ಮೊಬೈಲ್ ನಲ್ಲಿ ಅಲಾರಂ ಹೊಡೆದುಕೊಂಡು 5 ಗಂಟೆ ಆಯಿತೆಂದು ಎಚ್ಚರಿಸಿದಾಗ ಅದೆಷ್ಟೇ ಮಧುರವಾಗಿದ್ದರೂ, ಆಗದು ಅವಳಿಗೆ ಅಷ್ಟೇ ಕರ್ಕಶವಾಗಿ ಕೇಳಿಸಿತು. ಆಗ ಅವಳಿಗೆ ಸ್ಪಷ್ಟವಾಗಿ ಎಚ್ಚರವಾಯಿತು. ಅವಳು ತನ್ನ ಪಕ್ಕ ಮಲಗಿದ್ದ ಗಂಡ, ಇಬ್ಬರು ಮಕ್ಕಳನ್ನೂ ನೋಡಿದಳು. ಎಲ್ಲರೂ ಮುಂಜಾನೆಯ ಸೊಂಪಾದ ಸಕ್ಕರೆ ನಿದ್ದೆಯಲ್ಲಿ ಮುಳುಗಿದ್ದರು. ಅವಳಿಗೂ ತಾನು ಇನ್ನಷ್ಟು ಹೊತ್ತು ಮಲಗೋಣ ಎನಿಸಿತು. ಹಾಗೆಂದೇ ಬಲ ಮಗ್ಗುಲಿಗೆ ತಿರುಗಿ ಮಲಗಿದಳು.

ಆದರೆ ಹಾಳು ಮನಸ್ಸು, ಎಚ್ಚರಗೊಂಡು ಬೇಗ ಏಳು, ಕೆಲಸ ಶುರು ಮಾಡುವ, ಎನ್ನುತ್ತಿರುವಾಗ ದೇಹ ನಿದ್ದೆಗೆ ಜಾರಲು ಸಾಧ್ಯವೇ? ತನ್ನ ದೈನಂದಿನ ಕೆಲಸಗಳಲ್ಲಿ ನೆಮ್ಮದಿಯ ವಿಶ್ರಾಂತಿಗೆ ಅವಕಾಶವಾದರೂ ಎಲ್ಲಿ? ಈಗ ತುಸು ನಿಧಾನ ಮಾಡಿದರೆ ನಂತರ ತಾನು ಆಸ್ಪತ್ರೆಯ ಕೆಲಸಕ್ಕೆ ಹೊರಡಲು ಖಂಡಿತಾ ತಡವಾಗಿ ಹೋಗುತ್ತದೆ. ಆಗ ತನ್ನ ಮೇಲಧಿಕಾರಿ ಡಾ. ಮಯಂಕ್ ತಮ್ಮ ಕನ್ನಡಕದಿಂದ ದುರುಗುಟ್ಟಿಕೊಂಡು ನೋಡಿದರೆ ಭೂಮಿ ಅಲ್ಲೇ ಬಾಯಿ ತೆರೆಯಬಾರದೇ ಎಂಬಷ್ಟು ಕುಗ್ಗಿ ಹೋಗುತ್ತಾಳೆ. ಇವಳು ತಡವಾದಷ್ಟೂ ಒಳರೋಗಿಗಳಿಗೆ ಇನ್ನಷ್ಟು ಕಷ್ಟವಾಗುತ್ತದೆ. ಇದೆಲ್ಲ ಯೋಚಿಸಿ ಸಾಕಾಗಿಯೇ ಅವಳು ದಡಬಡಿಸಿ ಬೇಗ ಎದ್ದುಬಿಟ್ಟಳು. ಬೇಗ ಬೇಗ ಮುಖ ತೊಳೆದು, ಸೆರಗಿನಿಂದಲೇ ಮುಖ ಒರೆಸಿಕೊಳ್ಳುತ್ತಾ, ಕಾಫಿ ಡಿಕಾಕ್ಷನ್‌ಗೆ ಸಿದ್ಧಪಡಿಸಿದಳು. ಕಾಂಪೌಂಡ್‌ ಗೇಟ್‌ಗೆ ತಗುಲಿಹಾಕಿದ್ದ 2 ಲೀ. ಹಾಲಿನ ಪ್ಯಾಕೆಟ್‌ ತೆಗೆದುಕೊಂಡು ಬಂದು, ಬೇಗ ಹಾಲು ಕಾಯಿಸಲು ಇರಿಸಿದಳು. ಹೂಂ….. ಇನ್ನು ಬೆಳಗಿನ ತಿಂಡಿಗೆ ಏನಾದರೂ ಹವಣಿಸಿಕೊಳ್ಳಬೇಕು. ಅಷ್ಟರಲ್ಲಿ ಅವಳು ಗಡಿಯಾರ ನೋಡಿದಾಗ 6 ಗಂಟೆ ಆಯ್ತೆಂದು ಅದು ಎಚ್ಚರಿಸಿತು. ಮಕ್ಕಳನ್ನು ಬೇಗ ಏಳಿ ಎಂದು ಅಲ್ಲಿಂದಲೇ  ಕೂಗು ಹಾಕಿದಳು. ಬಾಯ್ಲರ್‌ ಸ್ವಿಚ್‌ ಆನ್‌ ಮಾಡಿ ಬಂದು, ಉಪ್ಪಿಟ್ಟಿನ ತಯಾರಿಗಾಗಿ ತೆಂಗಿನಕಾಯಿ ತುರಿದು, ಕ್ಯಾಪ್ಸಿಕಂ ಟೊಮೇಟೊ ಹೆಚ್ಚಿಕೊಂಡಳು. ತನಗೆಷ್ಟೇ ಕೆಲಸಗಳಿರಲಿ, ಬೆಳಗಿನ ತಿಂಡಿ ತನ್ನ ಕೈಯಾರೆ ತಯಾರಿಸಿ ಕೊಟ್ಟರೇನೇ ಅವಳಿಗೆ ತೃಪ್ತಿ. ಅಡುಗೆಯ ಸಾವಿತ್ರಮ್ಮ 7 ಗಂಟೆ ಹೊತ್ತಿಗೆ ಬಂದು ಇತರ ಕೆಲಸ ಗಮನಿಸುವವರು. ಅರುಂಧತಿಗೆ ಮಾತ್ರ ಮನೆಯವರಿಗೆ ತಾನೇ ತಿಂಡಿ ಮಾಡಿಕೊಡಬೇಕೆಂಬ ಹಂಬಲ ಮೊದಲಿನಿಂದಲೂ ರೂಢಿಯಾಗಿತ್ತು.

ಅಷ್ಟಲ್ಲದೆ ಸಾವಿತ್ರಮ್ಮ ಒಮ್ಮೊಮ್ಮೆ ಉಪ್ಪುಖಾರದಲ್ಲಿ ವ್ಯತ್ಯಾಸ ಮಾಡಿಬಿಡುತ್ತಿದ್ದರು. ಮಕ್ಕಳು ಗೊಣಗುತ್ತಾರೆಂದು ಅವರನ್ನು ಬಿಡಿಸಿ ಹೊಸಬರಿಗೆ ಅವಕಾಶ ಕೊಟ್ಟಿದ್ದಾಯ್ತು. ಅವರುಗಳ ಕೈ ರುಚಿ ಇನ್ನೂ ಅಧ್ವಾನವಾಗಿತ್ತು. ಹೀಗಾಗಿ ಸಾವಿತ್ರಮ್ಮನವರೇ ಮೇಲು ಎಂದು ವಾಪಸ್ಸು ಅವರನ್ನೇ ಕರೆಸಿದ್ದಾಯ್ತು.

ಹೀಗೆ ಯೋಚಿಸುತ್ತಲೇ ಅವಳು ಬೇಗ ಬೇಗ ರವೆ ಹುರಿದು, ಉಪ್ಪಿಟ್ಟಿನ ಕಥೆ ಪೂರೈಸಿದಳು. ಅಷ್ಟರಲ್ಲಿ ಮಕ್ಕಳು ಎದ್ದಿದ್ದರು. ಅವರಿಗೆ ಹಾಲು ಕೊಟ್ಟು, ಉಳಿದಿರುವ ಹೋಂವರ್ಕ್‌ ಪೂರೈಸುವಂತೆ ಕೂರಿಸಿ, ಗಂಡನನ್ನು ಎಬ್ಬಿಸಲು ಹೊರಟಳು.

“ಗುಡ್‌ ಮಾರ್ನಿಂಗ್‌ ಪ್ರಸಾದ್‌…. ಏಳಿ ಏಳಿ. ಆಗಲೇ 7 ಗಂಟೆ ಆಗಿಹೋಯ್ತು.”

“ಓ….. ಗುಡ್‌ ಮಾರ್ನಿಂಗ್‌, ಈಗಲೇ ಏಳಬೇಕೇ? ಇನ್ನೂ ಸ್ವಲ್ಪ ಹೊತ್ತು….” ಎಂದು ಅವಳನ್ನು ಆತ್ಮೀಯವಾಗಿ ಸೆಳೆದುಕೊಳ್ಳುತ್ತಿದ್ದ.

