ಬಸ್ಸು ವೇಗವಾಗಿ ತನ್ನ ಗುರಿಯತ್ತ ಚಲಿಸುತ್ತಿತ್ತು. ಮಮತಾ ನವ ವಧುವಿನ ಅಲಂಕಾರದಲ್ಲಿ ರೇಶಿಮೆ ಸೀರೆಯ ಸೆರಗನ್ನು ಮೈತುಂಬಾ ಹೊದ್ದು ಸೀಟಿನ ಒಂದು ಕಡೆ ಮುದುಡಿಕೊಂಡು ಕುಳಿತಿದ್ದಳು. ಶ್ರೀರಂಗಪಟ್ಟಣದ ತವರನ್ನು ಬಿಟ್ಟು ಬೆಂಗಳೂರಿನ ಅತ್ತೆಮನೆಗೆ, ಮದುಣಗಿತ್ತಿ ಮಮತಾ ಆತಂಕದಿಂದ ಹೊರಟಿದ್ದಳು.

ತನ್ನವರನ್ನೆಲ್ಲ ತೊರೆದ ನೋವು ಮನಸ್ಸಿನ ಮೂಲೆಯಲ್ಲಿ ತುಂಬಿತ್ತಾದರೂ, ಬೀಳ್ಕೊಡುಗೆಯ ಕಣ್ಣೀರು ಇದೀಗ ಆರಿತ್ತು. ಅತ್ತೆಮನೆಯಲ್ಲಿ ತನಗೆ ದೊರಕಬಹುದಾದ ಸ್ವಾಗತ, ಅಲ್ಲಿನ ಹೊಸ ಜೀವನ, ಗಂಡನ ಪ್ರೇಮ ಪ್ರೀತಿ, ಇವುಗಳನ್ನೆಲ್ಲ ನೆನೆದು ಬಹಳ ಗಾಬರಿಗೊಂಡಿದ್ದಳು.

ಒಂದು ವಿಚಾರವನ್ನು ತವರಿನಲ್ಲಿ ಎಲ್ಲರೂ ಕಡೆಗಣಿಸಿದ್ದರು. ತಾಯಿ ತಂದೆ, ಅಣ್ಣ ಅತ್ತಿಗೆ ಎಲ್ಲರೂ ಬೇಕೆಂದೇ ಆ ವಿಷಯವನ್ನು ತೇಲಿಸಿಬಿಡುತ್ತಿದ್ದರು ಎನ್ನಬಹುದು. ತಾನು ಇಲ್ಲಿಂದ ಅತ್ತೆಮನೆಗೆ ಹೋದ ಮೇಲೆ ಅಲ್ಲಿ ಯಾವುದೋ ಗಂಭೀರವಾದ ಪರಿಸ್ಥಿತಿಯೊಂದನ್ನು ಎದುರಿಸಬೇಕಾಗುತ್ತದೆಂದು ಎದೆ ಬಾರಿ ಬಾರಿಗೂ ಹೊಡೆದುಕೊಳ್ಳುತ್ತಿತ್ತು. ಇದಕ್ಕೆಲ್ಲಾ ಮೂಲಕಾರಣವೆಂದರೆ, ಮೃತ್ಯುಂಜಯ ಸಹಜವಾಗಿ ಮದುಮಗನಿಗೆ ಇರಬೇಕಾದ ಸಂತೋಷದೊಂದಿಗೆ ಹಸೆಮಣೆ ಏರಿದಂತೆ ಕಾಣಲಿಲ್ಲ. ಬದಲಿಗೆ ಬಲಿಪೀಠ ಏರಿದ ಕುರಿಯಂತೆ, ಗಂಟು ಮುಖ ಹಾಕಿಕೊಂಡು, ಸಿಡಿಮಿಡಿಗುಟ್ಟುತ್ತ ಅಂತೂ ಮದುವೆ ಆಯಿತು ಎನ್ನಿಸಿದ್ದ.

ಮೃತ್ಯುಂಜಯ ಅವಳನ್ನು ಅದೀಗ ತಾನೇ ವಿವಾಹವಾಗಿದ್ದ ಗಂಡ, ಹೊಸ ಮದುಮಗ, ನಿನ್ನೆ ತಾನೇ ಮದುವೆಯಾದ ಹೆಂಡತಿಯಲ್ಲಿ ತೋರಬಹುದಾದ ಸಹಜ ಕುತೂಹಲದಲ್ಲಿ ಒಂದಂಶವನ್ನೂ ವ್ಯಕ್ತಪಡಿಸಿರಲಿಲ್ಲ. ಮುಕ್ಕಾಲು ಗಂಟೆ ಪ್ರಯಾಣದಲ್ಲಿ ನಾಲ್ಕಕ್ಕೂ ಮೀರಿ ಸಿಗರೇಟನ್ನು ಸುಟ್ಟಿದ್ದನೇ ಹೊರತು ಔಪಚಾರಿಕವಾಗಿಯೂ, ಅಪ್ಪಿತಪ್ಪಿ ಅವಳನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಮಾತುಗಳಿರಲಿ ಅವಳ ಮುಖ ಪರಿಚಯ ಅವನಿಗೆ ಸರಿಯಾಗಿ ಆಗಿರಲಿಲ್ಲವೆಂದರೆ ಅತಿಶಯೋಕ್ತಿಯಲ್ಲ. ಹೊಸ ಮದುಮಗನನ್ನು ಛೇಡಿಸುತ್ತಿದ್ದ ಅಣ್ಣ ಅತ್ತಿಗೆ, ತಮ್ಮ ತಂಗಿಯರ ಸರಸ ಸಂಭಾಷಣೆಗೂ ನಿರ್ಲಿಪ್ತನಾಗಿದ್ದ. ಗಂಡಿನ ಕಡೆಯವರು ಲಗ್ನ ಮಂಟಪಕ್ಕೆ ಬರುತ್ತಿರುವಾಗಲೇ ಮೃತ್ಯುಂಜಯನ ಗಂಟು ಮುಖವನ್ನು ನೋಡಿ ನಾಲ್ಕಾರು ಮಾತುಗಳು ಕೇಳಿಬಂದವು.

“ಹುಡುಗನಿಗೆ ಮದುವೆ ಇಷ್ಟ ಇಲ್ಲಾಂತ ಕಾಣುತ್ತೆ.”

“ಅದೇನು, ಸಾಕಷ್ಟು ವರದಕ್ಷಿಣೆ ಕೊಟ್ಟಿಲ್ಲವಂತೇನು?”

“ಅಯ್ಯೋ ಅದ್ಲಾರೀ, ಅವನು ನಯಾ ಪೈಸೆ ವರದಕ್ಷಿಣೆಯೂ ಬೇಡ ಅಂದನಂತೆ.”

“ಮತ್ತೆ ಇನ್ನೇನಂತೆ…..?”

“ಏನೂ ಅರ್ಥವಾಗ್ತ ಇಲ್ಲ. ಮದುಮಗನ ಅವತಾರ ನೋಡಿ ಹುಡುಗಿಯ ಅಣ್ಣತಮ್ಮಂದಿರು ಪೆಚ್ಚಾಗಿದ್ದಾರೆ.”

“ಏನೋ ಇರಬೇಕು. ಬೆಂಕಿಯಿಲ್ಲದೆ ಹೊಗೆಯಾಡಲ್ಲ ಬಿಡಿ….”

ಮಮತಾಳ ಕಿವಿಗೆ ಈ ಮಾತುಗಳು ಬೀಳುತ್ತಿದ್ದಂತೆ ಜೀವ ನಡುಗತೊಡಗಿತು. ಮೊದಲು ಹೆಣ್ಣು ನೋಡುವ ಶಾಸ್ತ್ರಕ್ಕೂ ಸಹ ಮೃತ್ಯುಂಜಯ ದಯಮಾಡಿಸಿರಲಿಲ್ಲ. ತನ್ನನ್ನು ನೋಡುವಷ್ಟೂ ತಾಳ್ಮೆ ಇಲ್ಲವೇ ಅಥವಾ ಪುರಸತ್ತಿಲ್ಲವೇ? ಹೆತ್ತವರ, ಅಣ್ಣತಮ್ಮಂದಿರ ಆತ್ಮವಿಶ್ವಾಸ, ಗಂಡಿನ ಕಡೆಯವರ ಅನುನಯ ವರ್ತನೆಗೆ ಮಾರುಹೋಗಿ ವಿವಾಹಕ್ಕೆ ಒಪ್ಪಿದ್ದಳು. ವರ ಪೂಜೆಯ ದಿನ ಕಿಟಕಿಯಿಂದ ನೋಡಿದಾಗ, ಅವನೊಬ್ಬ ಆಕರ್ಷಕ, ಮನೋಹರ ಆದರೆ ಭಾವಹೀನ, ಅನಾಸಕ್ತ ತರುಣನಂತೆ ಕಂಡುಬಂದಿದ್ದ. ಅವನ ರೂಪಿಗೆ ಮರುಳಾದರೂ, ಕಣ್ಣಲ್ಲಿ ಕಂಡ ಅನಾಸಕ್ತಿಗೆ ಮಮತಾ ವಿಹ್ವಲಗೊಂಡಳು. ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂಬ ಉತ್ಸಾಹ ಎಳ್ಳಷ್ಟೂ ಅವನಲ್ಲಿ ಇರಲಿಲ್ಲ. ಎಷ್ಟೋ ಬಾರಿ ಅವನು ಬೇಸರದಿಂದ ಇವಳ ಅಣ್ಣನಿಗೆ ಹೇಳುತ್ತಿದ್ದದ್ದೂ ಕಿವಿಗೆ ಬಿತ್ತು, “ಇದೆಲ್ಲಾ ಬೇಗ ಬೇಗ ಮುಗಿಸಲು ಆಗುವುದಿಲ್ಲವೇ? ಮದುವೆ ಮಂಟಪಕ್ಕಂತೂ ಬಂದಿದ್ದು ಆಯ್ತಾ?”

