“ಊರಿಗೆ ಹೋದ ಕೂಡಲೇ ಫೋನ್‌ ಮಾಡು. ಲಗೇಜ್‌ ಜೋಪಾನ, ಹುಷಾರಾಗಿ ಹೋಗ್ಬಾ,” ನನ್ನವರು ಕೈ ಬೀಸಿದಾಗ ಹೃದಯತುಂಬಿ ಬಂತು. ನಾನೂ ಕೈ ಬೀಸಿದೆ.

ದೊಡ್ಡಮ್ಮನ ಮೊಮ್ಮಗನ ಮುಂಜಿಗೆ ಆಹ್ವಾನ ಬಂದಾಗ ಒಬ್ಬರಿಗಿಂತ ಒಬ್ಬರು ಹಿಂಜರಿದಿದ್ದರು. “ಸಾರೀ ಮಮ್ಮಿ, ನನಗೆ ಪ್ರಾಕ್ಟಿಕ್ಸ್‌ ಮಿಸ್‌ ಆದ್ರೆ ತುಂಬ ಕಷ್ಟ. ನಾನು ಬರೋಲ್ಲ,” ಎಂದು ಸುಪ್ರಿಯಾ ನುಡಿದರೆ, ಸುಪ್ರೀತಾಳದು ಇನ್ನೊಂದು ಬಗೆ.

“ಮಮ್ಮಿ ನನಗೆ ಸೆಮಿನಾರಿಗೆ ಪ್ರಿಪೇರಾಗಬೇಕಾಗಿದೆ. ಬೇಕಾದ್ರೆ ಅಪ್ಪನ್ನ ಕರ್ಕೊಂಡು ಹೋಗು.”

“ಸುಶೀ, ನನಗೆ ಆ ಗುಂಪು ಗೊಂದಲ ಹಿಡಿಸೋಲ್ವೆ…. ನೀನು ಬೇಕಾದ್ರೆ ಹೋಗ್ಬಾ, ನಾನು ಮಕ್ಕಳ ಜತೆ ಇರ್ತೀನಿ.” ನನ್ನವರು ನಕಾರ ಪಲ್ಲವಿ ಹಾಡಿದಾಗ, ನಾನೂ ಹೋಗುವ ಇಚ್ಛೆಯನ್ನು ಕಿತ್ತು ಹಾಕಿದೆ.

ಏತನ್ಮಧ್ಯೆ ಅಮ್ಮ ಊರಿಂದ ಫೋನ್‌ ಮಾಡಿದ್ದರು. “ಅವರುಗಳು ಬರ್ದಿದ್ರೆ ಏನಂತೆ? ನೀನಾದ್ರೂ ಬರ್ಬಾರ್ದೆ? ಇದೇ ನೆಪದಲ್ಲಿ ಇಲ್ಲೂ ಎರಡು ದಿನ ಇದ್ಹೋಗಬಹುದಲ್ಲ,” ಅಮ್ಮನ ಕಳಕಳಿಯ ನುಡಿಗೆ ನಾನು ಕರಗಿದೆ. ಒಬ್ಬಳೇ ಪಯಣಿಸಲು ನಿರ್ಧರಿಸಿದ್ದೆ.

“ಇಲ್ಲಿಂದ ನಾಲ್ಕು ಗಂಟೆಗಳ ಪ್ರಯಾಣ. ಅಲ್ಲಿ ನನ್ನ ರಿಸೀವ್ ‌ಮಾಡೋಕ್ಕೆ ಯಾರಾದ್ರೂ ಬಂದೇ ಬರ್ತಾರೆ. ನಾನೊಬ್ಳೆ ಹೋಗ್ತೀನಿ ಪರ್ವಾಗಿಲ್ಲ,” ಎಂದಾಗ ಬೇಡವೆಂದಿರಲಿಲ್ಲ ನನ್ನ ಪತಿ, ಮಕ್ಕಳು. ನಿಜಕ್ಕೂ ನಾನೆಷ್ಟು ಅದೃಷ್ಟವಂತೆ! ನನ್ನರಿತು ನಡೆವ ಪತಿ, ಮುದ್ದಾದ ಮಕ್ಕಳು, ಇರಲು ಸೂರು, ಸುಖವಾದ ಸಂಸಾರ!

ಬಸ್‌ ಇದ್ದಕ್ಕಿದ್ದಂತೆ ಬ್ರೇಕ್‌ ಹಾಕಿದಾಗ ನನ್ನ ಯೋಚನಾ ಸರಣಿಯಿಂದ ಹೊರ ಬಂದು ಕಣ್ಬಿಟ್ಟೆ. ಅದುವರೆಗೂ ಗಮನಿಸಿರಲಿಲ್ಲ. ನನ್ನ ಮುಂದಿನ ಸೀಟಿನಲ್ಲಿರುವಾತನನ್ನು ಎಲ್ಲೋ ನೋಡಿದ ಹಾಗಿದೆಯಲ್ಲ! ಎಲ್ಲಿ? ನನ್ನ ನೆನಪಿನ ಕೋಶವನ್ನು ಕೆದಕತೊಡಗಿದೆ. ಬಂಧುವರ್ಗದಲ್ಲಿ? ಅಲ್ಲ.  ಮದುವೆಗೆ ಮುನ್ನ ಕೆಲಸ ಮಾಡುತ್ತಿದ್ದ ಕಛೇರಿಯಲ್ಲಿ? ಉಹೂಂ! ಆಸ್ಪತ್ರೆ, ಕ್ಲಿನಿಕ್‌? ಕಾಲೇಜಿನಲ್ಲಿ? ನೆನಪು ಮತ್ತೂ ಹಿಂದಕ್ಕೆ ಓಡಿತು. ಹೈಸ್ಕೂಲಿನಲ್ಲಿ? ಸಾಧ್ಯವೇ ಇಲ್ಲ. ನಾನು ಓದಿದ್ದು ಹೆಣ್ಣುಮಕ್ಕಳ ಶಾಲೆಯಲ್ಲಿ.

ಮಿಡಲ್ ಪ್ರೈಮರಿ? ಹಾಂ ಹೊಳೆಯಿತು. ಬಹುಶಃ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಅವನು ನನ್ನ ಕ್ಲಾಸಿಗೆ ಬರುತ್ತಿದ್ದ ನೆನಪು, ಮತ್ತೊಮ್ಮೆ ಅವನನ್ನೇ ದೃಷ್ಟಿಸಿದೆ.

ಇರಬಹುದೇನೋ? ಅಥವಾ ಇಲ್ಲದೆಯೂ ಇರಬಹುದು. ಹೇಗೆ ಕೇಳುವುದು? ಅರೆ! ಇದೇನು ಅವನೂ ನನ್ನನ್ನೇ ನೋಡುತ್ತಿರುವ ಹಾಗಿದೆಯಲ್ಲ…. ಕಣ್ಣಂಚಿನಲ್ಲಿ.

ಅವನ ಹೆಸರು? ಈಗ ಹೆಸರಿಗಾಗಿ ಶೋಧ ಮೊದಲಾಯಿತು. ಕನ್ನಡ ವರ್ಣಮಾಲೆಯ ಒಂದೊಂದೇ ಅಕ್ಷರದಿಂದ ಕೆಲವು ಹೆಸರುಗಳನ್ನು ನೆನಪಿಸಿಕೊಂಡೆ. ಅರವಿಂದ, ಆನಂದ, ಇಂದ್ರೇಶ್‌, ಈಶ್ವರ್‌ ಹೀಗೆ ಶಂಕರನವರೆಗೂ ಬಂದೆ.

ಥಟ್ಟನೆ ಹೊಳೆಯಿತು. `ಅಪರಾಜಿತ!’ ಏನಾದರಂದುಕೊಳ್ಳಲಿ, ನನ್ನ ಕುತೂಹಲವನ್ನು ತಣಿಸಲೋಸುಗ ಆತನನ್ನು ಕೇಳಿಯೇ ಬಿಡುವುದೆಂದು ತೀರ್ಮಾನಿಸಿದೆ. ಸಮಯ ಕೂಡಿ ಬಂತು. ಕಾಫಿಗೆಂದು ಬಸ್‌ ಒಂದು ಕಡೆ ನಿಂತಾಗ! ಆವನೂ ಸಹ ಕಾಫಿಗೆ ಹೋಗದಿದ್ದಾಗ!

“ಕ್ಷಮಿಸಿ, ನೀವು ತಪ್ಪು ತಿಳಿಯುದಿಲ್ಲವಾದರೆ ಒಂದು ಮಾತು.”

