ನಾನು ಮದುವೆಯಾಗೋ ಹುಡುಗಿ ಬ್ಯೂಟೀಶಿಯನ್ ಕೋರ್ಸ್ ಮಾಡುತ್ತಿದ್ದಾಳೆಂದು ನನಗೆ ಮೊದಲೇ ಗೊತ್ತಿತ್ತು. ನಾವು ಅವಳನ್ನು ನೋಡಲು ಅವರ ಮನೆಗೆ ಹೋದಾಗ ನಾನಷ್ಟೇ ಅಲ್ಲ, ನಮ್ಮ ಇಡೀ ಪರಿವಾರದವರು ಅವಳ ಸೌಂದರ್ಯದಿಂದ ಪ್ರಭಾವಿತರಾಗಿದ್ದೆವು. ಅಲ್ಲಿಂದ ಬಂದ ನಂತರ ನನಗಿನ್ನೂ ನೆನಪಿದೆ. ಅಮ್ಮ ತಮ್ಮ ಭಾವಿ ಸೊಸೆಯ ಸೌಂದರ್ಯದ ಬಗ್ಗೆ ಅಕ್ಕಪಕ್ಕದ ಮನೆಯವರ ಬಳಿ ಗುಣಗಾನ ಮಾಡಿದರು. ಮನೆಗೆ ಬಂದು ಹೋಗುವವರ ಮುಂದೆಲ್ಲಾ ತಮ್ಮ ಭಾವಿ ಸೊಸೆಯ ಸೌಂದರ್ಯದ ಬಗ್ಗೆ ಹೇಳಲು ಮರೆಯುತ್ತಿರಲಿಲ್ಲ. ಅದನ್ನು ಕೇಳಿದ ನೆರೆಹೊರೆಯರಲ್ಲಿ ಕೆಲವರು ನೋಡ್ತಾ ಇರಿ. ನಿಮ್ಮ ಸೊಸೆಯ ಸೌಂದರ್ಯದ ಬಿರುಗಾಳಿಯಲ್ಲಿ ನಿಮ್ಮ ಮಗನೂ ಕೊಚ್ಚಿಕೊಂಡು ಹೋಗಬಹುದು ಎಂದು ಎಚ್ಚರಿಸುತ್ತಿದ್ದರು.
ಕೆಲವು ಮಹಿಳೆಯರು, ನೋಡಿ ನಾವು ಮದುವೆಗೆ ಮೊದಲೇ ಎಚ್ಚರಿಸ್ತಾ ಇದ್ದೀವಿ. ಮೊದಲೇ ಯಾಕೆ ಹೇಳಲಿಲ್ಲ ಅಂತ ಆಮೇಲೆ ದೂರಬೇಡಿ, ಎನ್ನುತ್ತಾ ತಮ್ಮ ಪರಿಚಿತರು ಹಾಗೂ ಅಕ್ಕಪಕ್ಕದ ಕೆಲವು ಮನೆಗಳ ಉದಾಹರಣೆ ನೀಡಿ ತಮ್ಮ ಹೇಳಿಕೆಗೆ ಸಾಕ್ಷ್ಯ ಒದಗಿಸುತ್ತಿದ್ದರು. ಆದರೆ ಅವರೆಲ್ಲರ ಹೇಳಿಕೆಗಳನ್ನು ಅಮ್ಮ ಹೊಟ್ಟೆಕಿಚ್ಚು ಎಂದು ಪರಿಗಣಿಸಿ ತಮ್ಮ ಅದೃಷ್ಟಕ್ಕೆ ಹೆಮ್ಮೆಪಡುತ್ತಿದ್ದರು. ಅವರ ಮಾತುಗಳನ್ನು ಕೇಳುವಾಗ ಅಮ್ಮ ತಮ್ಮ ಎರಡೂ ಕಿವಿಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಒಂದು ಕಿವಿಯಿಂದ ಆ ಮಹಿಳೆಯರ ಮಾತುಗಳನ್ನು ಕೇಳಿ ಮರುಕ್ಷಣವೇ ಇನ್ನೊಂದು ಕಿವಿಯಿಂದ ಬಿಟ್ಟುಬಿಡುತ್ತಿದ್ದರು. ಅವರು ಹೋದ ನಂತರ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗಳು, ಅಸೂಯಾಪರರು, ಒಬ್ಬರ ಒಳಿತನ್ನು ಸಹಿಸದವರು ಎಂದೆಲ್ಲಾ ಬಿರುದುನ್ನು ಕೊಡುತ್ತಿದ್ದರು. ನಾನು ಅಮ್ಮನ ಮಾತುಗಳನ್ನು ಕೇಳಿ ನನ್ನ ಅದೃಷ್ಟಕ್ಕೆ ಎಣೆಯೇ ಇಲ್ಲ ಎಂದುಕೊಂಡಿದ್ದೆ. ಕೊನೆಗೂ ಆ ದಿನ ಬಂದೇ ಬಿಟ್ಟಿತು. ನಮ್ಮಮ್ಮನ ಬ್ಯೂಟೀಶಿಯನ್ ಸೊಸೆ ನನ್ನ ಪತ್ನಿಯಾಗಿ ಬಲಗಾಲಿಟ್ಟು ನಮ್ಮ ಮನೆ ಪ್ರವೇಶ ಮಾಡಿದಳು. ಅವಳ ಅದ್ವಿತೀಯ ಸೌಂದರ್ಯ ಕಂಡು ನನಗೆ ಪ್ರಪಂಚದ ಎಲ್ಲ ಸಂತಸಗಳೂ ಒಟ್ಟಿಗೇ ಸಿಕ್ಕಂತಾಯಿತು. ಅವಳ ರೂಪ ಕಂಡು ನನ್ನ ಕಣ್ಣು ಕುಕ್ಕಿತು.
``ರೀ, ಇಲ್ನೋಡಿ,'' ಒಂದು ದಿನ ನಾನು ಆಫೀಸಿಗೆ ಹೊರಟಾಗ ನನ್ನ ಸೌಂದರ್ಯ ತಜ್ಞೆ ಪತ್ನಿಯ ಮಧುರ ಧ್ವನಿ ನನ್ನ ಕಿವಿಗಳಲ್ಲಿ ಝೇಂಕರಿಸಿತು. ನಾನು ಮೋಟರ್ ಬೈಕಿಗೆ ಕಿಕ್ ಮಾಡುವುದನ್ನು ಬಿಟ್ಟು ನನ್ನಾಕೆಯತ್ತ ಪ್ರಶ್ನಾರ್ಥಕ ನೋಟ ಬೀರಿದೆ.
``ಅಂತಾ ವಿಶೇಷವೇನೂ ಇಲ್ಲ. ನೀವು ಸಂಜೆ ಆಫೀಸಿನಿಂದ ಬಂದ ಮೇಲೆ ಹೇಳ್ತೀನಿ ಬಿಡಿ,'' ಎಂದಳು.
ತಾನು ಮಾತು ಮುಗಿಸಿದೆನೆಂದು ನನ್ನವಳಿಗೆ ಅನ್ನಿಸಿತ್ತು. ಆದರೆ ಅದು ಅವಳ ಮೂಲಕ ಯಾವುದೋ ಚರ್ಚೆಗೆ ಆರಂಭವೆಂದು ನನಗೆ ಅನ್ನಿಸಿತ್ತು. ಅಂದು ಆಫೀಸಿನಲ್ಲಿ ಯಾವುದೇ ಕೆಲಸದಲ್ಲೂ ನನಗೆ ಆಸಕ್ತಿ ಇರಲಿಲ್ಲ. ಆ ವಿಷಯ ಏನಿರಬಹುದೆಂದು ಯೋಚಿಸುವುದರಲ್ಲಿ ಇಡೀ ದಿನ ಕಳೆದುಹೋಯಿತು. ನನ್ನಾಕೆ ನನಗೆ ಏನು ಹೇಳಬೇಕೆಂದಿದ್ದಾಳೆ? ಅಂದು 2-3 ಬಾರಿ ನನ್ನಾಕೆ ನನ್ನ ಮೊಬೈಲ್‌ಗೆ ಫೋನ್ ಮಾಡಿದಳು. ಆದರೆ ಪ್ರತಿ ಬಾರಿಯೂ ಬೇರಾವುದೋ ವಿಷಯ ಮಾತಾಡಿದಳು. ನಾನು ಕೇಳಿದಾಗ, ಮನೆಗೆ ಬಂದ ಮೇಲೆ ಹೇಳುತ್ತೇನೆ ಎಂದಳು.