ಮನೆಯ ಸ್ವಚ್ಛತೆ, ಅಲಂಕಾರಗಳಿಗೆ ಗಮನ ಕೊಡುವಂತೆ ನಿಮ್ಮ ಇಡೀ ಕುಟುಂಬದ ಆರೋಗ್ಯದ ಜವಾಬ್ದಾರಿಯೂ ಇದೆಯೇ? ಇಲ್ಲದಿದ್ದರೆ ಈಗಲಾದರೂ ನಿಮ್ಮ ಜೊತೆಗೆ ಮನೆಯವರೆಲ್ಲರನ್ನೂ ಆರೋಗ್ಯವಾಗಿಡುವ ಜವಾಬ್ದಾರಿ ಹೊರುವುದಾಗಿ ಪಣ ತೊಡಿ. ಅದಕ್ಕಾಗಿ ನಿಮ್ಮ ಕಿಚನ್ ಮೇಕ್ ಓವರ್‌ಮಾಡಿ.
ಏಕೆಂದರೆ ಕಿಚನ್ ಸ್ವಚ್ಛವಾಗಿ ಆರೋಗ್ಯಕರ ವಾತಾವರಣದಿಂದ ಕೂಡಿದ್ದರೆ ನಿಮ್ಮ ಜೊತೆಗೆ ನಿಮ್ಮ ಮನೆಯವರೆಲ್ಲರ ಆರೋಗ್ಯ ಸರಿಯಾಗಿರುತ್ತದೆ. ಇಂಟೀರಿಯರ್ ಡಿಸೈನರ್ ಆರತಿಯವರಿಂದ ಕಡಿಮೆ ಬಜೆಟ್‌ನಲ್ಲಿ ಕಿಚನ್‌ನ ಮೇಕ್ ಓವರ್ ಮಾಡುವ ಬಗ್ಗೆ ತಿಳಿದುಕೊಳ್ಳೋಣ :
ಸ್ಮಾರ್ಟ್ ಕಿಚನ್ ಮಾಡಿ
ನಿಮ್ಮ ಹಳೆಯ ಕಿಚನ್‌ನಿಂದ ಬೋರ್ ಆಗಿದ್ದು ಅದಕ್ಕೆ ಫ್ರೆಶ್ ಲುಕ್ ಕೊಡಲು ಬಯಸುತ್ತಿರಬಹುದು. ಹಬ್ಬಗಳ ಸಂದರ್ಭಗಳಲ್ಲಿ ಅನೇಕ ಕಂಪನಿಗಳು ಬಹಳಷ್ಟು ಆಫರ್‌ಗಳನ್ನು ಕೊಡುತ್ತವೆ. ಈ ಆಫರ್‌ಗಳನ್ನು ಗಮನದಲ್ಲಿಟ್ಟುಕೊಂಡು ನೀವು ಎಕ್ಸ್ ಚೇಂಜ್ ಆಫರ್ ಮೂಲಕ ಹಳೆಯ ಪಾತ್ರೆಗಳನ್ನು ಬದಲಿಸಿ ಹೊಸ ಪಾತ್ರೆಗಳನ್ನು ತನ್ನಿ. ಪಾತ್ರೆಗಳನ್ನು ಬಹಳ ಕಾಲ ಉಪಯೋಗಿಸುವುದರಿಂದ ಅವು ಹಳೆಯದಾಗುತ್ತವೆ. ಅವುಗಳನ್ನು ಎಷ್ಟು ಸ್ವಚ್ಛಗೊಳಿಸಿದರೂ ಏನಾದರೂ ಕೊಳೆ ಸೇರಿಕೊಳ್ಳುತ್ತದೆ. ಅವು ಅಷ್ಟು ಹೈಜಿನಿಕ್ ಆಗಿರುವುದಿಲ್ಲ. ಹೊಸ ಪಾತ್ರೆಗಳಲ್ಲಿ ಹೀಗಾಗುವುದಿಲ್ಲ. ಬಜೆಟ್ ಕೂಡ ಹೇಗಿರುತ್ತದೆಂದರೆ ಹಳೆಯ ಪಾತ್ರೆಗಳನ್ನು ಕೊಟ್ಟು ಮೇಲೆ ಕೊಂಚ ಹಣ ಕೊಟ್ಟು ಒಳ್ಳೆಯ ಕ್ವಾಲಿಟಿಯ ಲೇಟೆಸ್ಟ್ ಡಿಸೈನ್‌ನ ಪಾತ್ರೆ ಕೊಳ್ಳಬಹುದು. ಗೃಹಿಣಿಯರಿಗೆ ಬಜೆಟ್ ಮತ್ತು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಅಂಗಡಿಯವರು ನಾನ್‌ಸ್ಟಿಕ್ ಕಡಾಯಿ, ತವಾ, ಫ್ರೈಯಿಂಗ್ ಪ್ಯಾನ್‌ನಂತಹ ವಿಶೇಷ ರೀತಿಯ ಪಾತ್ರೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅವುಗಳಿಗೆ ಡಿಮ್ಯಾಂಡ್ ಕೂಡ ಬಹಳ ಇದೆ. ಇದಲ್ಲದೆ ಇಂಡಕ್ಷನ್ ಕುಕ್‌ವೇರ್‌ಗೂ ಸಾಕಷ್ಟು ಡಿಮ್ಯಾಂಡ್ ಇದೆ. ಇವು ಫ್ಯಾಷನ್‌ಗೆ ಅನುಸಾರವಾಗಿದ್ದು ನೋಡಿಕೊಳ್ಳುವುದೂ ಸುಲಭ.
