ಬಸ್ಸು ವೇಗವಾಗಿ ತನ್ನ ಗುರಿಯತ್ತ ಚಲಿಸುತ್ತಿತ್ತು. ಮಮತಾ ನವ ವಧುವಿನ ಅಲಂಕಾರದಲ್ಲಿ ರೇಶಿಮೆ ಸೀರೆಯ ಸೆರಗನ್ನು ಮೈತುಂಬಾ ಹೊದ್ದು ಸೀಟಿನ ಒಂದು ಕಡೆ ಮುದುಡಿಕೊಂಡು ಕುಳಿತಿದ್ದಳು. ಶ್ರೀರಂಗಪಟ್ಟಣದ ತವರನ್ನು ಬಿಟ್ಟು ಬೆಂಗಳೂರಿನ ಅತ್ತೆಮನೆಗೆ, ಮದುಣಗಿತ್ತಿ ಮಮತಾ ಆತಂಕದಿಂದ ಹೊರಟಿದ್ದಳು.

ತನ್ನವರನ್ನೆಲ್ಲ ತೊರೆದ ನೋವು ಮನಸ್ಸಿನ ಮೂಲೆಯಲ್ಲಿ ತುಂಬಿತ್ತಾದರೂ, ಬೀಳ್ಕೊಡುಗೆಯ ಕಣ್ಣೀರು ಇದೀಗ ಆರಿತ್ತು. ಅತ್ತೆಮನೆಯಲ್ಲಿ ತನಗೆ ದೊರಕಬಹುದಾದ ಸ್ವಾಗತ, ಅಲ್ಲಿನ ಹೊಸ ಜೀವನ, ಗಂಡನ ಪ್ರೇಮ ಪ್ರೀತಿ, ಇವುಗಳನ್ನೆಲ್ಲ ನೆನೆದು ಬಹಳ ಗಾಬರಿಗೊಂಡಿದ್ದಳು.

ಒಂದು ವಿಚಾರವನ್ನು ತವರಿನಲ್ಲಿ ಎಲ್ಲರೂ ಕಡೆಗಣಿಸಿದ್ದರು. ತಾಯಿ ತಂದೆ, ಅಣ್ಣ ಅತ್ತಿಗೆ ಎಲ್ಲರೂ ಬೇಕೆಂದೇ ಆ ವಿಷಯವನ್ನು ತೇಲಿಸಿಬಿಡುತ್ತಿದ್ದರು ಎನ್ನಬಹುದು. ತಾನು ಇಲ್ಲಿಂದ ಅತ್ತೆಮನೆಗೆ ಹೋದ ಮೇಲೆ ಅಲ್ಲಿ ಯಾವುದೋ ಗಂಭೀರವಾದ ಪರಿಸ್ಥಿತಿಯೊಂದನ್ನು ಎದುರಿಸಬೇಕಾಗುತ್ತದೆಂದು ಎದೆ ಬಾರಿ ಬಾರಿಗೂ ಹೊಡೆದುಕೊಳ್ಳುತ್ತಿತ್ತು. ಇದಕ್ಕೆಲ್ಲಾ ಮೂಲಕಾರಣವೆಂದರೆ, ಮೃತ್ಯುಂಜಯ ಸಹಜವಾಗಿ ಮದುಮಗನಿಗೆ ಇರಬೇಕಾದ ಸಂತೋಷದೊಂದಿಗೆ ಹಸೆಮಣೆ ಏರಿದಂತೆ ಕಾಣಲಿಲ್ಲ. ಬದಲಿಗೆ ಬಲಿಪೀಠ ಏರಿದ ಕುರಿಯಂತೆ, ಗಂಟು ಮುಖ ಹಾಕಿಕೊಂಡು, ಸಿಡಿಮಿಡಿಗುಟ್ಟುತ್ತ ಅಂತೂ ಮದುವೆ ಆಯಿತು ಎನ್ನಿಸಿದ್ದ.

ಮೃತ್ಯುಂಜಯ ಅವಳನ್ನು ಅದೀಗ ತಾನೇ ವಿವಾಹವಾಗಿದ್ದ ಗಂಡ, ಹೊಸ ಮದುಮಗ, ನಿನ್ನೆ ತಾನೇ ಮದುವೆಯಾದ ಹೆಂಡತಿಯಲ್ಲಿ ತೋರಬಹುದಾದ ಸಹಜ ಕುತೂಹಲದಲ್ಲಿ ಒಂದಂಶವನ್ನೂ ವ್ಯಕ್ತಪಡಿಸಿರಲಿಲ್ಲ. ಮುಕ್ಕಾಲು ಗಂಟೆ ಪ್ರಯಾಣದಲ್ಲಿ ನಾಲ್ಕಕ್ಕೂ ಮೀರಿ ಸಿಗರೇಟನ್ನು ಸುಟ್ಟಿದ್ದನೇ ಹೊರತು ಔಪಚಾರಿಕವಾಗಿಯೂ, ಅಪ್ಪಿತಪ್ಪಿ ಅವಳನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಮಾತುಗಳಿರಲಿ ಅವಳ ಮುಖ ಪರಿಚಯ ಅವನಿಗೆ ಸರಿಯಾಗಿ ಆಗಿರಲಿಲ್ಲವೆಂದರೆ ಅತಿಶಯೋಕ್ತಿಯಲ್ಲ. ಹೊಸ ಮದುಮಗನನ್ನು ಛೇಡಿಸುತ್ತಿದ್ದ ಅಣ್ಣ ಅತ್ತಿಗೆ, ತಮ್ಮ ತಂಗಿಯರ ಸರಸ ಸಂಭಾಷಣೆಗೂ ನಿರ್ಲಿಪ್ತನಾಗಿದ್ದ. ಗಂಡಿನ ಕಡೆಯವರು ಲಗ್ನ ಮಂಟಪಕ್ಕೆ ಬರುತ್ತಿರುವಾಗಲೇ ಮೃತ್ಯುಂಜಯನ ಗಂಟು ಮುಖವನ್ನು ನೋಡಿ ನಾಲ್ಕಾರು ಮಾತುಗಳು ಕೇಳಿಬಂದವು.