“ಪರವಾಗಿಲ್ಲ.”

“ನಿಮ್ಮ ಹೆಸರು?”

“ಅಪರಾಜಿತ.”

ಯುರೇಕಾ ಎಂದು ಕೂಗಬೇಕೆನಿಸಿತು. ಅದಕ್ಕೆ ಬದಲು ನನ್ನ ನಾಲಿಗೆ ಜಾರಿತ್ತು, “ಅಪ್ರಯೋಜಕ.”

“ಏನಂದ್ರಿ?”

“ಕ್ಷಮಿಸಿ ನಾನೇನೋ ಹೇಳಿಲಿದ್ದೆ,” ನಾಲಿಗೆ ಕಚ್ಚಿಕೊಂಡೆ.

“ನಿಮ್ಮ ಹೆಸರು ತಿಳಿಯಲಿಲ್ಲ. ಆದ್ರೂ ನೀವು ಅಪರಿಚಿತರು ಅನ್ನಿಸುತ್ತಿಲ್ಲ.”

“ನಾನು ಸುಶೀಲಾ. ನಿಮ್ಮ ಜೊತೆ ನಾಲ್ಕರವರೆಗೆ ಓದಿದ್ದೀನಿ,” ಅವನಿಗೂ ನೆನಪಾಯ್ತೇನೋ…..?

“ಹಾಂ. ಈಗ ನೆನಪಿಗೆ ಬರ್ತಿದೆ. ಮತ್ತೆ ನೀವು ಹೇಳಿದ ಹಾಗೆ ನನ್ನನ್ನು ಕರೀತಿದ್ದದ್ದು ಲೆಕ್ಕದ ಮಾಸ್ತರರು ಅಲ್ವೇ?”

“ಕ್ಷಮಿಸಿ, ನಾನು ಹಾಗೆ ಹೇಳ್ಬಾರ್ದಿತ್ತೇನೋ.”

“ಛೇ…ಛೇ…. ಅದರಲ್ಲೇನಂತೆ. ಹತ್ತು ಜನರ ಮಧ್ಯೆ ಕರೆಸಿಕೊಂಡದ್ದೇ ಉಂಟಂತೆ! ಆದ್ರೂ ನಿಮ್ಮ ನೆನಪಿನ ಶಕ್ತಿ ಅದ್ಭುತ!”

ಮುಂದಿನ ಕೆಲವೇ ನಿಮಿಷಗಳಲ್ಲಿ ನಾವು ಹಿಂದಿನ ಸುಶೀಲಾ, ಅಪರಾಜಿತ ಆಗಿಬಿಟ್ಟಿದ್ದೆವು.

ಬಸ್ಸು ಸ್ವಲ್ಪ ದೂರ ಚಲಿಸಿ ಕೆಟ್ಟು ನಿಂತಿತು. ಕನಿಷ್ಠ ಪಕ್ಷ ಎರಡು ಗಂಟೆ ಹಿಡಿಯುತ್ತೆ ಬಸ್‌ ಚಾಲನೆಗೆ ತಯಾರಾಗಲು…. ಡ್ರೈವರ್‌ಘೋಷಿಸಿದಾಗ, ಪ್ರಯಾಣಿಕರಲ್ಲಿ ಗೊಂದಲ ಶುರುವಾಯಿತು. ಯಾವುದಾದರೂ ಬದಲೀ ವ್ಯವಸ್ಥೆ ಕೈಗೂಡಬಹುದೇ ಎಂದು ಕೆಲವರು ಕೆಳಗಿಳಿದು ಅತ್ತಿತ್ತ ನೋಡತೊಡಗಿದರು.

ಮತ್ತೂ ಕೆಲವರು ಎದುರಿಗಿದ್ದ ಸಾಲುಮರಗಳ ಬಳಿ ಕುಳಿತು ದಣಿವಾರಿಸಿಕೊಳ್ಳತೊಡಗಿದರು. ನಾವಿಬ್ಬರೂ ತುಸು ದೂರದಲ್ಲೇ ಇದ್ದ ಹೋಟೆಲನ್ನು ಹೊಕ್ಕೆವು.ತಂಪು ಪಾನೀಯ ಸೇವನೆಯಾದ ನಂತರ ಆತ ಕೇಳಿದ.

“ನೀವೇನ್ಮಾಡ್ತೀರಿ?”

