ಬೆಂಗಳೂರು ನಗರವನ್ನು ಸುತ್ತು ಹಾಕಿದಾಗ ಪ್ರತಿಯೊಂದು ರಸ್ತೆಯಲ್ಲೂ ಒಂದಲ್ಲ ಒಂದು ಹೊಸ ಮನೆ ನಿರ್ಮಾಣವಾಗುತ್ತಲೇ ಇರುತ್ತದೆ. ಮರಳು, ಸಿಮೆಂಟು ಮತ್ತು ಕಬ್ಬಿಣದ ಬೆಲೆ ಗಗನಕ್ಕೇರಿದರೂ ನಿರ್ಮಾಣ ಕಾರ್ಯಗಳು ನಡೆಯುತ್ತಲೇ ಇವೆ. ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳ ನಿರ್ಮಾಣವಾಗುತ್ತಿರುವುದರ ಜೊತೆಗೆ ವಿಭಿನ್ನ ರೀತಿಯ ವಿನ್ಯಾಸದ ಮನೆಗಳು, ನೋಡಿದರೆ ವಾಹ್ ಎನ್ನಬೇಕು. ಅಂತಹ ಒಳಾಂಗಣದ ರೂಪುರೇಷೆ! ಮನೆಯ ಪ್ರತಿಯೊಂದು ವಿಭಾಗಕ್ಕೂ ಗಮನವಿತ್ತು, ಕಲಾತ್ಮಕತೆಯನ್ನು ಮೂಡಿಸುವುದರಲ್ಲಿ ವಿನ್ಯಾಸಕರು ಸಫಲರಾಗುತ್ತಿದ್ದಾರೆ. ಹಿಂದೆ ಸುಮ್ಮನೆ ಅಗತ್ಯಕ್ಕೆಂದು ಅಥವಾ ನಿಕೃಷ್ಟವೆನಿಸಿದ ಮನೆಯ ಕೆಲವು ವಿಭಾಗಗಳನ್ನೂ ಅತ್ಯಂತ ಆಕರ್ಷಕವಾಗಿ ಮೂಡಿಸಲಾಗುತ್ತಿದೆ. ಅಂತಹ ವಿಷಯಗಳಲ್ಲೊಂದು ಮನೆಯ ಒಳಗಿನ ಮಹಡಿಯ ಮೆಟ್ಟಿಲು.
ಮಹಡಿಯ ಮೆಟ್ಟಿಲು ಎನ್ನುವುದು ಮೇಲಿನ ಅಂತಸ್ತಿಗೆ ಹತ್ತಲು ಒಂದು ಸಾಧನವಷ್ಟೆ, ಆದರೆ ಅದನ್ನು ಮನೆಯ ಮುಖ್ಯ ಅಲಂಕಾರಿಕ ತಾಣವನ್ನಾಗಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಬಂದಾಗ `ಹೌದು’ ಎನ್ನುತ್ತದೆ ಕಲಾತ್ಮಕತೆಯನ್ನು ಹೊಂದಿರುವ ಆಧುನಿಕ ಮನೋಭಾವ. ಮೆಟ್ಟಿಲೆಂದಾಗ ಮನೆಯ ಒಂದು ಮೂಲೆಯಲ್ಲಿ ಕಿರಿದಾದ ಮರದ ಹಲಗೆಗಳನ್ನೊಳಗೊಂಡ ಚಿತ್ರಣವೇ ಕಣ್ಣ ಮುಂದೆ ಬರುತ್ತದೆ. ಆದರೆ ಅದನ್ನೂ ಸುಂದರವಾಗಿ ರೂಪಿಸಬಹುದೆನ್ನುತ್ತಾರೆ ಆಧುನಿಕ ವಿನ್ಯಾಸಕಾರರು. ಮನೆಯನ್ನು ಕಟ್ಟುವಾಗ ಪ್ರತಿಯೊಂದು ಹಂತದಲ್ಲೂ ಉಪಯುಕ್ತತೆಯ ಜೊತೆ ಜೊತೆಗೆ ಅದು ಆಕರ್ಷಕವಾಗಿ ಕಾಣಬೇಕು ಮತ್ತು ನಮ್ಮ ಜೇಬಿಗೆ ಎಟುಕಿಸಬೇಕು ಎನ್ನುವ ವಿಷಯವನ್ನು ಮನದಟ್ಟು ಮಾಡಿಕೊಂಡೇ ಮನೆಯ ರೂಪುರೇಷೆಯನ್ನು ಮಾಡಲಾಗುತ್ತದೆ.
ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ಮನೆಯ ಮೆಟ್ಟಿಲು ಬಹಳ ಕಡಿದಾಗಿತ್ತು ಮತ್ತು ಮರದಿಂದ ಮಾಡಿದ ಆ ಮೆಟ್ಟಿಲುಗಳನ್ನು ಹತ್ತಲು ಕಷ್ಟವೆಂದು ಒಂದು ಹಗ್ಗವನ್ನು ಇಳಿಬಿಟ್ಟಿರುತ್ತಿದ್ದರು. ಅದನ್ನು ಹಿಡಿದುಕೊಂಡೇ ನಾವು ಹತ್ತುತ್ತಿದ್ದುದು. ಆದರೆ ಕ್ರಮೇಣ ಕಾಂಕ್ರೀಟಿನಿಂದ ಮಾಡಿದ ಮೆಟ್ಟಿಲುಗಳು ಕಾಣತೊಡಗಿದವು. ಹಿಂದಿನ ಮರದ ಮೆಟ್ಟಿಲುಗಳಿಗಿಂತ ಈ ಮೆಟ್ಟಿಲುಗಳ ಮೇಲೆ ಏರುವುದು ಸರಾಗವಾಗಿತ್ತು ಮತ್ತು ಗಟ್ಟಿಮುಟ್ಟಾಗಿಯೂ ಇರುತ್ತಿತ್ತು. ಆದರೆ ಅಂತಹ ಆಕರ್ಷಣೆಯೇನೂ ಕಾಣುತ್ತಿರಲಿಲ್ಲ.
ಆದರೆ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಸಾಗಿ ಈಗ ಮೆಟ್ಟಿಲುಗಳು ಬಹಳ ಸುಂದರವಾಗಿ ರೂಪಿಸಲ್ಪಡುತ್ತಿವೆ. ಹಿಂದೆ ಅಗತ್ಯಕ್ಕನುಗುಣವಾಗಿದ್ದ ಮೆಟ್ಟಿಲುಗಳು ಇಂದು ಮನೆಯ ಆಕರ್ಷಣೆಗಳಲ್ಲಿ ಒಂದಾಗಿವೆಯೆಂದರೆ ತಪ್ಪಾಗಲಾರದು. ಈಗ ವಿಧ ವಿಧದ ಮನಸೆಳೆಯುವಂತಹ ಮೆಟ್ಟಿಲುಗಳು ಕಾಣಸಿಗುತ್ತವೆ. ಒಂದಕ್ಕಿಂತ ಒಂದು ವಿಭಿನ್ನ ಮತ್ತು ಸುಂದರವಾಗಿರುತ್ತವೆ.
ಉದಾ 1 : ಮೇಲಿನಿಂದ ಹೊಳೆಯುವ ಕಬ್ಬಿಣದ ಹಗ್ಗಗಳನ್ನು ಇಳಿಬಿಟ್ಟು ಅದರ ಬಲದಿಂದಲೇ ಮೆಟ್ಟಿಲುಗಳನ್ನು ರೂಪಿಸಿರುವ ಜಾಣ್ಮೆ ಎದ್ದು ಕಾಣುತ್ತದೆ. ಆ ಹೊಳೆಯುವ ಕಬ್ಬಿಣದ ಹಗ್ಗಗಳು ನೋಡಲೂ ಸುಂದರವಾಗಿದ್ದು, ಮೆಟ್ಟಿಲುಗಳಿಗೆ ಆಸರೆಯಂತೆ ಇರುತ್ತದೆ. ಬಹಳ ಸರಳವಾದ ವಿಧಾನ. ಇಳಿಬಿಟ್ಟ ಹಗ್ಗಗಳು ಹತ್ತುವ ಸಮಯದಲ್ಲೂ ಅದನ್ನು ಹಿಡಿದು ಹತ್ತಲು ಸಹಾಯಕವೆನಿಸುತ್ತದೆ. ಪ್ರತಿಯೊಂದು ಮೆಟ್ಟಿಲಿಗೆ ಜೋಡಿಸಿರುವ ಫೋಕಸ್ ಲೈಟುಗಳು ನೋಡಲು ಆಕರ್ಷಕವಾಗಿರುವುದೇ ಅಲ್ಲದೆ, ಕತ್ತಲಲ್ಲಿ ಹತ್ತುವಾಗ ದಾರಿ ತೋರಿಸುತ್ತದೆ. ಸರಳತೆಯಲ್ಲೇ ಸೌಂದರ್ಯವನ್ನು ಮೂಡಿಸಿರುವ ವಿನ್ಯಾಸಕಾರನ ಜಾಣ್ಮೆ ಮೆಚ್ಚುವಂತಹುದೇ. ಆ ಮೆಟ್ಟಿಲುಗಳ ಮೇಲೆ ಮರದ ಹಾಸನ್ನೇ ಇಡಬಹುದು ಇಲ್ಲವಾದಲ್ಲಿ ಗ್ರಾನೈಟ್ ಕಲ್ಲಿನ ಹಾಸನ್ನೂ ಜೋಡಿಸಬಹುದು. ಮರವನ್ನಿರಿಸಿದರೆ ಆಗಾಗ ಪಾಲಿಷ್ ಮಾಡಿಸಬೇಕಾಗುತ್ತದೆ. ಗ್ರಾನೈಟ್ ಕಲ್ಲು ಹಾಸನ್ನಿರಿಸಿದರೆ ನಿರ್ವಹಣೆಯೂ ಸುಲಭ.
ಉದಾ 2 : ಮೇಲೆ ಹೇಳಿದ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯ ಮತ್ತು ತೆಳುವಾದ ಹಗ್ಗಗಳನ್ನು ಇಳಿಬಿಡಲಾಗಿದೆ. ಪೂರ್ಣವಾಗಿ ಮರವನ್ನು ಬಳಸಲಾಗಿದೆ. ಪಕ್ಕದ ಗೋಡೆಗೆ ನೇತುಹಾಕಿದ ಚಿತ್ರ, ಅದಕ್ಕೆ ಮೂಡಿಸಿರುವ ಬೆಳಕು ಮೆಟ್ಟಿಲನ್ನು ಮತ್ತೂ ಆಕರ್ಷಕವಾಗಿ ಕಾಣುವಂತೆ ಮಾಡಿದೆ.
ಉದಾ 3 : ಮೇಲಿನಿಂದ ಇಲ್ಲಿಯೂ ಸಹ ಪೂರ್ಣವಾಗಿ ಮರವನ್ನೇ ಬಳಸಿದ್ದರೂ ಮರಕ್ಕೆ ಬಳಸಿದ ಬಣ್ಣಗಳ ಮೂಲಕ ವಿಭಿನ್ನತೆಯನ್ನು ಮೂಡಿಸಲಾಗಿದೆ. ಈ ರೀತಿ ಒಂದೊಂದು ಚಿತ್ರದಲ್ಲಿರುವ ಮೆಟ್ಟಿಲುಗಳಲ್ಲಿ ಬಳಸಿದ ವಸ್ತಗಳು ಒಂದೇ ಆಗಿದ್ದರೂ ವಿನ್ಯಾಸದಲ್ಲಿ ವಿಭಿನ್ನತೆ ಮತ್ತು ವಿಶಿಷ್ಟತೆಯನ್ನು ಮೂಡಿಸಲಾಗಿದೆ.
ಉದಾ 4 : ಮರದ ಹಾಸಿಗೆ ಬಿಳಿಯ ಬಣ್ಣವನ್ನು ಮೂಡಿಸಿ ಪಕ್ಕದಲ್ಲೇ ಗಾಜನ್ನು ಬಳಸಲಾಗಿದೆ. ಗಾಜಿನ ಬಳಕೆಯಿಂದ ಮೆಟ್ಟಿಲಿನ ರೂಪು ಸುಂದರಗೊಂಡಿರುವುದೇ ಅಲ್ಲದೆ ಹತ್ತುವವರಿಗೆ ರಕ್ಷಣೆಯನ್ನು ನೀಡುತ್ತದೆ ಮತ್ತು ಸ್ಥಳ ವಿಶಾಲವಾಗಿ ಕಾಣುತ್ತದೆ. ಇವು ಕೆಲವು ಜನಪ್ರಿಯ ಉದಾಹರಣೆಗಳಷ್ಟೆ.
