ಉರಿಬಿಸಿಲಿನಲ್ಲಿ ಸಾಮಾನ್ಯವಾಗಿ ಜನ ಹಿಂದೆ ಮುಂದೆ ಯೋಚಿಸದೆ ಹೊರಗೆ ಹೊರಟುಬಿಡುತ್ತಾರೆ. ಇದರ ನಿರ್ಲಕ್ಷ್ಯತೆಯ ಪರಿಣಾಮ ಅವರ ಚರ್ಮ ಅನುಭವಿಸಬೇಕಾಗಿ ಬರುತ್ತದೆ. ಬಿಸಿಲಿನ ಪರಿಣಾಮವನ್ನು ಎಲ್ಲ ವಯಸ್ಸಿನವರ ಮೇಲೂ ಉಂಟಾಗುತ್ತದೆ. ಹೆಸರಾಂತ ಸೌಂದರ್ಯ ತಜ್ಞೆ ಶಹನಾಜ್ ಹುಸೇನ್ ಈ ಕುರಿತಂತ ಹೀಗೆ ಹೇಳುತ್ತಾರೆ?
“ನಮಗೆ ಬಿಸಿಲಿನಿಂದ ಅನೇಕ ಲಾಭಗಳಿರುವಂತೆ, ಬಹಳಷ್ಟು ದುಷ್ಪರಿಣಾಮಗಳು ಕೂಡ ಉಂಟಾಗಬಹುದು. ಚರ್ಮಕ್ಕೆ ಬಿಸಿಲಿನಿಂದಾಗುವಷ್ಟು ಹಾನಿ ಬೇರಾವುದರಿಂದಲೂ ಆಗುದಿಲ್ಲ.
ಗೌರವರ್ಣದವರಿಗೆ ಬಿಸಿಲಿನಿಂದ ಹೆಚ್ಚು ಹಾನಿಯಾಗುತ್ತದೆ. ಚರ್ಮ ಎಷ್ಟು ಹೆಚ್ಚು ಕಪ್ಪಾಗಿರುತ್ತೋ, ಅದು ಬಿಸಿಲನ್ನು ಅಷ್ಟೇ ಸಮರ್ಥವಾಗಿ ಎದುರಿಸುತ್ತದೆ ಎಂದು ಶಹನಾಜ್ ಹೇಳುತ್ತಾರೆ.
ಕಪ್ಪು ಚರ್ಮದವರಿಗೂ ಬಿಸಿಲಿನಿಂದ ಅಷ್ಟಿಷ್ಟು ಪರಿಣಾಮ ಆಗಿಯೇ ಆಗುತ್ತದೆ. ಕಪ್ಪು ಚರ್ಮದಲ್ಲಿ ಮೆಲನಿನ್ ಪ್ರಮಾಣ ಅಧಿಕವಾಗಿರುವುದರಿಂದ ಸೂರ್ಯನ ಕಿರಣಗಳಿಂದ ಸಂರಕ್ಷಣೆ ದೊರೆಯುತ್ತದೆ. ಸೂರ್ಯನ ಕಿರಣಗಳು ನಮ್ಮ ಚರ್ಮದ ತೀರ ಒಳಭಾಗದತನಕ ಹೋಗುತ್ತವೆ. ಇದರಿಂದ ಮೇಲ್ಭಾಗದ ಚರ್ಮಕ್ಕೆ ಹಾನಿಯಾಗುವುದಿಲ್ಲ. ಆದರೆ ಚರ್ಮದ ಆಂತರಿಕ ಭಾಗದ ಊತಕಗಳಿಗೆ ಹಾನಿಯಾಗುತ್ತದೆ.
