ಆಧುನಿಕ ಸನ್ನಿವೇಶದಲ್ಲಿ ಉಚ್ಚ ವರ್ಗದ ಹಾಗೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ದಿನ ಸಲಾಡ್ ತಿನ್ನುವ ಅಭ್ಯಾಸವಾಗಿಬಿಟ್ಟಿದೆ. ಹಲವು ಸ್ತ್ರೀ ಪುರುಷರಿಗೆ ಸಲಾಡ್ ಇಲ್ಲದೆ ಊಟ ಅರಗುವುದಿಲ್ಲ. ಆದರೂ ಮಕ್ಕಳು `ಸಲಾಡ್’ ತಿನ್ನಲು ಹಿಂದುಮುಂದು ನೋಡುತ್ತಾರೆ. ಸಲಾಡ್‌ನ್ನು ಸರಿಯಾದ ರೀತಿಯಲ್ಲಿ ತಯಾರಿಸಿ ಮಕ್ಕಳಿಗೆ ಕೊಟ್ಟರೆ ಅವರೂ ಬಹಳ ಖುಷಿಯಾಗಿ ತಿನ್ನುತ್ತಾರೆ. ಡಾಕ್ಟರ್ ಸಹ ಚಿಕ್ಕವರು, ದೊಡ್ಡವರು ಎಲ್ಲರಿಗೂ ಸಲಾಡ್ ತಿನ್ನಲು ಸಲಹೆ ನೀಡುತ್ತಾರೆ. ದಪ್ಪಗಿರುವ ಸ್ತ್ರೀ ಪುರುಷರಿಗೆ ಸಲಾಡ್ ಬಹಳ ಲಾಭದಾಯಕ. ಸಲಾಡ್ ತಿನ್ನುವುದರಿಂದ ಧಾನ್ಯಗಳು, ತುಪ್ಪ ಮತ್ತು ಎಣ್ಣೆಯಿಂದ ಮಾಡಿದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಅಲ್ಲದೆ, ಎಣ್ಣೆ ತಿಂಡಿಗಳಿಂದ ರಕ್ಷಿಸಿಕೊಳ್ಳಬಹುದು.
ಸಲಾಡ್ ತಿನ್ನುವುದರಿಂದ ವಿಟಮಿನ್ ಮತ್ತು ಖನಿಜಾಂಶಗಳು ಪ್ರಾಕೃತಿಕ ರೂಪದಲ್ಲಿ ಶರೀರಕ್ಕೆ ಸಿಗುತ್ತವೆ. ವಿಟಮಿನ್ ಮತ್ತು ಖನಿಜಾಂಶಗಳು ತರಕಾರಿಗಳಲ್ಲೂ ಪ್ರಾಕೃತಿಕ ರೂಪದಲ್ಲಿರುತ್ತವೆ. ಆದರೆ ತರಕಾರಿಗಳನ್ನು ಬೇಯಿಸುವುದರಿಂದ ವಿಟಮಿನ್ ಮತ್ತು ಖನಿಜಾಂಶಗಳು ನಷ್ಟವಾಗುತ್ತವೆ. 100 ಗ್ರಾಂ ಬೀಟ್ ರೂಟ್‌ನಲ್ಲಿ ಶೇ.0.8 ಗ್ರಾಂನಷ್ಟು ಖನಿಜಾಂಶಗಳು ಇರುತ್ತವೆ. ಇದನ್ನು ಬೇಯಿಸುವುದರಿಂದ ಖನಿಜಾಂಶಗಳು ನಷ್ಟವಾಗುತ್ತವೆ. 100 ಗ್ರಾಂ ಈರುಳ್ಳಿಯಲ್ಲಿ ಶೇ.0.6 ಗ್ರಾಂ ಖನಿಜಾಂಶವಿರುತ್ತದೆ. ಸಲಾಡ್‌ನಲ್ಲಿ ಈರುಳ್ಳಿ ತಿನ್ನುವುದರಿಂದ ಎಲ್ಲ ಖನಿಜಾಂಶಗಳು ಶರೀರಕ್ಕೆ ಸಿಗುತ್ತವೆ. ಆದರೆ ಬೇಯಿಸುವುದರಿಂದ ಹಾಳಾಗುತ್ತದೆ.