ಮಾಡರ್ನ್ ಕಿಚನ್ ಅಪ್ಲಯೆನ್ಸ್
ಮಾಡರ್ನ್ ಕಿಚನ್ ಅಪ್ಲಯೆನ್ಸ್ ಅಗ್ಗವಾಗಿ ಇರುವುದಲ್ಲದೆ, ಅವುಗಳ ಲುಕ್ ಸಹ ಮಾಡ್ಯುಲರ್ ಕಿಚನ್‌ಗೆ ಮ್ಯಾಚ್ ಆಗುತ್ತದೆ. ಈಗ ಮನೆಗಳಲ್ಲಿ ಇಂಡಕ್ಷನ್ ಕುಕಿಂಗ್‌ನ ಹೆಚ್ಚುತ್ತಿರುವ ಪದ್ಧತಿಗಳಿಂದ ಈ ಅಪ್ಲಯೆನ್ಸ್ ಗಳ ಮಾರುಕಟ್ಟೆಯೂ ಹೆಚ್ಚಾಗಿದೆ.
ನಾನ್ ಸ್ಟಿಕ್ ಫ್ರೈಯಿಂಗ್ ಪ್ಯಾನ್ : ಹೊಸ ಪಾತ್ರೆಗಳಲ್ಲಿ ನೀವು ನಾನ್ ಸ್ಟಿಕ್ ಫ್ರೈಯಿಂಗ್ ಪ್ಯಾನ್ ಕೊಳ್ಳಬಹುದು. ಇದರಲ್ಲಿ ನೀವು ಕಡಿಮೆ ತುಪ್ಪ ಹಾಗೂ ಎಣ್ಣೆ ಉಪಯೋಗಿಸಿ ಆಹಾರ ಪದಾರ್ಥಗಳ್ನು ಹುರಿಯಬಹುದು. ಇದರಲ್ಲಿ ತಯಾರಿಸಿದ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಇದರಲ್ಲಿ ತಯಾರಿಸಿದ ಆಹಾರದ ಸೇವನೆಯಿಂದ ಹೆಚ್ಚುವರಿ ಕ್ಯಾಲೋರಿ ಮತ್ತು ಕೊಬ್ಬಿನಿಂದ ಪಾರಾಗುತ್ತೀರಿ.
ಇಂಡಕ್ಷನ್ ಕುಕರ್ : ನಿಮ್ಮ ಮನೆಗೆ ಇಂಡಕ್ಷನ್ ಕುಕರ್ ತನ್ನಿ. ಇದನ್ನು ಉಪಯೋಗಿಸಿದರೆ ಗ್ಯಾಸ್ ಹಾಗೂ ಕರೆಂಟ್ ಖರ್ಚು ಕಡಿಮೆಯಾಗುವ ಜೊತೆಗೆ 1 ಗಂಟೆಯಲ್ಲಿ ಅನೇಕ ಜನರಿಗೆ ಅಡುಗೆ ಮಾಡಬಹುದು.
ಟೆಫ್ಲಾನ್ ಶೀಟ್ : ಟೆಫ್ಲಾನ್ ಶೀಟ್ ಇರುವ ಪಾತ್ರೆ ಈಗ ಬದುಕಿನ ಒಂದು ಭಾಗವಾಗಿಬಿಟ್ಟದೆ. ಈ ನಾನ್ ಸ್ಟಿಕ್ ಪ್ಯಾನ್ ಟೆಫ್ಲಾನ್‌ಕೋಟಿಂಗ್ ಇರುವ ಫಾಸ್ಟ್ ಟು ಕುಕ್, ಈಝಿ ಟು ಕ್ಲೀನ್ ಆಗಿರುತ್ತದೆ. ಅವು ನೋಡಲಿಕ್ಕೂ ಬಹಳ ಆಕರ್ಷಕವಾಗಿರುತ್ತವೆ.