ಯಾವುದೇ ಒಬ್ಬ ವ್ಯಕ್ತಿ ನಿರಂತರವಾಗಿ ಬಿಸಿಲಿನ ಸಂಪರ್ಕಕ್ಕೆ ಬರುತ್ತಿದ್ದರೆ, ಅಂತಹ ವ್ಯಕ್ತಿಯ ಚರ್ಮದಲ್ಲಿ ವೃದ್ಧಾಪ್ಯದ ಲಕ್ಷಣಗಳು ಬಹು ಬೇಗ ಗೋಚರಿಸಲಾರಂಭಿಸುತ್ತವೆ. ಹೆಚ್ಚು ಅವಧಿಯವರಿಗೆ ಬಿಸಿಲಿನಲ್ಲಿ ಇರುವುದರಿಂದ `ಸ್ಕಿನ್ ಕ್ಯಾನ್ಸರ್’ ಕೂಡ ಬರಬಹುದು. ಬಿಸಿಲಿನ ಅತ್ಯಧಿಕ ಹಾನಿಕಾರಕ ಪರಿಣಾಮ ಚರ್ಮದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಚರ್ಮ ಶುಷ್ಕಗೊಳ್ಳುತ್ತದೆ, ಒರಟಾಗುತ್ತದೆ, ಸುಕ್ಕುಗಟ್ಟುತ್ತದೆ. ಮುಖದ ಮೇಲೆ ಕಪ್ಪು ಕಲೆಗಳು ಉಂಟಾಗುತ್ತವೆ. ಅಷ್ಟೇ ಅಲ್ಲ, ರಕ್ತಧಮನಿಗಳು ಹಿಗ್ಗುತ್ತವೆ. ಆ ಕಾರಣದಿಂದಾಗಿ ಚರ್ಮ ಕೆಂಪಾಗಿ ಗೋಚರಿಸುತ್ತದೆ.
ಸನ್‌ಬರ್ನ್ ಏಕಾಗುತ್ತದೆ?
ಸೂರ್ಯನ ಬೆಳಕಿನಲ್ಲಿರುವ ಅಲ್ಟ್ರಾವೈಲೆಟ್ ಕಿರಣಗಳು ಚರ್ಮದ ಸಂಪರ್ಕಕ್ಕೆ ಬಂದಾಗ ನಮಗೆ ತುರಿಕೆ ಅಥವಾ ಉರಿಯ ಅನುಭೂತಿ ಉಂಟಾಗುತ್ತದೆ. ಬಳಿಕ ಅಲ್ಲಿ ಕೆಂಪು ಗುಳ್ಳೆಗಳು, ಸುಕ್ಕುಗಳು ಉಂಟಾಗುತ್ತವೆ. ಅಲ್ಟ್ರಾವೈಲೆಟ್ ಕಿರಣಗಳು ಚರ್ಮದ ಮೆಲನಿನ್‌ನ್ನು ನಾಶಗೊಳಿಸುತ್ತವೆ. ಇದರ ಪರಿಣಾಮವೆಂಬಂತೆ ಚರ್ಮ ಗೋಧಿವರ್ಣ ಹಾಗೂ ಕಪ್ಪುವರ್ಣ ತಾಳುತ್ತದೆ.
ಬಿಸಿಲಿನಲ್ಲಿ ನಿರಂತರವಾಗಿ ಕೆಲಸ ಮಾಡುವುದರಿಂದ ಫೋಟೋ ಏಜಿಂಗ್‌ನ ಸಮಸ್ಯೆ ಅಧಿಕಗೊಳ್ಳುತ್ತದೆ. ಈ ಕಾರಣದಿಂದಾಗಿ ಚರ್ಮದಲ್ಲಿ ಅವಧಿಗೂ ಮುನ್ನವೇ ಸುಕ್ಕುಗಳು ಉಂಟಾಗುತ್ತವೆ. ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಜನರು ಉಷ್ಣ ಪ್ರಕೋಪಕ್ಕೆ ತುತ್ತಾಗುತ್ತಾರೆ. ಏಕೆಂದರೆ ಈ ಅವಧಿಯಲ್ಲಿ ಸೂರ್ಯನ ತಾಪ ಅಧಿಕವಾಗಿರುತ್ತದೆ. ಮಕ್ಕಳು, ಪುರುಷರು, ಮಹಿಳೆಯರು ಯಾರೇ ಆಗಲಿ ಇದರ ಸಮಸ್ಯೆಗೆ ತುತ್ತಾಗುತ್ತಾರೆ.
