ಮಳೆ ಬಂತೆಂದರೆ ಎಲ್ಲರಿಗೂ ಮಜವೇ ಮಜಾ! ಬಿಸಿಲಿನ ಬೇಗೆಯಿಂದ ಇದು ಮುಕ್ತಿ ನೀಡುತ್ತದೆ. ಆದರೆ ಈ ಮಳೆಗಾಲ ಬರುವುದಕ್ಕೆ ಮೊದಲೇ ನಾವು ಅಡುಗೆಮನೆಯ ಆಹಾರ ಪದಾರ್ಥಗಳನ್ನು ಜಾಗರೂಕತೆಯಿಂದ ಸಂರಕ್ಷಿಸಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ವಾತಾವರಣದ ತೇವಾಂಶದಿಂದ ಅವು ಹಾಳಾಗುತ್ತವೆ. ಹಾಗಾದರೆ ಅವನ್ನು ಕಾಪಾಡಿಕೊಳ್ಳುವುದು ಹೇಗೆ?

ನೀವು ಬಳಸುವ ಎಲ್ಲಾ ಡಬ್ಬಿಗಳೂ ಏರ್‌ಟೈಟ್‌ ಆಗಿರಲೇಬೇಕು.

ನೀವು ಹೆಚ್ಚು ದಿನಗಳಿಗಾಗಿ ಅಕ್ಕಿ ಅಥವಾ ಗೋದಿ ಸಂಗ್ರಹಿಸುವಿರಾದರೆ, ಮಳೆ ಬರುವುದಕ್ಕೆ ಮೊದಲೇ ಇವನ್ನು ಬಿಸಿಲಲ್ಲಿ ಪಂಚೆ ಮೇಲೆ ಹರಡಿ ಚೆನ್ನಾಗಿ ಒಣಗಿಸಿ. ನಂತರ ಇವನ್ನು ಶುಚಿಗೊಳಿಸಿ. ಯಾವ ಡಬ್ಬಕ್ಕೆ ತುಂಬಬೇಕೋ ಅದರ ತಳಭಾಗಕ್ಕೆ ಮೊದಲು ಒಂದಿಷ್ಟು ಒಣ ಬೇವಿನೆಲೆ ಹರಡಿಕೊಳ್ಳಿ. ಆಮೇಲೆ ಅಕ್ಕಿ, ಗೋದಿ ತುಂಬಿಸಿ. ಅರ್ಧ ಡಬ್ಬ ತುಂಬಿದಾಗ ಒಂದು ಮಕ್ಮಲ್ ಬಟ್ಟೆ ಹರಡಿರಿ. ಅದರ ಮೇಲೆ ಮತ್ತೆ ಒಂದು ಪದರ ಬೇವಿನೆಲೆ ಹರಡಿ. ಇದರ ಮೇಲೆ ಮತ್ತೆ ಬಟ್ಟೆ ಹರಡಿ, ಉಳಿದ ಅಕ್ಕಿ, ಗೋದಿ ತುಂಬಿಸಿ. ಎಲ್ಲಕ್ಕೂ ಮೇಲೆ ಬಟ್ಟೆ ಹರಡಿ, ಬೇವಿನೆಲೆ ಸಹ ಹರಡಬೇಕು. ಮುಚ್ಚಳ ಮುಚ್ಚುವಾಗ ಅದರ ಕೆಳಗೆ ಒಂದು ಪಾಲಿಥಿನ್ ಶೀಟ್‌ ಹರಡಿರಿ. ಆಗ ಹುಳು ಹುಪ್ಪಟೆಗಳ ಕಾಟ ಇರುವುದಿಲ್ಲ.  ಬೇವಿನೆಲೆಯ ಬಳಕೆಯಿಂದ 500 ಬಗೆಯ ಹುಳುಹುಪ್ಪಟೆಗಳನ್ನು ದೂರ ಇರಿಸಬಹುದಾಗಿದೆ.

