ನಮ್ಮ ಬಡಾವಣೆಯಲ್ಲಿ ವಾಸಿಸುತ್ತಿದ್ದ ಶಶಿಧರ್‌ಒಂದು ದಿನ ದೂರದ ಕಾಲೋನಿಯಲ್ಲಿ ಆಕಸ್ಮಿಕವಾಗಿ ಭೇಟಿಯಾದರು. “ನೀವು ಇಲ್ಲಿ ಹೇಗೆ?” ಎಂದು ಅವರನ್ನು ಕೇಳಿದಾಗ, “ನಾನು ಈಗ ಮನೆಯನ್ನು ಇಲ್ಲಿಯೇ ಶಿಫ್ಟ್ ಮಾಡಿದ್ದೇನೆ,” ಎಂದು ಹೇಳಿದರು. ನಾನು ಅವರ ಮನೆಗೆ ಭೇಟಿ ನೀಡಿದಾಗ ಹಳೆಯ ಮನೆಯನ್ನು ಮಾರುವುದರ ಹಿಂದಿನ ಕಾರಣಗಳನ್ನು ಒಂದೊಂದಾಗಿ ಹೇಳತೊಡಗಿದರು.
“ಹಳೆಯ ಮನೆಯಲ್ಲಿ ನಾನು 5 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೆ. ಮಗಳ ಮದುವೆ 5 ಸಲ ನಿಶ್ಚಿತಾರ್ಥದ ಹಂತಕ್ಕೆ ಬಂದು ಮುರಿದು ಬಿತ್ತು. ಮನೆಯಲ್ಲಿ ಸದಾ ಜಗಳಗಳಾಗುತ್ತಿದ್ದವು. ತಲೆಯ ಮೇಲೆ ಸಾಲದ ಹೊರೆ ಹೆಚ್ಚುತ್ತ ಹೊರಟಿತ್ತು. ಆಗ ನನಗೆ ಅನೇಕ ಜನರು ಇದೆಲ್ಲ ಆಗ್ತಿರೋದು ಮನೆಯ ವಾಸ್ತು ದೋಷದ ಕಾರಣದಿಂದ ಎಂದು ಹೇಳಿದರು. ಹಾಗಾಗಿ ನಾನು ಹಳೆಯ ಮನೆಯನ್ನು ಮಾರಿ ಹೊಸ ಮನೆಯನ್ನು ಕೊಂಡುಕೊಂಡೆ,” ಎಂದು ಹೇಳಿದರು.
“ಈ ಮನೆಯನ್ನು ಮೊದಲೇ ಖರೀದಿಸಿ ಇಡಲಾಗಿತ್ತೆ?” ಎಂಬ ನನ್ನ ಪ್ರಶ್ನೆಗೆ ಅವರು, “ಇಲ್ಲ ಇಲ್ಲ. ಈ ಮನೆಯನ್ನು ಮೊದಲು ಬಾಡಿಗೆಗೆ ಕೊಡಲಾಗಿತ್ತು. ಅವರನ್ನು ಖಾಲಿ ಮಾಡಿಸಿ ನನ್ನ ಅಧೀನಕ್ಕೆ ಒಪ್ಪಿಸಿದರು. ಆ ಬಳಿಕ ನಾನು ವಾಸ್ತು ರೀತಿಯಲ್ಲಿ ಇದನ್ನು ಬಹಳಷ್ಟು ಬದಲಾಯಿಸಿದೆ. ಅದಕ್ಕೆ 8 ಲಕ್ಷ ರೂ. ಖರ್ಚು ಬಂತು,” ಎಂದರು.
ಈಗ ಮಾತನಾಡುವ ಸರದಿ ನನ್ನದಾಗಿತ್ತು. “ಹಳೆಯ ಮನೆಯಲ್ಲಿದ್ದಾಗ ನಿಮ್ಮ ತಮ್ಮ ಐಎಎಸ್ ಅಧಿಕಾರಿಯಾದ. ನೀವು ಫ್ಯಾಕ್ಟರಿಗಳ ಸಂಖ್ಯೆಯನ್ನು 1 ರಿಂದ 6 ಮಾಡಿದಿರಿ. ಬಳಿಕ ಈ ಮನೆಯನ್ನು ಕೊಂಡುಕೊಂಡಿರಿ. ಮನೆಯಲ್ಲಿ ಕುಳಿತುಕೊಂಡೇ ಸಾಕಷ್ಟು ಬಾಡಿಗೆ ಹಣ ಬರುತ್ತಲಿತ್ತು. ಈಗ ಒಮ್ಮೆಲೆ ಆ ಮನೆ ನಿಮಗೆ ವಾಸ್ತು ಕಾರಣದಿಂದ ಶಾಪವಾಗಿ ಪರಿಣಮಿಸಿದೆ ಎಂದರೆ ನನಗೆ ಏಕೊ ನಂಬೋಕೆ ಆಗಿಲ್ಲ,” ಎಂದೆ. ನನ್ನ ಮಾತಿಗೆ ಅವರು ಪ್ರತಿಕ್ರಿಯೆ ಕೊಡಲು ಹೋಗಲಿಲ್ಲ.