ಚರ್ಮ ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಸನ್‌ಬರ್ನ್ ಸಮಸ್ಯೆಯ ಜೊತೆಗೆ ಸ್ಕಿನ್ ಅಲರ್ಜಿ ಕೂಡ ಸಾಮಾನ್ಯ ಸಂಗತಿ. ಈವರೆಗೆ ಅಲ್ಟ್ರಾವೈಲೆಟ್ `ಎ’ ಮತ್ತು `ಬಿ’ ಕಿರಣಗಳಷ್ಟೇ ಭೂಮಿಯ ತನಕ ತಲುಪುತ್ತಿದ್ದವು. ಆದರೆ ಗ್ಲೋಬಲ್ ವಾರ್ಮಿಂಗ್‌ನ ದುಷ್ಪರಿಣಾಮಗಳಿಂದಾಗಿ `ಸಿ’ ಕಿರಣಗಳು ಕೂಡ ತಲುಪುತ್ತಿರುವುದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.
ಇನ್‌ಫೆಕ್ಷನ್‌ನಿಂದಲೂ ಸನ್‌ಬರ್ನ್ ಚರ್ಮ ತಜ್ಞರ ಹೇಳಿಕೆಯ ಪ್ರಕಾರ ಡಿಯೋಡರೆಂಟ್, ಸೋಪ್, ಪರ್ಫ್ಯೂಮ್, ಬೆಳ್ಳುಳ್ಳಿ, ಔಷಧಿಗಳ ಕಾರಣದಿಂದ ಸನ್‌ಬರ್ನ್ ಸಮಸ್ಯೆ ಉಂಟಾಗಬಹುದು. ಡಿಯೋಡರೆಂಟ್ ಅಥವಾ ಸೋಪ್‌ನಲ್ಲಿ ಕಂಡುಬರುವ ಟಿಬಿಎಸ್ ಏಜೆಂಟ್‌ನ ಕಾರಣದಿಂದ ಯಾವಾಗಲಾದರೊಮ್ಮೆ ಬಿಸಿಲಿನ ಸಂಪರ್ಕಕ್ಕೆ ಬಂದಾಗ ಫೋಟೊ ಕಾಂಟ್ಯಾಕ್ಟ್ ಅಲರ್ಜಿ ಉಂಟಾಗುತ್ತದೆ. ಪರ್ಫ್ಯೂಮ್ ನಲ್ಲಿ ಕಂಡುಬರುವ ಸಿಕ್ಸ್ ಮಿಥೈಲ್ ಕ್ಯುಮಾರಿನ್ ಸಬ್‌ಸ್ಟೆಂಟ್ ಅಲರ್ಜಿಗೆ ಕಾರಣವಾಗುತ್ತದೆ. ಬಿಸಿಲಿನ ಸಂಪರ್ಕಕ್ಕೆ ಬಂದಾಗ ಚರ್ಮದಲ್ಲಿ ತುರಿಕೆ ಅಥವಾ ಉರಿತದ ಅನುಭವವಾಗುತ್ತದೆ.
ಚರ್ಮ ತಜ್ಞರು ಹೇಳುವುದೇನೆಂದರೆ, ಬೆಳ್ಳುಳ್ಳಿಯಲ್ಲಿರುವ ಡೈ ಎಲಿವ್ ಸ್ಛೖವೆಡ್ ಸಬ್‌ಸ್ಟೆಂಟ್ ಕೂಡ ಅಲರ್ಜಿಗೆ ಕಾರಣವಾಗುತ್ತದೆ. ಒಮ್ಮೊಮ್ಮೆ ಕೆಲವರಿಗೆ ಫಿನೊಥೈಜಿನ್, ಟೆಟ್ರಾಸೈಕ್ಲಿನ್ ಸಿಫಿಕ್ಸ್, ಸಲ್ಛನೊಮೈಡ್ ಔಷಧಿಗಳ ಸೇವನೆ ಮಾಡಿ. ಬಿಸಿಲಿನ ಸಂಪರ್ಕಕ್ಕೆ ಬಂದಾಗ ಅಲರ್ಜಿ ಸಮಸ್ಯೆ ಹೆಚ್ಚುತ್ತದೆ. ಬಿಸಿಲಿನಲ್ಲಿ ನಿರಂತರವಾಗಿ ಕೆಲಸ ಮಾಡುವುದರಿಂದ ಫೋಟೋ ಏಜಿಂಗ್‌ನ ಸಮಸ್ಯೆ ಅಧಿಕವಾಗುತ್ತದೆ.