ತರಕಾರಿಗಳನ್ನು ಬೇಯಿಸುವುದರಿಂದ ಕ್ಯಾಲ್ಶಿಯಂ, ಫಾಸ್ಛರಸ್, ಫೈಬರ್, ವಿಟಮಿನ್ ಬಿ ಮತ್ತು ಸಿ ಎಲ್ಲವೂ ನಷ್ಟವಾಗುತ್ತವೆ. ಹೆಚ್ಚಿನ ಮನೆಗಳಲ್ಲಿ ಮೂಲಂಗಿ, ಟೊಮೇಟೊ, ಸೌತೆಕಾಯಿ, ಈರುಳ್ಳಿ, ಬೀಟ್‌ರೂಟ್‌ಗಳೊಂದಿಗೆ ನಿಂಬೆರಸ ಬೆರೆಸಿ ಸಲಾಡ್ ಮಾಡಲಾಗುತ್ತದೆ. ಎಲ್ಲ ತರಕಾರಿಗಳೂ ವಿಟಮಿನ್ ಮತ್ತು ಖನಿಜಾಂಶಗಳಿಂದ ತುಂಬಿರುತ್ತವೆ.
ಸಲಾಡ್ ರೂಪದಲ್ಲಿ 100 ಗ್ರಾಂ ಟೊಮೇಟೊ ತಿನ್ನುವುದರಿಂದ 20 ಕ್ಯಾಲರಿ ಎನರ್ಜಿ ಸಿಗುತ್ತದೆ. ಟೊಮೇಟೊ ತಿನ್ನುವುದರಿಂದ ಕ್ಯಾಲ್ಶಿಯಂ ಕೂಡ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಗರ್ಭಿಣಿಯರು ಟೊಮೇಟೊ ಸಲಾಡ್ ತಿಂದರೆ ಕಬ್ಬಿಣದ ಕೊರತೆ ಕಡಿಮೆಯಾಗುತ್ತದೆ. ಟೊಮೇಟೋದಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಕೂಡ ಸಿಗುತ್ತದೆ.
ಸ್ವಚ್ಛಗೊಳಿಸುವುದು ಅತ್ಯಗತ್ಯ
ಟೊಮೇಟೋದಂತೆ ಮೂಲಂಗಿ, ಕ್ಯಾರೆಟ್, ಸೌತೆಕಾಯಿ, ಈರುಳ್ಳಿ ಹಾಗೂ ಬೀಟ್‌ರೂಟ್‌ಗಳನ್ನು ಸೇವಿಸಿದರೆ ವಿಟಮಿನ್ ಮತ್ತು ಖನಿಜಾಂಶಗಳು ಹೇರಳವಾಗಿ ಸಿಗುತ್ತವೆ. ಈ ತರಕಾರಿಗಳ ಸಲಾಡ್ ಸೇವಿಸುವುದರಿಂದ ಶರೀರಕ್ಕೆ ಬಹಳಷ್ಟು ಲಾಭ ಸಿಗುತ್ತದೆ. ಆದರೆ ಸರಿಯಾಗಿ ಗಮನಿಸದೆ ಸಲಾಡ್ ಮಾಡಿಕೊಂಡು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.
ಸಲಾಡ್ ತಿನ್ನುವುದರಿಂದ ತೊಂದರೆಯಾಗುವುದೆಂದು ಯಾರೂ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಸ್ವಚ್ಛತೆಗೆ ಸಂಪೂರ್ಣ ಗಮನ ಕೊಡದಿದ್ದರೆ ಸಲಾಡ್ ಲಾಭದಾಯಕವಾಗುವ ಬದಲು ಹಾನಿಕಾರಕವಾಗುತ್ತದೆಂದು ಈಗ ಪ್ರಮಾಣಿಸಲ್ಪಟ್ಟಿದೆ.
ತರಕಾರಿಗಳನ್ನು ಬೆಳೆಸುವಾಗ ವಿವಿಧ ರೀತಿಯ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಲಾಗುತ್ತದೆ. ತರಕಾರಿಗಳನ್ನು ಕ್ರಿಮಿಕೀಟಗಳಿಂದ ರಕ್ಷಿಸಲು ಕೀಟನಾಶಕಗಳನ್ನು ಉಪಯೋಗಿಸಲಾಗುತ್ತದೆ. ಕೆಲವರು ಕೊಳಕು ಕಾಲುವೆಗಳ ಬಳಿ ತರಕಾರಿಗಳನ್ನು ಬೆಳೆಸಿ ಅವಕ್ಕೆ ಕೊಳಕು ನೀರನ್ನು ಸಿಂಪಡಿಸುತ್ತಾರೆ. ಆಗ ತರಕಾರಿ ದೂಷಿತವಾಗುತ್ತದೆ.