ಮೆಟ್ಟಿಲಿನ ಪಕ್ಕದಲ್ಲಿ ಬರುವ ರೇಲಿಂಗ್ಸ್ ಗಾಗಿ ವಿಭಿನ್ನ ವಸ್ತುಗಳನ್ನು ಬಳಸಬಹುದು. ಸ್ಟೀಲಿನ ಮತ್ತು ಗಾಜಿನ ಕಾಂಬಿನೇಷನ್ ಒಂದು ರೀತಿಯ ಸೊಗಸನ್ನು ನೀಡಿದರೆ ಬೇರೆ ಬೇರೆ ಆಕಾರದ, ಬಣ್ಣದ ವಿನ್ಯಾಸದ ರೇಲಿಂಗ್ಸ್ ಮತ್ತೊಂದು ರೀತಿಯಲ್ಲಿ ಮನಕ್ಕೆ ಮುದ ನೀಡುತ್ತವೆ.
ಇವುಗಳೇ ಅಲ್ಲದೆ ಬರಿಯ ಕಬ್ಬಿಣ, ಹಿತ್ತಾಳೆಯಂತಹ ಲೋಹಗಳನ್ನು ಬಳಸಿ ವಿಭಿನ್ನ ಆಕಾರದ ಮೆಟ್ಟಿಲುಗಳನ್ನು ಮೂಡಿಸಬಹುದು. ಇಲ್ಲಿ ಹೆಚ್ಚಿನ ಸ್ಥಳ ಬೇಕಾಗುವುದಿಲ್ಲ. ಸ್ಥಳದ ಲಭ್ಯತೆಗನುಗುಣವಾಗಿ ಮೆಟ್ಟಿಲುಗಳ ವಿನ್ಯಾಸವನ್ನು ಮಾಡಲಾಗುತ್ತದೆ. ಈ ರೀತಿ ಹೇಳುತ್ತಾ ಹೋದರೆ ಮೆಟ್ಟಿಲುಗಳ ಬಗ್ಗೆಯೇ ಒಂದು ಭಾಷ್ಯವನ್ನು ಬರೆಯಬಹುದು. ಆಯ್ಕೆಗಳು ವಿಪುಲವಾಗಿವೆ, ಆರಿಸಿಕೊಳ್ಳುವ ಜಾಣ್ಮೆ ನಿಮ್ಮದಾಗಬೇಕಷ್ಟೆ. ಏನೇ ಇರಲಿ, ಆ ಮೆಟ್ಟಿಲುಗಳ ಮೇಲೆ ಮನೆಯಲ್ಲಿರುವ ಮಕ್ಕಳೂ ಹತ್ತುತ್ತಾರೆ ಎನ್ನುವ ವಿಷಯವನ್ನು ಗಮನದಲ್ಲಿಟ್ಟುಕೊಂಡು ರಕ್ಷಣೆಯ ದೃಷ್ಟಿಯನ್ನೂ ಮನದಲ್ಲಿರಿಸಿಕೊಳ್ಳುವುದು ಸೂಕ್ತ. ಅಗತ್ಯ ಸ್ಥಳಗಳಲ್ಲಿ ಗಾಜನ್ನು ಬಳಸಿದಾಗ ಸುಂದರವಾಗಿಯೂ ಕಾಣುತ್ತದೆ ಮತ್ತು ಮಕ್ಕಳು ಬೀಳದಂತೆ ತಡೆಯತ್ತದೆ.
