ರಾತ್ರಿಯ 2 ಗಂಟೆ ಹೊಡೆಯಿತು. ವಿಭಾ ಮತ್ತೊಮ್ಮೆ ಹೊರಳಿ ಮಲಗಿದಳು. ಅರೆ, ಇಷ್ಟು ಹೊತ್ತಾದರೂ ನಿದ್ರೆ ಹತ್ತಿರ ಸುಳಿದಿರಲಿಲ್ಲ. ಏನಾಗಿದೆ? ಎಲ್ಲ ಇದ್ದಂತೇ ಇದೆ. ಯಾವುದೂ ಬದಲಾಗಿಲ್ಲ. ಹಾಗಾದರೆ ಈ ವ್ಯಾಕುಲತೆ ಏಕೆ ಕಾಡುತ್ತಿದೆ? ಈ ದ್ವಂದ್ವ ಏತಕ್ಕಾಗಿ? ಅವಳು ಪಕ್ಕಕ್ಕೆ ತಿರುಗಿ ನೋಡಿದಳು. ಸುಜಯ್‌ ಒಳ್ಳೆಯ ನಿದ್ರೆಯಲ್ಲಿದ್ದ. ಪ್ರೀತಿ, ಕಿಟ್ಟಿ ಇಬ್ಬರೂ ಕನಸಿನ ಲೋಕ ಸೇರಿದ್ದರು. ಅವರ ತುಟಿಗಳ ಮೇಲೆ ಮಂದಹಾಸ ನಲಿದಾಡುತ್ತಿತ್ತು. ಬೀದಿಯಲ್ಲಿ ಗೂರ್ಖಾ ದೊಣ್ಣೆ ಕುಟ್ಟುತ್ತಾ ನಡೆದು ಹೋಗುತ್ತಿದ್ದ.

`ಈ ಗೂರ್ಖಾನನ್ನು ಮಲಗಲು ಕಳಿಸಿ, ನಾನೇ ಆ ಕೆಲಸ ಮಾಡಲು ಹೋಗಲೇ? ಆಗ ಹೇಗೂ ರಾತ್ರಿಯಾದರೂ ಕಳೆಯುತ್ತೆ,’ ವಿಭಾ ತನ್ನಲ್ಲೇ ಹೇಳಿಕೊಂಡಳು. ಅವಳು ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಅವಳಿಡುವ ಹೆಜ್ಜೆ ಅವಳ ಇದುವರೆಗಿನ ಸುಂದರ ಬದುಕನ್ನೇ ಹಾಳು ಮಾಡೀತು.

ಸುಜಯ್‌ನನ್ನು ಎಬ್ಬಿಸಿ, ಅವನಿಗೆ ಎಲ್ಲವನ್ನೂ ಹೇಳಿಬಿಟ್ಟರೆ? ಆದರೆ ಸುಜಯ್‌ ಇದನ್ನು ಸಹಿಸಿಕೊಳ್ಳುವನೇ? ಅವನಿಂದ ಸಾಧ್ಯವೇ ಇಲ್ಲ. ಮದುವೆಯಾಗಿ 15 ವರ್ಷಗಳೇ ಆದವು. ಅವಳ ಬದುಕು ಒಂದೇ ನಿಟ್ಟಿನಲ್ಲಿ ಒಂದೇ ಗತಿಯಲ್ಲಿ ಹೇಗೋ ಸಾಗುತ್ತಿದೆ ಎಂದ ಮೇಲೆ ಅವಳಿಗೆ ಆಗಿರುವುದಾದರೂ ಏನು?

ಹೀಗೇಕಾಯಿತೆಂದು ವಿಭಾ ಎಷ್ಟೋ ಬಾರಿ ಯೋಚಿಸಿದ್ದಳು. ಅವಳು ಎಲ್ಲಿ ತಪ್ಪಿದಳು? ಅವಳ ಬದುಕಿನಲ್ಲಿ ಅದೇನು ಕುಂದುಕೊರತೆ ಇತ್ತು? ಎಲ್ಲ ಶೂನ್ಯ ಎಂದೇಕೆ ಭಾಸವಾಗುತ್ತಿದೆ? 15 ವರ್ಷಗಳ ವೈವಾಹಿಕ ಜೀವನ ಈ ಶೂನ್ಯವನ್ನೇಕೆ ತುಂಬಿಲ್ಲ? ಉತ್ತರಕ್ಕಾಗಿ ಅವಳು ಎಷ್ಟೋ ಬಾರಿ ತಡಕಾಡಿದ್ದಳು.