ಇದರಿಂದ ಮಮತಾಳಿಗೆ, ಅವನು ತನ್ನನ್ನು ವರಿಸಲು ಸುತಾರಾಂ ಇಷ್ಟಪಡುತ್ತಿಲ್ಲ. ಬದಲಿಗೆ ಯಾರದೋ ಬಲವಂತಕ್ಕೆ ವಿಧಿಯಿಲ್ಲದೆ ಹಸೆಮಣೆ ಏರಿದ್ದಾನೆ ಎಂದು ಸ್ಪಷ್ಟವಾಗಿ ತಿಳಿದುಹೋಯಿತು.

ಆಕಸ್ಮಿಕವಾಗಿ, ಬಸ್‌ ಬ್ರೇಕ್‌ ಹಾಕಿದ್ದರಿಂದ, ಮುಂದಕ್ಕೆ ಮುಗ್ಗರಿಸಿದ ಮಮತಾ, ಗಾಬರಿಯಲ್ಲಿ ಗಂಡನ ತೋಳನ್ನು ಅಪ್ಪಿಕೊಂಡಳಾದರೂ, ಮರುಕ್ಷಣವೇ ಲಜ್ಜೆ ಅಸಹಾಯಕತೆಯಿಂದ ತನ್ನನ್ನು ತಾನೇ ಸುಧಾರಿಸಿಕೊಂಡಳು. ಮೃತ್ಯುಂಜಯನಾದರೋ ಯಾವುದೇ ವಿಧವಾದ ಉದ್ವಿಗ್ನತೆಗೆ ಒಳಗಾಗದೆ ಮತ್ತೊಂದು ಸಿಗರೇಟನ್ನು ಹೊತ್ತಿಸುತ್ತಿದ್ದ. ಹೆಂಡತಿಯ ಮೈ ಸ್ಪರ್ಶ ಅವನಲ್ಲಿ ಯಾವುದೇ ವಿಧವಾದ ರೋಮಾಂಚನವನ್ನೂ ಉಂಟು ಮಾಡಲಿಲ್ಲ. ಅಷ್ಟರಲ್ಲಿ ಹಿಂದಿನಿಂದ ಹಿರಿಯ ನಾದಿನಿಯ ಸ್ವರ ಕೇಳಿ ಬಂತು, “ ಮೃತ್ಯುಂಜಯ, ಅತ್ತಿಗೆಗೆ ಕುಡಿಯಲು ನೀರು ಬೇಕೇನೋ… ಕೇಳೋ?”

ಮಮತಾಳಿಗೆ ಒಳ್ಳೇ ಬಿಸಿ ಬಿಸಿ ಕಾಫಿ ಕುಡಿಯುವ ಬಲವಾದ ಇಚ್ಛೆ ಉಂಟಾಗಿತ್ತು. ಹಿಂದಿನ ರಾತ್ರಿ ಪೂರ್ತಿ ಎಲ್ಲರನ್ನೂ ಬೀಳ್ಕೊಟ್ಟು ಅತ್ತುಗಿತ್ತು ಮಾಡಿ, ನಿದ್ರೆಯಿಲ್ಲದ ಕಾರಣ ತಲೆ ಧಿಂ ಎಂದು ನೋಯುತ್ತಿತ್ತು. ಆದರೆ ಈ ವಾತಾವರಣದಲ್ಲಿ ತನ್ನ ಮನದಾಸೆಯನ್ನು ಯಾರಲ್ಲಿ ತೋಡಿಕೊಂಡಾಳು?

“ನೀರು ಕುಡೀತಿಯೇನು?” ಗಂಭೀರವಾದ ದನಿ ಕೇಳಿಸಿತು.

“ಬೇಡ,” ಎಂಬ ಮೃದುವಾದ ಉತ್ತರ ಬಂದೊಡನೆ, ಮತ್ತೆ ಪರಿಸ್ಥಿತಿ ಎಂದಿನಂತಾಯಿತು.

ಸ್ವಲ್ಪ ಹೊತ್ತು ವಿವಿಧ ವಿಚಾರ ತರಂಗಗಳಲ್ಲಿ ಮುಳುಗಿ ಏಳುತ್ತಿದ್ದ ಮಮತಾಳಿಗೆ, ಕಣ್ಣು ಎಳೆಯತೊಡಗಿತು. ಸ್ವಲ್ಪ ಹೊತ್ತಾದ ನಂತರ ನಿದ್ರೆ ತಿಳಿಯಾದಾಗ, ಕಣ್ಣು ಬಿಟ್ಟು ತಾನಿದ್ದ ವಾತಾವರಣವನ್ನು ಅರ್ಥೈಸಿಕೊಂಡಳು. ಬಸ್ಸಿನಲ್ಲಿ ಬಹಳಷ್ಟು ಪ್ರಯಾಣಿಕರು ನಿದ್ರಿಸುತ್ತಿದ್ದರು. ಮಮತಾ ತನ್ನ ಪಕ್ಕದಲ್ಲಿ ಕುಳಿತಿದ್ದ ಗಂಡನನ್ನು ನಿರ್ಭಯವಾಗಿ, ನಿರಾಳವಾಗಿ ದೃಷ್ಟಿಸಿದಳು. ಏಕೆಂದರೆ ಎಲ್ಲಾ ಆಲೋಚನೆಗಳನ್ನೂ ಮರೆತು ಅವನೂ ಹಾಯಾಗಿ ನಿದ್ರಿಸುತ್ತಿದ್ದ.

ಕಳಂಕರಹಿತ, ಅತ್ಯಾಕರ್ಷಕವಾದ ಆ ಮುಗ್ಧ ಮುಖವನ್ನು ಮತ್ತೆ ಮತ್ತೆ ನೋಡಬೇಕೆನಿಸಿತವಳಿಗೆ. ಈತ ತನ್ನ ಗಂಡ ಎಂದು ತಿಳಿದು ಹೆಮ್ಮೆಯೆನಿಸಿತಾದರೂ, ಮರುಕ್ಷಣವೇ ಅವನ ಸ್ವಭಾವದಿಂದಾಗಿ ಅವಳ ಉತ್ಸಾಹದ ಬಲೂನಿಗೆ ಸೂಜಿ ತಗುಲಿತು. ತನ್ನನ್ನು ಮದುವೆಯಾಗಿ ಈ ಮನುಷ್ಯ ಏಕೆ ಎರಡೂ ಕಡೆಯವರಿಗೆ ಇಷ್ಟೊಂದು ಬೇಸರವನ್ನು ತರಿಸುತ್ತಿದ್ದಾನೆ ಎಂದು ಅವಳಿಗೆ ಅರಿವಾಗಲಿಲ್ಲ.

ಸುಮಾರು ಮೂರು ಗಂಟೆಯ ಪ್ರಯಾಣದ ನಂತರ ಬಸ್ಸು ಬೆಂಗಳೂರು ಪ್ರವೇಶಿಸಿ, ಜಯನಗರದ ಬಳಿ ಇದ್ದ ಭವ್ಯ ಬಂಗಲೆಯ ಮುಂದೆ ಬಂದು ನಿಂತಿತು. ಬಸ್ಸಿನಿಂದ ಇಳಿದೊಡನೆ ಸೀದಾ ದಡಬಡಿಸಿ ಒಳನುಗ್ಗುವುದರಲ್ಲಿದ್ದ ಮೃತ್ಯುಂಜಯನನ್ನು ಹಿರಿಯ ನಾದಿನಿ ಸರೋಜಾ ಕಣ್ಸನ್ನೆಯಲ್ಲೇ ಮಮತಾಳ ಕೈ ಹಿಡಿದುಕೊಂಡು ನಿಧಾನವಾಗಿ ಕರೆತರಬೇಕೆಂದು ಸೂಚಿಸಿದಳು. ಮೃತ್ಯುಂಜಯ ಸ್ವಲ್ಪ ತಡೆದು, ನಂತರ ಪತ್ನಿ ಸಮೇತನಾಗಿ ಬಾಗಿಲಿನ ಬಳಿ ಬಂದ. ಅಲ್ಲಿ ಅತ್ತೆ ಹಾಗೂ ಇನ್ನಿತರ ಹಿರಿಯ ಮುತ್ತೈದೆಯರು ದಿಢೀರ್‌ ಎಂದು ಒಳನುಗ್ಗುವನನ್ನು ತಡೆದರು.

