ವಿಮಾನದಿಂದ ಕೆಳಗಿಳಿದ ನಂತರ ಡಾ. ಸತೀಶ್‌ಗೆ ತಾನಿನ್ನೂ ಗಾಳಿಯಲ್ಲೇ ಹಾರುತ್ತಿರುವಂತೆ ಅನಿಸುತ್ತಿತ್ತು. ಅನಿಸದೇ ಏನು? ಮೂರು ತಿಂಗಳ ನಂತರ ಮನೆಗೆ ಹಿಂತಿರುಗುತ್ತಿರುವ ಸಂತಸ, ಈ ಸಂದರ್ಭದಲ್ಲಿ ವಿದೇಶದಲ್ಲಿ ಸಿಕ್ಕ ಗೌರವ ಹಾಗೂ ವಿಶ್ವವಿಖ್ಯಾತ ಲಂಡನ್‌ನ ಕಿಂಗ್ಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರತಿವರ್ಷ ಕೆಲವು ತಿಂಗಳುಗಳ ಕಾಲ ವಿಸಿಟಿಂಗ್ ಪ್ರೊಫೆಸರ್ ಆಗಿ ಬರಬೇಕೆಂಬ ಆಹ್ವಾನ. ಈ ಸುದ್ದಿ ಕೇಳಿ ಲತಾಗೆ ಖುಷಿಯಾಗುತ್ತದೆ. ಶಶಿಯಂತೂ ಖುಷಿಯಿಂದ ಕುಣಿಯುತ್ತಾಳೆ. ಆದರೆ ಹೊರಗೆ ನಿಂತಿದ್ದ ಜನರಲ್ಲಿ ಲತಾ ಮಾತ್ರ ಕಂಡುಬಂದಳು. ಅವನು ಅಸಹನೆಯಿಂದ ನಾಲ್ಕೂ ಕಡೆ ನೋಡಿದ.
“ಶಶೀನ ತಾನೆ ಹುಡುಕುತ್ತಿರೋದು? ನಾನು ಬೇಕೂಂತ ಅವಳನ್ನು ಕರೆದುಕೊಂಡು ಬರಲಿಲ್ಲ. ಏಕೆಂದರೆ ನಾನು ನಿಮಗೆ ಏಕಾಂತದಲ್ಲಿ ಒಂದು ಖುಷಿ ಸಮಾಚಾರವನ್ನು ಹೇಳಬೇಕಿತ್ತು,” ಲತಾ ನಾಚಿಕೊಂಡಳು.
“ನಾನೂ ಶಶಿಗೆ ಖುಷಿ ಸಮಾಚಾರ ಹೇಳೋಕೆ ಕಾಯ್ತಿದ್ದೀನಿ. ಇರಲಿ ಇಷ್ಟು ಹೊತ್ತು ಕಾದಿದ್ದಾಯ್ತು. ಇನ್ನು ಸ್ವಲ್ಪ ಹೊತ್ತು ಕಾದ್ರೆ ಏನು? ನಿನ್ನ ಸಮಾಚಾರ ಹೇಳು.”
“ಕಾರಿನಲ್ಲಿ ಕುಳಿತ ಮೇಲೆ.”
“ಅಲ್ಲಿ ಡ್ರೈವರ್ ಎದುರಿಗೆ ಏಕಾಂತ ಎಲ್ಲಿ ಬಂತು?” ಸತೀಶ್ ತುಂಟತನದಿಂದ ಕೇಳಿದ.
“ನಾನು ಡ್ರೈವರ್‌ನನ್ನು ಕರೆದುಕೊಂಡು ಬಂದಿಲ್ಲ,” ಲತಾ ಟ್ರ್ಯಾಲಿಯನ್ನು ಪಾರ್ಕಿಂಗ್‌ನತ್ತ ತಿರುಗಿಸುತ್ತಾ ಹೇಳಿದಳು.
“ನೀನು ಗುಟ್ಟಾಗಿಟ್ರೂ ಆ ಖುಷಿ ಸಮಾಚಾರ ಏನೂಂತ ನನಗೆ ಗೊತ್ತು,” ಸತೀಶ್ ಕಾರಿನಲ್ಲಿ ಕುಳಿತು ಅವಳನ್ನು ತನ್ನೆಡೆಗೆ ಎಳೆದುಕೊಳ್ಳುತ್ತಾ ಹೇಳಿದ, “ನೀನು ತಾಯಿಯಾಗ್ತಿದ್ದೀಯ. ಹೌದು ತಾನೆ?”
“ಮನೆ ತಲುಪುವವರೆಗೆ ತಾಳ್ಮೆ ಇರಲಿ…. ಅಂದಹಾಗೆ ನಿಮ್ಮ ಊಹೆ ಸರಿಯಾಗಿದೆ. ನಾನು ಮತ್ತೆ ತಾಯಿಯಾಗುತ್ತಿದ್ದೇನೆ. ಈ ತಾಯೀನ ಅತ್ತೆ ಎಂದೂ ಕರೆಯುತ್ತಾರೆ.”
“ಅಂದರೆ ನೀನು, ನಾನು ಇಲ್ಲದಿರುವ ಅವಕಾಶ ಬಳಸಿಕೊಂಡು ನನ್ನ ಹಾರ್ಡ್‌ಕೋರ್ ಪ್ರೊಫೆಶನಲ್ ಮಗಳಿಗೆ ಮದುವೆ ಆಗೂಂತ ಬ್ರೇನ್ ವಾಶ್ ಮಾಡಿಬಿಟ್ಯಾ?”
“ನಾನು ಅವಳಿಗೆ ಹೇಳಿದ್ದೇನೆಂದರೆ, ಅವಳು ಇಚ್ಛಿಸಿದವನನ್ನು ನೀವು ತಲೆಯ ಮೇಲೆ ಕೂಡಿಸಿಕೊಂಡು ಮೆರೆಸ್ತೀರಿ ಅಂತ. ಏಕೆಂದರೆ ಪೃಥ್ವಿ ನಿಮ್ಮ ಆತ್ಮೀಯ ಗೆಳೆಯ ಸುಧೀರ್‌ರ ಮಗ.”
“ಸುಧೀರ್‌ನ ಮಗ? ನಾನು ಒಪ್ಪೋದಿಲ್ಲ,” ಸತೀಶ್ ಆತ್ಮವಿಶ್ವಾಸದಿಂದ ಹೇಳಿದ.
“ನೋಡಿದ್ರೆ ಖಂಡಿತಾ ನಂಬ್ತೀರಿ. ಮೋಜಿನ ವಿಷಯವೆಂದರೆ ಮಗು ಗರ್ಭದಿಂದ ಹೊರಗೆ ಬಂದಕೂಡಲೇ ಅದನ್ನು ಅಮೆರಿಕಾದ ಪ್ರಜೆಯನ್ನಾಗಿ ಮಾಡಲು ಹರಿಣಿ ಮತ್ತು ಸುಧೀರ್ ಅಮೆರಿಕಾಗೆ ಹೊರಟುಹೋಗಿದ್ದರು. ಅದೇ ಪೃಥ್ವಿಗೆ ಭಾರತ ಎಷ್ಟು ಇಷ್ಟವಾಯಿತೆಂದರೆ ಅವನು ಇಲ್ಲಿಂದ ವಾಪಸ್ ಹೋಗಲು ಇಷ್ಟಪಡಲಿಲ್ಲ. ಅವನು ಇಲ್ಲೇ ಅಮೆರಿಕನ್ ಕಂಪ್ಯೂಟರ್ ಕಂಪನಿಯೊಂದರ ಏಜೆನ್ಸಿ ತೆಗೆದುಕೊಂಡಿದ್ದಾನೆ. ಈಗ ಹರಿಣಿ ಮತ್ತು ಸುಧೀರ್ ಕೂಡ ಪರ್ಮನೆಂಟಾಗಿ ಭಾರತಕ್ಕೆ ಹಿಂತಿರುಗಿದ್ದಾರೆ.”
“ಪೃಥ್ವಿ ವಯಸ್ಸೆಷ್ಟು?”
“ಅವನು ನಮ್ಮ ಶಶಿಗಿಂತ ಸ್ವಲ್ಪ ದೊಡ್ಡವನು. ಏಕೆಂದರೆ ನೀವು ವಿದೇಶದಿಂದ ಬಂದ ಮೇಲೆ ಅವಳು ಹುಟ್ಟಿದ್ದು. ನೀವು ವಿದೇಶಕ್ಕೆ ಹೋದ ಕೂಡಲೇ ಹರಿಣಿ ಮತ್ತು ಸುಧೀರ್ ಹೊರಟುಬಿಟ್ಟಿದ್ರು. ಹರಿಣಿ ಆಗ ಗರ್ಭಿಣಿ ಆಗಿದ್ದಳು.”
