ಉಷಾ ಮತ್ತು ಭಾಸ್ಕರ್ ನಡುವೆ ಇಂದು ಮತ್ತೊಮ್ಮೆ ಜಗಳ ತಾರಕಕ್ಕೇರಿತ್ತು. ಇದರಿಂದ ಕಂಗೆಟ್ಟು ಭಯಗೊಂಡಿದ್ದ ಇಬ್ಬರು ಮಕ್ಕಳು ತಾವೇ ಹೇಗೋ ತಯಾರಾಗಿ ಶಾಲೆಗೆ ಹೊರಟುಬಿಟ್ಟರು. ಆಫೀಸಿನ ಸಮಯ ಸಮೀಪಿಸಿದಂತೆ ಭಾಸ್ಕರ್ ಕಾಫಿ ತಿಂಡಿಗೆ ಕಾಯದೇ ಸಿಡಿಗುಟ್ಟುತ್ತವೇ ಹೊರಟುಬಿಟ್ಟ. ಉಷಾಳ ಮೂಡ್ ಅಂತೂ ಮೊದಲೇ ಆಫ್ ಆಗಿತ್ತು. ಅವಳೂ ಮನೆಗೆ ಬೀಗ ಹಾಕಿ ದೂರದಲ್ಲಿದ್ದ ಗೆಳತಿ ವನಿತಾಳನ್ನು ಕಾಣಲು ಹೊರಟುಬಿಟ್ಟಳು.
ಉಷಾ ಕಾಲಿಂಗ್ ಬೆಲ್ ಅದುಮುತ್ತಿದ್ದಂತೆ ಅವಳ ಬಾಲ್ಯ ಗೆಳತಿ ವನಿತಾ ತಾನೇ ಬಾಗಿಲು ತೆರೆದು, ಇವಳನ್ನು ಆದರದಿಂದ ಬರಮಾಡಿಕೊಂಡಳು. ಬೆಳಗ್ಗೆ 11 ಗಂಟೆಗೆ ಆಗಮಿಸಿದ್ದ ಉಷಾ ಏನೋ ಗಲಾಟೆ ಮಾಡಿಕೊಂಡು, ಅದನ್ನು ತನ್ನೊಂದಿಗೆ ಹಂಚಿಕೊಳ್ಳಲು ಬಯಸುತ್ತಾಳೆ ಎಂದು ವನಿತಾಳಿಗೆ ಅರ್ಥವಾಯಿತು. ಏನೂ ಉತ್ತರಿಸದೆ ಒಳಬಂದು ಮೌನವಾಗಿ ಕುಳಿತ ಉಷಾ ಅದೇ ನಿಜ ಎನಿಸಿದಳು.
ಹೀಗಾಗಿ ವನಿತಾ ಏನಾಯಿತು ಎಂದು ಕಾಫಿ ಕೊಡುತ್ತಾ ಕೂಲಂಕಷವಾಗಿ ವಿಚಾರಿಸಿದಳು, “ಯಾಕೆ ಉಷಾ? ಇವತ್ತೇನಾದರೂ ನಿಮ್ಮ ರಾಯರ ಜೊತೆ ತಕರಾರಾ?” ಅವಳ ಕಕ್ಕುಲತೆಯ ನುಡಿಗಳಿಗೆ ಕರಗಿದ ಉಷಾ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.