“ಇಲ್ಲದ ಶಾಸ್ತ್ರದ ನೆಪದಲ್ಲಿ, ನನ್ನನ್ನು ಬಹಳ ಹೊತ್ತು ಇಲ್ಲಿ ಕಾಯಿಸಬೇಡಿ,”  ಮೃತ್ಯುಂಜಯ ಅವರನ್ನು ಎಚ್ಚರಿಸಿದ.

“ಇರಪ್ಪ, ಲಕ್ಷಣವಾಗಿ ಆರತಿ ಮಾಡಿ ಬರಮಾಡಿಕೊಳ್ಳಬೇಡವೇ,” ಯಾವುದೋ ಅಜ್ಜಿ ಹೇಳಿತು.

“ನನಗೆ ಬಹಳ ಸುಸ್ತಾಗಿದೆ. ಇದನ್ನೆಲ್ಲಾ ಬೇಗ ಮುಗಿಸಿ, ಜಾಸ್ತಿ ಹೊತ್ತು ನಾನು ಇಲ್ಲಿ ನಿಂತಿರಲಾರೆ,” ಮೃತ್ಯುಂಜಯ ಕಡ್ಡಿ ಮುರಿದಂತೆ ಮಾತನಾಡಿದ.

ಅಷ್ಟರಲ್ಲಿ ಚಿಕ್ಕಮ್ಮ ಅವನನ್ನು ತಮಾಷೆ ಮಾಡಿದಳು. “ಇದೇನೋ ಮೃತ್ಯೂ, ನಮ್ಮನ್ನೆಲ್ಲಾ ತಳ್ಳಿಕೊಂಡು, ಪಕ್ಕದಲ್ಲಿರುವ ಅಪ್ಸರೆಯನ್ನು ಈಗಲೇ ರೂಮಿಗೆ ಎಳೆದೊಯ್ಯುವೆಯೇನು?” ಅಲ್ಲಿದ್ದ ಮಹಿಳೆಯರೆಲ್ಲಾ ಕಿಲಕಿಲನೆ ನಗತೊಡಗಿದಾಗ, ಮಮತಾ ನಾಚಿಕೆಯಿಂದ ಮತ್ತಷ್ಟು ತಲೆ ತಗ್ಗಿಸಿದಳು.

“ಸರಿ ಸರಿ, ಈ ಅಪ್ಸರೆಯನ್ನು ನೀವೇ ಇಟ್ಟುಕೊಳ್ಳಿ,” ಸಿಡಿಮಿಡಿಗುಟ್ಟುತ್ತ ಅವನು ಬಡಬಡಿಸಿದ.

ಮಮತಾಳಿಗೆ ಎತ್ತಿ ಕುಕ್ಕಿದಂತಾಯಿತು. ತಾನು ಮಾಡಿರು ಅಪರಾಧವಾದರೂ ಏನು? ಏನೂ ಅರ್ಥವಾಗಲಿಲ್ಲ.

ಈ ಮಾತುಕತೆಗಳಾಗುವಷ್ಟರಲ್ಲಿ ಬುದ್ಧಿಮತಿಯಾದ ಅತ್ತೆ ತಮ್ಮೆಲ್ಲಾ ಶಾಸ್ತ್ರಗಳನ್ನೂ ಚುಟುಕಾಗಿ ಪೂರೈಸಿದ್ದರು. ಎಲ್ಲಾ ಮುಗಿದ ತತ್‌ಕ್ಷಣವೇ, ಅವಳ ಸೀರೆಗೆ ಗಂಟು ಹಾಕಲಾಗಿದ್ದ ತನ್ನ ಉತ್ತರೀಯನ್ನು ಅವಳ ಹತ್ತಿರವೇ ಬಿಟ್ಟು ಅವನು ಮಾಯವಾದ. ಮಮತಾಳಿಗೆ ಅಳು ಉಕ್ಕಿ ಬಂದಂತಾಯಿತು. ಈ ಅಪರಿಚಿತ ವಾತಾವರಣದಲ್ಲಿ ಅವಳ ಜೊತೆಗಿರಬೇಕಾದ ಗಂಡನೇ ಎಲ್ಲರಿಗಿಂತಲೂ ದೂರ ಸರಿಯತೊಡಗಿದ.

ಚಿಕ್ಕ ನಾದಿನಿ ಸರಳಾ, ಸಂಭ್ರಮದಿಂದ ಅವಳ ಕೈ ಹಿಡಿದು ಪಡಿಯಕ್ಕಿ ಕೆಡವಿದವಳನ್ನು, ತಮ್ಮ ಮನೆಯ ಹಜಾರಕ್ಕೆ ಕರೆದುಕೊಂಡು ಹೋದಳು. ಅವಳನ್ನು ಎಲ್ಲರೂ ವಿಚಾರಿಸಿಕೊಳ್ಳುವವರೇ. ಅಲ್ಲಿ ಚಿಕ್ಕಮ್ಮ, ಅತ್ತಿಗೆ, ಅತ್ತೆ, ನಾದಿನಿಯರು, ಎಲ್ಲರೂ ಇದ್ದರು. ಗಂಡನ ಹೊರತಾಗಿ ಯಾರೂ ಅವಳ ಮೇಲೆ ಯಾವುದೇ ವಿಧವಾದ ಟೀಕೆ ಟಿಪ್ಪಣಿಗಳನ್ನು (ಅವಳು ಬಹಳವಾಗಿ ನಿರೀಕ್ಷಿಸುತ್ತಿದ್ದ) ಮಾಡಲಿಲ್ಲ, ಬದಲಾಗಿ ಅವಳಲ್ಲಿ ಹೆಚ್ಚಿನ ಆತ್ಮೀಯತೆಯನ್ನು ತೋರಿಸಿದರು.

ಅವಳನ್ನು ಒಂದು ವಿಶಾಲವಾದ ಸುಸಜ್ಜಿತ ಕೊಠಡಿಯಲ್ಲಿ ಕುಳ್ಳಿರಿಸಿದ್ದರು. ಅದಕ್ಕೆ ಅಂಟಿದಂತೆ ಇನ್ನೊಂದು ಕೋಣೆ ಹಾಗೂ ಪಕ್ಕದಲ್ಲಿ ವಿಶಾಲವಾದ ಮಲಗುವ ಕೋಣೆಯಿತ್ತು. ಕಾಫಿ ಆದ ನಂತರ ಅವಳ ಸ್ನಾನದ ವ್ಯವಸ್ಥೆ ಮಾಡಲಾಯಿತು. ಸರಳಾ ಒಂದು ಚಿಕ್ಕ ಬಟ್ಟಲಲ್ಲಿ ಅರಿಶಿನ, ಕಡಲೆಹಿಟ್ಟು, ಹಾಲಿನ ಕೆನೆ ಕಲಸಿ ಅವಳ ಮೈ ಕೈಗಳಿಗೆ ನೀವಿ, ಅವಳ ಪ್ರಯಾಣದ ಆಯಾಸವನ್ನು ನಿವಾರಿಸಿದಳು. ಮಮತಾ ಹಿತವಾದ ಬಿಸಿ ನೀರಿನಲ್ಲಿ ಮಿಂದು, ತಲೆ ಒರೆಸುತ್ತ ಹೊರಬಂದಳು. ಅವಳು ಬಂದ ಚಿಕ್ಕ ಕೊಠಡಿಯಲ್ಲಿ ಯಾರೂ ಇರಲಿಲ್ಲವಾಗಿ, ನಿರಾಳವಾಗಿ ಕಾಲು ಚಾಚಿ ಕುಳಿತಳು, ಅಷ್ಟರಲ್ಲಿ ಪಕ್ಕದ ಕೋಣೆಯಿಂದ ಬಂದ ನಗು ಮೊಗದ ಗಂಡಸು ಮೆಲ್ಲಗೆ ಕೇಳಿದರು.

grahan-part-2-_2_

“ಅತ್ತಿಗೆ, ಮೊದಲ ರಾತ್ರಿಯ ಸಜ್ಜೆ ಮನೆ ಶೃಂಗಾರಕ್ಕಾಗಿ ಯಾವ ಯಾವ ಹೂ ತರಬೇಕೋ ಹೇಳಿ, ಇದೀಗ ತರುತ್ತೇನೆ,” ಅವರ ಮಾತಿನಿಂದ ಮಮತಾ ನಾಚಿಕೊಂಡಳು. ಅಲ್ಲಿಗೆ ಬಂದ ಸರೋಜಾ ಪತಿಯನ್ನು ಹುಸಿಮುನಿಸಿನಿಂದ ಗದರಿಸಿಕೊಳ್ಳುತ್ತಾ, “ಏನೂಂದ್ರೆ ಅದನ್ನು ಮೃತ್ಯೂ ನೋಡ್ಕೋತಾನೆ, ನೀವು ಇಲ್ಲಿ ಬನ್ನಿ,” ಎಂದು ಕರೆದೊಯ್ದಾಗ, ಮಮತಾಳಿಗೆ ಆತ ಈ ಮನೆಯ ಅಳಿಯ ಎಂದು ತಿಳಿಯಿತು. ಅವರ ಅನ್ಯೋನ್ಯ ದಾಂಪತ್ಯ ಕಂಡು ಮನ ಪ್ರಪಲ್ಲಿತವಾಯಿತು.