ಅಂತಹ ತರಕಾರಿಗಳ ಸಲಾಡ್ ತಯಾರಿಸುವ ಮೊದಲು ಸ್ವಚ್ಛವಾದ ನೀರಿನಿಂದ ಚೆನ್ನಾಗಿ ತೊಳೆಯದಿದ್ದರೆ ಬಹಳಷ್ಟು ಕೀಟನಾಶಕ ರಾಸಾಯನಿಕಗಳು ಸಲಾಡ್‌ನೊಂದಿಗೆ ಶರೀರದೊಳಗೆ ಸೇರಿ ವಿಷಕಾರಿ ಪರಿಣಾಮ ಉಂಟುಮಾಡುತ್ತವೆ.
ಈಗೀಗ ತರಕಾರಿಗಳನ್ನು ಬೇಗನೆ ಬೇಯಿಸಲು ಹಾಗೂ ಅವುಗಳ ಗಾತ್ರ ಹೆಚ್ಚಿಸಲು ವಿಭಿನ್ನ ರಾಸಾಯನಿಕಗಳ ಇಂಜೆಕ್ಷನ್ ಕೊಡಲಾಗುತ್ತಿದೆ. ಟೊಮೇಟೊ, ಕ್ಯಾರೆಟ್, ಬೀಟ್‌ರೂಟ್ ಇತ್ಯಾದಿಗಳಿಗೆ ವಿಷಯುಕ್ತ ಬಣ್ಣ ಹಚ್ಚಾಗುತ್ತದೆ. ಸ್ವಚ್ಛವಾದ ನೀರಿನಿಂದ ಅವುಗಳನ್ನು ತೊಳೆಯದಿದ್ದರೆ, ತರಕಾರಿಗಳ ಮೇಲೆ ಹಚ್ಚಿರುವ ಬಣ್ಣ ಶರೀರದಲ್ಲಿ ಬೆರೆತು ವಿಷಕಾರಿ ಪರಿಣಾಮ ಉಂಟು ಮಾಡುತ್ತದೆ.
ಇತ್ತೀಚೆಗೆ ದೆಹಲಿಯ ಒಬ್ಬ ವಿಜ್ಞಾನಿ ಕುಂಬಳಕಾಯಿಯ ರಸ ಕುಡಿದು ಸಾನ್ನಪ್ಪಿದರು. ತರಕಾರಿಗಳಿಗೆ ವಿಷಯುಕ್ತ ಇಂಜೆಕ್ಷನ್‌ಗಳನ್ನು ಕೊಟ್ಟು ವಿಷಕಾರಿಯನ್ನಾಗಿ ಮಾಡಲಾಗುತ್ತಿದೆ. ಅಂತಹ ತರಕಾರಿಗಳನ್ನು ಸಲಾಡ್ ರೂಪದಲ್ಲಿ ಸೇವಿಸುವುದರ ಪರಿಣಾಮವನ್ನು ಕಲ್ಪಿಸಿಕೊಳ್ಳಬಹುದು.
ಸ್ವಚ್ಛಗೊಳಿಸದ ಸಲಾಡ್‌ನಿಂದಾಗಿ ಅನೇಕ ರೋಗಾಣುಗಳು ಶರೀರದೊಳಗೆ ಸೇರುತ್ತವೆ. ಚಿಕ್ಕ ಮಕ್ಕಳಿಗೆ ಟೊಮೇಟೊ, ಸೌತೆಕಾಯಿಯ ಸಲಾಡ್ ತಿನ್ನಿಸುವುದರಿಂದ ಅವುಗಳೊಂದಿಗೆ ಹುಕ್ ವರ್ಮ್ ಕೂಡ ಅವರ ಶರೀರದೊಳಗೆ ಸೇರಿ ಬಹಳ ವರ್ಷಗಳ ಕಾಲ ರಕ್ತ ಹೀರಿ ಅವರಲ್ಲಿ ರಕ್ತಹೀನತೆ (ಅನೀಮಿಯಾ) ಉಂಟು ಮಾಡುತ್ತದೆ.