ಸನ್ಟ್ಯಾನ್ ಲಕ್ಷಣ ಹಾಗೂ ಪರಿಹಾರ
ಚರ್ಮದ ಮೇಲೆ ಅವಧಿಗೂ ಮುನ್ನವೇ ಸುಕ್ಕುಗಳು ಬೀಳುವುದು, ಶುಷ್ಕತನ, ಬೆಳ್ಳಗೆ ಹಾಗೂ ಕೆಂಪು ಗುರುತುಗಳು ಕಂಡುಬರುವುದು. ಚರ್ಮ ಜೋತುಬಿದ್ದಂತೆ ಕಾಣುವುದು, ಬೆವರುಸಾಲೆ ಉಂಟಾಗುವುದು, ಗುಳ್ಳೆಗಳೇಳುವುದು, ತುರಿಕೆ ಉಂಟಾಗುವುದು, ಊತ, ನೀರು ಒಸರುವುದು ಮುಂತಾದವು.
ಒಂದು ವೇಳೆ ನಿಮ್ಮ ಚರ್ಮ ತೀವ್ರ ಬಿಸಿಲಿನಿಂದ ಬಸವಳಿದಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸಿ ಇಲ್ಲಿ ಯಾವುದಾದರೂ ಮನೆಮದ್ದು ಅನುಸರಿಸಿ. ಸನ್‌ಬರ್ನ್ ಆಗಿರುವ ಆ ಜಾಗವನ್ನು ಗಾಳಿಯ ಸಂಪರ್ಕಕ್ಕೆ ಬಿಡಿ. ತಣ್ಣೀರು ಸ್ನಾನ ಮಾಡಿ. ಮಂಜುಗಡ್ಡೆಯ ತುಂಡುಗಳನ್ನು ಬಿಸಿಲಿನ ಝಳಕ್ಕೆ ತುತ್ತಾದ ಜಾಗದ ಮೇಲೆ ಉಜ್ಜಿ. ರೋಸ್ ವಾಟರ್‌ನಲ್ಲಿ ಟಿಶ್ಯೂ ಪೇಪರ್ ಅಥವಾ ಹತ್ತಿ ತುಂಡು ಅದ್ದಿ ಚರ್ಮಕ್ಕೆ ಮೇಲಿಂದ ಮೇಲೆ ಲೇಪಿಸಿ. ಯಾವುದೇ ಬಗೆಯ ಸೋಪ್‌ನ್ನೂ ಬಳಸಬೇಡಿ. ಸೋಪ್‌ನಲ್ಲಿರುವ ರಾಸಾಯನಿಕ ಪದಾರ್ಥದಿಂದ ಸನ್‌ಬರ್ನ್ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇರುತ್ತದೆ.
ಚರ್ಮವನ್ನು ಸ್ವಚ್ಛಗೊಳಿಸಲು ಗೋಧಿಹಿಟ್ಟು ಅಥವಾ ಕಡಲೆಹಿಟ್ಟನ್ನು ಬಳಸಿ. ಸ್ನಾನದ ಬಳಿಕ ಕೋಲ್ಡ್ ಕ್ರೀಮ್ ಅಥವಾ ಆಲಿವ್ ಎಣ್ಣೆ ಲೇಪಿಸಿ. ಇದರಿಂದ ಚರ್ಮಕ್ಕೆ ನಿರಾಳತೆ ದೊರಕುತ್ತದೆ.