ಅಷ್ಟರಲ್ಲಿ ಸಿಡಿಲಿನಂಥ ಶಬ್ದವೊಂದು ಕೇಳಿಸಿತು, “ಸಾಕು ಸಾಕು, ಇಷ್ಟು ಹೊತ್ತು ನಿಮ್ಮ ಶಾಸ್ತ್ರ, ಆಚಾರ ಸಹಿಸಿಕೊಂಡು ನನಗೆ ಸಾಕಾಗಿದೆ. ಇನ್ನು ಶೃಂಗಾರ, ಸಜ್ಜೆಮನೆ ಎಂದು ಕರೆಯಬೇಡಿ. ನಾನು ಯಾವ ಬಲೆಗೂ ಬೀಳುವವನಲ್ಲ.”

“ಮೃತ್ಯೂ, ಮೆಲ್ಲಗೆ ಮಾತನಾಡೋ. ಹೊರಗೆಲ್ಲಾ ಬಂಧುಗಳು ಮನೆ ತುಂಬಾ ಕುಳಿತಿರುವುದು ನಿನಗೆ ನೆನಪಿಲ್ಲಿ?” ಅತ್ತೆ ಮೃತ್ಯುಂಜಯನನ್ನು ಸಮಾಧಾನಪಡಿಸುವುದು ಕೇಳಿಸಿತು.

“ಅದಕ್ಕೆ ನಾನೇನು ಮಾಡಲಿ? ಹೊರಗಿನವರಿಗೆ, ಒಳಗಿನವರಿಗೆ ಎಲ್ಲರಿಗೂ ನನ್ನ ಪರಿಸ್ಥಿತಿ ಗೊತ್ತೇ ಇದೆ. ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಬರೀ ನಿಮ್ಮ ಮಾತುಗಳನ್ನು ಶಿರಸಾವಹಿಸಿ ನಡೋದೇ ಆಗ್ಹೋಯ್ತು. ನನ್ನ ಬಗ್ಗೆ ಏನಾದರೂ ಯೋಚಿಸಿದ್ದೀರೇನು?”

“ಅಯ್ಯೋ ದೇವರೇ, ಇಂಥ ಒಳ್ಳೆ ಕಡೆ ಸಂಬಂಧದ ಹುಡುಗಿ, ಇಷ್ಟೆಲ್ಲ ಸಡಗರ ಸಂಭ್ರಮ, ಇಷ್ಟೊಂದು ಖರ್ಚು, ಇದೆಲ್ಲಾ ನಿನಗೋಸ್ಕರ ಅಲ್ಲದೆ ಇನ್ನೇನು?” ಅತ್ತೆ ಸ್ವಲ್ಪ ಅಧಿಕಾರಯುತವಾಗಿ ಹೇಳಿದರು.

“ನಾನೇನು ನಿಮ್ಮ ಹತ್ತಿರ ಬಂದು ಇದೆಲ್ಲ ನನಗೋಸ್ಕರ ಮಾಡಿ ಅಂತ ಕೇಳ್ಕೊಂಡಿದ್ದೆನೇನು? ನಾನು ಕೇಳ್ದಿರಲ್ಲಿ ಇದುವರೆಗೂ ಯಾವುದಾದರೂ ಒಂದನ್ನು ನಡೆಸಿಕೊಟ್ಟಿದ್ದೀರೇನು? ನನಗೆ ಇಷ್ಟ ಬಂದಂತೆ ಮಾಡಲು ಯಾವತ್ತಾದರೂ ಅವಕಾಶ ಕೊಟ್ಟಿದ್ದೀಯೇನಮ್ಮಾ?”

“ಅಲ್ಲಪ್ಪ ಮೃತ್ಯೂ, ಸುಮ್ಮನೆ ವಾದ ಮಾಡಬೇಡ. ನಾವು ಏನೇ ಮಾಡಿದ್ದರೂ ಅದು ನಿನ್ನ ಶ್ರೇಯಸ್ಸಿಗಾಗಿಯೇ ಮಾಡಿದ್ದೇವೆ, ನೆನಪಿಟ್ಟುಕೊ.”

“ನಾನು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಲು ನೀವು ಬಿಟ್ಟಿರೇನು? ನಾನು ನೌಕಾಪಡೆ ಸೇರಬೇಕೆಂದು ಸೆಲೆಕ್ಟ್ ಆಗಿ ಬಂದಾಗ, ಯುದ್ಧದ ಭಯದಿಂದ ನೀವು ನನ್ನನ್ನು ಅಲ್ಲಿಗೆ ಹೋಗಗೊಡಲಿಲ್ಲ. ನನ್ನ ಓದುಬರಹ, ತಿರುಗಾಟ, ಸುತ್ತಾಟ, ನನ್ನ ಬಟ್ಟೆಗಳ ಆಯ್ಕೆಯನ್ನು ನೀವೇ ಮಾಡಿದ ಮೇಲೆ ಇನ್ನೇನು ಉಳಿದಿದೆ ನನಗೆ? ನೀವು ಹೇಳಿದಂತೆ ವಿಧಿಯಿಲ್ಲದೆ ಆ ಹುಡುಗಿಯನ್ನೇ ಮದುವೆ ಆದದ್ದಂತೂ ಆಯಿತು, ಇನ್ನೂ ಏನಾದರೂ ಬಲವಂತ ಮಾಡಿದರೆ ಈ ಮನೆ ಬಿಟ್ಟು ಹೊರಟುಹೋಗ್ತೀನಿ.”

“ಮತ್ತೆ ಈಗ ಮದುವೆಯಾಗಿ ಕರೆತಂದಿರುವೆಯಲ್ಲಾ ಆ ಹುಡುಗಿ, ಅವಳ ಬಗ್ಗೆ ನಿನ್ನ ಕರ್ತವ್ಯ ಯಾವುದೂ ಇಲ್ಲವೇನು?”

“ಇಲ್ಲ. ಅವಳು ನೀವು ಮೆಚ್ಚಿ ಆರಿಸಿದ ಸೊಸೆ! ಅವಳನ್ನು ನೀವೇ ನೋಡಿಕೊಳ್ಳಿ.”

ಅದಾದ ನಂತರ ಅಲ್ಲಿ ನೀರವತೆ ಆವರಿಸಿತು. ಮಮತಾಳ ಮೈಮನಸ್ಸು ಮಂಜಿನಂತೆ ತಣ್ಣಗಾಗಿ ಹೋಯಿತು. ಭಯಭೀತಳಾಗಿ ಅವಳು ಬಾಗಿಲ ಕಡೆಗೇ ದೃಷ್ಟಿಸುತ್ತಿದ್ದಳು. ತಕ್ಷಣವೇ ನಾದಿನಿಯರು, ಓರಗಿತ್ತಿಯರು ಅವಳನ್ನು ಸುತ್ತುವರಿದು ಲೋಕಾರೂಢಿಯ ಮಾತುಗಳಿಂದ ಅವಳ ಮನಸ್ಸಿಗೆ ತಂಪೆರೆಯಲು ಪ್ರಯತ್ನಿಸಿದರು. ಆದರೆ ಅವರ ಮಾತುಗಳಿಗೆ `ಹಾಂ, ಹೂಂ’ ಎನ್ನುತ್ತಿದ್ದ ಮಮತಾ, ಸಂಭಾಷಣೆಯಲ್ಲಿ ಯಾವುದೇ ಆಸ್ಥೆ ವಹಿಸಲಿಲ್ಲ.

ಮೃತ್ಯುಂಜಯನ ಮಾತು ಅವಳ ಕಿವಿಗಳಲ್ಲಿ ತುಂಬಿಕೊಂಡಿದ್ದವು. ಅವನ ಅನಾಸಕ್ತಿಯ ಮೂಲ ಕಾರಣವನ್ನು ಅವಳು ಈಗ ಅರ್ಥ ಮಾಡಿಕೊಂಡಿದ್ದಳು. ಅವನ ಅಸಹನೆ, ಕೋಪ, ಸಿಡಿಮಿಡಿ ಎಲ್ಲ ತಾಯಿಯ ಮೇಲೆಯೇ ಇತ್ತು. ಆದರೆ ಅದರ ಫಲವನ್ನು ಮಾತ್ರ ಯಾವ ತಪ್ಪು ಮಾಡದ ಮಮತಾ ಅನುಭವಿಸುತ್ತಿದ್ದಳು. ಭವಿಷ್ಯದ ಕರಾಳ ದಿನಗಳನ್ನು ನೆನೆದು ಅವಳು ಮತ್ತಷ್ಟು ಕುಗ್ಗಿಹೋದಳು. ಗಂಡನಿಂದ ತಿರಸ್ಕರಿಸಲ್ಪಟ್ಟ ಗೃಹಿಣಿಗೆ ಸಮಾಜದಲ್ಲಿ ಯಾವ ಆದರ ತಾನೇ ಸಿಕ್ಕೀತು?