ಬಾಲ್ಯದಿಂದಲೂ ಪ್ರತಿಭಾವಂತೆ ಎನಿಸಿದ್ದ ವಿಭಾ, ಮನೆಯ ಎಲ್ಲರ ಕಣ್ಮಣಿ ವಿಭಾ, ಅಪೂರ್ವ ಸುಂದರಿ ವಿಭಾ, ಶ್ರೀಮಂತ ಗಂಡನ ಪ್ರೀತಿಯ ಹೆಂಡತಿ ವಿಭಾ, ಇಬ್ಬರು ಮುದ್ದು ಮಕ್ಕಳ ಮಮತೆಯ ತಾಯಿ ವಿಭಾ! ಇಷ್ಟೆಲ್ಲ ಇದ್ದೂ ಈ ಅಶಾಂತಿ, ಈ ಒದ್ದಾಟ, ಈ ಉಕ್ಕುವ ಪ್ರೇಮ ಏತಕ್ಕೆ?

ಹೇಮಂತ್‌ ಯಾವಾಗಲೂ ಅವಳ ಹಿಂದೆ ಮುಂದೆ ಸುತ್ತಾಡುವುದೇಕೆ? ಎಲ್ಲ ಸರಿಯಾಗಿ ನಡೆಯುತ್ತಿರುವಾಗಲೇ ಅವನು ಅವಳ ಬದುಕಿನಲ್ಲಿ ಪ್ರವೇಶಿಸಿದ್ದ. ತನ್ನ ಒಂದಾನೊಂದು ಕಾಲದ ಕೆಲವು ಆಸೆ ಆಕಾಂಕ್ಷೆಗಳನ್ನು, ಕೆಲವು ಅಭಿಲಾಷೆಗಳನ್ನು ಅವಳು ಮರೆತೇಬಿಟ್ಟಿದ್ದಳು. ಹೇಮಂತ ಅವೆಲ್ಲವನ್ನು ಮತ್ತೆ ಹಸಿರಾಗಿಸಿದ್ದ.

ಯಾವುದೋ ಒಂದು ಪಾರ್ಟಿಯಲ್ಲಿ ಅಕಸ್ಮಾತಾಗಿ ವಿಭಾ ಅವನನ್ನು ಭೇಟಿಯಾಗಿದ್ದಳು. ಸುಜಯ್‌ನೇ ಅವನ ಪರಿಚಯ ಮಾಡಿಸಿದ್ದ, “ವಿಭಾ ಇವರು ಡಾ. ಹೇಮಂತ್‌. ವೃತ್ತಿಯಲ್ಲಿ ವೈದ್ಯರು, ಪ್ರವೃತ್ತಿಯಲ್ಲಿ ಸಾಹಿತಿ.”

“ಅರೆ, ಡಾಕ್ಟರ್‌ ಮತ್ತು ಸಾಹಿತಿ! ವೃತ್ತಿಗೂ ಪ್ರವೃತ್ತಿಗೂ ಸಂಬಂಧವೇ ಇಲ್ಲವಲ್ಲ?” ವಿಭಾ ನಗುತ್ತಾ ಹೇಳಿದ್ದಳು.

“ಹೌದು, ಇದೇ ನನ್ನ ವೈಶಿಷ್ಟ್ಯ. ಇದೇ ನನ್ನನ್ನು ಬೇರೆಯವರಿಂದ ಪ್ರತ್ಯೇಕಿಸುತ್ತದೆ,” ಹೇಮಂತ ತಾನೂ ನಗುತ್ತಾ ಹೇಳಿದ್ದ, “ನಿಮ್ಮಂತೆ.”

“ನಾನೇ? ಯಾಕಪ್ಪಾ, ನಾನೇನೂ ಡಾಕ್ಟರೂ ಅಲ್ಲ, ಸಾಹಿತಿಯೂ ಅಲ್ಲ. ಸರ್ವೇ ಸಾಧಾರಣ ಮಹಿಳೆ ಅಷ್ಟೆ.”

“ನೋಡಿದ್ರಾ, ಅದಕ್ಕೇ ನಮ್ಮ ದೇಶಕ್ಕೆ ಈ ಗತಿ ಬಂದಿದೆ. ಇಲ್ಲಿಯ ಮಹಿಳೆಯರು ಬಹುಬೇಗ ತಮ್ಮನ್ನು ಸಾಧಾರಣ ಅಂತ ಒಪ್ಪಿಕೊಂಡುಬಿಡ್ತಾರೆ.”

“ಸರಿ ಬಿಡಿ, ಅಸಾಧಾರಣ ಮಹಿಳೆ ಎಂದೇ ಇಟ್ಕೋಳ್ಳೋಣ. ಅದಕ್ಕೇನೀಗ?”

“ಆಹಾ! ನೀವು ಖಂಡಿತವಾಗಿ ಅಸಾಧಾರಣ ಮಹಿಳೆ. ನಾನು ಇನ್ನು ಮೇಲೆ ನಿಮ್ಮನ್ನು ನನ್ನ ಕಥೆಗಳ ನಾಯಕಿಯನ್ನಾಗಿ ಮಾಡಿಕೊಳ್ತೀನಿ. ಇಲ್ಲೀವರೆಗೂ ಅದೆಲ್ಲಿ ಅಡಗಿ ಕುಳಿತಿದ್ರೀ ಅಂತೀನಿ.”