ಗ್ರಿಲ್ಲಿಂಗ್ ಪ್ಯಾನ್ : ಯೂರೋ ಕುಕ್ ಗ್ರಿಲ್ಲಿಂಗ್ ಪ್ಯಾನ್‌ನೊಂದಿಗೆ ಗ್ರಿಲ್ಡ್ ಫುಡ್ ರುಚಿ ಸವಿಯಬಹುದು. ಇದೊಂದು ಒಳ್ಳೆಯ ಕುಕ್ ವೇರ್ ಆಗಿದ್ದು ಇದರಲ್ಲಿ ಟೆಫ್ಲಾನ್ ಡ್ರ್ಯಾಫ್ಟ್ ಕೋಟಿಂಗ್ ಉಪಯೋಗಿಸಲಾಗಿದೆ. ಸಾಮಾನ್ಯ ಕುಕ್ ವೇರ್‌ಗೆ ಹೋಲಿಸಿದರೆ ಇದರಲ್ಲಿ ಕಡಿಮೆ ತುಪ್ಪ, ಎಣ್ಣೆಯೊಂದಿಗೆ ಅಡುಗೆ ಮಾಡಬಹುದು.
ಹ್ಯಾಂಡ್ ಬ್ಲೆಂಡರ್ : ಇದೊಂದು ಮಲ್ಟಿ ಪರ್ಪಸ್ ಗ್ಯಾಜೆಟ್ ಆಗಿದ್ದು, ಇದರಿಂದ ಕೆನೆಯನ್ನು ಕಡೆದು ತುಪ್ಪ ಮಾಡಬಹುದು. ಜೊತೆಗೆ ಸೂಪ್, ಲಸ್ಸಿ ಇತ್ಯಾದಿಗಳನ್ನು ಚೆನ್ನಾಗಿ ಮಾಡಬಹುದು.
ಹುಡ್ಸ್ (ಚಿಮಣಿ) : ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಮಿಗಿಲಾದ ಎಲೆಕ್ಟ್ರಾನಿಕ್ ಹುಡ್ಸ್ ಬಂದಿವೆ. ಅವು ನಿಮ್ಮ ಕಿಚನ್‌ನ್ನು ಹೊಗೆ ಹಾಗೂ ಧೂಳಿನಿಂದ ರಕ್ಷಿಸುತ್ತದೆ. ನಿಮ್ಮ ಕಿಚನ್‌ನಲ್ಲಿ ಚಿಮಣಿಯನ್ನು ಗ್ಯಾಸ್ ಅಥವಾ ಕುಕಿಂಗ್ ಟಾಪ್‌ನಲ್ಲಿ ಅಳವಡಿಸಿ. ಅದರಿಂದ ಕಿಚನ್‌ನಲ್ಲಿ ಹರಡುವ ಹೊಗೆಯಿಂದ ಹಾಳಾಗುವ ಗೋಡೆಗಳನ್ನು ಸ್ವಚ್ಛವಾಗಿಡಬಹುದು.
ಮೈಕ್ರೋವೇವ್ : ನಿಮಗೆ ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ಚಿಂತೆಯಿದ್ದರೆ ಮೈಕ್ರೋವೇವ್ ತನ್ನಿ. ಇದರಲ್ಲಿ ಆಹಾರ ಬೇಗ ಬೇಯುವುದಲ್ಲದೆ ಪೌಷ್ಟಿಕವಾಗಿಯೂ ಇರುತ್ತದೆ. ಇದರಲ್ಲಿ ಹಲವಾರು ಟೇಸ್ಟಿ ಡಿಶಸ್ ಮಾಡಬಹುದು.
ಫುಡ್ ಪ್ರೊಸೆಸರ್ : ಇದು ನಿಮ್ಮ ಕಿಚನ್‌ನ ಮಹತ್ವದ ಭಾಗ. ನಿಮ್ಮ ಕುಕಿಂಗ್ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದನ್ನು ತರಕಾರಿ ಕತ್ತರಿಸುವುದರಿಂದ ಹಿಡಿದು ಸಲಾಡ್ ತಯಾರಿಸಲು, ಹಿಟ್ಟು ನಾದಲು, ಚಟ್ನಿ ಮಾಡಲು ಉಪಯೋಗಿಸುತ್ತಾರೆ.