ಗೋದಿ, ಅಕ್ಕಿ ತುಂಬಿಸುವ ಡಬ್ಬಗಳಿಗೆ ಆಕ್ಸಿ ಪ್ಯಾಕ್‌ ಸಹ ಬಳಸಬಹುದು. ಇದಕ್ಕೆ ಆಕ್ಸಿಜನ್‌ ಹೀರಿಕೊಳ್ಳುವ ಸಾಮರ್ಥ್ಯವಿರುತ್ತದೆ. ಆಕ್ಸಿಜನ್‌ ರಹಿತವಾಗುವುದರಿಂದ ಅಕ್ಕಿ, ಗೋದಿಗೆ ಹುಳುಹುಪ್ಪಟೆಗಳ ಆಕ್ರಮಣ ಆಗುವುದಿಲ್ಲ.

ಅಕ್ಕಿ ಸಂಗ್ರಹಣೆಗೆ ಬೇರೊಂದು ಕ್ರಮ ಇದೆ. ಒಂದು ವೇಳೆ, ಒಂದು ಡಬ್ಬದಲ್ಲಿ 25 ಕಿಲೋ ಅಕ್ಕಿ ತುಂಬಿಸಿದ್ದೀರಿ ಎಂದಿಟ್ಟುಕೊಳ್ಳಿ. ಇದಕ್ಕೆ 25 ಗ್ರಾಂ ಬೋರಿಕ್‌ ಪೌಡರ್‌ ಬೆರೆಸಿಡಿ. ಆಗ ಅಕ್ಕಿಗೆ ಎಂದೂ ಮುಗ್ಗಲು ವಾಸನೆ ಬರುವುದಿಲ್ಲ.

ಅಕ್ಕಿ, ಗೋದಿಯ ದೊಡ್ಡ ಡಬ್ಬಗಳಿಗೆ `ಜಂಡೂ ಫಾರದ್‌’ ಮಾತ್ರೆಗಳನ್ನೂ ಹಾಕಿಡಬಹುದು. ಇದರಿಂದ ಧಾನ್ಯಗಳಿಗೆಂದೂ ಕ್ರಿಮಿಕೀಟಗಳ ಕಾಟವಿರದು.

ಏರ್‌ಟೈಟ್‌ ಡಬ್ಬಿಗಳಲ್ಲಿ ಬೇಳೆಕಾಳುಗಳನ್ನಿಟ್ಟಿದ್ದರೂ ಒಮ್ಮೊಮ್ಮೆ ಮುಗ್ಗಲು ವಾಸನೆ ಬರುವುದು, ಹಾರುವ ಸಣ್ಣ ಕ್ರಿಮಿಕೀಟ ಸೇರಿಕೊಳ್ಳುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಮಳೆಗಾಲದಲ್ಲಿ ಇಂಥ ಡಬ್ಬಗಳಿಗೆ `ಜಂಡೂ ಫಾರದ್‌’ ಮಾತ್ರೆಗಳನ್ನು ಹಾಕಿಟ್ಟರೆ ಬೇಳೆಕಾಳು ಕೆಡುವುದಿಲ್ಲ.

ಅರಿಶಿನ, ಧನಿಯಾ ಪುಡಿ ಮುಂತಾದವು ಹೆಚ್ಚಾಗಿದ್ದರೆ, ಅವಕ್ಕೆ ಜೌಗು ತಗುಲದಿರಲು ಉಪ್ಪಿನ ಗಟ್ಟಿಗಳನ್ನು ಅದರ ಮಧ್ಯೆ ಹಾಕಿಡಿ. ಇದರಿಂದ ಅವು ಕೆಡುವುದಿಲ್ಲ.

ಮಿಕ್ಸಿಯಲ್ಲಿ ಕಾಳು ಮೆಣಸು ಹಾಕಿ ಪುಡಿ ಮಾಡುವಾಗ, ಅದಕ್ಕೆ ತುಸು ಉಪ್ಪು ಸೇರಿಸಿ, ಜೊತೆಗೆ ಕೆಲವು ಹನಿ ಕೊಬ್ಬರಿ ಎಣ್ಣೆ ಸಹ. ಆಗ ಮಳೆಗಾಲದಲ್ಲಿ ಪುಡಿಮೆಣಸು ಹಾಳಾಗುವುದಿಲ್ಲ.