ವಿಭಾ ಕಂಬದಂತೆ ನಿಂತುಬಿಟ್ಟಳು. ಸುಜಯ್‌ ಇತರ ಪರಿಚಿತರೊಡನೆ ಹರಟುತ್ತಿದ್ದ. ಹೇಮಂತನ ಬಿಚ್ಚು ಮನಸ್ಸು, ಸಾಹಸ, ನಿರ್ಭೀತಿಯನ್ನು ಅವಳು ಈ ಮೊದಲು ಯಾರಲ್ಲೂ ಕಂಡಿರಲಿಲ್ಲ. ಆದರೂ ಅದೇಕೋ, ಅವನ ಧಾರ್ಷ್ಟ್ಯ ಅವಳಿಗೆ ಅಪ್ರಿಯವೆನಿಸಿರಲಿಲ್ಲ.

ಆನಂತರ ಅವರಿಬ್ಬರ ಮಾತುಕತೆ ಹಾಗೇ ಮುಂದುವರಿದಿತ್ತು. ಆ ಸಂಜೆ ಅವಳ ಪಾಲಿಗೆ ಮರೆಯಲಾಗದ ಸಂಜೆ ಎನಿಸಿತ್ತು.

ಹೇಮಂತನ ಕಂದು ಕಣ್ಣುಗಳು, ಅವನ ಮಾತುಗಳಲ್ಲಿನ ಆಕರ್ಷಣೆ ಮತ್ತು ಮುಕ್ತ ವ್ಯವಹಾರ ವಿಭಾಳಿಗೆ ಮೋಡಿ ಮಾಡಿದ್ದ. ಅವನ ವ್ಯಕ್ತಿತ್ವದಲ್ಲಿನ ವಿಲಕ್ಷಣವಾದ ಸಮ್ಮೋಹಿನಿ ಅವಳನ್ನು ಬಂಧಿಸಿತ್ತು. ಆ ಪ್ರಥಮ ಪರಿಚಯ ಒಂದರ್ಧ ಗಂಟೆಯದ್ದಲ್ಲ. ಎಷ್ಟೋ ವರ್ಷಗಳಷ್ಟು ಹಳೆಯದು ಎನಿಸಿತ್ತು. ಎಂದೂ ಮುಗಿಯದ ಮಾತುಕತೆ ಅವರ ನಡುವೆ ಆರಂಭವಾಗಿತ್ತು.

narthaki-2

ಕ್ರಮೇಣ ಹೇಮಂತ ಮನೆಗೂ ಬರತೊಡಗಿದ. ಅವನ ಮಾತು ಕೇಳಿ ವಿಭಾ ಪುಳಕಗೊಳ್ಳುತ್ತಿದ್ದಳು. ಚಲಿಸದೆ ನಿಂತಿದ್ದ ಬದುಕು ದಿಢೀರನೆ ವೇಗವಾಗಿ ನದಿಯಂತೆ ಹರಿಯತೊಡಗಿತ್ತು.

ತನ್ನ ಪಾಲಿಗೆ ಬಂದ ಬದುಕನ್ನು ಒಪ್ಪಿಕೊಂಡು, ಯಾಂತ್ರಿಕ ಬಾಳುವೆ ನಡೆಸುವ ವಯಸ್ಸಾಗಿದ್ದ ವಿಭಾಳ ಜೀವನದಲ್ಲಿ ಹೇಮಂತ ಮಹತ್ತರವಾದ ಪರಿವರ್ತನೆ ತಂದಿದ್ದ. ಹೇಮಂತ, ಸುಜಯ್‌ ಮನೆಯಲ್ಲಿ ಇರುವಾಗಲೂ, ಇಲ್ಲದಿರುವಾಗಲೂ, ಹೆಚ್ಚು ಕಡಿಮೆ ಪ್ರತಿನಿತ್ಯ ಬರತೊಡಗಿದವು. ವಿಭಾ ಕೂಡಾ ಪ್ರತಿದಿನ ಅವನ ನಿರೀಕ್ಷೆಯಲ್ಲಿರುತ್ತಿದ್ದಳು. ಒಂದು ದಿನ ಅವನನ್ನು ನೋಡದಿದ್ದರೆ ಅವಳಿಗೆ ಚಡಪಡಿಸುವಂತಾಗುತ್ತಿತ್ತು. ಗಂಡನ ಆಲಿಂಗನದಲ್ಲೂ ಅನುಭವಿಸದ ಸುಖವನ್ನು ಅವಳು ಹೇಮಂತನ ಒಡನಾಟದಲ್ಲಿ ಅನುಭವಿಸುತ್ತಿದ್ದಳು.