ಇಕೋ ಫ್ರೆಂಡ್ಲಿ ಇಂಡಕ್ಷನ್ ಸ್ಟವ್ : ಇಂಡಕ್ಷನ್ ಸ್ಟವ್ ನ್ನು ಲೇಟೆಸ್ಟ್ ಟೆಕ್ನಾಲಜಿಯ ಹೆಸರಿನಲ್ಲಿ ಮನೆಗೆ ತರಬಹುದು. ಅದರಿಂದ ಪರಿಸರದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಅದರಿಂದ ಹಣ ಉಳಿತಾಯವಾಗುತ್ತದೆ. ಇದು ಅಡುಗೆ ತಯಾರಿಸುವ ಒಂದು ಲೇಟೆಸ್ಟ್ ಸ್ಟವ್ ಆಗಿದೆ. ಕಡಿಮೆ ಜಾಗ ಇರುವ ಮನೆಗಳಿಗೆ ಸೂಕ್ತವಾಗಿರುತ್ತದೆ. ಇದನ್ನು ಅಡುಗೆಮನೆಯಲ್ಲದೆ ಬೇರೆಲ್ಲಿಯಾದರೂ ಇಡಬಹುದು. ಇದರಲ್ಲಿ ಬೆಂಕಿಯಾಗಲೀ ಹೊಗೆಯಾಗಲೀ ಇರುವುದಿಲ್ಲ.
ಫ್ಲ್ಯಾಟ್ ಬಾಟಮ್ ಹೋಬ್ಸ್ (ಸ್ಟವ್) : ಮಾರುಕಟ್ಟೆಯಲ್ಲಿ ಗ್ಯಾಸ್ ಸ್ಟವ್ ಗಳ ಬರ್ನರ್‌ಗಳ ಬಹಳಷ್ಟು ವೆರೈಟಿಗಳಿವೆ. ಈಗಂತೂ ಎಂತಹ ಬರ್ನರ್‌ಗಳು ಬರುತ್ತಿವೆಯೆಂದರೆ ಅವು ಕಪ್ಪಾಗುವುದಿಲ್ಲ. ಅವು ಅಲಾಯ್‌ನಿಂದ ತಯಾರಾಗಿರುತ್ತವೆ.
ನೈಫ್ ಸೆಟ್ : ಹಣ್ಣುಗಳು ಮತ್ತು ತರಕಾರಿಗಳ ಗುಣ ಹಾಗೂ ಪೌಷ್ಟಿಕತೆ ಉಳಿಸುವ ಉತ್ತಮ ನೈಫ್‌ಗಳಿವೆ. ಅವುಗಳಿಂದ ಉತ್ತಮವಾಗಿ ಕತ್ತರಿಸಲೂಬಹುದು. ಸಿಪ್ಪೆ ಸುಲಿಯುವ ಚಾಕುವಿನಿಂದ ಹಿಡಿದು ಬೋನಿಂಗ್ ನೈಫ್‌ವರೆಗೆ ಎಲ್ಲ ರೀತಿಯ ಕಟಿಂಗ್‌ಗೆ ಉತ್ತಮ ಚಾಕುಗಳಿರುತ್ತವೆ.
ಕಟ್ಲರಿ ಸೆಟ್ : ಈಗ ಮಾರುಕಟ್ಟೆಯಲ್ಲಿ ಒಳ್ಳೆಯ ಕ್ವಾಲಿಟಿಯ ಕಟ್ಲರಿ ಸೆಟ್ ಸಿಗುತ್ತವೆ. ನಿಮ್ಮ ಇಷ್ಟಕ್ಕೆ ತಕ್ಕಂತೆ ಅವನ್ನು ಖರೀದಿಸಬಹುದು.
ಕಟಿಂಗ್ ಬೋರ್ಡ್ : ತರಕಾರಿ ಕತ್ತರಿಸಲು ವುಡನ್ ಚಾಪಿಂಗ್ ಬೋರ್ಡ್ ಉಪಯೋಗಿಸಿ. ಅದರ ಮೇಲೆ ತರಕಾರಿ ಕತ್ತರಿಸುವುದೇ ಒಂದು ಸೊಗಸು.