ಇಂದು ಎಲ್ಲೆಲ್ಲೂ ಇದೇ ಸ್ಥಿತಿ ಇದೆ. ಒಂದಿಷ್ಟು ಸಮಸ್ಯೆಯಾದರೂ ಸಾಕು, ಜನ ವಾಸ್ತು ಕಡೆಗೆ ಹೆಜ್ಜೆ ಹಾಕತೊಡಗುತ್ತಾರೆ.
ವಾಸ್ತುವಿನ ಪ್ರಚಾರ ಪ್ರಸಾರದ ಕಾರಣದಿಂದ ದೊಡ್ಡ ದೊಡ್ಡ ಬಂಗ್ಲೆಗಳು ಭಾರಿ ಭಾರಿ ಬದಲಾವಣೆ ಕಾಣುತ್ತಿವೆ.
ಇಂದು ಮನೆಯ ಹಿರಿಯರಲ್ಲಿ ಯಾರನ್ನಾದರೂ ಮಾತನಾಡಿಸಿದಲ್ಲಿ ತಮ್ಮ ಕಾಲದಲ್ಲಿ ಇಂಥದೇನೂ ಇರಲಿಲ್ಲ ಎಂದು ಹೇಳುತ್ತಾರೆ. ಅಬಕಾರಿ ಕಮೀಷನರ್ ಆಗಿ ಈಚೆಗಷ್ಟೇ ನಿವೃತ್ತರಾದ ಹರಿಪ್ರಸಾದ್ ಹೀಗೆ ಹೇಳುತ್ತಾರೆ, “ಧಾರವಾಡದಲ್ಲಿರುವ ನಮ್ಮ ಮನೆ ಇಬ್ಬರು ಐಪಿಎಸ್ ಮತ್ತು ಒಬ್ಬ ಐಎಎಸ್ ಅಧಿಕಾರಿಯನ್ನು ಕೊಟ್ಟಿದೆ. ಅಂತಹ ದಕ್ಷಿಣಾಭಿಮುಖಿ ಮನೆಯನ್ನು ನಾವು ಎಂದೂ ಅಶುಭ ಎಂದು ಭಾವಿಸಿಲ್ಲ. ತಮ್ಮ ಮನಸ್ಸಿನಲ್ಲಿ ವಾಸ್ತುವಿನ ಬಗ್ಗೆ ಯಾವುದೇ ವಿಚಾರಗಳು ಬಂದಿಲ್ಲ,” ಎಂದು ಹೇಳಿದರು.
ವಾಸ್ತವ ಏನು?
ಮೂಢನಂಬಿಕೆಯಿಂದ ಪ್ರೇರಿತ ಕೆಲವು ವಾಸ್ತು ತಜ್ಞರನ್ನು ಮಾತನಾಡಿಸಿದಾಗ, ಈ ಉದ್ಯೋಗ ಅವರ ಆದಾಯದ ಮೂಲವೇ ಹೊರತು ಬೇರೇನೂ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದೊಂದು ಆಧುನಿಕ ಭಾರತೀಯ ವಿಚಾರಧಾರೆ. ಇದರ ಹಿಂದೆ ಚೀನಾದ ಫಿಂಗ್ ಶೂಯಿಯ ಪ್ರಭಾವ ಇದೆ.