ಗಂಡ ಇರುವಾಗಲೂ ಹೆಂಡತಿ ಅತೃಪ್ತಳಾಗುವುದು ಎಲ್ಲಿಯಾದರೂ ಸಾಧ್ಯವೇ ಎಂದು ಅವಳು ಕೆಲವೊಮ್ಮೆ ಯೋಚಿಸುತ್ತಿದ್ದಳು. ಈಗ ಸ್ವಯಂ ಅವಳಿಗೇ ಅದರ ಅನುಭವವಾಗಿತ್ತು. ಮದುವೆ ದೈಹಿಕ ಸಂಬಂಧವನ್ನು ಮಾತ್ರ ನೀಡುತ್ತದೆ. ಅದರಿಂದ ಮಾನಸಿಕ ಸಂತೃಪ್ತಿ ದೊರೆಯದಿದ್ದರೆ ಮದುವೆ ಅಪೂರ್ಣವೆನಿಸಿಕೊಳ್ಳುವುದಿಲ್ಲವೇ? ಹೇಮಂತನ ಸಹವಾಸ ಅವಳನ್ನು ಹೀಗೆಲ್ಲಾ ಯೋಚಿಸಲು ವಿವಶಳನ್ನಾಗಿಸಿತ್ತು. ಹೇಮಂತ ಅವಳು ಮಗುಚಿ ಮುಚ್ಚಿ ಹಾಕಿದ್ದ ಪುಸ್ತಕದ ಪುಟಗಳನ್ನು ಮತ್ತೊಮ್ಮೆ ತೆರೆದಿದ್ದ. ಅದರ ಮೇಲೆ ಶೇಖರವಾಗಿದ್ದ ಧೂಳನ್ನು ಜಾಡಿಸಿದ್ದ. ಅವಳ ಮನಸ್ಸನ್ನು ತುಕ್ಕು ಹಿಡಿದಿದ್ದ ಆಧಾರರಹಿತ ಸಂಸ್ಕಾರಗಳ ಹಿಡಿತದಿಂದ ಬಿಡಿಸಿದ್ದ.

ಏನನ್ನಾದರೂ ಮಾಡಿ ಸಾಧಿಸಲು ಯಾರಿಗೂ ವಯಸ್ಸಿನ ಅಡ್ಡಿ ಇಲ್ಲ ಎಂಬುದನ್ನೂ ಅವಳಿಗೆ ಕಲಿಸಿದ್ದ. ವಿಭಾಳ ವ್ಯಕ್ತಿತ್ವವನ್ನು ಪತ್ತೆ ಮಾಡಿ, ವಿಭಾಳಿಗೆ ಅದರ ಪರಿಚಯ ಮಾಡಿಕೊಟ್ಟಿದ್ದ. ಅವಳು ಬಾಲ್ಯದಿಂದಲೇ ಪ್ರತಿಭಾವಂತೆಯಾಗಿದ್ದಳು. ನೃತ್ಯ ಅವಳ ಪ್ರತಿಭೆಯ ಕಿರೀಟಕ್ಕೆ ಸಿಕ್ಕಿಸಿದ ಗರಿಯಂತಿತ್ತು. ಅವಳು ನೃತ್ಯದಲ್ಲಿ ಉಚ್ಚ ಶಿಕ್ಷಣವನ್ನು ಪಡೆದಿದ್ದಳು. ಆದರೆ ಮದುವೆಯ ನಂತರ ಅದೆಲ್ಲ ಮುಗಿದೇ ಹೋಗಿತ್ತು. ಸುಜಯನಿಗಂತೂ ಅವನ ವ್ಯಾಪಾರ ವಹಿವಾಟಿನಿಂದ ಬಿಡುವೇ ಸಿಗುತ್ತಿರಲಿಲ್ಲ. ನೃತ್ಯ, ಗಾಯನಗಳಲ್ಲಿ ಅವನಿಗೆ ಅಭಿರುಚಿಯೂ ಇರಲಿಲ್ಲ. ಮನೆ, ಮಕ್ಕಳು, ಸಂಸಾರ, ಕ್ಲಬ್‌ ಇದೇ ಕೆವಲ ಸವಕಳಿ ಪದಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ಅವಳು ತನ್ನ ಜೀವನದ ಮಹತ್ವಪೂರ್ಣ ವರ್ಷಗಳನ್ನು ಕಳೆದಿದ್ದಳು.

ತನ್ನ ಸ್ವಂತಿಕೆಯನ್ನು ಅರ್ಥ ಮಾಡಿಕೊಳ್ಳುವುದು, ವ್ಯಕ್ತಿತ್ವದ ವಿಕಾಸಕ್ಕೆ ಪ್ರಯತ್ನ ಪಡುವುದು ಅಗತ್ಯವೆಂದು ಅವಳು ತಿಳಿದಿರಲಿಲ್ಲ. ಶ್ರೀಮತಿ ಸುಜಯ್‌ ಎಂದೇ ಅವಳು ಎಲ್ಲರಿಗೂ ಪರಿಚಿತಳಾಗಿದ್ದಳು. ಅವಳ ಗುರುತೆಂದರೆ ಅಷ್ಟೇ. ಏಕೆ? ಅವಳಿಗೆ ಸ್ವಂತ ಪರಿಚಯ ಇರಬಾರದೇ? ಈ ಪ್ರಶ್ನೆ ಅವಳನ್ನು ಈಗ ಗೊಂದಲಕ್ಕೆ ಈಡು ಮಾಡಿತ್ತು.