“ಏನು ಹೇಳಲಿ ವನಿ…. ನಾನು ಭಾಸ್ಕರ್ನ ಎಷ್ಟು ಪ್ರೀತಿಸ್ತೀನಿ, ಅವರನ್ನು ಸದಾ ಸುಖವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತೀನಿ ಎಂದು ನಿನಗೆ ಗೊತ್ತೇ ಇದೆ. ನನ್ನ ಸ್ವಭಾವ ಚೆನ್ನಾಗಿ ಗೊತ್ತಿದ್ದರೂ ಒಂದಲ್ಲ ಒಂದು ವಿಷಯಕ್ಕೆ ಜಗಳಕ್ಕೆ ಎಳೀತಾರೆ. ರಾತ್ರಿ 11 ಗಂಟೆವರೆಗೂ ಟಿ.ವಿ. ನೋಡಿ ಮಲಗಿಬಿಡ್ತಾರೆ, ಬೆಳಗ್ಗೆ 6ಕ್ಕೆ ಮೊದಲೇ ಮೂಡ್ ತರಿಸಿಕೊಂಡು ಸೆಕ್ಸ್ ಬೇಕು ಅಂತಾರೆ. ಬೆಳ್ಳಂಬೆಳಗ್ಗೆ ಅದರ ಬಗ್ಗೆ ತಲೆ ಕೆಡಿಸಿಕೊಂಡರೆ, ಮನೆ ತುಂಬಾ ಇರೋ ಕೆಲಸ ಮಾಡೋರು ಯಾರು?”
ಒಂದು ಕ್ಷಣದಲ್ಲಿ ವನಿತಾಳಿಗೆ ವಿಷಯವೆಲ್ಲ ಅರ್ಥವಾಯಿತು. ಅವಳು ಪ್ರೀತಿಯಿಂದ ಉಷಾಳ ಬೆನ್ನು ತಟ್ಟುತ್ತಾ, “ಇಷ್ಟೇನಾ ವಿಷಯ? ಬೆಟ್ಟ ಅಗೆದು ಇಲಿ ಹಿಡಿದರು ಅಂದಹಾಗಾಯ್ತು. ನೀನು ಗಡಿಗೆ ಮುಖ ಮಾಡಿಕೊಂಡಿದ್ದು ನೋಡಿ ನಾನು ಏನಾಯ್ತೋ ಏನೋ ಅಂದುಕೊಂಡೆ, ಇಷ್ಟೇನಾ? ಇಷ್ಟು ದಿನಗಳ ದಾಂಪತ್ಯದ ನಂತರ ನೀನು ಬೋರ್ಡ್ ಆಗಿದ್ದಿ.
“ಅರೆ, ಬೆಳಗಿನ ಹೊತ್ತು ಸೆಕ್ಸ್ ಸವಿದರೆ ಅದರಲ್ಲಿ ತಪ್ಪೇನಿಲ್ಲ, ಸಂಕೋಚ ಇಲ್ಲ. ಪಾಪಪ್ರಜ್ಞೆ ಕಾಡಬೇಕಾಗಿಯೂ ಇಲ್ಲ. ನಾನು ಅರುಣ್ ಇಬ್ಬರೂ ಎಷ್ಟೋ ಸಲ ಇದರ ಲಾಭ ಪಡೆದಿದ್ದೇವೆ. ಇವರು ಆಫೀಸ್ ಕೆಲಸ ಮುಗಿಸಿ ಬರುವಷ್ಟರಲ್ಲಿ ಎಷ್ಟೋ ಸಲ 9 ಅಥವಾ 10 ಗಂಟೆ ಆಗಿಬಿಡುತ್ತೆ. ಇಬ್ಬರೂ ಸುಸ್ತಾಗಿರ್ತೀವಿ, ಉಂಡು ಮಲಗಿದರೆ ಸಾಕು ಅಂತ ಆಗಿರುತ್ತೆ. ಬೆಳಗ್ಗೆ ಎದ್ದಾಗ ಫ್ರೆಶ್ ಆಗ್ತೀಲ್ಲ, ಫುಲ್ ಮೂಡ್….. ಏನಂತೀಯಾ….?” ಎಂದು ಜೋರಾಗಿ ನಕ್ಕು ಉಷಾಳನ್ನು ತಬ್ಬಿದಾಗ, ಉಷಾಳಿಗಿದ್ದ ಸಂಕೋಚ ಎಷ್ಟೋ ಮರೆಯಾಯಿತು.