ಯಾವ ರೀತಿ ಚೀನಿಯರು ತಮ್ಮ ದೇಶದ ಉತ್ಪಾದನೆಗಳನ್ನು ಮಾರಲು ಫೆಂಗ್ ಶೂಯಿ ಥಿಯರಿಯನ್ನು ಪ್ರಚಾರ ಮಾಡಿದರೊ, ಅದೇ ರೀತಿ ಭಾರತದಲ್ಲಿ ತಮ್ಮ ಉತ್ಪಾದನೆಗಳನ್ನು ಮಾರಾಟ ಮಾಡಲು ವಾಸ್ತುವಿನ ಸಿದ್ಧಾಂತ ಪ್ರಸ್ತಾಪಿಸಿದರು. ಇಲ್ಲಿನ ಧರ್ಮೋಲುಪ ಜನರೆದುರು ಬಗೆ ಬಗೆಯ ವಿಚಾರ ಮಂಡಿಸಿ ವಾಸ್ತುವನ್ನು ಒಂದು ಅತ್ಯಂತ ಹಳೆಯ ಶಾಸ್ತ್ರ ಎಂಬಂತೆ ಪ್ರಚಾರ ಮಾಡಿದರು.
ಬೆಂಗಳೂರಿನ ವಾಸ್ತು ಶಾಸ್ತ್ರಜ್ಞರೊಬ್ಬರ ಪ್ರಕಾರ, ದಕ್ಷಿಣ ದಿಸೆಯಲ್ಲಿ ತನ್ನ ಅರಮನೆ ಹೊಂದಿದ್ದ ಕಾರಣದಿಂದಾಗಿಯೇ ರಾವಣ ಹಾಗೂ ಅವನ ಸಮಸ್ತ ಶೂರವೀರರು ಒಬ್ಬೊಬ್ಬರಾಗಿ ಧರೆಗೆ ಉರುಳಿದರು. ದಕ್ಷಿಣಾಭಿಮುಖವಾಗಿ ಇದ್ದ ಕಾರಣದಿಂದಾಗಿಯೇ ಅವನಿಗೆ ಅವನ ಅರಮನೆ ದಕ್ಕಲಿಲ್ಲ.
ಒಬ್ಬ ವಾಸ್ತು ಶಾಸ್ತ್ರಜ್ಞರು ಈಜಿಪ್ಟ್ ನ ಪಿರಮಿಡ್‌ಗಳ ಉದಾಹರಣೆ ಕೊಡುತ್ತಾರೆ, ಇನ್ನೊಬ್ಬರು ಮಹಾರಾಣಿ ಕೈಕೇಯಿಯ ಅರಮನೆ ಮತ್ತು ಪಾಂಡವರ ಅರಗಿನ ಮನೆ ಎರಡೂ ದಕ್ಷಿಣ ದಿಕ್ಕಿನಲ್ಲಿ ಇದ್ದುದರಿಂದ ಅವು ಅವರಿಗೆ ಶುಭವನ್ನುಂಟು ಮಾಡಲಿಲ್ಲ, ಎನ್ನುತ್ತಾರೆ.
ದೊಡ್ಡ ದೊಡ್ಡ ಬಿಲ್ಡರ್‌ಗಳು ವಾಸ್ತು ಪ್ರಕಾರ ಕಟ್ಟಡ ನಿರ್ಮಿಸಲು ಪ್ರತಿ ಚದರ ಅಡಿಗೆ 1000 ದಿಂದ 1500 ರೂ. ಹೆಚ್ಚಿಗೆ ಖರ್ಚು ಬರುತ್ತದೆ ಎಂದು ಹೇಳುತ್ತಾರೆ.
ಮಾಧ್ಯಮಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ವಾಸ್ತು ಪ್ರಕಾರದ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡುತ್ತಿರುವುದರಿಂದ ಅದೀಗ ಜನರ ಮನಸ್ಸಿನಲ್ಲಿ ಹೆಚ್ಚೆಚ್ಚು ಆಳವಾಗಿ ಬೇರೂರಿಬಿಟ್ಟಿದೆ, ಇತ್ತೀಚೆಗಷ್ಟೇ ನಡೆದ ಒಂದು ಸಮೀಕ್ಷೆಯಿಂದ ತಿಳಿದುಬಂದ ಸಂಗತಿಯೆಂದರೆ, ಶೇ.75ರಷ್ಟು ಜನ ತಮ್ಮ ಕಾರ್ಯಸ್ಥಳ ಮತ್ತು ಮನೆಗಳಲ್ಲಿ ವಾಸ್ತು ದೀಪ ಇಡುತ್ತಾರೆ.