ಮಳೆಗಾಲದಲ್ಲಿ ಪುಡಿ ಉಪ್ಪಿಗೆ ಜೌಗು ತಗುಲಬಾರದು ಎಂದರೆ, ಏರ್‌ಟೈಟ್‌ ಡಬ್ಬಕ್ಕೆ ಮೊದಲು ಬ್ಲಾಟಿಂಗ್‌ ಪೇಪರ್‌ ಹಾಕಿಡಿ. ಒಂದು ಸಣ್ಣ ತುಂಡು ಮಕ್ಮಲ್ ಬಟ್ಟೆಯಲ್ಲಿ ಒಂದಿಷ್ಟು ಅಕ್ಕಿ ಹಾಕಿ ಕಟ್ಟಿಡಿ. ಆಮೇಲೆ ಇದರ ಮೇಲೆ ಉಪ್ಪು ಹಾಕಬೇಕು. ಆಗ ಅದು ನೀರು ಬಿಟ್ಟುಕೊಳ್ಳದು.

ಈ ಕಾಲದಲ್ಲಿ ಬಿಸ್ಕತ್ತು ಸಹ ತೇವಾಂಶದ ಬಾಧೆಗೆ ಒಳಗಾಗುತ್ತದೆ. ಬಿಸ್ಕತ್ತಿನ ಡಬ್ಬಕ್ಕೆ ಮೊದಲೇ ಬ್ಲಾಟಿಂಗ್‌ ಪೇಪರ್‌ ಹರಡಿಕೊಳ್ಳಿ. ಇದರ ಮೇಲೆ ಒಂದಿಷ್ಟು ಸಕ್ಕರೆ ಹರಳು ಉದುರಿಸಿ. ಆಮೇಲೆ ಅದರ ಮೇಲೆ ಬಿಸ್ಕತ್ತು ಜೋಡಿಸಿ. ಯಾವಾಗ ಬಿಸ್ಕತ್ತು ತೆಗೆದರೂ, ಈ ಏರ್‌ಟೈಟ್‌ ಡಬ್ಬದ ಮುಚ್ಚಳನ್ನು ಬಿಗಿಯಾಗಿ ಮುಚ್ಚಿಡಬೇಕು. ಒಂದಷ್ಟು ಬಿಸ್ಕತ್ತುಗಳನ್ನು ಮತ್ತೆ ಡಬ್ಬಕ್ಕೆ ಜೋಡಿಸಬೇಕಾದರೆ, ಬಿಸಿ ತವಾ ಮೇಲೆ ಅವನ್ನು ಇರಿಸಿ ಬಿಸಿ ಮಾಡಿ ಅಥವಾ ಮೈಕ್ರೋವೇವ್‌ನಲ್ಲಿ 30 ಕ್ಷಣ ಬಿಸಿ ಮಾಡಿ, ಆಮೇಲೆ ಅವು ಆರಿದ ನಂತರ ಡಬ್ಬಕ್ಕೆ ಹಾಕಿಡಿ.

ಇನ್‌ಸ್ಟೆಂಟ್‌ ಕಾಫಿಪುಡಿ, ಹಾರ್ಲಿಕ್ಸ್, ಬೋರ್ನ್‌ವೀಟಾ ಇತ್ಯಾದಿಗಳು ಈ ಕಾಲದಲ್ಲಿ ಬೇಗ ಗಟ್ಟಿ ಆಗಿಬಿಡುತ್ತವೆ. ಆದ್ದರಿಂದ ಪ್ರತಿ ಸಲ ಇವನ್ನು ಹೊರತೆಗೆಯುವಾಗಲೂ ಚೆನ್ನಾಗಿ ಒರೆಸಿದ ಒಣ ಚಮಚವನ್ನೇ ಬಳಸಬೇಕು. ಆಯಾ ಬಾಟಲ್ ಮುಚ್ಚುವ ಮುನ್ನ, ಬಾಟಲಿಯ ಬಾಯಿಗೆ ಕ್ಲಿಂಗ್‌ ಫಿಲ್ಮ್ ಅಂಟಿಸಬೇಕು, ನಂತರ ಬಾಟಲನ್ನು ಫ್ರಿಜ್‌ನಲ್ಲಿಡಬೇಕು. ಹೀಗೆ ಇನ್ನು ಗಟ್ಟಿಯಾಗದಂತೆ ತಡೆಯಬಹುದು.

