ರೋಹಿತ್ ಜೊತೆ ಶೀಲಾಳ ಮದುವೆಯಾಗಿ ಸುಮಾರು 3-4 ತಿಂಗಳುಗಳಾಗಿರಬಹುದು. ಒಮ್ಮೆ ಊಟದ ಸಮಯದಲ್ಲಿ ಸ್ಮಿತಾ ತಾನಾಗಿ ಹುಡುಕಿಕೊಂಡು ಶೀಲಾಳ ಆಫೀಸಿಗೆ ಬಂದಿದ್ದು. ತನ್ನ ಪರಿಚಯ ಹೇಳಿಕೊಂಡು ನಂತರ ಒಂಟಿಯಾಗಿ ಮಾತನಾಡಬೇಕೆಂದು ತಿಳಿಸಿದಳು. ಆಗ ಆಫೀಸಿಗೆ ಹತ್ತಿರದಲ್ಲಿದ್ದ ಪಾರ್ಕಿಗೆ ಶೀಲಾ ಸ್ಮಿತಾಳನ್ನು ಕರೆದುಕೊಂಡು ಹೋದಳು. ಅಲ್ಲಿದ್ದ ಒಂದು ಮರದ ಕೆಳಗೆ ಕಲ್ಲು ಬೆಂಚಿನ ಮೇಲೆ ಇಬ್ಬರೂ ಒರಗಿ ಕುಳಿತರು.
ಸ್ವಲ್ಪ ಹೊತ್ತು ಗಂಭೀರವಾಗಿ ಮೌನಕ್ಕೆ ಶರಣಾದ ಸ್ಮಿತಾ ನಂತರ ದೃಢಮನಸ್ಕಳಾಗಿ ಹೇಳತೊಡಗಿದಳು, ``ಶೀಲಾ, ನಿಮಗೆ ನಾನೊಂದು ಶಾಕಿಂಗ್ ಸುದ್ದಿ ಹೇಳಬೇಕಿದೆ. ದಯವಿಟ್ಟು ಗಾಬರಿಯಾಗಬೇಡಿ... ಸ್ವಲ್ಪ ಸಮಾಧಾನದಿಂದ ಕೇಳಿಸಿಕೊಳ್ಳಿ. ನಾನು, ರೋಹಿತ್ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ತನ್ನ ತಾಯಿ ತಂದೆಯರ ಒತ್ತಾಯಕ್ಕೆ ಮಣಿದು ಅವರನ್ನು ಎದುರಿಸಲಾಗದೆ ರೋಹಿತ್ ನಿಮ್ಮನ್ನು ಮದುವೆಯಾದರು. ನಮ್ಮಿಬ್ಬರ ಜಾತಿ, ಅಂತಸ್ತು ಬೇರೆ ಎಂಬುದೇ ಇಲ್ಲಿ ಸಮಸ್ಯೆ ಆಗಿತ್ತು. ನನ್ನಂಥ ಅತಿ ಸಾಧಾರಣ ಬಡವರ ಮನೆ ಹುಡುಗಿ, ಅದೂ ಬೇರೆ ಜಾತಿಯ ಹುಡುಗಿಯನ್ನು ಅವರ ಮನೆಯವರು ಸೊಸೆಯಾಗಿ ಒಪ್ಪಿಕೊಳ್ಳಲು ಸುತಾರಾಂ ಸಿದ್ಧರಿರಲಿಲ್ಲ. ಆದರೆ ನಮ್ಮಿಬ್ಬರ ಪವಿತ್ರ ಪ್ರೇಮ ಸಂಬಂಧ ಮಾತ್ರ ಹಾಗೇ ಮುಂದುವರಿಯಿತು. ಈ ವಿಷಯ ನಿಮಗೆ ತಿಳಿಸಬೇಕೆಂದೇ ನಾನು ಇಲ್ಲಿಗೆ ಬಂದದ್ದು ಶೀಲಾ...''
ಸ್ಮಿತಾಳ ಮಾತು ಕೇಳಿ ಶೀಲಾಳಿಗೆ ಕೆಲವು ಕ್ಷಣ ಮಂಕು ಕವಿದಂತಾಯಿತು. ಮನದಲ್ಲಿ ಇದ್ದಕ್ಕಿದ್ದಂತೆ ವಿಚಿತ್ರ ಭಯ, ಆತಂಕ ಆವರಿಸಿತು. ಶೀಲಾ ಹೇಗೋ ಸಾವರಿಸಿಕೊಂಡು ಹೇಳಿದಳು ``ರೋಹಿತ್ ನನ್ನೊಂದಿಗೆ ಬಹಳ ಸಂತೋಷವಾಗಿದ್ದಾರೆ... ನನಗೆ ನಿಮ್ಮ ಮಾತು ನಂಬಲಾಗುತ್ತಿಲ್ಲ....''