ಭಾರತದ ವಾಸ್ತುವಿಗೂ ಚೀನಾದ ವಾಸ್ತುವಿಗೂ ವಿಧಾನದಲ್ಲಷ್ಟೇ ವ್ಯತ್ಯಾಸವಿದೆ. ಭಾರತದ ವಾಸ್ತು `ಕೆಡವು, ಕಟ್ಟಿಸು’ ಎಂಬ ತತ್ವವನ್ನಾಧರಿಸಿದೆ. ಅದರ ಪ್ರಕಾರ ದಿಕ್ಕುಗಳು, ದಿಕ್ಕುಗಳ ಕೋನ, ಅಲ್ಲಿ ವಾಸಿಸುವ ಜೀವಿದೇವತೆಗಳು, ಬಣ್ಣ, ಸಸಿಬಳ್ಳಿಗಳು ಇವೆಲ್ಲ ಬರುತ್ತವೆ.
ಚೀನಿ ಭಾಷೆಯಲ್ಲಿ `ಫೆಂಗ್’ ಅಂದರೆ `ಗಾಳಿ’ ಮತ್ತು `ಶುಯಿ’ ಅಂದರೆ ನೀರು ಎಂದರ್ಥ. `ಫೆಂಗ್ ಶೂಯಿ’ಯ ಪೂರ್ಣ ಅರ್ಥ `ಅತಿ ಶುಭ’ ಎಂದು. ಇದರ ಅರ್ಥ ವಿಂಡ್ ಚೈಮ್, ಕ್ರಿಸ್ಟಲ್ ಪಿರಮಿಡ್, ಲಾಫಿಂಗ್ ಬುದ್ಧ ಮುಂತಾದವುಗಳ ಮುಖಾಂತರ ಯಾವುದೇ ಸ್ಥಳದ ವಾಸ್ತುವನ್ನು ಸರಿಪಡಿಸುವುದಾಗಿರುತ್ತದೆ.
ಈಗ ಟಿ.ವಿಯ ಬೇರೆ ಬೇರೆ ಚಾನೆಲ್ ಗಳಲ್ಲಿ ಸ್ವಯಂಘೋಷಿತ ದೊಡ್ಡ ದೊಡ್ಡ ವಾಸ್ತು ತಜ್ಞರು ಮುಂಜಾನೆ ಸಂಜೆ ಕಂಡು ಬರುತ್ತಿರುತ್ತಾರೆ. ಅವರು ನಿಮಗೆ ಹತ್ತು ಹಲವು ಉಪಾಯಗಳನ್ನು ಸೂಚಿಸುತ್ತಿರುತ್ತಾರೆ. ಅವರು ತಾವು ಹಳೆಯ ಹೊಸದರ ಸಂಗಮ ಎನ್ನುವಂತೆ ಉಪಾಯ ಸೂಚಿಸುತ್ತಿರುವುದಾಗಿಯೂ ಹೇಳಿಕೊಳ್ಳುತ್ತಾರೆ. ನಿಮಗೆ ಮನೆಯನ್ನು ಎಲ್ಲೆಲ್ಲಿ ಒಡೆದು ಹೇಗ್ಹೇಗೆ ಕಟ್ಟಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಒಂದು ವೇಳೆ ಮನೆ ಒಡೆಯುವುದಕ್ಕೆ `ಇಲ್ಲ’ ಎಂದು ಹೇಳಿದರೂ ಅವರು ಕ್ರಿಸ್ಟಲ್, ಪಿರಮಿಡ್, ಬಣ್ಣದ ಚೆಂಡು, ನೀರಿನ ಮಡಿಕೆಗಳನ್ನು ಎಲ್ಲೆಲ್ಲಿ ಇಡಬೇಕೆಂದು ಸಲಹೆ ಕೊಡುತ್ತಾರೆ. ಹಾಗೆಲ್ಲ ಮಾಡಿದರೆ ನೀವು ಸಾಕಷ್ಟು ಆಸ್ತಿಪಾಸ್ತಿಗೆ ಒಡೆಯರಾಗುತ್ತೀರಿ ಎಂದು ನಿಮಗೆ ನಂಬಿಕೆ ಹುಟ್ಟಿಸುತ್ತಾರೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆ ಕಟ್ಟಿಸಲು ಮುಖ್ಯವಾಗಿ ಆಭರಣ, ಕನ್ನಡಿ ಪಿರಮಿಡ್, ಕ್ರಿಸ್ಟಲ್ ಮತ್ತು ರುದ್ರಾಕ್ಷಿಗಳನ್ನು ಉಪಯೋಗಿಸಲು ಹೇಳಲಾಗುತ್ತದೆ.