“ಹರಿಣಿ ಆಗ ಗರ್ಭಿಣಿ ಆಗಿದ್ಲೂಂತ ನಿನಗೆ ಹೇಗೆ ಗೊತ್ತು? ಆಗ ನೀನಿನ್ನೂ ಹೊಸ ವಧು. ಹರಿಣಿ ಇದರ ಬಗ್ಗೆ ನಿನಗೆ ಹೇಳಿದ್ದಾಳೆ ಅನ್ನೋಕೆ ನಿಮ್ಮಿಬ್ಬರಲ್ಲಿ ಅಷ್ಟೇನೂ ಸ್ನೇಹವಿರಲಿಲ್ಲ.”
“ಆದರೆ ಅಮ್ಮನಿಗೆ ಅವರ ಅತ್ತೆಯ ಜೊತೆ ಒಳ್ಳೆಯ ಸಂಬಂಧ ಇತ್ತು. ಹರಿಣಿ ಗರ್ಭಿಣಿಯಾಗಿದ್ದನ್ನು ಅವರಿಂದಲೇ ತಿಳಿದುಕೊಂಡೆ.”
“ಸರಿ,” ಎಂದು ಹೇಳಿದ ಸತೀಶ್ ಸೀಟಿಗೆ ತಲೆ ಒತ್ತಿ ಕಣ್ಣುಗಳನ್ನು ಮುಚ್ಚಿಕೊಂಡ. ಅತೀತ ಸಿನಿಮಾದಂತೆ ಅವನ ಕಣ್ಣುಗಳ ಮುಂದೆ ಬಿಚ್ಚಿಕೊಂಡಿತು…
ನೆರೆಯಲ್ಲಿ ವಾಸವಾಗಿದ್ದ ಅವಳಿ ಸೋದರರು ಸುಧೀರ್ ಹಾಗೂ ಸುಮಂತ್‌ರೊಂದಿಗೆ ಸತೀಶ್‌ಗೆ ಒಳ್ಳೆಯ ಗೆಳೆತನವಿತ್ತು. ವಿಶೇಷವಾಗಿ ಸುಧೀರ್‌ನೊಂದಿಗೆ. ಸತೀಶನ ಕ್ಲಾಸ್‌ಮೇಟ್ ಹರಿಣಿಯನ್ನು ಸುಧೀರ್ ಪ್ರೇಮಿಸುತ್ತಿದ್ದ. ಅವಳನ್ನು ಭೇಟಿಯಾಗಲು ಅವನು ಆಗಾಗ್ಗೆ ಸತೀಶನೊಂದಿಗೆ ಕಾಲೇಜಿಗೆ ಹೋಗುತ್ತಿದ್ದ. ಸುಧೀರ್‌ನನ್ನು ಮದುವೆಯಾಗುವ ನಿಟ್ಟಿನಲ್ಲಿ ಹರಿಣಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಲಿಲ್ಲ. ಸುಧೀರ್ ಕೂಡ ಅಪ್ಪನೊಂದಿಗೆ ತಮ್ಮ ಹೋಟೆಲ್‌ನಲ್ಲಿ ಕುಳಿತುಕೊಳ್ಳುತ್ತಿದ್ದ. ಆದರೆ ಸುಮಂತ್‌ಗೆ ವ್ಯಾಪಾರದಲ್ಲಿ ಇಷ್ಟವಿರಲಿಲ್ಲ. ಹೀಗಾಗಿ ಅವನು ಅಮೆರಿಕಾಗೆ ಹೊರಟುಹೋದ.
ಒಂದು ದಿನ ಹರಿಣಿ ಹಾಗೂ ಸುಧೀರ್ ಸತೀಶನ ಡಯಾಗ್ನಾಸ್ಟಿಕ್ ಸೆಂಟರ್‌ಗೆ ಹೋದರು. “ನಮ್ಮ ಮದುವೆಯಾಗಿ 3-4 ವರ್ಷಗಳಾಯ್ತು. ಇದುವರೆಗೂ ಮಕ್ಕಳಾಗಲಿಲ್ಲ. ನೀನು ಟೆಸ್ಟ್ ಗಳನ್ನೆಲ್ಲಾ ಮಾಡಿ ನೋಡು,” ಸುಧೀರ್ ಸತೀಶನಿಗೆ ಹೇಳಿದ.
ಸತೀಶ್ ಇಬ್ಬರಿಗೂ ಅಗತ್ಯವಾದ ಎಲ್ಲ ಟೆಸ್ಟ್ ಗಳನ್ನು ಮಾಡಿದ. ರಿಪೋರ್ಟ್ ಪಡೆಯಲು ಹರಿಣಿ ಒಬ್ಬಳೇ ಬಂದಿದ್ದಳು. ಮೊದಲಿಗೆ ಸತೀಶ್ ಕೊಂಚ ಹಿಂದೇಟು ಹಾಕಿದ. ಆದರೆ ಹರಿಣಿಯ ಪರಿಪಕ್ವತೆ ಕಂಡು ಸತ್ಯ ಹೇಳುವುದೇ ಉತ್ತಮ ಎಂದುಕೊಂಡ.
“ಹರಿಣಿ, ನೀನು ತಾಯಿಯಾಗಲು ಸಂಪೂರ್ಣವಾಗಿ ಸಮರ್ಥಳು. ಆದರೆ ಸುಧೀರ್ ಎಂದಿಗೂ ತಂದೆಯಾಗುವುದಿಲ್ಲ,” ಎಂದು ಹೇಳಿದ.
ಹರಿಣಿ ಕ್ಷಣಕಾಲ ತಬ್ಬಿಬ್ಬಾದಳು. ನಂತರ ಸಾವರಿಸಿಕೊಂಡು ಕೇಳಿದಳು, “ಟ್ರೀಟ್‌ಮೆಂಟ್ ತೆಗೆದುಕೊಂಡರೆ?”
ಸತೀಶ್ ಹೇಳಿದ, “ಅವನ ವೀರ್ಯದಲ್ಲಿ ವೀರ್ಯಗಳು ತಯಾರಾಗ್ತಿಲ್ಲ. ಅವಳಿ ಮಕ್ಕಳಲ್ಲಿ ಒಮ್ಮೊಮ್ಮೆ ಇಂತಹ ಕೊರತೆಗಳು ಇರುತ್ತವೆ. ಒಂದೇ ಉಪಾಯ ಅಂದರೆ ನೀವು ಯಾವುದಾದ್ರೂ ಮಗೂನ ದತ್ತು ತೆಗೆದುಕೊಳ್ಳಿ.”
“ಅದರ ಬಗ್ಗೆ ನಂತರ ಯೋಚಿಸೋಣ ಸತೀಶ್. ಸದ್ಯಕ್ಕೆ ಈ ವಿಷಯಾನ ಸುಧೀರ್‌ರಿಂದ ಗುಟ್ಟಾಗಿಡಬೇಕು. ನೀವು ನನಗೆ ಸಹಾಯ ಮಾಡ್ತೀರಿ ತಾನೆ?” ಹರಿಣಿ ಹೇಳಿದಳು.
“ಖಂಡಿತಾ ಹರಿಣಿ. ಆದರೆ ಯಾವತ್ತಿದ್ರೂ ಹೇಳಲೇಬೇಕಲ್ವಾ?”
“ಈಗಲ್ಲ. ಸುಮಂತ್ ಹೋದ ಮೇಲೆ.”
“ಸುಮಂತ್ ಬಂದಿದ್ದಾನಾ?”
“ಬರ್ತಿದ್ದಾನೆ. ಅವನನ್ನು ಕರೆದುಕೊಂಡು ಬರೋಕೆ ಸುಧೀರ್ ಹೋಗಿದ್ದಾರೆ. ಅದಕ್ಕೇ ಅವರು ರಿಪೋರ್ಟ್ ತಗೊಳೋಕೆ ಬರಲಿಲ್ಲ.”
“ಸುಮಂತ್ ನಿನ್ನನ್ನು ಹಾಗೂ ಸುಧೀರ್‌ನನ್ನು ತನ್ನ ಜೊತೆಗೆ ಕರೆದೊಯ್ಯಲಿಕ್ಕೆ ಬರ್ತಿದ್ದಾನಾ?” ಸತೀಶ್ ಕೇಳಿದ.