ಆದರೆ ಇದುವರೆಗೂ ಅಲಕ್ಷಿಸಿದ್ದ ಸ್ವಂತಿಕೆಯನ್ನು ಮತ್ತೆ ರೂಢಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

ಸಂಬಂಧಗಳ ಗೋಡೆಗಳು ದಿಢೀರನೆ ಅಲುಗಾಡತೊಡಗುತ್ತವೆ. ಎಲ್ಲೆಡೆಯೂ, ಯಾವಾಗಲೂ ತಾನು ಪರಿಸ್ಥಿತಿಗಳೊಂದಿಗೆ ರಾಜಿ ಮಾಡಿಕೊಂಡೇ ಬಾಳುತ್ತಿದ್ದೇನೆ ಎಂದು ಭಾಸವಾಗುತ್ತದೆ. ಅವಳು ಪರಿಸ್ಥಿತಿಯನ್ನು ತನಗೆ ಅನುಕೂಲಕರವಾಗಿ ಮಾಡಿಕೊಳ್ಳದೆ, ತನ್ನನ್ನೇ ಅವುಗಳಿಗೆ ತಕ್ಕಂತೆ ಹೊಂದಿಸಿಕೊಳ್ಳುತ್ತ ಬಂದಿದ್ದಳು. ಇನ್ನೂ ಯಾವ ಯಾವ ದಿಕ್ಕಿನಲ್ಲಿ, ಹೇಗೆ ತಾನೆ ಸರಿದೂಡುತ್ತಾ ಬಾಳಬೇಕೋ? ಈ ಎಳೆದಾಟದಲ್ಲಿ ಅವಳ ಸ್ವಂತಿಕೆಯ ಸರ್ವನಾಶವೇ ಆಗಿಬಿಟ್ಟೀತು! ಅವಳು ಕೈಗೊಂಡ ನಿರ್ಧಾರದಿಂದ ಮೊಟ್ಟಮೊದಲಿಗೆ ಸುಜಯ್‌ಗೆ ಆಘಾತವಾಯಿತು.

ಒಂದು ದಿನ ಅವನು ಮನೆಗೆ ಹಿಂದಿರುಗಿದಾಗ, ರೂಮಿನಲ್ಲಿ ವೀಣೆ, ತಬಲಾ, ಕಾಲ್ಗೆಜ್ಜೆ ಎಲ್ಲಾ ಹರಡಿರುವುದನ್ನು ನೋಡಿ, ಅವನಿಗೆ ಆಶ್ಚರ್ಯವಾಗಿತ್ತು.

“ಏನಿವತ್ತು? ಕ್ಲೀನಿಂಗ್‌ ನಡೀತಿರೋ ಹಾಗಿದೆಯಲ್ಲಾ?”

“ಇಲ್ಲಾರಿ, ನಾನು ಡ್ಯಾನ್ಸ್ ಪ್ರಾಕ್ಟೀಸ್‌ ಮಾಡ್ತಿದ್ದೆ,” ವಿಭಾ ಬಹಳ ಮೆಲ್ಲನೆಯ ದನಿಯಲ್ಲಿ, ತನ್ನ ಮನಸ್ಸಿನ ಭಾವನೆಗಳನ್ನು ಅದುಮಿಕೊಳ್ಳುತ್ತಾ ಹೇಳಿದಳು.

“ತಲೆ ನೆಟ್ಟಗಿದೆಯಾ? ನಿನ್ನ ವಯಸ್ಸೇನು ಗೊತ್ತಿದೆಯಾ? ಇದೆಲ್ಲ ನಿನಗೆ ಈಗ ಶೋಭಿಸೋಲ್ಲ. ಅಲ್ಲದೆ, ಜನ ಏನಂತಾರೆ? ಸುಜಯ್‌ ಹೆಂಡತಿ ಡ್ಯಾನ್ಸ್ ಬೇರೆ ಮಾಡ್ತಾಳಂತೆ ಅಂತ ನಗೋಲ್ವಾ?” ಕೋಪದಿಂದ ಕೂಗಾಡಿದ ಸುಜಯ್‌ ಕೊನೆಗೆ ಜೋರಾಗಿ ನಕ್ಕುಬಿಟ್ಟ.

ಈ ನಗೆ ಅಪ್ಪಳಿಸಿ ವಿಭಾಳಿಗೆ ಕಿವಿಯಲ್ಲಿ ಕಾದ ಸೀಸ ಹೊಯ್ದಂತಾಯಿತು. ಆಳವಾದ ಕೆಸರಿನ ಹೊಂಡದಲ್ಲಿ ಮುಳುಗುತ್ತಿರುವಂತೆ ತೋರಿತು.