“ಮಾಡೋದೇನು? ಡಿಗ್ರಿ ಆದ ಕೂಡ್ಲೆ ಮದುವೆಯಾಯ್ತು. ನನ್ನವರು ಕಾಲೇಜಿನಲ್ಲಿ ಪ್ರೊಫೆಸರ್‌. ಸುಪ್ರಿಯಾ ಎಂಜಿನಿಯರಿಂಗ್‌ಎರಡನೇ ವರ್ಷದಲ್ಲಿದ್ದಾಳೆ. ಸುಪ್ರೀತಾ ದೊಡ್ಡವಳು ರಿಸರ್ಚ್‌ ಮಾಡ್ತಿದ್ದಾಳೆ. ಇಷ್ಟು ನನ್ನ ವಿಷಯ. ಇನ್ನು ನಿಮ್ಮದು.”

“ನನ್ನದೇನಿದೆ ಬಿಡಿ! ಸ್ಕೂಲಿನಲ್ಲಿ ಅಪ್ರಯೋಜಕನಾಗೇ ಇದ್ದ, ಒಮ್ಮೆಲೆ ಕಾಲೇಜಿನಲ್ಲಿ ಬೆಳೆದೆ. ಡಾಕ್ಟರ್‌ ಆದ ಮೇಲೆ ಸ್ಟೇಟ್ಸ್ ಗೂ ಹೋಗಿ ಬಂದೆ.”

“……..”

“ಮನೆ ಸಂಸಾರದ ವಿಷಯದಲ್ಲಿ ನಿಮ್ಮಷ್ಟು ಅದೃಷ್ಟವಂತನಲ್ಲ ಬಿಡಿ.”

“ಕ್ಷಮಿಸಿ…. ನಿಮ್ಮ ಮನ ನೋಯಿಸಿದೆನೆ?”

“ಹಾಗೇನಿಲ್ಲ. ನನ್ನ ಮನದ ಅಳಲನ್ನು ತೋಡಿಕೊಳ್ಳಲು ಒಬ್ಬರು ಸಿಕ್ಕರಲ್ಲ ಅಂತ ಸಂತೋಷ ಆಗ್ತಿದೆ. ಹಿರಿಯರು ನೋಡಿದ ಹುಡುಗಿಯೊಂದಿಗೆ ಮದುವೆಯಾಯ್ತು. ಅವಳೂ ಡಾಕ್ಟರ್‌. ಆದರೆ, ಆ ಬಂಧನ ದೀರ್ಘ ಕಾಲದ್ದಾಗಿರಲಿಲ್ಲ. ನಮ್ಮೀರ್ವರಿಗೂ ಯಾವ ವಿಷಯದಲ್ಲೂ ಹೊಂದಾಣಿಕೆಯಾಗುತ್ತಿರಲಿಲ್ಲ. ಕೊನೆಗೆ ಅಧಿಕೃತವಾಗಿ ಬೇರ್ಪಟ್ಟೆ.”

“………..”

“ಅವಳು ಮತ್ತೆ ಮದುವೆಯಾಗಿ ವಿದೇಶಕ್ಕೆ ಹೊರಟುಹೋದಳು. ನಾನು ಚೇತರಿಸಿಕೊಳ್ಳಲೇ ಇಲ್ಲ. ಮದುವೆ ಸಂಸಾರದ ವಿಷಯದಲ್ಲಿ ನನ್ನದೇ ಅದ ಕನಸುಗಳಿದ್ದವು. ಅವೆಲ್ಲ ನುಚ್ಚು ನೂರಾಗಿತ್ತು. ಮೊದಮೊದಲು ಹೆಂಡತಿ, ಮಕ್ಕಳು ಬದುಕಿನ ಅನಿವಾರ್ಯಗಳಲ್ಲಿ ಒಂದು ಎಂದು ನೆನೆನೆನೆದು ಕೊರಗುತ್ತಿದ್ದೆವು. ಕ್ರಮೇಣ, ಈ ಒಂಟಿ ಜೀವನದ ಜೊತೆ ರಾಜಿಯಾಗಿಬಿಟ್ಟಿದ್ದೇನೆ.”

ನನಗರಿವಿಲ್ಲದಂತೆ ನನ್ನ ಕಣ್ಣಾಲಿಗಳು ತುಂಬಿದ್ದವು.