ಗಂಡಸರ ದೈಹಿಕ ಪ್ರವೃತ್ತಿ
ವನಿತಾ ಹೇಳಿದಂತೆ ಬೆಳಗಿನ ಹೊತ್ತು ಸೆಕ್ಸ್ ಅನುಭವಿಸುವುದು ಕೆಟ್ಟ ವಿಷಯವಲ್ಲ ಅಥವಾ ಅನುಚಿತ ಅಲ್ಲ. ಗಂಡಸರು ಹೆಚ್ಚಾಗಿ ಬೆಳಗಿನ ಹೊತ್ತು ಇದನ್ನು ಅಪೇಕ್ಷಿಸುತ್ತಾರೆ. ಆದರೆ ಉಷಾ ಹೇಳಿದ ಮಾತಿನಲ್ಲೂ ಉತ್ಪ್ರೇಕ್ಷೆ ಇಲ್ಲ. ಏಕೆಂದರೆ ಹೆಂಗಸರಿಗೆ ರಾತ್ರಿ ಹೊತ್ತಿನ ಸಮಾಗಮ ಹೆಚ್ಚು ಪ್ರಿಯವೆನಿಸುತ್ತದೆ, ಅದಾದ ಮೇಲೆ ಅವರಿಗೆ ವಿಶ್ರಾಂತಿಗೆ ಹೆಚ್ಚಿನ ಸಮಯ ಸಿಗುತ್ತದೆ. ಬೆಳಗಾದರೆ ಮನೆಗೆಲಸದ ಧಾವಂತ ಅವರನ್ನು ಇರಿಸುಮುರಿಸಿಗೆ ಒಳಪಡಿಸುತ್ತದೆ.
`ಗೆಟಿಂಗ್ ದಿ ಸೆಕ್ಸ್ ಯೂ ವಾಟ್’ ಕೃತಿಯ ಲೇಖಕ, ಸೆಕ್ಸ್ ರಿಲೇಶನ್ ಶಿಪ್ ಥೆರಪಿಸ್ಟ್ ಹಾಗೂ ಸಂಶೋಧಕ ಟ್ಯಾಮಿ ನೆಲ್ಸನ್ ಪ್ರಕಾರ, “ಗಂಡಸರ ದೇಹದಲ್ಲಿ ಟೆಸ್ಟೆಸ್ಟರಾನ್ ಸೆಕ್ಸ್ ಹಾರ್ಮೋನ್ ಹೆಚ್ಚಾಗಿ ಸ್ರವಿಸಲ್ಪಡುವುದು ರಾತ್ರಿ ಹೊತ್ತಿನಲ್ಲೇ…. ಹೀಗಾಗಿ ಬೆಳಗಿನ ಹೊತ್ತು ಅದು ಅವರನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತದೆ.
“ಇಷ್ಟಲ್ಲದೆ ಗಂಡಸರಲ್ಲಿ ಬೆಳಗಿನ ಹೊತ್ತು ಲ್ಯಾಸೋಪ್ರೊಸಿನ್ ಎಂಬ ಮತ್ತೊಂದು ಹಾರ್ಮೋನ್ ಸಹ ಸ್ರವಿಸುವುದರಿಂದ, ಅವರಿಗೆ ಭಾವನಾತ್ಮಕ ಅಟ್ಯಾಚ್ಮೆಂಟ್ ಹೆಚ್ಚಾಗುವಂತೆ ಮಾಡುತ್ತದೆ. ಇದು ಅವರ ಅಂಗವನ್ನು ಹೆಚ್ಚು ಗಡುಸುಗೊಳಿಸುತ್ತದೆ. ಹೀಗಾಗಿ ಅವರು ಬೆಳಗಿನ ಹೊತ್ತು ಲೈಂಗಿಕ ಸುಖ ಬಯಸುತ್ತಾರೆ.”