ಹಸಿ ಆಲೂಗಡ್ಡೆಯನ್ನು ಕತ್ತರಿಸಿ ಅದರ ಪೇಸ್ಟ್ ನ್ನು ಚರ್ಮದ ಮೇಲೆ ಲೇಪಿಸಿ. 10-15 ನಿಮಿಷಗಳ ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿ. ಅದರಿಂದ ಉರಿ ಕಡಿಮೆಯಾಗುತ್ತದೆ. ಒಂದು ಟಬಲ್ ನಲ್ಲಿ ಉಗುರು ಬೆಚ್ಚಗಿನ ನೀರನ್ನು ಹಾಕಿಕೊಂಡು ಅದರಲ್ಲಿ 4-5 ಕಪ್ ಆ್ಯಪಲ್ ಸೈಡರ್ ವಿನಿಗರ್ ಹಾಕಿ. ಬಳಿಕ 15-20 ನಿಮಿಷಗಳ ಕಾಲ ಕೈ ಕಾಲುಗಳನ್ನು ಅದರಲ್ಲಿ ಮುಳುಗಿಸಿ. ಬಳಿಕ ಕೈ ಕಾಲುಗಳನ್ನು ತಪ್ಪಡಿಸುತ್ತ ಚರ್ಮವನ್ನು ಒಣಗಿಸಿ. ಬಳಿಕ ವಿಟಮಿನ್ `ಇ’ ಮತ್ತು ಆ್ಯಲೋವೇರಾಯುಕ್ತ ಮಾಯಿಶ್ಚರೈಸರ್ ಲೇಪಿಸಿ. ಇದರಿಂದ ಚರ್ಮದ ಮೇಲೆ ಬಿದ್ದ ಕೆಂಪು ದದ್ದುಗಳು ದೂರಾಗುತ್ತವೆ.
ಕಣ್ಣುಗಳನ್ನು ಬಿಸಿಲಿನಿಂದ ರಕ್ಷಿಸಿ
ನೇತ್ರ ತಜ್ಞರ ಪ್ರಕಾರ, ಕಣ್ಣುಗಳು ಕೂಡ ಸೂರ್ಯನ ಅಲ್ಟ್ರಾವೈಲೆಟ್ ಕಿರಣಗಳಿಂದ ಹಾನಿಗೊಳಗಾಗುತ್ತವೆ. ಕ್ಯಾಟರ್ಯಾಕ್ಟ್ ತೊಂದರೆ ಕೂಡ ಆಗಬಹುದು. ಚರ್ಮದಲ್ಲಿ ಸನ್‌ಬರ್ನ್‌ನ ಪ್ರಭಾವ ಗೋಚರಿಸುತ್ತದೆ. ಆದರೆ ಇದರಿಂದ ಕಣ್ಣುಗಳಿಗೂ ತೊಂದರೆಯಾಗುತ್ತದೆ ಎಂಬುದನ್ನು ನಾವು ಗಮನಿಸುವುದಿಲ್ಲ.
ಕಣ್ಣುಗಳ ಸನ್‌ಬರ್ನ್‌ನಿಂದಾಗಿ ಕೆಲವೇ ಗಂಟೆಗಳಲ್ಲಿ ಶುಷ್ಕತನ, ತುರಿಕೆ, ಉರಿ, ಕಣ್ಣೀರು ಬರುವಂತಹ ಲಕ್ಷಣಗಳು ಕಂಡುಬರುತ್ತವೆ. ಕಣ್ಣುಗಳ ಸನ್‌ಬರ್ನ್‌ನಿಂದಾಗಿ ದೃಷ್ಟಿ ಹಾನಿ ಸಹ ಉಂಟಾಗಬಹುದು. ಇಂತಹ ಸ್ಥಿತಿಯಲ್ಲಿ ನೀವು ಹೊರಗೆಲ್ಲಾದರೂ ಹೊರಟರೆ ಬಿಸಿಲಿನಿಂದ ರಕ್ಷಣೆ ನೀಡುವ ತಂಪು ಕನ್ನಡಕ ಧರಿಸಿ ಇದರ ಹೊರತಾಗಿ ನೀವು ಕೊಡೆ ಸಹ ಉಪಯೋಗಿಸಬಹುದು.