``ಹುಡುಗನಿಗೆ ಮದುವೆ ಇಷ್ಟ ಇಲ್ಲಾಂತ ಕಾಣುತ್ತೆ.''

``ಅದೇನು, ಸಾಕಷ್ಟು ವರದಕ್ಷಿಣೆ ಕೊಟ್ಟಿಲ್ಲವಂತೇನು?''

``ಅಯ್ಯೋ ಅದ್ಲಾರೀ, ಅವನು ನಯಾ ಪೈಸೆ ವರದಕ್ಷಿಣೆಯೂ ಬೇಡ ಅಂದನಂತೆ.''

``ಮತ್ತೆ ಇನ್ನೇನಂತೆ.....?''

``ಏನೂ ಅರ್ಥವಾಗ್ತ ಇಲ್ಲ. ಮದುಮಗನ ಅವತಾರ ನೋಡಿ ಹುಡುಗಿಯ ಅಣ್ಣತಮ್ಮಂದಿರು ಪೆಚ್ಚಾಗಿದ್ದಾರೆ.''

``ಏನೋ ಇರಬೇಕು. ಬೆಂಕಿಯಿಲ್ಲದೆ ಹೊಗೆಯಾಡಲ್ಲ ಬಿಡಿ....''

ಮಮತಾಳ ಕಿವಿಗೆ ಈ ಮಾತುಗಳು ಬೀಳುತ್ತಿದ್ದಂತೆ ಜೀವ ನಡುಗತೊಡಗಿತು. ಮೊದಲು ಹೆಣ್ಣು ನೋಡುವ ಶಾಸ್ತ್ರಕ್ಕೂ ಸಹ ಮೃತ್ಯುಂಜಯ ದಯಮಾಡಿಸಿರಲಿಲ್ಲ. ತನ್ನನ್ನು ನೋಡುವಷ್ಟೂ ತಾಳ್ಮೆ ಇಲ್ಲವೇ ಅಥವಾ ಪುರಸತ್ತಿಲ್ಲವೇ? ಹೆತ್ತವರ, ಅಣ್ಣತಮ್ಮಂದಿರ ಆತ್ಮವಿಶ್ವಾಸ, ಗಂಡಿನ ಕಡೆಯವರ ಅನುನಯ ವರ್ತನೆಗೆ ಮಾರುಹೋಗಿ ವಿವಾಹಕ್ಕೆ ಒಪ್ಪಿದ್ದಳು. ವರ ಪೂಜೆಯ ದಿನ ಕಿಟಕಿಯಿಂದ ನೋಡಿದಾಗ, ಅವನೊಬ್ಬ ಆಕರ್ಷಕ, ಮನೋಹರ ಆದರೆ ಭಾವಹೀನ, ಅನಾಸಕ್ತ ತರುಣನಂತೆ ಕಂಡುಬಂದಿದ್ದ. ಅವನ ರೂಪಿಗೆ ಮರುಳಾದರೂ, ಕಣ್ಣಲ್ಲಿ ಕಂಡ ಅನಾಸಕ್ತಿಗೆ ಮಮತಾ ವಿಹ್ವಲಗೊಂಡಳು. ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂಬ ಉತ್ಸಾಹ ಎಳ್ಳಷ್ಟೂ ಅವನಲ್ಲಿ ಇರಲಿಲ್ಲ. ಎಷ್ಟೋ ಬಾರಿ ಅವನು ಬೇಸರದಿಂದ ಇವಳ ಅಣ್ಣನಿಗೆ ಹೇಳುತ್ತಿದ್ದದ್ದೂ ಕಿವಿಗೆ ಬಿತ್ತು, ``ಇದೆಲ್ಲಾ ಬೇಗ ಬೇಗ ಮುಗಿಸಲು ಆಗುವುದಿಲ್ಲವೇ? ಮದುವೆ ಮಂಟಪಕ್ಕಂತೂ ಬಂದಿದ್ದು ಆಯ್ತಾ?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