ಅದರ ನಂತರ ಮನೆಯ ಎಲ್ಲಾ ಶಾಸ್ತ್ರಗಳಲ್ಲೂ ಮಮತಾ ಯಾಂತ್ರಿಕವಾಗಿ ಭಾಗವಹಿಸಿದಳು. ಮಧ್ಯಾಹ್ನದ ಊಟದ ನಂತರ, ಒಂದು ಗಳಿಗೆ ಮಲಗಿ ವಿಶ್ರಾಂತಿ ಪಡೆದಳು. ಸಾಯಂಕಾಲವಾಗುತ್ತಿದ್ದಂತೆ ನಾದಿನಿಯರು ಸೇರಿ ಅವಳಿಗೆ ಮೊಗ್ಗಿನ ಜಡೆ ಹಾಕಿ ಅಲಂಕಾರ ಮಾಡಿದರು.

ಕೇಸರಿ ವರ್ಣದ ಸೀರೆಯುಟ್ಟು ಸಾಕ್ಷಾತ್‌ ಅಪ್ಸರೆಯಂತೆ ಕಂಗೊಳಿಸುತ್ತ, ನಡುಮನೆಯಲ್ಲಿ ಹೆಣ್ಣುಮಕ್ಕಳ ನಡುವೆ ಶೋಭಾಯಮಾನವಾಗಿ ಕುಳಿತಿದ್ದ ಮಮತಾಳನ್ನು, ಯಾವುದೋ ಕಾರ್ಯನಿಮಿತ್ತ ಅಲ್ಲಿಗೆ ಬಂದ ಮೃತ್ಯುಂಜಯ ಗಮನಿಸಿದ. ಅವನು ಬಿಳಿಯ ಸಿಲ್ಕ್ ಜುಬ್ಬಾ, ಪೈಜಾಮದಲ್ಲಿ ಮನ್ಮಥನಂತೆ ಕಂಗೊಳಿಸುತ್ತಿದ್ದ. ವಿಶಾಲ ಹಣೆಯಲ್ಲಿ ಹಚ್ಚಿಕೊಂಡ ತಿಲಕ ಅವನ ರೂಪಕ್ಕೆ ವಿಶೇಷ ಮೆರುಗು ನೀಡಿತ್ತು. ಮೃತ್ಯುಂಜಯ ಮಮತಾಳ ಮನಸೂರೆಗೊಂಡನಾದರೂ, ಅವಳತ್ತ ಕಣ್ಣು ಹಾಯಿಸುವ ಶ್ರಮ ತೆಗೆದುಕೊಳ್ಳಲಿಲ್ಲ. ಸಾಯಂಕಾಲ ಏಳು ಗಂಟೆಯಾಗುತ್ತಿದ್ದಂತೆಯೇ ಜನ ಆರತಕ್ಷತೆಗೆ ಆಗಮಿಸತೊಡಗಿದರು. ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಎಲ್ಲರ ಊಟ ಮುಗಿಯಿತು.

ಕುಳಿತು, ಎದ್ದೂ, ಎಲ್ಲರಿಗೂ ನಮಸ್ಕರಿಸುತ್ತಿದ್ದ ಮಮತಾಳಿಗೆ ಸಾಕು ಸಾಕಾಗಿ ಹೋಯಿತು. ಕಣ್ಣೆವೆಗಳು ಎಳೆಯುತ್ತ ಹೋದವು. ಬಹಳ ಆಯಾಸಗೊಂಡಿದ್ದ ಮಮತಾ, ಸರೋಜಾಳ ನೆರವಿನಿಂದ ತಾನು ಉಟ್ಟಿದ್ದ ಭಾರೀ ಸೀರೆಯನ್ನು ಬದಲಾಯಿಸಿದಳು. ಒಡವೆಗಳನ್ನೆಲ್ಲ ಕಳಚಿಟ್ಟಳು.

ಆನಂತರ ಸರೋಜಾ ಮಮತಾಳಿಗೆ ಕಿತ್ತಳೆ ಬಣ್ಣದ ಸಿಲ್ಕ್ ಸೀರೆಯನ್ನು ಉಡಲು ಕೊಟ್ಟಳು.

ಆದರೆ ಇದು ಆರಂಭ ಮಾತ್ರವಾಗಿತ್ತು. ಅಷ್ಟರಲ್ಲಿ ಇನ್ನೊಂದು ಬುಟ್ಟಿಯಲ್ಲಿ ಸರಳಾ ಕಟ್ಟಿದ ಹೂಗಳ ಸರವನ್ನು ತಂದಾಗ, ಮೊಗ್ಗಿನ ಜಡೆಗೆ ಬದಲಾಗಿ ಈಗ ಮಮತಾಳ ಮೈ ಹೂವಿನಿಂದ ತುಂಬಿತು. ಕೊನೆಯಲ್ಲಿ ಅತ್ತಿಗೆ ಬಂದು ಮೇಕಪ್‌ ಸರಿ ಮಾಡಿದಳು. ಮಮತಾಳಿಗೆ ಬಹಳ ಮುಜುಗರವಾಗುತ್ತಿದ್ದರೂ, ಎದುರಿನ ನಿಲುಗನ್ನಡಿಯಲ್ಲಿ ತನ್ನ ಭವ್ಯ ಪ್ರತಿಬಿಂಬವನ್ನು ಕಂಡು ಸ್ವಯಂ ಆಕರ್ಷಿತಳಾದಳು.

ಅವಳನ್ನು ವಿವಿಧ ಹೂಗಳಿಂದ ಶೃಂಗರಿಸಿದ ಪಲ್ಲಂಗದ ಮೇಲೆ ನಿಧಾನವಾಗಿ ಕರೆತಂದು ಬಿಟ್ಟರು. ಸರೋಜಾ ಬಳಿಗೆ ಬಂದು ಮೆಲ್ಲನೆ ಹೇಳಿದಳು, “ಮೃತ್ಯೂ ಬಹಳ ಕೋಪದಲ್ಲಿದ್ದಾನೆ. ನೀನು ಅವನಿಗೆ ಏನೂ ಎದುರು ಜವಾಬು ಕೊಡಬೇಡ.”

“ಅಕಸ್ಮಾತ್‌, ಅವನೇನಾದರೂ ಕೋಪದಲ್ಲಿ ಬಯ್ದರೂ ಸುಮ್ಮನೆ ಆ ಕಿವಿಯಲ್ಲಿ ಕೇಳಿ ಈ ಕಿವಿಯಲ್ಲಿ ಬಿಟ್ಟುಬಿಡಿ,” ಸರಳಾ ಕಕ್ಕುಲತೆಯಿಂದ ಹೇಳಿದಳು.

“ನನ್ನ ಮೈದುನ ಸ್ವಭಾತಃ ಬಹಳ ಸೌಮ್ಯ ಗುಣದವನು. ಈ ಸಮಯದಲ್ಲಿ ಎಲ್ಲರೂ ಅವನಿಗೆ ಹೆದರಿಕೊಂಡಿದ್ದಾರೆ. ಅವನೊಂದಿಗೆ ಹೇಗೆ ವ್ಯವಹರಿಸಬೇಕೆಂದು ಸುಶಿಕ್ಷಿತೆಯಾದ ನಿನಗೆ ನಾವು ಹೇಳಿಕೊಡಬೇಕಾ?” ಅತ್ತಿಗೆ ಧೈರ್ಯ ತುಂಬಿದರು.

ಈ ಎಲ್ಲಾ ಮಾತುಗಳೂ ಅವಳಲ್ಲಿ ಮತ್ತಷ್ಟು ಆತಂಕ, ಅಧೈರ್ಯ ಮೂಡಿಸಿದವು. ಅವಳು ಮತ್ತಷ್ಟು ಮೂಲೆಗೆ ಅಂಟಿ ಕುಳಿತಳು. ನಾದಿನಿಯರು ಸಾಕಷ್ಟು ಧೈರ್ಯ ಹೇಳಿ, ನಸುನಗುತ್ತ ಹೊರಟ ಮೇಲೆ, ಮಮತಾ ಪಕ್ಕದ ಕೋಣೆಯಿಂದ ಕೇಳಿ ಬರುತ್ತಿದ್ದ ಪಿಸು ಮಾತುಗಳನ್ನು ಆಲಿಸಿದಳು.

“ಭಾವ, ನಿಮಗೆಲ್ಲಾ ವಿಚಾರ ಗೊತ್ತಿದೆ. ಮತ್ತೆ ನನ್ನನ್ನು ಈ ಇಬ್ಬಂದಿಗೆ ಏಕೆ ಸಿಲುಕಿಸುತ್ತಿದ್ದೀರಿ?” ಮೃತ್ಯುಂಜಯ ಹೇಳುತ್ತಿದ್ದ.

