ಬಹಳ ಹೊತ್ತು ರತ್ನಾ ತನ್ನ ಬಾಯ್‌ಫ್ರೆಂಡಿಗಾಗಿ ಕಾದು ಕುಳಿತಿದ್ದಳು. ಅಂತೂ ಅವನು ಬರುವಷ್ಟರಲ್ಲಿ ಅರ್ಧ ಗಂಟೆ ತಡವಾಯಿತು. ಕೊನೆಗೂ ಗಿರೀಶ್‌ ಬಂದಾಗ ರತ್ನಾ ಜೋರಾಗಿ ನಗತೊಡಗಿದಳು. ಬಾಲ್ಡ್ ಆಗಿದ್ದ ಗಿರೀಶ ಅಂದು ಕಾಲರ್‌ ರಹಿತ ಜ್ಯಾಕೆಟ್ ಧರಿಸಿದ್ದ.

ಗಿರೀಶ್‌ : ಯಾಕೆ ನಗ್ತಿದ್ದಿ ರತ್ನಾ? ನಾನು ಇವತ್ತು ಚೆನ್ನಾಗಿ ಕಾಣಿಸುತ್ತಿಲ್ಲವೇ?

ರತ್ನಾ : ಬಿಡು ಗಿರಿ, ನೀನು ಕೋಪ ಮಾಡಿಕೊಳ್ತೀಯ.

ಗಿರೀಶ್‌ : ಇರಲಿ, ಅದೇನೂಂತ ಹೇಳಿಬಿಡು…

ರತ್ನಾ : ಕಿತ್ತುಹೋದ ಬೂಟಿನಿಂದ ಹೆಬ್ಬೆರಳು ಹೊರಬಂದಂತೆ ಕಾಣುತ್ತಿರುವೆ!

 

ಸುಗುಣಾ ಬಹಳ ಹೊತ್ತಿನಿಂದ ಕೊನೆಯ ಬೆಂಚಿನಲ್ಲಿ ಕುಳಿತು ಬಿಕ್ಕಳಿಸಿ ಅಳುತ್ತಿದ್ದಳು. ಅದನ್ನು ಗಮನಿಸಿದ ಅವಳ ಸಹಪಾಠಿ ವರುಣ್‌ ಅವಳನ್ನು ಪರಿಪರಿಯಾಗಿ ಸಮಾಧಾನಪಡಿಸಿದ.

ವರುಣ್‌ : ಸುಗುಣಾ, ಯಾಕಿಷ್ಟು ಅಳುತ್ತಿರುವೆ?

ಸುಗುಣಾ : ಬಹಳ ಕಡಿಮೆ ಮಾರ್ಕ್ಸ್ ಬಂದಿದೆ.

ವರುಣ್‌ : ಅದಿರಲಿ, ಎಷ್ಟು ಮಾರ್ಕ್ಸ್ ಬಂತು?

ಸುಗುಣಾ : ಕೇವಲ 80%…..

ವರುಣ್‌ : ಅಯ್ಯೋ ನಿನ್ನ ಮನೆ ಕಾಯೋಗಾ! ಅಷ್ಟು ಮಾರ್ಕ್ಸ್ ಇದ್ದರೆ, ನಾವು ಒಬ್ಬರಲ್ಲ ಇಬ್ಬಿಬ್ಬರು ಹುಡುಗರು ಪಾಸಾಗಿ ಬಿಡುತ್ತಿದ್ದೆ.

 

