ಆಟದಿಂದ ಆಗ ತಾನೆ ಮರಳಿದ ಮಹೇಶ ನಿರ್ಲಕ್ಷ್ಯವಾಗಿ ತನ್ನ ಬೂಟನ್ನು ನೆಲದ ಮೇಲೆಸೆದು, ಮೇಜಿನ ಮೇಲಿಟ್ಟಿದ್ದ ದೊಡ್ಡ ಸ್ಟೀಲ್ ಲೋಟವನ್ನು ಬಾಯಿಯ ಬಳಿ ಕೊಂಡೊಯ್ಯುತ್ತಾ..... ``ಥೂ ಇತ್ತೂ ಹಾಲಾ?'' ಎಂದು ಗೊಣಗಿದ.
``ಸುಮ್ಮನೆ ಕೂಗಾಡಬೇಡ!'' ಅವನ ಅಣ್ಣ ತಕ್ಷಣ ಹೇಳಿದ, ``ಏನು ವಿಷಯ? ಈ ದಿನ ಯಾಕಿಷ್ಟು ರೇಗಾಡುತ್ತಿದ್ದಿ?''
``ನನಗೀಗ ತಾನೇ ಸುದ್ದಿ ಬಂತು, ನಮ್ಮ ಹಳೇ ಮೇಷ್ಟ್ರು ರಾಮಚಂದ್ರ ರಾಯರ ಜಾಗಕ್ಕೆ ಯಾರೋ ಹೊಸ ಟೀಚರ್‌ಬರುತ್ತಿದ್ದಾರಂತೆ,'' ತನ್ನ ಭುಜಗಳನ್ನು ಹಾರಿಸುತ್ತಾ ಬೇಸರದಿಂದ ಹೇಳಿದ ಮಹೇಶ.
``ಹೌದೇನು?'' ಬೆಳಗಿನ ದಿನಪತ್ರಿಕೆಯನ್ನು ಗಮನಿಸುತ್ತಿದ್ದ ಗಿರೀಶ ತಮ್ಮನ ಮಾತುಗಳನ್ನು ಕೇಳಿ ಆಶ್ಚರ್ಯಗೊಂಡ. ಅವನೂ ಸಹ ಈಗ ಮಹೇಶ ಓದುತ್ತಿರುವ ಶಾಲೆಯಲ್ಲೇ ಕಲಿತಿದ್ದ.
``ನಮ್ಮ ರಾಮಚಂದ್ರ ರಾಯರು ನಿವೃತ್ತರಾಗಿರಬೇಕು ಅನಿಸುತ್ತದೆ,'' ಮಹೇಶ ತನ್ನ ಬರಿದಾದ ಲೋಟವನ್ನು ಕೆಳಗಿರಿಸುತ್ತ ಹೇಳಿದ.
``ನಾನು ಬೇಗ ಸಿದ್ಧನಾಗಿ ಸ್ಕೂಲಿಗೆ ಓಡಬೇಕು, ಇಲ್ಲದಿದ್ದರೆ ತಡವಾದೀತು.''
ತಮ್ಮ ಹೇಳಿದ ಸಮಾಚಾರವನ್ನು ಕೇಳಿ ಗಿರೀಶ ಆಳವಾದ ಯೋಚನೆಯಲ್ಲಿ ಮುಳುಗಿದ. ಗಿರೀಶ ವಿದ್ಯಾರ್ಥಿ ದೆಸೆಯಲ್ಲಿ ರಾಮಚಂದ್ರ ರಾಯರನ್ನು ಬಹಳ ಹಚ್ಚಿಕೊಂಡಿದ್ದ. ಅವರು ಭೌತಶಾಸ್ತ್ರವನ್ನು ಬೋಧಿಸುತ್ತಿದ್ದ ವಿಧಾನ ಅವನಿಗೆ ಅಚ್ಚುಮೆಚ್ಚಾಗಿತ್ತು. ಅದರಿಂದಲೇ ಉನ್ನತ ಪದವಿಯನ್ನು ಪಡೆದು ಕಾರ್ಖಾನೆಯ ಉದ್ದಿಮೆಯಲ್ಲಿ ಮುಂದುವರಿದಿದ್ದ.
ಅಣ್ಣ ತಮ್ಮಂದಿರಾದ ಗಿರೀಶ, ಮಹೇಶರು ರೂಪದಲ್ಲಿ ಒಬ್ಬರನ್ನೊಬ್ಬರು ಬಹಳ ಹೋಲುತ್ತಿದ್ದರು. ಅವರ ತಂದೆಯಂತೆ ಒಳ್ಳೆ ರೂಪವನ್ನು ಪಡೆದಿದ್ದರು. ಇಬ್ಬರೂ ಸಮಾನ ಅಭಿರುಚಿಗಳನ್ನು ಬೆಳೆಸಿಕೊಂಡಿದ್ದರು.