“ಬಿಡಿ ಬಿಡಿ, ಈಗಾಗಲೇ ತಡ ಆಗಿದೆ. ಬೇಗ ಬ್ರಶ್‌ ಮಾಡಿ ಬನ್ನಿ, ಕಾಫಿಗೆ ಇಟ್ಟಿದ್ದೀನಿ,” ಎಂದು ಹುಸಿ ಮುನಿಸು ತೋರುತ್ತಾ ಅವನಿಂದ ಬಿಡಿಸಿಕೊಂಡು ಒಳಗೋಡುತ್ತಿದ್ದಳು. ಕಾಫಿ ಮುಗಿಸಿ, ಮಕ್ಕಳ ಸ್ನಾನ ತಿಂಡಿ, ಅವರ ಶಾಲೆಯ ಬ್ಯಾಗ್‌, ಸ್ಕೂಲ್ ವ್ಯಾನ್‌ ಹತ್ತಿಸಿ ಬರುವಷ್ಟರಲ್ಲಿ ಪ್ರಸಾದ್‌, “ಅವರೂ…. ಲೇಟ್‌ ಆಯ್ತು. ತಿಂಡಿ ಕೊಡು,” ಎನ್ನುತ್ತಿದ್ದ.

ಅವನ ಕ್ಯಾರಿಯರ್‌ ಸಿದ್ಧಪಡಿಸಿ, ತನ್ನ ಕ್ಯಾರಿಯರ್‌ ರೆಡಿ ಮಾಡಿಕೊಂಡು, ಗಂಡನಿಗೆ ತಿಂಡಿ ನೀಡಿ, ಬಾಗಿಲಿಗೆ ಬಂದು ಬೈ ಹೇಳುವಷ್ಟರಲ್ಲಿ 8 ಆಗಿಹೋಗುತ್ತಿತ್ತು. ನಂತರ ತಾನು ಬೇಗ ಸ್ನಾನ ಮುಗಿಸಿ, ದೇವರಿಗೆ ದೀಪ ಹಚ್ಚಿಟ್ಟು, ನಮಸ್ಕಾರ ಹಾಕಿ, ತಿಂಡಿ ಮುಗಿಸುವಷ್ಟರಲ್ಲಿ 9 ಗಂಟೆ! ಬೇಗ ಡ್ರೆಸ್‌ ಮುಗಿಸಿ ಗಾಡಿ ಹತ್ತಿ ಆಸ್ಪತ್ರೆ ಸೇರುವಷ್ಟರಲ್ಲಿ 10 ಗಂಟೆ ಆಗಿಹೋಗುತ್ತಿತ್ತು.

ಸ್ಕೂಟಿ ಓಡಿಸಿಕೊಂಡು ಹೋಗುವಾಗಲೂ ಸದಾ ಮನೆಯದ್ದೇ ಚಿಂತೆ. ಮನೆಯಲ್ಲಿ ಎಲ್ಲಾ ಸುರಕ್ಷಿತ ಎಂದು ಖಾತ್ರಿಪಡಿಸಿಕೊಂಡು ಲಾಕ್‌ ಮಾಡಿದ್ದೀನಿ ತಾನೇ? ಯಾವ ಕೆಲಸ ಅಪೂರ್ಣ ಆಯಿತು? ಸಂಜೆ ಬರುವಾಗ ತರಕಾರಿ ತರಬೇಕೇ? ಮತ್ತೇನಾದರೂ ಶಾಪಿಂಗ್‌? ಇವಳ ಬೆಳಗಿನ ತರಾತುರಿಯ ಕೆಲಸಗಳಿಗೆ ಹೊಂದಿಕೊಳ್ಳಲಾಗದೆ ಕೆಲಸದ ಹೆಂಗಸರು ಇಬ್ಬರು ಮೂವರು ಬದಲಾಗಿದ್ದರು. `ಬೆಳಗ್ಗೆ ಅಷ್ಟು ಬೇಗ 7 ಗಂಟೆಗೇ ಬಂದು ನಿಮ್ಮ ಮನೆ ಕೆಲಸ ಮಾಡಲು ನನ್ನಿಂದಾಗದು. ನನ್ನ ಗಂಡ ಬೆಳಗಿನ ಜಾವ ಅಷ್ಟು ಬೇಗ ಹೋಗಲು ಬಿಡುವುದಿಲ್ಲ,’ ಎಂದು ಹೇಳಿದಾಗ, ತನಗಿರುವ ವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಅವಳದೇ ವಾಸಿ ಎಂದು ತರ್ಕಿಸಿದಳು. ಒಮ್ಮೊಮ್ಮೆ ಅವಳು ಇನ್ನೇನು ಸ್ಕೂಟಿ ಸ್ಟಾರ್ಟ್‌ ಮಾಡಬೇಕು ಎನ್ನುವಷ್ಟರಲ್ಲಿ ಅಂದು ತಡವಾಗಿ ಹೊರಟಿದ್ದ ಪ್ರಸಾದ್‌, “ಸಂಜೆ 4 ಗಂಟೆ ಹೊತ್ತಿಗೆ ಬೇಗ ಬಂದುಬಿಡು. ನನ್ನ ಬಟ್ಟೆಬರೆ ಪ್ಯಾಕ್‌ ಮಾಡಿಕೊಡು. 7 ಗಂಟೆ ಫ್ಲೈಟಿಗೆ ಮುಂಬೈಗೆ ಹೊರಡಬೇಕು. ಆಫೀಸ್‌ ಕೆಲಸ ಮುಗಿಸಲು ಈ ಸಲ 4-5 ದಿನ ಆಗಬಹುದು…..” ಎಂದು ಬಾಲ್ಕನಿಯಿಂದಲೇ ಎಚ್ಚರಿಸುತ್ತಿದ್ದ.

`ತಾನು ಸಂಜೆ ಬಂದು ಹೊಸದಾಗಿ ಪ್ಯಾಕ್‌ ಮಾಡಿಕೊಡುವುದೇನಿದೆ? ಬೀರುವಿನಲ್ಲಿ ಇಸ್ತ್ರೀ ಮಾಡಿ ಇರಿಸಿದ 4-5 ಜೊತೆ ಬಟ್ಟೆ, ಪ್ರವಾಸಕ್ಕೆ ಬೇಕಾಗುವ ಇತರ ವಸ್ತುಗಳೆಲ್ಲ ಸುಲಭವಾಗಿ ಸಿಗುವಂತಿರುತ್ತವೆ. ಅದನ್ನೆಲ್ಲ ತಾವೇ ತೆಗೆದು ಬ್ರೀಫ್‌ ಕೇಸಿಗೆ ಹಾಕಿಕೊಳ್ಳಬಾರದೇ? ನಾನು ಬರಲಾಗದು…’ ಎಂದು ಹೇಳಬೇಕೆನಿಸಿದರೂ ಅಭ್ಯಾಸಬಲದಿಂದ ಆಗಲೆಂಬಂತೆ ತಲೆ ಆಡಿಸಿಬಿಡುತ್ತಾಳೆ. ಪ್ರವಾಸಕ್ಕೆ ತಯಾರಿ ಎಂಬುದೊಂದು ನೆಪವಷ್ಟೆ, 4-5 ದಿನಗಳ ವಿರಹ ಎದುರಿಸಲು ಮೂಡ್‌ ತರಿಸಿಕೊಂಡು….. ತನ್ನಲ್ಲೇ ಮುಗುಳ್ನಗುತ್ತಾ ಡಾ. ಅರುಂಧತಿ ಹೊರಡುತ್ತಿದ್ದಳು.

ರಸ್ತೆಯಲ್ಲಿ ಸಾಗಿಹೋಗುತ್ತಿದ್ದ ಜನರನ್ನೇ ಗಮನಿಸುತ್ತಾ, ತನ್ನನ್ನು ಅವರಿಗೆ ಹೋಲಿಸಿ ಕೊಳ್ಳುತ್ತಾ, ನಗರದ ಯಾಂತ್ರಿಕ ಜೀವನ ನೆನೆದು ನಿಡುಸುಯ್ಯುತ್ತಾ, `ಯಾರು ತಾನೇ 100% ನೆಮ್ಮದಿಯಾಗಿದ್ದಾರೋ? ಎಲ್ಲರಿಗೂ ಒಂದಲ್ಲ ಒಂದು ಆತಂಕ ತಪ್ಪಿದ್ದಲ್ಲ,’ ಎಂದು ಸಮಾಧಾನಪಟ್ಟುಕೊಳ್ಳುತ್ತಾ ಆಸ್ಪತ್ರೆ ಆವರಣ ಪ್ರವೇಶಿಸುವಳು. `ಈ ಯಾಂತ್ರಿಕ ಜೀವನದಿಂದ ರೋಸಿಹೋಗಿ ಜನ ಹುಚ್ಚು ಹಿಡಿದಂತೆ ಆಡದಿದ್ದರೆ ಸರಿ. ಯಂತ್ರದಂತೆ ಅದೇ ದಿನಚರಿ ಪಾಲಿಸಿ ಸಾಕಾಗಿಹೋಗಿದೆ,’ ಎಂದುಕೊಳ್ಳುವಳು.

ಇದರ ಮಧ್ಯೆ ಒಮ್ಮೊಮ್ಮೆ ರಸ್ತೆ ದಾಟುವಾಗ ರೈಲ್ವೆ ಗೇಟ್‌ ಹಾಕಿ, 15 ನಿಮಿಷಗಳ ಟ್ರಾಫಿಕ್‌ ಶಿಕ್ಷೆ ಕಿರಿಕಿರಿ ಎನಿಸುತ್ತಿತ್ತು. ಬೇರೆ ದಾರಿಯಂತೂ ಇರಲಿಲ್ಲ. ಬೇಗ ರೈಲು ಬಂದು ಹೋಗಲಪ್ಪ ಎಂದು ಅದಕ್ಕಾಗಿ ಕಾಯುವುದೇ ಕೆಲಸವಾಯ್ತು. ಸ್ವಲ್ಪ ಹೊತ್ತಿಗೇ ರೈಲು ದಡಗುಟ್ಟುತ್ತಾ ಧಾವಿಸಿ ಬಂತು. ಅಷ್ಟೊಂದು ಬೋಗಿಗಳನ್ನು ಒಂದೇ ವಲಯದಲ್ಲಿ ಎಳೆದುಕೊಂಡು ಯಾಂತ್ರಿಕವಾಗಿ ಸಾಗುತ್ತಿರುವ ರೈಲ್ವೆ ಎಂಜಿನ್‌ಗೂ ತನಗೂ ಯಾವುದೇ ವ್ಯತ್ಯಾಸವಿಲ್ಲ ಎಂದುಕೊಂಡಳು. ತನ್ನ ಜೀವನ ಬಾಲ್ಯ, ವಿದ್ಯಾಭ್ಯಾಸ, ಕಾಲೇಜು, ಯೌವನ, ಮದುವೆ, ಮಕ್ಕಳು, ಸಂಸಾರ ಎಂಬ ಬೋಗಿಗಳನ್ನು ಎಳೆದುಕೊಂಡು ಹೋಗುತ್ತಲೇ ಇದೆ ಎಂದೆನಿಸಿತು.