ಬೆಂಕಿಕಡ್ಡಿ ಬಳಸುವವರು ಬೆಂಕಿಪೊಟ್ಟಣವನ್ನು ಸದಾ ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿಡಬೇಕು, ಒದ್ದೆ ಕೈನಲ್ಲಿ ಎಂದೂ ಮುಟ್ಟಬೇಡಿ.

ಗೋದಿಹಿಟ್ಟು, ರವೆ, ಮೈದಾ, ಕಡಲೆಹಿಟ್ಟು ಮುಂತಾದುವೆಲ್ಲ ಈ ಕಾಲದಲ್ಲಿ ಬೇಗ ಹಾಳಾಗುತ್ತವೆ. ರವೆಗೆ ಹುಳು ಬೀಳುವುದು ಸಾಮಾನ್ಯ. ಹಾಗಾಗದಿರಲು ಅದನ್ನು ಹುರಿದು, ಆರಿದ ನಂತರ ಏರ್‌ಟೈಟ್‌ ಡಬ್ಬಕ್ಕೆ ತುಂಬಿಸಬೇಕು. ಕಡಲೆಹಿಟ್ಟು, ಮೈದಾ, ಗೋದಿಹಿಟ್ಟಿನ ಡಬ್ಬಗಳಿಗೆ ಕಲ್ಲುಪ್ಪಿನ ಗಟ್ಟಿಗಳನ್ನು ಹಾಕಿಟ್ಟರೆ ಅವು ಕೆಡುವುದಿಲ್ಲ.

ಹುಣಿಸೇಹಣ್ಣಿಗೆ ತುಸು ಕಲ್ಲುಪ್ಪು ಬೆರೆಸಿ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನಂತರ ಏರ್‌ಟೈಟ್‌ ಡಬ್ಬಕ್ಕೆ ತುಂಬಿಸುವುದರಿಂದ ಅದು ಬೇಗ ಕೆಡುವುದಿಲ್ಲ.

ಮಳೆಗಾಲದಲ್ಲಿ ಉಪ್ಪಿನಕಾಯಿ ಕೆಡುವುದು ಸಾಧಾರಣ ವಿಷಯ. ಸಾಮಾನ್ಯವಾಗಿ ಮನೆಯಲ್ಲಿ ತಯಾರಾಗುವ ಉಪ್ಪಿನಕಾಯಿಗೆ ಯಾವುದೇ ಕೆಮಿಕಲ್ ಪ್ರಿಸರ್ವೇಟಿವ್ಸ್ ಬಳಸಿರುವುದಿಲ್ಲ. ನಿಂಬೆ ಉಪ್ಪಿನಕಾಯಿ ಇನ್ನೇನು ಕೆಡಬಹುದು ಎಂದೆನಿಸಿದಾಗ, ಅದರ ಮೇಲ್ಭಾಗದಲ್ಲಿ ಒಂದು ಪದರ ಸಕ್ಕರೆ ಉದುರಿಸಿ, ಆಗ ಅದು ಕೆಡುವುದಿಲ್ಲ. ಅದೇ ತರಹ ಮಾವಿನ ಉಪ್ಪಿನಕಾಯಿಗೆ, ತುಸು ಎಣ್ಣೆಗೆ ಇಂಗಿನ ಒಗ್ಗರಣೆ ಕೊಟ್ಟು ಇದರ ಮೇಲೆ ಹಾಕಿಡಿ. ಇದರ ಭರಣಿಗೆ ಬಟ್ಟೆ ಕಟ್ಟಿ, ಗಟ್ಟಿಯಾಗಿ ಮುಚ್ಚಿಡಿ.

ಪ್ರತಿ ಸಲ ಭರಣಿಯಿಂದ ಉಪ್ಪಿನಕಾಯಿ ತೆಗೆದುಕೊಳ್ಳುವಾಗಲೂ ಚೆನ್ನಾಗಿ ಒಣಗಿದ ಮರದ ಸೌಟನ್ನೇ ಬಳಸಬೇಕು.

ಸಾಧ್ಯವಾದಷ್ಟೂ ಮಳೆಗಾಲದಲ್ಲಿ ಬೇಗ ಮುಗಿದುಹೋಗುವಂತೆ, ಕಡಿಮೆ ಪ್ರಮಾಣದ ಆಹಾರ ಪದಾರ್ಥ ಕೊಳ್ಳಿರಿ.

ನಿರ್ಮಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