“ಇಷ್ಟು ವರ್ಷಗಳು ಕಳೆದರೂ ನನ್ನ  ಗುರ್ತು ಹಿಡಿದಿರಲ್ಲ….. ನನಗೆ ಬಹಳ ಖುಷಿಯಾಗ್ತಿದೆ. ನೀವು ಅನ್ಯಥಾ ಭಾವಿಸದಿದ್ದರೆ ನಿಮ್ಮನ್ನು ನನ್ನ ಸ್ನೇಹಿತೆಯಾಗಿ ಪರಿಗಣಿಸಬಹುದೇ?

“ಅರೆ, ಸಂತೋಷಿಸುವ ಸರದಿ ಈಗ ನನ್ನದು. ಆ ಬಾಲ್ಯದ ಸವಿನೆನಪುಗಳು ಎಷ್ಟು ಮುದಕೊಡುತ್ತವೆ ಮನಸ್ಸಿಗೆ?”

ಬಸ್‌ ಹೊರಡುವ ಸೂಚನೆ ಕಂಡುಬಂದಿತು. ಗಮ್ಯ ಸ್ಥಾನ ತಲುಪಿದಾಗ ನನ್ನೆದುರುಗೊಳ್ಳಲು ಬರಬೇಕಾಗಿದ್ದವರು ಕಾಣದಾಗ ಕಂಗಾಲಾದೆ.

“ಅಷ್ಟ್ಯಾಕೆ ಯೋಚನೆ ಮಾಡ್ತೀರಿ? ನಾನಿಲ್ವೇ?” ಎಂದು ಬೇಡ ಬೇಡವೆಂದರೂ ಟ್ಯಾಕ್ಸಿ ಗೊತ್ತು ಮಾಡಿ ನನ್ನಿಂದ ವಿಳಾಸ ತೆಗೆದುಕೊಂಡು ಡ್ರೈವರ್‌ಗೆ ಸೂಚನೆಯಿತ್ತ ಅಪರಾಜಿತ.

ಮನೆ ತಲುಪಿದಾಗ ರಾತ್ರಿ ಎಂಟು ಗಂಟೆ. ಅಮ್ಮನಿಗೂ ಪರಿಚಯಿಸಿದೆ.

“ಯಾರೂ? ಶ್ಯಾಮರಾಯರ ಮಗನೆ?”

“ಹೌದಮ್ಮ,” ವಿನಮ್ರನಾಗಿ ನುಡಿದಿದ್ದ ಅಪರಾಜಿತ. ಎಷ್ಟೇ ಕೇಳಿದರೂ, ಆ ರಾತ್ರಿ ಅಲ್ಲಿ ಉಳಿಯಲೊಪ್ಪಲಿಲ್ಲ. ನನ್ನ ವಿಳಾಸವನ್ನು ಕೊಟ್ಟು ಆಹ್ವಾನಿಸಿದೆ.

“ಅಲ್ಲಿಗೆ ಬಂದಾಗ ಖಂಡಿತ ಬರ್ತೀನಿ. ಹಾಗೇನಾದ್ರೂ ಅನಾನುಕೂಲವಾದ್ರೆ ಫೋನ್‌ ಮುಖಾಂತರವಾದ್ರೂ ಸಂಪರ್ಕಿಸ್ತೀನಿ,” ನುಡಿದು ಹೊರಟುಹೋದ.

ಊರಿಗೆ ವಾಪಸ್ಸಾದ ಮಾರನೇ ದಿನವೇ ಫೋನ್‌ ಮಾಡಿದ್ದ. ನನ್ನವರಿಗೆ ಅವನ ಬಗ್ಗೆ ಈಗಾಗಲೇ ತಿಳಿಸಿದ್ದರಿಂದ, ಮಕ್ಕಳೆದುರು ಲಘುವಾಗಿ ಚುಡಾಯಿಸಿದ್ದರು,

“ಈಗ ಅಮ್ಮನಿಗೆ ಫೋನ್‌ ಮಾಡಿದ್ದು ಅವಳ ಬಾಯ್‌ ಫ್ರೆಂಡ್‌, ಕ್ಲಾಸ್‌ಮೇಟ್‌.”