ಒಬ್ಬ ನೈಟ್‌ ವಾಚ್‌ಮ್ಯಾನ್‌ಗೆ ಇದ್ದಕ್ಕಿದ್ದಂತೆ ಬೀಟ್‌ ಮಧ್ಯೆ ಎಲ್ಲಿಂದಲೋ ಒಂದು, ಅಲ್ಲಾವುದ್ದೀನ್‌ನ ಅದ್ಭುತ ದೀಪದಂಥ ಹಣತೆ ಸಿಕ್ಕಿತು. ಅವನು ಅದನ್ನು ಉಜ್ಜಿ ನೋಡಿದಾಗ, ಅದರಿಂದ ನಿಜಕ್ಕೂ ಭೂತ ಹೊರಬಂದು ನೀನು 3 ಆಸೆಗಳನ್ನು ಕೇಳು, ಅದನ್ನು ನೆರವೇರಿಸುವೆ ಎಂದಿತು. ಅದಕ್ಕೆ ವಾಚ್‌ಮ್ಯಾನ್‌ ಹೇಳತೊಡಗಿದ… “ನನಗೊಂದು ದೊಡ್ಡ ಫುಲ್ ಫರ್ನಿಶ್ಡ್ ಬಂಗಲೆ ಬೇಕು. ಎರಡನೆ ಆಸೆ ಅಂದರೆ, ಅದರ ಮಾಲೀಕ ಈ ವಿಶ್ವದ ಅತಿ ದೊಡ್ಡ ಶ್ರೀಮಂತನಾಗಿರಬೇಕು.”

“ತಥಾಸ್ತು! ನಿನ್ನ ಮೂರನೇ ಕೋರಿಕೆ ಏನು?” ಭೂತ ಕೇಳಿತು.

ವಾಚ್‌ ಮ್ಯಾನ್‌ ಸಂಕೋಚದಿಂದ ಹೇಳಿದ, “ಏನಿಲ್ಲ, ಈ ಹಳೆ ಮನೆ ಬದಲು ನನ್ನನ್ನು ಆ ಭವ್ಯ ಬಂಗಲೆಯ ಹೊಸ ವಾಚ್‌ಮ್ಯಾನ್‌ ಆಗಿ ನೇಮಕ ಮಾಡಿಬಿಡು!”

 

ದಪ್ಪಗಿದ್ದ ಕಪ್ಪು ಬಣ್ಣದ ಕನಕಾ ಹೊಸದಾಗಿ ಕೊಂಡ ಹಸಿರು ಸೀರೆ ಉಟ್ಟು, ಸೆರಗು ಬೀಸುತ್ತಾ ತನ್ನ ಪ್ರೇಮಿ ಕಿಶೋರ್‌ ಬಳಿ ವೈಯಾರವಾಗಿ ಕೇಳಿದಳು, “ಈ ಹೊಸ ಸೀರೆಯಲ್ಲಿ ನಾನು ಹೇಗೆ ಕಾಣ್ತಿದ್ದೀನಿ ಡಿಯರ್‌?”

ಕಿಶೋರ್‌ ಮುಖ ಸಿಂಡರಿಸುತ್ತಾ ವರ್ಣಿಸಿದ, “ಹಸಿರು ಹುಲ್ಲಿನ ನಡುವೆ ಮೇಯುತ್ತಿರುವ ಎಮ್ಮೆಯಂತೆ….!”

 

ತಂದೆ : ನೋಡಪ್ಪ, ಏನೇ ಓದು… ಅದರಲ್ಲಿ ಮನಸ್ಸನ್ನು ನೆಟ್ಟು ಚೆನ್ನಾಗಿ ಓದಿ ವಿದ್ಯಾವಂತನಾಗು. ಗೊತ್ತಾಯ್ತಾ?

ಮಗ : ಬೀಜ ನೆಟ್ಟರೆ ಮೊಳಕೆ ಸರಿಯಾಗಿ ಬರದಂಥ ಕಲಿಗಾಲವಿದು, ಇನ್ನು ಮನಸ್ಸು ನೆಟ್ಟು ಓದಲಾಗುತ್ತದೆಯೇ?

 

ಮಾಡರ್ನ್‌ ಮಮತಾಳನ್ನು ಕಂಡ ಮಹೇಶ ಮೋಹಪರವಶನಾಗಿ ಅವಳಿಗೆ ಪ್ರಪೋಸ್‌ ಮಾಡಿದ.

ಮಮತಾ : ಅದು ಸರಿ, ಪ್ರೀತಿ ಪ್ರೇಮ ಅಂದರೇನು?

ಮಹೇಶ : ಯಾವ ರೀತಿ ಮರಳು ಸಿಮೆಂಟಿನ ಮಧ್ಯೆ ನೀರು ಬಂಧಕವಾಗಿರುವುದೋ, ಆ ರೀತಿ ನಮ್ಮಿಬ್ಬರ ನಡುವೆ ಪ್ರೀತಿ ಪ್ರೇಮ ಬಾಂಧವ್ಯ ಬೆಸೆಯುತ್ತದೆ.