ಆಸ್ಪತ್ರೆಯ ಆವರಣದಲ್ಲಿ ಸ್ಕೂಟಿ ಪಾರ್ಕ್‌ ಮಾಡಿ ಈ ಕಡೆ ತಿರುಗಿದಂತೆ, ಹಿರಿಯ ವೈದ್ಯ ಡಾ. ಸುರೇಂದ್ರ ಹೇಳಿದರು, “ನಮಸ್ತೆ…. ಡಾ. ಅರುಂಧತಿ…”

“ನಮಸ್ಕಾರ, ಹೇಳಿ ಸರ್‌.” ಇವಳನ್ನು ಆಪಾದಮಸ್ತಕ ನೋಡಿದ ಡಾಕ್ಟರ್‌, “ರಾತ್ರಿಯ ಸುಸ್ತು ಇನ್ನೂ ಹೋಗಿಲ್ಲ ಅನ್ಸುತ್ತೆ,” ಎಂದು ವ್ಯಂಗ್ಯವಾಗಿ ಕೆಮ್ಮಿದರು.

ಅದನ್ನು ಗಮನಿಸಿದರೂ ಬೆಳಗ್ಗೆ ವಾದ ಮಾಡುವುದೇಕೆಂದು, “ಹ್ಞೂಂ ಸರ್‌. ರಾತ್ರಿ ಓ.ಟಿ.ಯಿಂದ ಸರ್ಜರಿ ಮುಗಿಸಿ ಬರುವಷ್ಟರಲ್ಲಿ 11 ಗಂಟೆ ಆಗಿತ್ತು. ಮನೆ ತಲುಪವಷ್ಟರಲ್ಲಿ 12 ದಾಟಿ ಹೋಗಿತ್ತು.”

ತನ್ನ ಕ್ಯಾಬಿನ್‌ ತಲುಪುತ್ತಿದ್ದಂತೆಯೇ ಇವಳ ಇಂಟರ್‌ಕಾಮ್ ಗುನುಗುಟ್ಟಿತು. ಅವಳು ಯಾಂತ್ರಿಕವಾಗಿ ಅದನ್ನು ರಿಸೀವ್ ‌ಮಾಡಿ, “ಹಲೋ… ಹ್ಞೂಂ….ಈಗ ಬಂದೆ,” ಎಂದಳು.

ನಂತರ ಅವಳು ರಿಸೀವರ್‌ನ್ನು ಯಥಾಸ್ಥಾನದಲ್ಲಿರಿಸಿ, ಕುರ್ಚಿಗೆ ಆರಾಮವಾಗಿ ಒರಗಿ ಕುಳಿತು ತುಸು ಸುಧಾರಿಸಿಕೊಂಡಳು. ಅಷ್ಟರಲ್ಲಿ  ಯಾರೋ ಮೆಡಿಕಲ್ ರೆಪ್‌ ಒಬ್ಬ ಒಳಗೆ ಬಂದು, “ನಮಸ್ಕಾರ ಮೇಡಂ, ನಾನು ಸ್ವಲ್ಪ ಅರ್ಜೆಂಟ್‌ನಲ್ಲಿದ್ದೀನಿ. ನೀವು ದಯವಿಟ್ಟು ಈಗಲೇ ಸ್ವಲ್ಪ ಟೈಂ ಮಾಡಿಕೊಂಡ್ರೆ ಚೆನ್ನಾಗಿರುತ್ತೆ….” ಎಂದು ದುಂಬಾಲು ಬಿದ್ದ.

“ಸಾರಿ, ಈಗ ಆಗಲ್ಲ. 11 ಗಂಟೆ ಮೇಲೆ ಬನ್ನಿ. ನಿಮ್ಮಂಥವರನ್ನು ಭೇಟಿಯಾಗಲೆಂದೇ ಆ ಟೈಂ ಫಿಕ್ಸ್ ಮಾಡಿಸಿದ್ದೀನಿ,” ಎಂದು ಸಹಜವಾಗಿ ನಗುತ್ತಾ ಹೇಳಲು ಯತ್ನಿಸಿದಳು.

ಆತ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಎದ್ದುಹೋದಾಗ, ಕಾಫಿ ತರಿಸಿದಳು. ಕಾಫಿ ಮುಗಿಸಿ ಡಾ. ಮಯಾಂಕ್‌ರ ಕ್ಯಾಬಿನ್‌ಗೆ ಹೊರಟಳು. ಅವರ ಕ್ಯಾಬಿನ್‌ನಲ್ಲಿ ಅದಾಗಲೇ ಯಾರೋ ಕೆಲವರು ಬಂದು ಕುಳಿತಿದ್ದರು. ಡಾ. ಮಯಾಂಕ್‌ ಇವಳನ್ನು ಕಂಡು, “ಬನ್ನಿ ಡಾ. ಅರುಂಧತಿ, ನಾವು ನಿಮಗಾಗಿಯೇ ಕಾಯುತ್ತಿದ್ದೆ,” ಎಂದು ಮುಗುಳ್ನಕ್ಕರು.

ಅವಳು ಕುರ್ಚಿಯಲ್ಲಿ ಕೂರುತ್ತಿದ್ದಂತೆಯೇ ಡಾ. ಮಯಾಂಕ್‌ ಹೇಳಿದರು, “ನೋಡಿ, ಇವರು 2ನೇ ಫ್ಲೋರ್‌ನ ಬೆಡ್‌ ನಂ.10ರ ಪೇಶೆಂಟ್‌ ಕಡೆಯ ಬಂಧುಗಳು. ಇವರ ಮನವಿ ಎಂದರೆ, ನೀವು ಅವರ ಪೇಶೆಂಟ್‌ನ್ನು ವಿಶೇಷವಾಗಿ ಗಮನಿಸಿಕೊಳ್ಳಬೇಕಂತೆ,” ಎಂದು ಸಹಜವಾಗಿ ಆ ಜನರ ಕಡೆ ತಿರುಗಿ ಹೇಳಿದರು.

“ಆದರೆ…. ನಾನು ಎಲ್ಲಾ ಪೇಶೆಂಟ್‌ಗಳನ್ನೂ ನನ್ನ ಕೈಲಾದಮಟ್ಟಿಗೆ ವಿಶೇಷವಾಗಿಯೇ ಗಮನಿಸಿಕೊಳ್ತೀನಿ. ಸಾಧ್ಯವಿರುವ ಮಟ್ಟಿಗೆ ಸರ್ವಶ್ರೇಷ್ಠ ಚಿಕಿತ್ಸೆಯನ್ನೇ ಕೊಡಿಸುತ್ತೇನೆ,” ಅವಳು ಆ ಬಂಧುಗಳ ನಡುವೆ ಕುಳಿತಿದ್ದ ಪುಡಾರಿಯೊಬ್ಬನನ್ನು ಗಮನಿಸಿ ಡಾಕ್ಟರ್‌ ಕಡೆ ತಿರುಗಿ ಹೇಳಿದಳು.

“ನಾನು ನಮ್ಮ ಪಾರ್ಟಿಯ ಜಿಲ್ಲಾಧ್ಯಕ್ಷನಾಗಿದ್ದೇನೆ, ನಂಜುಂಡಪ್ಪ ಅಂತ ನೀವು ಕೇಳಿರಬಹುದು. ಇವರು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಇವರ ಪತ್ನಿಯೇ ನಿಮ್ಮ ಪೇಶೆಂಟ್‌,” ಎಂದು ದೇಶಾವರಿ ನಗೆ ಬೀರಿದ ಆ ಪುಡಾರಿ.

`ಓ…. ಖಾಸಗಿ ಆಸ್ಪತ್ರೆಯಲ್ಲೂ ರಾಜಕೀಯದ ಪ್ರಭಾವ ಬೀರಲು ಬಂದಿದ್ದಾರೆ ಅಂತಾಯ್ತು. ಬೇರೆ ವಿಧದಲ್ಲಿ ಜನಸೇವೆ ಮಾಡುವ ಬದಲು ಇಲ್ಲೂ ಬಂದು ಶಿಫಾರಸ್ಸು ಮಾಡಬೇಕೇ? ನಮ್ಮಂಥ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಎಲ್ಲಾ ರೋಗಿಗಳೂ ಸಮಾನರು. ಇಂಥ ರಾಜಕೀಯ ಪ್ರಭಾವಗಳನ್ನೆಲ್ಲ ಬೇರೆ ಕಡೆ ತೋರಿಸುವುದು ಮೇಲು. ಯಾವ ರೋಗಿಗೆ ಹೇಗೆ ಚಿಕಿತ್ಸೆ ನೀಡಬೇಕೆಂದು ನನಗೆ ಕಲಿಸಲು ಬರಬೇಡಿ!’ ಎಂದು ಕೂಗಿ ಹೇಳೋಣ ಎಂದುಕೊಂಡಳು. ಆದರೆ ಎದುರಿಗೆ ವಿಭಾಗೀಯ ಮುಖ್ಯಸ್ಥರಾದ ಡಾ. ಮಯಾಂಕ್‌ ಅನ್ಯಥಾ ಭಾವಿಸಿ, ಇನ್ನೊಂದಷ್ಟು ಉಪದೇಶ, ಸಲಹೆಗಳಿಂದ ಕೊರೆಯಬಾರದೆನಿಸಿತು. ಎಷ್ಟೋ ಕೇಸುಗಳಲ್ಲಿ ಅವರು ಅಸಹಾಯಕರಾಗಿ ಕೈ ಚೆಲ್ಲಿದ್ದು ಸಹ ಉಂಟು.