ಇನ್ನು ಹಲವು ಸಲಹೆಗಾರರು `ಫೆಂಗ್ ಶೂಯಿ’ ಆಧಾರಿತ ವಸ್ತುಗಳು ಅಂದರೆ ಬಣ್ಣದ ಚೆಂಡು, ಚಿತ್ರಗಳು, ಚಿಕ್ಕ ಜಲಪಾತಗಳು, ಫಿಶ್ ಟ್ಯಾಂಕ್ ಮತ್ತು ಧ್ವಜಗಳನ್ನು ಬಳಸಲು ಸಲಹೆ ನೀಡುತ್ತಾರೆ. ನಿರ್ಮಾಣ ಹಂತದಲ್ಲಿರುವ ಮನೆಗಳಲ್ಲಿ ವಾಸ್ತು ಕಲೆಗೆ ಸಂಬಂಧಪಟ್ಟ ಉಪಾಯಗಳನ್ನು ಅನುಸರಿಸುವುದು ಅಷ್ಟೇನೂ ದುಬಾರಿ ಎನಿಸದು. ಆದರೆ ಒಂದು ಸಲ ಅಂದಚೆಂದವಾಗಿ ಕಟ್ಟಿಸಿದ ಮನೆಯನ್ನು ಒಡೆಯುವುದು, ಪುನರ್ ರೂಪಿಸುವುದು ದುಬಾರಿಯಾಗಿ ಪರಿಣಮಿಸುತ್ತದೆ.
ಮತ್ತೊಂದು ವಿಧಾನ `ನವರತ್ನ’ ಎಂದು ಕರೆಯಿಸಿಕೊಳ್ಳುತ್ತದೆ. ಅದರಲ್ಲಿ ಮನೆಯ ನೆಲದಡಿ ಆಭರಣವನ್ನು ಹೂಳಲಾಗುತ್ತದೆ. ಅದಕ್ಕಾಗಿ ಹೆಸರಾಂತ ಚಿನ್ನಾಭರಣ ಅಂಗಡಿಗಳಿಂದಲೇ ಆಭರಣ ಖರೀದಿಸಲಾಗುತ್ತದೆ.
ಪ್ರಸಿದ್ಧ ಟಿ.ವಿ ಚಾನೆಲೊಂದರಲ್ಲಿ ವಾಸ್ತುವಿಗೆ ಸಂಬಂಧಪಟ್ಟಂತೆ ಒಂದು ಕಾರ್ಯಕ್ರಮ ಲೈವ್ ಪ್ರಸಾರವಾಗುತ್ತಲಿತ್ತು. ನಾನು ಸಹ ಫೋನ್ ಮಾಡಿ ನನ್ನ ಎರಡು ಖಾಸಗಿ ವಿಷಯಗಳನ್ನು ತಿಳಿಸಿದೆ. ಅದಕ್ಕೆ ಆ ಕಡೆಯಿಂದ ನಿಮ್ಮ ಮನೆಯಲ್ಲಿ ವಾಸ್ತುವಿನ ಗಂಭೀರ ದೋಷವಿದೆ ಎಂದು ಹೇಳಿದರು. ಈ ಮನೆಯಲ್ಲಿ ಹಲವಾರು ಮಂಗಳ ಕಾರ್ಯಕ್ರಮಗಳು ನಡೆದಿವೆ. ನಾನು ಇದೇ ಮನೆಯಲ್ಲಿಯೇ ಏನೆಲ್ಲ ಸಾಧನೆ ಮಾಡಿದ್ದು ಎಂದು ಹೇಳುತ್ತಿದ್ದಂತೆ ಫೋನ್ ಲೈನ್ ಕಟ್ ಆಯಿತು.
2 ವರ್ಷಗಳ ಹಿಂದಿನ ಮಾತು. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ಹೊರವಲಯದಲ್ಲಿ ಒಂದು ಮನೆ ಕಟ್ಟಿಸಿದ್ದರು. ಆ ಸಮಾರಂಭದಲ್ಲಿ ನಾನು ಸಹ ಉಪಸ್ಥಿತನಿದ್ದೆ. ನನ್ನ ಬಾಯಿಂದ, “ನಿಮ್ಮ ಮನೆಯಲ್ಲಿ ಏನೂ ಕೊರತೆ ಉಳಿದಿಲ್ಲ ತಾನೆ?” ಎಂದು ಮಾತು ಹೊರಬೀಳುತ್ತಿದ್ದಂತೆ. ಅವರು ತಕ್ಷಣವೇ, “ಇದು ಜಗತ್ತಿನ ಸಂಪೂರ್ಣ ವಾಸ್ತು ಪ್ರಕಾರದ ಒಂದು ಜೀವಂತ ಉದಾಹರಣೆ ಎಂದು ಖುಷಿಯಿಂದ ಹೇಳಿಕೊಂಡರು.