ಹೊರಗೆ ಹೊರಟಾಗ ನೀವು ಉರಿ ಬಿಸಿಲಿನಲ್ಲಿ ಹೊರಗೆ ಹೊರಟರೆ, ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳಬೇಕೆಂದಿದ್ದರೆ, ಬಾಹುಗಳಿಗೆ ಪೂರ್ತಿ ರಕ್ಷಣೆ ಕೊಡು ಕುರ್ತಾ, ಟಾಪ್‌ಗಳನ್ನು ಧರಿಸಿ. ನಿಮ್ಮ ಪೋಷಾಕಿಗೆ ಹೊಂದಾಣಿಕೆಯಾಗುವ ಕಾಟನ್ ದುಪಟ್ಟಾ ಅಥವಾ ಸ್ಟೋಲ್ ಇರಲಿ. ಇದರಿಂದ ನೀವು ತಲೆ, ಕತ್ತು, ಕೈಗಳಿಗೆ ರಕ್ಷಣೆ ಕೊಡಬಹುದು. ಜೀನ್ಸ್ ಥಿಕ್‌ನೆಸ್‌ಗೆ ಸರಿಸಮನವಾಗಿ ಏಪ್ರನ್ ಕೂಡ ಧರಿಸಬಹುದು. ಬಿಸಿಲು ಮತ್ತು ಧೂಳಿನಿಂದ ರಕ್ಷಿಸಿಕೊಳ್ಳಲು ನಿಮ್ಮ ಮೆಚ್ಚಿನ ಸನ್‌ಗ್ಲಾಸ್ ಧರಿಸಬಹುದು. ಬೇಸಿಗೆಯಲ್ಲಿ ಹತ್ತಿ ಬಟ್ಟೆಗಳಿಗೆ ಪ್ರಾಮುಖ್ಯತೆ ಕೊಡಿ. ಇವು ಸುಲಭವಾಗಿ ಬೆವರನ್ನು ಹೀರಿಕೊಳ್ಳುತ್ತವೆ ಮತ್ತು ಚರ್ಮಕ್ಕೆ ಆರಾಮದಾಯಕವಾಗಿಯೂ ಇರುತ್ತವೆ.
ಸನ್‌ಸ್ಕ್ರೀನ್ ಲೇಪಿಸಿಕೊಳ್ಳಲು ಮರೆಯಬೇಡಿ
ಚರ್ಮರೋಗ ತಜ್ಞ ಡಾ. ಸುನಿಲ್ ರಾಮ್ ಅವರ ಪ್ರಕಾರ, ಸೂರ್ಯನ ಕಿರಣಗಳ ಕಾರಣದಿಂದಾಗಿ ಚರ್ಮದಲ್ಲಿ ಉರಿ ಮತ್ತು ತುರಿಕೆ ಉಂಟಾಗುತ್ತದೆ. ಮುಂಜಾನೆ 10 ರಿಂದ ಮಧ್ಯಾಹ್ನ 3ರ ನಡುವೆ ಬಿಸಿಲಿನ ಪ್ರಕೋಪ ಜಾಸ್ತಿಯಾಗಿರುತ್ತದೆ. ಇದರಿಂದ ಬಚಾವಾಗುವ ಅತ್ಯುತ್ತಮ ಉಪಾಯವೆಂದರೆ ಸನ್‌ಸ್ಕ್ರೀನ್ ಲೇಪಿಸಿಕೊಂಡು ಹೋಗುವುದು. ಸನ್‌ಸ್ಕ್ರೀನ್‌ನ ಎಸ್.ಪಿ.ಎಫ್.30 ಭಾರತೀಯ ವಾತಾವರಣಕ್ಕೆ ಸೂಕ್ತವಾಗಿದೆ.