“ಹೌದು. ಆದರೆ ಅವನು ಬರ್ತಿರೋ ಕಾರಣವೇ ಬೇರೆ ಇದೆ,” ದೀರ್ಘ ಉಸಿರೆಳೆದುಕೊಂಡು ಹರಿಣಿ ಹೇಳಿದಳು. ಸುಮಂತ್‌ಗೆ ಅಲ್ಲಿ ಯಾರೋ ಸಿಖ್ ಹುಡುಗಿಯೊಂದಿಗೆ ಅಫೇರ್ ಇದೆ. ಈಗ ಅವಳು ಅವನ ಮಗುವಿನ ತಾಯಿಯಾಗಲಿದ್ದಾಳೆ. ಹುಡುಗಿಯ ಮನೆಯವರು ಇದೇ ಊರಿನಲ್ಲಿದ್ದಾರೆ. ಅವರು ನಿನ್ನ ಮನೆಯವರ ಎದುರಿನಲ್ಲಿ ನಮ್ಮ ಮಗಳನ್ನು ಮದುವೆ ಆಗು. ಇಲ್ಲದಿದ್ದರೆ ನಿಮ್ಮ ಮನೆಯರನ್ನೆಲ್ಲಾ ಕೊಲೆ ಮಾಡ್ತೀವೀಂತ ಹೇಳ್ತಿದ್ದಾರೆ. ಅಪ್ಪ, ಅಮ್ಮ ಹೆದರಿಕೊಂಡು ಮದುವೆಗೆ ಒಪ್ಪಿದ್ದಾರೆ. ಆದರೆ 3-4 ತಿಂಗಳ ಗರ್ಭಿಣಿ ಸೊಸೆ ಬಗ್ಗೆ ತಮ್ಮ ನೆಂಟರು ಏನು ಹೇಳುತ್ತಾರೋ ಎಂದು ಆತಂಕಗೊಂಡಿದ್ದಾರೆ.
“ಅಮ್ಮ ಏನು ಹೇಳಿದರು ಅಂದರೆ ಮದುವೆ ಇನ್ನೂ ಆಗಿಲ್ಲ. ಆಗಲೇ ಮಗ ಅಪ್ಪನಾಗ್ತಿದ್ದಾನೆ. ಈ ಮಾತು ಸುಧೀರ್‌ಗೆ ಚುಚ್ಚಿತು. ಅವರು ಕೂಡಲೇ ನಿಮ್ಮ ಬಳಿ ಟೆಸ್ಟ್ ಮಾಡಿಸಲು ಬಂದರು. ಈಗ ರಿಪೊರ್ಟ್ ನೋಡಿದರೆ ಅವರಿಗೆ ಆಘಾತವಾಗುತ್ತದೆ. ಮನೆಯಲ್ಲಂತೂ ಬಹಳ ಟೆನ್ಶನ್ ಇದೆ. ಸುಮಂತ್ ಬರುತ್ತಲೇ ಅದು ಇನ್ನಷ್ಟು ಹೆಚ್ಚಾಗುತ್ತದೆ. ಸತೀಶ್, ನೀವು ಸುಧೀರ್‌ಗೆ ಅವರ ರಿಪೋರ್ಟ್ ಎಲ್ಲೋ ಕಳೆದುಹೋಗಿದೇಂತ ಹೇಳೋಕಾಗುತ್ತಾ?” ಎಂದಳು.
“ಸೆಮೆನ್ ಕಡಿಮೆ ಇತ್ತು. ಅದಕ್ಕೇ ಸರಿಯಾಗಿ ಟೆಸ್ಟ್ ಮಾಡೋಕೆ ಆಗ್ಲಿಲ್ಲ. ಎಲ್ಲ ಸರಿಯಾಗಿದೆ ಅನ್ನಿಸುತ್ತೆ. ಆದರೂ ಇನ್ನೊಂದು ಬಾರಿ ಟೆಸ್ಟ್ ಮಾಡಿಬಿಡ್ತೀನಿ ಅಂತ ಹೇಳ್ತೀನಿ. ಸುಮಂತ್ ಬರ್ತಿದ್ದಾನೇಂತ ಸುಧೀರ್ ಈ ಕಡೆ ಬರಲಿಲ್ಲ. ನಾಳೆ ನಾನು ಒಂದು ವಿಶೇಷ ಕೋರ್ಸ್ ಮಾಡಲು ಯೂರೋಪ್‌ಗೆ ಹೋಗ್ತಿದ್ದೀನಿ,” ಎಂದ ಸತೀಶ್.
ಹರಿಣಿ ಅವನಿಗೆ ಧನ್ಯವಾದ ಹೇಳಿ ಹೊರಟುಹೋದಳು. ಮುಂದೆ ಎಂದೂ ಅವನನ್ನು ಭೇಟಿಯಾಗಲಿಲ್ಲ. ಅವನು ವಾಪಸ್ ಬಂದಾಗ ಸುಧೀರ್, ಹರಿಣಿ ಮತ್ತು ಅವನ ತಂದೆ ತಾಯಿಯರೂ ಸಹ ಅಮೆರಿಕಾಗೆ ಹೊರಟುಹೋಗಿದ್ದು. `ಸುಮಂತ್‌ನ ಭಾವಿ ಗರ್ಭಿಣಿ ಪತ್ನಿಯನ್ನು ಇಲ್ಲಿಗೆ ಕರೆಸಿ ಮದುವೆ ಮಾಡುವ ಬದಲು ಎಲ್ಲರೂ ಅಲ್ಲಿಗೇ ಹೋಗಿ ಮದುವೆ ಮಾಡುವುದೇ ಉತ್ತಮವೆಂದು ಭಾವಿಸಿರಬಹುದು,’ ಸತೀಶ್ ಅಂದುಕೊಂಡ.
“ಮನೆ ಬಂತು ಸತೀಶ್,” ಲತಾ ಕೂಗಿದಾಗ ಸತೀಶ್ ಕಣ್ಣು ಬಿಟ್ಟ. ಕಾರಿನಿಂದ ಕೆಳಗಿಳಿದ ಕೂಡಲೇ ಶಶಿ ಓಡಿ ಬಂದು ಅಪ್ಪನನ್ನು ಅಪ್ಪಿಕೊಂಡಳು.
“ಅಪ್ಪಾ, ನಿಮಗೆ ಟಬ್‌ನಲ್ಲಿ ಸೋಪ್ ಹಾಕಿ ಬಿಸಿನೀರು ತುಂಬಿಸಿದ್ದಾರೆ. ಸ್ನಾನ ಮಾಡಿ ಆಯಾಸ ಪರಿಹಾರ ಮಾಡಿಕೊಳ್ಳಿ,” ಶಶಿ ಹೇಳಿದಳು.
“ನನ್ನ ಆಯಾಸವಂತೂ ನಿಮ್ಮೆಲ್ಲರನ್ನು ನೋಡಿದ ಕೂಡಲೇ ಮಾಯವಾಯ್ತು,” ಸತೀಶ್ ನಕ್ಕ. ಆಗಲೇ ಹೊರಗೆ ಕಾರು ನಿಂತ ಶಬ್ದವಾಯಿತು.
“ಪೃಥ್ವಿ ಬಂದಿರಬೇಕು,” ಎಂದು ಶಶಿ ಹೊರಗೋಡಿದಳು. ಸತೀಶ್ ಕೂಡ ಅವಳ ಹಿಂದೆ ಹೋದ.
ಪೃಥ್ವಿಯನ್ನು ಕಂಡು ಅವನಿಗೆ ಕಾಲೇಜು ದಿನಗಳ ಸುಧೀರ್ ಅಥವಾ ಸುಮಂತ್‌ರಲ್ಲಿ ಒಬ್ಬರು ಎದುರಲ್ಲಿ ನಿಂತಂತಾಯಿತು. ಸತೀಶ್ ಬಹಳ ಖುಷಿಯಿಂದ ಅವನನ್ನು ಆಲಿಂಗಿಸಿ ಎಲ್ಲರ ಬಗ್ಗೆ ಕೇಳಿದ.
“ಸುಮಂತ್ ಹಾಗೂ ರೇಷ್ಮಾ ಆಂಟಿ ಅಮೆರಿಕದಲ್ಲಿದ್ದಾರೆ. ಅಪ್ಪ ಅಮ್ಮ ಕೆನಡಾದ ವ್ಯಾಂಕೂರ್‌ನಲ್ಲಿದ್ದಾರೆ.”
“ಯಾವಾಗಿನಿಂದ?”
“ನಾನು ಹುಟ್ಟಿದ ಕೆಲವು ತಿಂಗಳುಗಳ ನಂತರ ಅಲ್ಲಿಗೆ ಹೊರಟುಹೋದರು. ನಾನು ಬೆಳೆದಿದ್ದೇ ಅಲ್ಲಿ,” ಪೃಥ್ವಿ ಹೇಳಿದ.