ಮಮತಾ : ಅಯ್ಯೋ…. ನಿನ್ನ ಮುಖ ನೋಡಿದ್ರೆ ಸಿಮೆಂಟು ಜಲ್ಲಿ ಕೆಲಸ ಮಾಡೋ ತರಹ ಇದೆ, ಏನು ಬೇಡ…. ಇಲ್ಲಿಂದ ಹೋಗು!

 

ಗುಡಾಣದ ಹೊಟ್ಟೆಯ ಸಾಂಬಯ್ಯ ಗೊರಕೆ ಹೊಡೆಯುತ್ತಿದ್ದಾಗ, ಎಲ್ಲಿಂದಲೋ ಒಂದು ಇಲಿ ಬಂದು ಅವರ ಹೊಟ್ಟೆ ಮೇಲೆ ಕುಪ್ಪಳಿಸಿ, ಅಲ್ಲಿಂದ ಓಡಿಹೋಯಿತು. ಅದು ಅವರಿಗೆ ಗೊತ್ತಾಗದೆ ಗೊರಕೆ ಮುಂದುವರಿಸಿದ್ದರು.

ಅಕಸ್ಮಾತ್‌ ಎಚ್ಚರಗೊಂಡ ಅವರ ಹೆಂಡತಿ ಗಿರಿಜಮ್ಮನಿಗೆ ಗೊತ್ತಾಗಿ, ಆ ಹಾಳು ಇಲಿ ತಮ್ಮ ಮೇಲೆ ಎಗರಿದ್ದರೆ ಏನು ಗತಿ ಎಂಬ ಭಯದಲ್ಲಿ ತಮ್ಮ ನಿದ್ದೆ ಹಾಳಾಯಿತೆಂಬ ಹತಾಶೆಯಲ್ಲಿ, ಗಂಡನ ಗೊರಕೆ ನಿಂತಿಲ್ಲವಲ್ಲ ಎಂಬ ಕೋಪದಲ್ಲಿ ಕಿರುಚಿದರು, “ಏನ್ರಿ… ಏಳಿ ಏಳಿ! ನಿಮ್ಮ ಹೊಟ್ಟೆ ಮೇಲೆ ಇಲಿ ಕುಪ್ಪಳಿಸಿದರೂ ಗೊತ್ತಾಗದಂಥ ಏನು ಹಾಳು ನಿದ್ದೆ ನಿಮ್ಮದು?”

ತಮ್ಮ ನಿದ್ದೆ ಹಾಳು ಮಾಡಿದ ಹೆಂಡತಿಯ ಮೇಲೆ ಕೋಪ ಬಂದರೂ ತೋರಿಸಿಕೊಳ್ಳಲಾಗದೆ ಅಸಹಾಯಕತೆಯಿಂದ ಸಾಂಬಯ್ಯ, “ಅಯ್ಯೋ! ಒಂದು ಇಲಿ ತಾನೇ? ಹೋಗಲಿಬಿಡು, ಅದಕ್ಯಾಕೆ ನಡುರಾತ್ರಿ ನನ್ನ ನಿದ್ದೆ ಕೆಡಿಸಿ ಎಬ್ಬಿಸಬೇಕು?” ಎಂದರು.

“ನಿಮಗೇನು? ಇಲಿ ಅಲ್ಲ, ಹೆಗ್ಗಣ ಹೋದರೂ ಹಾಯಾಗಿ ಗೊರಕೆ ಹೊಡೀತೀರಿ. ನಿಮ್ಮ ಪಕ್ಕದಲ್ಲಿರುವ ನನಗೆ ತಾನೇ ಅದರಿಂದ ಪ್ರಾಣ ಭಯ? ಹೀಗೆ ಇರಿ, ನಾಳೆ ಹಾವು ಬಂದು ಹೊಕ್ಕುಳ ಸೇರಿಕೊಂಡು ಹುತ್ತ ಅಂತ ಇದ್ದುಬಿಡಲಿ,” ಎನ್ನುವುದೇ?