ಆಹಾರದ ಬಗೆಗೂ ಇರಲಿ ಗಮನ
ಬಿಸಿಲಿನಿಂದ ರಕ್ಷಿಸಿಕೊಳ್ಳುವ ಎಲ್ಲ ಬಗೆಯ ಎಚ್ಚರಿಕೆಗಳ ಹೊರತಾಗಿಯೂ ಆಹಾರದ ಬಗೆಗೂ ವಿಶೇಷ ಗಮನ ಕೊಡಿ. ಹಸಿರು ಸೊಪ್ಪುಗಳನ್ನು ತಿನ್ನಿ. ಹೆಚ್ಚೆಚ್ಚು ನೀರು ಕುಡಿಯಿರಿ. ತಾಜಾ ಹಣ್ಣುಗಳನ್ನು ಸೇವಿಸಿ. ಕರಿದ ಪದಾರ್ಥಗಳ ಬದಲಿಗೆ ದ್ರವ ಪದಾರ್ಥ, ಹಣ್ಣಿನ ರಸಗಳನ್ನು ಹೆಚ್ಚಿಗೆ ಬಳಸಿ.
ತ್ವಚೆಯ ಅವಶ್ಯಕತೆಯನ್ನು ಅರಿಯಿರಿ
ದಿನಕ್ಕೆ 2 ಸಲ ಸ್ನಾನ ಮಾಡಿ. ಸ್ನಾನದ ನೀರಿನಲ್ಲಿ ನಿಂಬೆರಸ ಹಾಕಿಕೊಳ್ಳಿ. ಚರ್ಮಕ್ಕೆ ಅನುಕೂಲಕರ ಸೋಪ್, ಫೇಸ್‌ವಾಶ್‌ನ್ನೇ ಬಳಸಿ. ಮನೆಯಿಂದ ಹೊರಗೆ ಹೊರಡುವ ಮುನ್ನ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ದೇಹದ ಮುಕ್ತ ಭಾಗಗಳ ಮೇಲೆ ಸನ್‌ಸ್ಕ್ಕೀನ್ ಲೇಪಿಸಿಕೊಳ್ಳುವುದನ್ನು ಮರೆಯಬೇಡಿ.
ಬಿಸಿಲಿನಿಂದ ಮನೆಗೆ ವಾಪಸ್ ಬಂದಾಗ ಮುಖಕ್ಕೆ ಆಲೂರಸ ಲೇಪಿಸಿ ಅಥವಾ ನೀರಿನಲ್ಲಿ ಸ್ಛಟಿಕ ಮಿಶ್ರಣ ಮಾಡಿ. ಅದರ ಐಸ್ ಕ್ಯೂಬ್ ಲೇಪಿಸಿ. ಇದರಿಂದ ಚರ್ಮಕ್ಕೆ ನಿರಾಳತೆ ದೊರಕುತ್ತದೆ. ಡಿಯೋಡರೆಂಟ್ ಅಥವಾ ಪರ್ಫ್ಯೂಮ್ ಗಳನ್ನು ನೇರವಾಗಿ ಹಾಕಿಕೊಳ್ಳುವ ಬದಲು ಬಟ್ಟೆಗೆ ಹಾಕಿಕೊಳ್ಳಿ.
– ಪದ್ಮಲತಾ
ಲಾಭಕರ ಲೇಪನ
4 ಚಮಚ ಮೊಸರಿಗೆ ಎರಡು ಚಮಚ ಕಡಲೆಹಿಟ್ಟು ಮಿಶ್ರಣ ಮಾಡಿಕೊಂಡು ತ್ವಚೆಗೆ ಲೇಪಿಸಿ.
ಹೊರಗಿನಿಂದ ಬಂದ 10 ನಿಮಿಷಗಳ ಬಳಿಕ ಟೊಮೇಟೊ ಅಥವಾ ಸೌತೆಕಾಯಿ ರಸ ಲೇಪಿಸಿ, ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.
ನಿಂಬೆರಸ, ಜೇನುತುಪ್ಪ ಮತ್ತು ಕಿತ್ತಳೆ ಹಣ್ಣಿನ ರಸ ಮಿಶ್ರಣ ಮಾಡಿಕೊಂಡು ಚರ್ಮಕ್ಕೆ ಲೇಪಿಸಿ.