`ಹರಿಣಿ ಬುದ್ಧಿವಂತಳು. ಅವಳು ಮಕ್ಕಳನ್ನು ನಿಜವಾದ ತಂದೆಯಿಂದ ದೂರ ಇಡುವುದೇ ಒಳ್ಳೆಯದು ಎಂದುಕೊಂಡಿರಬೇಕು,’ ಸತೀಶ್ ಯೋಚಿಸಿದ.
“ನಿನ್ನ ಅಪ್ಪ, ಅಮ್ಮ ಯಾವಾಗ ಬರ್ತಾರೆ?”
“ನಿಮ್ಮ ಬಗ್ಗೆ ತಿಳಿಸಿದಾಗಲೇ ಅಮ್ಮ ಇಲ್ಲಿಗೆ ಬರೋಕೆ ಚಡಪಡಿಸತೊಡಗಿದರು. ಆದರೆ ಅಪ್ಪನಿಗೆ ಬಿಸ್‌ನೆಸ್ ಹಾಗೂ ಮನೆ ಇತ್ಯಾದಿ ಮಾರಾಟ ಮಾಡೋಕೆ ಸಮಯ ಬೇಕು. ಆದ್ದರಿಂದ ಅಮ್ಮ ಬರುವ ವಾರ ಒಬ್ಬರೇ ಬರ್ತಿದ್ದಾರೆ.”
“ಒಳ್ಳೆಯದು, ಚೆನ್ನಾಗಿರುತ್ತೆ,” ಲತಾ ಹೇಳಿದಳು.
“ಹೌದು ಆಂಟಿ. ಅದಕ್ಕೆ ಮೊದಲು ಅಂಕಲ್ ನನ್ನನ್ನು ಇಷ್ಟಪಟ್ಟರೆ ಚೆನ್ನಾಗಿರುತ್ತೆ,” ಫೃಥ್ವಿ ನಿಧಾನವಾಗಿ ಹೇಳಿದ.
“ಅದನ್ನು ನೀನು ಈಗಲೇ ಸತೀಶ್‌ರನ್ನು ಕೇಳು,” ಲತಾ ಹೇಳಿದಳು.
“ಹೇಳಿ ಅಂಕಲ್, ನೀವು ನನ್ನನ್ನು ಇಷ್ಟಪಟ್ರಾ?” ಪೃಥ್ವಿ ಮೆಲ್ಲಗಿನ ಧ್ವನಿಯಲ್ಲಿ ಕೇಳಿದ. ಸತೀಶ್ ಬೆಚ್ಚಿಬಿದ್ದ. ಪೃಥ್ವಿಯ ಕಣ್ಣುಗಳಲ್ಲಿ ರಿಪೋರ್ಟ್ ಬಚ್ಚಿಡಲು ಹೇಳಿದ ಹರಿಣಿಯ ಕಣ್ಣುಗಳಲ್ಲಿನ ಯಾಚನೆಯೇ ಇತ್ತು. ಆ ಕಣ್ಣುಗಳನ್ನು ಸತೀಶ್ ಹೇಗೆ ಮರೆಯುತ್ತಾನೆ? ಇಂದು ಅದೇ ಕಣ್ಣುಗಳು ಪೃಥ್ವಿಯ ಮುಖದಲ್ಲಿದ್ದವು. ಅಂದರೆ ಫೃಥ್ವಿ ಹರಿಣಿಯ ಮಗನೇ. ಇದು ಹೇಗೆ ಸಾಧ್ಯವಾಯಿತು?
`ಹೇಳಿ ಅಂಕಲ್,” ಪೃಥ್ವಿ ಒತ್ತಾಯಿಸಿದ.
“ನಾನು ನಿನ್ನನ್ನು ಇಷ್ಟಪಡ್ಲಾಂತ ನಿನಗೇಕೆ ಅನ್ನಿಸಿತು? ನನ್ನ ಮಗಳ ಇಷ್ಟವೇ ನನಗೂ ಇಷ್ಟ. ಇನ್ನು ನಿನ್ನನ್ನು ಒಪ್ಪದೇ ಇರೋಕೆ ಕಾರಣಗಳೇ ಇಲ್ಲ,” ಸತೀಶ್ ನಕ್ಕು ಹೇಳಿದ.
ಪೃಥ್ವಿ ನೆಮ್ಮದಿಯಿಂದ ಉಸಿರಾಡಿದ. ನಂತರ ಹೇಳಿದ, “ನೀವು ನನ್ನನ್ನು ಒಪ್ಪೋದಿಲ್ಲಾಂತ ಅಮ್ಮ ನನ್ನನ್ನು ಹೆದರಿಸಿಬಿಟ್ಟಿದ್ಲು.”
“ಪೃಥ್ವಿ, ನೀನು ನನ್ನ ಒಪ್ಪಿಗೇನ ಸೆಲೆಬ್ರೇಟ್ ಮಾಡೋಕೆ ಶಶೀನ ಎಲ್ಲಿಗಾದರೂ ಊಟಕ್ಕೆ ಕರ್ಕೊಂಡು ಹೋಗು. ಏಕೆಂದರೆ ನನಗಿವತ್ತು ರಾತ್ರಿ ಊಟ ಬೇಡ. ನಾನು ಬಾಥ್ ಟಬ್‌ನಲ್ಲಿ ಮಲಗಲು ಹೋಗ್ತಿದ್ದೀನಿ,” ಸತೀಶ್ ನಕ್ಕ.
“ಆದರೆ ನೀವು ಏರ್‌ಪೋರ್ಟ್‌ನಲ್ಲಿ ಹೇಳಬೇಕೂಂತಿದ್ರಲ್ಲ. ಆ ಖುಷಿ ಸಮಾಚಾರ ಹೇಳಿ,” ಲತಾ ಕೇಳಿದಳು.
“ಅದಾ, ನಾನು ಸುಮ್ನೆ ತಮಾಷೆ ಮಾಡ್ತಿದ್ದೆ,” ಎಂದು ಹೇಳಿ ಸತೀಶ್ ತನ್ನ ಕೋಣೆಗೆ ಹೋದ.
ವಾಸ್ತವದಲ್ಲಿ ಆ ವಿಷಯ ತಮಾಷೆಯೇ ಆಗಿತ್ತು. ಪೆಥಾಲಜಿಯಲ್ಲಿ ಅವನು ಪಡೆದಿದ್ದ ವಿಶಿಷ್ಟ ಪದವಿಗಳಿಂದಾಗಿ ಅವನಿಗೆ ವಿಸಿಟಿಂಗ್ ಪ್ರೊಫೆಸರ್ ಆಗುವ ಅವಕಾಶಗಳು ಸಿಗುತ್ತಿದ್ದವು. ಇಂದು ಆ ಪದವಿಗಳು ಪೃಥ್ವಿಯ ರೂಪದಲ್ಲಿ ಅವನ ಮುಖಕ್ಕೆ ಏಟು ಹೊಡೆಯುತ್ತಿತ್ತು. ಸುಧೀರನ ವೀರ್ಯದ ಪರೀಕ್ಷೆಯನ್ನು ಅವನು ಸ್ವತಃ ಒಂದು ಬಾರಿಯಲ್ಲ, ಹಲವಾರು ಬಾರಿ ಮಾಡಿದ್ದ. ಒಬ್ಬ ಮಿತ್ರನ ಪರೀಕ್ಷೆಯಲ್ಲೇ ಅವನಿಂದ ತಪ್ಪಾದರೆ ಇತರರ ಪರೀಕ್ಷೆಯಲ್ಲಿ ಇನ್ನೆಷ್ಟು ಕೊರತೆಗಳಿರುವುದಿಲ್ಲ? ಸತೀಶ್ ಮತ್ತೆ ಹೊರಗೆ ಬಂದ. ಶಶಿ ತನ್ನ ಕೋಣೆಯಲ್ಲಿ ರೆಡಿಯಾಗುತ್ತಿದ್ದಳು. ಪೃಥ್ವಿ ಲತಾಳೊಂದಿಗೆ ಕೂತಿದ್ದ.
“ನಾನು ಸುಮಂತ್‌ನ ಮಕ್ಕಳ ಬಗ್ಗೆ ಕೇಳಲೇ ಇಲ್ಲ. ಎಷ್ಟು ಮಕ್ಕಳು ಅವನಿಗೆ?”