“ನಮಗೆಲ್ಲಾ ಗೊತ್ತಿದೆ ಕಣಯ್ಯ, ವಸ್ತುಸ್ಥಿತಿ ಏನೇ ಇದ್ದರೂ, ಪಾಪದ ಆ ಹೊಸ ಹುಡುಗಿಗೆ ನೀನು ಅಧೈರ್ಯ ಉಂಟು ಮಾಡಬೇಡ. ಅವಳಿಗೆ ಸಾವಕಾಶವಾಗಿ ಎಲ್ಲಾ ವಿವರಿಸು,” ಭಾವ ಸಲಹೆ ನೀಡುತ್ತಿದ್ದರು.

ಅಷ್ಟರಲ್ಲಿ ಅತ್ತಿಗೆ ಹೇಳಿದರು, “ಹೌದು, ಮತ್ತೆ ನಿನ್ನ ಸಮಸ್ಯೆಯೇನು ಅಂತ ಆ ಪಾಪದ ಹುಡುಗಿಗೂ ಗೊತ್ತಾಗುವುದು ಬೇಡವೇ? ನಿನ್ನ ಕೋಪದ ಕಾರಣ ತಿಳಿಯದೆ ಗುಬ್ಬಚ್ಚಿ ಹಾಗೆ ಆಗಿದ್ದಾಳೆ.”

“ಮೃತ್ಯೂ, ನೀನು ಒಂದು ಸಲ ಅತ್ತಿಗೆಯನ್ನು ಕಣ್ತುಂಬ ನೋಡು. ಆಮೇಲೆ ಅಲ್ಲಿಂದ ಬರುವುದು ಬಿಡುವುದು ನಿನಗೇ ಬಿಟ್ಟಿದ್ದು,” ಸರೋಜಾ ತೀರ್ಮಾನ ಕೊಟ್ಟಳು. ಈ ಎಲ್ಲಾ ಮಾತುಕತೆಗಳಿಂದ ಮಮತಾಳಿಗೆ ಮೃತ್ಯುಂಜಯನ ಕೋಪ ಇಳಿಯುತ್ತಿದೆ ಅನ್ನಿಸಿತು. ಅಷ್ಟರಲ್ಲಿ ಅವನು ಬಾಗಿಲಿಗೆ ಬಂದಂತಾಗಿ ತಲೆ ತಗ್ಗಿಸಿ ಕುಳಿತಳು. ಅವನು ಒಳಗೆ ಬಂದದ್ದೇ ತಡ, ಹೊರಗಿನವರು ಕದ ಮುಚ್ಚಿಬಿಟ್ಟರು. ಒಂದು ಕ್ಷಣ ಮುಚ್ಚಿದ ಬಾಗಿಲನ್ನು ದಿಟ್ಟಿಸಿದ ಮೃತ್ಯೂ, ಹಾಲಿನ ಲೋಟ ಹಿಡಿದವಳ ಕಡೆ ಬಂದ.

ಮಮತಾ ತನ್ನ ದೇಹ ಇನ್ನಷ್ಟು ಹಿಡಿಗಾತ್ರವಾಗಿ, ಅವನಿಗೆ ಕಾಣದಂತಾಗಬಾರದೇ? ಅವನ ದನಿ ತಾನು ಕೇಳದಂತೆ ಆಗಬಾರದೇ ಎಂದು ಬಯಸತೊಡಗಿದಳು. ಶರೀರವೆಲ್ಲಾ ಬೆವರಿನಿಂದ ತೊಯ್ದುಹೋಯ್ತು. ಕೈ ಕಾಲುಗಳು ತಣ್ಣಗಾದವು.

“ಈ ಮನೆಯಲ್ಲಿ ಏನಾಗುತ್ತಿದೆ ಎಂಬುದು ಈ ಹೊತ್ತಿಗೆ ನಿನಗೆ ಅರ್ಥವಾಗಿರಬಹುದು ಅಲ್ಲವೇ?” ಗಂಭೀರ ಧ್ವನಿಯಲ್ಲಿ ಅವನು ಮಾತನಾಡಲಾರಂಭಿಸಿದ.

ಮಮತಾ ಮೌನವಾಗಿದ್ದಳು. ಮಂಚದ ಅಲುಗಾಟದಿಂದ ಅವನು ಕುಳಿತಿರಬಹುದೆಂದು ತರ್ಕಿಸಿದಳು.

ಮಮತಾಳ ಬೆಳ್ಳನೆಯ, ಸಡಿಲವಾದ, ನಾಜೂಕಾದ ಕೈ ಬೆರಳುಗಳು, ಗೋರಂಟಿ ಹಚ್ಚಿದ ಅಂದವಾದ ಹಸ್ತ ಮತ್ತು ಬಣ್ಣ ಬಣ್ಣದ ಗಾಜಿನ ಬಳೆಗಳಿಂದ ತುಂಬಿದ ಕೈಗಳು, ಹಾಗೂ ಅರಿಶಿನ ಬಳಿದ ನುಣುಪಾದ ಪಾದಗಳು ಮಾತ್ರ ಹೊರಗೆ ಕಾಣುತ್ತಿದ್ದವು. ಮಿಕ್ಕಂತೆ ಪೂರ್ತಿ ಶರೀರ ಸೀರೆಯಿಂದ ಮರೆಯಾಗಿತ್ತು.

ಅವಳನ್ನು ಮತ್ತಷ್ಟು ಮಾತನಾಡಿಸುವ ಸಲುವಾಗಿ, ಅವಳ ಕಡೆ ನೋಡಿದ ಮೃತ್ಯುಂಜಯನ ನೋಟ ಅವಳ ನೋಟದೊಂದಿಗೆ ಬೆರೆತು ಅಲ್ಲೇ ನಿಂತಿತು. ತನ್ನ ಕಣ್ಣುಗಳನ್ನು ಬೇರೆಡೆ ತಿರುಗಿಸಲು ಶತಪ್ರಯತ್ನಪಟ್ಟರೂ ಅವನಿಂದಾಗಲಿಲ್ಲ. ಅವನು ಆ ಮೌನವನ್ನು ಸಹಿಸಲಾರದೆ ಮೆಲ್ಲಗಿನ ಸ್ವರದಲ್ಲಿ ಅವಳಿಗೆ ಹೇಳಿದ, “ನಾನು ನಿನಗೆ ಕೆಲವು ಅವಶ್ಯಕವಾದ ವಿಷಯಗಳನ್ನು ತಿಳಿಸಬೇಕಾಗಿದೆ.”

ಆಗಲೂ ಮಮತಾ ಮೌನ ಮುರಿಯಲಿಲ್ಲ.

“ಈ ವಿಷಯ ನನ್ನ, ನಿನ್ನ ಭವಿಷ್ಯ ಜೀವನಕ್ಕೆ ಸಂಬಂಧಿಸಿದ್ದು, ವರ್ತಮಾನದ ಪರಿಸ್ಥಿತಿ ನನ್ನ ಅನುಮತಿ ಇಲ್ಲದೆ ಉಂಟಾದದ್ದು. ನಾನು ಸ್ವತಃ ಈ ಮದುವೆಯನ್ನು ಸಮರ್ಥಿಸಲಿಲ್ಲ,” ಅವಳ ಸೌಂದರ್ಯದ ಆಕರ್ಷಣೆಗೊಳಗಾದ ಅವನ ಮುಖಭಾವಕ್ಕೂ, ಆಡುತ್ತಿರುವ ಮಾತುಗಳಿಗೂ ಸಂಬಂಧವಿರಲಿಲ್ಲ.

ಮಮತಾಳ ಗಂಟಲಲ್ಲಿ ಚೆಂಡು ಸಿಕ್ಕಿ ಹಾಕಿಕೊಂಡಂತಾಯಿತು. ಅವಳು ಸ್ವಲ್ಪ ಚೇತರಿಸಿಕೊಳ್ಳುತ್ತ, ಇದ್ದಬದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ, ಕೈಬಳೆಗಳ ಮೇಲಿನ ಸೆರಗನ್ನು ಹಿಂದಕ್ಕೆಳೆಯುತ್ತ ಹೇಳಿದಳು, “ಇದರಲ್ಲಿ ನನ್ನ ತಪ್ಪು ಏನಿದೆ ಎಂಬುದನ್ನು ಮೊದಲು ನನಗೆ ಮನವರಿಕೆ ಮಾಡಿಕೊಡುವಿರಾ?”