ಹೊರಗಿನವರಿಗೆ ಅವರಿಬ್ಬರೂ ಒಂದೇ ತಾಯಿಯ ಒಡಲಲ್ಲಿ ಹುಟ್ಟಿದರೇನೋ ಎಂದೆ ಅನಿಸುತ್ತಿತ್ತು. ಆದರೆ ಕೆಲವು ಆಪ್ತರಿಗೆ ಮಾತ್ರವೇ ಅವರು ಮಲ ಸಹೋದರರು ಎಂಬ ಸುಳಿವಿತ್ತು.
ಇತ್ತೀಚಿನ ಕೆಲವು ದಿನಗಳಿಂದ ತನ್ನ ತಮ್ಮ ಮಹೇಶ ತನಗೆ ವ್ಯತಿರಿಕ್ತನಾಗುತ್ತಿದ್ದಾನೆ ಎಂದು ಗಿರೀಶನಿಗೆ ತೋರತೊಡಗಿತು. ತಾನೂ ಸಹ ಇತ್ತೀಚೆಗೆ ವಿಪರೀತ ಕೆಲಸದ ಒತ್ತಡಗಳಲ್ಲಿ ಮುಳುಗಿ, ತಮ್ಮನೊಂದಿಗೆ ಹೆಚ್ಚಿನ ಸಮಯ ಬೆರೆಯಲಾಗುತ್ತಿಲ್ಲ ಎಂಬ ಅರಿವು ಅವನಿಗಿತ್ತು.
ಹಾಗೆ ಯೋಚಿಸುತ್ತಿದ್ದ ಗಿರೀಶನಿಗೆ, ತನ್ನ ತಂದೆ ತಾಯಿಯರು ತೀರಿಕೊಂಡಾಗಿನಿಂದ ಮಹೇಶನ ಸ್ವಭಾವದಲ್ಲಿ ಪರಿವರ್ತನೆಯುಂಟಾಗಿದೆ ಎಂಬ ಅನಿಸಿಕೆ ಬಂದಾಗ ಚಿಂತೆ ಹೆಚ್ಚಿತು. ಅವನಿಗೆ ನೆನಪಿರುವಂತೆ ಬಹಳ ದಿನಗಳಾದ ಮೇಲೆ, ಈ ದಿನವೇ ಅವನು ತಮ್ಮನೊಂದಿಗೆ ಮನಸ್ಸು ಬಿಚ್ಚಿ ನಾಲ್ಕು ಮಾತುಗಳನ್ನಾಡಿದ್ದ.
ಶಾಲೆಯ ಹೊರ ಆವರಣದಲ್ಲಿ ಸಾಲಾಗಿ ನಿಂತು ಗುಜುಗುಟ್ಟುತ್ತಿದ್ದ ವಿದ್ಯಾರ್ಥಿಗಳು ಪ್ರಿನ್ಸಿಪಾಲರು ಬಂದಂತೆ ಸ್ತಬ್ಧರಾದರು. ಬೆಳಗಿನ ಪ್ರಾರ್ಥನೆಗಳು ಮುಗಿದ ನಂತರ, ನೆರೆದ ಗುಂಪಿಗೆ ಅವರು ತಮ್ಮ ಬಳಿ ನಿಂತಿದ್ದ ಒಬ್ಬ ಯುವತಿಯ ಪರಿಚಯ ಮಾಡಿಕೊಡುತ್ತಾ, ``ಪ್ರಿಯ ವಿದ್ಯಾರ್ಥಿಗಳೇ, ಈ ಸಮಯದಲ್ಲಿ ನಾನು ನಿಮಗೆ ನಮ್ಮ ಶಾಲೆಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿರುವ ಕು. ಎಸ್. ಕವಿತಾರವರ ಪರಿಚಯ ಮಾಡಿಕೊಡಲು ಬಯಸುತ್ತೇನೆ. ಇವರು 10ನೇ ತರಗತಿಗೆ ಕ್ಲಾಸ್ ಟೀಚರ್ ಮಾತ್ರವಲ್ಲದೆ, ಪ್ರೌಢ ತರಗತಿಗಳಿಗೆ ಭೌತಶಾಸ್ತ್ರವನ್ನೂ ಬೋಧಿಸಲಿದ್ದಾರೆ. ರಾಮಚಂದ್ರ ರಾಯರು ಬಹಳ ಅಸ್ವಸ್ಥರಾಗಿರುವುದರಿಂದ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಬಹುಶಃ ಅವರು ತಮ್ಮ ಅಧ್ಯಾಪಕ ವೃತ್ತಿಯನ್ನು ಮುಂದುವರಿಸದೆಯೂ ಇರಬಹುದು.''