 

ಸರೋಜಮ್ಮ ತರಕಾರಿ ಕೊಳ್ಳಲೆಂದು ಅಂಗಡಿಗೆ ಹೋದರು. ಅಂಗಡಿಯವನು ಅಲ್ಲಿದ್ದ ಹಸಿ ತರಕಾರಿಗಳ ಮೇಲೆ ಸಾವಧಾನವಾಗಿ ನೀರು ಚಿಮುಕಿಸುತ್ತಿದ್ದ. ಸರೋಜಮ್ಮ ಎಷ್ಟು ಹೊತ್ತು ನಿಂತಿದ್ದರೂ ಆ ಕಡೆ ತಿರುಗದ ಮಹರಾಯ ತರಕಾರಿಗೆ ನೀರು ಚಿಮುಕಿಸುತ್ತಲೇ ಇದ್ದ.

ರೋಸಿ ಹೋದ ಸರೋಜಮ್ಮ ಕಿರುಚಿದರು, “ಏನಪ್ಪ, ನೀನು ನೀರು ಚಿಮುಕಿಸಿ ಆ ಬೆಂಡೆಕಾಯಿ, ಬದನೆಕಾಯಿಗಳಿಗೆ ಪ್ರಜ್ಞೆ ಮರಳಿದೆ ಅನ್ನಿಸಿದ್ರೆ…. ಎರಡನ್ನೂ ಅರ್ಧರ್ಧ ಕಿಲೋ ಕೊಡು!”

 

ಒಂದು ಇರುವೆ ಆನೆಯ ಬೆನ್ನೇರಿ ಸವಾರಿ ಮಾಡುತ್ತಾ ಪ್ರಯಾಣ ಹೊರಟಿತ್ತು. ಬಹಳ ದೂರ ಹೋದ ನಂತರ, ನದಿಯ ಮೇಲಿನ ಒಂದು ಸೇತುವೆ ದಾಟಬೇಕಾಯ್ತು. ಆಗ ಇರುವೆ ಆನೆಗೆ ಹೇಳಿತು, “ನೀನು ಈ ಸೇತುವೆ ದಾಟಬಲ್ಲೆಯಾ? ಅಥವಾ ನಾನು ಇಳಿದು ನಡೆದುಕೊಂಡೇ ಹೋಗಲೋ?”

 

ರಾಜು ತನ್ನ ಗರ್ಲ್ ಫ್ರೆಂಡ್‌ ನಿಮ್ಮಿಯ ಜೊತೆ ಜಗಳವಾಡಿದ. ನಿಮ್ಮಿಗೂ ಬಹಳ ಸಿಟ್ಟು ಬಂದಿತ್ತು. ತನ್ನ ಕೈಲಿದ್ದ ಹಾಕಿ ಬ್ಯಾಟ್‌ತೆಗೆದು ಅವನ ಕಾಲಿಗೆ ಬಾರಿಸಿದಳು. ಇದರಿಂದ ರಾಜುವಿನ ಕಾಲಿನ ಮೂಳೆ ಮುರಿಯಿತು.

ರಾಜುವಿಗೆ ಪ್ಲಾಸ್ಟರ್‌ ಹಾಕಿ ಒಂದು ದಿನದ ಮಟ್ಟಿಗೆ ಇರಲಿ ಎಂದು ಅಡ್ಮಿಟ್‌ ಮಾಡಿಕೊಂಡು ಬೆಡ್‌ ನಂ.181ರಲ್ಲಿ ಮಲಗಿಸಿದರು.

ರಾಜು ನೋಡುತ್ತಾನೆ, ಬೆಡ್‌ ನಂ.180ರಲ್ಲಿ ಅವನ ಗೆಳೆಯ ನಾಣಿ ಎರಡೂ ಕಾಲುಗಳಿಗೆ ಪ್ಲಾಸ್ಟರ್‌ ಹಾಕಿಸಿಕೊಂಡು ಮಲಗಿದ್ದಾನೆ.