ಹಿಂದೆ ಅಗತ್ಯಕ್ಕೆಂದು ಬಳಸುತ್ತಿದ್ದ ಮೆಟ್ಟಿಲುಗಳು ಮನೆಯ ಆಕರ್ಷಣೆಗಳಲ್ಲೊಂದಾಗಿದೆ. ಮನೆಯ ಆಕರ್ಷಣೆಗೆ ಪ್ರತ್ಯೇಕವಾಗಿ ಹಣ ಖರ್ಚು ಮಾಡುವ ಬದಲು ಮೆಟ್ಟಿಲಿಗೆ ಖರ್ಚು ಮಾಡಿದಾಗ ಜಾಣತನವಾಗುತ್ತದೆ. ಈಗ ಹಣ ಖರ್ಚು ಮಾಡಲು ಯಾರೂ ಹಿಂಜರಿಯುವುದಿಲ್ಲ,
ಸುಂದರವಾಗಿ ಮೂಡಿಸುವುದೇ ಎಲ್ಲರ ಮುಖ್ಯ ಉದ್ದೇಶವಾಗಿರುತ್ತದೆ. ಏನೇ ಇರಲಿ, ಕಡಿಮೆ ಬಜೆಟ್ನಲ್ಲೂ ಆಕರ್ಷಣೆ ಮತ್ತು ಉಪಯುಕ್ತತೆಯನ್ನು ಭರಿಸಲು ಸಾಧ್ಯವಿದೆ, ಎನ್ನುತ್ತಾರೆ ಬೆಂಗಳೂರಿನ ಆರ್ಕಿಟೆಕ್ಟ್ ರುದ್ರೇಶ್.
ಈಗ ಯಾವುದೇ ವಿಷಯಾಗಲೀ ಮನೆಯ ಪ್ರತಿಯೊಂದು ಭಾಗದ ವಿನ್ಯಾಸ ಯಾವ ರೀತಿ ಬರುತ್ತದೆಂದು ಮನೆಯ ಒಡೆಯ ಊಹಿಸಿಕೊಳ್ಳಬೇಕಾಗಿಲ್ಲ ಅಥವಾ ವಿನ್ಯಾಸಕಾರ ಹೇಳಿದ್ದನ್ನು ಕಷ್ಟಪಟ್ಟು ಅರ್ಥ ಮಾಡಿಕೊಳ್ಳಬೇಕಾಗಿಲ್ಲ, ಮನೆಯ ಪ್ರತ್ಯೇಕ ವಿಭಾಗದ 3ಡಿ ಚಿತ್ರ ಅಥವಾ ವಿಡಿಯೋಗಳನ್ನು ತೋರಿಸಲಾಗುತ್ತದೆ. ಆಗ ನಿಮಗೆ ಆಯ್ಕೆ ಮಾಡುವುದು ಸುಲಭವಾಗುತ್ತದೆ.
ನೀವು ಆರಿಸಿದ ವಿನ್ಯಾಸ ನಿಮ್ಮ ಮನೆಯಲ್ಲಿ ಹೇಗೆ ಕಾಣುತ್ತದೆ ಎನ್ನುವ ಪ್ರತ್ಯಕ್ಷ ದರ್ಶನವಾಗುತ್ತದೆ. ನಿಮಗೆ ಬೇಕಾದ ಮೆಟ್ಟಿಲುಗಳ ವಿನ್ಯಾಸವನ್ನು ನೀವು ಆರಿಸಿಕೊಳ್ಳುವುದು ಸುಲಭ ಸಾಧ್ಯವಾಗಿದೆ. ಚಿತ್ರ ನೋಡಿ ನಿಮ್ಮ ಮನೆಗೆ, ನಿಮ್ಮ ಜೇಬಿಗೆ ಸೂಕ್ತವಾದುದನ್ನು ಆರಿಸಿಕೊಳ್ಳಬಹುದು.
ಒಂದಕ್ಕಿಂತ ಮತ್ತೊಂದು, ನೋಡಲು ಸುಂದರವಾದ ಮನೆಗಳನ್ನು ಮೂಡಿಸುವ ಸವಾಲು ಈಗ ವಿನ್ಯಾಸಕಾರರ ಮುಂದಿದೆ. ಹಿಂದೆ ಬಹಳ ಸರಳವಾಗಿ ನಿರ್ಮಿಸಲಾಗುತ್ತಿದ್ದ ಮೆಟ್ಟಿಲುಗಳು ಮನೆಯ ಕೇಂದ್ರ ಆಕರ್ಷಣೆಯಾಗುತ್ತಿದೆ ಎಂದಾಗ ಎಂತಹ ನಿರ್ಜೀವ ವಿಷಯವನ್ನು ಜೀವಂತವಾಗಿರಿಸು ಕಲೆ ವಿನ್ಯಾಸಕಾರರಿಗೆ ಇದೆಯೆನ್ನುವುದೇ ಸಂತಸ ನೀಡುವ ವಿಷಯ.
– ಮಂಜುಳಾ ರಾಜ್.