“ಹಾಗೇ ಆಗಲಿ ಸರ್‌,” ಎಂದವಳೇ ಅಲ್ಲಿಂದ ಎದ್ದು ಹೊರಬಂದಳು.

ಜನರ್‌ ವಾರ್ಡ್‌ನ ಪ್ರತಿಯೊಬ್ಬ ಒಳರೋಗಿಯನ್ನೂ ಪರೀಕ್ಷಿಸುತ್ತಾ ನಿಧಾನವಾಗಿ ಸಾಗುತ್ತಿದ್ದಳು. ರೋಗಿಗಳ ಬಂಧು ಬಾಂಧವರು ಅವಳನ್ನು ಆಶಾವಾದಿಗಳಾಗಿ ದಿಟ್ಟಿಸುತ್ತಿದ್ದರು. ಬಹಳಷ್ಟು ಜನರ ಕಂಗಳಲ್ಲಿ ಅವಳ ಕಡೆ ಶ್ರದ್ಧಾಭಾವ ತುಂಬಿ ತುಳುಕುತ್ತಿತ್ತು. ಎಲ್ಲರ ಕಂಗಳಲ್ಲೂ ಒಂದೇ ಮೂಕ ಪ್ರಾರ್ಥನೆ, ತಮ್ಮ ರೋಗಿಯನ್ನು ಇನ್ನಷ್ಟು ವಿಶೇಷವಾಗಿ ಗಮನಿಸಿಕೊಳ್ಳಲಿ ಎಂಬುದು. ತನ್ನ ಸಹಾಯಕ ವೈದ್ಯರು, ನರ್ಸುಗಳಿಗೆ ಅಗತ್ಯ ನಿರ್ದೇಶನಗಳನ್ನು ಕೊಟ್ಟು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿದಳು. 3 ಫ್ಲೋರ್‌ಗಳ ರೌಂಡಿಂಗ್‌ ಮುಗಿಸಿ ತನ್ನ ಕ್ಯಾಬಿನ್‌ ಸೇರುವಷ್ಟರಲ್ಲಿ ಅವಳಿಗೆ ಲಘು ತಲೆನೋವು ಶುರುವಾಗಿತ್ತು. ಒಂದು ಸ್ಟ್ರಾಂಗ್‌ ಕಾಫಿ ತರಿಸಿ 2 ಗುಟುಕು ಕುಡಿದಿದ್ದಳು. ಅಷ್ಟರಲ್ಲಿ ಯಾರೋ ರೋಗಿಯ ಕಡೆಯ ನೆಂಟರು, ನರ್ಸ್‌ ಜೊತೆ ಅಲ್ಲಿಗೆ ಧಾವಿಸಿ ಬಂದರು.

“ಡಾಕ್ಟರ್‌, ರೋಗಿಯ ಸ್ಥಿತಿ ಬಹಳ ಗಂಭೀರವಾಗಿದೆ. ಬೇಗ ಬನ್ನಿ,” ಆತ ಹೆಚ್ಚೂಕಡಿಮೆ ಕಿರುಚಿದ್ದರು.

ಅವಳು, `ದಯವಿಟ್ಟು 2 ನಿಮಿಷ ಟೈಂ ಕೊಡಿ. ಒಂದಿಷ್ಟು ಕಾಫಿ ಕುಡಿದು ಬರ್ತೀನಿ. ಅಷ್ಟರಲ್ಲಿ ಏನೂ ತೊಂದರೆ ಆಗದು,’ ಎಂದು ಹೇಳೋಣವೆಂದುಕೊಂಡಳು. ಆದರೆ ಪ್ರಕಟವಾಗಿ ಹೇಳಲಾದೀತೇ? ಇವಳು ಆ ರೋಗಿ ಬಳಿ ತಲುಪುವಷ್ಟರಲ್ಲಿ ಅವನ ನಾಡಿ ಮಿಡಿತ ಕ್ಷೀಣಿಸತೊಡಗಿತ್ತು.

`ನಾನು ನಿಧಾನವಾಗಿ ಕಾಫಿ ಕುಡಿದು ಬಂದಿದ್ದರೆ ಈತ ಕೊನೆ ಕ್ಷಣಗಳನ್ನು ಎಣಿಸಿರುತ್ತಿದ್ದ. ಆಗ ಆ ಆಪಾದನೆ ತನ್ನ ಮೇಲೆಯೇ ಬರುತ್ತಿತ್ತು….’ ಅದನ್ನು ಯೋಚಿಸಿಯೇ ಅವಳ ದೇಹ ಕಂಪಿಸಿತು. ಅದಾದ ನಂತರ ತುರ್ತು ಚಿಕಿತ್ಸೆ ನೀಡಿ ತಕ್ಷಣ ರೋಗಿಯ ಪ್ರಾಣ ಉಳಿಸಿದ್ದಾಯ್ತು. ಆದರೆ ಬಿ.ಪಿ. ಲೆವೆಲ್ ‌ಕ್ಷಣಕ್ಷಣಕ್ಕೂ ಕುಸಿಯುತ್ತಿತ್ತು. ತಕ್ಷಣ ರೋಗಿಯನ್ನು ಓ.ಟಿ.ಗೆ ಶಿಫ್ಟ್ ಮಾಡುವಂತೆ ಆದೇಶಿಸಿ, ಕೂಡಲೇ ಸರ್ಜರಿ ಮಾಡಬೇಕೆಂದು ತಿಳಿಸಿದಳು. ಅದಕ್ಕೆ ಬೇಕಾದ ಸಿದ್ಧತೆಗಳು ನಡೆಯತೊಡಗಿದವು.

ಮತ್ತಿಬ್ಬರು ಸಹಾಯಕರ ನೆರವಿನಿಂದ 1 ಗಂಟೆ ಕಾಲದ ಸರ್ಜರಿ ಮುಗಿಸಿದ್ದಾಯ್ತು. ಪರಿಸ್ಥಿತಿ ಬಿಗಡಾಯಿಸಿ ರೋಗಿ ತೀರಿಕೊಂಡ. ಅದನ್ನು ಅವನ ಕಡೆಯವರಿಗೆ ಸುದ್ದಿ ಮುಟ್ಟಿಸಿ, ಕ್ಯಾಬಿನ್‌ಗೆ ಬಂದು ಕೂರುವಷ್ಟರಲ್ಲಿ ಬಹಳ ಸುಸ್ತಾಗಿತ್ತು. ರೋಗಿ ಕಡೆಯವರು ಶವಾಗಾರದ ಕಡೆಗೆ ಒಯ್ಯಲಾಗುತ್ತಿದ್ದ ಹೆಣ ಕಂಡು ಎದೆ ಬಡಿದುಕೊಂಡು ಅಳುತ್ತಿದ್ದರು. ಸ್ವಲ್ಪ ಹೊತ್ತಿಗೆ ರೋಗಿ ಎನಿಸಿದ್ದ ವ್ಯಕ್ತಿ ಹೆಣವೆಂಬ ನಿರ್ಜೀವ ವಸ್ತುವಾಗಿದ್ದ.

ವೈದ್ಯ ಲೋಕದಲ್ಲಿ ಇಂಥ ಸಾವೇನೋ ಸರ್ವೇ ಸಾಮಾನ್ಯ. ಆಸ್ಪತ್ರೆ ಸಿಬ್ಬಂದಿಗೆ ಇದರಿಂದ ಅಖಂಡ ನಿರ್ಲಿಪ್ತತೆ ಬಂದಿರುತ್ತದೆ. ರೋಗಿ ಕಡೆಯವರಿಗೆ ಮಾತ್ರ ಇದು ಭರಿಸಲಾಗದ ನಷ್ಟವಾಗಿರುತ್ತಿತ್ತು. ಇದೇ ವಿಷಯ ಚಿಂತಿಸುತ್ತಾ ಕ್ಯಾಬಿನ್‌ ಎ.ಸಿ. ತುಸು ಜೋರು ಮಾಡಿದಳು. ಬೆಳಗಿನಿಂದ ಶುರುವಾಗಿದ್ದ ತಲೆನೋವು ಸರ್ಜರಿ ಮುಗಿಸುವಷ್ಟರಲ್ಲಿ ಎರಡು ಪಟ್ಟು ಹೆಚ್ಚಿತ್ತು. 10 ನಿಮಿಷ ತನ್ನ ಕ್ಯಾಬಿನ್‌ಗೆ ಯಾರನ್ನೂ ಕಳಿಸಬೇಡ ಎಂದು ಜವಾನನಿಗೆ ಹೇಳಿ ಸೀಟಿಗೆ ಒರಗಿ ಕಣ್ಣು ಮುಚ್ಚಿದಳು. 2 ನಿಮಿಷ ಕಳೆಯುವಷ್ಟರಲ್ಲಿ ಮೊಬೈಲ್ ಕಿರುಗುಟ್ಟಿತು.