“ನಾಳೆ ಇಲ್ಲಿಗೇ ಬರ್ತಾನೆ. ಪರಿಚಯ ಮಾಡಿಸ್ತೀನಿ,” ಕೀಟಲೆ ಮಾಡಲಾರಂಭಿಸಿದ ಮಕ್ಕಳಿಗೆ ಸಮಜಾಯಿಷಿ ಹೇಳಿದೆ.

ನಮ್ಮ ಮನೆಗೆ ಬಂದ ಕೆಲವೇ ನಿಮಿಷಗಳಲ್ಲಿ ಮನೆಮಂದಿಗೆಲ್ಲ ಆತ್ಮೀಯನೆನಿಸಿಬಿಟ್ಟ.

“ಇಷ್ಟು ದಿನ ನಾನು ಒಂಟಿ ಅನ್ನುವ ಭಾವನೆ ನನ್ನನ್ನು ತುಂಬ ಕಾಡುತ್ತಿತ್ತು. ಆದರೆ ಈಗ ನನಗೆ ಹಾಗನ್ನಿಸುತ್ತಿಲ್ಲ. ಇಲ್ಲೇ ಖಾಯಂ ಆಗಿ ಇದ್ದು ಬಿಡ್ಲೆ ಅನ್ಸುತ್ತೆ,” ಅಪರಾಜಿತ ಹೊರಟು ನಿಂತಾಗ ತುಂಬು ಹೃದಯದಿಂದ ಬೀಳ್ಕೊಟ್ಟೆ.

“ಪೋಸ್ಟ್,” ಕಿಟಕಿಯಿಂದ ತೂರಿ ಬಂದ ಕವರನ್ನು ಕುತೂಹಲದಿಂದ ಒಡೆದು ನೋಡಿದೆ. ಅಪರಾಜಿತನ ಮದುವೆಯ ಕರೆಯೋಲೆ. ಜೊತೆಗೆ ಒಂದು ಪತ್ರ.

ಆತ್ಮೀಯ ಸುಶೀಲಾರಿಗೆ, ಅಪರಾಜಿತನ ವಂದನೆಗಳು, ನನ್ನ ಮದುವೆಯ ಕರೆಯೋಲೆಯನ್ನು ಇದರೊಂದಿಗೆ ಕಳುಹಿಸುತ್ತಿದ್ದೇನೆ. ಕೆಲಸದ ಒತ್ತಡದಿಂದ ಖುದ್ದಾಗಿ ಬಂದು ಕರೆಯದಿದ್ದುದನ್ನು ಅನ್ಯಥಾ ಭಾವಿಸದೆ ಮನ್ನಿಸುವುದು.

ಮನೆ ಮಡದಿ ಯಾವುದೂ ಬದುಕಿನ ಅನಿವಾರ್ಯವಾಗದೆಯೂ ಇರಬಹುದು. ಆದರೆ ನಿಮ್ಮ ಭೇಟಿಯಾದ ಮೇಲೆ, ನನ್ನ ಜಡತ್ವ ಕರಗತೊಡಗಿತು. ಉಳಿದ ಜೀವನವನ್ನು ಸವೆಸುವುದಕ್ಕಿಂತ ಸವಿಯಬಾರದೇಕೆ? ಎನ್ನಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನಿಮ್ಮ ಹೃದಯವಂತಿಕೆಗೆ ನಾನು ಆಭಾರಿ.

ಖಂಡಿತ ನಿಮ್ಮ ಪತಿ, ಮಕ್ಕಳೊಂದಿಗೆ ನನ್ನ ಮದುವೆಗೆ ಬಂದು ನನ್ನವರಾಗಿ ಕೆಲಕಾಲ ನಿಲ್ಲಬೇಕೆಂದು ಪ್ರಾರ್ಥಿಸುವ,

ನಿಮ್ಮ ವಿಶ್ವಾಸಿ ಅಪರಾಜಿತ.

ಕಾಗದ ಓದಿ ಅವ್ಯಕ್ತ ಆನಂದವಾಯಿತು. ಜೋಪಾನವಾಗಿ ಅದನ್ನು ಎತ್ತಿಟ್ಟು. ನನ್ನವರು ಎಷ್ಟು ಬೇಗ ಬಂದರೆ ಅಷ್ಟು ಬೇಗ ಈ ವಿಷಯ ತಿಳಿಸಬೇಕೆಂದು ನಿರೀಕ್ಷಿಸತೊಡಗಿದೆ.

Tags:
COMMENT