ಕಾಯಿಲೆ ತರುತ್ತದೆ
ಹುಕ್ ವರ್ಮ್ ಮಕ್ಕಳ ಆರೋಗ್ಯಕ್ಕೆ ಬಹಳಷ್ಟು ಹಾನಿ ಉಂಟು ಮಾಡುವುದಲ್ಲದೆ, ಅವರಲ್ಲಿ ಕುಬ್ಜತನದ ಸಮಸ್ಯೆ ತರುತ್ತದೆ. ಹುಕ್ ವರ್ಮ್ ಗಳು ಸ್ಮರಣಶಕ್ತಿಯನ್ನೂ ಹಾಳು ಮಾಡುವುದಲ್ಲದೆ, ಹೃದಯದವರೆಗೆ ತಲುಪಿ ಹೃದಯ ರೋಗಗಳಿಗೆ ಜನ್ಮ ಕೊಡುತ್ತವೆಂದು ವಿಜ್ಞಾನಿಗಳು ಹೇಳುತ್ತಾರೆ.
ಸ್ಪೆಷಲಿಸ್ಟ್ ಗಳ ಪ್ರಕಾರ ಸಲಾಡ್ ತಯಾರಿಸುವ ಮೊದಲು ತರಕಾರಿಗಳನ್ನು ಚೆನ್ನಾಗಿ ತೊಳೆಯದಿದ್ದರೆ ನ್ಯೂರೋಸಿಸ್ಟೋಕೋನ್ಸಿಸ್ ಎಂಬ ಮೆದುಳು ಸಂಬಂಧಿ ಕಾಯಿಲೆ ಬರುವ ಸಂಭವವಿದೆ.
ನ್ಯೂರೋಸಿಸ್ಟೋಕೋನ್ಸಿಸ್‌ನಿಂದ ಮೂರ್ಛೆ ರೋಗವುಂಟಾಗುತ್ತದೆ. ಮೂರ್ಛೆರೋಗಿಗಳನ್ನು ಪರೀಕ್ಷಿಸಿದಾಗ ಶೇ.36 ರಷ್ಟು ರೋಗಿಗಳು ತರಕಾರಿಗಳನ್ನು ಸ್ವಚ್ಛಗೊಳಿಸದೆ ತಿಂದಿದ್ದರಿಂದ ಮೂರ್ಛೆರೋಗಕ್ಕೆ ಬಲಿಯಾದರೆಂದು ತಿಳಿಯಿತು.
ಆರೋಗ್ಯ ತಜ್ಞರು ಹೇಳುವುದೇನೆಂದರೆ, ಟೊಮೇಟೊ, ಸೌತೆಕಾಯಿ, ಬೀಟ್‌ರೂಟ್ ಇತ್ಯಾದಿ ತರಕಾರಿಗಳು ನೋಡಲು ಎಷ್ಟೇ ಸುಂದರವಾಗಿ ಕಾಣಲಿ ಶೆಜೆವಾ, ಇ.ಕೋಲ ಈ, ಬೋಟ್ ಊಲಾಯಿನಮ್, ಸೆಲೆವೋನೆವಾ ಮತ್ತು ಪ್ಲೇಸ್ಟ್ರೀಡಿಯಮ್ ಇತ್ಯಾದಿ ರೋಗಾಣುಗಳು ಅವುಗಳಲ್ಲಿರುತ್ತವೆ. ಅವು ಸಲಾಡ್‌ನೊಂದಿಗೆ ಶರೀರದಲ್ಲಿ ಸೇರಿ ವಿಧ ವಿಧವಾದ ರೋಗಗಳನ್ನು ಉತ್ಪತ್ತಿ ಮಾಡುತ್ತವೆ. ಸಣ್ಣ ಮಕ್ಕಳು ಮತ್ತು ವಯಸ್ಕರ ಶರೀರದೊಳಗೆ ಸೇರಿ ಬಹಳಷ್ಟು ಹಾನಿ ಮಾಡುತ್ತವೆ. ಅದರಿಂದಾಗಿ ಅವರಲ್ಲಿ ರೋಗನಿರೋಧಕ ಸಾಮರ್ಥ್ಯ ಬಹಳ ಕಡಿಮೆ ಇರುತ್ತದೆ.