ನಗರದ ಮತ್ತೊಂದು ತುದಿಯಲ್ಲಿದ್ದ ಖ್ಯಾತ ನರ್ಸಿಂಗ್‌ಹೋಂನಿಂದ ಕರೆ ಬಂದಿತ್ತು. ಹಿಂದಿನ ದಿನ ತಾನೇ ಇಲ್ಲಿನ ಒಬ್ಬ ರೋಗಿಯನ್ನು ಅಲ್ಲಿಗೆ ಶಿಫ್ಟ್ ಮಾಡಿಸಿದ್ದಳು. ಆ ಕಡೆಯಿಂದ ಡಾ. ಅರವಿಂದ್‌ ಗಂಭೀರವಾಗಿ ರೋಗಿಯ ಪರಿಸ್ಥಿತಿ ವಿವರಿಸುತ್ತಾ, “ನೀವು ತಕ್ಷಣ ಇಲ್ಲಿಗೆ ಬಂದಿಬಿಡಿ ಮೇಡಂ. ದಿ ಪೇಶೆಂಟ್‌ ಈಸ್‌ ಸಿಂಕಿಂಗ್‌….”

ಅರವಿಂದ್‌ ನರ್ಸಿಂಗ್‌ ಹೋಂನಷ್ಟು ದೂರ ಈಗ ಹೊರಡಬೇಕೇ ಎಂದುಕೊಳ್ಳುವಷ್ಟರಲ್ಲಿ ಅವಳಿಗೆ ಬೆವರು ಒಡೆದಿತ್ತು. ಇಂಥ ಬಿಸಿಲು, ಧಗೆ, ಟ್ರಾಫಿಕ್‌ನ ಶಿಕ್ಷೆ…. ಆದರೆ ಈಗ ಹೋಗದೆ ಅನ್ಯ ದಾರಿಯೇ ಇರಲಿಲ್ಲ.

`ಪತಿಗೆ ಫೋನ್‌ ಮಾಡಿ ತಿಳಿಸಿಬಿಡುವುದೇ ಸರಿ. ಇಲ್ಲದಿದ್ದರೆ ಅವರು ಬರುವ ಹೊತ್ತಿಗೆ ತಾನು ಮನೆ ಸೇರಿರಲು ಸಾಧ್ಯವಿಲ್ಲ,’ ಎನಿಸಿತು. ತಕ್ಷಣ ಪ್ರಸಾದ್‌ಗೆ ಫೋನ್‌ ಮಾಡಿದಳು.

“ನೀವು ಹೊರಡುವಷ್ಟರಲ್ಲಿ ನಾನು ಮನೆಗೆ ಬರಲಾಗದು ಅನ್ಸುತ್ತೆ. ಅರವಿಂದ್‌ ನರ್ಸಿಂಗ್‌ ಹೋಮಿಗೆ ತುರ್ತಾಗಿ ಹೋಗಬೇಕಿದೆ. ಒಬ್ಬ ಪೇಶೆಂಟ್‌ ಸ್ಥಿತಿ ತುಂಬಾ ಸೀರಿಯಸ್‌….”

“ಆದರೆ ನನ್ನ ಪ್ಯಾಕಿಂಗ್‌, ಹೊರಡುವ ತಯಾರಿ…..” ಪ್ರಸಾದ್‌ ತಕ್ಷಣ ಕೇಳಿದ.

“ಈ ಸಲ ನೀವೇ ಮಾಡಿಕೊಳ್ಳಬೇಕಾಗುತ್ತೆ.”

“ಆದರೆ….” ಮತ್ತೇನೂ ಹೆಚ್ಚಿಗೆ ಮಾತನಾಡಲು ಹೋಗದೆ ಅವಳು ಲೈನ್‌ ಕಟ್‌ ಮಾಡಿದಳು. ಮಾತನಾಡಿದಷ್ಟೂ ಪ್ರಸಾದ್‌ಗೆ ಕೋಪ ಹೆಚ್ಚುತ್ತದೆ ಎಂದು ಗೊತ್ತು. ಅರವಿಂದ್‌ ನರ್ಸಿಂಗ್‌ ಹೋಂ ಇಲ್ಲಿಂದ ದೂರ ಇರುವುದಕ್ಕೂ, ಆ ಪೇಶೆಂಟ್‌ ಸೀರಿಯಸ್ ಆಗುವುದಕ್ಕೂ ತಾನು ಹೊಣೆಯೇ ಎನಿಸಿತು.

ಅಲ್ಲಿಗೆ ಹೋಗಿ ಮತ್ತೊಂದು ಸರ್ಜರಿ ಮುಗಿಸಿ ಅವಳು ನೇರವಾಗಿ ಏರ್‌ಪೋರ್ಟ್‌ಗೆ ಗಾಡಿ ತಿರುಗಿಸಿದಳು. ಹೇಗೂ ಮನೆಗೆ ಹೋಗುವಷ್ಟರಲ್ಲಿ ಗಂಡ ಹೊರಟುಬಿಟ್ಟಿರುತ್ತಾನೆ, ಬದಲಿಗೆ ಏರ್‌ಪೋರ್ಟ್‌ನಲ್ಲಿ ಭೇಟಿಯಾಗೋಣ ಎಂದುಕೊಂಡಳು. ಅಲ್ಲಿಗೆ ಹೋಗಿ ಪ್ರಸಾದ್‌ನನ್ನು ಎದುರುಗೊಂಡಾಗ ಅವನ ಕೋಪ ಇನ್ನೂ ಇಳಿದಿರಲಿಲ್ಲ.

“ಹೊರಡುವ ಸಮಯದಲ್ಲಿ ನನ್ನ ಮೂಡ್‌ ಪೂರ್ತಿ ಆಫ್‌ ಮಾಡಿದೆ,” ಎಂದು ರೇಗಾಡಿದ.

ತಾನಾ ದೊಡ್ಡ ಅಕ್ಷಮ್ಯ ಅಪರಾಧ ಮಾಡಿದ್ದೆ ಎಂಬಂತೆ ಅವನನ್ನೇ ದಿಟ್ಟಿಸಿದಳು.

ಅಷ್ಟರಲ್ಲಿ ಚೆಕ್‌ಇನ್‌ಗೆ ಸಮಯವಾಯಿತು ಎಂಬ ಸೂಚನೆ ಬಂತು. ತನ್ನ ಕೋಪ ಹೋಯಿತು ಎಂಬಂತೆ ಅವಳನ್ನು ಹತ್ತಿರಕ್ಕೆ ಸೆಳೆದು ಅಪ್ಪಿಕೊಂಡ. ಅವಳು ಅವನ ಹಣೆಗೆ ಹೂಮುತ್ತನ್ನಿಟ್ಟು ಬೀಳ್ಕೊಂಡಳು. ಅವನು ಲಾಂಜ್‌ ಒಳಗೆ ಹೋಗುವವರೆಗೂ ಕೈ ಬೀಸುತ್ತಾ ನಿಂತು ನಿಧಾನವಾಗಿ ಪಾರ್ಕಿಂಗ್‌ ಕಡೆ ಹೊರಟುಬಂದಳು.

ಅಲ್ಲಿಂದ ಹೊರಡಲಿದ್ದಾಗ ಯಾರೋ ಒಬ್ಬರು, “ನಮಸ್ತೆ ಮೇಡಂ,” ಎಂದಾಗ ಧ್ವನಿ ಬಂದತ್ತ ತಿರುಗಿದಳು. ತನ್ನಂತೆಯೇ ಅಲ್ಲಿಂದ ಹೊರಡಲು ಯತ್ನಿಸುತ್ತಿದ್ದ ಅಪರಿಚಿತ ವ್ಯಕ್ತಿ ಮಾತನಾಡಿಸಿದ್ದನ್ನು ಗಮನಿಸಿದಳು.“ನಿಮಗೆ ನನ್ನ ಗುರುತು ಸಿಗಲಿಲ್ಲ ಅನ್ಸುತ್ತೆ….” ನಸುನಗುತ್ತಾ ಆ ವ್ಯಕ್ತಿ ಹೇಳಿದ, “2 ತಿಂಗಳ ಹಿಂದೆ ನನ್ನ ಹೆಂಡತಿಯನ್ನು ನಿಮ್ಮ ಭಾರ್ಗವಿ ನರ್ಸಿಂಗ್‌ ಹೋಂನಲ್ಲಿ ಗರ್ಭಕೋಶದ ಸರ್ಜರಿಗಾಗಿ ಅಡ್ಮಿಟ್‌ ಮಾಡಿದ್ದೆ. ನಿಮ್ಮಿಂದ ಬಹಳ ಉಪಕಾರವಾಗಿತ್ತು, ಥ್ಯಾಂಕ್ಸ್ ಒನ್ಸ್ ಅಗೇನ್‌. ಈಗವಳು ಆರೋಗ್ಯವಾಗಿ ಗೆಲುವಾಗಿದ್ದಾಳೆ. ನಿಮ್ಮಂಥ ವೈದ್ಯರು ನೂರು ಕಾಲ ಚೆನ್ನಾಗಿರಬೇಕು,” ಎಂದು ಹೃತ್ಪೂರ್ವಕವಾಗಿ ವಂದಿಸಿದ.

“ಒಳ್ಳೆಯದಾಗಲಿ. ಬಿಡುವಾಗಿದ್ದಾಗ ನಿಮ್ಮ ಮನೆಯವರನ್ನು ಮತ್ತೊಮ್ಮೆ ಚೆಕಪ್‌ಗೆ ಕರೆದುಕೊಂಡು ಬನ್ನಿ,” ಎಂದು ಸಾರ್ಥಕಭಾವದಿಂದ ನುಡಿದಳು.

“ಆಗಲಿ ಡಾಕ್ಟರ್‌, ಖಂಡಿತಾ ಬರ್ತೀನಿ,” ಎಂದಾತ ಗಾಡಿ ಸ್ಟಾರ್ಟ್‌ ಮಾಡಿ ಹೊರಟ.

ಆ ಹಳೆಯ ಕೇಸ್‌ ಬಗ್ಗೆ ನೆನೆಯುತ್ತಾ ಮನೆ ಕಡೆ ಹೊರಟಳು. ಅಷ್ಟರಲ್ಲಿ 4 ಗಂಟೆ ಆಗಿಹೋಗಿತ್ತು. ಗೇಟ್‌ನಲ್ಲಿ ಇವಳ ಸ್ಕೂಟಿ ಕಂಡು ಮಕ್ಕಳಿಬ್ಬರೂ ಓಡಿಬಂದರು. ಅವಳು ಮನೆಯೊಳಗೆ ಹೆಜ್ಜೆ ಇಡುತ್ತಿದ್ದಂತೆಯೇ ಓಡಿ ಬಂದು ತೆಕ್ಕೆಗೆ ಬಿದ್ದರು. ಇಡೀ ದಿನದ ದಣಿವು, ಸುಸ್ತು ಎಲ್ಲಾ ಮರೆತು ಅವರನ್ನು ತಬ್ಬಿ ಸಂತೈಸುತ್ತಾ ಸೋಫಾದಲ್ಲಿ ಒರಗಿದಳು.

ಬೇಗ ಬೇಗ ಆ ದಿನ ಶಾಲೆಯಲ್ಲಿ ನಡೆದುದನ್ನು ವರದಿ ಒಪ್ಪಿಸಿದ ಇಬ್ಬರೂ, “ಅಮ್ಮಾ, ಏನಾದರೂ ಮಾಡಿಕೊಡಮ್ಮ,” ಎಂದು ದುಂಬಾಲು ಬಿದ್ದರು. ಬೆಳಗ್ಗೆ ಆಸ್ಪತ್ರೆಯಲ್ಲಿ ಆ ಪೇಶೆಂಟ್‌ ಹೋದಾಗಿನಿಂದ ಅವಳ ಮನಸ್ಥಿತಿ ಇನ್ನೂ ಸರಿಯಾಗಿರಲಿಲ್ಲ.

“ನೀವು ಏನಾದ್ರೂ ತಿನ್ನಿ, ಸಾವಿತ್ರಮ್ಮ ಮಾಡಿಕೊಡ್ತಾರೆ. ನನಗೆ ಬಹಳ ಸುಸ್ತಾಗಿದೆ. ಸ್ನಾನ ಮಾಡಿಬರ್ತೀನಿ,” ಎಂದು ಎದ್ದಳು.

“ಹೋಗಮ್ಮ…. ನೀನೂ ನಮ್ಮ ಜೊತೆ ಬಂದು ತಿನ್ನಬೇಕು,” ಎಂದು ಗಲಾಟೆ ಮಾಡುತ್ತಾ ಅವರು ಮುನಿಸಿಕೊಂಡರು.

“ಸಾವಿತ್ರಮ್ಮ, ಈ ಹುಡುಗರಿಗೆ 2 ದೋಸೆ ಮಾಡಿಕೊಡಿ,” ಎಂದಳು.

“ಆಯ್ತಮ್ಮ, ನಿಮಗೂ ಸೇರಿಸಿ ಮಾಡಲೇ?”

“ಈಗಲೇ ಬೇಡಿ, ನಾನು ಮೊದಲು ಸ್ನಾನ ಮಾಡಿ ಬರ್ತೀನಿ,” ಎಂದು ಹುಡುಗರಿಗೆ ಮತ್ತೊಮ್ಮೆ ಸಮಾಧಾನ ಹೇಳಿ ಹೊರಟಳು.

ಮಕ್ಕಳ ಮನ ನೋಯಬಾರದೆಂದು, ತನಗೆ ಬೇಕಿಲ್ಲದಿದ್ದರೂ ಡೈನಿಂಗ್‌ ಟೇಬಲ್ ಬಳಿ ಬಂದು ಕುಳಿತಳು. ಅದಾಗಲೇ ಎಲ್ಲರ ತಟ್ಟೆಗೂ 2-2 ದೋಸೆ ಬಂದಿತ್ತು. ಅಮ್ಮ ಬರುವುದನ್ನೇ ಕಾದಿದ್ದ ಮಕ್ಕಳು, ಸಂತೃಪ್ತಿಯಿಂದ ಏನೇನೋ ಹೇಳಿಕೊಳ್ಳುತ್ತಾ ತಿಂದು ಮುಗಿಸಿದರು.

ಅದಾದ ಮೇಲೆ ಅವರು ಅಂಗಳದಲ್ಲಿ ಬ್ಯಾಟು ಬಾಲು ಹಿಡಿದು ಆಡಲು ಹೊರಟರು. ಅವಳಿಗೆ ಆಯಾಸ ಎನಿಸಿ ಬಂದು ಮಲಗಿದಳು. ಜೋಂಪು ಹತ್ತಿ 10 ನಿಮಿಷ ಸಹ ಆಗಿರಲಿಲ್ಲ, ಸಾವಿತ್ರಮ್ಮ ಬಂದು ಮೆಲ್ಲಗಿನ ದನಿಯಲ್ಲಿ ಕರೆಯತೊಡಗಿದರು.

“ಅಮ್ಮ….. ಆಸ್ಪತ್ರೆಯಿಂದ ಫೋನ್‌ ಬಂದಿದೆ.”

“ಮಲಗಿದ್ದೀನಿ ಅಂತ ಹೇಳ್ಬಿಡಿ ಸಾವಿತ್ರಮ್ಮ.”

ಮತ್ತೆ 5 ನಿಮಿಷ ಕಳೆಯುಷ್ಟರಲ್ಲಿ ಸಾವಿತ್ರಮ್ಮ ಕರೆದರು, “ಬಹಳ ಅರ್ಜೆಂಟ್‌ ಅಂತೆ ಕಣಮ್ಮ…. ಹೆರಿಗೆ ಕೇಸು ಸೀರಿಯಸ್‌ ಆಗಿದೆ ಅಂತ ಹೆಡ್‌ ನರ್ಸ್‌ ಮೇರಿ ಫೋನ್‌ ಮಾಡಿದ್ದಾರೆ….”

ಮೇರಿ ಫೋನ್‌ ಮಾಡಿದ್ದಾರೆ ಅಂದಮೇಲೆ ಕೇಸ್‌ ಬಹಳ ಸೀರಿಯಸ್‌ ಅಂತಾಯ್ತು, “ಈಗ್ಲೇ ಬಂದೆ ಅಂತ್ಹೇಳಿ,” ಎನ್ನುತ್ತಾ ಎದ್ದು ಸೀರೆ ಉಟ್ಟಳು. ಡಾ. ಮಯಾಂಕ್‌ಗೆ ಈ ರೀತಿ ಒಂದೇ ದಿನ 2-3 ಸರ್ಜರಿಗಳನ್ನು ಒಪ್ಪಿಸಬೇಡಿ ಎಂದು ಹೇಳಿಬಿಡೋಣ ಅಂದುಕೊಳ್ಳುತ್ತಾಳೆ. ಆದರೆ ಅವರೊಂದಿಗಿನ ವ್ಯಾವಹಾರಿಕ ಹಾಗೂ ಆತ್ಮೀಯ ಒಡನಾಟ ಆ ರೀತಿ ಹೇಳದಂತೆ ತಡೆಯುತ್ತದೆ.

ಅವಳು ಸಿದ್ಧಳಾಗಿ ಸ್ಕೂಟಿ ಬಳಿ ಬಂದಳು. ಆಟ ಮುಗಿಸಿದ್ದ ಮಕ್ಕಳಿಬ್ಬರೂ, “ಅಮ್ಮ, ಕಳೆದ ವಾರ ಹೋಗಿದ್ದೆವಲ್ಲ…. ಆ ಹೊಸ ಪಾರ್ಕಿಗೆ ಹೋಗೋಣ. ಅಲ್ಲಿನ ಜಿರಾಫೆ ಜಾರು ಬಂಡೆ, ಫೌಂಟೆನ್‌, ಉಯ್ಯಾಲೆ ಎಲ್ಲವೂ ಚೆನ್ನಾಗಿವೆ,” ಎಂದು ಒತ್ತಾಯ ಮಾಡತೊಡಗಿದರು.