ಅವರು ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಂತೆ ಮಗನ ಮದುವೆ ಮಾಡಿದರು. ಮದುವೆಯಾದ ಒಂದು ತಿಂಗಳಿನಲ್ಲಿ ಹೆಂಡತಿಯ ಮನೆಯವರೊಂದಿಗೆ ಹೊಡೆದಾಡಿ ಕೋರ್ಟು ಕಚೇರಿ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಯಿತು.
ಆದಾಯದ ಹೆಚ್ಚುವರಿ ಮೂಲವಾಗಿರುವ ಕಾರಣದಿಂದ ಈಗ ದೊಡ್ಡ ದೊಡ್ಡ ಆರ್ಕಿಟೆಕ್ಟ್ ಗಳು ಕೂಡ ಈ ವಾಸ್ತುಶಾಸ್ತ್ರದ ಆಧಾರ ಪಡೆದುಕೊಳ್ಳಲಾರಂಭಿಸಿದ್ದಾರೆ. ಒಂದು ವೇಳೆ ನೀವು ಮನೆ ಅಥವಾ ಸಂಸ್ಥೆಯ ಪ್ಲ್ಯಾನ್ ಮಾಡಿಸಲು ಹೋದಾಗ ನಿಮ್ಮ ಬಾಯಿಂದ ಅಪ್ಪಿ ತಪ್ಪಿ `ವಾಸ್ತು’ ಎಂಬ ಶಬ್ದ ಹೊರಬಿದ್ದರೆ ಸಾಕು ಆರ್ಕಿಟೆಕ್ಟ್ ನ ಖರ್ಚು 3 ಪಟ್ಟು ಹೆಚ್ಚಾಯ್ತು ಎಂದೇ ಭಾವಿಸಿ. ವಾಸ್ತುವಿನ ಸುಳಿಯಲ್ಲಿ ಅನಕ್ಷರಸ್ತರಿಗಿಂತ ಚೆನ್ನಾಗಿ ಓದು ಬರಹ ಬಲ್ಲ ಡಾಕ್ಟರ್, ಎಂಜಿನಿಯರ್, ಉಪನ್ಯಾಸಕರು ಹೀಗೆ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರೇ ಸಿಲುಕುತ್ತಿದ್ದಾರೆ.
ಸಾವಿರಾರು ಉದಾಹರಣೆಗಳ ಬಗ್ಗೆ ಕಂಡು ಕೇಳಿದ ಬಳಿಕ, ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದಾಗ ಇದೊಂದು ಶಾಸ್ತ್ರ ಅಥವಾ ವಿದ್ಯೆ ಅಲ್ಲವೇ ಅಲ್ಲ ಎಂದು ಸಾಬೀತಾಗುತ್ತದೆ. ಯಾವುದೇ ವಾಸ್ತುವಿನ ಸ್ಪರ್ಶವಿಲ್ಲದೆ ಕೂಲಿ ಕಾರ್ಮಿಕರ ಮಕ್ಕಳು ಕೂಡ ಕೆಎಎಸ್, ಐಎಎಸ್, ಸಿ.ಎ. ಪರೀಕ್ಷೆ, ಬ್ಯಾಂಕ್ ಪರೀಕ್ಷೆಗಳಲ್ಲಿ ರಾಂಕ್ ಪಡೆಯುತ್ತಿದ್ದಾರೆ. ವಾಸ್ತುವಿನ ಬಗ್ಗೆ ಬಿಡಿ, ಅವರ ಮನೆಯಲ್ಲಿ ಸರಿಯಾಗಿ ಊಟ ಮಾಡಲು ಕೂಡ ವ್ಯವಸ್ಥೆ ಇಲ್ಲ. ಹಣ ಗಳಿಸುವುದು ಕಷ್ಟಕರ ಅಲ್ಲ, ಅದಕ್ಕಾಗಿ ಜನರನ್ನು ಮೂರ್ಖರನ್ನಾಗಿಸುವುದೊಂದು ಗೊತ್ತಿದ್ದರೆ ಸಾಕು ಎಂದು ಯಾರೊ ಹೇಳಿದ್ದು ವಾಸ್ತುವಿನ ಬಾಬತ್ತಿನಲ್ಲಿ ಸರಿಯಾಗೇ ಇದೆ.
– ರಘುನಂದನ್