ನ್ಯೂರೋ ಎಂಡೊಕ್ರೈನಾಲಜಿಯ ಪ್ರೊಫೆಸರ್ ಆ್ಯಶ್ಲೆ ಗ್ರಾಸ್ ಮ್ಯಾನ್ರ ಪ್ರಕಾರ, “ಗಂಡಸರಿಗೆ ಬೆಳಗ್ಗೆ 5-6 ಗಂಟೆ ಹೊತ್ತಿಗೆ ಎಚ್ಚರವಾದಾಗ, ಅವರ ಟೆಸ್ಟೆಸ್ಟರಾನ್ ಲೆವೆಲ್ ಇಡೀ ದಿನಕ್ಕಿಂತ ಆ ಹೊತ್ತಿನಲ್ಲಿ ಶೇ.25-50ರಷ್ಟು ಹೆಚ್ಚಿರುತ್ತದೆ. ಹೀಗಾಗಲು ಕಾರಣ, ಗಂಡಸರ ಸೆಕ್ಸ್ ಹಾರ್ಮೋನ್ ಉತ್ಪಾದಿಸುವ ಪಿಟ್ಯುಟರಿ ಗ್ರಂಥಿ ರಾತ್ರಿ ಹೊತ್ತು ಸ್ವಿಚ್ ಆನ್ ಆಗಿರುತ್ತದೆ. ಗಂಡಸರಿಗೆ ಸೆಕ್ಸ್ ನ ಅಪೇಕ್ಷೆ ಟೆಸ್ಟೆಸ್ಟರಾನ್ನ ಸಾಮಾನ್ಯ ಮಟ್ಟದಿಂದಲೇ ಶುರುವಾಗುತ್ತದೆ. ಮುಖ್ಯವಾಗಿ ಬೆಳಗಿನ ಹೊತ್ತು ಇದರ ಮಟ್ಟ ಹೆಚ್ಚಾಗುವುದರಿಂದ ವಾರದಲ್ಲಿ 2-3 ಸಲವಾದರೂ ಎರೆಕ್ಷನ್ ಕಾರಣ ಅವರ ನಿದ್ದೆ ತಂತಾನೇ ದೂರವಾಗುತ್ತದೆ.”
ವ್ಯತ್ಯಾಸವಾಗಲು ಕಾರಣ
ಗಂಡಸರ ಟೆಸ್ಟೆಸ್ಟರಾನ್ ಲೆವೆಲ್ ಸಂಜೆಯಾಗುತ್ತಿದ್ದಂತೆ ಕಡಿಮೆಯಾಗುತ್ತಾ ಆಗುತ್ತಾ, ರಾತ್ರಿ ಹೊತ್ತಿಗೆ ಅದು ಬಹುತೇಕ ನಿಲ್ ಲೆವೆಲ್ ಗೆ ಬರುತ್ತದೆ. ಆದರೆ ಹೆಂಗಸರಲ್ಲಿ ಇದರ ತದ್ವಿರುದ್ಧ ಕ್ರಿಯೆ ನಡೆದು, ರಾತ್ರಿ ಹೊತ್ತು ಅವರ ಸೆಕ್ಸ್ ಹಾರ್ಮೋನ್ ಗರಿಷ್ಠ ಮಟ್ಟ ತಲುಪುತ್ತದೆ. ಹೆಂಗಸರಲ್ಲಿ ಮುಖ್ಯವಾಗಿ ಮುಟ್ಟಿನ ಸಮಯದಲ್ಲಿ ಸೆಕ್ಸ್ ಹಾರ್ಮೋನಿನ ಸ್ರಾವದಲ್ಲಿ ಹೆಚ್ಚು ಏರಿಳಿತ ಕಂಡುಬರುತ್ತದೆ. ಹೆಂಗಸರ ಸೆಕ್ಸ್ ಲೈಫ್ನ್ನು ಅವರ ಒಳಮನಸ್ಸು ಹೆಚ್ಚು ಪ್ರಭಾವಗೊಳಿಸುತ್ತದೆ. ಹೀಗಾಗಿಯೇ `ಮೀನಿನ ಹೆಜ್ಜೆ, ಹೆಣ್ಣಿನ ಮನದಾಳ ಬಲ್ಲವರಿಲ್ಲ’ ಎಂಬ ನಾಣ್ಣುಡಿ ಜಾರಿಗೆ ಬಂದಿದೆ.
– ಶೀಲಾ ಶೇಖರ್