dhaga-prem-ka-2

ಅಲ್ಲಿದ್ದ ವ್ಯೂವ್ ಮಿರರ್‌ನಲ್ಲಿ ತನ್ನನ್ನೇ ನೋಡಿಕೊಂಡ ಅವಳಿಗೆ ಅಪರಾಧಿಪ್ರಜ್ಞೆ ಕಾಡಿತು. `ಏನನ್ನೋ ಸಾಧಿಸಲೇಬೇಕು ಅಂತ ಅಲ್ಲಲೇ ಈ ರೀತಿ ಹಗಲೂರಾತ್ರಿ ದುಡಿಯುತ್ತಾ ಡಾಕ್ಟರ್‌ ಪಟ್ಟ ಹೊತ್ತುಕೊಂಡಿರುವುದು? ತಮ್ಮೊದಿಗೆ ಸಮಯ ಕಳೆಯಬೇಕು ಎಂದು ಹಂಬಲಿಸುವ ಈ ಮಕ್ಕಳಿಗೆ ನಿನ್ನ ಉತ್ತರವೇನು? ನೀನು ಎಲ್ಲರಂತೆ ಸಾಮಾನ್ಯ ಗೃಹಿಣಿಯಲ್ಲದೆ ಯಶಸ್ವೀ ಪ್ರೊಫೆಶನಲ್ ಇರಬಹುದು, ಆದರೆ ಮಕ್ಕಳ ಮುಗ್ಧ ಮನಸ್ಸಿಗೆ ಇದೆಲ್ಲ ಅರ್ಥವಾಗುವುದೇ? ಸದಾ ತಾಯಿಯ ಸಂಗ ಬಯಸುವ ಆ ಮುಗ್ಧರ ಮನಸ್ಸಿನ ಆಸೆಗೆ ಕಲ್ಲುಹಾಕುವೆಯಾ? ಮಕ್ಕಳಿಗೆ ಅಮ್ಮ ಎಂಬ ವ್ಯಕ್ತಿ ಮುಖ್ಯವೇ ಹೊರತು ಆಕೆ ಪ್ರೊಫೆಶನ್‌, ಸೆಲೆಬ್ರಿಟಿಯೇ ಎಂಬುದಲ್ಲ….. ಮಕ್ಕಳಿಗೆ ಬೇಕಿರುವುದು ತಾಯಿಯ ಸಾನ್ನಿಧ್ಯ ಮಾತ್ರ. ಸಂಪಾದನೆ, ಅಧಿಕಾರ, ಪ್ರತಿಷ್ಠಿ, ವರ್ಚಸ್ಸು ಇತ್ಯಾದಿಗಳ ಹೆಸರಿನಲ್ಲಿ ತಾಯ್ತನದ ವಾತ್ಸಲ್ಯ ಕಡೆಗಣಿಸುವುದು ಎಷ್ಟು ಸರಿ….?’ ಈ ಎಲ್ಲಾ ಪ್ರಶ್ನೆಗಳಿಗೆ ಅವಳ ಬಳಿ ಯಾವ ಉತ್ತರ ಇರಲಿಲ್ಲ.

ಅವಳು ಮಕ್ಕಳ ತಲೆಯ ಮೇಲೆ ಪ್ರೀತಿಯಿಂದ ಕೈಯಾಡಿಸುತ್ತಾ, ತಾನು ಏನು ಹೇಳಬೇಕೆಂದಿರುವೆನೋ ಅರ್ಥ ಮಾಡಿಕೊಳ್ಳಿ ಎಂಬಂತೆ ಸೂಚಿಸಿದಳು. ಸ್ವಲ್ಪ ಹೊತ್ತು ಅವರನ್ನು ಮುದ್ದಿಸಿ ನಂತರ, “ನಾಳೆ ಹೋಗೋಣ…. ಇವತ್ತು ಅಮ್ಮನಿಗೆ ಆಸ್ಪತ್ರೆಯಲ್ಲಿ ಅರ್ಜೆಂಟ್‌ ಕೆಲಸವಿದೆ,” ಎಂದು ರಮಿಸಿ, ಸಾವಿತ್ರಮ್ಮನವರಿಗೆ ಅವರನ್ನು ಗಮನಿಸಿಕೊಳ್ಳುವಂತೆ ಹೇಳಿ ಹೊರಟೇಬಿಟ್ಟಳು.

ಅಂತೂ ಆಸ್ಪತ್ರೆ ಕಡೆ ಗಾಡಿ ಓಡಿಸುವಾಗ, ಈ ಹೆರಿಗೆ ಕೇಸುಗಳು ಅದೇಕೆ ಹೊತ್ತಲ್ಲದ ಹೊತ್ತಿನಲ್ಲಿ ಬರುತ್ತವೇ? ಇನ್ನಿಬ್ಬರು ಪ್ರಮುಖ ಲೇಡಿ ಡಾಕ್ಟರ್‌ಗಳನ್ನು ಅಪಾಯಿಂಟ್‌ ಮಾಡಿಕೊಂಡು ತನಗೆ ತುಸು ಬಿಡುವು ನೀಡಬಾರದೇ? ಇಂದು ಡಾ. ಮಯಾಂಕ್‌ರ ಬಳಿ ಈ ವಿಷಯ ಮತ್ತೆ ಮಾತನಾಡಲೇಬೇಕು ಎಂದು ನಿರ್ಧರಿಸಿದಳು.

ಮೇರಿ ಹೇಳಿದಂತೆ ಕೇಸ್‌ ನಿಜಕ್ಕೂ ಬಹಳ ಗಂಭೀರವಾಗಿತ್ತು. ಮಗುವಿನ ತಲೆ ಪೂರ್ತಿ ತಿರುಗಿಬಿಟ್ಟಿದ್ದರಿಂದ, ಕೊನೆ ಘಳಿಗೆಯಲ್ಲಿ ಸಿಝೇರಿಯನ್‌ ಅನಿವಾರ್ಯವಾಯಿತು. ಎಲ್ಲಾ ಮುಗಿಸಿ ತಾಯಿ ಮಗುವನ್ನು ವಾರ್ಡ್‌ಗೆ ಶಿಫ್ಟ್ ಮಾಡಿ, ಮನೆ ತಲುಪುವಷ್ಟರಲ್ಲಿ ರಾತ್ರಿ 10 ಗಂಟೆ ದಾಟಿತ್ತು.

ಟಿ.ವಿ. ನೋಡುತ್ತಿದ್ದ ಮಕ್ಕಳು ಹಾಗೇ ಸೋಫಾದಲ್ಲಿ ಒರಗಿಬಿಟ್ಟಿದ್ದರು. ಅವರ ಊಟ ಆಯಿತೇ ಎಂದು ಸಾವಿತ್ರಮ್ಮನವರನ್ನು ವಿಚಾರಿಸಿ, ಮಕ್ಕಳನ್ನು ಒಳಗೆ ಮಲಗಿಸಿ, ತನಗೆ ಸೇರಿದಷ್ಟು ಊಟ ಮಾಡಿ ಬಂದಳು. ಸಾವಿತ್ರಮ್ಮನ ಮಗ ಬಂದು ತಾಯಿಯನ್ನು ಕರೆದೊಯ್ಯಲು ಕಾಯುತ್ತಿದ್ದ. ಅವರ ಮನೆ ಹತ್ತಿರದಲ್ಲೇ ಇತ್ತು. `ಬೆಳಗ್ಗೆ ಬೇಗ ಬರ್ತೀನಮ್ಮ,’ ಎಂದು ಎಂದಿನಂತೆ ಹೇಳಿ ಅವರು ಹೊರಟುಬಿಟ್ಟರು.

ಮಕ್ಕಳನ್ನು ತಟ್ಟಿ, ಸರಿಯಾಗಿ ಹೊದಿಕೆ ಹೊದಿಸಿ ಅವರ ಹಣೆಗೆ ಹೂ ಮುತ್ತನ್ನಿಟ್ಟು ಮಲಗಲು ಯತ್ನಿಸಿದರೆ ಅವಳಿಗೆ ನಿದ್ದೆ ಎಲ್ಲಿಂದ ಬರಬೇಕು? ಪತಿ ಪ್ರಸಾದ್‌ ಮುಂಬೈಗೆ ಹೊರಟ ವಿಷಯವನ್ನೇ ಮತ್ತೆ ನೆನಪಿಸಿಕೊಂಡಳು. ಆಫೀಸ್‌ ಕೆಲಸವಾಗಿ ಹೊರಟಿದ್ದರೂ, ಮುಖ್ಯವಾಗಿ ತನ್ನ ಗೆಳೆಯ ಡಾ. ಅಮರ್‌ನನ್ನು ಭೇಟಿಯಾಗುವುದು ಅವನ ಉದ್ದೇಶವಾಗಿತ್ತು. ಅಲ್ಲಿ ಮುಂಬೈನ ಮಾತುಂಗಾದಲ್ಲಿ ಡಾ. ಅಮರ್‌ ಹೊಸದಾಗಿ ನರ್ಸಿಂಗ್‌ ಹೋಂ ತೆರೆಯಲಿದ್ದರು. ಅದಕ್ಕೆ ತನ್ನಂಥ ನುರಿತ ಗೈನಕಾಲಜಿಸ್ಟ್ ಹೆರಿಗೆ ವಿಭಾಗದ ಮುಖ್ಯಸ್ಥೆಯಾಗಿ ಬರಬೇಕೆಂಬುದು ಅವರ ಅಪೇಕ್ಷೆ.

ವಾಸಕ್ಕೆ ಮನೆ, ಕಾರು, ಫೋನು ಇತ್ಯಾದಿ ಎಲ್ಲಾ ಸವಲತ್ತುಗಳೂ ಇದ್ದವು. ಪ್ರಸಾದ್‌ಗೆ ಸಹ ಸುಲಭವಾಗಿ ಅವನ ಪ್ರಧಾನ ಕಛೇರಿಯಾದ ಮುಂಬೈಗೆ ವರ್ಗ ದೊರಕಲಿತ್ತು. ವರ್ಗಾವಣೆ ಫೈನ್‌ಗೊಳಿಸಲೆಂದೇ ಅದರ ಫಾರ್ಮಾಲಿಟೀಸ್‌ ಪೂರ್ತಿ ಮಾಡಲು ಹೊರಟಿದ್ದ. ಇಲ್ಲೇ ಬೆಂಗಳೂರಿನಲ್ಲೇ ಇಷ್ಟು ಕಷ್ಟ ಆಗಿರುವಾಗ ಇನ್ನು ಮುಂಬೈನಂಥ ಕಾಂಕ್ರೀಟ್‌ ಕಾಡಿನಲ್ಲಿ ತಾನು ಸದಾ ನರ್ಸಿಂಗ್‌ ಹೋಮಿಗೆ ಬಂಧಿಯಾಗಬೇಕಾದಾಗ, ಮಕ್ಕಳಿಗೆ ತಾಯಿಯಾಗಿ ಉಳಿಯಲು ಸಾಧ್ಯವೇ ಎಂದು ಮತ್ತೆ ಮತ್ತೆ ಯೋಚಿಸಿ ಅವಳು ಅದನ್ನು ಬೇಡ ಎಂದಿದ್ದಳು. ಆದರೆ ಪ್ರಸಾದ್‌ ಅಂಥ ಬಡಪಟ್ಟಿಗೆ ಒಪ್ಪುವನೇ?