ಅದಕ್ಕೆ ಉತ್ತರಾಗಿ ಸ್ಮಿತಾ ತನ್ನ ಪರ್ಸಿನಿಂದ ಹಲವಾರು ಫೋಟೋಗಳನ್ನು ತೆಗೆದು ಶೀಲಾಗೆ ಕೊಟ್ಟಳು. ಅದನ್ನು ನೋಡಿದ ಮೇಲೆ ಸ್ಮಿತಾಳ ಮಾತುಗಳನ್ನು ನಂಬಲೇಬೇಕಾಯಿತು.
``ಆಗಿದ್ದಾಯ್ತು... ಈಗ ನೀವು ಬೇರೆ ಯಾರನ್ನಾದರೂ ಮದುವೆಯಾಗಿ ರೋಹಿತ್‌ರನ್ನು ಮರೆಯುವುದೇ ಮೇಲು... ಇದರಿಂದ ಅವರ ಸಂಸಾರ ನೆಮ್ಮದಿಯಾಗಿ ಉಳಿಯುತ್ತದೆ. ನೀವು ಹಾಯಾಗಿ ನಿಮ್ಮದೇ ಆದ ಸಂಸಾರ ಹೂಡಿ ಮನೆಮಠ ಮಾಡಿಕೊಳ್ಳಿ, ಇನ್ನೊಂದು ಮುಖ್ಯ ವಿಷಯ ಎಂದರೆ ಆತ ನನ್ನ ಗಂಡ. ನನ್ನ ಗಂಡನಾದವನ ಮೇಲೆ ನಿಮ್ಮದೇನೂ ಹಕ್ಕಿರುವುದಿಲ್ಲ ಅನ್ನೋದು ನೆನಪಿಡಿ!'' ಮಾತು ಮುಗಿಸುವಷ್ಟರಲ್ಲಿ ಶೀಲಾಳಿಗೆ ಅಳು ಉಕ್ಕಿಬಂದಿತ್ತು.
``ಶೀಲಾ ಇನ್ನೊಂದು ವಿಷಯ ಕೇಳಿ... ನಾನೊಬ್ಬ ವಿಚ್ಛೇದಿತ ಹೆಂಗಸು, ನನ್ನ ಕಷ್ಟದ ಸಮಯದಲ್ಲಿ ರೋಹಿ ನನಗೆ ಬಹಳ ಹೆಲ್ಪ್ ಮಾಡಿದ್ದಾನೆ. ಇಲ್ಲದಿದ್ದರೆ ನಾನಿಂದು ಬದುಕಿ ಉಳಿಯುತ್ತಿರಲಿಲ್ಲ. ಏನೋ ಕಾರಣಗಳಿಂದ ನಾವು ಮದುವೆ ಆಗಲಿಲ್ಲ, ಹೀಗಾಗಿ ನಾನು ಬೇರೆ ಮದುವೆ ಆಗಬೇಕಾಯ್ತು. ಆತ ದುಬೈಗೆ ಹೋಗಿ ಸೆಟಲ್ ಆಗಿ ಅಲ್ಲೇ ಬೇರೆ ಮದುವೆಯಾದ, ನಾನು ವಿಚ್ಛೇದನ ಪಡೆದೆ. ನಾನೀಗ ಹೊಸ ಮದುವೆಯ ಬಗ್ಗೆ ಖಂಡಿತಾ ಯೋಚಿಸಲಾರೆ. ನಾನು ನಿಮ್ಮಿಂದ ರೋಹಿ ಬೇರೆ ಆಗಲಿ ಎಂದು ಬಯಸುತ್ತಿಲ್ಲ. ಆದರೆ ಅವನನ್ನು ಬಿಟ್ಟು ನಾನು ಬದುಕಿರಲಾರೆ. ನಮ್ಮ ಮೂವರಿಗೂ ಲಾಭವಾಗುವ ಒಂದೇ ಉಪಾಯವೆಂದರೆ, ಈ ತ್ರಿಕೋನ ಸಂಬಂಧವನ್ನು ಮೂವರೂ ಒಪ್ಪುವುದು. ರೋಹಿಯನ್ನು ನನ್ನೊಂದಿಗೆ ಹಂಚಿಕೊಳ್ಳಲು ನೀವು ಒಪ್ಪಲೇಬೇಕು!''