“ಒಬ್ಬ ಮಗಳು ಒಬ್ಬ ಮಗ ಅಂಕಲ್. ಮೈತ್ರಿ ನನಗಿಂತ 3 ತಿಂಗಳು ದೊಡ್ಡಳು. ಶ್ರೇಯಸ್ ನನಗಿಂತ 2 ವರ್ಷ ಚಿಕ್ಕೋನು. ನಮ್ಮಲ್ಲಿ ಒಳ್ಳೆಯ ಸ್ನೇಹ ಇದೆ. ಶ್ರೇಯಸ್‌ನ ಓದು ಮುಗೀತಾ ಬಂತು. ಅವನಿಗೊಂದು ಒಳ್ಳೆಯ ಕೆಲಸ ಹುಡುಕ್ತಿದ್ದೀನಿ. ಸುಮಂತ್‌ಅಂಕಲ್ ರಂತೆ ಅವನಿಗೂ ಬಿಸ್‌ನೆಸ್‌ನಲ್ಲಿ ಯಾವುದೇ ಆಸಕ್ತಿಯಿಲ್ಲ.”
“ನಿನಗೂ ಅಪ್ಪನಂತೆ ನೌಕರಿ ಇಷ್ಟವಿಲ್ಲ,” ಲತಾ ಹೇಳಿದಳು.
“ಹಾಗಲ್ಲ ಆಂಟಿ. ಅಮೆರಿಕಾದಲ್ಲಿ ನಾನೂ ನೌಕರಿ ಮಾಡುತ್ತಿದ್ದೆ. ನಮ್ಮ ಕಂಪನಿ ನನ್ನನ್ನು ಇಲ್ಲಿಗೆ ಮಾರ್ಕೆಟ್ ಸರ್ವೆ ಮಾಡಲು ಕಳಿಸಿದೆ. ಇಲ್ಲಿಗೆ ಬಂದಮೇಲೆ ನಾನೇ ಒಂದು ಏಜೆನ್ಸಿ ಶುರು ಮಾಡೋಣ ಎಂದುಕೊಂಡೆ. ನಾನು ಕಂಪನೀಲಿ ಮಾಡ್ತಿದ್ದ ಮಾರ್ಕೆಟಿಂಗ್ ಕೆಲಸಾನ ಏಜೆನ್ಸಿ ಮೂಲಕಾನೇ ಮಾಡೋಣಾಂತ ಅಂದ್ಕೊಂಡಿದ್ದೀನಿ.”
“ಒಳ್ಳೆ ಡಿಸಿಶನ್. ಅಂದಹಾಗೆ ನಿನ್ನ ವಯಸ್ಸೆಷ್ಟು ಪೃಥ್ವಿ?” ಸತೀಶ್ ಮೆಲ್ಲಗೆ ಪೃಥ್ವಿಯ ವಯಸ್ಸು ಕೇಳಿಕೊಂಡ.
ಶಶಿ ರೆಡಿಯಾಗಿ ಬಂದಾಗ ಪೃಥ್ವಿ ಹೊರಡಲು ಎದ್ದು ನಿಂತ. ಸತೀಶ್ ನೀರಿನ ಟಬ್‌ನಲ್ಲಿ ಮಲಗಿದ. ಮದುವೆಗೆ ಮುಂಚೆ ರೇಷ್ಮಾಗೆ ಹುಟ್ಟಿದ ಮಗು ಮೈತ್ರಿ. ಪೃಥ್ವಿಯ ಜನ್ಮದಿನ ಲೆಕ್ಕಕ್ಕೆ ತೆಗೆದುಕೊಂಡರೆ ಪೃಥ್ವಿ ಹರಿಣಿ ಹಾಗೂ ಸುಧೀರ್‌ರ ಮಗ. ಅವನು ಸುಧೀರ್‌ನ ಮೆಡಿಕಲ್ ಚೆಕಪ್ ನಂತರ ಹುಟ್ಟಿದ್ದಾನೆ. ತಾನು 3-4 ಬಾರಿ ಪರೀಕ್ಷೆ ಮಾಡಿ ಸುಧೀರ್‌ಗೆ ಮಕ್ಕಳಾಗಲ್ಲ ಎಂದು ಖಾತ್ರಿಪಡಿಸಿಕೊಂಡಿದ್ದೇನೆ. ಆದರೆ ಅದು ತಪ್ಪಾಗಿದೆ. ತಾನು ಹರಿಣಿಯ ಮುಂದೆ ಸೋಲೋಪ್ಪಿಕೊಳ್ಳಲೇಬೇಕು ಎಂದುಕೊಂಡ. ಅವನು ಎಷ್ಟೇ ಪ್ರಯತ್ನಿಸಿದರೂ ತನ್ನ ವ್ಯಾಕುಲತೆಯನ್ನು ಲತಾಳಿಂದ ಮುಚ್ಚಿಡಲಾಗಲಿಲ್ಲ.
“ನೀವು ಅಲ್ಲಿಂದ ಎಷ್ಟು ಉತ್ಸಾಹದಿಂದ ಬಂದ್ರಿ. ಈಗ ಎಲ್ಲಾ ಮಾಯವಾಯ್ತು,” ಲತಾ ಹೇಳಿದಳು.
“ಏನು ಹೇಳ್ಲಿ ಲತಾ? ಮಗಳು ಬೇರೆ ಮನೆಗೆ ಹೋಗ್ತಿದ್ದಾಳೇಂದ್ರೆ ಯಾರಿಗೆ ತಾನೆ ದುಃಖವಾಗಲ್ಲ?” ಎಂದು ಸತೀಶ್ ಮಾತು ಬದಲಿಸಿದ.
ಲತಾಳ ಕಣ್ಣುಗಳು ತುಂಬಿಬಂದವು. “ಮಗಳು ಹುಟ್ಟಿದ್ಮೇಲೆ ಬೇರೆ ಮನೆಗೆ ಹೋಗಲೇಬೇಕು. ಅದಕ್ಕೆ ದುಃಖಪಡಬಾರದು. ಹಾಗಂತ ಅವಳ ಮದುವೇನೇ ಮಾಡದೆ ಇರೋಕಾಗುತ್ತಾ?” ಎಂದಳು.
“ಛೆ…ಛೆ…. ಗ್ರ್ಯಾಂಡ್ ಆಗಿ ಮದುವೆ ಮಾಡೋಣ. ಎಲ್ಲವನ್ನೂ ಮರೆತು ಮದುವೆಗೆ ಸಿದ್ಧತೆಗಳನ್ನು ಮಾಡೋಣ.”
ಸತೀಶನ ಉತ್ಸಾಹ ಕಂಡು ಲತಾಗೆ ಖುಷಿಯಾಯಿತು.
ಮರುದಿನ ಬೆಳಗ್ಗೆ ಸತೀಶ್ ಡಾ. ನಿಶೋಕ್‌ರನ್ನು ಭೇಟಿಯಾದ. ಅವರು ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥರಾಗಿದ್ದರು. ಅವರು ತಮ್ಮ ರೋಗಿಗಳನ್ನು ಕೆಲವು ಟೆಸ್ಟ್ ಗಳಿಗಾಗಿ ಸತೀಶ್ ಬಳಿ ಕಳಿಸುತ್ತಿದ್ದರು. ಸತೀಶ್ ಅವರೊಂದಿಗೆ ಮಾತಾಡುತ್ತಿದ್ದಾಗ ತಾನು ಕಳಿಸಿಕೊಟ್ಟ ರಿಪೋರ್ಟ್ ಎಂದಾದರೂ ತಪ್ಪಾಗಿದೆಯೇ? ಎಂದು ವಿಚಾರಿಸಿದ.
“ಒಂದು ವೇಳೆ ಹಾಗೇನಾದರೂ ಆಗಿದ್ದರೆ ನಾನು 2 ದಶಕಗಳಿಂದ ನಿನ್ನ ಬಳಿಯೇ ಟೆಸ್ಟ್ ಗಾಗಿ ರೋಗಿಗಳನ್ನೇಕೆ ಕಳಿಸ್ತಿದ್ದೆ? ನಮ್ಮ ಇನ್‌ಸ್ಟಿಟ್ಯೂಟ್‌ನಲ್ಲೂ ಲ್ಯಾಬ್‌ಗಳಿವೆ. ಎಲ್ಲ ಟೆಸ್ಟ್ಗಳೂ ನನ್ನ ಮೇಲ್ವಿಚಾರಣೆಯಲ್ಲೇ ನಡೆಯುತ್ತವೆ. ನನ್ನ ಹಾಗೂ ನಿನ್ನ ರಿಪೋರ್ಟ್‌ಗಳಲ್ಲಿ ಹೊಂದಾಣಿಕೆ ಇಲ್ಲದಿದ್ರೆ ನಾನು ಚಿಕಿತ್ಸೆಯ ಬಗ್ಗೆ ಏನೂ ನಿರ್ಧಾರ ತೆಗೆದುಕೊಳ್ಳಲ್ಲ. ಇದುವರೆಗೆ ನನ್ನ ಹಾಗೂ ನಿನ್ನ ರಿಪೋರ್ಟ್‌ಗಳಲ್ಲಿ ವ್ಯತ್ಯಾಸವೇ ಕಂಡುಬಂದಿಲ್ಲ. ನೀನು ಒಳ್ಳೆಯ ಪೆಥಾಲಜಿಸ್ಟ್ ಆಗಿದ್ದು ನಿನ್ನ ಸ್ಟಾಫ್ ಕೂಡ ರೋಗಿಗಳ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸ್ತಿದ್ದಾರೆ. ಇದು ನಾನು ಮಾತ್ರ ಹೇಳೋದಲ್ಲ. ಇಡೀ ನಗರದ ಡಾಕ್ಟರ್‌ಗಳು ಹೇಳೋದು,” ಡಾ. ನಿಶೋಕ್ ಅವರನ್ನು ಹೊಗಳಿದರು.