ವಿಚಿತ್ರ ಮಾನಸಿಕ ದ್ವಂದ್ವದಲ್ಲಿ ಯಾವ ಉತ್ತರವು ಹೊಳೆಯಲಿಲ್ಲ.“ನನ್ನ ಬಾಲ್ಯ ನೆನಪಾಯ್ತು. ಅದಕ್ಕೆ ಎಲ್ಲವನ್ನೂ ತೆಗೆದಿಟ್ಟೆ. ಬರೇ ಧೂಳು ತುಂಬ್ಕೊಂಡಿತ್ತು. ಬಳಸ್ತಾ ಇದ್ರೆ ಕ್ಲೀನಾದ್ರೂ ಆಗುತ್ತೆ ಅಂದ್ಕೊಂಡೆ. ಸುಜಯ್‌, ನಾನು ಪ್ರ್ಯಾಕ್ಟೀಸ್‌ ಮಾಡಿದ್ದು ನಿಮಗೆ ಇಷ್ಟ ಆಗಲಿಲ್ವೆ? ಸುಮ್ಮನೆ ಮನೇಲಿ ಕುಳಿತು ನನಗೂ ಬೋರ್‌ ಆಗುತ್ತೆ. ನೀವೆಲ್ರೂ ಹೊರಟುಹೋಗ್ತೀರಿ. ಒಂಟಿತನ ನನ್ನನ್ನು ಕಿತ್ತು ತಿನ್ನುತ್ತೆ. ನಾನು ದೊಡ್ಡ ಇಕ್ಕಟ್ಟಿಗೆ ಸಿಲುಕಿದ್ದೀನಿ ಸುಜಯ್‌. ನನಗೆ ಆಸರೆ ಬೇಕು. ನಾನು ವಿಭಾ ಆಗಬೇಕು ಸುಜಯ್‌, ವಿಭಾ ಆಗ್ಬೇಕು.

“ನಿಮಗೆ ಕೋಪ ಬರುವಂತೆ ಮಾಡಿ, ಸಾಧನೆಗೆ ತೊಡಗಿದರೆ ಮಾನಸಿಕವಾಗಿ ಛಿದ್ರಗೊಳ್ಳುತ್ತೇನೆ. ಆದರೆ ಆಗ ಮತ್ತೆ ತಿರುಗಿ ಬರಲಾರೆ. ನನ್ನ ನಿರ್ಧಾರ ನನ್ನನ್ನೇ ಬಂಧಿಸಿಡಲು ಅಸಮರ್ಥವಾಗಿದೆ. ನೀವು ನನ್ನನ್ನು ಲೇವಡಿ ಮಾಡಿದರೆ, ನಿಮ್ಮಿಂದ ದೂರ ಹೋಗದೆ ನನಗೆ ಬೇರೆ ದಾರಿಯೇ ಇಲ್ಲವಾಗುತ್ತೆ.”

ಇವಳಿಗೇನು ಕೇಡು ಬಂತು ಎಂಬಂತೆ ಸುಜಯ್‌ ಅವಳನ್ನೇ ದೃಷ್ಟಿಸಿ ನೋಡಿದ. ಅವನು ಅವಳನ್ನು ಹಾಗೆ ಪರೀಕ್ಷಿಸುವಂತೆ ಎಂದೂ ನೋಡಿರಲಿಲ್ಲ. ನಿಧಾನವಾಗಿ ಅವಳಲ್ಲಿ ಅನೇಕ ಪರಿವರ್ತನೆಗಳು ಆಗಿದ್ದವು. ಸುಜಯನೇ ಸೋತು ತನ್ನ ಸಮ್ಮತಿ ಸೂಚಿಸಿದ.

ವಿಭಾ ನಿರಂತರವಾಗಿ ನೃತ್ಯಾಭ್ಯಾಸ ಮಾಡತೊಡಗಿದಳು. ಹೇಮಂತ ನಗರದ ಹೆಸರಾಂತ ನರ್ತಕರನ್ನು ಅವಳಲ್ಲಿಗೆ ಕರೆತಂದ. ಅವರೆಲ್ಲರೂ ವಿಭಾಳ ಕಲೆಯನ್ನು ಬಾಯ್ತುಂಬಾ ಹೊಗಳಿದರು. ಇದರಿಂದ ಅವಳ ಪ್ರತಿಭೆಯ ವಿಕಾಸಕ್ಕೆ ಸ್ಛೂರ್ತಿ ದೊರೆತಂತಾಯಿತು.

ನಾಟ್ಯ ಚತುರೆ ವಿಭಾ ನವಿಲನ್ನೂ ನಾಚಿಸುವಂತೆ ನರ್ತಿಸುವುದನ್ನು ಅವಳ ಮಗಳು ಪ್ರೀತಿ ಬಿಟ್ಟ ಕಣ್ಣುಬಿಟ್ಟಂತೆ ನೋಡುತ್ತಾ ಗಂಟೆಗಳನ್ನು ಕಳೆಯುತ್ತಿದ್ದಳು. ಒಂದು ದಿನ ಅವಳು ತನ್ನ ತಾಯಿಯ ಕೊರಳು ಬಳಸಿ, “ಅಮ್ಮಾ, ನಿನ್ನಂತೆ ಡ್ಯಾನ್ಸ್ ಮಾಡೋಕ್ಕೆ ನನಗೂ ಇಷ್ಟ. ನಾನು ಡ್ಯಾನ್ಸ್ ಕಲಿತ್ಕೋತೀನಿ,” ಎಂದು ಹೇಳಿದಾಗ ವಿಭಾಗೆ ನಿಜವಾದ ಸ್ವಂತಿಕೆಯನ್ನು ಪಡೆದಂತಾಯಿತು.