ಮಾಡ್ಯುಲಾರ್ ಕಿಚನ್ ಕ್ಯಾಬಿನೆಟ್ : ನಿಮ್ಮ ಕಿಚನ್‌ನಲ್ಲಿ ಮಾಡ್ಯುಲಾರ್ ಕಿಚನ್ ಕ್ಯಾಬಿನೆಟ್ ಇದ್ದರೆ, ಕಿಚನ್ ಸ್ವಚ್ಛವಾಗಿರುತ್ತದೆ. ಇದು ಕಿಚನ್ ಡಿಸಾರ್ಗನೈಸ್ ಆಗದಂತೆ ರಕ್ಷಿಸಿ ಹಲವು ಕಂಪಾರ್ಟ್‌ಮೆಂಟ್ ಮತ್ತು ಅಲಮಾರಿಗಳ ಸಹಾಯದಿಂದ ವಸ್ತುಗಳನ್ನು ಉತ್ತಮ ರೀತಿಯಲ್ಲಿ ಆರ್ಗನೈಸ್ ಮಾಡುವಲ್ಲಿ ಸಹಾಯ ಮಾಡುತ್ತದೆ. ಒಂದು ಮಾಡ್ಯುಲರ್ ಕಿಚನ್‌ನಲ್ಲಿ ರಾಕ್, ಕ್ಯಾಬಿನೆಟ್ ವರ್ಕ್ ಟಾಪ್, ಚಿಮಣಿ, ಎಗ್ಸಾಸ್ಟ್ ಫ್ಯಾನ್, ಡಿಶ್ ವಾಶರ್ ಎಲ್ಲ ಇರುತ್ತದೆ.
ಹೇಗೆ ಆರ್ಗನೈಸ್ ಮಾಡುವುದು?
ಕ್ಯಾಬಿನೆಟ್‌ನ್ನು ಬದಲಿಸಿ : ನಿಮ್ಮ ಕಿಚನ್ ಕ್ಯಾಬಿನೆಟ್‌ನ್ನು ಬದಲಿಸಿ ಅದರಲ್ಲಿ ಲೇಯರ್ಡ್ ಗ್ಲಾಸ್ ಹಾಕಿಸಬಹುದು. ಅದು ಬೇರೆ ಬೇರೆ ಬಣ್ಣಗಳಲ್ಲಿ ಬರುತ್ತದೆ. ನಿಮ್ಮ ಕ್ಯಾಬಿನೆಟ್‌ನ ಕೆಳಗಿನ ಭಾಗದಲ್ಲಿ ಜಾಗವಿದ್ದರೆ ಅಲ್ಲಿ ಬಾಕ್ಸ್ ಗಳನ್ನು ಅಳವಡಿಸಿ. ಅದು ಮುಚ್ಚಿರುವ ಡಸ್ಟ್ ಬಿನ್ ನಂತಿರುತ್ತದೆ.
ಡೆಕೋರೇಟ್ ಮಾಡಿ : ನಿಮ್ಮ ಕಿಚನ್‌ನ ಮೂಲೆಗಳನ್ನು ಹೂಗಳು ಅಥವಾ ಸಣ್ಣ ಗಿಡಗಳಿಂದ ಅಲಂಕರಿಸಬಹುದು. ಈ ಗ್ರೀನ್ ಎಫೆಕ್ಟ್ಸ್ ನ ಗಿಡಗಳು ಯಾವಾಗಲೂ ಪಾಸಿಟಿವ್ ಎನರ್ಜಿ ಕೊಡುತ್ತದೆ. ಇದಲ್ಲದೆ, ನೀವು ಕೆಲವು ಕ್ಯೂಬ್ ಕೋಸ್ಟರ್ಸ್, ಆರ್ಟಿಫಿಶಿಯಲ್ ಫ್ರೂಟ್ಸ್ ಮತ್ತು ತರಕಾರಿಗಳಿಂದಲೂ ಕಿಚನ್‌ನ್ನು ಅಲಂಕರಿಸಬಹುದು.
ಲೈಟ್ಕೂಡ ಅಗತ್ಯ : ನಿಮ್ಮ ಕಿಚನ್‌ನ್ನು ಆಕರ್ಷಕಗೊಳಿಸಲು ಉತ್ತಮ ಬೆಳಕಿನ ವ್ಯವಸ್ಥೆ ಮಾಡಿ. ಕಿಚನ್‌ನ ಪ್ರತಿ ಮೂಲೆಯೂ ಪ್ರಕಾಶಮಾನವಾಗಿ ಕಾಣುವಂತಹ ಲೈಟುಗಳನ್ನು ಹಾಕಿಸಿ. ಕಿಚನ್‌ನ ಗೋಡೆಗಳಲ್ಲದೆ ಶೆಲ್ಫ್ ನೊಳಗೂ ಲೈಟ್ ಹಾಕಿಸಬಹುದು. ಈ ಲೈಟ್‌ಗಳಿಂದ ನಿಮ್ಮ ಕಿಚನ್‌ನಲ್ಲಿ ಹಬ್ಬದ ವಾತಾವರಣ ಉಂಟಾಗುತ್ತದೆ.
– ಬಿ. ಸುಮತಿ