ಡಾ. ನಿಶೋಕ್‌ರ ಹೊಗಳಿಕೆಯಿಂದ ಸತೀಶನ ಧೈರ್ಯ ಹೆಚ್ಚಿತು. ಅವನು ತನ್ನ ಡಯಾಗ್ನೋಸ್ಟಿಕ್ ಸೆಂಟರ್‌ಗೆ ಹೋಗಿ ಲತಾ ಮತ್ತು ಶಶಿಯರೊಂದಿಗೆ ಖುಷಿಯನ್ನು ಹಂಚಿಕೊಳ್ಳಬೇಕೆಂದುಕೊಂಡ. ಹರಿಣಿಯನ್ನು ಕರೆತರಲು ಪೃಥ್ವಿಯೊಂದಿಗೆ ತಾವೆಲ್ಲರೂ ಹೋಗಬೇಕೆಂದು ಲತಾ ಹೇಳಿದಳು. ಆದರೆ ಸತೀಶ್ ಅದನ್ನು ತಳ್ಳಿಹಾಕಿದ. ಹರಿಣಿಯ ಕಣ್ಣುಗಳಲ್ಲಿನ ವ್ಯಂಗ್ಯದ ಬಾಣಗಳನ್ನು ಎದುರಿಸಲು ಅವನಿಗೆ ಧೈರ್ಯವಿರಲಿಲ್ಲ. ಲತಾ ಮತ್ತು ಶಶಿ ಇಬ್ಬರ ಖುಷಿ ಹಾಳಾಗುತ್ತದೆ. ಹರಿಣಿಯನ್ನು ಏಕಾಂತದಲ್ಲಿ ಭೇಟಿಯಾಗಿ ಕ್ಷಮೆ ಯಾಚಿಸುವುದೇ ಒಳ್ಳೆಯದು, ಹೀಗೆ ಯೋಚಿಸುತ್ತಾ ಅವನಿಗೆ ಯಾವಾಗ ನಿದ್ದೆ ಬಂತೋ ತಿಳಿಯಲಿಲ್ಲ.
ಮೊಬೈಲ್ ರಿಂಗ್ ಆದಾಗ ಅವನು ಎಚ್ಚೆತ್ತ.
“ಸಾರಿ ಸತೀಶ್, ನಿಮಗೆ ಡಿಸ್ಟರ್ಬ್ ಮಾಡ್ದೆ.”
“ಅರೆ, ಹರಿಣಿ….. ನಾನು ನಿಮ್ಮನ್ನು ರಿಸೀವ್ ಮಾಡೋಕೆ ಬರೋಕಾಗ್ಲಿಲ್ಲ. ಸಾರಿ,” ಸತೀಶ್ ಹರಿಣಿಯ ಧ್ವನಿ ಗುರುತಿಸಿದ್ದ.
“ನಿಮ್ಮ ದ್ವಂದ್ವ ನನಗೆ ಅರ್ಥ ಆಗುತ್ತೆ ಸತೀಶ್. ಅದಕ್ಕೇ ನಾನು, ಲತಾ ಹಾಗೂ ಶಶಿ ಬರೋಕೆ ಮುಂಚೆ ನಿಮಗೆ ಫೋನ್ ಮಾಡಿದ್ದು. ನಾನು ನಿಮ್ಮ ಜೊತೆ ಸಪರೇಟ್ ಆಗಿ ಮಾತಾಡಬೇಕು. ಪೃಥ್ವಿ ಆಫೀಸಿಗೆ ಹೋದ ಮೇಲೆ ಫೋನ್ ಮಾಡ್ತೀನಿ.” ಸತೀಶ್ ಫೋನ್ ಇಟ್ಟನೋ ಇಲ್ವೋ ಹೊರಗೆ ಕಾರಿನ ಸದ್ದಾಯಿತು. ಸತೀಶ್ ಹೊರಗೆ ಬಂದ.
“ಅತ್ತೆ ಹೇಗಿದ್ದಾರೆ ಶಶಿ?”
“ಬಹಳ ಸುಸ್ತಾಗಿದ್ರು. ಸ್ವಲ್ಪ ಭಯ ಇತ್ತು ಮುಖದಲ್ಲಿ,” ಶಶಿ ನಕ್ಕಳು, “ಅವರು ಮೊದಲ ಬಾರಿ ಒಬ್ಬರೇ ಇಷ್ಟು ದೂರ ಪ್ರಯಾಣ ಮಾಡಿದ್ದಂತೆ. ಅದೂ ನನ್ನ ನೋಡೋಕೆ.”
“ಆದ್ರೆ ಸುಸ್ತು ಮತ್ತು ಗಾಬರಿಯಿಂದ ನಿನ್ನನ್ನು ಸರಿಯಾಗಿ ನೋಡೇ ಇರಲ್ಲ ಅವರು,” ಸತೀಶ್ ನಕ್ಕ.
“ಚೆನ್ನಾಗಿ ನೋಡಿದ್ರು ಅಪ್ಪಾ. ಅಮ್ಮನಿಂದ ಫೋನ್ ನಂಬರ್ ಕೂಡ ತಗೊಂಡ್ರು. ನೀವು ಅವರ ಮಗನನ್ನು ಒಪ್ಪಿಕೊಂಡಿದ್ದಕ್ಕೆ ನಿಮಗೆ ಥ್ಯಾಂಕ್ಸ್ ಹೇಳ್ತಾರಂತೆ,” ಶಶಿ ಒಯ್ಯಾರದಿಂದ ಹೇಳಿದಳು.
“ಹೆಚ್ಚು ಜಂಭಪಡಬೇಡ. ತುಂಬಾ ಸ್ಕೋಪ್ ತಗೋತಿದ್ದೀಯ,” ಲತಾ ಹೇಳಿದಳು.
“ಅವಳನ್ಯಾಕೇ ರೇಗಿಸ್ತೀಯ ಪಾಪ, ಮಲಗಿಕೊಳ್ಳಲಿ ಬಿಡು,” ಸತೀಶ್ ಹೇಳಿದ.
ಆದರೆ ಅವನಿಗೆ ನಿದ್ದೆ ಬರಲಿಲ್ಲ. ಹರಿಣಿ ನನ್ನನ್ನೇಕೆ ಭೇಟಿಯಾಗಬೇಕೆಂದಳು?
ಮರುದಿನ ಹರಿಣಿ ಪೃಥ್ವಿ ಆಫೀಸಿಗೆ ಹೋದ ಕೂಡಲೇ ಸತೀಶ್‌ಗೆ ಫೋನ್ ಮಾಡಿ ಮನೆಗೆ ಕರೆದಳು. ಹರಿಣಿಯನ್ನು ನೋಡಿದ ಕೂಡಲೇ ಪೃಥ್ವಿ ತನ್ನ ಅಪ್ಪನ ಮೈಕಟ್ಟನ್ನು ಮಾತ್ರ ಪಡೆದಿದ್ದಾನೆ. ಉಳಿದಂತೆ ಕಣ್ಣು, ಕೆನ್ನೆ ಇತ್ಯಾದಿ ನೂರಕ್ಕೆ ನೂರು ಹರಿಣಿಯ ಪಡಿಯಚ್ಚು ಎಂದು ಸತೀಶ್‌ಗೆ ಅರ್ಥವಾಯಿತು. ತನ್ನ ತಪ್ಪಿಗೆ ಸರಿಯಾದ ಸಾಕ್ಷಿ ಸಿಕ್ಕ ಕೂಡಲೇ ಅವನು ಅಪರಾಧಿ ಮನೋಭಾವದಿಂದ ನಲುಗಿದ.