ಹೆಸರಾಂತ ನೃತ್ಯ ಕಲಾವಿದೆ ರೇಖಾರಾವ್ ‌ವಿಭಾಳ ಪ್ರಥಮ ನೃತ್ಯ ಪ್ರದರ್ಶನ ಮಾಡಿಸಿದರು. ಆ ದಿನ ಸುಜಯ್‌ ಒಲ್ಲದ ಮನದಿಂದಲೇ ಪ್ರದರ್ಶನಕ್ಕೆ ಬಂದಿದ್ದ. ಇದರ ನಂತರ ಎಷ್ಟೋ ಪ್ರದರ್ಶನಗಳಾದವು. ಅವಳ ನೃತ್ಯ ಪ್ರತಿಭೆಯನ್ನು ಜನರು ಶ್ಲ್ಯಾಘಿಸಿದರು. ವಿದೇಶಗಳಲ್ಲೂ ಅವಳ ನೃತ್ಯ ಪ್ರದರ್ಶನಗಳು ನಡೆದವು. ಕಳೆದ ಬಾರಿ ಅವಳು ಅಮೆರಿಕಾದಲ್ಲಿ ಪ್ರದರ್ಶನ ನೀಡಿ, ಹಿಂದಿರುಗಿದಾಗ, ಸುಜಯ್‌ ದೊಡ್ಡದೊಂದು ಹೂಗುಚ್ಛ ನೀಡಿ ಅವಳನ್ನು ಸ್ವಾಗತಿಸಿದ್ದ. ತಾನು ಅರಸುತ್ತಿದ್ದ ತೃಪ್ತಿಯ ಬಳ್ಳಿ, ಹೂಗಳಿಂದ ತುಂಬಿ ಸುವಾಸನೆ ಬೀರುತ್ತಾ ತನ್ನ ಬಳಿ ಬಂದಿದೆ ಎಂದು ವಿಭಾಳಿಗೆ ಮೊದಲ ಬಾರಿಗೆ ಭಾಸವಾಯಿತು.

ಪ್ರತಿಯೊಬ್ಬರೂ ಹೇಮಂತ ಮತ್ತು ವಿಭಾರ ನಡುವೆ ಏನು ಸಂಬಂಧವಿರಬಹುದೆಂದು ತರ್ಕಿಸತೊಡಗಿದರು. ಸುಜಯ್ ಬಾಯಿಬಿಟ್ಟು ಏನನ್ನೂ ಹೇಳಲಿಲ್ಲವಾದರೂ, ಅವನ ಮೌನವೇ ಇದನ್ನೆಲ್ಲ ಸಹಿಸುವುದು ಅವನಿಗೆ ಆಗಲಾರದು ಎನ್ನುವುದಕ್ಕೆ ಸಾಕ್ಷಿಯಾಗಿತ್ತು.

ಹೇಮಂತ ಒಬ್ಬಂಟಿಯಾಗಿದ್ದ. ಎಲ್ಲ ಜವಾಬ್ದಾರಿಗಳನ್ನೂ ನಿರ್ವಹಿಸುವ ಸಾಮರ್ಥ್ಯ ಅವನಿಗಿತ್ತು. ಅವನ ಪ್ರೀತಿ ಅವನನ್ನು ವಿಭಾಳ ಆಕರ್ಷಕ ಅಂಗಸೌಷ್ಠವದ ದಾಸನನ್ನಾಗಿ ಮಾಡಿರಲಿಲ್ಲ. ಅವನ ದೃಷ್ಟಿ ಅವಳ ಸೌಂದರ್ಯಕ್ಕೆ ಮಾತ್ರವೇ ಸೀಮಿತವಾಗಿರಲಿಲ್ಲ. ಅವನು ಅವಳ ಸ್ವಂತಿಕೆಯನ್ನು ಗುರುತಿಸಿದ್ದ.

ಅವನು ಅವಳಲ್ಲಿ ಹುದುಗಿದ್ದ ಆತ್ಮಾಭಿಮಾನಕ್ಕೆ ಬೆಲೆ ಕೊಟ್ಟಿದ್ದ. ಅದನ್ನು ಬಡಿದೆಬ್ಬಿಸಿದ್ದ. ಅವಳ ಬಾಹ್ಯ ಸೌಂದರ್ಯದ ಆರಾಧಕನಾಗುವ ಬದಲಾಗಿ, ಕಣಕಣದಲ್ಲೂ ಸ್ತ್ರೀತ್ವ ತುಂಬಿ ತುಳುಕುವ ಅವಳ ಆಂತರಿಕ ಸೌಂದರ್ಯವನ್ನು ಮೆಚ್ಚಿಕೊಂಡಿದ್ದ.

