗಿನ ಏಕಾಕಿತನವನ್ನು ಯಾರೊಂದಿಗೂ ನೀನು ಹಂಚಿಕೊಳ್ಳಲಾರೆ. ನಿನಗೆ ಜೊತೆ ಕೊಡಲು ನಾನು ಇರುವುದಿಲ್ಲ. ಆದರೆ ನನ್ನ ಕನಸುಗಳನ್ನು ನೀನು ಅಗತ್ಯವಾಗಿ ನನಸಾಗಿಸುತ್ತೀಯ. ನನ್ನನ್ನು ಕ್ಷಮಿಸಿಬಿಡು. ಉಸಿರು ಹಿಡಿಯುತ್ತಿದೆ….. ಬೈ ರಚಿತಾ…. ಗುಡ್ ಬೈ…… ನಿನ್ನ ಪ್ರವೋದ್