“ನನ್ನನ್ನು ನಂಬಿ ಸತೀಶ್, ನಾನು ಪೃಥ್ವಿ ಭಾರತಕ್ಕೆ ಬರದಂತೆ ಬಹಳ ತಡೆದೆ. ಆದರೆ ಅವನು ಕೇಳಲಿಲ್ಲ. ಭಾರತಕ್ಕೆ ಬಂದೇಬಿಟ್ಟ. ಅವನು ಇದೇ ಊರಿನಲ್ಲಿ ನಿಮ್ಮ ಮಗಳು ಕೆಲಸ ಮಾಡುವ ಕಂಪನಿಯಲ್ಲೇ ಮಾರ್ಕೆಟಿಂಗ್ ಮಾಡಲು ಬಂದ. ಅದರಿಂದ ನಿಮಗಾದ ತೊಂದರೆ ಬಗ್ಗೆ ನನಗೆ ಅರಿವಿದೆ. ಅದಕ್ಕೆ ಕ್ಷಮೆ ಕೇಳೋಣಾಂತ ನಿಮ್ಮನ್ನು ಇಲ್ಲಿಗೆ ಕರೆಸಬೇಕಾಯ್ತು…..”
“ನೀವ್ಯಾಕೆ ಕ್ಷಮೆ ಕೇಳ್ತಿದ್ದೀರಾ ಹರಿಣಿ? ನೀವು ನನಗೆ ಏನು ಬೇಕಾದ್ರೂ ಹೇಳಿ. ಏಕೆಂದರೆ ನನ್ನ ತಪ್ಪು ರಿಪೋರ್ಟ್‌ನಿಂದ ನಿಮಗಾದ ನೋವು, ಅನುಭವಿಸಿದ ಯಾತನೆ….”
“ಯಾವ ತಪ್ಪು ರಿಪೋರ್ಟ್?” ಹರಿಣಿ ಆಶ್ಚರ್ಯದಿಂದ ಕೇಳಿದಳು.
“ಅದೇ ಪೃಥ್ವಿಯ ರೂಪದಲ್ಲಿ ನನ್ನ ಮುಖವನ್ನು ತಿವಿಯುತ್ತಿದೆ. ನನ್ನ ವೃತ್ತಿಯಿಂದ ಸನ್ಯಾಸ ತೆಗೆದುಕೊಂಡು ಬಿಡೋಣ ಅನ್ನಿಸ್ತಿದೆ. ನನ್ನ ಸ್ನೇಹಿತನ ಪರೀಕ್ಷೆಯನ್ನೇ ಸರಿಯಾಗಿ ಮಾಡದ ನಾನು ಬೇರೆಯವರದು ಏನು ಮಾಡ್ತೀನಿ?”
“ಓಹ್, ಈಗ ಅರ್ಥವಾಯ್ತು,” ಹರಿಣಿ ದೀರ್ಘ ಉಸಿರೆದುಕೊಳ್ಳುತ್ತಾ ಹೇಳಿದಳು,
“ಅಂದರೆ ನೀವು ಹಾಗೂ ನಾನು ಇಬ್ಬರೂ ಬೇರೆ ಬೇರೆ ಅಪರಾಧಿ ಮನೋಭಾವದಿಂದ ಕೂಡಿದ್ದೇವೆ. ಅದರಿಂದ ಮುಕ್ತರಾಗೋಕೆ ಎಲ್ಲವನ್ನೂ ವಿವರವಾಗಿ ಹೇಳಬೇಕು.
“ನಿಮಗೆ ಜ್ಞಾಪಕ ಇದೆಯಾ ಸತೀಶ್, ನಾನು ರಿಪೋರ್ಟ್ ಪಡೆಯಲು ಬಂದಾಗ ಸುಮಂತ್ ಬರ್ತಿದ್ದಾನೇಂತ ಹೇಳಿದ್ದೆ. ಅವನು ಬಂದ ಮೇಲೆ ಮನೆಯಲ್ಲಿ ಒಂದಷ್ಟು ಗಲಾಟೆಯೂ ನಡೆಯಿತು. ನಮ್ಮತ್ತೆ, ಅಣ್ಣ ತಮ್ಮಂದಿರನ್ನು ಹೋಲಿಕೆ ಮಾಡುತ್ತಾ ಸುಧೀರ್ ಹೆಂಡತಿಯಿದ್ದೂ ಸಂಯಮದಿಂದಿದ್ದಾನೆ. ಆದರೆ ಸುಮಂತ್ ಅನ್ಯಜಾತಿಯ ಹುಡುಗಿಯೊಂದಿಗೆ ಸಖ್ಯ ಹೊಂದಿದ್ದಾನೆ ಎಂದಿದ್ದರು. ಅದಕ್ಕೆ ಸುಮಂತ್ ನಿರ್ಲಜ್ಜತನದಿಂದ ನಕ್ಕು ಹಾಗಾದರೆ ಸುಧೀರನ ಭಾಗದ ಆಸ್ತಿಯೂ ನನಗೇ ಸಿಗುತ್ತದೆ ಎಂದಿದ್ದ. ಈ ಮಾತು ನನಗೆ ಗಾಢವಾಗಿ ಚುಚ್ಚಿತ್ತು. ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ. ಸುಮಂತ್ ಕೂಡ ಅಲ್ಲೇ ಅಸಹನೆಯಿಂದ ಓಡಾಡುತ್ತಿದ್ದ. ಅವನಿಗೆ ಟೆನ್ಶನ್ ಆಗಿತ್ತು. ಏಕೆಂದರೆ ಅವನ ತಂದೆ ತಾಯಿ ಅವನ ಸಮಸ್ಯೆ ಕೇಳುವ ಮೊದಲೇ ಬೈಯಲು ಶುರು ಮಾಡಿದ್ದರು.
“ಒಂದು ವೇಳೆ ರೇಷ್ಮಾಳ ಅಣ್ಣನಿಗೆ ಮದುವೆಯ ದಿನಾಂಕ ಬೇಗನೆ ತಿಳಿಸದಿದ್ದರೆ ಅವನ ಲೋಕಲ್ ಗೆಳೆಯರು ನಮ್ಮೆಲ್ಲರ ಬದುಕನ್ನು ನಾಶಪಡಿಸುತ್ತಿದ್ದರು. `ನಾನು ರೇಷ್ಮಾಳನ್ನು ಎಲ್ಲರ ಒಪ್ಪಿಗೆ ಪಡೆದು ಖುಷಿಯಿಂದ ಮದುವೆಯಾಗಬೇಕೆಂದುಕೊಂಡಿದ್ದೆ. ಆದರೆ ಅಪ್ಪ ಅಮ್ಮ ಸಹನೆಯಿಂದ ಕೇಳಿದ್ರೆ ತಾನೆ?’ ಎಂದು ಸುಮಂತ್ ಹತಾಶೆಯಿಂದ ಹೇಳಿದ.
“ಆಗ ನಾನು ಸುಮಂತ್‌ಗೆ, ಅವರಿಗೆ ವಯಸ್ಸಾಗಿದೆ. ಶಾಂತಿಯಿಂದ ಅವರನ್ನು ಒಪ್ಪಿಸೋದು ಬಿಟ್ಟು ಹೀಗೆ ಕಿರುಚಾಡಿದ್ರೆ ಹೇಗೆ ಎಂದು ಕೇಳಿದಾಗ, ಅವನು `ಏನ್ಮಾಡ್ಲಿ, ಟೆನ್ಶನ್ ಆದಾಗ ಹೀಗೆ ಕೂಗೋದು ಬಿಟ್ಟು ಏನ್ಮಾಡೋಕಾಗುತ್ತೆ? ಸೆಕ್ಸ್ ಮಾಡುವುದರಿಂದ ನನ್ನ ಟೆನ್ಶನ್ ದೂರಾಗುತ್ತೆ,’ ಎಂದೆಲ್ಲಾ ಹೇಳಿದ. ನಂತರ ಸುಮಂತ್ ಸೆಕ್ಸ್ ಬಗ್ಗೆ ಭಾಷಣವನ್ನೇ ಬಿಗಿದ. ಅವನ ಪ್ರಕಾರ ಸೆಕ್ಸ್ ಜೀವನದಲ್ಲಿ ಊಟ ತಿಂಡಿಗಳಷ್ಟು ಅಥವಾ ಬಾಥ್‌ರೂಮಿಗೆ ಹೋಗುವಷ್ಟೇ ಅವಶ್ಯಕ.