ಜಲತರಂಗ್‌ನ ನಿನಾದದಂತೆ ಅವಳ ಮಾತುಗಳು ಅವನನ್ನು ಪುಳಕಿತಗೊಳಿಸಿದವು. ಅದನ್ನಾಡಿದ ಒಡತಿಯ ಮುಖವನ್ನು ಮತ್ತೊಮ್ಮೆ ನೋಡಲು ಮೃತ್ಯುಂಜಯ ಮತ್ತೆ ಮತ್ತೆ ಚಡಪಡಿಸತೊಡಗಿದ. ಮತ್ತೆ ಅಯಸ್ಕಾಂತದಿಂದ ಸೆಳೆಯಲ್ಪಟ್ಟಂತೆ ಅವಳನ್ನೇ ನೋಡಿದ.

ಕೆಲವು ಕ್ಷಣಗಳವರೆಗೆ ಅವನು ಎವೆಯಿಕ್ಕದೆ ಅವಳ ಮುಖಾರವಿಂದವನ್ನು ಅವಲೋಕಿಸತೊಡಗಿದ. ಅವಳ ವಿಶಾಲವಾದ ಕಪ್ಪು ಕಣ್ಣುಗಳಲ್ಲಿ ಅಶ್ರುಧಾರೆ ದುಮುಕಲು ಸಿದ್ಧವಾಗಿತ್ತು. ಬಿಳಿಯ ಅಂಡಾಕಾರದ ಮುಖಮಂಡಲದಲ್ಲಿ ಸಂಪಿಗೆ ಎಸಳಿನಂಥ ನೀಳ ಮೂಗು, ಅದರ ತುದಿಯಲ್ಲಿ ಸಂಗ್ರಹಿತವಾಗಿದ್ದ ಮುತ್ತಿನಂಥ ಸ್ವೇದ ಬಿಂದುಗಳು, ತುಂಬಿಕೊಂಡ ಕಪೋಲಗಳು, ಮುದ್ದಾದ ಗಲ್ಲ, ಹಳದ ತುಟಿಯ ಮೇಲೆ ಒಸರುವ ಸಿಹಿ ಜೇನು, ಉಚ್ವಾಸನಿಶ್ವಾಸಗಳಿಂದ ಏರಿ ಇಳಿಯುತ್ತಿದ್ದ ತುಂಬು ವಕ್ಷಸ್ಥಲ, ಒಟ್ಟಾರೆ ಆ ಷೋಡಶಿಯ ದಿವ್ಯ ಮಂಗಳ ರೂಪದ ಎದುರು ಅವನ ಬೇಸರ, ಅಸಹನೆಗಳು ವಯೋಸಹಜ ತಾರುಣ್ಯಾಕಾಂಕ್ಷೆಯಲ್ಲಿ ಕೊಚ್ಚಿಹೋದವು. ಅವಳ ಕಣ್ಣುಗಳಿಂದ ಕಣ್ಣು ಕೀಳಲಾರದೆ ನುಡಿದ, “ಇದರಲ್ಲಿ ನಿನ್ನ ತಪ್ಪೇನೂ ಇಲ್ಲ.”

“ಹಾಗಾದರೆ ನೀವು ನನಗೆ ಭವಿಷ್ಯ ಜೀವನದ ಬಗ್ಗೆ ಏನು ಹೇಳಬೇಕೆಂದಿರುವಿರಿ?” ಮಮತಾ ಅವನ ಪರಿವರ್ತನೆಗೊಂಡ ಹಾವಭಾವಗಳನ್ನೇ ಗಮನಿಸುತ್ತ ತಕ್ಷಣ ಹೇಳಿದಳು.

“ಭವಿಷ್ಯತ್ತಿನ ಜೀವನದ ಬಗ್ಗೆ ಈಗ ನೀನೇ ಏನಾದರೂ ಹೇಳು. ಅದರ ಬಗ್ಗೆ ಚರ್ಚಿಸಲು ನನ್ನಲ್ಲಿ ಯಾವ ವಿಷಯ ಇಲ್ಲ,” ಎನ್ನುತ್ತ ಅವನು ಅವಳ ಮೃದುವಾದ ಹಸ್ತದ ನೀಳ ಬೆರಳುಗಳನ್ನು ಅದರಲ್ಲಿ ಅಡಗಿದ್ದ ಗೋರಂಟಿಯ ಮಾದಕತೆಯನ್ನು ಆಸ್ವಾದಿಸತೊಡಗಿದ.

ಈ ಪ್ರಥಮ ಪುರುಷ ಸ್ಪರ್ಶದಿಂದ ಮಮತಾ ಬಹಳ ಪುಳಕಿತಗೊಂಡಳು. ಅವಳ ಆತಂಕವೆಲ್ಲ ಕರಗಿಹೋಯಿತು. ಈಗ ಅವಳಿಗೆ ತನ್ನ ಇರುವಿಕೆಯ ಮಹತ್ವದ ಅರಿವಾಗತೊಡಗಿತು.

ಅವಳು ಬೇಕೆಂದೇ ನಿಧಾನವಾಗಿ ತನ್ನ ಕೈ ಬಿಡಿಸಿಕೊಳ್ಳುತ್ತ, ಅವನನ್ನು ನೋಡಿ ತುಂಟತನದ ನಸುನಗೆ ಬೀರಿದಳು. ಮೃತ್ಯುಂಜಯ ತನ್ನ `ಅಹಂ’ನ ಪರದೆಯಿಂದ ಸುಲಭವಾಗಿ ಹೊರಬಂದವು. ಅವನ ಅಸ್ತಿತ್ವದ ಉಳಿವು ಮಮತಾಳ ಸೌಂದರ್ಯ ನೋಡಿದಾಗಲೇ ಮಹತ್ವಪೂರ್ಣತೆಯನ್ನು ಪಡೆಯುವುದು ಎಂಬ ಅಂಶ ಅರಿವಾಯಿತು. ಅಷ್ಟರಲ್ಲಿ ಅವನಿಂದ ದೂರ ಜರುಗಿದ ಮಮತಾ ದೃಢವಾದ ಸ್ವರದಲ್ಲಿ ಹೇಳಿದಳು.

“ಈಗ ತಾನೇ ಸ್ವಲ್ಪ ಹೊತ್ತಿಗೆ ಮುಂಚೆ ನೀವು ಅತ್ತೆಯವರ ಬಳಿ ಜಗಳವಾಡುತ್ತಿದ್ದಿರಿ ಮತ್ತು ಇಲ್ಲಿಗೆ ಬಂದ ತಕ್ಷಣವೇ ಭವಿಷ್ಯ ಜೀವನ ಎಂದೆಲ್ಲಾ ಗಂಭೀರ ವಿಷಯಗಳ ಬಗ್ಗೆ ಏನೋ ಹೇಳುತ್ತೇನೆ ಎಂದಿರಿ. ಈಗ ಸಮೀಪದಿಂದ ನನ್ನನ್ನು ನೋಡಿದಾಕ್ಷಣ ಪರಿವರ್ತನೆಗೊಂಡಿರಿ. ಈ ಆಕರ್ಷಣೆ ಪ್ರೇಮವೆಲ್ಲ, ಕೇವಲ ಶಾರೀರಿಕವಾದುದು. ಈ ಯೌವನದ ಹುಚ್ಚು ಕಳೆದ ಮೇಲೆ ನೀವು ನನ್ನನ್ನು ಮತ್ತೆ ಕೀಳಾಗಿ ಕಾಣಲಾರಿರಿ ಎಂದು ನಾನು ಹೇಗೆ ನಂಬಲಿ?”

“ನೀನು ತಪ್ಪು ತಿಳಿದಿದ್ದೀಯ, ನಾನು ಕೋಪಗೊಂಡಿದ್ದು ನಿಜ. ನನ್ನ ಮನಸ್ಸಿನಲ್ಲಿ ಅಸಹನೆ ತುಂಬಿದ್ದೂ ನಿಜ. ಆದರೆ ಯಾರ ವಿರುದ್ಧ ಎಂದು ಸ್ವತಃ ನಾನೇ ಅರ್ಥೈಸಿಕೊಂಡಿರಲಿಲ್ಲ. ವಾಸ್ತವವಾಗಿ ನಾನು ಅಮ್ಮನ ಮೇಲೂ ಕೋಪಗೊಂಡಿರಲಿಲ್ಲ. ಈ ಕೋಪವೆಲ್ಲಾ ತೋರಿಕೆಯದು ಮಾತ್ರ. ನನ್ನೊಂದಿಗೆ ಇವರೆಲ್ಲಾ ಸೇರಿಕೊಂಡು ಮಾಡಿದ ವಿದ್ರೋಹಕ್ಕೆ ಈ ಕೋಪ. ಇದಕ್ಕಾಗಿ ನಾನು ಯಾರನ್ನೂ ದೂಷಿಸಲಾರೆ. ಕೂಗಾಡಿ ರೇಗಾಡಿದ ಮೇಲೆ ನನ್ನ ಕೋಪ ಪ್ರಶಾಂತವಾಯಿತು. ಗುಡುಗು ಮಿಂಚಿನ ಮಳೆ ಬಂದ ಮೇಲಲ್ಲವೆ, ಹೊಂಬಿಸಿಲಿನ ಸುಖೋಷ್ಣದ ಅರಿವಾಗುವುದು? ಎಲ್ಲರೂ ನನ್ನಿಂದ ಪ್ರಭಾವಿತರಾಗಲಿ ಎಂದು ಹಾಗೆ ಮಾಡಿದೆನಷ್ಟೆ.”