ಕೊಬ್ಬರಿ ಎಣ್ಣೆ ಮತ್ತು ಬಾದಾಮಿ ಎಣ್ಣೆಯಲ್ಲಿ ಗಂಧದ ಪುಡಿ ಹಾಕಿ ಪೇಸ್ಟ್ ತಯಾರಿಸಿ ಕೊಂಡು ಮುಖಕ್ಕೆ ಲೇಪಿಸಿಕೊಳ್ಳಿ.
ಅರ್ಧಗಂಟೆಯ ತನಕ ಅದನ್ನು ಹಾಗೆಯೇ ಬಿಡಿ. ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ.
ಆ್ಯಲೋವೇರಾ ಜೆಲ್‌ನ್ನು ಉಪಯೋಗಿಸಿ ಇದರಿಂದ ತ್ವಚೆಗೆ ಮೆರುಗು ಬರುತ್ತದೆ. ಆ್ಯಲೋವೇರಾ ಜೆಲ್‌ನ್ನು ನಿಂಬೆರಸದಲ್ಲಿ ಮಿಶ್ರಣ ಮಾಡಿ ಚರ್ಮದ ಮೇಲೆ ಲೇಪಿಸುವುದರಿಂದ ಚರ್ಮಕ್ಕೆ ನಿರಾಳತೆಯ ಅನುಭೂತಿ ಉಂಟಾಗುತ್ತದೆ.
ಅರಿಶಿನವನ್ನು ಮೊಸರು ಮತ್ತು ಜೇನುತುಪ್ಪದಲ್ಲಿ ಮಿಶ್ರಣ ಮಾಡಿ ಗಟ್ಟಿ ಪೇಸ್ಟ್ ತಯಾರಿಸಿ, ಮುಖಕ್ಕೆ ಲೇಪಿಸಿಕೊಂಡ ಬಳಿಕ 10-15 ನಿಮಿಷಗಳ ಕಾಲ ಹಾಗೇ ಇರಲಿ. ಬಳಿಕ ತಣ್ಣೀರಿನಿಂದ ಚೆನ್ನಾಗಿ ಮುಖ ತೊಳೆದುಕೊಳ್ಳಿ.
ಒಂದು ಚಮಚ ಉದ್ದಿನ ಬೇಳೆಯನ್ನು ಮೊಸರಿನ ಜೊತೆಗೆ ಪೇಸ್ಟ್ ಮಾಡಿಕೊಂಡು ಚರ್ಮದ ಮೇಲೆ ಲೇಪಿಸಿ. 15 ನಿಮಿಷಗಳ ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ.
1-1 ಚಮಚ ಮೊಸರು, ಮೂಲಂಗಿ ರಸ ಮತ್ತು ನಿಂಬೆರಸ ಮಿಶ್ರಣ ಮಾಡಿಕೊಂಡು ಸನ್‌ಬರ್ನ್ ಆದ ಚರ್ಮದ ಭಾಗದ ಮೇಲೆ ಲೇಪಿಸಿ. 10 ನಿಮಿಷಗಳ ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ.
ಮುಲ್ತಾನಿ ಮಣ್ಣನ್ನು ಮಿನರಲ್ ವಾಟರ್‌ನಲ್ಲಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಚರ್ಮಕ್ಕೆ ಲೇಪಿಸಿಕೊಂಡು ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ.
ನಾಲ್ಕು ದೊಡ್ಡ ಚಮಚ ಮೊಸರು, ಒಂದು ಚಿಕ್ಕ ತುಂಡು ಸೌತೆಕಾಯಿ ತುರಿದದ್ದು, ಚಿಕ್ಕ ತುಂಡು ಪರಂಗಿಹಣ್ಣು ಮ್ಯಾಶ್ ಮಾಡಿದ್ದು ಹಾಗೂ ಒಂದು ದೊಡ್ಡ ಚಮಚ ಓಟ್‌ಮೀಲ್ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿಡಿ. ಬಳಿಕ ಹೊರ ತೆಗೆದು ಚರ್ಮದ ಮೇಲೆ ಲೇಪಿಸಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.