– ಪಿ. ಶ್ಯಾಮಲಾ ಭಟ್
ತಯಾರಿಕೆಯಲ್ಲಿ ಎಚ್ಚರಿಕೆ ಇರಲಿ
ತರಕಾರಿಗಳ ಸಲಾಡ್ ತಯಾರಿಸುವ ಮೊದಲು ಅವನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಹೊಲದಿಂದ ಕಿತ್ತು ತಂದ ನಂತರ ಕೆಲವರು ತರಕಾರಿಗಳನ್ನು ಕೊಳಕು ನೀರಿನಲ್ಲಿ ತೊಳೆದು ಮಾರುಕಟ್ಟೆಗೆ ತರುತ್ತಾರೆ. ಕೆಲವರು ತರಕಾರಿಗಳನ್ನು ತಾಜಾ ಆಗಿಡಲು ಅವುಗಳ ಮೇಲೆ ಕೊಳಕು ನೀರನ್ನು ಸಿಂಪಡಿಸುತ್ತಾರೆ.
ಮಳೆಗಾಲದಲ್ಲಿ ಪಾಲಕ್, ಮೂಲಂಗಿ, ಸ್ಟ್ರಾಬೆರಿ, ಸೌತೆಕಾಯಿ, ಬೀಟ್‌ರೂಟ್ ಇತ್ಯಾದಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಮಳೆಗಾಲದಲ್ಲಿ ಈ ತರಕಾರಿಗಳಲ್ಲಿ ಅತ್ಯಂತ ಸೂಕ್ಷ್ಮ ರೋಗಾಣುಗಳು ಅಡಗಿರುತ್ತವೆ. ಹೀಗಾಗಿ ಇಂಥ ತರಕಾರಿಗಳನ್ನು ಚೆನ್ನಾಗಿ ತೊಳೆಯಬೇಕು.
ಕೆಲವು ಮಹಿಳೆಯರು ಸಲಾಡ್ ತಯಾರಿಸುವ ಮೊದಲು ಮೂಲಂಗಿ, ಕ್ಯಾರೆಟ್ ಇತ್ಯಾದಿಗಳ ಸಿಪ್ಪೆ ಹೆರೆದು ನೀರಿನಲ್ಲಿ ತೊಳೆಯುತ್ತಾರೆ. ಹೀಗೆ ಮಾಡುವುದರಿಂದ ಮಣ್ಣು, ಧೂಳು ಮತ್ತು ಕೀಟನಾಶಕಗಳು ಅವಕ್ಕೆ ಅಂಟಿಕೊಳ್ಳುತ್ತವೆ. ತರಕಾರಿಗಳು ಮತ್ತು ಹಣ್ಣುಗಳನ್ನು ಮೊದಲು ತೊಳೆದು ನಂತರವೇ ಸಿಪ್ಪೆ ತೆಗೆಯಬೇಕು.
ಸೌತೆಕಾಯಿ, ಮೂಲಂಗಿ, ಕ್ಯಾರೆಟ್ ಇತ್ಯಾದಿ ಯಾವುದೇ ತರಕಾರಿಗಳನ್ನು ತೊಳೆಯುವಾಗ ಒಂದು ಮೃದುವಾದ ವಸ್ತುವಿನಿಂದ ಉಜ್ಜಿ ಸ್ವಚ್ಛಗೊಳಿಸುವುದರಿಂದ ಅವಕ್ಕೆ ಅಂಟಿಕೊಂಡಿರುವ ಬಣ್ಣ ಮತ್ತು ಇತರ ರಾಸಾಯನಿಕಗಳು ದೂರವಾಗುತ್ತವೆ.
ತುಂಬಾ ತಡವಾಗಿ ತಯಾರಿಸಿದ ಸಲಾಡ್‌ನ್ನು ತಿನ್ನಬಾರದು. ಕಬ್ಬಿಣ ಹಾಗೂ ಸ್ಟೀಲ್ ಚಾಕುವಿನಿಂದ ಕತ್ತರಿಸಿದಾಗ ಕೆಲವು ಹಣ್ಣುಗಳು ಮತ್ತು ತರಕಾರಿಗಳು ವಿಷಯುಕ್ತವಾಗುತ್ತವೆ. ಬೆಳಗ್ಗೆ ತಯಾರಿಸಿದ ಸಲಾಡ್‌ನ್ನು 1 ಗಂಟೆಯೊಳಗಾಗಿ ತಿಂದುಬಿಡಬೇಕು.
ಸಲಾಡ್‌ನ್ನು ನೊಣ ಹಾಗೂ ಸೊಳ್ಳೆಗಳಿಂದ ಅಗತ್ಯವಾಗಿ ರಕ್ಷಿಸಿ.