ಮಮತಾ ಅವನನ್ನೇ ದೃಷ್ಟಿಸುತ್ತಿದ್ದಳು.“ಮೊದಲು ನಾನು ನಿನ್ನ ಮೇಲೆ ಜೋರು ತೋರಿಸಬೇಕೆಂದು ನಿನ್ನೊಂದಿಗೂ ಸ್ವಲ್ಪ ರೇಗಾಡಿದೆ. ಆನಂತರ ನನ್ನ ಹೆಂಡತಿಯ ಕಡೆಗೆ ನನ್ನ ಕರ್ತವ್ಯಗಳೂ ಅಧಿಕವಾಗಿದೆಯೆಂದು ನಾನು ಈ ರೀತಿ ನಿಶ್ಚಯಿಸಿ, ಒಬ್ಬ ಗಂಡನ ಜವಾಬ್ದಾರಿಯನ್ನು ಹೊರಲು ಬಂದಿದ್ದೆನಾದರೂ, ಈ ರೀತಿ ಮೊದಲ ದರ್ಶನದಲ್ಲೇ ನಿನ್ನ ಸಮ್ಮೋಹನಕ್ಕೆ ಪರಶನಾಗುವೆ ಎಂದು ತಿಳಿದಿರಲಿಲ್ಲ,” ಎಂದು ಹೇಳುತ್ತಲೇ ಮೃತ್ಯುಂಜಯ ಅವಳನ್ನು ಸಮೀಪಿಸಿದ್ದ. ಅವನ ಬಿಸಿ ಉಸಿರು ಅವಳ ಮುಖಕ್ಕೆ ತಗುಲುತ್ತಿತ್ತು. ಪುರುಷನ ಸಾಂಗತ್ಯಕ್ಕಾಗಿ ಅವಳು ಚಡಪಡಿಸಿದಳು. ಅವನ ಕಣ್ಣಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಮೋಹ ಪರವಶಳಾದಳು.

ಅವನ ದೃಷ್ಟಿಯಲ್ಲಿ ಪ್ರಣಯದ ಉನ್ಮಾದ, ಕಾಮನೆಗಳ ಉದ್ವಿಗ್ನ ತರಂಗಗಳೂ ಪುಟಿದೇಳುತ್ತಿರುವುದನ್ನು ಕಂಡು ತನ್ನಲ್ಲೇ ನಾಚಿ ನೀರಾದಳು.

“ನಾನು ನಿನ್ನನ್ನು ಸ್ಪರ್ಶಿಸಬಹುದೇ?” ಅವಳ ಕೈಗಳನ್ನು ಬಹಳ ಕೋಮಲವಾಗಿ ಹಿಡಿದುಕೊಳ್ಳುತ್ತ ಮೃತ್ಯುಂಜಯ ಕೇಳಿದ. ಗಂಡನ ಈ ವಿನಮ್ರ ಹಾಗೂ ಸಜ್ಜನಿಕೆಯ ನುಡಿಯಿಂದ ಅವಳು ರೋಮಾಂಚನಕ್ಕೊಳಗಾದಳು. ಅವನ ತಿರಸ್ಕಾರಕ್ಕೆ ಗುರಿಯಾಗಿ ಏನು ಪಾಡುಪಡಬೇಕೋ ಎಂದು ಭಯಪಟ್ಟವಳಿಗೆ ಅವನ ಈ ನಡವಳಿಕೆ ಪ್ರೇಮಧಾರೆಯನ್ನು ಚಿಮ್ಮಿಸಿತು. ಮೃದು ಮಂದಹಾಸ ಅವಳ ತುಟಿಗಳಲ್ಲಿ ಅರಳತೊಡಗಿದಂತೆ, ಅವನ ಪ್ರಶ್ನೆಗೆ ಉತ್ತರ ದೊರಕಿದಂತಾಯಿತು. ಅವನು ಆನಂದ ತುಂದಿಲನಾಗಿ ಮಮತಾಳನ್ನು ಆಲಂಗಿಸಿಕೊಂಡ.

ಮಾರನೇ ದಿನ, ಮುಂಜಾನೆಯ ಹೊಂಬಿಸಿಲಿನ ಮಧುರ ಕಿರಣ, ಮಮತಾಳ ಮುಖವನ್ನು ಮುದ್ದಿಟ್ಟಾಗ ಅವಳು ಎಚ್ಚರಗೊಂಡಳು. ಎದ್ದು ಗಂಡನ ಹಾಸಿಗೆಯ ಕಡೆ ನೋಡಿದಾಗ, ಅವನಾಗಲೇ ಎದ್ದು ಹೊರಗೆ ಹೋಗಿದ್ದು ತಿಳಿಯಿತು. ಮಮತಾ ಹಾಸಿಗೆಯನ್ನು ಸರಿಪಡಿಸುವಷ್ಟರಲ್ಲಿ, ಸರಳಾ ನಸುನಗುತ್ತಾ ಅತ್ತಿಗೆಯೆದುರು ಕಾಫಿ ಟ್ರೇ ಹಿಡಿದು ಬಂದಳು.

“ಸುಪ್ರಭಾತ ಅತ್ತಿಗೆ,” ಅವಳು ತುಂಟತನದಿಂದ ನಸುನಕ್ಕಳಾದರೂ ಕಣ್ಣುಗಳಲ್ಲಿಯೇ `ಏನಾಯಿತು?’ ಎಂಬ ಪ್ರಶ್ನೆ ಇತ್ತು. ಅದಾಗಲೇ ಮಮತಾ ಈ ಲೋಕಕ್ಕೆ ಬಂದಳು. ಅಷ್ಟರಲ್ಲಿ ನಾದಿನಿ, ಅತ್ತಿಗೆಯರು ಒಟ್ಟೊಟ್ಟಿಗೆ ಒಳಗೆ ಪ್ರವೇಶ ಮಾಡಿದರು. ಗಂಭೀರ ಮುಖಭಾವದ ಅವರು ಆತಂಕದಿಂದ ಅವಳ ಬಳಿ ಬಂದು ಪರೀಕ್ಷಾ ದೃಷ್ಟಿ ಬೀರಿದರು. ಸರೋಜಾ ಜಿಜ್ಞಾಸೆಯಿಂದ ಕೇಳಿದಳು, “ಮೃತ್ಯುಂಜಯ ಬಹಳ ಬೇಗ ಎದ್ದುಬಿಟ್ಟಿದ್ದ…. ಏನಾಯಿತು?”

ಅಷ್ಟರಲ್ಲಿ ಅತ್ತಿಗೆ ಕಪ್‌ಗೆ ಕಾಫಿ ಬಗ್ಗಿಸಿ, ಅವಳ ಕೈಗೆ ಕೊಟ್ಟು ರಾಜ ಗಾಂಭೀರ್ಯದಿಂದ, “ಏನಾಯಿತು?” ಎಂದು ಕಿವಿಯಲ್ಲಿ ಪಿಸುಗುಟ್ಟಿದಳು.

ಇದಕ್ಕೂ ಅವಳು ಉತ್ತರಿಸುವ ಮುನ್ನ ಅತ್ತೆಯ ಸವಾರಿಯೂ ಇಲ್ಲಿಗೇ ಚಿತ್ತೈಸಿತು. ಅವರು ಶಂಕಿತ ದೃಷ್ಟಿಯಲ್ಲಿ ಅತ್ತಿತ್ತ ನೋಡಿ, ತನಗೆ ನಮಸ್ಕರಿಸಿದ ಮಮತಾಳ ತಲೆಯನ್ನು ಸವರುತ್ತ, “ಏನಮ್ಮ ಮಮತಾ, ಏನಾಯಿತು?” ಎಂದರು.

ಅಷ್ಟೊಂದು ಜನರ ತುಂಬು ಪ್ರೀತಿಯನ್ನು, ತನ್ನ ಪರವಾಗಿ ಅವರ ಕಳಕಳಿಯನ್ನು ಕಂಡು ರಾಗರಂಜಿತವಾದ ತನ್ನ ಮುಖವನ್ನು ಅವರಿಗೆ ತೋರಿಸಲಾಗದೆ, ಅತ್ತೆಯ ಮಡಿಲಲ್ಲಿ ಮುಖ ಅಡಗಿಸುತ್ತ ಬಹಳ ನಾಚಿಕೆಯಿಂದ “ಏನೂ ಇಲ್ಲ,” ಎಂದಳು. ಅವರೆಲ್ಲರ ಕಿಲಕಿಲ ನಗೆ ಕೇಳಿಬಂದಾಗ ಮೃತ್ಯುಂಜಯ ಓಡಿ ಬಂದ. ಅವನನ್ನು ಕಾಣುತ್ತಲೇ ಹೆಂಗಳೆಯರೆಲ್ಲ ಮತ್ತೆ `ಹೋ’ ಎಂದು ನಕ್ಕರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