ಆದರೆ ಹೇಮಂತನನ್ನು ತೊರೆಯುವುದು ವಿಭಾಳಿಂದ ಸಾಧ್ಯವೇ ಇರಲಿಲ್ಲ. ಅವನು ಅವಳ ಪ್ರೀತಿಯ ನಾಯಕನಾಗಿದ್ದ. ಪ್ರೇರಣೆಯ ಮೂಲವಾಗಿದ್ದ. ಅವಳ ನೀರಸ ಬದುಕನ್ನು ಉನ್ನತಿಯ ಶಿಖರಕ್ಕೆ ಏರಿಸಿದ ವ್ಯಕ್ತಿಯಾಗಿದ್ದ. ಅವಳ ಅಂತರಂಗದ ಪುಸ್ತಕದ ಖಾಲಿ ಪುಟಗಳನ್ನು ಹೇಮಂತ ರಂಗು ರಂಗಾಗಿ ಚಿತ್ರಿಸಿದ್ದ. ಹೇಮಂತನ ವಿಯೋಗ ಅವಳಿಂದ ಸಹಿಸಲಾದೀತೇ?

ಆದರೆ ಇಬ್ಬಂದಿ ಜೀವನ ಬಾಳುವುದೂ ಬಹಳ ಕಷ್ಟ. ಸುಜಯ್‌ನ ಬದಲಾದ ನಡತೆ, ಮಕ್ಕಳ ಉದಾಸ ಮುಖಭಾವ ಮತ್ತು ಸಮಾಜದ ಕೊಂಕು ನೋಟ ವಿಭಾಳ ಬದುಕನ್ನು ಅಸಹನೀಯವಾಗಿಸಿದ್ದವು.

ವಿಭಾ ಗಂಡ, ಮಕ್ಕಳನ್ನು ಹೇಗೆ ತಾನೆ ಬಿಡಬಲ್ಲಳು? ಹೇಮಂತನ ಜೊತೆ ಹೊಸದಾಗಿ ಬದುಕನ್ನು ನಡೆಸುವ ಕಲ್ಪನೆಯೇ ಬಹಳ ವಿಚಿತ್ರಿವೆನಿಸುತ್ತಿತ್ತು. ಈ ತೊಳಲಾಟ ಅವಳನ್ನು ಯಾವಾಗಲೂ ಕಾಡುತ್ತಿತ್ತು. ಖ್ಯಾತಿ, ಹೆಸರು ಮತ್ತು ಸಂಪತ್ತು ಅವಳ ಕಾಲಿನಡಿಗೆ ಬಂದು ಬಿದ್ದಿದ್ದ. ಆದರೆ ಅವಳು ಇಷ್ಟೆಲ್ಲವನ್ನೂ ಪಡೆದೂ ವಿಚಿತ್ರವಾದ ಅಶಾಂತಿಯ ಬಲೆಯಲ್ಲಿ ಸಿಲುಕಿ ಸದಾ ನರಳುತ್ತಿದ್ದಳು.

ಒಂದು ದಿನ ಹೇಮಂತ ಬಂದಾಗ, ಅವಳಿಗೆ ತನ್ನ ಭಾವನೆಗಳ ಮಹಾಪೂರವನ್ನು ತಡೆಗಟ್ಟುವುದು ಸಾಧ್ಯವಾಗಲಿಲ್ಲ. ಹೇಮಂತನ ಭುಜದ ಮೇಲೆ ತಲೆ ಇರಿಸಿ ಅಳತ್ತಳುತ್ತಾ ಅವನಿಗೆ ತನ್ನ ಮನೋವ್ಯಥೆಯನ್ನು ತಿಳಿಸಿಬಿಟ್ಟಳು.

“ನಾನೇನು ಮಾಡಲಿ ಹೇಮಂತ್‌? ನಾನೇನು ಮಾಡಲಿ? ನೀವೇ ಹೇಳಿ.”

ಹೇಮಂತ ಅಚಲನಾಗಿ ನಿಂತಿದ್ದು, ಎಲ್ಲವನ್ನೂ ಮೌನವಾಗಿ ಕೇಳಿಸಿಕೊಂಡ. ನಂತರ ಏನನ್ನೂ ಹೇಳದೆ ಹೊರಟುಹೋದ. ವರ್ಷಗಳೇ ಉರುಳಿಹೋದವು. ಹೇಮಂತ ಮತ್ತೆಂದೂ ವಿಭಾಳ ಮನೆಗೆ ಬರಲಿಲ್ಲ. ದೂರದ ಊರಿಗೆ ತಾನಾಗಿ ಕೇಳಿ ವರ್ಗ ಮಾಡಿಸಿಕೊಂಡು ಹೊರಟು ಹೋದನೆಂದು ತಿಳಿದುಬಂದಿತ್ತು ಅಷ್ಟೆ.

Tags:
COMMENT