“ಸುಮಂತ್‌ನ ತರ್ಕದಿಂದ ಪ್ರಭಾವಿತಳಾಗಿ ಅಥವಾ ಸುಧೀರ್ ನಪುಂಸಕರೆಂದು ಕರೆಸಿಕೊಳ್ಳುವುದನ್ನು ತಡೆಯಲು ಅಂದು ರಾತ್ರಿ ನನ್ನನ್ನು ಸುಮಂತ್‌ಗೆ ಒಪ್ಪಿಸಿದೆ. ಮರುದಿನ ಬೆಳಗ್ಗೆ ಸುಮಂತ್ ಶಾಂತವಾಗಿ ಇದ್ದ. ಅವನು ಬಹಳ ಧೈರ್ಯದಿಂದ ಅಪ್ಪ ಅಮ್ಮನನ್ನು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪಿಸಿದ.
“ರೇಷ್ಮಾಗೆ ಹೆಚ್ಚು ರಜೆ ಪಡೆಯಲು ಇಷ್ಟವಿರಲಿಲ್ಲ. ಮದುವೆ ದಿನಾಂಕ ನಿರ್ಧರಿಸಿದ ನಂತರ ಬರಲಿದ್ದಳು. ಆದರೆ ಇದ್ದಕ್ಕಿದ್ದಂತೆ ಅವಳ ಬಿ.ಪಿ. ಹೆಚ್ಚಾಗಿ ಅವಳು ಪ್ರಯಾಣ ಮಾಡಬಾರದೆಂದು ಡಾಕ್ಟರ್ ಹೇಳಿದರು. ಅಷ್ಟರಲ್ಲಿ ನಾನು ಗರ್ಭವತಿಯಾದೆ.
“ಸುಧೀರ್‌ಗೆ ಬಹಳ ಖುಷಿಯಾಯಿತು. ಯಾರಿಗೂ ಅನುಮಾನ ಉಂಟಾಗುವ ಸಾಧ್ಯತೆ ಇರಲಿಲ್ಲ. ಏಕೆಂದರೆ ಆ ರಿಪೋರ್ಟ್ ಬಗ್ಗೆ ನನಗೆ ಮತ್ತು ನಿಮಗೆ ಬಿಟ್ಟರೆ ಇನ್ಯಾರಿಗೂ ಗೊತ್ತಿರಲಿಲ್ಲ. ಆದರೆ ನಿಮ್ಮಿಂದ ಸತ್ಯಾನ ಹೇಗೆ ಮುಚ್ಚಿಡೋದೂಂತ ನನಗೆ ಚಿಂತೆಯಾಗಿತ್ತು. ಹೀಗಾಗಿ ನಾನು ಪರಿಸ್ಥಿತಿಯ ಲಾಭ ಪಡೆದೆ.
“ರೇಷ್ಮಾಳನ್ನು ಇಲ್ಲಿಗೆ ಕರೆಸುವ ಬದಲು ನಾವುಗಳೇ ಅಲ್ಲಿಗೆ ಹೋಗಿ ಅವಳ ಹಾಗೂ ಸುಮಂತ್‌ರ ಮದುವೆ ನಡೆಸಬಹುದು ಎಂದು ನಾನು ಸುಮಂತ್‌ನನ್ನು ಪ್ರೇರೇಪಿಸಿದೆ. ಹೇಗೂ ನಾನು ಮತ್ತು ಸುಧೀರ್ ಹೊರಡುವ ಔಪಚಾರಿಕತೆಗಳು ಮುಗಿದಿದ್ದವು. ನಮ್ಮ ಮಕ್ಕಳಿಗೆ ಅಮೆರಿಕಾದ ಪೌರತ್ವ ಕೊಡಿಸುವುದಾಗಿ ಹೇಳಿ ನೀವು ಹಿಂತಿರುಗುವ ಮೊದಲೇ ಅಲ್ಲಿಗೆ ಹೋದೆವು. ಅಲ್ಲಿ ಅತ್ತೆ ಮಾವನವರಿಗೆ ಬಹಳ ಇಷ್ಟವಾಗಿತ್ತು. ನಾನು ಅವರಿಗೆ ಅಲ್ಲೇ ಶಾಶ್ವತವಾಗಿ ನೆಲೆಸಲು ಒಪ್ಪಿಸಿದೆ.
“ಮುಂದೆ ನಾನು ನಿಶ್ಚಿಂತಳಾಗಿದ್ದೆ. ಆದರೆ ಪೃಥ್ವಿ ಇಲ್ಲಿಗೆ ಬಂದಿದ್ದರಿಂದ ನನ್ನ ಕಾಲ ಕೆಳಗಿನ ನೆಲ ಕುಸಿಯಿತು. ಪಾಶ್ಚಿಮಾತ್ಯ ಪ್ರಭಾವ ಅಥವಾ ಸುಧೀರ್‌ಗೆ ಕಟುಸತ್ಯ ತಿಳಿಯದಿದ್ದರಿಂದ ಅಂದು ರಾತ್ರಿ ನನ್ನ ಹಾಗೂ ಸುಮಂತ್‌ನ ನಡುವೆ ನಡೆದ ಪ್ರಸಂಗದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಆದರೆ ನೀವು ಮತ್ತು ಲತಾ ಈ ಸತ್ಯವನ್ನು ಸ್ವೀಕರಿಸುವುದಿಲ್ಲ. ನೀವು ಸುಧೀರ್ ಅಥವಾ ಪೃಥ್ವಿಯನ್ನು ಏನಾದರೂ ಕೇಳುವ ಮೊದಲೇ ನಿಮ್ಮನ್ನು ಭೇಟಿಯಾಗಿ ನಿಜವನ್ನು ಹೇಳಿಬಿಡೋದೇ ಒಳ್ಳೆಯದೆಂದುಕೊಂಡೆ.”
“ನಿನ್ನ ಸಾಹಸಾನ ಮೆಚ್ತೀನಿ ಹರಿಣಿ. ಒಂದು ಬಾರಿ ನೀನು ಧೈರ್ಯವಹಿಸಿ ಸುಧೀರ್‌ನನ್ನು ಡಿಪ್ರೆಶನ್‌ನಿಂದ ಉಳಿಸಿದ್ದೀಯ. ಈ ಬಾರಿ ಧೈರ್ಯವಹಿಸಿ ನನಗೆ ನರ್ವಸ್ ಬ್ರೇಕ್ ಡೌನ್ ಆಗದಂತೆ ತಡೆದಿದ್ದೀಯ. ಲತಾಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ಮಗಳು ಬೇರೆ ಮನೆಗೆ ಹೋಗುತ್ತಾಳೆಂದು ತಿಳಿದು ಬೇಸರದಲ್ಲಿದ್ದೇನೆ. ನಿಜವಾದ ವಿಷಯ ನನಗೆ ಹಾಗೂ ನಿನಗೆ ಮಾತ್ರ ಗೊತ್ತಿರೋದು. ಇನ್ನು ಮುಂದೆ ನಾವು ಎಂದಿಗೂ ಇದರ ಬಗ್ಗೆ ಮಾತನಾಡಬಾರದು.”
“ಅಂದರೆ, ನೀವು ನನ್ನನ್ನು ಕ್ಷಮಿಸಿದ್ರಾ?”
“ಕ್ಷಮಿಸೋದು ಅಂದ್ರೆ, ನೀನು ಮಾಡಿದ್ದಕ್ಕೆಲ್ಲ ನನ್ನ ಸಮ್ಮತಿ ಇದೆಯೆಂದು ಅರ್ಥವಲ್ಲ. ಸಮಾಜದ ಮೌಲ್ಯಗಳನ್ನು ಬದಲಿಸೋಕೆ ಅಥವಾ ಅದರ ಬೆಲೆ ಕಟ್ಟೋಕೆ ನನಗೆ ಯಾವ ಅಧಿಕಾರ ಇಲ್ಲ. ಹಾಗೆಯೇ ಸುಧೀರ್‌ಗೆ ನಿಜವನ್ನು ಹೇಳಿ ನಿಮ್ಮ ಸಂಸಾರವನ್ನು ಹಾಳು ಮಾಡೋ ಹಕ್ಕೂ ಇಲ್ಲ. ನೀನು ಆ ಸಮಯದಲ್ಲಿ ಏನೇ ಮಾಡಿದ್ದರೂ ಅದು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಮಾಡಿದ್ದು. ಈಗ ಸುಧೀರ್ ಹಾಗೂ ನಿಮ್ಮ ನೆಮ್ಮದಿ ಹಾಗೂ ಮಕ್ಕಳ ಖುಷಿಯನ್ನು ಹಾಳು ಮಾಡುವ ಬದಲು ನಿಮ್ಮ ಸಂಸಾರದ ಸಾಮರಸ್ಯವನ್ನು ಕಾಪಾಡುವುದು ಬಹಳ ಮುಖ್ಯ,” ಸತೀಶ್ ಮೃದುವಾದ ಸ್ವರದಲ್ಲಿ ಹೇಳಿದ.