ಅವನು ಈ ವಿಷಯ ಖಚಿತ ಮಾಡಿಕೊಂಡು ತಿಳಿಸಿದಾಗ, ಮುಂಬೈನ ಮಹಾಸಾಗರದಲ್ಲಿ ತಾನು ಗೈನಿಕ್‌ ಹೆಡ್‌ ಆಗಿ ಕಾರ್ಯ ನಿರ್ವಹಿಸುವ ಪ್ರತಿಷ್ಠೆಯ ನೆನೆದು ಅವಳಿಗೆ ಹೆಮ್ಮೆ ಎನಿಸಿದರೂ, ಮಕ್ಕಳಿಗೆ ಸಮಯ ನೀಡಲಾಗದ ತನ್ನ ತಾಯಿಯ ಪಾತ್ರ ನೆನೆದು ಅವಳಿಗೆ ಬೇಸರ ನುಗ್ಗಿ ಬಂದಿತ್ತು.

“ಬೇಡ ಪ್ರಸಾದ್‌…. ಮಕ್ಕಳಿಗಿಂತ ಯಾವುದೂ ದೊಡ್ಡದಲ್ಲ…. ಇಲ್ಲೇ ಇಷ್ಟು ಕಷ್ಟ ಆಗಿರುವಾಗ ಇನ್ನು ಆ ಟ್ರಾಫಿಕ್‌ನ ಮಹಾಸಾಗರದಲ್ಲಿ ಸಿಕ್ಕಿಕೊಂಡು ಯಾಂತ್ರಿಕ ನಗರಜೀವನದ ಮಧ್ಯೆ ಮಕ್ಕಳ ಜೊತೆ ಕ್ವಾಲಿಟಿ ಟೈಂ ನೀಡಲು ಸಾಧ್ಯವೇ….?”

“ಏನು ಹೇಳ್ತಿದ್ದಿ ಅವರೂ… ಯಾರಿಗೂ ಇಂಥ ಸುವರ್ಣಾವಕಾಶ ಮತ್ತೆ ಸಿಗುವುದಿಲ್ಲ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಅಂತ ಆಗಬಾರದು. ಮುಂಬೈನಂಥ ಮಹಾನಗರದಲ್ಲಿ ನಾವು ಎಂಥ ಪ್ರೆಸ್ಟೀಜ್‌ ಗಳಿಸುತ್ತೇವೆ, ನನಗೂ ಪ್ರಮೋಶನ್‌ ಮೇಲೆ ಬ್ರ್ಯಾಂಚ್‌ ಇನ್‌ಚಾರ್ಜ್‌ ಆಗಿ ಇಡೀ ಮುಂಬೈ ಶಾಖೆ ನೋಡಿಕೊಳ್ಳುವ ಅವಕಾಶ ಸಿಕ್ಕಿರುವಾಗ ಇದನ್ನು ಬಿಟ್ಟೋರುಂಟೇ? ಡಾ. ಮಯಾಂಕ್‌ ಬಳಿ ತಿಳಿಸಿ ರಾಜೀನಾಮೆ ನೀಡು,” ಎಂದು ಒತ್ತಾಯಿಸಿದ್ದ.

“ಆದರೆ ಈಗ ಇಲ್ಲಿ ನಮ್ಮ ಸುಖ, ಸವಲತ್ತುಗಳಿಗೆ ಏನು ಕಡಿಮೆ ಆಗಿದೆ? ನಮ್ಮಿಬ್ಬರ ಸಂಪಾದನೆ ಸಾಲುತ್ತಿಲ್ಲವೇ? ಮಕ್ಕಳಿಗೆ ನಾನು ಅಪರಿಚಿತಳಾಗುತ್ತೇನಷ್ಟೆ….”

“ಎಂಥ ಮಾತನಾಡ್ತಿದ್ದೀಯ…. ಮಕ್ಕಳ ಬಂಗಾರದ ಭವಿಷ್ಯಕ್ಕಾಗಿಯೇ ಅಲ್ಲವೇ ಇಷ್ಟೆಲ್ಲ ಮಾಡುತ್ತಿರುವುದು? ನಾಳೆ ಇವರಿಬ್ಬರೂ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌, ಅಮೆರಿಕಾಗೆ ಹೋಗಬೇಡವೇ? ಇಷ್ಟು ದಿನ ನಮಗೆ ಇದ್ದ ಮಧ್ಯಮ ವರ್ಗದ ಜೀವನ ನಮ್ಮ ಮಕ್ಕಳಿಗೂ ಬರಬೇಕೇ? ಖಂಡಿತಾ ಬೇಡ! ನೀನು ಒಂದೇ ಮನಸ್ಸಿನಿಂದ ಹೊರಡುವ ತಯಾರಿ ನಡೆಸು,” ಎಂದು ಮಾತು ಮುಗಿಸಿದ್ದ.

ಮಕ್ಕಳಿಗಾಗಿಯೇ ತಾನು ಇನ್ನಷ್ಟು, ಮತ್ತಷ್ಟು ಗಳಿಸುವ ಯಂತ್ರವಾಗುತ್ತಿದ್ದೇನೆ, ಅವರ ಇಂದಿಗಿಂತ ನಾಳೆ ಮುಖ್ಯ ಎಂದೇ ಭಾವಿಸಿ ಅದಕ್ಕಾಗಿ ಈ ಹೊಸ ಏರ್ಪಾಡಿಗೆ ಒಪ್ಪಬೇಕಿದೆ. ಆದರೆ ಈ ರೀತಿ ಸುಖವನ್ನು ಅರಸುತ್ತಾ ಹೊರಟರೆ ಇದು ಗಾಳಿಗೋಪುರ ಆಗುವುದಿಲ್ಲವೇ? ಸದಾ ಬಿಸ್‌ನೆಸ್‌ ಮೈಂಡೆಡ್‌ ತಂದೆ, ಆಸ್ಪತ್ರೆಯಲ್ಲಿ ಮುಳುಗಿರುವ ತಾಯಿ ಬಳಿ ಆ ಮಕ್ಕಳಿಗೆ ಎಂಥ ಭಾವನಾತ್ಮಕ ಸಂಬಂಧ ಉಳಿಯಲು ಸಾಧ್ಯ? ಹೀಗೆ ಯಾಂತ್ರಿಕತೆಗೆ ನಮ್ಮನ್ನು ನಾವು ದಾಸರನ್ನಾಗಿ ಮಾಡಿಕೊಂಡಾಗ ಯಾವ ಸುಖಸಮೃದ್ಧಿ ತಾನೇ ನೆಮ್ಮದಿ, ಮನಶ್ಶಾಂತಿ ತಂದುಕೊಡಬಲ್ಲವು? ಎಲ್ಲವೂ ಗಾಳಿಗೋಪುರವಾದಾಗ ಈ ಶ್ರೀಮಂತಿಕೆಯಿಂದ ಸಾಧಿಸಬೇಕಿರುವುದೇನು?

ಆದರೆ ಮುಂದೆ ಮಕ್ಕಳು ತಾವು ಇಂಥ ಮಧ್ಯಮ ವರ್ಗದ ಜಂಜಾಟದಿಂದ ಬಿಡಿಸಿಕೊಳ್ಳುವ ಅವಕಾಶವಿದ್ದರೂ ಅಮ್ಮ ಅದನ್ನು ತಪ್ಪಿಸದೆ, ಅದೇ ಕಷ್ಟಕ್ಕೆ ನೂಕಿದಳಲ್ಲ ಎಂದು ಕೊರಗುವಂತಾಗಬಾರದು. ಇರಲಿ, ಏನನ್ನಾದರೂ ಪಡೆಯಬೇಕೆಂದರೆ ಇರುವುದೇನನ್ನಾದರೂ ಕಳೆದುಕೊಳ್ಳಲೇ ಬೇಕಂತೆ. ಮಕ್ಕಳ ಮುಂದಿನ ಭವಿಷ್ಯ, ಅವರ ವಿದೇಶೀ ವ್ಯಾಸಂಗ ಎಲ್ಲವನ್ನೂ ನೆನೆದು ಇಂದಿನ ಅನಿವಾರ್ಯ ಸ್ಥಿತಿಗೆ ಅವಳು ಸಜ್ಜಾಗತೊಡಗಿದಳು.

ಮನಸ್ಸಿಲ್ಲದ ಮನಸ್ಸಿನಿಂದ ಅವಳು ಈ ಕರಾರನ್ನು ಒಪ್ಪಲೇಬೇಕಿತ್ತು, ನಾಳೆಯೇ ಡಾ. ಮಯಾಂಕ್‌ರನ್ನು ಬಿಡುವಿನಲ್ಲಿ ಕಂಡು ತನ್ನ ರಾಜೀನಾಮೆ ನೀಡಿ, ಮುಂಬೈಗೆ ತಾವು ಶಾಶ್ವತವಾಗಿ ಶಿಫ್ಟ್ ಆಗಲಿರುವ ವಿಚಾರ ತಿಳಿಸಬೇಕೆಂದು ನಿರ್ಧರಿಸಿದಳು. ಮಕ್ಕಳನ್ನೇ ನೋಡುತ್ತಾ ಯಾವಾಗ ನಿದ್ದೆಗೆ ಜಾರಿದಳೋ ಅವಳಿಗೇ ತಿಳಿಯಲಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