ಮಲಗಿದ್ದ ನಾಣಿ ಎಚ್ಚರಗೊಂಡ ತಕ್ಷಣ ರಾಜು ಕೇಳಿದ ಮೊದಲ ಪ್ರಶ್ನೆ, “ನಿನಗೆ ಇಬ್ಬರು ಗರ್ಲ್ ಫ್ರೆಂಡ್ಸಾ?”

 

ಪ್ರಭಾಕರನಿಗೆ ದಿನ ಅವನ ತಾಯಿ ಆ ಸೊಪ್ಪು ಈ ಸೊಪ್ಪು ಎಂದು ಬಗೆಬಗೆಯ ಸೊಪ್ಪುಗಳ ಅಡುಗೆ ಮಾಡಿ ಬಡಿಸಿದ್ದೇ ಬಡಿಸಿದ್ದು. ಅದನ್ನೇ ತಿಂದು ತಿಂದೂ ಬೇಸತ್ತ ಪ್ರಭಾಕರ, “ಸಾಕಾಗಿ ಹೋಗಿದೆಯಮ್ಮ ಈ ಸೊಪ್ಪುಸೆದೆ ತಿಂದು, ನನ್ನೇನು ಕುರಿ ಮೇಕೆ ಅಂದುಕೊಂಡ್ಯಾ?” ಎಂದು ರೇಗಾಡಿದ.

“ಅಲ್ಲಪ್ಪ…. ಅದರಲ್ಲಿ ತುಂಬಾ ಐರನ್‌ ಸತ್ವವಿರುತ್ತದೆ ಎಂದು ನ್ಯೂಟ್ರಿಷನಿಸ್ಟ್ ಮೊನ್ನೆ ಟಿ.ವಿಯಲ್ಲಿ ಹೇಳ್ತಿದ್ರು…..”

“ಹಾಗೇಂತ ನನ್ನ ಕಬ್ಬಿಣದ ಸಲಾಕೆ ಮಾಡಬೇಕು ಅಂತಿದ್ದೀಯಾ….? ”

 

ಪ್ರೇಮಿಗಳಾದ ಪ್ರೇಮಾ ಪ್ರಕಾಶ್‌ ಇಬ್ಬರೂ ಸಂಜೆಯ ಸುತ್ತಾಟಕ್ಕೆ ಹೊರಟ್ಟಿದ್ದರು.

ಪ್ರೇಮಾ :  ಬೇರೆ ಹೋಟೆಲ್ಸ್ ಬೋರಾಗಿದೆ, ಮ್ಯಾಕ್‌ ಡೊನಾಲ್ಡ್ ಗೆ ಹೋಗೋಣ.

ಪ್ರಕಾಶ್‌ : ಹೋಗಬಹುದು….. ಆದರೆ…..

ಜಿಪುಣ ಪ್ರಕಾಶನಿಗೆ ಅಷ್ಟೊಂದು ಖರ್ಚು ಮಾಡುವ ಮನಸ್ಸಿರಲಿಲ್ಲ.

ಪ್ರಕಾಶ್‌ : ಅದಿರಲಿ, ಮೊದಲು ಮ್ಯಾಕ್‌ ಡೊನಾಲ್ಡ್ ಗೆ ಸ್ಪೆಲ್ಲಿಂಗ್‌ ಹೇಳು, ನೋಡೋಣ.

ಪ್ರೇಮಾ : ಹೋಗಲಿ ಬಿಡು… `ಕೆಎಫ್‌ಸಿ’ಗೆ ಹೋಗೋಣ.

ಪ್ರಕಾಶ್‌ : ಹೋಗಬಹುದು… ಆದರೆ

ಪ್ರಕಾಶ್‌ ಮತ್ತೆ ಯೋಚಿಸಿ ಹೊಸ ಪ್ರಶ್ನೆ ಕೇಳಿದ.

ಪ್ರಕಾಶ್‌ : ಅದಿರಲಿ, ಮೊದಲು `ಕೆಎಫ್‌ಸಿ’ ಫುಲ್ ಫಾರ್ಮ್ ಹೇಳು ನೋಡೋಣ….

ಪ್ರೇಮಾ : ಹಾಳಾಗಿ ಹೋಗಲಿ, 1 ಪ್ಲೇಟ್‌ ಪಾನಿಪೂರಿ ಕೊಡಿಸು…!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